ಭಾನುವಾರ, 14 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮಳೆಗಾಲದಲ್ಲಿ ಶ್ವಾನಗಳ ರಕ್ಷಣೆ

Last Updated 30 ಜುಲೈ 2022, 3:01 IST
ಅಕ್ಷರ ಗಾತ್ರ

ಮಳೆಗಾಲ ಬಂತೆಂದರೆ ಸಾಕು ಮನುಷ್ಯರಿಗೆ ಮಾತ್ರವಲ್ಲ ಸಾಕುಪ್ರಾಣಿಗಳಿಗೂ ವಿವಿಧ ರೀತಿಯ ಆರೋಗ್ಯ ಸಮಸ್ಯೆ ಕಾಣಿಸಿಕೊಳ್ಳುತ್ತವೆ. ವರ್ಷದಲ್ಲಿ ನಾಲ್ಕೈದು ತಿಂಗಳ ಮುಂಗಾರು ಮಳೆಯ ಅವಧಿಯಲ್ಲಿ ಸಾಕುಪ್ರಾಣಿಗಳಿಗೆ ಅದರಲ್ಲೂ ವಿಶೇಷವಾಗಿ ಶ್ವಾನಗಳಿಗೆ ಸೊಳ್ಳೆಗಳು, ಮರಳು ನೊಣಗಳು, ಉಣ್ಣಿ (ಟಿಕ್‌) ಮತ್ತು ಚಿಗಟೆಗಳು ಬಾಧಿಸುತ್ತವೆ. ಇದು ಹಲವು ರೋಗಗಳನ್ನು ಹರಡಲು ಕಾಣವಾಗುತ್ತವೆ. ಈ ಹಿನ್ನೆಲೆಯಲ್ಲಿ ಮಳೆಗಾಲದಲ್ಲಿ ಶ್ವಾನಗಳ ನಿರ್ವಹಣೆ ಕುರಿತು ಮಾಹಿತಿ ಇಲ್ಲಿದೆ.

***

*ಉಣ್ಣೆ(ಟಿಕ್ ಜ್ವರ) ಬಾಧೆ
ಮುಂಗಾರು ಮಳೆ ಸಮಯದಲ್ಲಿ ನಾಯಿಗಳಿಗೆ ವೇಗವಾಗಿ ಉಣ್ಣೆಗಳು ಅಂಟಿಕೊಳ್ಳುತ್ತವೆ. ಇವುಎರ್ಲಿಚಿಯಾ, ಬಾಬೆಸಿಯಾ, ಅನಾಪ್ಲಾಸ್ಮಾ ಮತ್ತು ಬೊರೆಲಿಯಾ ಮುಂತಾದ ಕೀಟಾಣುಗಳು ವೃದ್ಧಿಯಾಗಲು ದಾರಿ ಮಾಡಿ ಕೊಡುತ್ತವೆ. ಒಂದು ಸಾರಿ ಉಣ್ಣೆ ನಾಯಿಯ ಮೈ ಸೇರಿದರೆ ಜ್ವರ (ಟಿಕ್‌ಜ್ವರ) ಬರುವ ಸಾಧ್ಯತೆ ಹೆಚ್ಚು. ಕೆಲವೊಮ್ಮೆ ಈ ಜ್ವರ ಮಾರಣಾಂತಿಕವಾಗಿ ಪರಿಣಮಿಸಬಹುದು. ರಕ್ತಹೀನತೆ, ಕಾಮಾಲೆಯಂತಹ ರೋಗ ಬಾಧೆ ಕಾಣಿಸಿಕೊಳ್ಳಬಹುದು. ಆಗ ರಕ್ತದಲ್ಲಿರುವ ಪ್ಲೇಟ್‌ಲೆಟ್ಸ್‌ಕೊರತೆ ಉಂಟಾಗಬಹುದು. ರಕ್ತ ಹೀನತೆಯೂ ಬಾಧಿಸಬಹುದು. ಹೀಗಾಗಿ ಯಾವುದೇ ಕಾರಣಕ್ಕೂ ಈ ಜ್ವರವನ್ನು ನಿರ್ಲಕ್ಷಿಸಬಾರದು. ಪಶುವೈದ್ಯರ ಸಲಹೆ ಮೇರೆಗೆ ಚಿಕಿತ್ಸೆ, ಔಷಧ ಕೊಡಿಸುವುದು ಉತ್ತಮ.

*ಆಹಾರ–ನೀರಿನಿಂದ ಹರಡುವ ರೋಗಗಳು
ಮಳೆಗಾಲದಲ್ಲಿ ನಾಯಿಗಳಿಗೆ ಲೆಪ್ಟೊಸ್ಪೈರೋಸಿಸ್, ಗಿಯಾರ್ಡಿಯಾಸಿಸ್, ರೋಟವೈರಲ್ ಅತಿಸಾರ ಮತ್ತು ಇತರ ಅಪರೂಪದ ಶಿಲೀಂಧ್ರಗಳ ಸೋಂಕುಗಳು ಬಾಧಿಸಬಹುದು. ಈ ರೋಗಗಳಲ್ಲಿ ಇಲಿಗಳ ಮೂಲಕ ಹರಡುವ ಲೆಪ್ಟೊಸ್ಪೈರೋಸಿಸ್‌ ಅತ್ಯಂತ ಅಪಾಯಕಾರಿ. ಈ ಕಾಯಿಲೆಗೆ ಒಳಗಾದ ಸಾಕುಪ್ರಾಣಿಗಳು ಜ್ವರ, ಅಸ್ವಸ್ಥತೆ ಕಾಮಾಲೆ, ಯಕೃತ್ತು ಮತ್ತು ಮೂತ್ರಪಿಂಡ ವೈಫಲ್ಯಕ್ಕೆ ಒಳಗಾಗಿ ಸಾವನ್ನಪ್ಪುತ್ತವೆ. ಈ ರೋಗ ಬರದಂತೆ ತಡೆಗಟ್ಟಲು ನಾಯಿಗಳಿಗೆ ಲೆಪ್ಟೊಸ್ಪೈರಾ ನಿರೋಧಕ ಲಸಿಕೆ ಹಾಕಿಸಬೇಕು. ಜೊತೆಗೆ ಶುದ್ಧ ಕುಡಿಯುವ ನೀರನ್ನು ಒದಗಿಸಬೇಕು.

*ಉಸಿರಾಟದ ಸೋಂಕುಗಳು
ಶ್ವಾನಗಳು ಮಳೆಯಲ್ಲಿ ನೆನೆದರೆ ಶ್ವಾಸಕೋಶವಿರುವ ಭಾಗ ಸೋಂಕಿಗೆ ಒಳಗಾಗಿ, ಉಸಿರಾಟಕ್ಕೆ ತೊಂದರೆಯಾಗಬಹುದು. ಅದನ್ನು ಗುರುತಿಸದೇ ಹೋದರೆ, ಅವು ನ್ಯುಮೋನಿಯಾದಂಥ ಅನಾರೋಗ್ಯಕ್ಕೆ ಒಳಗಾಗಬಹುದು. ಈ ಮಳೆಗಾಲದಲ್ಲಿ ಶ್ವಾನಗಳು ಸೇರಿದಂತೆ ವಿವಿಧ ಸಾಕು ಪ್ರಾಣಿಗಳು, ಬೋರ್ಡೆಟೆಲ್ಲಾ, ಅಡೆನೊ ವೈರಸ್, ಪ್ಯಾರೆನ್ಫ್ಲುಯೆಂಜಾ ವೈರಸ್, ಬೆಕ್ಕಿನ ರೈನೋಟ್ರಾಕಿಟಿಸ್, ಕ್ಯಾಲ್ಸಿ ವೈರಸ್ ಮುಂತಾದ ಸೋಂಕುಗಳಿಗೆ ಹೆಚ್ಚು ಒಳಗಾಗುತ್ತಿವೆ. ನಿಮ್ಮ ಸಾಕುಪ್ರಾಣಿಗಳಿಗೆ ಸಂಪೂರ್ಣ ವ್ಯಾಕ್ಸಿನೇಷನ್ ನೀಡುವುದು ಮುನ್ನೆಚ್ಚರಿಕೆಯ ಕ್ರಮಗಳಲ್ಲಿ ಒಂದು. ಇದರ ಜೊತೆಗೆ, ಯಾವುದೇ ಕಾರಣಕ್ಕೂ ಮಳೆಗಾಲದಲ್ಲಿ ನಾಯಿಗಳನ್ನು ಹೊರಗೆ ಹೋಗದಂತೆ, ಮಳೆಯಲ್ಲಿ ನೆನೆಯದಂತೆ ನೋಡಿಕೊಳ್ಳಬೇಕು.

*ಚರ್ಮದ ಸೋಂಕುಗಳು
ನಾಯಿಗಳು ಮಳೆಗಾಲದಲ್ಲಿ ಚರ್ಮದ ಅಲರ್ಜಿ, ಈಸ್ಟ್ ಸೋಂಕು ಮತ್ತು ಡರ್ಮಟೊಫೈಟೋಸಿಸ್‌ ನಂತಹ ಶಿಲೀಂಧ್ರಗಳ ಸೋಂಕುಗಳಿಗೆ ಹೆಚ್ಚು ಒಳಗಾಗುತ್ತವೆ. ಈ ಸಂದರ್ಭದಲ್ಲಿ ಚರ್ಮದ ಬಗ್ಗೆ ಕಾಳಜಿವಹಿಸದೇ ಹೋದರೆ, ಚರ್ಮದ ಮೇಲೆ ಉರಿಯೂತ ಮತ್ತು ಬ್ಯಾಕ್ಟೀರಿಯಾದ ಬೆಳವಣಿಗೆಗೆ ಕಾರಣವಾಗುತ್ತದೆ. ಈ ಸಮಸ್ಯೆಗೆ ಪರಿಹಾರವೆಂದರೆ,ನಾಯಿಯ ಕೂದಲನ್ನು ನಿಯಮಿತವಾಗಿ ಬ್ರಷ್ ಮಾಡಬೇಕು. ಆಗಾಗ್ಗೆ ಸ್ನಾನ ಮಾಡಿಸು ವುದನ್ನು ತಪ್ಪಿಸಬೇಕು. ಉತ್ತಮ ಗುಣಮಟ್ಟದ ಮೃದುಗೊಳಿಸುವ ಶ್ಯಾಂಪೂಗಳೊಂದಿಗೆ ಎರಡು ವಾರಗಳಿಗೊಮ್ಮೆ ಸ್ನಾನ ಮಾಡಿಸಿದರೆ ಸಾಕು. ಬಹುಮುಖ್ಯವಾಗಿ ನಾಯಿಗಳು ಮಳೆಯಲ್ಲಿ ನೆನಯದಂತೆ ಎಚ್ಚರವಹಿಸಬೇಕು.

(ಲೇಖಕರು: ಚೀಫ್ ವೆಟರ್ನರಿ ಸರ್ಜನ್, ಆರ್‌ಎಂವಿ ಸೂಪರ್ ಸ್ಪೆಷಾಲಿಟಿ ವೆಟರ್ನರಿ ಆಸ್ಪತ್ರೆ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT