ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮರೆಯಲಾಗದ ಮೆಟ್ಟಗಾಲು ಹಕ್ಕಿ

ಪಕ್ಷಿನೋಟ
Last Updated 5 ಜುಲೈ 2019, 19:45 IST
ಅಕ್ಷರ ಗಾತ್ರ

ಸದಾ ನಿಂತ ನೀರಿನ ದಡದ ಬಳಿ ಇದರ ಗುಲಾಬಿ ಕಾಲು, ನೀಳವಾದ ಕಪ್ಪು ಕೊಕ್ಕು ಎರಡು ಒಂದಕ್ಕೊಂದು ಸವಾಲು ಎಸೆಯುವಂತೆ ಆಹಾರ ಹುಡುಕಾಟದ ಸ್ಪರ್ಧೆಗೆ ಇಳಿದಿರುತ್ತವೆ!

ತನ್ನ ನೂರಾರು ಗೆಳೆಯ, ಗೆಳತಿಯರ ಜೊತೆ ಮರಿಗಳ ಪೋಷಣೆ, ಹಾರಾಟ, ಊಟ ಇವುಗಳಿಗೆ ಅಚ್ಚುಮೆಚ್ಚು. ಬೇಸಿಗೆಯಲ್ಲಿ ಹುಬ್ಬಳ್ಳಿ–ಧಾರವಾಡ ಜಿಲ್ಲೆಯ ಕೆರೆ, ಹೊಂಡ, ರಾಜಗಾಲುವೆಯಲ್ಲಿ ಸಾಮಾನ್ಯವಾಗಿ ಕಂಡುಬರುವ ನೀರು ಗೊರವ, ಕೆಸರು ಗೊರವ ಉರ್ಫ್‌ ಮೆಟ್ಟಗಾಲು ಹಕ್ಕಿ ಸಂಘಪ್ರಿಯ ಪಕ್ಷಿ. ಇಂಗ್ಲಿಷ್‌ನಲ್ಲಿ ಬ್ಲಾಕ್ ವಿಂಗ್ಡ್ ಸ್ಟಿಲ್ಟ್ ಎನ್ನಲಾಗುವ ಇದರ ವೈಜ್ಞಾನಿಕ ತಳಿ ಹಿಮಾನಟೋಪಸ್‌(Himantopus) ಎಂದುಗುರುತಿಸಲಾಗಿರುವ ಇವು ಆಸ್ಟ್ರೇಲಿಯಾ, ಏಷ್ಯಾ, ಅಮೆರಿಕ, ಯುರೋಪದಲ್ಲಿ ನೆಲೆಕಂಡುಕೊಂಡಿವೆ. ಮಾಲಿನ್ಯ, ಅರಣ್ಯ ನಾಶ, ಜಲಮೂಲಗಳ ಕಣ್ಮರೆಯಾಗುತ್ತಿರುವುದು ಇವುಗಳ ಆವಾಸ ಸ್ಥಾನಗಳಿಗೆ ಅಪಾಯ ತಂದೊಡ್ಡಿವೆ.

ಇವುಗಳಿಗೆ ಶುದ್ಧ ನೀರಾದರೂ ಸರಿ ಕೆಸರಾದರೂ ಸರಿ. ಒಟ್ಟಿನಲ್ಲಿ ನೀರು ಇರಬೇಕು. ರಾತ್ರಿಯೂ ಇವುಗಳ ದೃಷ್ಟಿ ಭಾರಿ ಚುರುಕು. ಹೀಗಾಗಿ ಮರಿಗಳಿಗೆ ಆಹಾರ ನೀಡುವುದು ಸುಲಭ. ಮೂರರಿಂದ ನಾಲ್ಕು ಮೊಟ್ಟೆಗಳಿಗೆ 25 ದಿನಗಳ ತನಕ ಕಾವು ನೀಡುತ್ತವೆ. ಶತ್ರುಗಳ ಕಣ್ಣು ತಪ್ಪಿಸಲು ಮರಿಗಳನ್ನು ನೀರಿನಲ್ಲಿ ಬಚ್ಚಿಡುತ್ತವೆ. ಕೇವಲ 24 ಗಂಟೆಯಲ್ಲಿಯೇ ಮರಿಗಳು ಈಜಲು, ನಡೆಯುವ ಸಾಮರ್ಥ್ಯ ಪಡೆಯುತ್ತವೆ.

ಕೆಕ್‌..ಕಿ.ಯಾಕ್‌. ಎಂದು ಕೂಗುವ ಇವುಗಳು ಅಪಾಯ ಎದುರಾದರೆ ಕಿಕ್‌.ಕಿಕ್‌.ಕಿಕ್‌ ಎಂದು ಧ್ವನಿ ಹೊರ ಹಾಕುತ್ತವೆ. ಸಾವಿರಕ್ಕೂ ಹೆಚ್ಚು ಪಕ್ಷಿಗಳು ಏಕಕಾಲಕ್ಕೆ ಜಾಗ ಬದಲಾಯಿಸುತ್ತವೆ. ಹಾರುವಾಗ ಕಾಲನ್ನು ನೇರವಾಗಿ ಮಾಡಿ, ಕುತ್ತಿಗೆಯನ್ನು ಒಂಚೂರು ತಗ್ಗಿಸುತ್ತವೆ. ಹೆಣ್ಣು ಪಕ್ಷಿಯನ್ನು ಗಂಡು ಪಕ್ಷಿಯೇ ಹಿಂಬಾಲಿಸಿ ಸಾಂಗತ್ಯಕ್ಕೆ ಆಹ್ವಾನಿಸುತ್ತದೆ. ಇದರ ನೀಳವಾದ ಕಾಲು, ಬಿಳಿ, ಕಡು ಕಂದು ಗರಿಗಳು ಹಾಗೂ ಕೊಕ್ಕು ನೋಡಲು ಬಲು ಸೊಗಸು. ಬಾನಿನಲ್ಲಿ ತೇಲುವಾಗ ವರ್ಣನೆಗೆ ಪದಗಳೇ ಸಿಗದು.

ಚಿತ್ರಗಳು: ಲೇಖಕರವು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT