ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PV Web Exclusive| ಕಾಡು ಪ್ರಾಣಿ ನಾಡಿಗೇಕೆ?

Last Updated 22 ಡಿಸೆಂಬರ್ 2020, 11:12 IST
ಅಕ್ಷರ ಗಾತ್ರ
ADVERTISEMENT
"ಹೊಸಪೇಟೆ ತಾಲ್ಲೂಕಿನ ಇಂಗಳಗಿಯಲ್ಲಿ ಇತ್ತೀಚೆಗೆ ಚಿರತೆ ದಾಳಿ ನಡೆಸಿದ್ದರಿಂದ ಕುರಿಗಾಹಿ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದು"
"ಹೊಸಪೇಟೆ ತಾಲ್ಲೂಕಿನ ಬುಕ್ಕಸಾಗರದ ಬಳಿ ನಡೆಯುತ್ತಿರುವ ಕಲ್ಲು ಗಣಿಗಾರಿಕೆಯಿಂದ ಗುಡ್ಡ ಕರಗಿ ತುಂಗಭದ್ರಾ ನದಿ ಪಾತ್ರಕ್ಕೆ ಸಮನಾಗಿರುವುದು"

ಹೊಸಪೇಟೆ: ಕಾಡು ಪ್ರಾಣಿಗಳು ಜನವಸತಿ ಪ್ರದೇಶಗಳಿಗೆ ಲಗ್ಗೆ ಇಡುವುದು ಏಕಾಏಕಿ ಹೆಚ್ಚಾಗಲು ಕಾರಣವೇನು? ಮಾನವ–ಪ್ರಾಣಿ ಸಂಘರ್ಷಕ್ಕೆ ಕೊನೆಯಿಲ್ಲವೆ?

ಸದ್ಯದ ಪರಿಸ್ಥಿತಿ ನೋಡಿದರೆ ಈ ಸಂಘರ್ಷ ಕೊನೆಗೊಳ್ಳುವ ಲಕ್ಷಣಗಳು ಗೋಚರಿಸುತ್ತಿಲ್ಲ. ಇಷ್ಟೇ ಅಲ್ಲ, ಕಾಡು ಪ್ರಾಣಿಗಳು ಜನವಸತಿ ಪ್ರದೇಶಗಳಿಗೆ ಲಗ್ಗೆ ಇಡುವುದು ಮುಂದುವರೆಯುವ ಸಾಧ್ಯತೆಗಳು ಅಧಿಕ ಎನ್ನುತ್ತಾರೆ ತಜ್ಞರು. ಅದಕ್ಕೆ ಹಲವು ಕಾರಣಗಳನ್ನು ಕೊಡುತ್ತಾರೆ.

ಕಾಡಿಗೆ ಹೊಂದಿಕೊಂಡಂತೆ ಮನುಷ್ಯನ ಚಟುವಟಿಕೆಗಳು ದಿನೇ ದಿನೇ ಹೆಚ್ಚಾಗುತ್ತಿರುವುದೇ ಇದಕ್ಕೆ ಮುಖ್ಯ ಕಾರಣ. ಗುಡ್ಡಗಾಡುಗಳಲ್ಲಿ ನಡೆಯುತ್ತಿರುವ ಕಲ್ಲು ಕ್ವಾರಿ ಗಣಿಗಾರಿಕೆ, ಧರ್ಮ ಕೇಂದ್ರೀತ ಕಾರ್ಯಗಳು, ಹೋಂ ಸ್ಟೇ, ರೆಸಾರ್ಟ್‌ ಸೇರಿದಂತೆ ಇತರೆ ನಿರ್ಮಾಣ ಚಟುವಟಿಕೆಗಳು ಕಾಡಿನ ಗಾತ್ರ ಕುಗ್ಗಿಸುತ್ತಿವೆ.

ಮನುಷ್ಯರ ಓಡಾಟ, ಯಂತ್ರಗಳ ಸದ್ದು ಕಾಡು ಪ್ರಾಣಿಗಳಿಗೆ ಹಿಂಸೆ ಉಂಟು ಮಾಡುತ್ತಿವೆ. ಅವುಗಳ ಆವಾಸ ಸ್ಥಾನ ನಾಶವಾಗುವ ಭೀತಿ ಎದುರಾಗಿದೆ. ಅವುಗಳು ಮುಕ್ತವಾಗಿ ಓಡಾಡಲು ಸಾಧ್ಯವಾಗದಂಥಹ ಪರಿಸ್ಥಿತಿ ಸೃಷ್ಟಿಯಾಗಿದೆ. ಭದ್ರತೆಯ ಕಾರಣಗಳಿಗಾಗಿ ಪ್ರಾಣಿಗಳು ಪದೇ ಪದೇ ವಾಸಸ್ಥಾನ ಬದಲಿಸಿಕೊಳ್ಳುವ ಅನಿವಾರ್ಯತೆ ನಿರ್ಮಾಣವಾಗಿದೆ. ಇನ್ನೊಂದೆಡೆ ಕಾಡಂಚಿನ ಗ್ರಾಮಗಳಲ್ಲಿ ಸಮರ್ಪಕವಾಗಿ ತ್ಯಾಜ್ಯ ವಿಲೇವಾರಿ ಆಗುತ್ತಿಲ್ಲ. ಈ ಎಲ್ಲ ಕಾರಣಗಳಿಂದಾಗಿ ಆಗಾಗ್ಗೆ ಮಾನವ–ಪ್ರಾಣಿ ಎದುರು, ಬದುರಾಗಿ ಸಂಘರ್ಷಕ್ಕೆ ಎಡೆಮಾಡಿಕೊಡುತ್ತಿದೆ.

ಹೊಸಪೇಟೆ ತಾಲ್ಲೂಕಿನ ಇಂಗಳಗಿಯಲ್ಲಿ ಇತ್ತೀಚೆಗೆ ಚಿರತೆ ದಾಳಿ ನಡೆಸಿದ್ದರಿಂದ ಕುರಿಗಾಹಿ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದು

ಇತ್ತೀಚಿನ ಕೆಲವು ವರ್ಷಗಳಿಂದ ಗುಡ್ಡಗಾಡುಗಳಿಗೂ ಧಾರ್ಮಿಕ ಚಟುವಟಿಕೆಗಳು ಹೆಚ್ಚಾಗಿ ವಿಸ್ತರಣೆಯಾಗಿದೆ. ಅಲ್ಲಿಗೆ ಭಕ್ತರ ಸಂಖ್ಯೆ ಹೆಚ್ಚಾಗಿರುವುದು ಮತ್ತು ಅವರ ಮೇಲೆ ಚಿರತೆ, ಕರಡಿ ದಾಳಿ ನಡೆಯುತ್ತಿರುವುದು ಸಾಮಾನ್ಯವಾಗಿದೆ. ಇತ್ತೀಚೆಗೆ ಆನೆಗೊಂದಿಯ ದೇವಿ ಬೆಟ್ಟದಲ್ಲಿ ಚಿರತೆ ದಾಳಿ ನಡೆಸಿ, ವ್ಯಕ್ತಿಯೊಬ್ಬರನ್ನು ಸಾಯಿಸಿರುವುದು ತಾಜಾ ನಿದರ್ಶನ. ಅಂಜನಾದ್ರಿ ಬೆಟ್ಟ, ಹಂಪಿಯ ರಘುನಾಥ ಮಾಲ್ಯವಂತ ಬೆಟ್ಟದ ಸುತ್ತಮುತ್ತ ಚಿರತೆ ಓಡಾಟ ಹೆಚ್ಚಾಗಿದೆ.

ಇನ್ನೊಂದೆಡೆ ಕಾಡಂಚಿನಲ್ಲಿ ಕುರಿಗಾಹಿಗಳು ದೊಡ್ಡ ಪ್ರಮಾಣದಲ್ಲಿ ಕುರಿಗಳನ್ನು ಮೇಯಿಸಲು ಕೊಂಡೊಯ್ಯುತ್ತಿರುವುದರಿಂದ ಅದಕ್ಕೆ ಆಕರ್ಷಣೆಗೊಂಡು ಕಾಡು ಪ್ರಾಣಿಗಳು ದಾಳಿ ನಡೆಸುತ್ತಿವೆ. ಈಗ ಅವುಗಳಿಗೆ ಸಾಕು ಪ್ರಾಣಿಗಳ ರುಚಿ ಹಿಡಿಸಿದ್ದು, ಸುಲಭವಾಗಿ ಆಹಾರ ಸಿಗಬಹುದು ಎಂಬ ಲೆಕ್ಕಾಚಾರದೊಂದಿಗೆ ಗ್ರಾಮಗಳಿಗೆ ನುಗ್ಗಿ ದಾಳಿ ನಡೆಸುತ್ತಿವೆ. ಆ ದಾಳಿ ಈಗ ಮನುಷ್ಯರ ಕಡೆಯೂ ತಿರುಗಿದೆ. ಇತ್ತೀಚೆಗೆ ತಾಲ್ಲೂಕಿನ ಇಂಗಳಗಿಯಲ್ಲಿ ಕುರಿಗಾಹಿ ಮೇಲೆ ಚಿರತೆಯೊಂದು ದಾಳಿ ನಡೆಸಿ, ಮುಖ ಮತ್ತು ತಲೆಗೆ ಗಂಭೀರವಾಗಿ ಗಾಯಗೊಳಿಸಿತ್ತು. ಇತರೆ ಕುರಿಗಾಹಿಗಳು ರಕ್ಷಣೆಗೆ ಬಂದದ್ದರಿಂದ ಅವರು ಸ್ವಲ್ಪದರಲ್ಲೇ ಪಾರಾದರು. ಇಂಥಹ ಘಟನೆಗಳು ಇತ್ತೀಚಿನ ಕೆಲವು ವರ್ಷಗಳಿಂದ ಸಾಮಾನ್ಯವಾಗಿವೆ.

ಹೊಸಪೇಟೆ ತಾಲ್ಲೂಕಿನ ಬುಕ್ಕಸಾಗರದ ಬಳಿ ನಡೆಯುತ್ತಿರುವ ಕಲ್ಲು ಗಣಿಗಾರಿಕೆಯಿಂದ ಗುಡ್ಡ ಕರಗಿ ತುಂಗಭದ್ರಾ ನದಿ ಪಾತ್ರಕ್ಕೆ ಸಮನಾಗಿರುವುದು

ತಾಲ್ಲೂಕಿನ ಪಾಪಿನಾಯಕನಹಳ್ಳಿ–ಕಮಲಾಪುರ, ಸಣಾಪುರ ರಸ್ತೆಯಲ್ಲಿ ಈಗ ಏಕಾಏಕಿ ಚಿರತೆ, ಕರಡಿಗಳ ಓಡಾಟ ಹೆಚ್ಚಾಗಿದೆ. ಹಿಂಡು ಹಿಂಡಾಗಿ ಕಾಡು ಪ್ರಾಣಿಗಳು ಓಡಾಡುತ್ತಿವೆ. ಜನ ಹಗಲಿನಲ್ಲೂ ಓಡಾಡಲು ಭಯ ಪಡುವಂಥಹ ವಾತಾವರಣ ಸೃಷ್ಟಿಯಾಗಿದೆ. ಸಂಜೆಯ ನಂತರ ಅಲ್ಲಿ ಯಾರೂ ಓಡಾಡದಂಥಹ ಪರಿಸ್ಥಿತಿ ನಿರ್ಮಾಣವಾಗಿದೆ. ಕಾಡು ಪ್ರಾಣಿಗಳ ಚಿತ್ತ ಜನವಸತಿ ಪ್ರದೇಶಗಳತ್ತ ಹರಿದಿದೆ ಎನ್ನುವುದಕ್ಕೆ ಮತ್ತೊಂದು ನಿದರ್ಶನ. ಹಾಗಿದ್ದರೆ ಇದಕ್ಕೆ ಪರಿಹಾರ ಇಲ್ಲವೇ?

‘ಪರಿಹಾರ ಇದೆ. ಆದರೆ, ಪರಿಹಾರ ಕ್ರಮಗಳನ್ನು ಗಂಭೀರವಾಗಿ ಜಾರಿಗೆ ತರುವ ಇಚ್ಛಾಶಕ್ತಿ ಬೇಕು’ ಎನ್ನುತ್ತಾರೆ ವನ್ಯಜೀವಿ ತಜ್ಞ ಸಮದ್‌ ಕೊಟ್ಟೂರು.

‘ಕಾಡಿನ ಸುತ್ತಮುತ್ತ ನಡೆಯುತ್ತಿರುವ ಕಲ್ಲು ಕ್ವಾರಿ ಗಣಿಗಾರಿಕೆ, ಧಾರ್ಮಿಕ ಕಾರ್ಯ, ನಿರ್ಮಾಣ ಚಟುವಟಿಕೆಗಳಿಗೆ ಕಡಿವಾಣ ಹಾಕಬೇಕು. ಗ್ರಾಮದ ಸುತ್ತಮುತ್ತ ಎಲ್ಲೆಂದರಲ್ಲಿ ತ್ಯಾಜ್ಯ ಬಿಸಾಡಲು ಅವಕಾಶ ಕೊಡಬಾರದು. ತ್ಯಾಜ್ಯ ವಿಲೇವಾರಿಗೆ ನಿಯಮ ರೂಪಿಸಿ, ಅದನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಅದರಲ್ಲೂ ಮಾಂಸ ವಿಲೇವಾರಿ ಬಹಳ ಸಮರ್ಪಕವಾಗಿ ಮಾಡಬೇಕು. ಕುರಿಗಾಹಿಗಳಿಗೆ ಕಾಡಿನ ಅಂಚಿನ ಸುತ್ತಮುತ್ತ ಕುರಿ ಮೇಯಿಸಲು ಅವಕಾಶ ಕಲ್ಪಿಸಬಾರದು. ಹೀಗೆ ಮಾಡಿದರೆ ಕಾಡು ಪ್ರಾಣಿಗಳು ಜನವಸತಿ ಪ್ರದೇಶಗಳತ್ತ ನುಸುಳುವುದಿಲ್ಲ. ಅವುಗಳಿಗೆ ಅವುಗಳ ಆವಾಸ ಸ್ಥಾನ ಸುರಕ್ಷಿತ ಎನ್ನುವ ಭಾವನೆ ಮೂಡಿಸಬೇಕು’ ಎಂದು ಹೇಳಿದರು.

‘ನಾನು ಸೇರಿದಂತೆ ಹಲವು ಪರಿಸರವಾದಿಗಳು, ವನ್ಯಜೀವಿ ಪ್ರೇಮಿಗಳ ಹೋರಾಟದಿಂದ ದರೋಜಿ ಸುತ್ತಮುತ್ತ ಕಲ್ಲು ಗಣಿಗಾರಿಕೆಗೆ ತಡೆ ಬಿದ್ದಿದೆ. ದರೋಜಿ ಕರಡಿಧಾಮ ಅಸ್ತಿತ್ವಕ್ಕೆ ಬಂದ ನಂತರವಂತೂ ಯಾವುದೇ ಕಾನೂನುಬಾಹಿರ ಚಟುವಟಿಕೆಗಳು ನಡೆಯುತ್ತಿಲ್ಲ. ಕರಡಿಗಳ ಸಂತತಿಯಲ್ಲಿ ಭಾರಿ ಹೆಚ್ಚಳವಾಗಿದೆ. ಚಿರತೆಗಳ ಸಂಖ್ಯೆಯೂ ಹೆಚ್ಚಳವಾಗಿದೆ. ಆದರೆ, ಅದು ಮುಕ್ತವಾಗಿ ಓಡಾಡಲು ಬಯಸುವ ಪ್ರಾಣಿಯಾಗಿದ್ದು, ಬಹಳ ದೂರದ ವರೆಗೆ ಕ್ರಮಿಸುತ್ತದೆ. ಚಿರತೆಗಳು ವಾಸವಿರುವ ಅನೇಕ ಕಡೆ ಮಾನವನ ಚಟುವಟಿಕೆಗಳು ಹೆಚ್ಚಾಗಿವೆ. ಈ ಕಾರಣಕ್ಕಾಗಿಯೇ ಚಿರತೆ–ಮಾನವ ಸಂಘರ್ಷಗಳು ಹೆಚ್ಚಿವೆ. ಅದನ್ನು ತಡೆಯಬೇಕಾದರೆ ಅಲ್ಲೆಲ್ಲ ಮಾನವನ ಚಟುವಟಿಕೆಗಳನ್ನು ಸಂಪೂರ್ಣವಾಗಿ ನಿಲ್ಲಿಸುವುದು ಅಗತ್ಯ’ ಎಂದು ಪ್ರತಿಪಾದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT