ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಡಾನೆಗಳಿಗೆ ಎಲೆಕಳ್ಳಿ ಲಕ್ಷ್ಮಣ ರೇಖೆಯೇ? ಬಿಆರ್‌ಟಿಯಲ್ಲಿ ಅರಣ್ಯ ಇಲಾಖೆಯ ಪ್ರಯೋಗ

Last Updated 10 ಆಗಸ್ಟ್ 2021, 10:34 IST
ಅಕ್ಷರ ಗಾತ್ರ

ಯಳಂದೂರು: ಕಾಡಂಚಿನ ಪ್ರದೇಶಗಳಲ್ಲಿ ಮಾನವ ವನ್ಯಜೀವಿ ಸಂಘರ್ಷ ತಪ್ಪಿಸಲು ಹಲವು ಪ್ರಯತ್ನಗಳನ್ನು ಮಾಡುತ್ತಿರುವ ಅರಣ್ಯ ಇಲಾಖೆ ಈಗ ಎಲೆಕಳ್ಳಿಯ ಪ್ರಯೋಗಕ್ಕೆ ಮುಂದಾಗಿದೆ.

ತಮಿಳುನಾಡಿನ ಮದುಮಲೆ ಹುಲಿ ಸಂರಕ್ಷಿತ ಪ್ರದೇಶದಲ್ಲಿ ನಡೆದಿರುವ ಈ ಪ್ರಯೋಗವನ್ನು ಇಲಾಖೆಯು ಬಿಆರ್‌ಟಿ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಜಾರಿಗೆ ತಂದಿದೆ.ಬಿಆರ್‌ಟಿ ಅರಣ್ಯದ ಕಾಡಂಚಿನ ಪ್ರದೇಶಗಳ ಕಂದಕಗಳಿಗೆ ಹೊಂದಿಕೊಂಡಂತೆ ಎಲೆಕಳ್ಳಿ ಬೆಳೆಸುವ ಕೆಲಸವನ್ನು ಆರಂಭಿಸಿದೆ. ರಾಜ್ಯದಲ್ಲೇ ಇದು ಮೊದಲ ಪ್ರಯೋಗ ಎಂದು ಅಧಿಕಾರಿಗಳು ಹೇಳಿದ್ದಾರೆ.

ಈ ಸಸ್ಯ ವನ್ಯಪ್ರಾಣಿಗಳು ಅಡವಿ ದಾಟಿ ಹೊರ ಬರದಂತೆ ತಡೆಯುವ ಲಕ್ಷ್ಮಣ ರೇಖೆ ಆಗಲಿದೆ ಎಂಬ ನಿರೀಕ್ಷೆಯಲ್ಲಿ ಅರಣ್ಯ ಅಧಿಕಾರಿಗಳಿದ್ದಾರೆ.ಮುಂಗಾರಿನಲ್ಲಿ ನೈಸರ್ಗಿಕ ಬೇಲಿಯಾಗಿಅರಳಿಕೊಳ್ಳುವ ಕಳ್ಳಿ, ಮುಂದಿನ ದಿನಗಳಲ್ಲಿ ಆನೆ ಮತ್ತು ಮಾನವ ಸಂಘರ್ಷ ತಪ್ಪಿಸುವ ದೆಸೆಯಲ್ಲಿ ಪ್ರಾಕೃತಿಕ ತಡೆ ಗೋಡೆಯಾಗಲಿದೆ ಎಂಬುದು ಅವರ ಲೆಕ್ಕಾಚಾರ.

ಮಾನವ ವನ್ಯಜೀವಿ ಸಂಘರ್ಷ ತಪ್ಪಿಸಲು ಈಗಾಗಲೇ ಬಿಆರ್‌ಟಿ ವ್ಯಾಪ್ತಿಯಲ್ಲಿ ಸೋಲಾರ್‌ ಬೇಲಿ, ಕಾಂಕ್ರೀಟ್‌ ಬೇಲಿ, ಕಂದಕ, ಕಬ್ಬಿಣದ ಕಂಬಿಗಳ ಬೇಲಿಗಳನ್ನು ನಿರ್ಮಿಸಲಾಗಿದೆ. ಹಾಗಿದ್ದರೂ, ಆಹಾರ, ನೀರು ಅರಸಿ ಬರುವ ಜೀವಿಗಳು ಕೆಲವೊಮ್ಮೆ ಈ ಅಡೆತಡೆ ದಾಟಿಹೊರ ಬರುತ್ತವೆ.

‘ಗಸ್ತುಪಡೆ ಮತ್ತು ಸಿಸಿಟಿವಿ ಕಣ್ಗಾವಲು ಅಳವಡಿಸಿ ಅರಣ್ಯ ಸಿಬ್ಬಂದಿ ಹಗಲುಇರುಳಿನಲ್ಲಿ ಕಾಯಬೇಕಿದೆ. ಹಾಗಿದ್ದರೂ ನಮ್ಮ ಕಣ್ಣು ತಪ್ಪಿಸಿ ಕರಡಿ, ಜಿಂಕೆ, ಕಡವೆ ಕೃಷಿ ಭೂಮಿಗಳಿಗೆ ಇಳಿಯತ್ತವೆ. ಎಲೆಕಳ್ಳಿಯನ್ನು ಕಾಡಂಚಿನಲ್ಲಿ ಬೆಳೆಸಿದರೆ, ವನ್ಯ ಪ್ರಾಣಿಗಳು ನಾಡಿನತ್ತ ಸುಳಿಯುವುದನ್ನು ತಪ್ಪಿಸಬಹುದು’ ಎಂದು ಡಿಆರ್‌ಎಫ್‌ಒ ಪಿ.ರಮೇಶ್ ಅವರು ತಿಳಿಸಿದರು.

‘ನೀರು ಬೇಡದ, ಬರಕ್ಕೆ ಬಗ್ಗದ ಕಳ್ಳಿಯ ಹಾಲು ಮತ್ತು ಎಲೆಯ ವಾಸನೆ ವನ್ಯ ಜೀವಿಗಳು ಅವುಗಳ ಬಳಿ ತೆರಳದಂತೆ ತಡೆಯುತ್ತದೆ. ಈಗಲೂ ರೈತರು ಮತ್ತು ಬುಡಕಟ್ಟು ಜನರು ತಮ್ಮ ಹೊಲ, ಗದ್ದೆಗಳ ಬಳಿ ಈ ಕಳ್ಳಿ ಬೇಲಿಹಾಕಿ ಬೆಳೆ ರಕ್ಷಿಸಿಕೊಂಡಿದ್ದಾರೆ’ ಎನ್ನುತ್ತಾರೆ ಅರಣ್ಯ ರಕ್ಷಕರು.

ಯಳಂದೂರು ಅರಣ್ಯ ವ್ಯಾಪ್ತಿಯ ಬೆಲವತ್ತ ಡ್ಯಾಂ, ಶನಿವಾರ ಮುಂಟಿ, ಗುಂಬಳ್ಳಿ ಚೆಕ್‌ಪೋಸ್ಟ್, ಕರಡಿಗುಡ್ಡ ತನಕ ಸುಮಾರು 45 ಕಿ.ಮೀ. ದೂರ ಕಳ್ಳಿ ಸಾಲು ಹಾಕಲಾಗಿದೆ. ಕೆ.ಗುಡಿ ಸುತ್ತಮುತ್ತ ಸಸಿ ನೆಡುವ ಕಾಯಕ ಭರದಿಂದ ಸಾಗಿದೆ.

ಹೆಚ್ಚು ಖರ್ಚಿಲ್ಲ: ಡಿಸಿಎಫ್‌
ಈ ಯೋಜನೆ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಬಿಆರ್‌ಟಿ ಹುಲಿ ಸಂರಕ್ಷಿತ ಪ್ರದೇಶದ ಉಪ ಅರಣ್ಯ ಸಂರಕ್ಷಣಾಧಿಕಾರಿ ಜಿ.ಸಂತೋಷ್‌ಕುಮಾರ್‌ ಅವರು, 'ಮಧುಮಲೆ ದಟ್ಟ ಕಾನನದಲ್ಲಿ ಬುಡಕಟ್ಟು ನಿವಾಸಿಗಳು ಕಳ್ಳಿ ಬೆಳೆಸಿ ಆನೆಗಳ ಉಪಟಳ ನಿವಾರಿಸಿಕೊಂಡಬಗ್ಗೆ ಮಾಹಿತಿ ಇತ್ತು. ಈ ಸರಳ ವಿಧಾನವನ್ನೂ ನಮ್ಮಲ್ಲಿಯೂ ಪ್ರಯೋಗಿಸುವ ಬಗ್ಗೆ ಆಲೋಚನೆ ಬಂದಿತ್ತು. ಅದನ್ನು ಕಾರ್ಯರೂಪಕ್ಕೆ ತರಲಾಗುತ್ತಿದೆ’ ಎಂದರು.

‘ಮಾನವ ವನ್ಯಜೀವಿ ಸಂಘರ್ಷ ನಿಯಂತ್ರಣಕ್ಕಾಗಿ ಈಗಾಗಲೇ ರೈಲು ಕಂಬಿ, ಸೋಲಾರ್, ಸಿಸಿಟಿವಿ, ಇಪಿಟಿ (ಆನೆ ತಡೆ ಕಂದಕ) ಮೊದಲಾದ ಬಹು ವೆಚ್ಚದತಂತ್ರಗಳನ್ನು ಬಳಸಲಾಗಿದೆ. ಇದು ಹೆಚ್ಚು ಹಣ ಮತ್ತು ಶ್ರಮವನ್ನೂ ಬೇಡುತ್ತವೆ.ಆದರೂ, ಆನೆ ಉಪಟಳ ತಡೆಯುವಲ್ಲಿ ಪೂರ್ಣ ಯಶಸ್ಸು ಸಿಕ್ಕಿಲ್ಲ. ಆದರೆ, ಎಲೆಕಳ್ಳಿ ಬನದ ಸುತ್ತಮುತ್ತಹೇರಳವಾಗಿ ಸಿಗುತ್ತದೆ. ಇದನ್ನೇ ಕತ್ತರಿಸಿ ಕಂದಕದ ಸನಿಹದಲ್ಲಿ ಹಾಕಿದರೆ ಮಳೆಗಾಲಮುಗಿಯುವ ಮೊದಲೇ ಇದು ಪೊದೆಯಾಕಾರದಲ್ಲಿ ಬೆಳೆಯುತ್ತದೆ. ಕಳ್ಳಿ ನೆಡುವ ಖರ್ಚು ಬಿಟ್ಟುಹೆಚ್ಚಿನ ವೆಚ್ಚ ಬೇಡದು’ ಎಂದು ವಿವರಿಸಿದರು.

***

ಕಳ್ಳಿಬೇಲಿಯು ಪ್ರಾಣಿಗಳು ನಾಡಿನತ್ತ ಬರದಂತೆ ರಕ್ಷ ಕವಚವಾದರೆ, ರಾಜ್ಯದ ಇತರ ಕಡೆಗಳಲ್ಲೂ ಇದು ಜನಪ್ರಿಯತೆ ಪಡೆಯಲಿದೆ.
-ಸಂತೋಷ್‌ ಕುಮಾರ್‌, ಡಿಸಿಎಫ್‌ ಬಿಆರ್‌ಟಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT