ಶನಿವಾರ, ಅಕ್ಟೋಬರ್ 1, 2022
20 °C

ಸಾಗರದಲ್ಲಿ ಸಸ್ಯಗಳ ಸಂತಾನೋತ್ಪತ್ತಿ!

ಅಮೃತೇಶ್ವರಿ ಬಿ. Updated:

ಅಕ್ಷರ ಗಾತ್ರ : | |

Prajavani

ದುಂಬಿಗಳು ಹೂವಿನಿಂದ ಮಕರಂದವನ್ನು ಹೀರುವಾಗ ಅವುಗಳಿಗೆ ತಾಕಿದ ಪರಾಗಗಳು ಮತ್ತೊಂದು ಹೂವನ್ನು ಸೇರುವುದು, ಗಾಳಿ ಬೀಸುವಾಗ ಪರಾಗವನ್ನು ಹೊತ್ತೊಯ್ಯುವುದು, ಪ್ರಾಣಿ–ಪಕ್ಷಿಗಳು ಹಣ್ಣುಗಳನ್ನು ತಿಂದು ಬೀಜಗಳನ್ನು ಇನ್ನೆಲ್ಲೋ ಬಿಸಾಡುವುದು, ಇವೆಲ್ಲಾ ಭೂಮಿಯ ಮೇಲಿನ ಸಸ್ಯಗಳ ವಂಶಾಭಿವೃದ್ಧಿಗೆ ಪ್ರಕೃತಿ ನೀಡಿರುವ ಮಾರ್ಗಗಳು. ಆದರೆ ನೀರಿನಲ್ಲಿರುವ ಸಸ್ಯಗಳಲ್ಲಿ ಸಂತಾನಾಭಿವೃದ್ಧಿಯ ಬಗ್ಗೆ ಎಂದಾದರೂ ಯೋಚಿಸಿದ್ದೀರಾ? ನೀರು ಹರಿಯುವಾಗ ಪರಾಗವೂ ಅದರೊಡನೆ ಹರಿದು ಮತ್ತೊಂದು ಸಸ್ಯದ ಸಂತಾನೋತ್ಪತ್ತಿಯ ಅಂಗವನ್ನು ಸೇರುವುದು ಜಲಚರಸಸ್ಯಗಳು ಅಳವಡಿಸಿಕೊಂಡಿರುವ ಒಂದು ವಿಶಿಷ್ಟ ಹೊಂದಾಣಿಕೆ. ಆದರೆ ಇಲ್ಲಿಯೂ ಭೂಮಿಯ ಮೇಲೆ ನಡೆಯುವಂತೆ ಪ್ರಾಣಿಗಳು ಸಸ್ಯಗಳಿಗೆ ನೆರವಾಗಬಹುದು ಎಂದು ಈ ಮೊದಲು ಯಾರೂ  ಊಹಿಸಿರಲಿಲ್ಲ. ಇದೋ ಸಾಗರಗಳಲಿ ಬೆಳೆಯುವ ‘ತಲೇಷಿಯಾ ಟೆಸ್ಟುಡೀನಂ’ ಎನ್ನುವ ಸಸ್ಯಗಳ ಪರಾಗವನ್ನು ಹೆಣ್ಣುಹೂವಿಗೆ ಸೇರಿಸಲು ಪ್ರಾಣಿಗಳು ಸಹಾಯ ಮಾಡುತ್ತಿವೆ ಎನ್ನುತ್ತಾರೆ, ಎಡಿನ್‌ಬರ್ಗ್‌ನ ಎವಲ್ಯುಷನರಿ ಬಯಾಲಜಿ ವಿಜ್ಞಾನಿಗಳಾದ ವ್ಯಾನ್‌ ಟಸೇನ್‌ ಬ್ರೂಕ್‌ ಮತ್ತು ತಂಡದವರು.

ಜೀವಿಗಳಲ್ಲಿ ಸಂತಾನೋತ್ಪತ್ತಿಯು ಒಂದು ಅದ್ಭುತ ಕ್ರಿಯೆ ಮತ್ತು ಅತಿಮುಖ್ಯ ಹಂತ. ಅದು ಪ್ರಾಣಿ, ಪಕ್ಷಿ, ಸಸ್ಯ, ಬ್ಯಾಕ್ಟೀರಿಯಾ – ಯಾವುದೇ ಜೀವಿಯಾಗಿರಬಹುದು. ಮತ್ತೊಂದು ಜೀವಿಯನ್ನು ಸೃಷ್ಟಿಸುವುದು ಒಂದು ಮಂತ್ರಶಕ್ತಿಯಂತೆಯೇ ಸರಿ. ಗರ್ಭದೊಳಗೆ ಭ್ರೂಣ ಹುಟ್ಟಿ ಜೀವವಾಗುವ ಆ ಕಲೆಯು ಪ್ರಕೃತಿ ಪ್ರತಿ ಹೆಣ್ಣುಜೀವಿಗೂ ನೀಡಿರುವ ವರ. ಈ ಅದ್ಭುತ ಕ್ರಿಯೆಯು ಪ್ರಾಣಿ ಹಾಗೂ ಸಸ್ಯಗಳಲ್ಲಿ ಭಿನ್ನವಾಗಿರುತ್ತದೆ. ಪ್ರಾಣಿಗಳಲ್ಲಿ ಲೈಂಗಿಕ ಸಂತಾನೋತ್ಪತ್ತಿ ಹಾಗೂ ಸಸ್ಯಗಳಲ್ಲಿ ಲೈಂಗಿಕ ಹಾಗೂ ಅಲೈಂಗಿಕ ರೀತಿಯ ಸಂತಾನೋತ್ಪತ್ತಿ ಕ್ರಿಯೆಗಳಿವೆ. ಸಸ್ಯಗಳಲ್ಲಿ ಹೂವುಗಳೇ ಸಂತಾನೋತ್ಪತ್ತಿಯ ಅಂಗ. ಒಂದು ಹೂವಿನಲ್ಲಿರುವ ಗಂಡುಪರಾಗವು ಮತ್ತೊಂದು ಹೂವಿನ ಶಲಾಕಾಗ್ರವನ್ನು ಸೇರುವುದು ಲೈಂಗಿಕ ಸಂತಾನೋತ್ಪತ್ತಿ. ಇದನ್ನೇ ಪರಾಗಸ್ಪರ್ಶ ಎನ್ನುವುದು. ಮೊಳೆಯುವುದು, ಬೀಜಕಗಳ ಉತ್ಪಾದನೆ ಮತ್ತು ಸಸ್ಯದ ಒಂದು ಭಾಗವೇ ಮತ್ತೊಂದು ಗಿಡವಾಗಿ ಬೆಳೆಯುವುದೇ ಅಲೈಂಗಿಕ ಸಂತಾನೋತ್ಪತ್ತಿ ಕ್ರಿಯೆ. ತಾವು ಮನಬಂದಂತೆ ಓಡಾಡಲು ಆಗದ ಸಸ್ಯಗಳಲ್ಲಿ ಸಂತಾನವು ಮುಂದುವರೆಯಬೇಕಾದರೆ ಗಾಳಿ, ನೀರು, ಕೀಟಗಳು ಅಥವಾ ಪ್ರಾಣಿಗಳು ಬೇಕೇ ಬೇಕು. ಇವೆಲ್ಲವೂ ತಾವು ಚಲಿಸುವಾಗ ಒಂದು ಹೂವಿನ ಪರಾಗವನ್ನು ಮತ್ತೊಂದು ಹೂವಿನ ಶಲಾಕಾಗ್ರಕ್ಕೆ ಸೇರಿಸಿ ಸಂತಾನೋತ್ಪತ್ತಿ ಕ್ರಿಯೆಗೆ ನೆರವಾಗುತ್ತವೆ.

ನೀರಿನಲ್ಲಿರುವ ತಲೇಷಿಯಾ ಟೆಸ್ಟುಡೀನಂ ಎನ್ನುವ ಕಡಲಹುಲ್ಲಿನ ಗಂಡುಹೂಗಳು ಸಂತಾನಾಭಿವೃದ್ದಿಗಾಗಿ ರಾತ್ರಿಯ ವೇಳೆ ಗೋಂದನ್ನು ಸ್ರವಿಸಿ ಅದರಲ್ಲಿ ತಮ್ಮ ಪರಾಗವನ್ನು ಸೇರಿಸಿಬಿಡುತ್ತವಂತೆ. ನೀರಿನ ಹರಿತ ಕಡಿಮೆಯಿದ್ದಾಗ ಇಲ್ಲಿನ ಅಕಶೇರುಕ ಪ್ರಾಣಿಗಳು ಆಹಾರವನ್ನು ಅರಸುತ್ತಾ ಓಡಾಡುತ್ತಿರುವಾಗ ಈ ಹೂಗಳ ಬಳಿಗೆ ಬರುತ್ತವೆ. ಆಗ ಪರಾಗ ತುಂಬಿದ ಗೋಂದು ಪ್ರಾಣಿಗಳ ದೇಹಕ್ಕೆ ಅಂಟಿಕೊಳ್ಳುತ್ತವೆ. ಅವು ಹೀಗೆ ಮತ್ತೊಂದು ಹೆಣ್ಣುಹೂವನ್ನು ತಾಕಿದಾಗ ಗೋಂದಿನಲ್ಲಿರುವ ಪರಾಗಗಳು ಹೆಣ್ಣುಹೂವಿನ ಶಲಾಕಾಗ್ರವನ್ನು ಸೇರುತ್ತದೆ. ಆಗ ಪರಾಗ ನಳಿಕೆಗಳು ಬೆಳೆಯುತ್ತವೆ. ಪರಾಗ ನಳಿಕೆಗಳು ಬೆಳೆದಾಗ ಪರಾಗಸ್ಪರ್ಶ ಕ್ರಿಯೆ ಯಶಸ್ವಿಯಾಗಿದೆ ಎಂದರ್ಥ. ಹೀಗೆ ಟೆಸ್ಟುಡೀನಂ ಹೂಗಳಲ್ಲಿ ಜೈವಿಕ-ಅಜೈವಿಕ ಮಿಶ್ರಿತ ಪರಾಗಸ್ಪರ್ಶ ಕ್ರಿಯೆ ಜರುಗುತ್ತದೆ ಎನ್ನುತ್ತಾರೆ, ವಿಜ್ಞಾನಿಗಳು.

ಟೆಸ್ಟುಡೀನಂನ ಗಂಡುಹೂಗಳು ಸೂರ್ಯಾಸ್ತಮದ ನಂತರ ತೆರೆದುಕೊಂಡು ಒಂದೆರೆಡು ಗಂಟೆಗಳೊಳಗೆ  ಪರಾಗವನ್ನು ಬಿಡುಗಡೆ ಮಾಡಿಬಿಡುತ್ತವೆ. ಹೆಣ್ಣುಹೂಗಳು ಹಗಲಿನಲ್ಲಿ ತೆರೆದುಕೊಂಡಿರುತ್ತವೆ. ರಾತ್ರಿ ವೇಳೆ ಗಂಡುಹೂಗಳ ಗೋಂದನ್ನು ಅಂಟಿಸಿಕೊಂಡಿರುವ ಕಠಿಣಚರ್ಮಿಗಳು, ಹುಳುಗಳು ಹಗಲಿನಲ್ಲಿ ಓಡಾಡುತ್ತಾ ಹೆಣ್ಣುಹೂಗಳನ್ನು ತಲುಪಿದರೆ ಅವುಗಳ ಸಂತಾನೋತ್ಪತ್ತಿ ಕ್ರಿಯೆ ಪೂರ್ಣಗೊಳ್ಳುತ್ತದೆ. ಈ ಪ್ರಾಣಿಗಳಾದರೂ ಗಂಡುಹೂಗಳು ಸ್ರವಿಸಿರುವ ಪರಾಗ ತುಂಬಿದ ಗೋಂದಿನಲ್ಲಿರುವ ಶರ್ಕರಪಿಷ್ಠಗಳು ಹಾಗೂ ಪ್ರೋಟೀನುಗಳಿಗೆ ಆಕರ್ಷಣೆಗೊಂಡು ಅದನ್ನು ತಿನ್ನಲು ಹೋಗುತ್ತವೆ. ಹೀಗೆ ತಮ್ಮ ಆಹಾರವನ್ನು ಅರಸಿಹೋದ ಪ್ರಾಣಿಗಳು ಸಸ್ಯಗಳಿಗೂ ಬೃಹತ್ತಾದ ಸಹಾಯವನ್ನೇ ಮಾಡುತ್ತಿವೆ.

ಯಾವುದೇ ಪ್ರಾಣಿಯ ಮುಖಾಂತರ ಪರಾಗಸ್ಪರ್ಶ ಕ್ರಿಯೆ ಜರುಗುತ್ತಿದೆ  ಎನ್ನಬೇಕಾದರೆ ನಾಲ್ಕು ಅಂಶಗಳು ಮುಖ್ಯ. ಈ ಪ್ರಾಣಿಗಳು ಹೂವಿನ ಗಂಡು ಹಾಗೂ ಹೆಣ್ಣಿನ ಅಂಗಗಳೆರಡನ್ನೂ ಭೇಟಿಯಾಗಬೇಕು, ಗಂಡುಹೂವಿನಿಂದ ಪರಾಗವನ್ನು ಹೊತ್ತೊಯ್ಯಬೇಕು ಮತ್ತು ಹೆಣ್ಣುಹೂವಿನ ಶಲಾಕಾಗ್ರದಲ್ಲಿ ಸೇರಿಸಬೇಕು. ಹೀಗೆ ಸೇರಿದ ಪರಾಗ ಕುಡಿಯೊಡೆದು ಪರಾಗ ನಳಿಕೆ ಅಥವಾ ಬೀಜಗಳ ಸೃಷ್ಟಿಯಾಗಬೇಕು. ಆಗ ಅದರ ಸಂತಾನೋತ್ಪತ್ತಿ ಯಶಸ್ವಿಯಾಗುತ್ತದೆ. ವ್ಯಾನ್‌ ಟಸೇನ್‌ ಬ್ರೂಕ್‌ ಮತ್ತು ತಂಡದವರು ನೀರಿನಲ್ಲಿರುವ ಟೆಸ್ಟುಡೀನಂ ಹೂವಿನಲ್ಲಿ ಪ್ರಾಣಿಗಳ ಮೂಲಕವೇ ಪರಾಗಸ್ಪರ್ಶ ಕ್ರಿಯೆ ಆಗುತ್ತಿದೆಯೇ ಎನ್ನುವುದನ್ನು ಖಾತರಿಪಡಿಸಿಕೊಳ್ಳಲು ಈ ನಾಲ್ಕೂ ಅಂಶಗಳನ್ನು ಪರೀಕ್ಷಿಸಿದ್ದಾರೆ. ಇಲ್ಲಿ ಇವರಿಗಿದ್ದ ದೊಡ್ಡ ಸವಾಲೆಂದರೆ ನೀರಿನ ಮೂಲಕ ಪರಾಗಗಳ ವರ್ಗಾವಣೆ ಆಗದಂತೆ ನೋಡಿಕೊಳ್ಳುವುದು. ಆಗ ಮಾತ್ರವೇ ಈ ಕ್ರಿಯೆಯಲ್ಲಿ ಪ್ರಾಣಿಗಳೂ ತೊಡಗಿವೆ ಎನ್ನುವುದನ್ನು ಸಾಬೀತುಪಡಿಸಲು ಸಾಧ್ಯವಾಗುವುದು. ಇದನ್ನು ದೃಢಪಡಿಸಲು ವಿಜ್ಞಾನಿಗಳು ಟೆಸ್ಟುಡೀನಂ ಹೂಗಳು, ಕಠಿಣಚರ್ಮಿಗಳು ಮತ್ತು ಹುಳುಗಳನ್ನು ನೀರು ಹರಿಯದ ಅಕ್ವೇರಿಯಂನಲ್ಲಿ ಇರಿಸಿ ಪರೀಕ್ಷಿಸಿದ್ದಾರೆ!

ಮೊದಲ ಹಂತದಲ್ಲಿ ಕೀಟಗಳು ಹೂಗಳ ಬಳಿ ಚಲಿಸುವಾಗ ಅವುಗಳ ವರ್ತನೆ ಹಾಗೂ ಅವು ಹೇಗೆ ಪರಾಗವನ್ನು ಶಲಾಕಾಗ್ರಕ್ಕೆ ತಲುಪಿಸುತ್ತವೆ ಎನ್ನುವುದನ್ನು ಪರೀಕ್ಷಿಸಬೇಕು. ಅದಕ್ಕಾಗಿ ಈ ಕ್ರಿಯೆಯಲ್ಲಿ ತೊಡಗಿದೆ ಎಂದು ಊಹಿಸಲಾಗಿರುವ ಕೀಟಗಳನ್ನು ರಾತ್ರಿಹೊತ್ತು ಬೆಳಕಿನ ಬಲೆ ಬೀಸಿ ಸೆರೆಹಿಡಿದು ತಂದು ಅಕ್ವೇರಿಯಂನಲ್ಲಿ ಬಿಟ್ಟಿದ್ದಾರೆ. ಆಗಷ್ಟೇ ತೆರೆದುಕೊಂಡಿರುವ ಗಂಡು ಮತ್ತು ಹೆಣ್ಣುಹೂಗಳನ್ನು ತಂದು 2-3 ಸೆಂಟಿಮೀಟರು ದೂರದಲ್ಲಿ ಇರಿಸಲಾಗಿದೆ.  ಒಂದು ಅಕ್ವೇರಿಯಂನಲ್ಲಿ ಲೀಟರಿಗೆ ಸುಮಾರು 500 ಕೀಟಗಳಂತೆಯೂ, ಮತ್ತೊಂದರಲ್ಲಿ ಕೇವಲ ಹೂಗಳನ್ನೂ ಇರಿಸಲಾಗಿದೆ. ಎರಡನೇ ಹಂತದಲ್ಲಿ ಹೆಣ್ಣುಹೂಗಳು ಪರಾಗದ ಗೋಂದು ಅಂಟಿಕೊಂಡಿರುವ ಜೀವಿಗಳನ್ನು ಹೇಗೆ ಆಕರ್ಷಿಸುತ್ತವೆ ಎಂದು  ನೋಡಿದ್ದಾರೆ. ಮೂರನೇ ಹಂತದಲ್ಲಿ ಪರಾಗಸ್ಪರ್ಶ ಕ್ರಿಯೆಯು ಹೇಗೆ ಯಶಸ್ವಿಯಾಗುತ್ತದೆ ಎಂದು ಪರೀಕ್ಷಿಸಿದ್ದಾರೆ. ಇದಕ್ಕೆ ಅಕ್ವೇರಿಯಂಗಿಂತ ತುಸು ಭಿನ್ನವಾದ ನೈಸರ್ಗಿಕ ವಾತಾವರಣದಂತೆಯೇ ಇರುವ ವ್ಯವಸ್ಥೆಯೊಂದರಲ್ಲಿ ಲೀಟರಿಗೆ ಸುಮಾರು 30ರಿಂದ 90 ಕೀಟಗಳನ್ನು ಇರಿಸಿದ್ದಾರೆ; ಕೀಟಗಳಿಲ್ಲದಿರುವ ವ್ಯವಸ್ಥೆಯೊಂದಿಗೂ ಹೋಲಿಸಿ ನೋಡಿದ್ದಾರೆ. ಪರಾಗಸ್ಪರ್ಶ ಕ್ರಿಯೆಯ ಸಫಲತೆಯಲ್ಲಿ ಗಂಡುಹೂವುಗಳ ಸಾಮೀಪ್ಯವೂ ಮುಖ್ಯವಾಗುತ್ತದೆಯೇ ಎಂದು ತಿಳಿಯಲು ಹೂಗಳನ್ನು 15ರಿಂದ 150 ಸೆಂಟಿಮೀಟರು ದೂರದಲ್ಲಿ ಇಡಲಾಗಿತ್ತು. ಪರಾಗಸ್ಪರ್ಶ ಆದ ನಂತರ ಹೆಣ್ಣುಹೂಗಳನ್ನು ಪ್ರತ್ಯೇಕವಾಗಿರಿಸಿ ಪರಾಗ ನಳಿಕೆಗಳ ಬೆಳವಣಿಗೆಯನ್ನು ಗಮನಿಸಿದ್ದಾರೆ. ಮುಂದೆ ಟೆಸ್ಟುಡೀನಂ ಸಸ್ಯಗಳು ಯಶಸ್ವಿಯಾಗಿ ಬೆಳೆದುವಂತೆ.

ಹೀಗೆ ವ್ಯಾನ್‌ ಟಸೇನ್‌ ಬ್ರೂಕ್‌ ಮತ್ತು ತಂಡದವರು ತಲೇಷಿಯಾ ಟೆಸ್ಟುಡೀನಂ ಸಸ್ಯದ ಮೂಲಕ ನೀರಿನಲ್ಲಿರುವ ಜಲಚರ ಪ್ರಾಣಿಗಳು ಮತ್ತು ಕೀಟಗಳು ಅಲ್ಲಿನ ಕಡಲಹುಲ್ಲಿನ ಸಂತತಿಯನ್ನು ಮುಂದುವರೆಸಲು ಸಹಾಯ ಮಾಡುತ್ತವೆ ಎನ್ನುವುದನ್ನು ಖಚಿತಪಡಿಸಿದ್ದಾರೆ. ಅಂತೂ ಸಾಗರಗಳಲ್ಲಿರುವ ಸಸ್ಯಗಳ ಸಂತಾನೋತ್ಪತ್ತಿ ಕೇವಲ ನೀರಿನ ಹರಿತದಿಂದಷ್ಟೇ ಆಗುತ್ತದೆ ಎಂದುಕೊಂಡಿದ್ದ ನಮ್ಮ ನಂಬಿಕೆ ಸುಳ್ಳಾಯಿತು!

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.