ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಸಿರು ರೆಕ್ಕೆಗಳ ಕೆಂಪುಗಿಳಿ

Last Updated 22 ನವೆಂಬರ್ 2019, 19:45 IST
ಅಕ್ಷರ ಗಾತ್ರ

ಬಹುತೇಕರಿಗೆ ಪರಿಚಯವಿರುವ ಹಕ್ಕಿಗಳು ಕೆಲವು ಮಾತ್ರ. ಅಂತಹ ಹಕ್ಕಿಗಳಲ್ಲಿ ಗಿಳಿ ಕೂಡ ಒಂದು. ಗಾತ್ರ ಮತ್ತು ದೇಹರಚನೆಗೆ ತಕ್ಕಂತೆ ವಿಶ್ವದ ವಿವಿಧ ಭೂಪ್ರದೇಶಗಳಲ್ಲಿ ಹಲವು ಗಿಳಿ ಪ್ರಭೇದಗಳನ್ನು ಗುರುತಿಸಲಾಗಿದೆ. ದೊಡ್ಡಗಾತ್ರದ ಗಿಳಿ ಪ್ರಭೇದಗಳ ಪೈಕಿ ಒಂದಾದ ಹಸಿರು ರೆಕ್ಕೆಯ ಗಿಳಿ (Green Winged Macaw) ಬಗ್ಗೆ ಇಂದಿನ ಪಕ್ಷಿ ಪ್ರಪಂಚದಲ್ಲಿ ತಿಳಿಯೋಣ. ಇದರ ವೈಜ್ಞಾನಿಕ ಹೆಸರು ಅರಾ ಕ್ಲೊರೊಪೆಟರಸ್‌ (Ara chloropterus), ಇದು ಗಿಳಿಗಳ ಸಿಟಾಸಿಡೇ (Psittacidae) ಗುಂಪಿಗೆ ಸೇರಿದ್ದು, ಸಿಟಾಸಿಫಾರ್ಮ್ಸ್‌ (Psittaciformes) ಗುಂಪಿನಲ್ಲಿ ವರ್ಗೀಕರಿಸಲಾಗಿದೆ.

ಹೇಗಿರುತ್ತದೆ?

ದೇಹವೆಲ್ಲಾ ಕೆಂಪುಬಣ್ಣದ ನಯವಾದ ಪುಕ್ಕದಿಂದ ಕೂಡಿರುತ್ತದೆ. ರೆಕ್ಕೆಗಳು ಹಸಿರು ಬಣ್ಣದಲ್ಲಿದ್ದು, ಅಂಚುಗಳು ನೀಲಿ ಬಣ್ಣದಲ್ಲಿರುತ್ತವೆ. ಬಾಲ ಕೆಂಪು ಬಣ್ಣದಲ್ಲಿದ್ದು, ಅಲ್ಲಲ್ಲಿ ನೀಲಿ ಬಣ್ಣದ ಗರಿಗಳು ಮೂಡಿರುತ್ತವೆ. ತಲೆ ದೊಡ್ಡದಾಗಿದ್ದು, ಕೆಂಪು ಬಣ್ಣದ ಪುಕ್ಕ ಆವರಿಸಿರುತ್ತದೆ. ಕೆನ್ನೆಗಳು ಬಿಳಿ ಬಣ್ಣದಲ್ಲಿದ್ದು, ಕೆಂಪು ಬಣ್ಣ ಗೆರೆಗಳು ಮೂಡಿರುತ್ತವೆ. ಕೊಕ್ಕು ದೊಡ್ಡದಾಗಿದ್ದು, ಮೇಲಿನ ಕೊಕ್ಕು ಆಹಾರ ಹೆಕ್ಕಿ ತಿನ್ನಲು ನೆರವಾಗುವಂತೆ ಬಾಗಿರುತ್ತದೆ. ಕೆಳಭಾಗದ ಕೊಕ್ಕು ಕಪ್ಪು ಬಣ್ಣದಲ್ಲಿರುತ್ತದೆ. ಕಾಲುಗಳು ಗಾಢ ಬೂದು ಬಣ್ಣದಲ್ಲಿದ್ದು, ನಾಲ್ಕು ಬೆರಳುಗಳು ಇರುತ್ತವೆ. ಕಣ್ಣುಗಳು ಚಿಕ್ಕದಾಗಿದ್ದು, ತಿಳಿಕಂದು ಮತ್ತು ಕಪ್ಪು ಬಣ್ಣದಲ್ಲಿರುತ್ತವೆ.

ಎಲ್ಲಿದೆ?

ಇದು ದಕ್ಷಿಣ ಅಮೆರಿಕ ಖಂಡದಲ್ಲಿ ಮಾತ್ರ ಕಾಣಸಿಗುವ ಹಕ್ಕಿ. ಅರ್ಜೆಂಟೀನಾ, ಬ್ರೆಜಿಲ್, ಬೊಲಿವಿಯಾ, ಕೊಲಂಬಿಯಾ, ಈಕ್ವೆಡಾರ್, ಪನಾಮಾ, ಗಯಾನಾ, ಪರಾಗ್ವೆ, ಉರುಗ್ವೆ, ಪೆರು, ಸುರಿನಾಮ್ ಮತ್ತು ವೆನಿಜುವೆಲಾ ರಾಷ್ಟ್ರಗಳಲ್ಲಿ ಇದರ ಸಂತತಿ ವಿಸ್ತರಿಸಿದೆ.

ದಟ್ಟವಾಗಿ ಮರಗಳು ಬೆಳೆದಿರುವ ಕಾಡುಗಳು, ಮಳೆ ಬೀಳುವ ಕಾಡುಗಳು, ತಗ್ಗು ಪ್ರದೇಶಗಳು, ಕಡಿಮೆ ಎತ್ತರವಿರುವ ಪ್ರದೇಶಗಳು ಇದರ ನೆಚ್ಚಿನ ವಾಸಸ್ಥಾನ.

ಜೀವನಕ್ರಮ ಮತ್ತು ವರ್ತನೆ

ಇಂದು ಗುಂಪಿನಲ್ಲಿ ವಾಸಿಸಲು ಇಷ್ಟಪಡುವ ಹಕ್ಕಿ. ಪ್ರತಿ ಹಕ್ಕಿಯೂ ಸದಾ ಸಂಗಾತಿಯೊಂದಿಗೆ ಇರಲು ಇಷ್ಟಪಡುತ್ತದೆ. 6ರಿಂದ 12 ಗಿಳಿಗಳು ಸೇರಿ ಗುಂಪು ರಚಿಸಿಕೊಂಡಿರುತ್ತವೆ. ಆದರೆ ದೊಡ್ಡ ಗುಂಪಿ ರಚಿಸಿಕೊಳ್ಳುವುದು ಅಪರೂಪ. ಗುಂಪಿನಲ್ಲಿ ಇದ್ದಾಗ ಪ್ರತಿ ಹಕ್ಕಿಯೂ ವಿಶಿಷ್ಟ ಬಗೆಯ ಸದ್ದುಗಳನ್ನು ಹೊರಡಿಸುತ್ತಾ ಸಂವಹನ ನಡೆಸುತ್ತವೆ.

ಇದು ಹಗಲಿನಲ್ಲಿ ಮಾತ್ರ ಹೆಚ್ಚು ಚುರುಕಾಗಿರುತ್ತದೆ. ಆಹಾರ ಅರಸುವುದು ಕೂಡ ಈ ಅವಧಿಯಲ್ಲೇ. ಕತ್ತಲಾಗುತ್ತಿದ್ದಂತೆಯೇ ಸುರಕ್ಷಿತ ಪ್ರದೇಶಗಳಲ್ಲಿ ವಿಶ್ರಾಂತಿ ಪಡೆಯುತ್ತದೆ. ದೇಹಕ್ಕೆ ಬೇಕಾಗುವಷ್ಟು ಆಹಾರ ಸೇವಿಸಿದ ಕೂಡಲೇ ಎಲ್ಲವೂ ಒಂದೆಡೆ ಕೂಡಿ ನಲಿಯುತ್ತವೆ. ಒಂದರ ಪುಕ್ಕವನ್ನು ಮತ್ತೊಂದು ಸ್ವಚ್ಛಗೊಳಿಸಿಕೊಳ್ಳುತ್ತವೆ. ಒಂದೇ ಕಡೆ ಮೂರು ಅಥವಾ ನಾಲ್ಕು ಗಿಳಿಗಳು ಇದ್ದರೆ, ಜೋಡಿ ಹಕ್ಕಿ ಮತ್ತು ಅದರ ಮರಿಗಳು ಎಂದು ಅರ್ಥ ಮಾಡಿಕೊಳ್ಳಬಹುದು. ಇತರೆ ಪ್ರಾಣಿಗಳು ಅಥವಾ ಪಕ್ಷಿಗಳ ಕಣ್ಣಿಗೆ ಕಾಣಿಸಿಕೊಳ್ಳುವುದಕ್ಕೆ ಹೆಚ್ಚು ಇಷ್ಟಪಡುವುದಿಲ್ಲ.

ಆಹಾರ

ಇದು ಸಸ್ಯಾಹಾರಿ ಹಕ್ಕಿ. ವಿವಿಧ ಬಗೆಯ ಕಾಳುಗಳು ಮತ್ತು ಹಣ್ಣುಗಳೇ ಇದರ ಪ್ರಮುಖ ಆಹಾರ. ವಿವಿಧ ಬಗೆಯ ಗಿಡಗಳ ಎಲೆಗಳನ್ನೂ ಸೇವಿಸುತ್ತದೆ. ಅಪರೂಪಕ್ಕೊಮ್ಮೆ ಜೇಡಿಮಣ್ಣು, ಮರದ ತೊಗಟೆಗಳನ್ನೂ ಸೇವಿಸುತ್ತದೆ.

ಸಂತಾನೋತ್ಪತ್ತಿ

ವಯಸ್ಕ ಹಂತ ತಲುಪಿದ ಗಂಡುಗಿಳಿ ರೆಕ್ಕೆಗಳನ್ನು ಅಗಲಿಸಿ, ವಿವಿಧ ಕಸರತ್ತುಗಳನ್ನು ನಡೆಸಿ ಹೆಣ್ಣುಗಿಳಿಯ ಗಮನ ಸೆಳೆಯಲು ಪ್ರಯತ್ನಿಸುತ್ತದೆ. ಹೆಣ್ಣು ಗಿಳಿಗೆ ಇಷ್ಟವಾದರೆ ಗಂಡಿನೊಂದಿಗೆ ಕೂಡಿ ಬಾಳುತ್ತದೆ. ವರ್ಷಕ್ಕೊಮ್ಮೆ ಡಿಸೆಂಬರ್‌ನಲ್ಲಿ ಇದು ಸಂತಾನೋತ್ಪತ್ತಿ ನಡೆಸುತ್ತದೆ.

ಈ ಅವಧಿಯಲ್ಲಿ ಮರದ ರೆಂಬೆಗಳ ಮೇಲೆ ಅಥವಾ ಮರದ ಪೊಟರೆಗಳಲ್ಲಿ ಗೂಡು ಕಟ್ಟುತ್ತದೆ. ಹೆಣ್ಣು ಹಕ್ಕಿ 2ರಿಂದ 3 ಮೊಟ್ಟೆಗಳನ್ನು ಇಟ್ಟು, ಸುಮಾರು 30 ದಿನಗಳ ವರೆಗೆ ಕಾವು ಕೊಡುತ್ತದೆ. ಈ ಅವಧಿಯಲ್ಲಿ ಗಂಡು ಹಕ್ಕಿ ಹೆಣ್ಣುಗಿಳಿಗೆ ಆಹಾರ ಪೂರೈಸುತ್ತದೆ. ಮೊಟ್ಟೆಯೊಡೆದು ಹೊರಬಂದ ಮರಿಗಳಿಗೆ ಪೋಷಕ ಹಕ್ಕಿಗಳೇ ಆಹಾರ ಉಣಿಸಿ ಬೆಳೆಸುತ್ತವೆ. ಸುಮಾರು ನಾಲ್ಕು ತಿಂಗಳ ವರೆಗೆ ಮರಿಗಳು ಗುಂಪಿನಲ್ಲೇ ಇರುತ್ತವೆ. 2ರಿಂದ 3 ವರ್ಷಗಳ ನಂತರ ಮರಿಗಳು ವಯಸ್ಕ ಹಂತ ತಲುಪುತ್ತವೆ.

ಸ್ವಾರಸ್ಯಕರ ಸಂಗತಿಗಳು

* ಮಕಾವ್‌ಗಳ ಪೈಕಿ ಇದು ಎರಡನೇ ಅತಿದೊಡ್ಡ ಗಿಳಿ.

* ಸ್ಕಾರ್ಲೆಟ್ ಮಕಾವ್ ಮತ್ತು ಹಸಿರು ರೆಕ್ಕೆಗಳ ಮಕಾವ್ ನಡುವೆ ಹಲವು ಹೋಲಿಕೆಗಳಿವೆ. ಹೀಗಾಗಿ ನೋಡಿದ ಕೂಡಲೇ ಗುರುತಿಸುವುದು ಕಷ್ಟ.

* ಇದರ ಕೊಕ್ಕು ಬಲಿಷ್ಠ ಮತ್ತು ದೃಢವಾಗಿದ್ದು, ಬ್ರೆಜಿಲ್ ನಟ್ ಅನ್ನೂ ಪುಡಿ ಮಾಡುವ ಸಾಮರ್ಥ್ಯವಿದೆ.

* ಕೆಲವೊಮ್ಮೆ ಕಾಗೆ ಕಿರುಚುವಂತೆ ಕರ್ಕಶ ಧ್ವನಿಯನ್ನೂ ಹೊರಡಿಸುತ್ತದೆ.

* ಕಾಡಿನಲ್ಲಿ ವಾಸಿಸಿದರೂ ಇತರೆ ಗಿಳಿ ಪ್ರಭೇದಗಳಂತೆ ಬೇರೆ ಹಕ್ಕಿಗಳ ಧ್ವನಿಗಳನ್ನು ಅನುಕರಿಸುವುದಿಲ್ಲ.

ಗಾತ್ರ ಮತ್ತು ಜೀವಿತಾವಧಿ:ದೇಹದ ತೂಕ- 1.5 ರಿಂದ 1.7 ಕೆ.ಜಿ,ದೇಹದ ಉದ್ದ- 66ರಿಂದ 99 ಸೆಂ.ಮೀ,ರೆಕ್ಕೆಗಳ ಅಗಲ-104–125 ಸೆಂ.ಮೀ,ಹಾರುವ ವೇಗ-56 ಕಿ.ಮೀ/ಗಂಟೆಗೆ,ಜೀವಿತಾವಧಿ-30 ರಿಂದ 60 ವರ್ಷ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT