ಭಾನುವಾರ, ಮಾರ್ಚ್ 29, 2020
19 °C
ರಾಜಸ್ಥಾನ

ವಾನರರ ಊಟದ ಸಮಯ; ಮಂಗಗಳಿಗೆ ಉಣಬಡಿಸುವ ಕಾಯಕ!

ಸಿಧ್‌ ಕವೇಡಿಯಾ –ಕನ್ನಡಕ್ಕೆ: ಪಿನಾಕ Updated:

ಅಕ್ಷರ ಗಾತ್ರ : | |

Prajavani

‘ಆವೋ, ಆವೋ...’

ರಾಜಸ್ಥಾನದ ಶಿರೋಹಿ ಜಿಲ್ಲೆಯ ಪಾಲಡಿ ಎಂಬ ಪುಟ್ಟ ಊರಿನ ಗಣಕೇಶ್ವರ ಮಹಾದೇವ ಮಂದಿರದ ಬಳಿ ನಿಂತಿದ್ದ ಝುಜಾರಾಮ್‌ ಧರ್ಮಜಿ ಸಂತ್‌ ಒಂದೇ ಸಮನೆ ಕೂಗು ಹಾಕುತ್ತಿದ್ದರು. ಅವರು ಕೂಗುತ್ತಿದ್ದ ದಿಕ್ಕಿನಲ್ಲಿ ಕತ್ತು ಹೊರಳಿಸಿ ನೋಡಿದರೆ ಯಾರೊಬ್ಬರೂ ಕಾಣಲಿಲ್ಲ.

‘ಹೌದು, ಬೆಟ್ಟಗಳಿಂದ ಸುತ್ತುವರಿದ ಈ ನಿರ್ಜನ ಪ್ರದೇಶದಲ್ಲಿ ಈ ವ್ಯಕ್ತಿ ಯಾರನ್ನು ಕರೆಯುತ್ತಿದ್ದಾರೆ?’

ಅವರು ಪ್ರತಿಬಾರಿ ಕೂಗು ಹಾಕಿದಾಗಲೊಮ್ಮೆ ಈ ಪ್ರಶ್ನೆ ನಮ್ಮೆಲ್ಲರ ತಲೆಯನ್ನು ತಿನ್ನುತ್ತಲೇ ಇತ್ತು.

ಅಷ್ಟರಲ್ಲಿ ಗಣೇಶ್‌ ಸರ್‌, ‘ಅಲ್ನೋಡಿ ವಾನರ ಸೇನೆ’ ಎಂದು ಕೂಗಿದರು. ನೋಡಿದರೆ ನೂರಾರು ಸಂಖ್ಯೆಯಲ್ಲಿ ಮುಸುವಗಳು (Hanuman langur) ಬಂಡೆಗಳ ಮರೆಯಿಂದ ಮಂದಿರದ ಮುಂದಿನ ಆವರಣದತ್ತ ಓಡೋಡಿ ಬರುತ್ತಿದ್ದವು! ಮಕ್ಕಳನ್ನು ಕಂಕುಳಲ್ಲಿ ಹೊತ್ತ ತಾಯಿ ಮಂಗಗಳೂ ಅವುಗಳಲ್ಲಿ ದೊಡ್ಡ ಸಂಖ್ಯೆಯಲ್ಲೇ ಇದ್ದವು.

‘ಬಂದರೋಂ ಕೇ ಲಿಯೆ ಅಬ್‌ ಭೋಜನ್‌ ಕಾ ಸಮಯ್‌ ಹೈ (ಮಂಗಗಳಿಗೆ ಇದು ಊಟದ ಸಮಯ)’ ಎಂದ ಝುಜಾರಾಮ್‌ ತಂದಿದ್ದ ಬುತ್ತಿಗಂಟನ್ನು ಬಿಚ್ಚತೊಡಗಿದರು. ತಿಂಡಿಗಾಗಿ ಅಮ್ಮನ ಸುತ್ತ ನೆರೆದ ಮಕ್ಕಳಂತೆ, ಅವುಗಳೆಲ್ಲ ಆ ವ್ಯಕ್ತಿಯ ಮುಂದೆ ಕುಳಿತಿದ್ದವು. ಬುತ್ತಿಗಂಟಿನಲ್ಲಿದ್ದ ರೊಟ್ಟಿ, ತರಕಾರಿ, ಹಣ್ಣಿನ ತುಂಡುಗಳನ್ನು ತೆಗೆದು ಹಾಸುಗಲ್ಲಿನ ಮೇಲೆ ಹಾಕುವುದೇ ತಡ ಮುಗಿಬಿದ್ದು ಎತ್ತಿಕೊಂಡು ಭೋಜನಕ್ಕೆ ಕುಳಿತುಬಿಟ್ಟವು.


ಝುಜಾರಾಮ್‌ ಧರ್ಮಜಿ ಸಂತ್‌

ಏನು ಮೆನು?

ಕ್ಯಾರೆಟ್‌, ಸೋರೆಕಾಯಿ, ಆಲೂಗಡ್ಡೆ, ಸಪೋಟ, ರೊಟ್ಟಿ... ಹೀಗೆ ಮಂಗಗಳಿಗೆ ಇಷ್ಟವಾದ ಪದಾರ್ಥಗಳನ್ನೇ ಝುಜಾರಾಮ್‌ ಹೊತ್ತು ತಂದಿದ್ದರು. ಇದು ಯಾವತ್ತೊ ಒಂದು ದಿನ ಆಹಾರವನ್ನು ತಂದು ಹಾಕಿ ತೋರುವಂತಹ ಪ್ರೀತಿಯಲ್ಲ. ಐದು ವರ್ಷಗಳಿಂದ ನಿರಂತರವಾಗಿ ನಡೆದಿರುವ ಮಾನವೀಯ ಕಾರ್ಯ.

ಪಾಲಡಿ ಗ್ರಾಮದ ಹತ್ತಿರದಲ್ಲೇ ಇರುವ ಪುಟ್ಟ ಪಟ್ಟಣ ಶಿವಗಂಜ್‌. ನಿತ್ಯ ಬೆಳಗಾದರೆ ಸಾಕು ಈ ಊರಿನಲ್ಲಿ ‘ಬಂದರ್‌ ಕಿ ಫೇರಿ ಲಾವೋ, ಬಂದರ್‌ ಕಿ ಫೇರಿ ಲಾವೋ (ಮಂಗಗಳಿಗೆ ಊಟ ಕೊಡಿ)’ ಎಂಬ ಮನವಿ ತಪ್ಪದೇ ಮೊಳಗುತ್ತದೆ; ಅದೂ ಝುಜಾರಾಮ್‌ ಅವರ ಕಂಠಸಿರಿಯಲ್ಲೇ. ಮಂಗಗಳ ಈ ಮನುಷ್ಯ ಸಂತನಂತೆ ಜೋಳಿಗೆ ಹಿಡಿದು ಬೀದಿಯಲ್ಲಿ ಹೋಗುವುದೇ ತಡ, ರೊಟ್ಟಿ, ತರಕಾರಿ ಮತ್ತು ಹಣ್ಣಿನ ತುಂಡುಗಳನ್ನು ಜನ ಅದರಲ್ಲಿ ತಂದು ಸುರಿಯುತ್ತಾರೆ.

ಬೆಳ್ಳಂಬೆಳಿಗ್ಗೆ ‘ಊಟ’ ಸಂಗ್ರಹಿಸುವ ಈ ಮಂಗಗಳ ಮನುಷ್ಯ, ಸುಮಾರು 20 ಕಿ.ಮೀ. ದೂರದ ಗಣಕೇಶ್ವರ ಮಹಾದೇವ ಮಂದಿರದ ಕಡೆಗೆ ಹೊರಟು ಬಿಡುತ್ತಾರೆ. ಬೆಳಿಗ್ಗೆ 11ರ ವೇಳೆಗೆ ಮಂದಿರ ತಲುಪುವ ಅವರು, ‘ಆವೋ ಆವೋ’ ಎಂದು ಕೂಗು ಹಾಕುತ್ತಾರೆ. ಆ ಧ್ವನಿಗಾಗಿಯೇ ಕಾದಿರುವಂತೆ ನೂರಾರು ಮಂಗಗಳು ಏಕಕಾಲಕ್ಕೆ ಬಂಡೆಗಲ್ಲಿನ ಮೇಲೆ ಓಡಿ ಬರುತ್ತವೆ. ಪ್ರತಿದಿನ ಸುಮಾರು 700 ಮಂಗಗಳಿಗೆ ಊಟ ಹಾಕಿದ ನೆಮ್ಮದಿ ಝುಜಾರಾಮ್‌ಗೆ.

‘ಮಂದಿರಕ್ಕೆ ಬರುವ ಪ್ರವಾಸಿಗಳು ಕೆಲವೊಮ್ಮೆ ಮಂಗಗಳಿಗೆ ತೊಂದರೆ ಕೊಡುತ್ತಾರೆ ಸಾಹೇಬ್‌. ಊಟ ಹಾಕಿದಂತೆ ಮಾಡಿ, ಕಲ್ಲು ಎಸೆಯುತ್ತಾರೆ. ನಾವು ಇಡೀ ದಿನ ಇಲ್ಲಿ ನಿಂತು ಕಾಯೋದಕ್ಕೆ ಆಗುತ್ತಾ ನೀವೇ ಹೇಳಿ’ ಎಂದು ಅವರು ಕೇಳುತ್ತಾರೆ. ‘ಈ ಮಂಗಗಳೆಲ್ಲ ಹನುಮಂತನ ಅವತಾರ. ಅವುಗಳಿಗೆ ಊಟ ಹಾಕುವ ಸೇವೆ ಒದಗಿ ಬಂದಿರುವುದು ನನ್ನ ಸೌಭಾಗ್ಯ. ನಾನು ಊಟ ಒಯ್ಯದಿದ್ದರೆ ಅವುಗಳು ಎಲ್ಲಿ ಹೋಗಬೇಕು ಹೇಳಿ? ಆಹಾರ ಹುಡುಕಲು ಅವುಗಳೆಲ್ಲ ಪರದಾಡಬೇಕಾಗುತ್ತದೆ’ ಎಂದು ಕಾಳಜಿ ಮೆರೆಯುತ್ತಾರೆ.

ಝುಜಾರಾಮ್‌ ಅವರು ಕಾಡಿನ ಅಂಚಿನಲ್ಲಿರುವ ಆ ಮಂಗಗಳಿಗೆ ಆಹಾರ ನೀಡಿ ಬರಲು, ನಿತ್ಯ ಬೆಳಗಿನಿಂದ ಮಧ್ಯಾಹ್ನದವರೆಗೆ ಸಮಯ ಹಿಡಿಯುತ್ತದೆ. ವಾನರ ಸೇನೆಯ ತುತ್ತಿನ ಚೀಲ ತುಂಬಿಸುವ ಈ ವ್ಯಕ್ತಿಯ ತುತ್ತಿನ ಚೀಲವೂ ತುಂಬಬೇಕಲ್ಲ? ಶಿವಗಂಜ್‌ನ ಹನುಮಾನ್‌ ಸೇವಾ ಸಂಘದಿಂದ ಅವರಿಗೆ ಪ್ರತಿ ತಿಂಗಳು ₹4 ಸಾವಿರ ಸಂಬಳ ನೀಡಲಾಗುತ್ತಿದೆ.

‘ಹನುಮಾನ್‌ ಸೇವಾ ಸಂಘದಿಂದ ನನಗೇನೋ ಸಂಬಳ ಸಿಗುತ್ತಿರಬಹುದು. ಆದರೆ, ಹಣಕ್ಕಾಗಿ ನಾನು ಈ ಕೆಲಸ ಮಾಡುತ್ತಿಲ್ಲ. ಇದೊಂದು ಪುಣ್ಯದ ಕೆಲಸ. ಅವುಗಳಿಗೆ ಹೊಟ್ಟೆ ತುಂಬಿಸುವುದರಿಂದ ದೇವರ ದಯೆಯೂ ನನಗೆ ಸಿಗಲಿದೆ’ ಎಂದು ವಿನೀತರಾಗಿ ಹೇಳುತ್ತಾರೆ.

ಅಂದಹಾಗೆ, ರಾಜಸ್ಥಾನದ ಬುಡಕಟ್ಟು ಸಮುದಾಯಕ್ಕೆ ಸೇರಿದ ಅವರು ಸೊಗಸಾದ ಹಾಡುಗಾರ ಕೂಡ. ಮಧ್ಯಾಹ್ನದ ಬಿಡುವಿನ ಹೊತ್ತು ಐಸ್‌ಕ್ರೀಂ ಮಾರಾಟ ಮಾಡಿ, ಒಂದಿಷ್ಟು ಸಂಪಾದನೆ ಮಾಡುತ್ತಾರೆ.

‘ವರ್ಷಪೂರ್ತಿ ಈ ರೀತಿ ಆಹಾರ ಸರಬರಾಜು ಮಾಡಲೇಬೇಕೇ? ಹಾಗಾದರೆ ಕಾಡಿನಲ್ಲಿ ಈ ಮಂಗಗಳು ಆಹಾರವನ್ನು ಹುಡುಕುವ ಗೋಜಿಗೆ ಹೋಗುವುದೇ ಇಲ್ಲವೇ’ ಎಂಬ ನಮ್ಮ ಪ್ರಶ್ನೆಗೆ ಝುಜಾರಾಮ್‌ ಉತ್ತರ ಹೀಗಿತ್ತು: ‘ಸಾಬ್‌, ಈ ಸಲ ಎಂತಹ ಬೇಸಿಗೆ ಅಂತೀರಿ? ಸುತ್ತಲೂ ಕಣ್ಣು ಹಾಯಿಸಿ ನೋಡಿ, ಸ್ವಲ್ಪವಾದರೂ ಹಸಿರು ಕಾಣಿಸುವುದೋ ಹೇಗೆ ಎಂದು. ಕಾಡೇ ಒಣಗಿ ನಿಂತಾಗ ಅವುಗಳು ತಾನೆ ಎಲ್ಲಿಗೆ ಹೋಗಬೇಕು? ಮಳೆಯಾಗಿ ಸ್ವಲ್ಪ ಚಿಗುರು ಕಾಣಿಸಿಕೊಂಡಾಗ ಅವುಗಳು ಕಾಡಿನ ಆಹಾರವನ್ನೂ ಹುಡುಕಿಕೊಂಡು ಹೋಗುತ್ತವೆ. ಆದರೆ, ನಮ್ಮೂರಿನಲ್ಲಿ ಬೀಳುವ ಮಳೆ, ನೀರಿನ ದಾಹವನ್ನು ಪೂರ್ಣವಾಗಿ ಇಂಗಿಸುವುದಿಲ್ಲ. ಹೀಗಾಗಿ ಸುತ್ತಲಿನ ಹಳ್ಳಿಗಳಲ್ಲಿ ಸಿಗುವ ನೀರು, ಆಹಾರಕ್ಕಾಗಿ ಅವುಗಳು ಹಂಬಲಿಸುತ್ತವೆ’. ‘ಬೇಸಿಗೆಯಲ್ಲಿ ಕಾಡಿನಲ್ಲಿ ಏನೇನೂ ಸಿಗದ ಕಾರಣ ಆ ಸಂದರ್ಭದಲ್ಲಿ ಹೆಚ್ಚಿನ ಆಹಾರವನ್ನು ನಾನು ಅವುಗಳಿಗೆ ಸರಬರಾಜು ಮಾಡುತ್ತೇನೆ. ಮಳೆಗಾಲದಲ್ಲಿ ಕೆಲವು ತುಕಡಿಗಳು (ಗುಂಪುಗಳು) ಊಟಕ್ಕೆ ಬರುವುದೇ ಇಲ್ಲ. ಆಗ ನಾನು ಒಯ್ಯುವ ಆಹಾರದ ಪ್ರಮಾಣವೂ ಕಡಿಮೆ ಆಗುತ್ತದೆ’ ಎಂದು ಅವರು ಹೇಳುತ್ತಾರೆ.

‘ನಿಮಗೆ ಯಾವತ್ತಾದರೂ ಊಟ ತರಲು ಸಾಧ್ಯವಾಗದಿದ್ದರೆ ಆ ಕೆಲಸವನ್ನು ಯಾರು ಮಾಡುತ್ತಾರೆ’ ಎಂದು ಅವರನ್ನು ಕೇಳಿದಾಗ, ‘ಮಂಗಗಳಿಗೆ ಊಟ ಒಯ್ಯಲು ಜನ ಹೆದರುತ್ತಾರೆ. ಅವುಗಳು ಎಲ್ಲಿ ದಾಳಿ ಮಾಡುವವೋ ಎನ್ನುವ ಆತಂಕ ಅವರಿಗೆ. ಹೀಗಾಗಿ ನಾನು ಗೈರುಹಾಜರಾದರೆ ಯಾರೂ ಬರುವುದಿಲ್ಲ. ಅಲ್ಲದೆ, ಅಪರಿಚಿತರೆಂದರೆ ಮಂಗಗಳೂ ಹೆದರುತ್ತವೆ’ ಎಂದು ಉತ್ತರಿಸುತ್ತಾರೆ.

ಮುಂದೆ ನನ್ನ ಮಕ್ಕಳು ಪಟ್ಟಣಕ್ಕೆ ವಲಸೆ ಹೋಗಲು ಮನಸ್ಸು ಮಾಡುವರೋ ಏನೋ ಗೊತ್ತಿಲ್ಲ. ನಾನಂತೂ ಈ ಊರನ್ನು ಬಿಟ್ಟು ಎಲ್ಲಿಗೂ ಹೋಗುವುದಿಲ್ಲ. ಏಕೆಂದರೆ, ಈ ಸೇವೆಯನ್ನು ನಿಷ್ಠೆಯಿಂದ ಮಾಡಬೇಕಲ್ಲ’ ಎನ್ನುತ್ತಾರೆ ಅವರು.

ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡುವ ಝುಜಾರಾಮ್‌ ಅವರ ಪುತ್ರ ದಿನೇಶ್‌ ಕುಮಾರ್‌ ಅವರನ್ನು ಮಾತನಾಡಿಸಿದರೆ, ‘ವ್ರತ ಕೈಗೊಂಡವರಂತೆ ಮಂಗಗಳಿಗೆ ನಿತ್ಯ ಆಹಾರ ಒಯ್ಯಲು ತುಂಬಾ ಶ್ರದ್ಧೆ, ತಾಳ್ಮೆ ಬೇಕು. ಅದು ಅಪ್ಪನಲ್ಲಿದೆ. ನನ್ನ ಹಣೆಬರಹದಲ್ಲಿ ಬರೆದಿದ್ದರೆ ಅಂತಹ ಸೇವಕನಾಗಲು ನಾನೂ ಸಿದ್ಧ’ ಎನ್ನುತ್ತಾರೆ.

ಪ್ರವಾಸಕ್ಕೆ ತೆರಳಿದ್ದ ನಮ್ಮ ಶಾಲಾ ತಂಡ ಅಲ್ಲಿಂದ ಹೊರಟಾಗ ಮಾನವೀಯತೆ ಪಾಠವನ್ನು ಕಲಿತ ಖುಷಿಯಲ್ಲಿತ್ತು.

ಕನ್ನಡಕ್ಕೆ: ಪಿನಾಕ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು