ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂದು ವಿಶ್ವ ಕೆನ್ನಾಯಿಗಳ ದಿನ | ಕೆನ್ನಾಯಿಗಳ ಸಂರಕ್ಷಣೆಗೆ ಬೇಕಿದೆ ಗಮನ...

ಇಂದು ವಿಶ್ವ ಕೆನ್ನಾಯಿಗಳ ದಿನ; ಹುಲಿ, ಚಿ‌ರತೆಗಳಿಗಿಂತಲೂ ಹೆಚ್ಚು ಅಳಿವಿನಂಚಿನಲ್ಲಿರುವ ಸೂಕ್ಷ್ಮ ಪ್ರಾಣಿ
Published 28 ಮೇ 2023, 4:48 IST
Last Updated 28 ಮೇ 2023, 4:48 IST
ಅಕ್ಷರ ಗಾತ್ರ

ಚಾಮರಾಜನಗರ: ವನ್ಯಜೀವಿ ಸಂರಕ್ಷಣೆ ಎಂದಾಕ್ಷಣ ಎಲ್ಲರಿಗೂ ನೆನಪಾಗುವುದು ಹುಲಿ, ಚಿರತೆ, ಆನೆಗಳಂತಹ ದೊಡ್ಡ ಪ್ರಾಣಿಗಳು. ಆದರೆ, ಪರಿಸರ ವ್ಯವಸ್ಥೆ ಸಮತೋಲನವಾಗಿರಬೇಕಾದರೆ ಸಣ್ಣ ಪ್ರಾಣಿಗಳೂ ಮುಖ್ಯ. ಆದರೆ ಅವುಗಳ ಬಗ್ಗೆ ಗಮನ ಹರಿಸುವವರೂ ಕಡಿಮೆ. ವನ್ಯಜೀವಿಗಳ ಸಂರಕ್ಷಣೆಯ ವಿಚಾರಕ್ಕೆ ಬಂದಾಗ ಎಲ್ಲರಿಂದಲೂ ನಿರ್ಲಕ್ಷಕ್ಕೆ ಒಳಗಾದ ಒಂದು ಪ್ರಾಣಿ ಇದೆ. ಅದುವೇ ಕೆನ್ನಾಯಿ.  

ಸೀಳುನಾಯಿ, ಕಾಡು ನಾಯಿ ಎಂದು ಕರೆಸಿಕೊಳ್ಳುವ ಕೆನ್ನಾಯಿಗಳು ಹುಲಿ, ಚಿರತೆ, ಆನೆಗಳಿಗಳಿಗಿಂತಲೂ ಹೆಚ್ಚು ಅಳವಿನಂಚಿನಲ್ಲಿರುವ ಜೀವಿಗಳು. ಅಂದಾಜಿನ ಪ್ರಕಾರ, ಇಡೀ ಪ್ರಪಂಚದಲ್ಲಿ 2000ದಷ್ಟು ಕೆನ್ನಾಯಿಗಳಿವೆ. 350ರಷ್ಟು ಕೆನ್ನಾಯಿಗಳು ಮೃಗಾಲಯಗಳಲ್ಲಿವೆ. ಹುಲಿಗಳಂತೆ ಕೆನ್ನಾಯಿಗಳು ಕೂಡ ಭಾರತದಲ್ಲೇ ಹೆಚ್ಚಿವೆ. ನಿಖರ ಸಂಖ್ಯೆಯ ಮಾಹಿತಿ ಲಭ್ಯವಿಲ್ಲ.   

ತೀವ್ರ ಅಳಿವಿನಂಚಿನಲ್ಲಿರುವ ಸೀಳುನಾಯಿಗಳ ಸಂರಕ್ಷಣೆಗೆ ಸರ್ಕಾರ ಗಮನಹರಿಸಬೇಕು ಎಂಬುದು ವನ್ಯಜೀವಿ ತಜ್ಞರು, ಪರಿಸರವಾದಿಗಳ ಒತ್ತಾಯ. 

ದೇಶದ ಪ‍ಶ್ಚಿಮಘಟ್ಟ, ಪೂರ್ವಘಟ್ಟ, ಮಧ್ಯ ಭಾಗ, ಈಶಾನ್ಯ ಭಾಗದ ಅರಣ್ಯಗಳಲ್ಲಿ ಕೆನ್ನಾಯಿಗಳು ಹೆಚ್ಚಾಗಿ ಕಂಡು ಬರುತ್ತವೆ. ಏಷ್ಯಾ ಖಂಡದ ಇಂಡೊನೇಷ್ಯಾ, ಮಲೇಷ್ಯಾ, ನೇಪಾಳ, ಥಾಯ್ಲೆಂಡ್‌, ಮ್ಯಾನ್ಮಾರ್‌ಗಳ ಸೀಳುನಾಯಿಗಳ ಹೆಜ್ಜೆ ಗುರುತುಗಳು ಹೆಚ್ಚಾಗಿವೆ. ಚೀನಾ, ಕಾಂಬೋಡಿಯಾದಲ್ಲೂ ಸ್ವಲ್ಪ ಪ್ರಮಾಣದಲ್ಲಿವೆ. ಜಗತ್ತಿನಲ್ಲೆಡೆ ಸೀಳುನಾಯಿಗಳ ಹತ್ತು ಪ್ರಬೇಧಗಳು ಇವೆ ಎಂದು ಹೇಳಲಾಗುತ್ತಿದೆ. ಏಳು ಪ್ರಭೇದಗಳನ್ನು ಗುರುತಿಸಲಾಗಿದೆ.

ಜಿಲ್ಲೆಯೂ ಆವಾಸ: ಜಿಲ್ಲೆಯ ಬಂಡೀಪುರ ಹುಲಿಸಂರಕ್ಷಿತ ಪ್ರದೇಶ, ಬಿಆರ್‌ಟಿ ಹುಲಿ ಸಂರಕ್ಷಿತ ಪ್ರದೇಶ, ಮಲೆ ಮಹದೇಶ್ವರ ವನ್ಯಧಾಮ ಹಾಗೂ ಕಾವೇರಿ ವನ್ಯಧಾಮಗಳಲ್ಲೂ ಕೆನ್ನಾಯಿಗಳು ಇವೆ. ಕಾವೇರಿ ವನ್ಯಧಾಮದಲ್ಲಿ ಇತ್ತೀಚೆಗೆ ಬಿಳಿ ಸೀಳುನಾಯೊಂದು ಕ್ಯಾಮೆರಾ ಟ್ರ್ಯಾಪ್‌ನಲ್ಲಿ ಸೆರೆಯಾಗಿತ್ತು. 

ಅತ್ಯಂತ ಸೂಕ್ಷ್ಮ ಜೀವಿ: ‘ಅತ್ಯಂತ ಸೂಕ್ಷ್ಮ ಜೀವಿಗಳಾಗಿರುವ ಕೆನ್ನಾಯಿಗಳು ಸಾಮಾಜಿಕ ಪ್ರಾಣಿಗಳು. ಗುಂಪಾಗಿ ವಾಸಿಸುತ್ತವೆ. ಒಂದು ಗುಂಪಿನಲ್ಲಿ 10ರಿಂದ 12ರಷ್ಟು ಸೀಳುನಾಯಿಗಳು ಇರುತ್ತವೆ. ಕಾಡು ಬಿಟ್ಟು ಬೇರೆಲ್ಲೂ ಇವು ವಾಸಿಸುವುದಿಲ್ಲ. ಮನುಷ್ಯರು ಇರುವ ಕಡೆಗಳಲ್ಲಿ ಇವುಗಳು ಸುಳಿಯುವುದೇ ಇಲ್ಲ’ ಎಂದು ಹೇಳುತ್ತಾರೆ ಇವುಗಳ ಬಗ್ಗೆ 15 ವರ್ಷಗಳ ಕಾಲ ಅಧ್ಯಯನ ಮಾಡಿರುವ ವನ್ಯಜೀವಿ ತಜ್ಞರಾದ ಕೃಪಾಕರ ಮತ್ತು ಸೇನಾನಿ. 

‘ಐತಿಹಾಸಿಕವಾಗಿ ಸೀಳುನಾಯಿಗಳಷ್ಟು ಶೋಷಣೆಗೆ ಒಳಗಾದ ಜೀವಿ ಬೇರೊಂದಿಲ್ಲ. ಅದು ಬೇಟೆಯಾಡಿದ ಪ್ರಾಣಿಗಳನ್ನು ಮನುಷ್ಯರು ಕದ್ದು ತರುತ್ತಿದ್ದರು. ಇದಲ್ಲದೇ, ನಮ್ಮ ದೇಶದಲ್ಲಿ ಬ್ರಿಟಿಷರು ಕೆನ್ನಾಯಿಗಳ ವಿರುದ್ಧ ಸಮರವೇ ಸಾರಿದ್ದವು. ಈ ಕಾಡು ನಾಯಿಗಳು ಹುಲಿ, ಚಿರತೆಗಳ ಬೇಟೆಗಳನ್ನು ತಿನ್ನುತ್ತವೆ. ಕಾಡಿನಲ್ಲಿ ಸೀಳುನಾಯಿಗಳಿದ್ದರೆ ಹುಲಿ ಚಿರತೆಗಳಿಗೆ ಮಾರಾಕ ಎಂದು ನಂಬಿದ್ದ ಬ್ರಿಟಿಷರು, ಅವುಗಳನ್ನು ಕೊಲ್ಲಲು ಫರ್ಮಾನು ಹೊರಡಿಸಿದ್ದರು. 1900ರಲ್ಲೇ ಸೀಳುನಾಯಿಗಳನ್ನು ಕೊಂದು ಅದರ ಬಾಲವನ್ನು ತಂದು ತೋರಿಸಿದವರಿಗೆ ₹ 5 ಕೊಡುತ್ತಿದ್ದರು’ ಎಂದರು.  

‘ಬಂಡೀಪುರ ಅರಣ್ಯದಲ್ಲಿ 80 ಚದರ ಕಿ.ಮೀಗಳಿಗೆ ಒಂದರಂತೆ ಕೆನ್ನಾಯಿಗಳ ಗುಂಪು ಇವೆ ಎಂದು ಅಂದಾಜಿಸಲಾಗಿದೆ. ಬಂಡೀಪುರ ಅರಣ್ಯ ₹1000 ಚದರ ಕಿ.ಮೀ ವ್ಯಾಪ್ತಿಯಲ್ಲಿದ್ದು, ಈ ಲೆಕ್ಕಾಚಾರದಲ್ಲಿ 10ರಿಂದ 12 ಗುಂಪುಗಳು ಇರಬಹುದಷ್ಟೇ. ಒಂದು ಗುಂಪಿನಲ್ಲಿ 10ರಿಂದ 12 ಕಾಡುನಾಯಿಗಳು ಇರುತ್ತವೆ’ ಎಂದು ಅವರು ವಿವರಿಸಿದರು.  

‘ಅರಣ್ಯ, ಪ್ರಾಣಿಗಳನ್ನು ರಕ್ಷಿಸುವವರಿಗೆ ಹುಲಿ, ಸಿಂಹ, ಆನೆಗಳು ಕಾಣುತ್ತವೆಯೇ ವಿನಾ, ಕೆನ್ನಾಯಿಗಳಂತಹ ಅಳಿವಿನಂಚಿನಲ್ಲಿರುವ ಸಣ್ಣ ಪ್ರಾಣಿಗಳು ಕಾಣುವುದಿಲ್ಲ. ನಿಜ ಹೇಳಬೇಕೆಂದರೆ ಕಾಡು ನಾಯಿಗಳು ಹುಲಿಗಳಿಗಿಂತಲೂ ಹೆಚ್ಚು ಅಳಿನಂಚಿನಲ್ಲಿವೆ. ಅವುಗಳ ಸಂರಕ್ಷಣೆಗೆ ತುರ್ತು ಕ್ರಮ ಕೈಗೊಳ್ಳಬೇಕಿದೆ’ ಎಂದು ಕೃಪಾಕರ–ಸೇನಾನಿ ಪ್ರತಿಪಾದಿಸಿದರು.

‘ಜೀವನ ಸಂಕೀರ್ಣ ಜಟಿಲ’

‘ಕೆನ್ನಾಯಿಗಳ ಜೀವನ ಸಂಕೀರ್ಣ ಮತ್ತು ಜಟಿಲ. ಅವುಗಳ ಸ್ವಭಾವ ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ. ನ್ಯಾಷನಲ್‌ ಜಿಯೋಗ್ರಾಫಿಕ್‌ ಡಿಸ್ಕವರಿ ಚಾನೆಲ್‌ಗಳು 1989ರಲ್ಲಿ ಕೆನ್ನಾಯಿಗಳ ಜೀವನದ ಬಗ್ಗೆ ಒಂದು ಗಂಟೆಯ ಕಾರ್ಯಕ್ರಮ ಮಾಡಲು ಬಯಸಿದ್ದರು. ಆದರೆ ಅವುಗಳನ್ನು ಹಿಂಬಾಲಿಸಲು ಅವುಗಳ ಜೀವನವನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗದೇ ಇದ್ದುದರಿಂದ 20 ನಿಮಿಷವಷ್ಟೇ ಮಾಡಲು ಸಾಧ್ಯವಾಗಿತ್ತು. 1990ರಲ್ಲಿ ಮತ್ತೆ ಡಿಸ್ಕವರಿ ಮತ್ತು ಬಿಬಿಸಿ ಚಾನೆಲ್‌ಗಳು ಒಟ್ಟಾಗಿ ಪ್ರಯತ್ನ ಮಾಡಿದವು. ಆಗಲೂ ಅವರ ಕಾರ್ಯಕ್ರಮ 25 ನಿಮಿಷಕ್ಕೆ ಸೀಮಿತವಾಗಿತ್ತು’ ಎಂದು ಕೃಪಾಕರ್‌ ಮಾಹಿತಿ ನೀಡಿದರು.  ದಿ ಪ್ಯಾಕ್‌: ಸೀಳುನಾಯಿಗಳ ಜೀವನ ಪದ್ಧತಿ ಹಾಗೂ ಅವುಗಳ ಬಗ್ಗೆ ಹೆಚ್ಚು ಆಳವಾಗಿ ತೋರಿಸಿದ ಹೊಸ ಹೊಸ ಸಂಶೋಧನೆಗೆ ದಾರಿ ಕೊಟ್ಟಿದ್ದು ಕೃಪಾಕರ್‌ ಮತ್ತು ಸೇನಾನಿಯವರು ರೂಪಿಸಿದ್ದ 2010ರಲ್ಲಿ ಬಿಡುಗಡೆಯಾಗಿದ್ದ ‘ದಿ ಪ್ಯಾಕ್‌’ ಎಂಬ ಸಿನಿಮಾ. ಎರಡೂವರೆ ವರ್ಷಗಳ ಈ ಸಿನಿಮಾ ಗ್ರೀನ್‌ ಆಸ್ಕರ್‌ ಪ್ರಶಸ್ತಿಗೂ ಭಾಜನವಾಗಿತ್ತು.  

 ಕೃಪಾಕರ್
 ಕೃಪಾಕರ್

‘ಜಾಲಿ ಗಿಡಗಳ ನಿಯಂತ್ರಣ ಅಗತ್ಯ’

‘ಕಾವೇರಿ ಮತ್ತು ಮಲೆ ಮಹದೇಶ್ವರ ವನ್ಯಜೀವಿಧಾಮಗಳು ಹುಲಿ ಚಿರತೆಯಲ್ಲದೆ ಸೀಳು ನಾಯಿಗಳ ಸಂರಕ್ಷಣೆಗೆ ಉತ್ತಮ ಪ್ರದೇಶ. ಪ್ರಮುಖವಾಗಿ ಕಾವೇರಿ ಮತ್ತು ಪಾಲಾರ್ ನದಿ ಬದಿಯ ಪ್ರದೇಶಗಳು ಇವುಗಳಿಗೆ ಬೇಟೆಯಾಡಲು ಪ್ರಶಸ್ತವಾದ ಸ್ಥಳಗಳು. ಸಾರಂಗ ಕಡವೆ ಕೊಂಡು ಕುರಿಗಳ ಕಳ್ಳಬೇಟೆ ನಿಂತರೆ ಸೀಳು ನಾಯಿಗಳ ಸಂತತಿ ಇಲ್ಲಿ ಇನ್ನೂ ಹೆಚ್ಚಲಿದೆ. ಹಾಗೆಯೇ ಸೀಳು ನಾಯಿಗಳು ಹೆಚ್ಚಾಗಿ ಕಾಣಿಸಿಕೊಳ್ಳುವ ನದಿಬದಿಯ ಕಾಡುಗಳು ಈಗ ಬಳ್ಳಾರಿ ಜಾಲಿ ಗಿಡದಿಂದ ಆವೃತ್ತಗೊಳ್ಳುತ್ತಿವೆ. ಇದನ್ನು ತಕ್ಷಣವೇ ನಿಯಂತ್ರಿಸದಿದ್ದರೆ ನದಿಪಾತ್ರದ ಕಾಡುಗಳೆಲ್ಲ ಬಳ್ಳಾರಿ ಜಾಲಿಯಿಂದ ಸೀಳು ನಾಯಿಗಳ ನೈಸರ್ಗಿಕ ಆವಾಸಸ್ಥಾನ ಹಾಳಾಗಲಿದೆ’ ಎಂದು ವನ್ಯಜೀವಿ ತಜ್ಞ ಡಾ.ಸಂಜಯ್‌ ಗುಬ್ಬಿ ಆತಂಕ ವ್ಯಕ್ತಪಡಿಸಿದರು. 

ಸಂಜಯ್‌ ಗುಬ್ಬಿ
ಸಂಜಯ್‌ ಗುಬ್ಬಿ

ಇಂದು ಕಾರ್ಯಕ್ರಮ

ಪ್ರತಿ ವರ್ಷ ಮೇ 28ರಂದು ವಿಶ್ವ ಕೆನ್ನಾಯಿಗಳ ದಿನ ಎಂದು ಆಚರಿಸಲಾಗುತ್ತದೆ. ಬಿಆರ್‌ಟಿ ಹುಲಿ ಸಂರಕ್ಷಿತ ಪ್ರದೇಶದ ಕೆ.ಗುಡಿ ಅರಣ್ಯ ವಲಯವು ಹೊಂಡರಬಾಳುವಿನ ಜವಾಹರ್‌ ನವೋದಯ ವಿದ್ಯಾಲಯದಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.  ಬೆಳಿಗ್ಗೆ 10.30ಕ್ಕೆ ಶಾಲಾ ಮಕ್ಕಳಿಗೆ ಚಿತ್ರಕಲಾ ಸ್ಪರ್ಧೆ ನಡೆಯಲಿದೆ. ಮಧ್ಯಾಹ್ನ 12 ಗಂಟೆಗೆ ರಾಮಸಮುದ್ರ ರಂಗಜಂಗಮ ಜನಪದ ವೇದಿಕೆಯಿಂದ ಕೆನ್ನಾಯಿಗಳ ಜೀವನ ಕ್ರಮ ಮತ್ತು ಸಂರಕ್ಷಣೆ ಬಗ್ಗೆ ಬೀದಿ ನಾಟಕ ಪ್ರದರ್ಶನ ಏರ್ಪಡಿಸಲಾಗಿದೆ. ಸಂಜೆ 4 ಗಂಟೆಗೆ ವನ್ಯಜೀವಿ ತಜ್ಞ ಡಾ.ಅರುಣ್‌ ವೆಂಕಟರಮಣ್‌ ಅವರು ಸೀಳುನಾಯಿಗಳ ಜೀವನ ಕ್ರಮ ಮತ್ತು ಸಂರಕ್ಷಣೆಗೆ ಬಗ್ಗೆ ವಿಶೇಷ ಉಪನ್ಯಾಸ ನೀಡಲಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT