ಮಂಗಳವಾರ, 18 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವ ಸಿಂಹ ದಿನ: ಸಿಂಹಗಳ ಕೌತುಕ ಜಗತ್ತಿನಲ್ಲೊಂದು ಸುತ್ತು

ಬಿಂಕದಕಟ್ಟಿ ಮೃಗಾಲಯದಲ್ಲಿ ಜನಜಾಗೃತಿ
Last Updated 10 ಆಗಸ್ಟ್ 2021, 1:45 IST
ಅಕ್ಷರ ಗಾತ್ರ

ಗದಗ: ಹಲವು ಅಚ್ಚರಿ ಹಾಗೂ ಕೌತುಕಗಳನ್ನು ಒಡಲಲ್ಲಿಟ್ಟುಕೊಂಡು ಕುರುಚಲು ಕಾಡಿನಲ್ಲಿ ಒಂಟಿಯಾಗಿ ಅಲೆಯುವ ಸಿಂಹಗಳ ಘರ್ಜನೆ ಕ್ರಮೇಣ ಕ್ಷೀಣಿಸುತ್ತಿದೆ. ಕಾಡಿನ ಅತಿಕ್ರಮಣ, ಸಿಂಹಗಳ ಆವಾಸಸ್ಥಾನ ನಾಶದಿಂದಾಗಿ ಅವುಗಳ ಸಂತತಿ ನಶಿಸುತ್ತಿದೆ. ಆಗಸ್ಟ್‌ 10 ಅನ್ನು ವಿಶ್ವ ಸಿಂಹಗಳ ದಿನವನ್ನಾಗಿ ಆಚರಿಸಲಾಗುತ್ತದೆ. ಇದರ ಅಂಗವಾಗಿ ಗದಗ ಮೃಗಾಲಯದಲ್ಲಿ ಸಿಂಹಗಳ ಸಂತತಿ ಉಳಿವಿಗೆ ಅನುಸರಿಸಬೇಕಾದ ಕ್ರಮಗಳ ಕುರಿತಂತೆ ಜನ ಜಾಗೃತಿ ಮೂಡಿಸುವ ಪುಟ್ಟ ಕಾರ್ಯಕ್ರಮ ನಡೆಯಲಿದೆ.

ಸಿಂಹಗಳ ಜೀವನಶೈಲಿ ಹೇಗಿರುತ್ತದೆ? ಹೆಣ್ಣು ಸಿಂಹಗಳಷ್ಟೇ ಏಕೆ ಬೇಟೆಯಾಡುತ್ತವೆ? ಸಿಂಹ ಸೋಮಾರಿ ಪ್ರಾಣಿಯಂತೆ ಹೌದೇ?! ಇಂತಹ ಹತ್ತು ಹಲವು ಕೌತುಕ ವಿಷಯಗಳ ಬಗ್ಗೆ ಗದಗ ಮೃಗಾಲಯದ ಸಿಬ್ಬಂದಿ ನಿಖಿಲ್‌ ಕುಲಕರ್ಣಿ ವಿವರಿಸಿದ್ದಾರೆ.

‘ಸಿಂಹ ಒಂಟಿಯಾಗಿ ಅಡ್ಡಾಡುವ ಜಾಯಮಾನದ ಪ್ರಾಣಿ. ಸಂತಾನೋತ್ಪತ್ತಿ ಸಂದರ್ಭದಲ್ಲಿ ಮಾತ್ರ ಸಂಗಾತಿ ಜತೆಗೆ ಕಾಣಿಸಿಕೊಳ್ಳುತ್ತದೆ. ಗುಜರಾತ್‌ ಗಿರ್‌ ಅರಣ್ಯದಲ್ಲಿ ಅತಿಹೆಚ್ಚು ಸಿಂಹಗಳಿವೆ. ಹಾಗಾಗಿ, ಸಿಂಹ ಗುಜರಾತ್‌ ರಾಜ್ಯದ ಹೆಮ್ಮೆ. ಸಿಂಹಗಳಿಗೆ ದಟ್ಟವಾದ ಅರಣ್ಯ ಪ್ರದೇಶ ಇಷ್ಟವಾಗುವುದಿಲ್ಲ. ಕಲ್ಲು ಬಂಡೆಗಳು, ಕುರುಚಲು ಗಿಡಗಳಿರುವ ಕಾಡುಗಳೆಂದರೆ ಅಚ್ಚುಮೆಚ್ಚು.

ಒಂಟಿಯಾಗಿ ಅಡ್ಡಾಡುವ ಸಿಂಹ ಪರ್ಫ್ಯೂಮ್‌ ಹಾಗೂ ಮೂತ್ರ ಬಳಸುವ ಮೂಲಕ ತನ್ನ ಪ್ರದೇಶದ ಗಡಿ ಗುರುತು ಮಾಡಿಕೊಳ್ಳುತ್ತದೆ. ಒಂಟಿಯಾಗಿ ಅಡ್ಡಾಡುವ ಎಲ್ಲ ಪ್ರಾಣಿಗಳು ಸಹ ಇದೇ ಮಾದರಿ ಅನುಸರಿಸುತ್ತವೆ. ಗಡಿ ದಾಟಿ ಬರುವ ತನ್ನದೇ ಜಾತಿಯ ಪ್ರಾಣಿಗಳೊಂದಿಗೆ ಸಾಯುವಷ್ಟರ ಮಟ್ಟಿಗೆ ಕಾದಾಡುತ್ತವೆ.

ಸಿಂಹ ಬೇಕು ಬೇಕೆಂದಾಗೆಲ್ಲ ಬೇಟೆ ಆಡುವುದಿಲ್ಲ. ಹೊಟ್ಟೆ ಹಸಿವಾದಾಗಷ್ಟೇ ಬೇಟೆಗಿಳಿಯುತ್ತದೆ. ತನ್ನ ವ್ಯಾಪ್ತಿಯೊಳಗಿನ ಪ್ರಾಣಿಗಳನ್ನು ಸುಖಾಸುಮ್ಮನೆ ಬೇಟೆ ಆಡುತ್ತಾ ಹೋದರೆ ಮುಂದೆ ಆಹಾರ ಸಿಗುವುದಿಲ್ಲ ಎಂಬ ಲೆಕ್ಕಾಚಾರ ಕೂಡ ಸಿಂಹದ ತಲೆಯೊಳಗೆ ಓಡುತ್ತಿರುತ್ತದೆ. ಶೇ 90ರಷ್ಟು ಸಿಂಹಗಳಲ್ಲಿ ಹೆಣ್ಣು ಸಿಂಹಗಳೇ ಬೇಟೆ ಆಡುತ್ತವೆ. ಹೆಣ್ಣು ಬೇಟೆ ಆಡಿದ ಪ್ರಾಣಿಯನ್ನು ತಿನ್ನಲು ಗಂಡು ಹಾಜರಿರುತ್ತದೆ! ಅಂದಹಾಗೆ, ಸಿಂಹ ತುಂಬ ಸೋಮಾರಿ. ದಿನದ 24 ಗಂಟೆಗಳಲ್ಲಿ 15ರಿಂದ 16 ಗಂಟೆಗಳ ಕಾಲ ಮಲಗಿಯೇ ಇರುತ್ತದೆ.

ಒಂಟಿ ಸ್ವಭಾದ ಸಿಂಹ ಸಂತಾನಾಭಿವೃದ್ಧಿ ಸಂದರ್ಭದಲ್ಲಿ ಮಾತ್ರ ಸಂಗಾತಿ ಜತೆ ಇರುತ್ತದೆ. ಹೆಣ್ಣು ಸಿಂಹ ಗರ್ಭಧರಿಸಿದ 90 ದಿನಗಳಲ್ಲಿ ಮೂರರಿಂದ ನಾಲ್ಕು ಮರಿಗಳಿಗೆ ಜನ್ಮ ನೀಡುತ್ತದೆ. ಕಾಡಿನಲ್ಲಿರುವ ಸಿಂಹಗಳ ಜೀವಿತಾವಧಿ 15ರಿಂದ 16 ವರ್ಷಗಳು ಮಾತ್ರ. ಸಿಂಹ 13–14ನೇ ವರ್ಷಕ್ಕೆ ಕಾಲಿಡುವ ಸಂದರ್ಭದಿಂದ ಹಲ್ಲುಗಳು ಬೀಳಲು ಶುರುವಾಗುತ್ತದೆ. ಬೇಟೆ ಆಡಲು ಕಷ್ಟ. ಈ ಕಾರಣದಿಂದ ಸಾಯುತ್ತವೆ.

ಆದರೆ, ಮೃಗಾಲಯದಲ್ಲಿರುವ ಸಿಂಹ ಗರಿಷ್ಠ 20 ವರ್ಷಗಳ ಕಾಲ ಬದುಕುತ್ತದೆ. 25 ವರ್ಷಗಳ ಬದುಕಿದ ದಾಖಲೆ ಕೂಡ ಇದೆ. ಮೃಗಾಲಯದಲ್ಲಿರುವ ಸಿಂಹಗಳಿಗೆ ರೆಡಿ ಫುಡ್‌ ಕೊಡುವುದರಿಂದ ಹೆಚ್ಚು ವರ್ಷಗಳ ಕಾಲ ಬದುಕುತ್ತವೆ. ಹಲ್ಲು ಉದುರಿದ ನಂತರ ಬೋನ್‌ಲೆಸ್‌ ಮಾಂಸ, ಕೈಮಾ ಕೊಡಲಾಗುತ್ತದೆ. ಹಾಗಾಗಿ, ಮೃಗಾಲಯದ ಸಿಂಹಗಳು ಹೆಚ್ಚು ವರ್ಷಗಳ ಕಾಲ ಬದುಕುತ್ತವೆ.

ಸಿಂಹಗಳ ಸಂತತಿಯನ್ನು ನಾಶಮಾಡಲು ಅವುಗಳನ್ನು ಬೇಟೆ ಆಡುವುದೇ ಬೇಕಿಲ್ಲ. ಆವಾಸಸ್ಥಾನವನ್ನು ನಾಶ ಮಾಡಿದರೆ
ಸಿಂಹಗಳ ಸಂತತಿ ತಂತಾನೇ ಅವನತಿಯ ಹಾದಿ ಹಿಡಿಯುತ್ತದೆ. ಈ ಕಾರಣದಿಂದಲೇ ಯಾವುದೇ ಒಂದು ಪ್ರಾಣಿ ಬದುಕಲು ಬೇಕಿರುವ ಕನಿಷ್ಠ ಸ್ಥಳಾವಕಾಶವನ್ನು ನಾವು ಒದಗಿಸಿಕೊ‌ಡಬೇಕು. ಸಿಂಹಗಳ ಸಂತತಿ ಉಳಿಸಲು ಅಗತ್ಯವಿರುವ ನಿಸರ್ಗದತ್ತ ಆವಾಸಸ್ಥಾನವನ್ನು ಹಾಳುಮಾಡಬಾರದು’ ಎನ್ನುತ್ತಾರೆ ನಿಖಿಲ್‌.

ಬಿಂಕದಕಟ್ಟಿಯಲ್ಲಿ ಧರ್ಮಾರ್ಜುನ!

ಗದುಗಿನ ಬಿಂಕದಕಟ್ಟಿ ಮೃಗಾಲಯದಲ್ಲಿ ಎರಡು ಸಿಂಹಗಳಿದ್ದು, ಅವುಗಳಿಗೆ ಧರ್ಮ ಮತ್ತು ಅರ್ಜುನ ಎಂದು ಹೆಸರಿಡಲಾಗಿದೆ.

ಬನ್ನೇರುಘಟ್ಟದಿಂದ ಗದುಗಿಗೆ ಸಿಂಹಗಳನ್ನು ಕರೆತರುವ ಮುನ್ನ ಸಿಂಹಗಳ ವಿಹಾರಕ್ಕೆ ಅಗತ್ಯವಿರುವ ಆವಾಸಸ್ಥಾನವನ್ನು ಸೃಷ್ಟಿಸಲಾwಗಿದೆ. 11 ವರ್ಷ ವಯಸ್ಸಿನ ಈ ಸಿಂಹಗಳು ಗದುಗಿನ ವಾತಾವರಣಕ್ಕೆ ಹೊಂದಿಕೊಂಡಿವೆ.

‘ಇಲ್ಲಿರುವ ಸಿಂಹಗಳಿಗೆ ಪ್ರತಿದಿನ 10 ಕೆ.ಜಿ. ದನದ ಮಾಂಸ ಕೊಡಲಾಗುತ್ತದೆ. ಅರಣ್ಯದಲ್ಲಿರುವ ಸಿಂಹಗಳಂತೆ ಮೃಗಾಲಯದ ಸಿಂಹಗಳಿಗೆ ನೈಸರ್ಗಿಕ ವ್ಯಾಯಾಮ ಸಿಗುವುದಿಲ್ಲ. ನಿತ್ಯವೂ ಆಹಾರ ಕೊಟ್ಟರೆ ದೇಹದಲ್ಲಿ ಕೊಬ್ಬಿನಂಶ ಹೆಚ್ಚುತ್ತದೆ. ಇದರಿಂದ ಹೃದಯಾಘಾತವಾಗುವ ಸಾಧ್ಯತೆ ಹೆಚ್ಚು. ಈ ಕಾರಣದಿಂದಾಗಿ ವಾರದಲ್ಲಿ ಒಮ್ಮೆ ಉಪವಾಸ ಮಾಡಿಸುತ್ತೇವೆ’ ಎನ್ನುತ್ತಾರೆ ನಿಖಿಲ್‌ ಕುಲಕರ್ಣಿ.

ವಿಶ್ವ ಸಿಂಹ ದಿನದ ಅಂಗವಾಗಿ ಬುಧವಾರ ಪುಟ್ಟದಾದ ಜನಜಾಗೃತಿ ಕಾರ್ಯಕ್ರಮ ನಡೆಯಲಿದೆ ಎಂದು ಅವರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT