ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿರತೆಯೊಂದಿಗೆ ಗುಬ್ಬಿ ಮುಖಾಮುಖಿ

Last Updated 24 ಏಪ್ರಿಲ್ 2021, 19:30 IST
ಅಕ್ಷರ ಗಾತ್ರ

ಇತ್ತೀಚಿನ ದಿನಗಳಲ್ಲಿ ಹೆಚ್ಚು ಚರ್ಚೆಯಲ್ಲಿರುವ ವಿಷಯವೆಂದರೆ ಮಾನವ–ಪ್ರಾಣಿ ಸಂಘರ್ಷ. ಅತಿ ಹೆಚ್ಚು ಸಂಘರ್ಷ ಎದುರಿಸುತ್ತಿರುವ ಪ್ರಾಣಿಗಳ ಪಟ್ಟಿಯಲ್ಲಿ ಆನೆ, ಕರಡಿ, ಚಿರತೆಯ ಜೊತೆಯಲ್ಲಿ ತೋಳ ಮತ್ತು ಹುಲಿ ಸಹ ಸೇರಿವೆ. ಗುಣಮಟ್ಟ ಕಳೆದುಕೊಳ್ಳುತ್ತಿರುವ ಕಾಡು, ಕಾಡುಗಳ ನಡುವೆ ಸಂಪರ್ಕವಿಲ್ಲದೆ ಕಾಡು ಪ್ರಾಣಿಗಳ ವಲಸೆಗೆ ತೊಡಕು. ನಗರೀಕರಣ, ಕಾಡುನಾಶ, ಅಣೆಕಟ್ಟೆ , ರಸ್ತೆ ಹಾಗೂ ರೈಲು ಮಾರ್ಗ ನಿರ್ಮಾಣದಂತಹ ಅಭಿವೃದ್ಧಿ ಯೋಜನೆಗಳಿಗೆ ಅರಣ್ಯ ನಾಶವಾಗುತ್ತಿದೆ. ಇದೇ ಸಂಘರ್ಷಕ್ಕೆ ಮೂಲಕಾರಣ.

ಬಳ್ಳಾರಿ, ತುಮಕೂರು, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಗಣಿಗಾರಿಕೆಗೆ ಸಾವಿರಾರು ಎಕರೆ ಕಾಡು ನಾಶವಾಗಿದೆ. ಇದಕ್ಕೆ ಪರ್ಯಾಯವಾಗಿ ನೆಡುತೋಪು ಹಾಕಿದರೂ ಅದು ನೈಸರ್ಗಿಕ ಕಾಡಾಗಲಾರದು. ಕಾಡು, ಕಾಡಿನಂಚಿನ ಗುಡ್ಡಗಾಡು, ಕಬ್ಬಿನಗದ್ದೆ, ಜೋಳದ ಹೊಲದಲ್ಲೂ ಕಾಣುವ ಚಿರತೆಯ ಬಗ್ಗೆ ಸತತವಾಗಿ ಅಧ್ಯಯನ ಮಾಡುತ್ತಿರುವ ತುಮಕೂರಿನ ಸಂಜಯ ಗುಬ್ಬಿ ‘ಲೆಪರ್ಡ್‌ ಡೈರೀಸ್‌, ದಿ ರೋಸೆಟ್‌ ಇನ್‌ ಇಂಡಿಯಾ’ ಎನ್ನುವ ಪುಸ್ತಕವನ್ನು ಇಂಗ್ಲಿಷ್‌ನಲ್ಲಿ ಹೊರತಂದಿದ್ದಾರೆ.

ಕಾಡು, ಕಾಡುಪ್ರಾಣಿಗಳ ಬಗ್ಗೆ ಇದು ಇವರ ಆರನೇ ಪುಸ್ತಕ. ಇನ್ನೂ ‘ಲೆಪರ್ಡ್‌ ಡೈರೀಸ್‌’ನ ಗುಂಗಿನಲ್ಲಿರುವ ಗುಬ್ಬಿ ಅವರು ‘ಭಾನುವಾರದ ಪುರವಣಿ’ಯೊಂದಿಗೆ ನಡೆಸಿದ ಮಾತುಕತೆಯ ಆಯ್ದಭಾಗ ಇಲ್ಲಿದೆ.

ಚಿತ್ರ: ವಿವೇಕ್‌ ಸುಂದರ್‌
ಚಿತ್ರ: ವಿವೇಕ್‌ ಸುಂದರ್‌

ಭಾರತದ ಚಿರತೆ ಬಗ್ಗೆ ಏನಿಷ್ಟು ಕುತೂಹಲ?

ನಾನು ಬೆಳೆದಿದ್ದು ತುಮಕೂರು. ಅದು ಚಿರತೆ, ಕರಡಿ ಮತ್ತು ತೋಳಗಳ ಪ್ರದೇಶ. ನಾನು ಅವುಗಳ ಸಂಘರ್ಷವನ್ನು ನೋಡುತ್ತಲೇ ಬೆಳೆದೆ. ಮಾನವನ ಜತೆ ಸಂಘರ್ಷ ಎದುರಿಸುತ್ತಿರುವ ಪ್ರಮುಖ ಕಾಡುಪ್ರಾಣಿಯ ಪೈಕಿ ಚಿರತೆ ಸಹ ಒಂದು. ಬಂಗಾಳದ ಹುಲಿಗಳ ಬಗ್ಗೆ ಸಾಕಷ್ಟು ಅಧ್ಯಯನವಾಗಿದೆ. ಹುಲಿ ಹೊರತುಪಡಿಸಿದರೆ ಚಿರತೆಯೇ ದೊಡ್ಡ ಮಾರ್ಜಾಲ. ಇದರ ಬಗ್ಗೆ ಅಧ್ಯಯನವೇ ಆಗಿರಲಿಲ್ಲ. ನಾವು ಕರ್ನಾಟಕದಲ್ಲಿ ಚಿರತೆಯ ಆವಾಸಸ್ಥಾನ ಎಲ್ಲೆಲ್ಲಿ ಹರಡಿದೆ ಎನ್ನುವ ಅಧ್ಯಯನ ಮಾಡಿದ್ದೇವೆ. ಇಂತಹ ಅಧ್ಯಯನ ಭಾರತದಲ್ಲಿ ಮೊದಲ ಸಲ ನಡೆದಿದೆ. ಕರ್ನಾಟಕದ ಮಟ್ಟಿಗೆ ಹೇಳುವುದಾದರೆ ಕಲಬುರ್ಗಿ ಹಾಗೂ ರಾಯಚೂರು ಜಿಲ್ಲೆಗಳನ್ನು ಹೊರತುಪಡಿಸಿ ಉಳಿದ ಜಿಲ್ಲೆಗಳಲ್ಲಿ ಚಿರತೆಗಳಿವೆ. ನಮ್ಮ ಅಧ್ಯಯನ ಚಿರತೆಯ ಸಂತತಿಯ ಬೆಳವಣಿಗೆ, ಮಾನವನ ಜತೆಗಿನ ಸಂಘರ್ಷ, ಅವುಗಳ ಚಲನವಲನ ಮತ್ತು ವಾಸಸ್ಥಾನಗಳ ಕುರಿತಾಗಿದೆ.

‘ಲೆಪರ್ಡ್‌ ಡೈರೀಸ್‌’ ಚಿರತೆಯ ಯಾವ ಮಜಲನ್ನು ಪರಿಚಯಿಸುತ್ತದೆ?

ಚಿರತೆಗಳ ನಡವಳಿಕೆ, ಅವುಗಳ ಪರಿಸರ, ಪರಿಸರದಲ್ಲಿ ಅವುಗಳಿಗೆ ಇರುವ ಪ್ರಾಮುಖ್ಯ, ಸಂರಕ್ಷಣೆ, ಕಾಡಿನ ಮತ್ತು ನಾಡಿನ ಚಿರತೆ, ಚಿರತೆಯ ಭವಿಷ್ಯ, ಇವುಗಳ ಪರಸ್ಪರ ಸಂಪರ್ಕದ ಬಗ್ಗೆ ಸಾಮಾನ್ಯ ಜನರಿಗೆ ಅರ್ಥವಾಗುವ ರೀತಿಯಲ್ಲಿ ಕೃತಿ ಚರ್ಚೆ ಮಾಡುತ್ತದೆ. ಇದು ಜನ ಸಾಮಾನ್ಯರ ಪುಸ್ತಕ. ಪ್ರಪಂಚದ ಎಲ್ಲೆಲ್ಲಿ ಚಿರತೆಗಳಿವೆ ಎಂಬ ವಿವರವನ್ನೂ ಇದು ಹೊಂದಿದೆ.

ರಾಜ್ಯದಲ್ಲೇ ಇರುವ ಮಾರ್ಜಾಲ ಕುಟುಂಬದ ಸದಸ್ಯರಾದ ಹುಲಿ ಮತ್ತು ಚಿರತೆಯ ಬಲಿ ಪ್ರಾಣಿಗಳಲ್ಲಿ ಏನು ವ್ಯತ್ಯಾಸ?

ಪ್ರಾಯಕ್ಕೆ ಬಂದ ಹುಲಿ 130 ಕೆ.ಜಿ ತೂಗಿದರೆ ಅದೇ ವಯಸ್ಸಿನ ಚಿರತೆಯ ತೂಕ 70 ಕೆ.ಜಿ. ಚಿರತೆಯ ಬಲಿ ಪ್ರಾಣಿಗಳು 20 ಕೆ.ಜಿ ಆಸುಪಾಸಿನಲ್ಲಿದ್ದರೆ, ಹುಲಿಯ ಬಲಿ ಪ್ರಾಣಿಗಳು 50 ಕೆ.ಜಿಗೂ ಮೀರಿದ್ದು. ನೈಸರ್ಗಿಕ ಬಲಿಪ್ರಾಣಿಗಳು ಕಡಿಮೆಯಾದಾಗ, ಸಂಘರ್ಷ ಹೆಚ್ಚಾದಾಗ ಇವೆರಡೂ ಮನುಷ್ಯನನ್ನು ಗುರಿಮಾಡಬಹುದು. ನಗರದ ಸುತ್ತ ಇರೋ ಚಿರತೆಗಳು ಮೇಕೆ, ಕುರಿ, ನಾಯಿ ಹಾಗೂ ಕರುಗಳನ್ನು ಕೊಲ್ಲುತ್ತವೆ. ಆದರೆ ಕೊಂಚ ಘಾಟಿಯಾದ ಎಮ್ಮೆ ಹಿಡಿಯುವುದಿಲ್ಲ.

ಇವು ಉದ್ದೇಶಪೂರ್ವಕವಾಗಿ ನರಭಕ್ಷಕವೇ?

ರಾಜ್ಯದ ಬಳ್ಳಾರಿಯ ಸಂಡೂರು, ತುಮಕೂರಿನ ಹೆಬ್ಬೂರು ಮತ್ತು ಚಾಮರಾಜನಗರದಲ್ಲಿ ಮನುಷ್ಯನ ಹಿಡಿದಿರುವ ದಾಖಲೆಗಳಿವೆ. ಕೆಲ ಕಡೆ ಆಕಸ್ಮಿಕವಾದರೆ, ಕೆಲ ಪ್ರಕರಣಗಳಲ್ಲಿ ಮನುಷ್ಯನನ್ನೇ ಬೇಟೆಯಾಡಿದ್ದು ಎದ್ದು ಕಾಣುತ್ತದೆ. ಅನೇಕ ನರಭಕ್ಷಕ ಹುಲಿ, ಚಿರತೆಗಳನ್ನು ಬೇಟೆಯಾಡಿರುವ ಜಿಮ್‌ ಕಾರ್ಬೆಟ್‌ ಹಾಗೂ ಕೆನೆತ್‌ ಆ್ಯಂಡರ್ಸನ್‌ ಅವರ ಪ್ರತಿಪಾದನೆಯಲ್ಲಿ ಹೇಳುವುದಾದರೆ ಈ ಪ್ರಾಣಿಗಳು ನರಭಕ್ಷಕ ಆಗಲು ಹಲವು ಕಾರಣಗಳಿವೆ. ಸಂಡೂರಿನ ನರಭಕ್ಷಕಕ್ಕೆ ಒಂದು ಕಣ್ಣು ಇರಲಿಲ್ಲ. ಇದಕ್ಕೆ ಮನುಷ್ಯ ಸುಲಭದ ಬಲಿಪ್ರಾಣಿಯಾಗಿತ್ತು. ಕೊಪ್ಪಳದ ಜೋಳದ ಹೊಲದಲ್ಲಿ ಸಕ್ರಿಯವಾಗಿದ್ದ ಚಿರತೆಯು ಅದಿರು ಗಣಿಗಾರಿಕೆಯಿಂದ ಆವಾಸಸ್ಥಾನ ನಾಶವಾಗಿ ಇತ್ತ ಬಂದಿತ್ತು. ಇದು ಹೊಲದಲ್ಲಿ ಬಗ್ಗಿ ಕುಳಿತಿರುತ್ತಿದ್ದ ಮನುಷ್ಯನನ್ನು ಗುರಿ ಮಾಡುತ್ತಿತ್ತು. ಬಗ್ಗಿದಾಗ ತನ್ನಷ್ಟೇ ಎತ್ತರವಾಗುತ್ತಿದ್ದ ವ್ಯಕ್ತಿ ಇದರ ಗುರಿಯಾಗುತ್ತಿತ್ತು.

ಗಾಯಗೊಂಡ ಚಿರತೆಗೆ ಚಿಕಿತ್ಸೆ ನೀಡುತ್ತಿರುವ ಸಂಜಯ್ ಗುಬ್ಬಿ
ಗಾಯಗೊಂಡ ಚಿರತೆಗೆ ಚಿಕಿತ್ಸೆ ನೀಡುತ್ತಿರುವ ಸಂಜಯ್ ಗುಬ್ಬಿ

ನಿಮ್ಮ ರೇಡಿಯೊ ಕಾಲರ್‌ ಮತ್ತು ಕ್ಯಾಮೆರಾ ಟ್ರ್ಯಾಪ್‌ ಅಧ್ಯಯನದಿಂದ ಏನು ಪತ್ತೆಯಾಗಿದೆ?

ಚಿರತೆಯ ಆವಾಸಸ್ಥಾನ ಸುಮಾರು 140 ಚದರ ಕಿಲೋಮೀಟರ್‌ನಷ್ಟು ಇರುತ್ತದೆ. ಕಾವೇರಿ ವನ್ಯಜೀವಿಧಾಮದಲ್ಲಿ ಇಷ್ಟುದೊಡ್ಡ ಪ್ರದೇಶದಲ್ಲಿ ಓಡಾಡಿದೆ. ಜನವಸತಿ ಪ್ರದೇಶಕ್ಕೆ ಹೊಂದಿಕೊಂಡ ಆವಾಸಸ್ಥಾನವಾದರೆ ಅದರ ವಿಸ್ತೀರ್ಣ 20 ಚದರ ಕಿ.ಮೀ ಎನ್ನುವುದು ಗೊತ್ತಾಯಿತು. ಕಾಡಿನ ನಡುವಿನ ನೈಸರ್ಗಿಕ ಆವಾಸಸ್ಥಾನದಲ್ಲಿ ಬಲಿಪಶುಗಳನ್ನು ಹುಡುಕಿಕೊಂಡು ಓಡಾಡುತ್ತವೆ. ಆದರೆ ಜನವಸತಿ ಪ್ರದೇಶಕ್ಕೆ ಹೊಂದಿಕೊಂಡ ಆವಾಸಸ್ಥಾನಗಳಲ್ಲಿ ಅವು ಸೀಮಿತ ಪ್ರದೇಶದಲ್ಲಿ ಓಡಾಡುತ್ತವೆ. ಬೆಂಗಳೂರು, ಮೈಸೂರು ನಗರದ ಸುತ್ತಮುತ್ತ ಚಿರತೆಗಳಿವೆ. ಪ್ರತಿ ಚಿರತೆಗೂ ವಿಶಿಷ್ಟವಾದ ಚುಕ್ಕೆ ಗುರುತಿದೆ. ಇದರ ಮೂಲಕವೇ ಪತ್ತೆ ಮಾಡಲು ಸಾಧ್ಯ.

ಸಂಘರ್ಷಕ್ಕೆ ಪರಿಹಾರ ಸಾಧ್ಯವಿಲ್ಲವೇ?

ಚಿರತೆ ಎದುರಿಸುತ್ತಿರುವ ಸಮಸ್ಯೆ ಬಗ್ಗೆ ಪುಸ್ತಕದಲ್ಲಿ ಬರೆದಿದ್ದೇನೆ. ನಾರ್ವೆಯ ಒಂದು ಪ್ರದೇಶದಲ್ಲಿ ಎಷ್ಟು ಪ್ರಾಣಿ ಇರಬಹುದು ಎನ್ನುವುದನ್ನು ಅಧ್ಯಯನ ಮಾಡಿ ಹೆಚ್ಚಿದ್ದರೆ ಕೊಲ್ಲುತ್ತಾರೆ. ನಮ್ಮ ಸಂಸ್ಕೃತಿಗೆ ಇದು ಹೊಂದಲ್ಲ. ವಿಕಾಸವಾದದಲ್ಲಿ ಕೃಷಿ ಆರಂಭವಾದಾಗಿನಿಂದ ಮಾನವ– ವನ್ಯಜೀವಿ ಸಂಘರ್ಷ ನಡೆಯುತ್ತಲೇ ಇದೆ. ಸಂಘರ್ಷ ತಾಳಿಕೊಳ್ಳುವ ಮಟ್ಟಿಗಿದ್ದರೆ ಮಾತ್ರ ನೆಮ್ಮದಿ. ಪ್ರಾಣಿಗಳು ಮಾತ್ರ ಊರಿಗೆ ನುಗ್ಗುತ್ತಿವೆ ಎನ್ನುತ್ತಾರೆ. ಸಂಘರ್ಷಕ್ಕೆ ನಮ್ಮ ಕಡೆಯಿಂದ ಆಗಿರುವ ತಪ್ಪನ್ನು ಸಹ ನೋಡಬೇಕು. ಆದರೆ ಇದು ಆಗುತ್ತಿಲ್ಲ. ವನ್ಯಜೀವಿಗಳು ಬದುಕಬೇಕು ಎಂದರೆ ಕಾಡಿನ ಮೇಲಿನ ಮನುಷ್ಯನ ಒತ್ತಡ ಕಡಿಮೆ ಆಗಲೇಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT