ನವದೆಹಲಿ: ದಕ್ಷಿಣದ ರಾಜ್ಯಗಳಲ್ಲಿ ನವೆಂಬರ್‌ನಲ್ಲಿ ದಾಖಲೆಯ ಮಳೆಯಾಗಿದೆ. ಆಂಧ್ರಪ್ರದೇಶದಲ್ಲಿ ಶೇ 156 ರಷ್ಟು ಅಧಿಕ ಮಳೆಯಾಗಿದ್ದರೆ, ಕೇರಳದಲ್ಲಿ ಶೇ 148 ರಷ್ಟು, ತಮಿಳುನಾಡಿನಲ್ಲಿ ಶೇಕಡಾ ಶೇ 115 ರಷ್ಟು ಮಳೆ ಸುರಿದಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಅಂಕಿಅಂಶಗಳು ಹೇಳಿವೆ.
ಕರ್ನಾಟಕದಲ್ಲಿ ನವೆಂಬರ್‌ನಲ್ಲಿ ಶೇ 292 ರಷ್ಟು ಅಧಿಕ ಮಳೆಯಾಗಿದೆ. ದಕ್ಷಿಣ ರಾಜ್ಯಗಳಲ್ಲಿನ ಈ ಮಳೆಗೆ ಈಶಾನ್ಯ ಮಾನ್ಸೂನ್ ಮಾರುತಗಳು ಕಾರಣವಲ್ಲ ಎಂದೂ ಐಎಂಡಿ ತಿಳಿಸಿದೆ.
‘ಒಂದರ ನಂತರ ಒಂದರಂತೆ ಬಂದ ಚಂಡಮಾರುತಗಳು, ಎರಡು ಭಾರಿ ಸಂಭವಿಸಿದ ವಾಯುಭಾರ ಕುಸಿತ, ಕಡಿಮೆ ಒತ್ತಡ ಪ್ರದೇಶಗಳ ಸೃಷ್ಟಿಯ ಕಾರಣಕ್ಕೆ ಸಾಮಾನ್ಯಕ್ಕಿಂತಲೂ ಹೆಚ್ಚು ಮಳೆಯಾಗುತ್ತಿದೆ,‘ ಎಂದು ಐಎಂಡಿಯ ಮುನ್ಸೂಚನೆ ವಿಭಾಗದ ಮುಖ್ಯಸ್ಥ ಡಿ.ಎಸ್ ಪೈ ತಿಳಿಸಿದ್ದಾರೆ.
ನವೆಂಬರ್ ತಿಂಗಳ ವಿಪರೀತ ಮಳೆಯಿಂದಾಗಿ ಭಾರಿ ಪ್ರವಾಹ, ಜೀವಹಾನಿ ಮತ್ತು ಆಸ್ತಿ ಹಾನಿ ಸಂಭವಿಸಿದೆ.
ನವೆಂಬರ್ 26ರ ವರೆಗೆ ಕರ್ನಾಟಕದಲ್ಲಿ ಸುರಿದ ಮಳೆಯು ದೇಶದ ಬೇರೆ ಯಾವುದೇ ರಾಜ್ಯಗಳಿಗಿಂತ ಅಧಿಕ. ಏಕೆಂದರೆ, ದಕ್ಷಿಣ ಕರ್ನಾಟಕದ ಕೆಲವು ಜಿಲ್ಲೆಗಳನ್ನು ಹೊರತುಪಡಿಸಿ ಇತರೆಲ್ಲ ಭಾಗಗಳಿಗೆ ಮಳೆಯಾಗುವುದು ಕೇವಲ ಜೂನ್–ಸೆಪ್ಟೆಂಬರ್ ಅವಧಿಯ ನೈಋತ್ಯ ಮಾನ್ಸೂನ್ ಮಾರುತಗಳ ಕಾಲದಲ್ಲಷ್ಟೇ. ಆದರೆ, ಈ ಬಾರಿ ನವೆಂಬರ್‌ನಲ್ಲೂ ಭಾರಿ ಮಳೆ ಸುರಿದಿದೆ.
ಈಶಾನ್ಯ ಮಾನ್ಸೂನ್ ಮಾರುತಗಳ ಕಾಲದಲ್ಲಿ (ಅಕ್ಟೋಬರ್‌ನಿಂದ –ಡಿಸೆಂಬರ್) ದಕ್ಷಿಣ ಕರ್ನಾಟಕ, ಕೇರಳ, ತಮಿಳುನಾಡು, ಕರಾವಳಿ ಆಂಧ್ರಪ್ರದೇಶ ಮತ್ತು ತೆಲಂಗಾಣದ ಕೆಲವು ಭಾಗಗಳಲ್ಲಿ ಮಳೆಯನ್ನು ತರುತ್ತದೆ.
2015 ರಲ್ಲೂ ತಮಿಳುನಾಡು ಮತ್ತು ಮುಖ್ಯವಾಗಿ ಚೆನ್ನೈಗೆ ಇದೇ ರೀತಿ ಆಗಿತ್ತು. ಆಗಲೂ ವಿಪರೀತ ಮಳೆ ಸುರಿದಿತ್ತು.
ನವೆಂಬರ್ ತಿಂಗಳು ಮುಗಿಯಲು ಇನ್ನೂ ಕೆಲವು ದಿನಗಳು ಬಾಕಿ ಉಳಿದಿವೆ. ಈ ಮಧ್ಯೆ ತಮಿಳುನಾಡು, ಪುದುಚೇರಿ, ಕರೈಕಲ್, ಆಂಧ್ರ ಕರಾವಳಿ, ರಾಯಲ ಸೀಮಾ ಭಾಗಗಳಲ್ಲಿ ಮುಂದಿನ ಕೆಲ ದಿನಗಳ ವರೆಗೆ ಮಳೆಯಾಗುವ ಮನ್ಸೂಚನೆಯನ್ನು ಐಎಂಡಿ ನೀಡಿದೆ.