ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೀಗೊಂದು ಕರಡೀ ಕಥೆ

Last Updated 27 ಜುಲೈ 2018, 13:39 IST
ಅಕ್ಷರ ಗಾತ್ರ

ಕಾಡಿನ ಕರಡಿಯನ್ನು ಜಾಂಬವಂತ ಎಂದು ಪೂಜಿಸುತ್ತೇವೆ. ಆದರೆ ಅದೇ ಕರಡಿ ಕಾಡು ಮರೆತು ಊರಿಗೆ ಬಂದರೆ ಅದನ್ನು ನಾವು ಸ್ವಾಗತಿಸುತ್ತೇವೆಯೆ? ಕಾಡಿನ ಪ್ರಾಣಿಗಳ ಕುರಿತು ನಮ್ಮಲ್ಲಿ ಇರುವ ನಂಬಿಕೆ– ಮೂಢನಂಬಿಕೆಗಳಿಗೆ ಎಷ್ಟೊಂದು ಅಂತರವಿದೆ!

ಗುಂಡ್ಲುಪೇಟೆಯ ಗರಗನ ಹಳ್ಳಿಗೆ ಇತ್ತೀಚೆಗೆ ಹೀಗೆ ಕಾಡು ತ್ಯಜಿಸಿ ಬಂದ ಕರಡಿಯೊಂದು ‘ನಾಗರಿಕರ’ ಜತೆಗೆ ತನ್ನ ಜೀವ ಉಳಿಸಿಕೊಳ್ಳಲು ನಡೆಸಿದ ಹೋರಾಟ ನಿಜಕ್ಕೂ ಕರುಣಾಜನಕ.

ಗರಗನ ಹಳ್ಳಿಯ ಸುತ್ತಲೂ 5–10ಕಿ.ಮೀ ಅಂತರದಲ್ಲಿ ಹಲವು ಬೆಟ್ಟ ಗುಡ್ಡಗಳಿವೆ. ಇಲ್ಲೇ ಓಂಕಾರ ಅರಣ್ಯ ವಲಯವೂ ಇದ್ದು ಅದು ಹಲವಾರು ವನ್ಯಜೀವಿಗಳ ಆವಾಸ ಸ್ಥಳವಾಗಿದೆ. ಇತ್ತೀಚಿಗೆ ಇಲ್ಲಿ ನಡೆಯುತ್ತಿರುವ ಕಲ್ಲು ಗಣಿಗಾರಿಕೆಯಿಂದಾಗಿ ಪ್ರಾಣಿಗಳಿಗೆ ಸದಾ ಜೀವಭಯ. ಹಾಗಾಗಿ ಅವು ನಾಡಿಗೆ ನುಗ್ಗಿ, ನಾಡಿನ ಜನರಿಗೂ ಪ್ರಾಣಭಯ!

ಮಧ್ಯಾಹ್ನ ಸುಮಾರು 2 ಗಂಟೆಗೆ ಜೋಳದ ಹೊಲದಲ್ಲಿ ಕರಡಿ ಕಾಣಿಸಿಕೊಂಡ ಸುದ್ದಿ ಊರೆಲ್ಲ ಹಬ್ಬಿತು. ‘ಅದ್ಯಾವುದೋ ಡೈನೊಸಾರ್‌ ಇರಬಹುದೇ...’ ಎಂಬಷ್ಟು ಕುತೂಹಲದಲ್ಲಿ ನೂರಾರು ಜನ ಸೇರಿ ಜಾತ್ರೆಯೇ ಸೃಷ್ಟಿಯಾಯಿತು. ಜನಸಾಗರದ ಮಧ್ಯೆ ಬೆರಳೆಣಿಕೆಯ ಪೊಲೀಸರು, ಅರಣ್ಯ ಇಲಾಖೆಯ ಸಿಬ್ಬಂದಿ ಪರಿಸ್ಥಿತಿ ತಹಬದಿಗೆ ತರಲು ಹರಸಾಹಸ ಮಾಡುತ್ತಿದ್ದರು. ಜನರ ಕಿರುಚಾಟ, ಅರಚಾಟ, ಆರ್ಭಟ ಮೇರೆ ಮೀರಿತ್ತು.

ಕರಡಿಯನ್ನು ಕಲ್ಲು ಹೊಡೆದು ಆಗಲೇ ಹೊಲದಿಂದ ಬೇಲಿಗೆ ಓಡಿಸಲಾಗಿತ್ತು. ಕರಡಿ ಕಲ್ಲು ಬಂಡೆಯನ್ನೇನೋ ಇಷ್ಟ ಪಡುತ್ತದೆ. ಆದರೆ ಅದರ ಕಲ್ಲನ್ನಲ್ಲ. ಆ ಬಂಡೆಯನ್ನು ಪುಡಿ ಮಾಡಿ ಕಲ್ಲು ಮಾಡಿದ್ದರಿಂದಲೇ ಬಹುಶಃ ಇಲ್ಲಿಗೆ ಬಂದಿರಬೇಕು. ನಿಶಾಚರಿಯಾದ ಕರಡಿ ಕತ್ತಲನ್ನು ಇಷ್ಟಪಡುವ ಜೀವಿ. ಆದರೆ ಜನರ ಕಲ್ಲೇಟಿನ ರುಚಿ ತಿಂದು ಅದಕ್ಕೆ ತಲೆ ತಿರುಗಿದಂತಾಗಿತ್ತು. ಬೇಲಿಯ ಮರೆಯಲ್ಲಿ ಏದುಸಿರು ಬಿಡುತ್ತಿದ್ದ ಕರಡಿಗೆ ಉಸಿರಾಡಲೂ ಸಮಯ ಕೊಡದೆ ಮತ್ತೆ ಜನರು ಕಲ್ಲು ಬೀಸಿದರು. ಕಲ್ಲಿನ ರುಚಿ, ದೊಣ್ಣೆಯಿಂದ ತಿವಿತ– ಹೀಗೆ ಬೇಲಿಯಿಂದ ಅದನ್ನು ಹೊರತರಲು ನಾನಾ ಪ್ರಯೋಗಗಳು ನಿರಂತರವಾಗಿ ನಡೆದವು.

ಈ ನಡುವೆ ರಾಷ್ಟ್ರೀಯ ಹೆದ್ದಾರಿಯಾದ ಬೆಂಗಳೂರು–ಊಟಿ ರಸ್ತೆಯಲ್ಲಿ ವಾಹನಗಳ ದಟ್ಟಣೆ ಶುರುವಾಯಿತು. ಬಸ್ಸು, ಕಾರು ನಿಲ್ಲಿಸಿ ನೂರಾರು ಜನರು ಧಾವಿಸಿ ಬಂದರು. ಸದಾ ಕಾಡಿನ ನೀರವ, ನಿಶಬ್ದ ವಾತಾವರಣದಲ್ಲಿ ಇದ್ದ ಕರಡಿಗೆ ಜನರ ಗುಂಪು ಆತಂಕ ಹೆಚ್ಚಿಸಿತ್ತು. ವನ್ಯಜೀವಿಗಳು ನಾಡಿಗೆ ಬಂದಾಗ ಅವುಗಳಿಗೆ ಹೆದರಿಕೆ ಆಗದಂತೆ ನೋಡಿಕೊಳ್ಳುವುದನ್ನು ನಾವು ಕಲಿಯುವುದು ಯಾವಾಗ? ಆ ಪ್ರಾಣಿಗಳಿಗೆ ಭಯವಾಗದಿದ್ದರೆ ಅವುಗಳನ್ನು ಹಿಡಿಯವುದು ಸುಲಭ. ಜನರ ಪ್ರಾಣಕ್ಕೂ ಅದೇ ಕ್ಷೇಮ. ಆದರೆ ನಮಗೆ ಕಾಡು ಪ್ರಾಣಿಗಳು ಊರಿಗೆ ಬಂದಾಗ ಅದೇ ಬಲುದೊಡ್ಡ ಮನರಂಜನೆ!

ಸಂಜೆ 4 ಗಂಟೆಯಾಯಿತು. ಬೇಲಿಯಲ್ಲಿದ್ದ ಕರಡಿಯನ್ನು ಸೆರೆ ಹಿಡಿಯಲು ಅರಣ್ಯ ಇಲಾಖೆ ಸಿಬ್ಬಂದಿ ಬಲೆ ಹಿಡಿದು ತಯಾರಾಗಿದ್ದರೆ, ಕರಡಿಯನ್ನು ಹೊರದಬ್ಬಲು ಜನರು ದೊನ್ನೆಗಳನ್ನು ಹಿಡಿದು ಸಿದ್ಧರಾಗಿದ್ದರು. ಬೇಲಿಗಳನ್ನು ಕೆಲವರು ತುಸು ಕತ್ತರಿಸಿದರು. ಕಿರುಚಾಟ, ಪಟಾಕಿಯ ಭರಾಟೆ, ಸಿಡಿತ– ಇದ್ಯಾವುದಕ್ಕೂ ಆ ಕರಡಿ ಜಗ್ಗಲಿಲ್ಲ. ಅದಕ್ಕೆ ನಿಜಕ್ಕೂ ಚಕ್ರವ್ಯೂಹದೊಳಗೆ ಸಿಲುಕಿದಂತೆ ಆಗಿತ್ತು. ಸುತ್ತಲೂ, ಬಲೆ ಹಿಡಿದು ನಿಂತಿದ್ದ ಜನ, ಅವರ ಕೈಲಿ ವಿವಿಧ ಆಯುಧ, ಪಟಾಕಿ, ಒಂದೇ ಎರಡೇ! ಪಾಪ ಕರಡಿ. ಊರೊಳಕ್ಕೆ ಬಂದದ್ದೇ ಮಹಾಪರಾಧವಾಗಿದೆ ಎನ್ನುವಂತೆ ಪರಿತಪಿಸುತ್ತಿತ್ತು.

ಅವತ್ತು ಅರಣ್ಯ ಸಿಬ್ಬಂದಿಯ ಸಂಖ್ಯೆಯೂ ಕಡಿಮೆಯಿತ್ತು. ಸಮೀಪದ ಊರಲ್ಲಿ ಆನೆಯೊಂದು ಸತ್ತಿದ್ದರಿಂದ ಸಿಬ್ಬಂದಿ ಆ ಕಡೆಗೂ ಹೋಗಿದ್ದರು. ಕರಡಿಗೆ ಚುಚ್ಚುಮದ್ದು ನೀಡಲು ಡಾಕ್ಟರ್‌ ಬರುವುದನ್ನೇ ಸಿಬ್ಬಂದಿ ಕಾಯುತ್ತಿದ್ದರು. ಈ ಮಧ್ಯೆ ಕರಡಿ ಎಲ್ಲಿಗೂ ಹೋಗದಂತೆ ನೋಡಿಕೊಳ್ಳುವ ಜವಾಬ್ದಾರಿಯೂ ಅವರ ಮೇಲಿತ್ತು. ಸಾಧ್ಯವಾದರೆ ಬಲೆ ಹಾಕಿ ಸೆರೆ ಹಿಡಿಯುವ ಅವರ ಸಾಹಸವೂ ಮುಂದುವರಿದಿತ್ತು.

ಆದರೆ ಜನರು ಯಾರ ಅಂಕೆಯಲ್ಲೂ ಇರಲಿಲ್ಲ. ಅವರಿಗೆ ಕರಡಿಯನ್ನು ಹಿಡಿಯಲು ಹೊಸ ಹೊಸ ಐಡಿಯಾಗಳು ಹೊಳೆಯತೊಡಗಿದ್ದವು. ಅರಣ್ಯ ಸಿಬ್ಬಂದಿ ಯಾರನ್ನೂ ನಿಯಂತ್ರಿಸಲಾಗದೆ ಅಸಹಾಯಕರಾಗಿದ್ದರು. ದೊಣ್ಣೆಯ ತಿವಿತಕ್ಕೆ ತಿರುಗದ, ಪಟಾಕಿಯ ಸಿಡಿತಕ್ಕೆ ಸಿಲುಕದ ಕರಡಿಗೆ, ಅಗ್ನಿ ಅಸ್ತ್ರ ಪ್ರಯೋಗಿಸಲು ಕೆಲವರು ಮುಂದಾದರು! ದೊಣ್ಣೆಗೆ ಬೆಂಕಿ ಹಚ್ಚಿ ಬೇಲಿಯಲ್ಲಿದ್ದ ಕರಡಿಯನ್ನು ತಿವಿಯತೊಡಗಿದರು. ಸಾಮಾನ್ಯವಾಗಿ ಕಾಡುಪ್ರಾಣಿಗಳು ಬೆಂಕಿಗೆ ಹೆದರುತ್ತವೆ. ಆದರೆ ಅವತ್ತು ಆ ಕರಡಿ ಜನರ ದೊನ್ನೆ, ಪಟಾಕಿಗಳಿಗೆ ಎಷ್ಟು ಹೆದರಿತ್ತೆಂದರೆ, ಅದು ಬೆಂಕಿಯ ತಿವಿತವನ್ನೂ ಲೆಕ್ಕಿಸದೆ ಬೇಲಿಯೊಳಕ್ಕೆ ನಿಂತುಕೊಂಡಿತ್ತು.

ಕರಡಿಯದ್ದೊಂದು ಗುಣವಿದೆ. ಅದು ಸುಮಾರು 20ಕ್ಕೂ ಹೆಚ್ಚು ವಿಭಿನ್ನ ಸ್ವರಗಳಲ್ಲಿ ಕೂಗುತ್ತದೆ! ಹೆದರಿದಾಗ, ಹೆದರಿಸುವಾಗ, ಮರಿಯೊಡನೆ ಇರುವಾಗ, ಮರಿಗೆ ಹಾಲು ಕುಡಿಸುವಾಗ, ಜಗಳವಾಡುವಾಗ– ಹೀಗೆ ವೈವಿಧ್ಯಮಯ ಸ್ವರ ಸಂಪತ್ತು ಹೊಂದಿದ್ದ ಕರಡಿಯ ಬಾಯಿಂದ ಅವತ್ತು ಒಂದೇ ಒಂದು ಶಬ್ದವೂ ಹೊರಬರಲಿಲ್ಲ. ಜನರ ಕೇಕೆ, ಹಿಂಸಾವಿನೋದಗಳಿಂದ ಅದು ಎಷ್ಟೊಂದು ಭಯಭೀತವಾಗಿತ್ತು ಎನ್ನುವುದಕ್ಕೆ ಅದೇ ಸಾಕ್ಷಿ. ಪ್ರಾಣ ಭಯದಿಂದ ನಿತ್ರಾಣವಾಗಿದ್ದ ಕರಡಿ, ಹಾ...ಹಾ.. ಎಂದು ಏದುಸಿರು ಬಿಡುತ್ತಿತ್ತು. ಹಸಿವು, ಬಾಯಾರಿಕೆ, ಭಯದಿಂದ ಕಂಗಾಲಾಗಿತ್ತು. ಜನರಿಗೆ ಅದೂ ಒಂದು ಮನರಂಜನೆಯೇ.

ಬೆಳಕು ಮಬ್ಬಾಗುತ್ತಿದ್ದಂತೆಯೇ ಒಮ್ಮೆಲೆ ಬೇಲಿಯಿಂದ ಹಾರಿ ಹೊರಬಂದ, ಕರಡಿ ಬಲೆಗೆ ಸಿಲುಕದೇ ಜನರ ನಡುವೆಯೇ ನುಗ್ಗಿ ಓಡಿತು! ಜನ ಬೆನ್ನಲ್ಲೇ ಕೂಗುತ್ತಾ, ಕಿರುಚುತ್ತಾ, ಕಲ್ಲೆಸೆಯುತ್ತಾ ಬೆನ್ನಟ್ಟಿದರು. ಕರಡಿ ಪೊದೆಯಲ್ಲಿ ಕಣ್ಮರೆಯಾಯಿತು. ಆದರೆ ಜನ ಬಿಡಲಿಲ್ಲ. ಅರ್ಧ ಗಂಟೆಯ ಹುಡುಕಾಟದ ನಂತರ ಮತ್ತೆ ಕಂಡ ಕರಡಿಯನ್ನು ಮತ್ತೆ ಓಡಿಸಲು ತೊಡಗಿದರು.



ಕರಡಿ ರಸ್ತೆಯ ಪಕ್ಕದ ಮರವೇರಿತು. ಅದನ್ನು ಮರದಿಂದ ಕೆಳಕ್ಕೆ ಇಳಿಸುವ ಕಾರ್ಯ ತಂತ್ರ ಶುರುವಾಯಿತು. ಬೆಂಕಿಯ ದೊಣ್ಣೆಯಿಂದ ಅದನ್ನು ತಿವಿದರೆ ಇಳಿಯಬಹುದು ಎಂದು ಕೆಲವರು ತಿವಿಯುತ್ತಿದ್ದರು. ಆದರೆ ಕರಡಿ ಆ ದೊನ್ನೆಯನ್ನು ಹಲ್ಲಲ್ಲಿ ಕಚ್ಚಿ ಹಿಡಿಯುತ್ತಿತ್ತು. ಈ ಹೋರಾಟದಲ್ಲಿ ಅದರ ಬಾಯಿಗೆ ಸುಟ್ಟಗಾಯವೂ ಆಯಿತು. ಬಾಯಲ್ಲಿ ರಕ್ತ ಜಿನುಗಿತು.

ಅಲ್ಲಿದ್ದ ಜನರಿಗೆ ತಾವು ಏನು ಮಾಡುತ್ತಿದ್ದೇವೆ ಎನ್ನುವುದು ಗೊತ್ತಿದ್ದಂತೆ ಇರಲಿಲ್ಲ. ಮುಗ್ಧ ಪ್ರಾಣಿಯೊಂದಕ್ಕೆ ಗಾಯ ಮಾಡುವ ಮೂಲಕ ಅವರಿಗೆ ಖುಷಿಯೂ ಸಿಗುತ್ತಿದ್ದಂತೆ ಕಾಣುತ್ತಿತ್ತು.

ಕತ್ತಲಾವರಿಸಿತು. ಸರ್ಚ್ ಲೈಟ್ ಇಟ್ಟುಕೊಂಡು ಕರಡಿಯನ್ನು ಕಾಯುವುದು ಕಷ್ಟವಾಗಿತ್ತು. ಕತ್ತಲಿನಲ್ಲಿ ಕರಡಿಗಳು ಚುರುಕಾಗುತ್ತವೆ. ಅದು ಕತ್ತಲೆಯಲ್ಲಿ ಕಣ್ಮರೆಯಾದರೆ ಹಿಡಿಯುವುದು ಅಸಾಧ್ಯ. ಎಚ್ಚರಿಕೆಯಿಂದ ಸಿಬ್ಬಂದಿ ಕರಡಿಯನ್ನು ಸುತ್ತುವರಿದಿದ್ದರು. ಸುಮಾರು ರಾತ್ರಿ ಎಂಟೂವರೆ ಆದರೂ ಚುಚ್ಚುಮದ್ದು ನೀಡುವ ಡಾಕ್ಟರ್‌ ಬಂದಿರಲಿಲ್ಲ. ಅಂತೂ ಇಂತೂ ರಾತ್ರಿ ಹನ್ನೊಂದೂವರೆಗೆ ಬಂದ ಡಾಕ್ಟರ್‌ ಚುಚ್ಚುಮದ್ದು ನೀಡಿ ಕರಡಿಯನ್ನು ನಿಶ್ಚೇತನಗೊಳಿಸಿದರು. ಸಿಬ್ಬಂದಿ ಬಲೆಯಲ್ಲಿ ಹಿಡಿದರು. ಬಂಡೀಪುರದ ಮದ್ದೂರಿನಲ್ಲಿ ಅದನ್ನು ಕಾಡಿಗೆ ಬಿಡುವ ಏರ್ಪಾಟಾಯಿತು.

ಅದು ೫ ವರ್ಷದ ಗಂಡು ಕರಡಿ. ಈ ಕರಡಿ ಕಾರ್ಯಾಚರಣೆಯಿಂದಾಗಿ ಅರಣ್ಯ ಇಲಾಖೆಯಲ್ಲಿ ತಜ್ಞ ವೈದ್ಯರ ಕೊರತೆಯಿದೆ ಎನ್ನುವುದು ಗೊತ್ತಾಯಿತು. 13 ವಲಯಗಳಿಗೆ ಕೇವಲ ಒಬ್ಬರೇ ವೈದ್ಯರು ಇದ್ದಾರಂತೆ. ಅವರಾದರೂ ಎಲ್ಲಿಂದ ಎಲ್ಲಿಗೆ ಓಡಾಡಬೇಕು? ಕಾರ್ಯಾಚರಣೆ ಮುಕ್ತಾಯ ಕಂಡಾಗ ಬಂಡೀಪುರದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಅಂಬಾಡಿ ಮಾಧವ್, ಆರ್‌ಎಫ್‌ಓ ಓಂಕಾರ್, ನವೀನ್, ಶ್ರೀನಿವಾಸ ಮತ್ತು ಸಿಬ್ಬಂದಿ ವರ್ಗದವರು ನಿಜಕ್ಕೂ ಸುಸ್ತಾಗಿದ್ದರು.

ಸುಧಾ: ಜುಲೈ 19, 2018

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT