ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಲಿ... ಜಾಗೃತಿ ಇರಲಿ

Last Updated 29 ಜುಲೈ 2019, 2:57 IST
ಅಕ್ಷರ ಗಾತ್ರ

ಹುಲಿ... ಎಂದಾಕ್ಷಣ ಮೈ ರೋಮಾಂಚನಗೊಳ್ಳುತ್ತದೆ. ರಾಷ್ಟ್ರಪ್ರಾಣಿಯಾಗಿರುವ ವ್ಯಾಘ್ರನ ಕುರಿತು ಕೆಲವರಿಗೆ ಹೆದರಿಕೆಯ ಭಾವವೂ ಸುಳಿದಾಡುತ್ತದೆ. ಹುಲಿ ಎಂದರೆ ಅದೊಂದು ಕಾಡಿನ ಪ್ರಾಣಿ ಎಂಬುದಕ್ಕಷ್ಟೇ ಸೀಮಿತವಲ್ಲ. ಇಡೀ ಜೀವಸಂಕುಲದ ಒಂದು ಪ್ರಮುಖ ಭಾಗ ಎಂಬುದನ್ನು ಮರೆಯಬಾರದು.

ಅಪಾಯದಂಚಿನಲ್ಲಿದ್ದ ಹುಲಿಗಳ ಸಂರಕ್ಷಣೆಗಾಗಿ, ಅವುಗಳ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ 2010ರ ಜುಲೈ 29ರಂದು ರಷ್ಯಾದ ಸೆಂಟ್‌ಪೀಟರ್ಸ್‌ಬರ್ಗ್‌ನಲ್ಲಿ ಮೊದಲ ಬಾರಿ ವಿಶ್ವ ಹುಲಿ ದಿನವನ್ನು ಆಚರಿಸಲಾಯಿತು. ಈ ಮೂಲಕ ಸಾರ್ವಜನಿಕರಲ್ಲಿ ಹುಲಿಗಳ ಕುರಿತು ಅರಿವು ಮೂಡಿಸುವ ಪ್ರಯತ್ನ ನಡೆಯುತ್ತಿದೆ.

2014ರ ಹುಲಿಗಣತಿಯ ಪ್ರಕಾರ ಭಾರತದಲ್ಲಿ ಸುಮಾರು 2,226 ಹುಲಿಗಳನ್ನು ಗುರುತಿಸಲಾಗಿದೆ. ಕರ್ನಾಟಕದಲ್ಲಿಯೇ ಸುಮಾರು 408 ಹುಲಿಗಳಿವೆ. ಈ ಮೂಲಕ ದೇಶದಲ್ಲೇ ಅತಿಹೆಚ್ಚು ಹುಲಿಗಳಿರುವ ರಾಜ್ಯ ಎಂಬ ಹೆಗ್ಗಳಿಕೆ ಕರ್ನಾಟಕದ್ದಾಗಿದೆ. ರಾಜ್ಯದ ಬಂಡೀಪುರ ಮತ್ತು ನಾಗರಹೊಳೆ ಅಭಯಾರಣ್ಯಗಳು ಹುಲಿ ಸಂರಕ್ಷಿತ ಅಭಯಾರಣ್ಯಗಳಾಗಿವೆ.

ನಾಗರಹೊಳೆ ಸಂರಕ್ಷಿತ ಪ್ರದೇಶದಲ್ಲಿ ಹುಲಿಗಳ ಸಂಖ್ಯೆಯಲ್ಲಿ ಹೆಚ್ಚಳ ಕಂಡು ಬಂದಿದೆ. ಅರಣ್ಯದಂಚಿನ ಗ್ರಾಮಗಳಲ್ಲಿ ಅರಣ್ಯ ಇಲಾಖೆಯು ಸತತವಾಗಿ ಜಾಗೃತಿ ಕಾರ್ಯಕ್ರಮಗಳನ್ನು ಅನೇಕ ವರ್ಷಗಳಿಂದ ನಡೆಸಿಕೊಂಡು ಬರುತ್ತಿದೆ. ಇದರ ಪರಿಣಾಮವಾಗಿ ಹುಲಿಗಳ ಸಂಖ್ಯೆ ಹೆಚ್ಚಳವಾಗಿದೆ. ನಾಗರಹೊಳೆ ಅರಣ್ಯವು ಹುಲಿಗಳ ಸಂತತಿ ಹೆಚ್ಚಳಕ್ಕೆ ಪೂರಕವಾದ ವಾತಾವರಣ ಹೊಂದಿದೆ. ಜತೆಗೆ ಹುಲಿಗಳ ಆಹಾರ ಸಂಕೋಲೆಯೂ ಉತ್ತಮವಾಗಿದೆ ಎನ್ನುತ್ತಾರೆ ಅರಣ್ಯ ಇಲಾಖೆ ಅಧಿಕಾರಿಗಳು.

ಕಾಡಿನಲ್ಲಿ ಸಾಗುವಾಗ ವಿದ್ಯುತ್‌ ತಂತಿ, ರೈಲು ಹಳಿ, ರಸ್ತೆಯಿಂದಾಗಿ ಹುಲಿ ಸೇರಿದಂತೆ ವನ್ಯಜೀವಿಗಳಿಗೆ ಆಪತ್ತು ಬಂದೊದಗಿದೆ. ಒಬ್ಬ ವ್ಯಕ್ತಿ ಒಂದು ಪ್ರಾಣಿ ಸಂರಕ್ಷಣೆ ಮಾಡಿದರೆ ಇಡೀ ಪ್ರಕೃತಿ, ಎಲ್ಲ ಪ್ರಾಣಿಗಳೂ ಸುಭಿಕ್ಷವಾಗಿರುತ್ತವೆ. ಪ್ರಾಣಿ–ಮಾನವ ಸಂಘರ್ಷ ತಪ್ಪುತ್ತದೆ. ಹುಲಿ ಸಂರಕ್ಷಣೆ ಕಾಯ್ದೆ ಜಾರಿಗೆ ಬಂದ ಮೇಲೆ ಈ ಪ್ರಾಣಿಗಳ ಸಂಖ್ಯೆ ಹೆಚ್ಚಾಯಿತು ಎಂಬುದೂ ಗಮನಾರ್ಹ.

ಇತ್ತೀಚಿನ ವರ್ಷಗಳಲ್ಲಿ ಹುಲಿಗಳ ಸಂತತಿ ಕ್ಷೀಣಿಸುತ್ತಿರುವುದರಿಂದ ಹುಲಿಗಳ ಸಂರಕ್ಷಣೆಯ ಜಾಗೃತಿ ಕೈಗೊಳ್ಳಲಾಗಿದೆ. ಪ್ರಪಂಚದ 13 ದೇಶಗಳ ಕಾಡುಗಳಲ್ಲಿ ಮಾತ್ರ ಹುಲಿಗಳು ಕಂಡು ಬರುತ್ತವೆ. ವಿಶ್ವದಲ್ಲೇ ಅತಿ ಹೆಚ್ಚು ಹುಲಿಗಳು ಏಷ್ಯಾ ಖಂಡದಲ್ಲೇ ಕಾಣ ಸಿಗುತ್ತವೆ ಎಂಬುದು ಗಮನೀಯ ಅಂಶ.

ಹುಲಿಗಳ ಸಂರಕ್ಷಣೆಗಾಗಿ ಹಲವು ರಾಷ್ಟ್ರಗಳು ಕಠಿಣ ಕಾನೂನನ್ನು ಜಾರಿಗೆ ತಂದಿದೆ. 6,000 ಹುಲಿಗಳು ವಾಸಿಸುವಷ್ಟು ಅಭಯಾರಣ್ಯವನ್ನು ಭಾರತ ಹೊಂದಿದ್ದರೂ ನಮ್ಮ ದೇಶದಲ್ಲಿರುವುದು ಕೇವಲ 2,226 ಹುಲಿಗಳು ಎಂಬುದು ಬೇಸರದ ಸಂಗತಿ.

ವಿಶ್ವ ಹುಲಿ ದಿನವನ್ನು ನಾಗರಹೊಳೆ ರಾಷ್ಟ್ರೀಯ ಉದ್ಯಾನದ ಎಲ್ಲ ವಲಯಗಳಲ್ಲಿ ವಿಶೇಷವಾಗಿ ಆಚರಣೆ ಮಾಡಲು ತಯಾರಿಗಳಾಗಿವೆ. ಅರಣ್ಯ ಇಲಾಖೆ ಅಧಿಕಾರಿಗಳು ಹುಲಿ ಸಂರಕ್ಷಣೆ ಕುರಿತು ಸಾರ್ವಜನಿಕರಲ್ಲಿ ಮತ್ತು ಮಕ್ಕಳಲ್ಲಿ ಜಾಗೃತಿ ಮೂಡಿಸಲು ವಿವಿಧ ಕಾರ್ಯಕ್ರಮಗಳನ್ನೂ ಹಮ್ಮಿಕೊಂಡಿದ್ದಾರೆ.

ಸಂರಕ್ಷಿತ ಅಭಯಾರಣ್ಯಗಳಲ್ಲಿ ಹುಲಿಗಳ ಸಂಖ್ಯೆಯೇನೋ ವೃದ್ಧಿಸುತ್ತಿದೆ. ಆದರೆ, ಅವುಗಳಿಗೆ ಬೇಕಾದಷ್ಟು ಆಹಾರ ಸಿಗುತ್ತಿದೆಯೇ ಎಂಬ ಪ್ರಶ್ನೆ ಮೂಡುತ್ತದೆ. ಅರಣ್ಯ ಪ್ರದೇಶದಲ್ಲಿ ಆಹಾರ ಸಿಗದೆ ಇದ್ದಾಗ ಅವುಗಳು ಕಾಡಿನಿಂದ ನಾಡಿನತ್ತ ಬರುತ್ತವೆ. ಆಗ ಕಾಡಂಚಿನಲ್ಲಿರುವ ಮನೆಗಳಲ್ಲಿ ವಾಸವಾಗಿರುವ ಜನರೂ, ಅವರು ಸಾಕಿರುವ ಜಾನುವಾರುಗಳೂ ಬಲಿಯಾಗುತ್ತವೆ. ಇದು ಮುಂದುವರೆದು ಹುಲಿ ಮತ್ತು ಮಾನವರ ನಡುವೆ ಸಂಘರ್ಷ ಉಂಟಾಗುತ್ತದೆ. ಪರಿಣಾಮವಾಗಿ ಅರಣ್ಯ ಇಲಾಖೆ ಮೇಲೆ ಜನ ಆಕ್ರೋಶ ವ್ಯಕ್ತಪಡಿಸುತ್ತಾರೆ. ಕ್ರಮ ಕೈಗೊಳ್ಳದೆ ಇದ್ದಾಗ ಉರುಳು ಹಾಕಿಯೋ, ವಿಷ ಹಾಕಿಯೋ ಹುಲಿಗಳ ಸಾವಿಗೆ ಕಾರಣರಾಗುತ್ತಾರೆ.

ಉತ್ತರ ಪ್ರದೇಶದ ಪಿಲಿಭಿಟ್‌ ಜಿಲ್ಲೆಯಲ್ಲಿ ಹುಲಿ ದಾಳಿಯಿಂದ ಆಕ್ರೋಶಗೊಂಡ ಗ್ರಾಮಸ್ಥರ ಗುಂಪೊಂದು ಮನಸೋಇಚ್ಛೆ ದಾಳಿ ನಡೆಸಿ ಹೆಣ್ಣುಹುಲಿ ಕೊಂದಿರುವ ಘಟನೆಯಂತೂ ವನ್ಯಜೀವಿ ಪ್ರಿಯರ ಆಕ್ರೋಶಕ್ಕೆ ಕಾರಣವಾಗಿದೆ. ಹುಲಿ ಸಂರಕ್ಷಣೆಗೆ ಕಾರ್ಯಪ್ರವೃತ್ತರಾಗಬೇಕಾದ ಅನಿವಾರ್ಯತೆಯನ್ನೂ ಇದು ಎತ್ತಿ ತೋರಿಸುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT