ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗಾತಿಯ ಹುಡುಕಿ ಹೋಗಿ ವರ್ಷದ ನಂತರ ಸಿಕ್ಕ 'ಕುಶ'ನನ್ನು ಮತ್ತೆ ಪಳಗಿಸುವ ಕೆಲಸ

Last Updated 1 ಏಪ್ರಿಲ್ 2021, 14:07 IST
ಅಕ್ಷರ ಗಾತ್ರ

ಕುಶಾಲನಗರ (ಕೊಡಗು): ಸಂಗಾತಿಯನ್ನು ಹುಡುಕಿಕೊಂಡು ವರ್ಷದ ಹಿಂದೆ ಕಾಡಿಗೆ ಹೋಗಿದ್ದ ದುಬಾರೆ ಶಿಬಿರದ ಆನೆ ‘ಕುಶ’ನನ್ನು ಸೆರೆ ಹಿಡಿದು, ಕ್ರಾಲ್‌ (ದೌಡ್ಡಿ)ನಲ್ಲಿ ಬಂಧಿಸಿಯಾಗಿದೆ. ಆದರೆ, ಆ ಆನೆಯಲ್ಲಿ ಗೆಲುವಿಲ್ಲ. ತನ್ನ ಸಹಪಾಠಿಗಳ ಗುಂಪಿಗೆ ಸೇರಿದ ಖುಷಿಯೂ ಕಾಣುತ್ತಿಲ್ಲ.

ಶಿಬಿರದ ರೀತಿ–ರಿವಾಜುಗಳನ್ನು ‘ಕುಶ’ ಮರೆತೇ ಹೋಗಿದ್ದಾನೆ. ಒಂದು ವರ್ಷದಿಂದ ಕಾಡಾನೆಗಳ ಸಹವಾಸ ಮಾಡಿದ ಈ ಗಂಡಾನೆ, ಸ್ವಾಭಾವಿಕವಾಗಿ ಕಾಡಾನೆಯಾಗಿ ಪರಿವರ್ತನೆ ಹೊಂದಿದೆ. ಮೃದು ಸ್ವಾಭಾವ ಹೋಗಿ ಪುಂಡಾಟಿಕೆ ಸ್ವಭಾವ ಬೆಳೆಸಿಕೊಂಡಿದೆ. ಜೊತೆಗೆ, ಚಲನವಲನ ಭಿನ್ನವಾಗಿದ್ದು ರೋಷಾವೇಷ ಬೆಳೆಸಿಕೊಂಡಿದೆ. ಇದರೊಂದಿಗೆ, ಸಂಗಾತಿಯಿಂದ ದೂರವಾದ ವೇದನೆಯನ್ನೂ ಅನುಭವಿಸುತ್ತಿದೆ.

ಕಾಡಿನಲ್ಲಿ ತನ್ನ ಸಂಗಾತಿ ಹಾಗೂ ಇತರ ಕಾಡಾನೆಗಳೊಂದಿಗೆ ಸ್ವಚ್ಛಂದವಾಗಿ ಓಡಾಡಿಕೊಂಡಿದ್ದ ‘ಕುಶ’ನ ತೂಕ 200 ಕೆ.ಜಿ ಕಡಿಮೆಯಾಗಿದ್ದರೂ ಆರೋಗ್ಯವಾಗಿದ್ದಾನೆ. ಮಾವುತರ ಭಾಷೆಯನ್ನು ಸ್ವಲ್ಪ ಮರೆತಂತಿದೆ. ಮಾವುತರು ತಮ್ಮದೇ ಭಾಷೆಯಲ್ಲಿ ನೀಡುತ್ತಿದ್ದ ಆಜ್ಞೆಗಳನ್ನು ಪಾಲಿಸುತ್ತಿಲ್ಲ. ಮಾವುತರ ಭಾಷೆಯನ್ನೇ ಮರೆತಿದೆ. ಸಾಕಾನೆಗಳ ಸಹಕಾರದಿಂದ ಮರದ ದಿಮ್ಮಿಗಳಿಂದ ನಿರ್ಮಾಣ ಮಾಡಿರುವ ‘ಕ್ರಾಲ್’ಗೆ ಹಾಕಲಾಗಿದ್ದು, ಒಂದು ತಿಂಗಳ ಕಾಲ ಅಲ್ಲಿ ಅದನ್ನು ಮತ್ತೆ ಪಳಗಿಸುವ ಕೆಲಸ ನಡೆಯಲಿದೆ. ‘ಕುಶ’ ಆನೆಗೆ ಮಿತವಾಗಿ ಆಹಾರ ನೀಡುವ ಮೂಲಕ, ಮಾವುತರಿಂದ ಪಳಗಿಸಿ ಶಿಸ್ತಿನ ಪಾಠ ಕಲಿಸಲು ಇಲಾಖೆ ಕ್ರಮ ಕೈಗೊಂಡಿದೆ ಎಂದು ಕುಶಾಲನಗರ ವಲಯ ಅರಣ್ಯಾಧಿಕಾರಿ ಅನನ್ಯ ಕುಮಾರ್ ತಿಳಿಸಿದ್ದಾರೆ.

ದುಬಾರೆ ಶಿಬಿರದಲ್ಲಿನ ಸಾಕಾನೆಗಳು, ಮದವೇರಿದ ಸಂದರ್ಭದಲ್ಲಿ ಕಾಡಿಗೆ ತೆರಳಿ ಹೆಣ್ಣಾನೆ ಸಂಗ ಮಾಡಿ ವಾಪಸ್ಸಾಗುವುದು ಸಾಮಾನ್ಯ. ಆದರೆ, ’ಕುಶ’ ಮಾತ್ರ ವಾಪಸ್ಸಾಗಿರಲಿಲ್ಲ. ಅರಣ್ಯ ಇಲಾಖೆ ಸಿಬ್ಬಂದಿಯ ನಿರಂತರ ಕಾರ್ಯಾಚರಣೆಯ ಫಲವಾಗಿ, ಆ ಆನೆಯನ್ನು ಸೆರೆ ಹಿಡಿಯಲಾಗಿದ್ದು, ಬುಧವಾರ ಮತ್ತೆ ಶಿಬಿರಕ್ಕೆ ಕರೆತರಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT