ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಡೆಮ್ಮೆಯಂತೆ ಕಾಣುವ ಸ್ಕಾಟ್ಲೆಂಡ್ ಹಸು

Last Updated 24 ಜುಲೈ 2019, 19:44 IST
ಅಕ್ಷರ ಗಾತ್ರ

ಹಲವರಿಗೆ ಚಿರಪರಿಚಿತವಾಗಿರುವ ಪ್ರಾಣಿ ಹಸು. ವಿಶ್ವದಾದ್ಯಂತ ಬಗೆ ಬಗೆಯ ಹಸು ತಳಿಗಳನ್ನು ಗುರುತಿಸಲಾಗಿದೆ. ಇಂದಿನ ಪ್ರಾಣಿ ಪ್ರಪಂಚದಲ್ಲಿ ಸ್ಕಾಟ್ಲೆಂಡ್‌ನ ಅಪರೂಪದ ಹಸು ಹೈಲ್ಯಾಂಡ್ ಕ್ಯಾಟಲ್‌ (Highland Cattle) ಬಗ್ಗೆ ತಿಳಿಯೋಣ. ‌

ಹೇರಿ ಕೌ (Hairy Cow) ಎಂದೂ ಕರೆಯುವ ಇದರ ವೈಜ್ಞಾನಿಕ ಹೆಸರು ಬೊಸ್‌ ಟಾರಸ್‌ (Bos taurus). ಇದು ಸಸ್ಯಾಹಾರಿ ಪ್ರಾಣಿಗಳ ಬೋವಿಡೇ (Bovidae) ಕುಟುಂಬಕ್ಕೆ ಸೇರಿದೆ.

ಹೇಗಿರುತ್ತದೆ?

ಕಂದು ಬಣ್ಣದ ನೀಳವಾದ ಕೂದಲು ಬೆಳೆದಿರುವ ತುಪ್ಪಳದಿಂದ ದೇಹ ಆವರಿಸಿರುತ್ತದೆ. ಇದು ಹೆಸರಿಗೆ ಹಸುವಾದರೂ ಬಹುತೇಕ ಲಕ್ಷಣಗಳು ಕಾಡೆಮ್ಮಯನ್ನೇ ಹೋಲುತ್ತವೆ. ತಲೆಯ ಮೇಲೆ ದಟ್ಟವಾಗಿ ಬೆಳೆಯುವ ಕೂದಲು ಕಣ್ಣುಗಳನ್ನು ಮುಚ್ಚಿರುತ್ತವೆ. ಮುಖ ಹಸುವಿನ ಮುಖದಂತೆಯೇ ಕಂಡರೂ ಮೂಗು ಎಮ್ಮೆಯ ಮೂಗಿನಂತೆ ಇರುತ್ತದೆ. ಕಣ್ಣುಗಳು ದೊಡ್ಡದಾಗಿದ್ದು, ಕಪ್ಪು ಬಣ್ಣದಲ್ಲಿರುತ್ತವೆ. ಕಾಲುಗಳು ಚಿಕ್ಕದಾಗಿದ್ದರೂ ದೃಢವಾಗಿರುತ್ತವೆ. ಬಾಲ ನೀಳವಾಗಿ ಬೆಳೆದಿದ್ದು, ದಟ್ಟವಾದ ಕೂದಲಿನಿಂದ ಕೂಡಿರುತ್ತವೆ. ಇತರೆ ಎಮ್ಮೆ, ಹಸುಗಳಿಗೆ ಹೋಲಿಸಿದರೆ ಇದರ ಕೋಡುಗಳು ಸಂಪೂರ್ಣ ಭಿನ್ನವಾಗಿರುತ್ತವೆ. ನೀಳವಾಗಿ ತಿರುಗಿರುವ ಈ ಕೋಡುಗಳ ತುದಿ ಚೂಪಾಗಿರುತ್ತವೆ. ಕಿವಿಗಳು ಅಗಲವಾಗಿ ಮತ್ತು ದೊಡ್ಡದಾಗಿರುತ್ತವೆ. ಗಂಡು ಮತ್ತು ಹೆಣ್ಣಿನಲ್ಲಿ ಹೆಚ್ಚಿನ ವ್ಯತ್ಯಾಸಗಳು ಇರುವುದಿಲ್ಲ.

ಎಲ್ಲಿದೆ?: ಇದರ ಮೂಲ ನೆಲೆ ಸ್ಕಾಟ್ಲೆಂಡ್‌. ಯುರೋಪ್‌ನ ಇತರೆ ರಾಷ್ಟ್ರಗಳು ಮತ್ತು ಅಮೆರಿಕ ಆಸ್ಟ್ರೇಲಿಯಾಗೂ ಇದನ್ನು ಪರಿಚಯಿಸಲಾಗಿದೆ. ಪರ್ವತ ಪ್ರದೇಶಗಳು ಮತ್ತು ಹುಲ್ಲುಗಾವಲು ಪ್ರದೇಶಗಳು ಇದರ ವಾಸಸ್ಥಾನ.

ಜೀವನಕ್ರಮ ಮತ್ತು ವರ್ತನೆ

ಇತರೆ ಸಸ್ಯಾಹಾರಿ ಪ್ರಾಣಿಗಳಿಗೆ ಹೋಲಿಸಿದರೆ ಇದರ ಜೀವನಕ್ರಮ ಭಿನ್ನವಾಗಿರುತ್ತದೆ. ಗುಂಪಿನಲ್ಲಿ ವಾಸಿಸಿದರೂ ಶ್ರೇಣೀಕೃತ ಜೀವನ ನಡೆಸುತ್ತದೆ. ಅಂದರೆ ಗುಂಪಿನಲ್ಲಿ ಪ್ರಬಲವಾಗಿರುವ ಹಸುಗಳು ಉಳಿದವುಗಳ ಮೇಲೆ, ಹಿರಿಯ ಪ್ರಾಣಿಗಳು ಕಿರಿಯ ಪ್ರಾಣಿಗಳ ಮೇಲೆ, ಎತ್ತುಗಳು ಹಸುಗಳ ಮೇಲೆ ಪ್ರಾಬಲ್ಯ ಮೆರೆಯುತ್ತವೆ. ಗುಂಪಿನ ಪ್ರಬಲ ಹಸುಗೆ ಜನಿಸಿದ ಮರಿಗೆ ಗುಂಪಿನ ಇತರೆ ಪ್ರಾಣಿಗಳು ಪ್ರಾಶಸ್ಯ ನೀಡುತ್ತವೆ. ಆಹಾರ ಹುಡುಕುವುದರಲ್ಲಿ ಮತ್ತು ತಿನ್ನುವುದರಲ್ಲಿಯೇ ಜೀವನದ ಬಹುತೇಕ ಸಮಯವನ್ನು ಕಳೆಯುತ್ತವೆ. ಚಳಿಗಾಲದಲ್ಲಿ ಹೆಚ್ಚು ಹಿಮ ಸುರಿಯುವುದರಿಂದ ತಮ್ಮ ಕೋಡುಗಳಿಂದ ಹಿಮವನ್ನು ಸರಿಸಿ ಆಹಾರ ತಿನ್ನುತ್ತದೆ. ಈ ಕೋಡುಗಳ ಮೂಲಕವೇ ಪರಭಕ್ಷಕ ಪ್ರಾಣಿಗಳಿಂದ ರಕ್ಷಿಸಿಕೊಳ್ಳುತ್ತವೆ.

ಆಹಾರ: ಇದು ಸಂಪೂರ್ಣ ಸಸ್ಯಾಹಾರಿ ಪ್ರಾಣಿ. ಹುಲ್ಲು ಮತ್ತು ಸಸ್ಯಗಳ ದಂಟುಗಳು ಇದರ ನೆಚ್ಚಿನ ಆಹಾರ. ವಿವಿಧ ಬಗೆಯ ಎಲೆಗಳು, ಹಣ್ಣುಗಳನ್ನೂ ಸೇವಿಸುತ್ತದೆ.

ಸಂತಾನೋತ್ಪತ್ತಿ

ಗುಂಪಿನಲ್ಲಿರುವ ಪ್ರಬಲ ಎತ್ತು ಎಲ್ಲ ಹಸುಗಳ ಜೊತೆ ಕೂಡುತ್ತದೆ. ಇತರೆ ಎತ್ತುಗಳು ಕೂಡ ಒಂದಕ್ಕಿಂತ ಹೆಚ್ಚು ಹಸುಗಳೊಂದಿಗೆ ಜೊತೆಯಾಗುತ್ತವೆ. ಇದು ಸುಮಾರು 9 ತಿಂಗಳು ಗರ್ಭ ಧರಿಸಿ ಒಂದು ಮರಿಗೆ ಜನ್ಮ ನೀಡುತ್ತದೆ. ಇದರ ಮರಿಯನ್ನು ಕಾವ್ಸ್ (Calves) ಎನ್ನುತ್ತಾರೆ. ಮರಿ ಜನಿಸಿದ ಕೆಲವೇ ಗಂಟೆಗಳಲ್ಲಿ ಎದ್ದು ಓಡಾಡಲು ಆರಂಭಿಸುತ್ತದೆ. ತಾಯಿಯನ್ನು ಗುರುತಿಸುತ್ತದೆ. ಮರಿಯ ಆರೈಕೆಯಲ್ಲಿ ತಾಯಿ ಹೆಚ್ಚು ಕಾಳಜಿ ವಹಿಸುತ್ತದೆ. ಆರು ತಿಂಗಳವರೆಗೆ ಹಾಲುಣಿಸಿ ಜೋಪಾನ ಮಾಡುತ್ತದೆ.

ಸ್ವಾರಸ್ಯಕರ ಸಂಗತಿಗಳು

* ಇದು ದಿನದಲ್ಲಿ 8 ಗಂಟೆಯನ್ನು ಹುಲ್ಲು ತಿನ್ನುವುದಕ್ಕಾಗಿಯೇ ಮೀಸಲಿಡುತ್ತದೆ.

* ಒಂದು ದಿನಕ್ಕೆ ಸುಮಾರು 70 ಕೆ.ಜಿ. ಆಹಾರ ಸೇವಿಸುತ್ತದೆ.

* ಇದಕ್ಕೆ ಎರಡು ಪದರಗಳ ತುಪ್ಪಳವಿದ್ದು, ಅತಿ ಕಡಿಮೆ ಉಷ್ಣಾಂಶವಿರುವ ಪ್ರದೇಶಗಳಿಗೂ ಹೊಂದಿಕೊಳ್ಳುತ್ತದೆ.

* –7 ಡಿಗ್ರಿ ವಾತಾವರಣದಲ್ಲೂ ಜೀವಿಸುತ್ತದೆ. ಈ ಅವಧಿಯಲ್ಲಿ ಇದು ಹೆಚ್ಚು ಆಹಾರ ಸೇವಿಸುತ್ತದೆ.

* ಇದು ಬುದ್ಧಿವಂತ ಪ್ರಾಣಿಯಾಗಿದ್ದು, ಸಾಕುಪ್ರಾಣಿಯಾಗಿ ಬಳಸಿಕೊಳ್ಳುವುದು ಸುಲಭ.

* ಇದರ ಮಾಂಸಕ್ಕಾಗಿಯೇ ಹಲವು ದೇಶಗಳಲ್ಲಿ ಇದನ್ನು ಸಾಕಲಾಗುತ್ತಿದೆ. ಆದರೆ ಕೊಟ್ಟಿಗೆಗಳಲ್ಲಿ ಕೂಡಿ ಹಾಕಿದರೆ ಇದು ಜೀವಿಸುವುದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT