ಮಂಗಳವಾರ, 5 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉರುಳುವ ಮರಗಳಿಗೆ ಊರುಗೋಲು !

Last Updated 12 ಆಗಸ್ಟ್ 2019, 19:30 IST
ಅಕ್ಷರ ಗಾತ್ರ

ಅಭಿವೃದ್ಧಿಯ ಹೆಸರಲ್ಲಿ ಧರೆಗುರುಳುತ್ತಿದ್ದ 150ಕ್ಕೂ ಹೆಚ್ಚು ಮರಗಳಿಗೆ ಮರುಜೀವ ನೀಡಿದ್ದಾರೆ ಧಾರವಾಡದ ಅಸ್ಲಂ ಮತ್ತು ತಂಡ. ‘ನಿಮಗೆ ಮರ ಬೇಡವೆಂದರೆ, ಕಡಿಯಬೇಡಿ. ನಮಗೆ ಹೇಳಿ. ಕೇವಲ ಖರ್ಚು–ವೆಚ್ಚ ಕೊಡಿ. ನಾವು ಅವುಗಳನ್ನು ವರ್ಗಾವಣೆ ಮಾಡಿ ಮರು ನಾಟಿ ಮಾಡುತ್ತೇವೆ’ ಎಂದು ಜನರಲ್ಲಿ ಮನವಿ ಮಾಡುತ್ತಿದ್ದಾರೆ.

ಇವರು ಸಾವಿನ ಅಂಚಿನಲ್ಲಿರುವ ಮರಗಳಿಗೆ ಮರು ಜೀವನ ನೀಡುತ್ತಾರೆ. ಅಭಿವೃದ್ಧಿಯ ರಥದ ಚಕ್ರಕ್ಕೆ ಸಿಕ್ಕುವ ಮರಗಳಿಗೆ ಮರು ಹುಟ್ಟು ನೀಡಿದ್ದಾರೆ. ಸ್ವಯಂ ಪ್ರೇರಿತರಾಗಿ ಮರಗಳನ್ನು ಉಳಿಸಿ ಎಂದು ಜನರಲ್ಲಿ ಬೇಡುತ್ತಾರೆ. ‘ನಿಮ್ಮ ಅಂಗಳದಲ್ಲಿರುವ ಮರಗಳು ಬೇಡ ಎಂದರೆ, ಕತ್ತರಿಸಬೇಡಿ. ನಮಗೆ ತಿಳಿಸಿ. ಕೇವಲ ಕೂಲಿ ಖರ್ಚು ಮತ್ತು ಸಾಗಾಣಿಕೆ ವೆಚ್ಚ ನೀಡಿ. ಉಚಿತವಾಗಿ ಆ ಮರವನ್ನು ಮತ್ತೊಂದೆಡೆ ಸಾಗಿಸಿ ಮರು ನೆಟ್ಟು ಬದುಕಿಸುತ್ತೇನೆ..’ ಎಂದು ಮನವಿ ಮಾಡುತ್ತಾರೆ.

ಹೀಗೆ ‘ಮರ ಜೋಳಿಗೆ ಹಿಡಿದು’ ಸಾಗುತ್ತಾ, ದಶಕದಷ್ಟು ಹಳೆಯದಾದ ನೂರಾರು ಮರಗಳಿಗೆ ಮರು ನಾಟಿ ಮೂಲಕ ಜೀವದಾನ ಮಾಡಿದ್ದಾರೆ ಧಾರವಾಡದ ಅಸ್ಲಂ ಜಹಾನ್‌ ಅಬ್ಬೀಹಾಳ್‌ ಮತ್ತು ತಂಡ. ಇವರ ಪರಿಶ್ರಮದಿಂದಾಗಿ ಧಾರವಾಡ, ಹುಬ್ಬಳ್ಳಿ, ಹಾಗೂ ಬೆಳಗಾವಿಯಲ್ಲಿ ಕಳೆದ 5 ವರ್ಷಗಳಲ್ಲಿ ಜೀವ ಕಳೆದುಕೊಳ್ಳಬೇಕಿದ್ದ ಅರ್ಧ ಶತಮಾನ ದಾಟಿದ 150ಕ್ಕೂ ಹೆಚ್ಚೂ ಮರಗಳು ಮರು ಜೀವ ಪಡೆದಿವೆ. ಅದರಲ್ಲಿ ಮಾವು, ಹಲಸು, ಪೇರಲ, ಶ್ರೀಗಂಧ, ಸಾಗವಾನಿ, ರಕ್ತ ಚಂದನ, ಅತ್ತಿ, ಆಲ, ಬಸರಿ, ಬಾಳೆ, ಹುಣಸೆ, ತೆಂಗು, ನೇರಳೆ, ರೇನ್ ಟ್ರೀ, ಅಶ್ವತ್ಥ ಹೀಗೆ ಹತ್ತಾರು ಪ್ರಜಾತಿಯವು ಇವೆ. ಅಸ್ಲಂ ತಂಡದ ಕಾರ್ಯಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಬಾದಾಮಿ, ಲಕ್ಕುಂಡಿ, ಮುಂಡರಗಿ ಹಾಗೂ ಬೆಳಗಾವಿ ಸೇರಿದಂತೆ ನಾಡಿನ ಮೂಲೆ, ಮೂಲೆಗಳಿಂದ ಆಹ್ವಾನವೂ ಬಂದಿದೆ.

ವಿವಿಧ ವೃತ್ತಿಯ ಪರಿಣತರ ತಂಡ

ಅಸ್ಲಂ ಮೂಲತಃ ವಾಟರ್ ಫ್ರೂಫಿಂಗ್ ಪರಿಣತರು. ಅವರ ತಂಡದಲ್ಲಿ ಮೆಕ್ಯಾನಿಕ್, ಪ್ಲಂಬರ್, ಪೇಂಟರ್, ಅಟೊಮೊಬೈಲ್ ರಿಪೇರರ್, ಡ್ರೈವರ್, ಬಾರ್ ಬೆಂಡರ್, ಕಾರ್ಪೆಂಟರ್, ಎಲೆಕ್ಟ್ರೀಷಿಯನ್.. ಹೀಗೆ ವಿವಿಧ ವೃತ್ತಿಯಲ್ಲಿ ತೊಡಗಿಕೊಂಡ ಗೆಳೆಯರಿದ್ದಾರೆ. ಇವರೆಲ್ಲ ಪ್ರತಿಫಲಾಪೇಕ್ಷೆ ಬಯಸದೇ ಪ್ರತಿ ಶುಕ್ರವಾರದ ರಜಾ ದಿನದಂದು ಮರಗಳನ್ನು ಉಳಿಸಲು ಸಮಯ ಮೀಸಲಿಡುತ್ತಾರೆ. ಕೆಲವೊಮ್ಮೆ ಅರ್ಧ ದಿನ ರಜೆ ಹಾಕಿ, ಒಪ್ಪತ್ತಿನ ಕೂಲಿ ಕಳೆದುಕೊಂಡು ಮರಗಳನ್ನು ಉಳಿಸಿದ ಉದಾಹರಣೆಗಳಿವೆ. ಮರಗಳನ್ನು ಉಳಿಸುವ ಈ ಗೆಳೆಯರು ಕಾರ್ಯ ಪ್ರೇರಣಾದಾಯಿ. ಇಂಥ ಕಾರ್ಯದಲ್ಲಿ ‘ಸಿಕ್ಕಿದ್ದನ್ನೇ’ ಎಲ್ಲರೂ ಖುಷಿಯಿಂದ ಹಂಚಿಕೊಳ್ಳುವ ಗೆಳೆತನ ಕೂಡ ಅನುಕರಣೀಯ.

‘ಕೋಟ್ಯಂತರ ರೂಪಾಯಿ ವೆಚ್ಚದ ರಸ್ತೆ, ಸೇತುವೆ, ಫ್ಲೈ ಓವರ್, ಅಣೆಕಟ್ಟೆ, ಆವಾಸ್ ಯೋಜನೆಗಳು, ಗಟಾರು, ಸೌಧಗಳು.. ಹೀಗೆ ಮೂಲಸೌಕರ್ಯದ ಕಾಮಗಾರಿಗಳಿಗೆ ಪ್ರಸ್ತಾವ ಸಲ್ಲಿಸುತ್ತೇವೆ. ಕಾಮಗಾರಿ ಗಳ ವ್ಯಾಪ್ತಿಯಲ್ಲಿ ಬರುವ ಮರಗಳನ್ನು ಉಳಿಸಿಕೊಳ್ಳಲು ಖರ್ಚು ಅಂದಾಜಿಸುವುದಿಲ್ಲ’ ಎಂದು ಬೇಸರ ವ್ಯಕ್ತಪಡಿಸುವ ಅಸ್ಲಂ, ‘ಕೆಲವು ಯೋಜನೆಗಳಲ್ಲಿ ಮರಗಳ ಮರುನಾಟಿಗೆ ಜಾಗವನ್ನೇ ಪಡೆದಿರುವುದಿಲ್ಲ’ ಎಂದು ಬೊಟ್ಟು ಮಾಡುತ್ತಾರೆ.

ಸಸಿ ನೆಡುವುದರ ಬಗ್ಗೆ ವಿಶ್ಲೇಷಿಸುವ ಅವರು, ‘ಕೇವಲ ಹೊಸ ಸಸಿಗಳನ್ನು ನೆಡುವುದು ಮುಖ್ಯವಲ್ಲ. ಸಾಮುದಾಯಿಕ ಸಹಭಾಗಿತ್ವದಲ್ಲಿ ಹಾಗೂ ವೈಯಕ್ತಿಕ ಶಕ್ತ್ಯಾನುಸಾರ ಎಲ್ಲರೂ ವಯೋವೃದ್ಧ ಮರಗಳನ್ನು ಉಳಿಸಿಕೊಳ್ಳುವ ಪ್ರಯತ್ನ ಮಾಡಬೇಕು. ಅದಕ್ಕಾಗಿ ‘ಮರ ಜೋಳಿಗೆ ಆಂದೋಲನ’ ಹಮ್ಮಿಕೊಳ್ಳಬೇಕಿದೆ’ ಎಂದು ಅಭಿಪ್ರಾಯಪಡುತ್ತಾರೆ.

ಸಂಘಟಿತ ಯತ್ನ ಅಗತ್ಯ

ಎಲ್ಲ ಹಂತಗಳಲ್ಲೂ ಮರ ಉಳಿಸುವ ಕೆಲಸವಾಗಲಿ. ಮನೆ ಕಟ್ಟುವವರು, ನಿವೇಶನಗಳಲ್ಲಿದ್ದ ಮರಗಳನ್ನು ಉಳಿಸಿಕೊಂಡೇ ಪ್ಲಾನ್ ಮಾಡುವಂತೆ, ವಿನ್ಯಾಸಕಾರನಿಗೆ ಸೂಚಿಸಬೇಕು. ಅನಿವಾರ್ಯ ಸಂದರ್ಭಗಳಲ್ಲಿ, ಮರ ಸಾಗಣೆ ಮತ್ತು ಮರು ನಾಟಿ ಖರ್ಚನ್ನೂ, ಮನೆ ಕಟ್ಟುವವರೇ ವಹಿಸಿಕೊಳ್ಳಬೇಕು. ತೆಗೆಯುವ ಮರವನ್ನು ಮರುನಾಟಿ ಮಾಡಲು ನಾವೇ ಜಾಗ ತೋರಿಸಬೇಕು. ಇದು ಪುಣ್ಯ ಸಂಚಯದ ಕಾರ್ಯ ಎಂಬುದು ಅಸ್ಲಂ ಅವರ ದೃಢ ನಿಲುವು.

ಇಂಥ ಧ್ಯೇಯೋದ್ದೇಶಗಳೊಂದಿಗೆ ಕೆಲಸ ಮಾಡುತ್ತಿರುವ ಅಸ್ಲಂ ಹಾಗೂ ಅವರ ಹತ್ತು ಸ್ವಯಂ ಸೇವಕರ ತಂಡ, ಪ್ರತಿ ಭಾನುವಾರ ಮರು ನಾಟಿ ಮಾಡಬೇಕಿರುವ ಮರಗಳ ಸಮೀಕ್ಷೆ ನಡೆಸುತ್ತಾರೆ. ಸಂಬಂಧಿಸಿದವರೊಂದಿಗೆ ಸಮಾಲೋಚಿಸಿ, ಮನವೊಲಿಸುತ್ತಾರೆ. ಅತ್ಯಂತ ಕಡಿಮೆ ಖರ್ಚಿನಲ್ಲಿ ಕಾಮಗಾರಿ ಮುಗಿಸುವ ಭರವಸೆ ನೀಡುತ್ತಾರೆ. ಪಾಲಿಕೆ, ಪೊಲೀಸ್, ಅರಣ್ಯ ಇಲಾಖೆ, ಜಿಲ್ಲಾಡಳಿತ, ಪಿಡಬ್ಲೂಡಿ ಹಾಗೂ ಜೆಸ್ಕಾಂನವರಿಗೆ ವಿಷಯ ತಿಳಿಸಿ, ಸಹಕಾರ ಕೋರುತ್ತಾರೆ. ಪರವಾನಿಗೆ ಪಡೆಯುತ್ತಾರೆ. ಆಸಕ್ತ ಬಡಾವಣೆಗಳ ಸಂಘಗಳ ಪದಾಧಿಕಾರಿಗಳನ್ನು ಸಂಪರ್ಕಿಸಿ ಮರದ ಮರು ನಾಟಿಗಾಗಿ ಜಾಗವನ್ನು ಅಂತಿಮಗೊಳಿಸುತ್ತಾರೆ. ಮರಕ್ಕೆ ಹೆಚ್ಚು ಗಾಯವಾಗಬಾರದು. ಕಾಂಡಕ್ಕೆ ಧಕ್ಕೆಯಾಗಬಾರದು. ಬೇರು ಕಿತ್ತು ಹೋಗದಂತೆ, ನಂಜಾಗಿ ಒಣಗದಂತೆ ಎಚ್ಚರವಹಿಸಬೇಕು. ಕರಾರುವಾಕ್ ಲೆಕ್ಕಾಚಾರದೊಂದಿಗೆ ವೈಜ್ಞಾನಿಕವಾಗಿ ಕಾಮಗಾರಿ ಯಶಸ್ವಿ ಮಾಡಬೇಕು ಎಂಬುದು ಗುರಿಯೊಂದಿಗೆ ಅಸ್ಲಂ ನೇತೃತ್ವದ ತಂಡ ಕಾರ್ಯ ನಿರ್ವಹಿಸುತ್ತದೆ.

ವೈಜ್ಞಾನಿಕವಾಗಿ ಮರುನಾಟಿ

ಮರದ ಕಾಂಡ 2-3 ಮೀಟರ್ ಗಾತ್ರದ್ದಿದ್ದರೆ ಎರಡು ದಿನಗಳು, 3 ಮೀಟರ್‌ಗಿಂತ ದೊಡ್ಡದಿದ್ದರೆ ಐದರಿಂದ ಏಳು ದಿನಗಳು ಮರು ನಾಟಿಗೆ ಬೇಕಾಗಬಹುದು. ಕೆಲವೊಮ್ಮೆ ಈ ಪ್ರಯತ್ನಗಳಲ್ಲಿ ರಾತ್ರಿ ವೇಳೆ ಕೆಲಸ ನಿರ್ವಹಿಸಬೇಕಾದ ಅನಿವಾರ್ಯತೆಯೂ ಇದೆ. ಲಾಭವನ್ನಂತೂ ನಿರೀಕ್ಷಿಸುವಂತಿಲ್ಲ. ಖರ್ಚು ಮೈಮೇಲೆ ಬರದಂತಾದರೆ ಸಾಕು ಎಂಬ ಸ್ಥಿತಿ ಇವರದ್ದು. ಮುಂದಿನ ಪೀಳಿಗೆಗೆ ಹಸಿರು ಹಾಗೂ ನೆಮ್ಮದಿಯ ಉಸಿರುಳಿಸಲು ನಮ್ಮ ಕೈಯಿಂದಾಗುವ ಸೇವೆ ಎಂಬ ವಿನೀತಭಾವ ಅಸ್ಲಂ ಕೈಂಕರ್ಯದ ಹಿಂದಿದೆ.

ಈ ತಂಡ ಮರು ನಾಟಿ ಮಾಡಿರುವ ಎಲ್ಲ ಮರಗಳು ಚಿಗುರೊಡೆದಿವೆ. ಆ ಪೈಕಿ 15 ಮರು ನಾಟಿತ ಮರಗಳನ್ನು ಪೋಷಣೆಗಾಗಿ ಧಾರವಾಡ-ಹುಬ್ಬಳ್ಳಿಯಲ್ಲಿ ಹಲವು ಬಡಾವಣೆಗಳಿಗೆ, ಸಾರ್ವಜನಿಕ ಉದ್ಯಾನಗಳಿಗೆ ದತ್ತು ನೀಡಲಾಗಿದೆ. ಕೇವಲ ₹2 ಸಾವಿರದಿಂದ ₹20 ಸಾವಿರದವರೆಗೆ ಈ ಮರಗಳನ್ನು ಬದುಕಿಸಿಕೊಳ್ಳಲು ವೆಚ್ಚಮಾಡಲಾಗಿದೆ. ಜಿಲ್ಲಾಡಳಿತ, ಸಂಘ-ಸಂಸ್ಥೆಗಳು, ಸರ್ಕಾರೇತರ ಸ್ವಯಂ ಸೇವಾ ಸಂಸ್ಥೆಗಳೂ ಈ ಕಾರ್ಯದಲ್ಲಿ ಹಲವು ರೀತಿ ಕೈಜೋಡಿಸಿವೆ. ಅಸ್ಲಂ ಹಾಗೂ ಅವರ ತಂಡಕ್ಕೆ ನೈತಿಕ ಬಲ ತುಂಬಿವೆ. ಅಸ್ಲಂ ಮತ್ತು ತಂಡದ ಸಂಪರ್ಕಕ್ಕೆ 9483373511

***

‘ಅಶ್ವತ್ಥ ಮರ ಕಡಿಯಲು ₹ 2 ಸಾವಿರ ಸಾಕಾಗಿತ್ತು. ಆದರೆ, 15 ವರ್ಷದ ಮರದಿಂದ ನೆರಳು, ತಂಪಾದ ಗಾಳಿ ಉಂಡಿದ್ದೇವೆ. ಆ ಕೃತಜ್ಞತೆಗಾಗಿ ಮರ ರಕ್ಷಿಸಬೇಕೆನಿಸಿತು. ಆಗ ಅಸ್ಲಂ ತಂಡದ ನೆರವಿನೊಂದಿಗೆ ಕುಸುಗಲ್ ರಸ್ತೆಯ ನಿವೇಶನದಿಂದ ಸಾಗರ ಕಾಲೊನಿ ಉದ್ಯಾನಕ್ಕೆ ಸಾಗಿಸಿ, ಮರು ನಾಟಿ ಮಾಡಿಸಿದೆವು. ₹25 ಸಾವಿರ ಖರ್ಚಾಯಿತು. ಮರಕ್ಕೆ ಜೀವ ನೀಡಿದ ನೆಮ್ಮದಿ ನಮ್ಮ ಕುಟುಂಬಕ್ಕಿದೆ. ಮರ ಉಳಿಸಲು ಸಮಯ ಹಾಗೂ ಶ್ರಮ ದಾನ ಮಾಡಿದವರಿಗೆ ನಮ್ಮ ಕುಟುಂಬ ಋಣಿ’

–ಗೌತಮ್ ಭವರಲಾಲ್ ಜೈನ್, ಉದ್ಯಮಿ, ಹುಬ್ಬಳ್ಳಿ

***

2 ಸಾವಿರ ಖರ್ಚು; 10 ವರ್ಷದ ಮರ ರಕ್ಷಣೆ

ಹುಬ್ಬಳ್ಳಿಯ ಅಕ್ಷಯ ಕಾಲೋನಿ 4ನೇ ಹಂತದಲ್ಲಿರುವ ಅಶೋಕ ಸೋಮಾಪೂರ ಅವರ ಮನೆ ಅಂಗಳದಲ್ಲಿ ನೆಟ್ಟ ರತ್ನಗಿರಿ ಆಪೂಸ್ ಮಾವು ಮರಕ್ಕೆ 10ರ ಹರೆಯ. ನಾಲ್ಕೇ ವರ್ಷಕ್ಕೆ 200-250 ರಸ ಭರಿತ ಹಣ್ಣುಗಳನ್ನು ನೀಡುತ್ತಿದ್ದ ಗಿಡ. ಇತ್ತೀಚೆಗೆ ಮನೆ ನವೀಕರಣದ ಅನಿವಾರ್ಯತೆ ಬಂತು. ಅದಕ್ಕೂ ಮುನ್ನ ಮೊದಲು ಪ್ರೀತಿಯ ಮಾವಿನ ಮರ ಉಳಿಸಿಕೊಳ್ಳಲು ನಿರ್ಣಯ ಮಾಡಿದರು.. ಎರಡೂವರೆ ಸಾವಿರ ರೂಪಾಯಿ ಖರ್ಚಿನೊಂದಿಗೆ, ಕೇವಲ ಎರಡು ತಾಸಿನಲ್ಲಿ ನಿವೇಶನದ ಮತ್ತೊಂದು ಮೂಲೆಗೆ ಜೆಸಿಬಿ ಸಹಾಯದಿಂದ ಮರ ಹೊತ್ತೊಯ್ದು, ಸುರಕ್ಷಿತವಾಗಿ ನೆಡುವಲ್ಲಿ ಯಶಸ್ವಿ. ಈಗಾಗಲೇ ಮುದುಡಿದ ಕೊಂಬೆ, ಎಳೆ ಚಿಗುರು ಸಾವರಿಸಿಕೊಂಡು ಮತ್ತೆ ಜೀವ ತಳೆದಿದೆ! ಮಾಮರ ನೆರಳು ಚೆಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT