ಶುಕ್ರವಾರ, ಮಾರ್ಚ್ 31, 2023
22 °C

PV Web Exclusive| ಹಕ್ಕಿಪಿಕ್ಕರ ಮಂಜ ತೋರಿಸಿಕೊಟ್ಟ ‘ಸ್ಟಾಮಿನಾ ಸೊಪ್ಪು’

ಜಯಸಿಂಹ ಆರ್. Updated:

ಅಕ್ಷರ ಗಾತ್ರ : | |

Prajavani

ಒಂದೇ ಜಾಗಕ್ಕೆ ಪದೇ ಪದೇ ಚಾರಣ ಹೋಗುವುದರಿಂದ ಹಲವು ಲಾಭಗಳಿದ್ದವು. ವರ್ಷದ ಎಲ್ಲಾ ಋತುಗಳಲ್ಲೂ ಒಂದು ಜಾಗವನ್ನು ನೋಡುವುದು ಭಿನ್ನ ಅನುಭವ ನೀಡುತ್ತಿತ್ತು. ಪ್ರತಿ ಋತುವಿನಲ್ಲೂ ಅಲ್ಲಿ ಹೊಸದೇ ಆದ ಜಗತ್ತು ತೆರೆದುಕೊಳ್ಳುತ್ತಿತ್ತು. ಆದರೆ ಒಂದೇ ಋತುವಿನಲ್ಲಿ ಒಂದೇ ಜಾಗವನ್ನು ಹಲವು ಬಾರಿ ನೋಡುವುದು ಅರಿವಿನ ವಿಸ್ತರಣೆಯಾಗುತ್ತದೆ ಎಂಬುದು ನಮ್ಮ ತಂಡದ ಚಾರಣಿಗರ ಅಭಿಪ್ರಾಯವಾಗಿತ್ತು. ಹೀಗೆ ಪದೇ ಪದೇ ಭೇಟಿ ನೀಡಲು ನಾವು ಆಯ್ಕೆ ಮಾಡಿಕೊಂಡಿದ್ದು, ಬೆಂಗಳೂರು ಗ್ರಾಮಂತರ ಜಿಲ್ಲೆಯ ಶಿವಗಂಗೆ ಬೆಟ್ಟದ ಸಮೀಪ ಇರುವ ತೂತುಕಲ್ಲು ಅರಣ್ಯವನ್ನು.

ಮೂರೂ ಕಡೆ ಬೆಟ್ಟಗಳಿಂದ ಆವೃತವಾಗಿರುವ ಈ ಅರಣ್ಯದಲ್ಲಿ ಜೀವವೈವಿಧ್ಯಕ್ಕೆ ಕೊರತೆ ಇರಲಿಲ್ಲ. ಚಿರತೆ, ಕಿರುಬ, ಕಾಡುಹಂದಿ, ಕರಡಿ, ಕಾಡುಪಾಪ, ನರಿ, ಕಾಡುಬೆಕ್ಕು, ಮುಳ್ಳುಹಂದಿ ಕೆಲವೊಮ್ಮೆ ಆನೆ... ಹೀಗೆ ಇಲ್ಲಿರುವ ಕಾಡುಪ್ರಾಣಿಗಳ ಪಟ್ಟಿ ಮುಂದುವರಿಯುತ್ತಾ ಹೋಗುತ್ತದೆ. ಸಸ್ಯಸಂಪತ್ತಿನಲ್ಲೂ ಈ ಕಾಡು ಹಿಂದೆ ಉಳಿದಿಲ್ಲ. ಆದರೆ, ಅಲ್ಲಿರುವ ಸಸ್ಯಗಳ ಬಗ್ಗೆ ನಮಗೆ ಕನಿಷ್ಠ ಜ್ಞಾನವೂ ಇರಲಿಲ್ಲ. ಈ ಬಗ್ಗೆ ತಿಳಿದುಕೊಳ್ಳಬೇಕು ಎಂಬುದೇ ನಮ್ಮ ಚಾರಣಿಗರ ತಂಡವು ಈ ಕಾಡಿಗೆ ಪದೇ–ಪದೇ ಚಾರಣ ಕೈಗೊಳ್ಳುವುದರ ಹಿಂದಿನ ಉದ್ದೇಶವಾಗಿತ್ತು. ಈ ಕಾಡಿನ ಬಗ್ಗೆ ತಕ್ಕಮಟ್ಟಿನ ಅರಿವು ಇದ್ದ ಹಕ್ಕಿ–ಪಿಕ್ಕರ ಮಂಜ ಜತೆಯಾಗಿದ್ದು, ನಮಗೆ ಭಾರಿ ಲಾಭವಾಗಿತ್ತು. ಕಾಡು ಪ್ರಾಣಿಗಳ ಹೆಜ್ಜೆಜಾಡನ್ನು ಪತ್ತೆಮಾಡುವುದು, ಅವುಗಳ ಕೂಗನ್ನು ಪತ್ತೆಮಾಡುವುದು, ಬರಿಗೈಯಲ್ಲಿ ಮೀನು ಹಿಡಿಯುವುದು... ಇವು ಮಂಜನ ಸಹವಾಸದಿಂದ ನಮಗೆ ಒದಗಿದ ‘ವಿದ್ಯೆ’ಗಳು. 

ಈ ಕಾಡಿನ ಸಸ್ಯಗಳ ಬಗ್ಗೆಯೂ ಮಂಜನಿಗೆ ಅಪಾರವಾದ ತಿಳುವಳಿಕೆ ಇತ್ತು. ದಾರಿ ಮರೆಸೊ ಸೊಪ್ಪು, ತೂಬರೆ ಹಣ್ಣು, ಕಾಡುಗೋಡಂಬಿ ಮೊದಲಾದವುಗಳನ್ನು ಮಂಜ ತೋರಿಸಿಕೊಟ್ಟಿದ್ದ. ಕಾಡಿನಲ್ಲಿ ಬೆಳೆದಿದ್ದ ಕಲ್ಲುಹೂ ಗಡ್ಡೆಯನ್ನು ಕಿತ್ತುಕೊಟ್ಟಿದ್ದ. ಆ ಗಡ್ಡೆ ನಮ್ಮ ತಂಡದ ಹಲವರ ಮನೆಯ ಕುಂಡಗಳಲ್ಲಿ ಈಗ ಹೂಬಿಟ್ಟಿವೆ. ಇವೆಲ್ಲಕ್ಕಿಂತ ನಮ್ಮ ಗಮನ ಸೆಳೆದದ್ದು ಮಂಜ ತೋರಿಸಿಕೊಟ್ಟಿದ್ದ ‘ಸ್ಟಾಮಿನಾ ಸೊಪ್ಪು’. ಆ ಸೊಪ್ಪಿಗೆ ಮಂಜ ಆ ಹೆಸರು ಇಟ್ಟಿರಲಿಲ್ಲ. ಆ ಸೊಪ್ಪಿಗೆ ಏನೆಂದು ಕರೆಯುತ್ತಾರೆ ಎಂದು ಮಂಜನಿಗೆ ಗೊತ್ತಿರಲಿಲ್ಲ. ಅಥವಾ ಗೊತ್ತಿದ್ದರೂ, ಅವನು ನಮಗೆ ಅದನ್ನು ಹೇಳಿರಲಿಲ್ಲ.

ತೂತುಕಲ್ಲು ಕಾಡಿನ ಒಂದು ಅಂಚಿನಲ್ಲಿ ಕೆರೆ ಇದೆ. ಸಮೀಪದ ಗ್ರಾಮವೊಂದಕ್ಕೆ ಸೇರಿದ ಕೆರೆ ಅದು. ಅದರ ಹೆಸರು ಹೊಸಕೆರೆ. ಕಾಡಿನ ಎಲ್ಲಾ ಝರಿಗಳೂ ಬಂದು ಈ ಕೆರೆಗೆ ಸೇರುತ್ತವೆ. ಕಾಡಿನ ಬಹುತೇಕ ಪ್ರಾಣಿಗಳೂ ನೀರು ಕುಡಿಯಲು ಈ ಕೆರೆಗೇ ಬರುತ್ತವೆ. ಹೀಗಾಗಿಯೇ ಈ ಕೆರೆ ನಮ್ಮ ‘ಪದೇ–ಪದೇ ಚಾರಣದ’ ಪ್ರಮುಖ ಭಾಗವಾಗಿತ್ತು. ಹೀಗೆ ಒಮ್ಮೆ ಈ ಕೆರೆಯ ಏರಿಯ ಮೇಲೆ ಹೋಗುತ್ತಿದ್ದೆವು. ಏರಿ ಸುಸ್ಥಿತಿಯಲ್ಲಿ ಇದ್ದರೂ, ಮುಳ್ಳುಗಿಡಗಳಿಂದ ದಾರಿ ಬಂದ್ ಆಗಿತ್ತು. ಅದರ ಮಧ್ಯೆಯೇ ಕಾಡುಪ್ರಾಣಿಗಳು ಓಡಾಡಿ ನಿರ್ಮಿಸಿದ್ದ ಕಿಂಡಿಗಳನ್ನು ನಾವೂ ಬಳಸುತ್ತಿದ್ದೆವು. ಕೆರೆಯ ಏರಿಗೆ ಸಂಪರ್ಕ ಕಲ್ಪಿಸುವ ಅಂತಹ ಒಂದು ಕಿಂಡಿಯ ಬಳಿ ಒಮ್ಮೆ ಸುಸ್ತಾಗಿ ಕುಳಿತಿದ್ದೆವು. ನಾವು ಸುಸ್ತಾಗಿ ಕುಳಿತಿದ್ದನ್ನು ನೋಡಿ ಮಂಜ ನಗುತ್ತಿದ್ದ. ಐದಾರು ನಿಮಿಷವಾದರೂ ನಾವು ಏಳಲಿಲ್ಲ. ಮಂಜನಿಗೆ ಸಾಕಾಗಿ, ‘ಇಲ್ಲೊಂದು ಸೊಪ್ಪು ಇದೆ. ಕಿತ್ತುಕೊಡ್ತೀನಿ. ಬೇಯಿಸ್ಕೊಂಡು ತಿನ್ನಿ. ಸುಸ್ತೆಲ್ಲಾ ಹೋಗುತ್ತೆ’ ಅಂದ. ನಾವು ಹ್ಞೂ ಅಂದೆವು.

ಆ ಕಿಂಡಿಯ ಸಮೀಪವೇ ಇದ್ದ ಮರವೊಂದನ್ನು ಏರತೊಡಗಿದ. ಮರದ ಕಾಂಡ, ರೆಂಬೆಕೊಂಬೆಗಳಲ್ಲೆಲ್ಲಾ ಮುಳ್ಳುಗಳೇ ಇದ್ದವು (ಜಾಲಿಯ ಮರ ಅಲ್ಲ). ಆ ಮರಕ್ಕೆ ಒಂದು ಬಳ್ಳಿ ಸುತ್ತಿಕೊಂಡಿತ್ತು. ಆ ಬಳ್ಳಿಗೂ ಮರದಷ್ಟೇ ವಯಸ್ಸು ಆಗಿರಬೇಕು, ಬಳ್ಳಿಯ ಕಾಂಡವೂ ಮರದಷ್ಟೇ ಗಟ್ಟಿಯಾಗಿತ್ತು. ಮರವನ್ನು ಏರಿದ್ದ ಮಂಜ, ಒಂದು ಮಂಕರಿಯಾಗುವಷ್ಟು ಸೊಪ್ಪು ಕಿತ್ತು ತಂದ. ಅದರಲ್ಲಿ ಬರಿ ಎಲೆಗಳನ್ನು ಬಿಡಿಸಿ, ನಮ್ಮ ಬ್ಯಾಗುಗಳಿಗೆ ತುಂಬಿದ.

‘ಈ ಸೊಪ್ಪು ಬೇಯಿಸ್ಕೊಂಡು ತಿನ್ನಬೇಕು. ಆಗಿರೋ ಸುಸ್ತೆಲ್ಲಾ ಹೋಗುತ್ತೆ. ಬೆಳಿಗ್ಗೆ ಏಳುವಾಗ ಜೋಶ್ ಜಾಸ್ತಿ ಇರತ್ತೆ’ ಅಂದ ಮಂಜ.

‘ನುಗ್ಗೆ ಸೊಪ್ಪಿನ್ನು ಬೇಯಿಸುವ ರೀತಿಯಲ್ಲೇ ಇದನ್ನು ಬೇಯಿಸಿ, ಒಗ್ಗರಣೆ ಹಾಕಬೇಕು. ಆಮೇಲೆ ಪಲ್ಯ ಮಾಡ್ಕೊಂಡು ತಿನ್ಬೇಕು. ನಂಗೆ ಹುಷಾರು ಇಲ್ದೇ ಇದ್ದಾಗ ಈ ಸೊಪ್ಪಿನ ಪಲ್ಯ ಮಾಡಿಸ್ಕೊಂಡು ತಿನ್ತೀನಿ. ರಾತ್ರಿ ನಿದ್ದೆ ಬರೋದು ಮಾತ್ರ ಗೊತ್ತಾಗತ್ತೆ. ಬೆಳಿಗ್ಗೆ ಏಳುವಾಗ ಆರಾಮ್ ಇರತ್ತೆ. ಒಂದ್ಸಲ ತಿಂದು ನೋಡಿ, ಮತ್ತೆ ಮತ್ತೆ ಬೇಕು ಅಂತೀರಾ. ನನ್ನ ಎಷ್ಟೋ ಫ್ರೆಂಡ್ಸು ಹುಡುಕ್ಕೊಂಡು ಹುಡುಕ್ಕೊಂಡು ಬಂದು ಸೊಪ್ಪು ಕಿತ್ತುಸ್ಕೊಂಡು ಹೋಗ್ತಾರೆ. ಇಡೀ ಕಾಡಲ್ಲಿ ಇದೊಂದೇ ಬಳ್ಳಿ ಇರೋದು’ ಎಂದು ಮಂಜನ ವಿವರಣೆ ಸಾಗಿತ್ತು.

ಕರಿಬೇವಿನಂತೆ ಕಡುಹಸಿರುಬಣ್ಣದ ಸೊಪ್ಪು ಅದು. ಹಸಿಸೊಪ್ಪನ್ನು ಅಂಗೈಯಲ್ಲಿ ಹಿಡಿದು ಹೊಸಕಿದರೆ, ಒಣಎಲೆಯ ರೀತಿ ಪುಡಿಪುಡಿಯಾಗುತ್ತಿತ್ತು. ನಮ್ಮ ತಂಡದ ಹುಡುಗರಿಗೆಲ್ಲಾ ಈ ಪ್ರಯೋಗ ಮಜಾ ಕೊಡುತ್ತಿತ್ತು. ಹತ್ತಾರು ಬಾರಿ ಸೊಪ್ಪನ್ನು ಪುಡಿಮಾಡಿ ನೋಡಿದರು. ಮನೆಗೆ ಬಂದು ಸೊಪ್ಪಿನ ಪಲ್ಯ ಮಾಡಿಕೊಂಡು ತಿಂದದ್ದೂ ಆಯಿತು. ನಿದ್ದೆ ಮಾಡಿ ಏಳುವಷ್ಟರಲ್ಲಿ ಚಾರಣದ ದಣಿವೆಲ್ಲಾ ಮಾಯವಾಗಿತ್ತು. ಹೊಸ ರೀತಿಯ ಉತ್ಸಾಹ ಬಂದಿತ್ತು. ಈ ಸೊಪ್ಪಿನ ಪರಿಚಯದಿಂದ ಹೆಚ್ಚು ಖುಷಿಯಾಗಿದ್ದು, ನಮ್ಮ ತಂಡದ ಶಿವಪ್ರಸಾದನಿಗೆ. ಚಾರಣದಲ್ಲಿ ಹೆಚ್ಚು ದಣಿವಾಗುತ್ತಿದ್ದದ್ದು, ಅವನಿಗೇನೇ. ಚಾರಣದ ಸುಸ್ತನ್ನು ಹೋಗಿಸಲು ಇದು ಒಳ್ಳೆಯ ಔಷಧವಾಗಿತ್ತು. ತಲೆನೋವು, ಮೈಕೈನೋವು, ನೆಗಡಿ ಎಲ್ಲವೂ ಕಡಿಮೆಯಾಗುತ್ತಿತ್ತು. ಉಸಿರಾಟವೂ ಸುಲಭವಾಗುತ್ತಿತ್ತು.

ಗಿಡಮೂಲಿಕೆಗಳ ಬಗ್ಗೆ ಬಹಳ ಆಸಕ್ತಿ ಇದ್ದ ಶಿವಪ್ರಸಾದ ಗಿಡದ ಸ್ಯಾಂಪಲ್ ಅನ್ನು ಹಿಡಿದುಕೊಂಡು ಹಲವು ನಾಟಿ ವೈದ್ಯರನ್ನು ಸಂಪರ್ಕಿಸಿದ. ಹಲವು ವಿಶ್ವವಿದ್ಯಾಲಯಗಳ ಪ್ರೊಫೆಸರ್‌ಗಳನ್ನು ಭೇಟಿ ಮಾಡಿದ. ಆ ಬಳ್ಳಿ ಯಾವುದು? ಅದರ ಉಪಯೋಗವೇನು ಎಂಬುದರ ಬಗ್ಗೆ ನಿಖರವಾದ ಮಾಹಿತಿ ಸಿಗಲಿಲ್ಲ. ಆ ಗಿಡದ ಹೂವು ಅಥವಾ ಹಣ್ಣನ್ನು ತರುವಂತೆ ಹಲವು ಪ್ರೊಫೆಸರ್‌ಗಳು ಹೇಳಿದ್ದರು. ಮಂಜನಿಗೆ ಈ ವಿಷಯ ತಿಳಿಸಿದೆವು. ಅದು ಯಾವಾಗ ಹೂ ಬಿಡುತ್ತದೆ, ಕಾಯಿ ಬಿಡುತ್ತದೆ ಎಂಬುದರ ಬಗ್ಗೆ ಮಂಜನಿಗೂ ನಿಖರ ಮಾಹಿತಿ ಇರಲಿಲ್ಲ. ಅವನೂ ಒಂದೆರಡು ಬಾರಿ ಪರಿಶೀಲಿಸಿ ಸುಮ್ಮನಾದ. ಈಗ ಆ ಬಳ್ಳಿಯ ಬಗ್ಗೆ ಈ ಮಾಹಿತಿ ಕಲೆ ಹಾಕಬೇಕೆಂದರೆ ನಾವು ಮತ್ತೆ ಮತ್ತೆ ಆ ಜಾಗಕ್ಕೆ ಭೇಟಿ ನೀಡಲೇಬೇಕಿದೆ.

ಚಳಿಗಾಲದಲ್ಲಿ ಎಲೆ ಉದುರಿಸಿಕೊಂಡಿದ್ದ ಕಾರಣ ಬಳ್ಳಿ ಒಣಮರದಂತೆ ಕಾಣುತ್ತಿತ್ತು. ಬೇಸಿಗೆಯಲ್ಲಿ ಲಾಕ್‌ಡೌನ್‌ನ ಕಾರಣ ಕಾಡಿಗೆ ಹೋಗಲು ಸಾಧ್ಯವಾಗಿರಲಿಲ್ಲ. ಈಗ ಮಳೆಗಾಲದಲ್ಲಿ ಬಳ್ಳಿ ಚೆನ್ನಾಗಿ ಎಲೆಬಿಟ್ಟು ನಿಂತಿದೆ. ಆದರೆ ಹೂ–ಹಣ್ಣುಗಳಿಲ್ಲ. ಆ ಬಳ್ಳಿಯೂ ವಿಚಿತ್ರವಾಗಿದೆ. ಅದು ಹಬ್ಬಿಕೊಂಡಿರುವ ಮರ ನೆಲದಿಂದ 15–20 ಅಡಿ ಎತ್ತರದಲ್ಲಿ ಎಲೆಬಿಟ್ಟಿದೆ. ಮರದ ಮೇಲೆಯೇ ಬಳ್ಳಿಹಬ್ಬಿಕೊಂಡಿದ್ದು, ಮರದ ಎಲೆಗಳು ಮತ್ತು ಬಳ್ಳಿಯ ಎಲೆಗಳು ಒಂದೇ ರೀತಿ ಇವೆ. ಅಷ್ಟು ಎತ್ತರದಲ್ಲಿ ಇರುವುದರಿಂದ ಯಾವುದು ಯಾವ ಎಲೆ ಎಂಬುದನ್ನು ಪತ್ತೆ ಮಾಡುವುದು ಕಷ್ಟ. ಆ ಬಳ್ಳಿ ಬೇರೆ ಎಲ್ಲಾದರೂ ಇದೆಯೇ ಎಂದು ಹುಡುಕುವ ಪ್ರಯತ್ನವನ್ನೂ ಮಾಡಿದೆವು. ‘ಇಡೀ ಕಾಡಲ್ಲಿ ಇದೊಂದೆ ಬಳ್ಳಿ ಇರೋದು’ ಅಂತ ಮಂಜ ಹೇಳಿದ್ದ. ಕಾಡಿನಲ್ಲಿ ಬೇರೆಡೆ ಹುಡುಕಿದರೂ ನಮಗೆ ಬಳ್ಳಿ ಸಿಗಲಿಲ್ಲ. ಕಾಡಿನಲ್ಲಿ ಆ ಬಳ್ಳಿ ಬೇರೆ ಕಡೆ ಇದ್ದರೂ, ಅದನ್ನು ಪತ್ತೆ ಮಾಡುವಷ್ಟು ಚಾಣಾಕ್ಷತೆ ನಮಗಿಲ್ಲ. ನಮ್ಮ ಚಾರಣದ ಹುಡುಗರು ‘ಸ್ಟಾಮಿನಾ ಸೊಪ್ಪು’ ಎಂದು ಹೆಸರಿಟ್ಟಿರುವ ಈ ಬಳ್ಳಿಯ ಹೂ–ಹಣ್ಣನ್ನು ಪತ್ತೆ ಮಾಡಲು ಮತ್ತೆ ವಸಂತದವರೆಗೆ ಕಾಯಬೇಕಿದೆ. ಅಲ್ಲಿಯವರೆಗೆ ಮತ್ತೆ ಮತ್ತೆ ಅದೇ ಜಾಗಕ್ಕೆ ಚಾರಣ ಹೋಗಬೇಕಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು