ಶುಕ್ರವಾರ, ಜೂನ್ 25, 2021
20 °C

ಅಟ್ಲಾಂಟಿಕ್ ‘ಕಡಲ ಗಿಣಿ’ ಪಫಿನ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜಲವಾಸಿ ಹಕ್ಕಿಗಳಲ್ಲಿ ವಿಭಿನ್ನ ಜೀವನಶೈಲಿಯಿಂದ ಗಮನ ಸೆಳೆಯುವ ಹಕ್ಕಿ ಬಾತುಕೋಳಿ. ವಾತಾವರಣ ಮತ್ತು ಪ್ರದೇಶಕ್ಕನುಗುಣವಾಗಿ ಹಲವು ಬಾತುಕೋಳಿ ಪ್ರಭೇದಗಳನ್ನು ವಿಶ್ವದಾದ್ಯಂತ ಗುರುತಿಸಲಾಗಿದೆ. ಇವುಗಳಲ್ಲಿ ಅಟ್ಲಾಂಟಿಕ್ ಕಡಲ ತೀರಗಳಲ್ಲಿ ಕಾಣಸಿಗುವ ಪಫಿನ್‌ ಕೂಡ ಒಂದು. ಇಂದಿನ ಪಕ್ಷಿ ಪ್ರಪಂಚದಲ್ಲಿ ಇದರ ಬಗ್ಗೆ ತಿಳಿಯೋಣ. ಅಟ್ಲಾಂಟಿಕ್ ಸಮುದ್ರ ತೀರ ಪ್ರದೇಶಗಳಲ್ಲಿ ಕಾಣಸಿಗುವ ಏಕೈಕ ಪಫಿನ್‌ ತಳಿ ಇದಾಗಿರುವುದರಿಂದ ಇದಕ್ಕೆ ಅಟ್ಲಾಂಟಿಕ್‌ ಪಫಿನ್‌ (Atlantic Puffin) ಎಂದು ಹೆಸರಿಡಲಾಗಿದೆ. ಇದರ ವೈಜ್ಞಾನಿಕ ಹೆಸರು ಫ್ರಟೆರ್ಕುಲ ಆರ್ಕ್‌ಟಿಕ (Fratercula arctica). ಇದು ಅಲ್‌ಕಿಡೆ (Alcidae) ಕುಟುಂಬಕ್ಕೆ ಸೇರಿದೆ.

ಹೇಗಿರುತ್ತದೆ?
ನೋಡಿದ ಕೂಡಲೇ ಪುಟ್ಟ ಪೆಂಗ್ವಿನ್‌ನಂತೆ ಕಾಣುತ್ತದೆ. ಕಪ್ಪು ಮತ್ತು ಬಿಳಿ ಬಣ್ಣದ ನುಣುಪಾದ ಪುಕ್ಕದಿಂದ ದೇಹ ಆವರಿಸಿರುತ್ತದೆ. ಉದರ ಭಾಗ ಸಂಪೂರ್ಣ ಬಿಳಿ ಬಣ್ಣದಲ್ಲಿದ್ದರೆ, ಕತ್ತು, ತಲೆ, ಬೆನ್ನು ಮತ್ತು ರೆಕ್ಕೆಗಳು ಸಂಪೂರ್ಣ ಕಪ್ಪು ಬಣ್ಣದಲ್ಲಿರುತ್ತವೆ. ದೊಡ್ಡದಾದ ಕೊಕ್ಕು ಹೊಂದಿರುವುದರಿಂದ ಇದನ್ನು ‘ಕಡಲ ಗಿಣಿ’ ಎಂದು ಕರೆಯುತ್ತಾರೆ. ತ್ರಿಕೋನಾಕಾರದ ಕೊಕ್ಕು ತಿಳಿಗೆಂಪು, ಕಪ್ಪು ಮತ್ತು ಬಿಳಿಬಣ್ಣದಲ್ಲಿರುತ್ತದೆ. ಕೊಕ್ಕಿನ ಮಧ್ಯಭಾಗದ ಎರಡೂ ಬದಿಯಲ್ಲಿ ಎಲೆಯಾಕಾರದ ಹಳದಿ ಬಣ್ಣದ ಅಂಗ ಬೆಳೆದಿರುತ್ತದೆ. ಪಾದಗಳು ಗಾಢ ಕಿತ್ತಳೆ ಬಣ್ಣದಲ್ಲಿದ್ದು ಉಗುರುಗಳು ಕಪ್ಪು ಬಣ್ಣದಲ್ಲಿರುತ್ತವೆ. ಬಾತುಕೋಳಿಯಂತೆ ಇದರ ಪಾದದ ಬೆರಳುಗಳ ನಡೆಉವೆ ಚರ್ಮ ಬೆಳೆದಿರುತ್ತದೆ. ಕಣ್ಣುಗಳು ಪುಟ್ಟದಾಗಿದ್ದು, ಕಣ್ಣಾಲಿಗಳು ಕಪ್ಪು ಬಣ್ಣದಲ್ಲಿರುತ್ತವೆ. 

ಜೀವನಕ್ರಮ ಮತ್ತು ವರ್ತನೆ
ಇದು ಗುಂಪಿನಲ್ಲಿ ವಾಸಿಸಲು ಇಷ್ಟಪಡುತ್ತದೆ. ಒಂದು ಗುಂಪಿನಲ್ಲಿ ಸಾವಿರಾರು ಪಫಿನ್‌ಗಳು ಇರುತ್ತವೆ. ಆಹಾರ ಅರಸುವಾಗ ಪುಟ್ಟ ಗುಂಪುಗಳಾಗಿ ವಿಭಜನೆಯಾಗುತ್ತವೆ. ಸುರಕ್ಷಿತವಾದ ಬಂಡೆಗಳ ಬಿರುಕುಗಳನ್ನೇ ಗೂಡು ಮಾಡಿಕೊಳ್ಳುತ್ತದೆ. ಗೂಡಿಗೆ ಬರಬೇಕಾಗಿ ಬಂದಾಗ ಮಾತ್ರ ನೆಲದ ಮೇಲೆ ಕಾಲಿಡುತ್ತದೆ. ಉಳಿದ ಸಮಯವೆಲ್ಲಾ ನೀರಿನಲ್ಲೇ ಅಲೆಯುತ್ತಾ, ಆಹಾರ ಅರಸುತ್ತಾ ಸುತ್ತುತ್ತಿರುತ್ತದೆ. ಆಹಾರ ಹುಡುಕುವಾಗ ಸದ್ದು ಮಾಡುವುದಿಲ್ಲ. ಆಹಾರ ಲಭ್ಯತೆ ಪ್ರಮಾಣ ಆಧರಿಸಿ ಗಡಿ ಗುರುತಿಸಿಕೊಳ್ಳುತ್ತದೆ. ನೀರಿನೊಳಗೂ ಈಜುವ ಸಾಮರ್ಥ್ಯ ಹೊಂದಿದ್ದು, 2 ನಿಮಿಷಗಳವರೆಗೆ ಉಸಿರುಗಟ್ಟಿ ಜಲಚರಗಳನ್ನು ಬೇಟೆಯಾಡುತ್ತದೆ.

ಆಹಾರ
ಸಮುದ್ರದಲ್ಲಿ ಸಿಗುವ ಪುಟ್ಟ ಮೀನುಗಳೇ ಇದರ ಪ್ರಮುಖ ಆಹಾರ. ಇದಲ್ಲದೇ ಮೃದ್ವಂಗಿಗಳನ್ನೂ ಸೇವಿಸುತ್ತದೆ. ಕೊಕ್ಕು ದೊಡ್ಡದಾಗಿರುವುದರಿಂದ ಒಂದೇ ಬಾರಿಗೆ 12ಕ್ಕೂ ಹೆಚ್ಚು ಮೀನುಗಳನ್ನು ಹಿಡಿದುಕೊಳ್ಳುತ್ತದೆ. 

ಎಲ್ಲಿದೆ?
ಡೆನ್ಮಾರ್ಕ್‌ನ ಪೂರ್ವ ಕರಾವಳಿ ತೀರದಿಂದ ಕೆನಡಾದ ಪಶ್ಚಿಮ ಕರಾವಳಿ ತೀರದವರೆಗೆ ಹಾಗೂ ನಾರ್ವೆ ಉತ್ತರ ಕರಾವಳಿ ತೀರದಿಂದ ಸ್ಪೇನ್‌ ದಕ್ಷಿಣ ಕರಾವಳಿ ತೀರದವರೆಗೆ ಇದರ ಸಂತತಿ ವಿಸ್ತರಿಸಿದೆ. ಸಮುದ್ರ ತೀರದ ಪರ್ವತ ಪ್ರದೇಶಗಳಲ್ಲಿ ವಾಸಿಲು ಇಷ್ಟಪಡುತ್ತದೆ. ಐಸ್ಲೆಂಡ್‌ ದೇಶವೊಂದರಲ್ಲೇ ಶೇ 60ರಷ್ಟು ಸಂತತಿ ಇದೆ.

ಸಂತಾನೋತ್ಪತ್ತಿ
ಏಪ್ರಿಲ್‌ನಿಂದ ಆಗಸ್ಟ್‌ವರೆಗಿನ ಅವಧಿ ಇದರ ಸಂತಾನೋತ್ಪತ್ತಿಗೆ ಪ್ರಶಸ್ತವಾಗಿರುತ್ತದೆ. 4ರಿಂದ 5 ವರ್ಷಗಳ ನಂತರ ವಯಸ್ಕ ಹಂತ ತಲುಪುತ್ತದೆ. ಗಾಢ ಬಣ್ಣದ ಪಾದಗಳನ್ನು ಹೊಂದಿರುವ ಗಂಡು ಪಫಿನ್‌ ಅನ್ನು ಹೆಣ್ಣು ಪಫಿನ್‌ ಆಯ್ಕೆ ಮಾಡಿಕೊಳ್ಳುತ್ತದೆ. ಜೀವಿತಾವಧಿಯಲ್ಲಿ ಒಂದೇ ಪಫಿನ್‌ನೊಂದಿಗೆ ಜೋಡಿಯಾಗುತ್ತದೆ. ವರ್ಷಕ್ಕೊಮ್ಮೆ ಒಂದು ಮೊಟ್ಟೆ ಇಡುತ್ತದೆ. 39ರಿಂದ 35 ದಿನಗಳವರಗೆ ಕಾವುಕೊಟ್ಟು ಮರಿಗೆ ಜನ್ಮ ನೀಡುತ್ತದೆ. ಸುಮಾರು 50 ದಿನಗಳ ನಂತರ ಮರಿ ಹಾರಲು ಆರಂಭಿಸುತ್ತದೆ. ಮರಿ ಸ್ವತಂತ್ರ್ಯವಾಗಿ ಜೀವಿಸುವವವರೆಗೆ ಪೋಷಕ ಹಕ್ಕಿಗಳೇ ಆಹಾರ ಒದಗಿಸುತ್ತವೆ. ಗಲ್‌ ಹಕ್ಕಿಗಳು ಇವನ್ನು ಹೆಚ್ಚಾಗಿ ಬೇಟೆಯಾಡುತ್ತವೆ.
 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು