ಪುಟ್ಟ ಜೀವಿಯ ವಿಚಿತ್ರ ಸಂಸಾರ!

7

ಪುಟ್ಟ ಜೀವಿಯ ವಿಚಿತ್ರ ಸಂಸಾರ!

Published:
Updated:

ಮನೆಯ ಅಂಗಳದ ದಾಳಿಂಬೆ ಗಿಡದ ರೆಂಬೆಗೆ ಕಡ್ಡಿದೇಹದ ಹುಳು ಗೂಡುಕಟ್ಟಿತ್ತು. ಹೊರಗಿನಿಂದ ನೋಡಿದರೆ ಗಿಡಕ್ಕೆ ಜೋತು ಬಿದ್ದ ಕಸದ  ತುಣಕಿನಂತೆ ಕಾಣುತ್ತಿತ್ತು. ಸ್ವಲ್ಪ ಹತ್ತಿರ ಹೋಗಿ ನೋಡಿದಾಗ, ಕಡ್ಡಿಯ ಗೂಡಿನ ಒಳಗೆ ಒಂದು ಪುಟ್ಟ ಜೀವಿ ವಾಸವಾಗಿದೆ ಎಂದು ಅರ್ಥವಾಯಿತು. ಅದನ್ನು ತಿಳಿಯಲು ಪ್ರಯತ್ನಿಸಿದಾಗ, ಅದರ ದುರಂತದ ಸಂಸಾರದ ಕಥೆ ಅಚ್ಚರಿ ಮೂಡಿಸಿತು.

ಈ ಜೀವಿಯ ಜೀವನ ಪ್ರಕ್ರಿಯೆಯೇ ವಿಚಿತ್ರ. ಒಣಗಿದ ಕಡ್ಡಿಗಳಿಂದ ಅಥವಾ ಎಲೆಗಳನ್ನೇ ದೇಹವಾಗಿಸಿಕೊಂಡು ಅದರೊಳಗೆ ಜೀವನ ಮಾಡುವ ಕೀಟಗಳಿವು. ಒಣಗಿದ ಎಲೆ ಅಥವಾ ಕಡ್ಡಿಗಳನ್ನು ಬಳಸಿ ತನ್ನ ಮೈಗೆ ಅಂಟಿಸಿಕೊಂಡು, ಅಂಟಿನ ಸಹಾಯದಿಂದ ಗೂಡು ಕಟ್ಟುವ ಕೌಶಲ ಈ ಕೀಟಕ್ಕಿದೆ. ಕಾಡಿನಂಚಿನಲ್ಲಿ ಹೂವು–ತೋಟಗಳಲ್ಲಿ ಇವು ಹೆಚ್ಚಾಗಿ ಕಂಡುಬರುತ್ತವೆ. ಈ ಹುಳ ಅಥವಾ ಕೀಟಕ್ಕೆ ಆಂಗ್ಲಭಾಷೆಯಲ್ಲಿ ‘ಬ್ಯಾಗ್ ವರ್ಮ್ಸ್‌’ ಎಂದು ಕರೆಯುತ್ತಾರೆ. ವಿವಿಧ ಪ್ರದೇಶಗಳಲ್ಲಿ ಕಟ್ಟಿಗೆ ಹುಳು, ಮರದ ಹುಳು, ಕೋಲು ಹುಳು ಎಂದು ಕರೆಯುತ್ತಾರೆ.

ಇದು ಲೆಪಿಡೊಪೆಟ್ರಾ ಕುಟುಂಬಕ್ಕೆ ಸೇರಿದ ಕೀಟ(ಚಿಟ್ಟೆ). ಸದಾ ಹಸಿರಾಗಿರುವ ಗಿಡ/ ಮರದ ಕೊಂಬೆಗೆ ಜೋತು ಬಿದ್ದುಕೊಂಡು ಜೀವನ ಸಾಗಿಸುತ್ತದೆ. ತನ್ನ ಗೂಡಿನ ಒಳಗೆ ಲಾರ್ವರೂಪದಲ್ಲಿ ವಾಸಮಾಡುತ್ತದೆ. ಇದರ ದೇಹ ಹೊರ ಪ್ರಪಂಚಕ್ಕೆ ಕಾಣುವುದಿಲ್ಲ. ಕಾಣುವುದು ಹೊರಗಿನ ನಿರ್ಜೀವ ಕಸಕಡ್ಡಿ ಮಾತ್ರ. ಇದಕ್ಕೆ ಆ ಕಸಕಡ್ಡಿಯ ದೇಹವೇ ಇದರ ಸುರಕ್ಷಾ ಕವಚ.

ಕಟ್ಟಿಗೆ ಹುಳುವಿನ ಹೆಣ್ಣು ಜಾತಿ ಕೀಟಗಳಿಗೆ ರೆಕ್ಕೆ ಬರುವುದಿಲ್ಲ. ಆದರೆ, ಗಂಡು ಕೀಟಕ್ಕಿರುತ್ತದೆ. ನೋಡಲು ಇದು ಚಿಟ್ಟೆಗಳ ವರ್ಗಕ್ಕೆ ಸೇರಿದಂತೆ ಕಂಡು ಬರುತ್ತದೆ. ಲಾರ್ವ ರೂಪದಲ್ಲಿ ಗೂಡೊಳಗೆ ಇದ್ದುಕೊಂಡು ಬೆಳೆಯುತ್ತವೆ. ಕಸಕಡ್ಡಿಗಳನ್ನು ಬಳಸಿಕೊಂಡು ವೈವಿಧ್ಯಮಯ ದೇಹ ರಚನೆ ಪಡೆದುಕೊಳ್ಳುತ್ತವೆ. ಒಂದರಿಂದ ಎರಡು ಇಂಚಿನಷ್ಟು ದೊಡ್ಡದಾಗಿರುತ್ತವೆ. ಇವುಗಳಲ್ಲಿ ಕೆಲವು ಕೀಟಗಳು 1 ರಿಂದ 15 ಸೆಂ.ಮೀ ಉದ್ದವಿರುತ್ತವೆ.

ಹೆಣ್ಣು ಹುಳು ತಾನು ವಾಸಿಸುವ ಗಿಡಗಳ ಮೇಲೆ ಸಂಪೂರ್ಣ ಅವಲಂಬಿತವಾಗಿರುತ್ತದೆ. ಆಹಾರ ಸಿಗದ್ದರೆ ಗೂಡಿನಿಂದ ಇನ್ನೊಂದು ಸಸ್ಯಕ್ಕೆ ನಿಧಾನವಾಗಿ ಚಲಿಸುತ್ತದೆ. ಚಲಿಸುವಾಗ ರೇಷ್ಮೆ ನೂಲುಗಳನ್ನು ಸುತ್ತುತ್ತಾ ಸಾಗುತ್ತದೆ. ಇದು ಆಹಾರವನ್ನು ಪಡೆಯುವ ಸಲುವಾಗಿ ಗೂಡಿನ ಒಂದು ಬದಿಯಲ್ಲಿ ರಂಧ್ರಗಳನ್ನು ಮಾಡಿಕೊಂಡಿರುತ್ತದೆ. ಅದರ ಮೂಲಕವೇ ಆಹಾರವನ್ನು ಪಡೆದುಕೊಳ್ಳುತ್ತದೆ. ಕೆಲವೊಂದು ಸಸ್ಯಗಳಿಗೆ ಇದು ಮಾರಕವಾದರೂ, ಕೃಷಿ ಚಟುವಟಿಕೆಗಳಿಗೆ ಇಷ್ಟು ಅಷ್ಟು ಹಾನಿಕಾರಕವಲ್ಲ.

ಹೆಣ್ಣು ಹುಳು ಗೂಡಿನಲ್ಲೇ ಜೀವನ ನಡೆಸುತ್ತಾ, ಅಲ್ಲೇ ಸಾವನ್ನಪ್ಪುತ್ತದೆ. ಇವುಗಳ ಸಂತಾನಕ್ರಿಯೆ ಕೂಡಾ ಗೂಡಿನ ರಂಧ್ರದ ಮೂಲಕವೇ ನಡೆಯುತ್ತದೆ. ಪ್ರೌಢಾವಸ್ಥೆಗೆ ತಲುಪಿದ ಗಂಡು ಹುಳುಗಳು ಸೆಪ್ಟೆಂಬರ್ ತಿಂಗಳಿನಲ್ಲಿ ಕಾಣಿಸಿಕೊಳ್ಳುತ್ತವೆ. ಇವು ಗೂಡಿನಲ್ಲಿರುವ ರಂಧ್ರದ ಮೂಲಕ ನೂರಾರು ಬೀಜಾಣುಗಳನ್ನು ಗೂಡಿನೊಳಗೆ ಪಸರಿಸುತ್ತವೆ. ಹೆಣ್ಣು ಹುಳುಗಳು ಬೀಜಗಳನ್ನು ಪಡೆದು, ಗರ್ಭಧರಿಸಿ, ಮೊಟ್ಟೆಗಳನ್ನಿಡುತ್ತವೆ. ಮೊಟ್ಟೆಗಳನ್ನು ಕಾಯುತ್ತಲೇ ತಾಯಿ ಕೀಟ ಅಲ್ಲಿಯೇ ಮುದುಡಿ ಸಾವನ್ನಪುತ್ತದೆ. ಸಾವಿನ ಕೊನೆಯವರೆಗೂ ತನ್ನ ಮೊಟ್ಟೆಗಳನ್ನು ಕಾಪಾಡಿಕೊಳ್ಳುತ್ತದೆ.

ಗೂಡಿನಲ್ಲಿರುವ ಲಾರ್ವಗಳ ಬೆಳವಣಿಗೆ ತುಂಬಾ ನಿಧಾನ. ಗೂಡಿನಲ್ಲಿರುವ ಮೊಟ್ಟೆಗಳು, ಒಡೆದು ಹುಳುಗಳಾಗುತ್ತವೆ. ನಂತರ ಹೊರಬಂದು, ಸುತ್ತಲಿನ ಹಸಿರು ಎಲೆಗಳನ್ನು ತಿಂದು ಬೆಳೆಯುತ್ತದೆ. ಹೆಣ್ಣು ಲಾರ್ವ ಹುಳುಗಳು ಗಾಳಿಯಲ್ಲಿ ತೇಲಿ ಮರಗಿಡಗಳ ಮೇಲೆ ಬಂದು ಬೀಳುತ್ತವೆ. ಮತ್ತೆ ಗೂಡುಗಳ ನಿರ್ಮಾಣ ಶುರುವಾಗುತ್ತದೆ. ಹೊರಗಿನ ಪ್ರಪಂಚಕ್ಕೆ ಕಾಣದ ಈ ಕೀಟದ ಸಂಸಾರವೇ ಒಂದು ವಿಚಿತ್ರ.


ದಾಳಿಂಬೆ ಗಿಡದಲ್ಲಿ ನೇತಾಡುತ್ತಿರುವ ಕಡ್ಡಿ ಹುಳದ ಗೂಡು

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !