ಭಾನುವಾರ, ಸೆಪ್ಟೆಂಬರ್ 20, 2020
21 °C

ಗೋಲ್ಡನ್ ಬರ್ಡ್ ವಿಂಗ್

ಚನ್ನರಾಜ್.ಎಲ್.ಸಿ Updated:

ಅಕ್ಷರ ಗಾತ್ರ : | |

Deccan Herald

ಜುಲೈ ತಿಂಗಳ ಒಂದು ದಿನ ಕಬಿನಿ ಜಲಾಶಯದ ಹಿನ್ನೀರಿನ ತೋಟದಲ್ಲಿದ್ದೆ. ಬೀಜ ಸಂವರ್ಧನೆಗೆ ಬೆಳೆಸಿದ್ದ ಅಪರೂಪದ ತರಕಾರಿ ಗಿಡಗಳಲ್ಲಿ ಹೂ ಬಿಟ್ಟಿದ್ದವು. ಹಗಲು ರಾತ್ರಿ ಬಿಟ್ಟು ಬಿಟ್ಟು ಸುರಿಯುವ ಮೃಗಶಿರಾ, ಆರಿದ್ರಾ, ಪುನರ್ವಸು, ಪುಷ್ಯ ಮಳೆಗಳಿಂದಾಗಿ ಹೂಗಳಿಗೆ ಪರಾಗಸ್ಪರ್ಶಿಗಳಾದ ಜೇನು, ಇರುವೆ, ಚಿಟ್ಟೆ, ದುಂಬಿಗಳ ದರ್ಶನವಿಲ್ಲದೆ ಕುಂಬಳ, ತುಪ್ಪದಹೀರೆ, ರಕ್ಕೆ ಅವರೆಗಳ ಕಾಯಿ ಕಚ್ಚದೆ ಚಿಂತೆಗಿಡಾಗಿದ್ದೆ. ಹೀಗೆ ಒಂದು ದಿನ ಒಂಟಿಯಾಗಿ ರೂಮಿನಲ್ಲಿ ಕುಳಿತು ಸುರಿಯುವ ಮಳೆ, ತುಂಬಿ ತುಳುಕುತ್ತಿದ್ದ ಕಬಿನಿ ಜಲಾಶಯದ ನೀಲಿ ಜಲ ರಾಶಿಯನ್ನ ನೋಡುತ್ತಿರುವಾಗ ಕೈತೋಟದಲ್ಲಿದ್ದ ಹೂವಿನ ಗಿಡದ ಮೇಲೆ ಹಕ್ಕಿಯಂತೆ ಹಾರಾಡುತ್ತಿದ್ದ ಚಿಟ್ಟೆಯೊಂದು ಕಾಣಿಸಿತು.

ತುಸು ಹತ್ತಿರ ಹೋಗಿ ನೋಡಿದಾಗಲೇ ಗೊತ್ತಾಗಿದ್ದು, ಅದು ಸ್ವಾಲೋಟ್ಯೆಲ್ ಗುಂಪಿಗೆ ಸೇರಿದ ಗೋಲ್ಡನ್ ಬರ್ಡ್ ವಿಂಗ್ ಚಿಟ್ಟೆ ಎಂದು. ಇದೊಂದು ವಿಶೇಷ ಚಿಟ್ಟೆ. ನಮ್ಮ ದೇಶದ ಪಶ್ಚಿಮಘಟ್ಟಗಳಲ್ಲಿ ಕಂಡುಬರುತ್ತದೆ.

ಗೋಲ್ಡನ್ ಬರ್ಡ್ ವಿಂಗ್ ಚಿಟ್ಟೆಯ ರೆಕ್ಕೆಗಳು ಸುಮಾರು 119-188 ಮೀ. ಮೀಗಳಷ್ಟು ಅಗಲವಾಗಿದೆ. ಭೂಮಿಯಿಂದ ನಾಲ್ಕೈದು ಮೀಟರುಗಳಷ್ಟು ಎತ್ತರದಲ್ಲಿ ಹಾರಾಡುತ್ತ ಹೂಗಳಲ್ಲಿ ಮಕರಂದ ಹೀರಲು ಕೆಳಗೆ ಕೂಡ ಬರುತ್ತವೆ. ಹೆಣ್ಣು ಮತ್ತು ಗಂಡುಗಳಲ್ಲಿ ಹಳದಿ ಪಟ್ಟೆ ಮತ್ತು ಕಪ್ಪು ಚುಕ್ಕೆಗಳ ಸಂಯೋಜನೆಗಳಲ್ಲಿ ವ್ಯತ್ಯಾಸಗಳಿರುತ್ತವೆ. ಆಹಾರಕ್ಕಾಗಿ ದ್ರವ ರೂಪದ ಹೂವುಗಳ ಮಕರಂದ ಹೀರುತ್ತವೆ. ಲಾರ್ವ ಹಂತದಲ್ಲಿ ಆಹಾರಕ್ಕಾಗಿ ನಿರ್ದಿಷ್ಟ ಬಳ್ಳಿಜಾತಿಯ ಈಶ್ವರಿ, ಹಾಗಲ, ಗುಲಂಜಿ, ಗೆಣಸು, ಮುತ್ತುಗ, ಸೀಮೆಹುಣಸೆ, ಬಾಗೆ, ಆರಳಿ, ಬಿಲ್ವಾರ, ಯಲಚಿ, ಬೋರೆ, ಆಲ, ಕಕ್ಕೆ, ಗುಳಮಾವು, ಮೇಪ್ಲವರ್, ಬಿಲ್ವಾಪತ್ರೆ, ಬೇಲ, ಬಿಳಿಮತ್ತಿ ,ಸಂಪಿಗೆ, ರಾಮಫಲ, ಲಕ್ಷಣಫಲ, ಎಕ್ಕ ಮತ್ತು ಹುಲ್ಲು ಜಾತಿಯ ಭತ್ತ ಬಿದಿರುಗಳನ್ನ ಆಶ್ರಯಿಸುತ್ತವೆ.

ಭಾರತದಲ್ಲಿ ಸುಮಾರು 15000 ಚಿಟ್ಟೆ ಪ್ರಭೇದಗಳನ್ನ ಗುರುತಿಸಲಾಗಿದೆ. 190 ಮಿ.ಮೀ ರೆಕ್ಕೆಗಳನ್ನು ಹೊಂದಿರುವ ಚಿಟ್ಟೆಗಳಿಂದ 15 ಮೀ.ಮೀ ರೆಕ್ಕೆಗಳನ್ನ ಹೊಂದಿರುವ ಚಿಕ್ಕ ಗಾತ್ರದ ವೈವಿಧ್ಯ ಚಿಟ್ಟೆಗಳವೆ. ಚಿಟ್ಟೆಗಳ ರೆಕ್ಕೆ ಜೋಡಣೆ ಹಾರಾಟದ ಕ್ರಮ ಪರಭಕ್ಷಕಗಳಿಂದ ತಪ್ಪಿಸಿಕೊಳ್ಳವ ತಂತ್ರ ಲಾರ್ವಾ ಹಂತದಲ್ಲಿ ಆಹಾರಕ್ಕೆ ಉಪಯೋಗಿಸುವ ನಿರ್ದಿಷ್ಟ ಗಿಡ, ಮರ, ಬಳ್ಳಿಗಳು ವಲಸೆ ಹೋಗುವ ವಿಧಾನಗಳನ್ನ ಆಧಾರಿಸಿ ಬ್ಲೂಯಿಸ್ ವೈಟ್- ಎಲ್ಲೋ, ಸ್ವ್ಯಾಲೋಟೈಲ್, ಮಿಲ್ಕಿವೀಡ್, ಬ್ರೌನ್ಸ್, ನಿಂಪಾಲಿಡ್ಸ್ ಮತ್ತು ಸ್ಕಿಪರ್ಸ್ ಎಂದು ಏಳು ಗುಂಪುಗಳನ್ನಾಗಿ ವಿಂಗಡಿಸಲಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು