ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆನೆಯ ಮಡಿಲು | ದೊಡ್ಡ ಜೀವಿಯ ಮಾತೃ ವಾತ್ಸಲ್ಯ

Last Updated 12 ಆಗಸ್ಟ್ 2019, 8:12 IST
ಅಕ್ಷರ ಗಾತ್ರ

ಜನ, ಜಾನುವಾರು ನಿರಂತರವಾಗಿ ನಡೆದು ಸವೆದಿದ್ದ ಹಾದಿ ಅದು. ಅದರ ಸಮೀಪದಲ್ಲಿ ಇರುವುದೇ ಚಿಕ್ಕಹೊಳೆ ಚೆಕ್‌ಪೋಸ್ಟ್. ತಮಿಳುನಾಡು ಮತ್ತು ಕರ್ನಾಟಕಕ್ಕೆ ಸಂಪರ್ಕ ಬೆಸೆಯುವ ಕೊಂಡಿ ಇದು. ತಾಳವಾಡಿ- ಮೂಡಳ್ಳಿ ಆನೆ‌ ಮೊಗಸಾಲೆ (ಕಾರಿಡಾರ್) ಪ್ರದೇಶವೂ ಹೌದು. ಚಾಮರಾಜನಗರದ ಮೂಲಕ ತಾಳವಾಡಿಗೆ ಇದೇ ಮಾರ್ಗವಾಗಿ ಸಾಗಬೇಕು. ಕಾವೇರಿ ವನ್ಯಜೀವಿಧಾಮ ಮತ್ತು ಮಲೆಮಹದೇಶ್ವರ ವನ್ಯಜೀವಿಧಾಮದಿಂದ ನೀಲಗಿರಿ ಜೀವವೈವಿಧ್ಯ ತಾಣಕ್ಕೆ ಆನೆಗಳು ಸಾಗಲು ಇರುವುದು ಇದೊಂದೇ ಮಾರ್ಗ. ಈ ಆನೆ ಪಥದ ಅಗಲ ಮತ್ತು ಉದ್ದ ಕಿರಿದಾಗಿದೆ.

ಚಿಕ್ಕಹೊಳೆ ಜಲಾಶಯ ವ್ಯಾಪ್ತಿಯ ಜನರಿಗೆ ಕಾಡಾನೆಗಳ ಬಗ್ಗೆ ವಿಚಿತ್ರ ಭಯ. ಅವರಿಗೆ ಅಂದಿನ ಆ ಬೆಳಗು ಎಂದಿಗಿಂತಲೂ ಭೀಕರವಾಗಿತ್ತು. ಜಲಾಶಯದ ಕಡೆಯಿಂದ ಆನೆಗಳ ಹಿಂಡಿನ ಸದ್ದು ಮೆಲ್ಲನೆ ತೇಲಿ ಬರುತ್ತಿತ್ತು. ಅರಣ್ಯ ಸಿಬ್ಬಂದಿ ಪಟಾಕಿ ಸಿಡಿಸುತ್ತಲೇ ಇದ್ದರು. ಅರಣ್ಯದತ್ತ ಅವುಗಳನ್ನು ಓಡಿಸಲು ಕಸರತ್ತಿನಲ್ಲಿ ಮುಳುಗಿದ್ದರು. ಮತ್ತೊಂದೆಡೆ ಕಾಡಾನೆಗಳ ಫೋಟೊ ಸೆರೆಗೆ ಮಾಧ್ಯಮದವರ ಗುಂಪು ಪೈಪೋಟಿಗೆ ಇಳಿದಿತ್ತು. ಇದರಿಂದ ದಿಕ್ಕೆಟ್ಟಿದ್ದ ಆನೆಗಳ ಕೂಗು ಜನರ ರಕ್ತವನ್ನು ಹೆಪ್ಪುಗಟ್ಟಿಸಿತ್ತು. ನೂರಾರು ಜನರ ಆರ್ಭಟದಿಂದ ಬೆದರಿದ ಅವುಗಳಿಗೆ ಗುಂಪಿನ ಅಧಿನಾಯಕಿ ಅಪಾಯದ ಸೂಚನೆಯನ್ನು ರವಾನಿಸಿಯಾಗಿತ್ತು. ಆ ಆಜ್ಞೆ ಪಾಲಿಸುತ್ತಾ ಅದರ ಹಿಂದೆಯೇ ಬಿಳಿಗಿರಂಗನಾಥ ಸ್ವಾಮಿ ಹುಲಿ ರಕ್ಷಿತಾರಣ್ಯದತ್ತ ಹೆಜ್ಜೆ ಇಟ್ಟಿದ್ದವು.

ಆನೆ ಮಾನವರಂತೆಯೇ ಸಂಘ ಜೀವಿ. ಅವುಗಳ ಕೌಟುಂಬಿಕ ವ್ಯವಸ್ಥೆಯಲ್ಲಿ ಹೆಣ್ಣಾನೆಗಳದು ಪ್ರಧಾನ ಪಾತ್ರ. ಹಿರಿಯ ಹೆಣ್ಣಾನೆಯೇ ಆ ಗುಂಪಿನ ಅಧಿನಾಯಕಿ. ಅಪಾಯದ ಅರಿವಾದಾಗ ಮುಖ್ಯಸ್ಥೆಯ ಆದೇಶ ಪಾಲಿಸುವುದಷ್ಟೇ ಅವುಗಳ ಕೆಲಸ. ಆಕೆಯ ಸೋದರಿ, ಮಕ್ಕಳು ಮಾತ್ರವೇ ಆ ಕುಟುಂಬದ ಸದಸ್ಯರು. ಹಲವು ಸೋದರ ಸಂಬಂಧಗಳು ಸೇರಿ ಒಂದು ವಂಶವಾಗುತ್ತದೆ. ಈ ವಂಶದಲ್ಲಿ ಇರುವ ಆನೆಗಳ ಸಂಖ್ಯೆ 60ರಿಂದ 90.

ಕಾಡಾನೆಗಳ ಕೌಟುಂಬಿಕ‌ ಬದುಕು ಮಾತೃಪ್ರಧಾನ ವ್ಯವಸ್ಥೆಯಿಂದ‌ ಕೂಡಿದೆ. ಚಿಕ್ಕಮ್ಮ ಆನೆಯ ಪಾಲಿಗೆ ಮರಿಗಳ ಲಾಲನೆ ಪಾಲನೆಯ ಕೆಲಸ. ಮರಿಗಳಿಗೆ ಕಾಡಿನ ಕಾಗುಣಿತ ಹೇಳಿಕೊಡುವುದು ಕೂಡ ಅದೇ. ಅಮ್ಮನ ಕಾಲಡಿಯಲ್ಲಿ ತೆವಳುತ್ತಾ, ಗುಂಪಿನಲ್ಲಿ ಬೆಳೆಯುವ ಮರಿಗಳು ಅಕ್ಕ, ತಂಗಿ, ಚಿಕ್ಕಮ್ಮಂದಿರ ಸ್ಪರ್ಶ, ಮಣ್ಣಿನ ವಾಸನೆಯನ್ನು ಬಹುಬೇಗ ಅರಿಯುತ್ತವೆ.

ಕಾಡಿನ ಅಗಾಧವಾದ ಪ್ರದೇಶದಲ್ಲಿ ಅಂಡಲೆಯುವ ಅವುಗಳು ಅಪ್ಪಿತಪ್ಪಿಯೂ ದಾರಿ ತಪ್ಪುವುದಿಲ್ಲ. ಕಾಲಾಂತರದಿಂದಲೂ ತನ್ನ ವಂಶಸ್ಥರು ಬಳಸುತ್ತಿದ್ದ ಮೊಗಸಾಲೆಯ ಮೂಲಕವೇ ಮೂಲ ವಲಯಕ್ಕೆ‌ ಹೇಗೆ ಮರಳುತ್ತವೆ ಎನ್ನುವುದು ಸೋಜಿಗ. ಅವುಗಳಿಗೆ ತನ್ನ ಮುತ್ತಜ್ಜಿಯಿಂದ ಸಿದ್ಧಿಸಿದ ಜ್ಞಾನ ಇದು. ಕುಟುಂಬದಿಂದ ಕುಟುಂಬಕ್ಕೆ, ವಂಶದಿಂದ ವಂಶಕ್ಕೆ ಈ ಅಮೂಲ್ಯ ಜ್ಞಾನ ಹರಿಯುತ್ತಲೇ ಇರುತ್ತದೆ.‌

ಅರಣ್ಯದ ಯಾವ ಭಾಗದಲ್ಲಿ ಬಿದಿರಿನ ಮೆಳೆ ಸಮೃದ್ಧವಾಗಿ ಬೆಳೆದು‌ ನಿಂತಿದೆ. ಯಾವ ಮೂಲೆಯಲ್ಲಿ ಉಪ್ಪಿನಾಂಶದ ಮಣ್ಣು ಸಿಗುತ್ತದೆ. ಬಿರುಬೇಸಿಗೆಯಲ್ಲಿ ಕೆರೆಗಳು ಬತ್ತಿಹೋದಾಗ ನೀರು ಎಲ್ಲಿ‌‌ ಸಿಗುತ್ತದೆ. ಯಾವ ಋತುಮಾನದಲ್ಲಿ ಯಾವಾವ ಆಹಾರ ಲಭಿಸುತ್ತದೆ. ಕಾಡಿನ ಯಾವ ಭಾಗದಲ್ಲಿ ಬಗೆಬಗೆಯ ಹಣ್ಣುಗಳು ಲಭಿಸುತ್ತವೆ. ಬೇಸಿಗೆಯಲ್ಲಿ ಒಣಗಿ ನಿಂತ ಉದ್ದನೆಯ ಹುಲ್ಲು(ಎಲಿಫೆಂಟ್‌ ಗ್ರಾಸ್‌) ಎಲ್ಲಿ ಸಿಗುತ್ತದೆಎನ್ನುವ ಜ್ಞಾನ ಅಜ್ಜಿಯಿಂದ ಅಮ್ಮನಿಗೆ, ಅಮ್ಮನಿಂದ ಮರಿಗಳಿಗೆ ವರ್ಗಾವಣೆಯಾಗುತ್ತಲೇ ಇರುತ್ತದೆ. ಈ ಪ್ರಕ್ರಿಯೆಯಲ್ಲಿ ಬಹುಮುಖ್ಯ ಪಾತ್ರವಹಿಸುವುದು ಅವುಗಳ ಮಾತೃಪ್ರಧಾನ ವ್ಯವಸ್ಥೆ.

ಮರಿಗಳು ತಮ್ಮ ಖಾಸಗಿತನ ಮತ್ತು ಬದುಕಿಗೆ ಎದುರಾಗಿ ಕಾಣಿಸುವ ಮನುಷ್ಯರ ಹೆಜ್ಜೆಗಳನ್ನು ಅರಿಯುವುದು ಅತಿಮುಖ್ಯ. ಜೊತೆಗೆ, ಕಾಡಿನ ಭಾಷೆಯನ್ನು ಕರಗತ ಮಾಡಿಕೊಳ್ಳಲೇ ಬೇಕು. ಬಿದಿರಿನ ಮೆಳೆಗಳು, ಮರಗಳನ್ನು ನೆಲಕ್ಕುರುಳಿಸುವ ಶಕ್ತಿಯನ್ನು ಸಿದ್ಧಿಸಿಕೊಳ್ಳಬೇಕು. ಇದಕ್ಕೆ ಅಮ್ಮ, ಚಿಕ್ಕಮ್ಮ ಹೇಳಿಕೊಡುವ ಪಾಠವೇ ಅವುಗಳಿಗೆ ಜೀವಾಳ.

ಆನೆಗಳದ್ದು ಅವಿಭಕ್ತ ಕುಟುಂಬ. ಕಾಡಿನಲ್ಲಿ ಸುರಕ್ಷಿತ ಬದುಕು ರೂಪಿಸಿಕೊಳ್ಳಲು ಅಪಾರವಾದ ಶ್ರದ್ಧೆ ಅಗತ್ಯ. ಮಾನವನಂತೆ ಮೌಲ್ಯಗಳನ್ನು ಮೂಲೆಗೆ ಸರಿಸಿ ಬದುಕುವುದು ಅವುಗಳಿಗೆ ಗೊತ್ತಿಲ್ಲ. ಹಾಗಾಗಿ, ಈ ಕುಟುಂಬ ಯಶಸ್ಸಿನ ಹಾದಿಯಲ್ಲಿ ಸಾಗಲು ಕಾಡಾನೆಗಳು ಮರಿಗಳಿಂದ ಶಿಸ್ತನ್ನು ನಿರೀಕ್ಷೆ ಮಾಡುತ್ತವೆ. ಜೊತೆಗೆ, ಸದಸ್ಯರ ಎಲ್ಲಾ ಶಿಸ್ತು ಕೂಡ ಅತ್ಯಗತ್ಯ.

ಆನೆಗಳ ಗರ್ಭಧಾರಣೆ ಅವಧಿ ಸರಿಸುಮಾರು ಎರಡು ವರ್ಷ. ಅವುಗಳ ಜೀವಿತಾವಧಿ 60 ವರ್ಷ. ಅವು ದೀರ್ಘಕಾಲ‌ ಬದುಕುವುದರಿಂದ ಮರಿಗಳ ಪಾಲನೆಗೆ ವಿಶೇಷ ಆಸಕ್ತಿವಹಿಸುತ್ತವೆ. ತಾಯಿ ಮೇಯಲು ಹೋದಾಗ ವಯಸ್ಕ ಹೆಣ್ಣಾನೆಗಳು, ಚಿಕ್ಕಮ್ಮ ಆನೆಗಳೇ ಮರಿಗಳ‌ ಪರಿಪಾಲನೆ‌ ಮಾಡುತ್ತವೆ.

ಹೆಣ್ಣಾನೆಗಳು ಗುಂಪಿನಲ್ಲಿಯೇ ಬೆಳೆಯುತ್ತವೆ. ತಮ್ಮ ಜೀವಿತಾವಧಿಯನ್ನು ಒಂದೇ ಗುಂಪಿನಲ್ಲಿಯೇ ಸವೆಸುತ್ತವೆ. ತಾವೂ ಬೆಳೆದು ಗುಂಪಿನಲ್ಲಿ ಜನಿಸುವ ಮರಿಗಳ ಆರೈಕೆಗೆ ಬದುಕನ್ನು ಮೀಸಲಿಡುತ್ತವೆ. ಕೊನೆಗೆ, ಹಿರಿತನಕ್ಕೇರಿ ತಾಯ್ತನದ ಪಾತ್ರವನ್ನೂ ನಿರ್ವಹಿಸುತ್ತವೆ.

ಗಂಡಾನೆಗಳಿಗೆ ಕುಟುಂಬದ ನೀತಿ, ನಿಯಮಗಳೆಂದರೆ ಅಲರ್ಜಿ. ಕೌಟುಂಬಿಕ ಚೌಕಟ್ಟಿಗೆ ಅವು ಒಗ್ಗಿಕೊಳ್ಳುವುದಿಲ್ಲ. ಅವುಗಳದ್ದು ಪುಂಡ ಹುಡುಗರ ವರ್ತನೆ. ಇದು ಅವುಗಳ ಸಹಜ ಸ್ವಭಾವವೂ ಹೌದು. ಆದರೆ, ಗುಂಪು ಈ ವರ್ತನೆಯನ್ನು ಸಹಿಸುವುದಿಲ್ಲ. ಹಾಗಾಗಿಯೇ, 10ರ ಪ್ರಾಯಕ್ಕೆ ಬರುವ ವೇಳೆಗೆ ಗಂಡಾನೆಗಳು ಅಮ್ಮ, ಚಿಕ್ಕಮ್ಮಂದಿರ‌‌ ಬಂಧ ಕಳಚಿಕೊಂಡು ಸ್ವತಂತ್ರ‌ ಬದುಕಿಗೆ ಹೆಜ್ಜೆ ಇಡುತ್ತವೆ. ಆನೆ ಸಾಮ್ರಾಜ್ಯದಲ್ಲಿ ಅವುಗಳದ್ದು ಏಕಾಂಗಿ ಹೋರಾಟ. ಒಂಟಿಯಾಗಿ ಸುತ್ತುತ್ತಾ ಕಾಡಿನಲ್ಲಿ ಅಲೆದಾಟ ನಡೆಸುತ್ತಿರುತ್ತವೆ.

ದೈಹಿಕವಾಗಿ ಬಲಾಢ್ಯವಾದಾಗ ಸೂಕ್ತ ಸಂಗಾತಿಗಾಗಿ ಹುಡುಕಾಟ ನಡೆಸುತ್ತವೆ. ಹೆಣ್ಣಾನೆ ಸಿಕ್ಕಿದಾಗ ಅದರೊಟ್ಟಿಗೆ ನಾಲ್ಕೈದು ದಿನಗಳನ್ನು ಕಳೆಯುತ್ತವೆ. ಅದರಿಂದ ದೂರ ಸರಿದು ಮತ್ತೆ ತಮ್ಮದೇ ಹಾದಿ ಹಿಡಿಯುತ್ತವೆ. ಗಂಡಾನೆಯೊಂದು ವರ್ಷವೊಂದಲ್ಲಿ ಒಂದು ಸಾವಿರ ಚದರ ಕಿ.ಮೀ. ವ್ಯಾಪ್ತಿಯಲ್ಲಿ ಸಂಚರಿಸುತ್ತದೆ. ಗಂಡಾನೆಗಳಿಗೆ ಕಾಡಿನಲ್ಲಿ ಸಂಚರಿಸುವ ಆನೆಗಳ ಇತರೇ ಗುಂಪುಗಳ ಬಗ್ಗೆ ಅಪಾರದವಾದ ಜ್ಞಾನ ಇರುತ್ತದೆ. ಈ ಜ್ಞಾನ ಅದಕ್ಕೆ ಮುತ್ತಜ್ಜಿ ಮತ್ತು ಅಮ್ಮನಿಂದ ಬಂದ ಬಳುವಳಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT