ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

World Environment Day| ‘ಪರಿಸರವೇ ಅಧ್ಯಾತ್ಮ, ಪರಿಸರವೇ ಪರಮಾತ್ಮ’

ಖಾವಿಧಾರಿ ಶ್ರೀಗಳ ಹಸಿರು ಪ್ರೇಮದ ಫಲ; ನಿಡಸೋಸಿಯಲ್ಲಿ ಹುಲುಸಾಗಿ ಬೆಳೆದಿದೆ ಬಿಲ್ವವನ
Last Updated 5 ಜೂನ್ 2022, 5:15 IST
ಅಕ್ಷರ ಗಾತ್ರ

ಬೆಳಗಾವಿ: ‘ನಮ್ಮೂರಿನ ಸ್ವಾಮೀಜಿಗೆ ಪರಿಸರವೇ ಅಧ್ಯಾತ್ಮ, ಪರಿಸರವೇ ಪರಮಾತ್ಮ. ಖಾವಿ ಧರಿಸಿ ಈ ಊರಿಗೆ ಬಂದಾಗಿನಿಂದ ಅವರು ಮುಟ್ಟಿದ್ದೆಲ್ಲವೂ ಹಸಿರಾಗಿದೆ. ಅವರ ಎಲ್ಲ ಪ್ರವಚನಗಳಲ್ಲೂ ಭಕ್ತಿಗೂ ಮುನ್ನ ಪರಿಸರದ ಕಾಳಜಿ ಇರುತ್ತದೆ...’

ಜಿಲ್ಲೆಯ ಹುಕ್ಕೇರಿ ತಾಲ್ಲೂಕಿನ ನಿಡಸೋಸಿ ಗ್ರಾಮದ ಮಹಾದೇವ ಬ್ಯಾಳಿ, ಸಂಜಯಗೌಡ ಪಾಟೀಲ, ಜಿಂದಾಷಾ ಮಕಾನದಾರ್‌ ಅವರ ಭಕ್ತಿಪೂರ್ವಕ ಮಾತುಗಳಿವು.

ನಿಡಸೋಸಿಯ ದುರದುಂಡೇಶ್ವರ ಸಿದ್ಧಸಂಸ್ಥಾನ ಮಠದ ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ ಅವರು ಪರಿಸರದ ಮೇಲಿಟ್ಟ ಕಳಕಳಿ ಅಪಾರವಾದುದು. ಅವರು ಪೀಠಾಧಿಪತಿಯಾಗಿ ಇಲ್ಲಿಗೆ 33 ವರ್ಷ ಕಳೆದಿದ್ದು, ನಿರಂತರವಾಗಿಅಧ್ಯಾತ್ಮಹಾಗೂಪರಿಸರ ಸೇವೆ ಮುಂದುವರಿಸಿದ್ದಾರೆ. ಶ್ರೀಗಳ ಕಾಳಜಿಯೇ ಈ ಊರನ್ನು ಹಸಿರಾಗಿಸಿದೆ. ತಮ್ಮ ಪಾಡಿಗೆ ತಾವು ಗಿಡ– ಮರಗಳನ್ನು ಬೆಳೆಸುತ್ತ ನಡೆದಾಗ, ಹಲವು ಭಕ್ತರು ಅವರ ಹೆಜ್ಜೆ ಅನುಸರಿಸಿದರು. ಹೀಗಾಗಿ, ಊರಿನಲ್ಲಿ ಪರಿಸರ ಪ್ರೀತಿ ಜೀವನಶೈಲಿಯ ಒಂದು ಭಾಗವಾಗಿದೆ.

ಬಿಲ್ವವನ ಪುನರುಜ್ಜೀವನ: ಸ್ವಾಮೀಜಿ ಅವರ ಪೂರ್ವಾಶ್ರಮ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲ್ಲೂಕಿನ ಕೆ.ಬಿದರೆ. 1989ರಲ್ಲಿ ಸಿಡಸೋಸಿ ಮಠದ 10ನೇ ಪೀಠಾಧಿಪತಿಯಾದರು.

ನಿಡಸೋಸಿಯಲ್ಲಿ ಸುಮಾರು 200 ವರ್ಷಗಳ ಹಿಂದೆ ಚಿಕ್ಕ ಬಿಲ್ವವನ ಇತ್ತು. ಶ್ರೀಗಳು ಈ ಮಠಕ್ಕೆ ಬಂದ ಮೇಲೆ ಅದನ್ನು ಪುನರುಜ್ಜೀವನಗೊಳಿಸುವ ಕನಸು ಕಂಡರು. ನಿರಂತರ ಯತ್ನದ ಫಲವಾಗಿ ವನವೀಗ ದಟ್ಟ ಕಾಡಿನಂತೆ ಬೆಳೆದಿದೆ. ಅಪಾರ ಸಂಖ್ಯೆಯ ಚಿಕ್ಕಪುಟ್ಟ ಸಸಿಗಳ ಜತೆಗೆ, ಬೃಹತ್‌ ಆಗಿ ಬೆಳೆದ 250ಕ್ಕೂ ಹೆಚ್ಚು ಮರಗಳೂ ಇಲ್ಲಿವೆ. ವನದಲ್ಲಿನ ಬಿಲ್ವಪತ್ರಿ ತೆಗೆದುಕೊಳ್ಳಲು ಸುತ್ತಲಿನ ಹಳ್ಳಿಗಳ ಜನ ದಿನವೂ ಬರುತ್ತಾರೆ. ಈ ವನದ ಪಕ್ಕದಲ್ಲಿಯೇ 500 ಸಾಗವಾನಿ ಮರಗಳನ್ನೂ ಬೆಳೆಸಿದ್ದು, ಸುಂದರ ವಾತಾವರಣ ನಿರ್ಮಾಣವಾಗಿದೆ.

‘ಬಿಲ್ವಮರ ಸಾಕ್ಷಾತ್‌ ಶಿವನಿಗೇ ಇಷ್ಟವಾದದ್ದು. ರಾಜ್ಯದಲ್ಲಿ ಕೆಲವು ಕಡೆ ಬಿಡಿಬಿಡಿಯಾಗಿ ಬೆಳೆದ ಬಿಲ್ವ ಮರಗಳನ್ನು ನಾವು ನೋಡಬಹುದು. ಆದರೆ, ಒಂದೇ ಕಡೆ ವನ ನಿರ್ಮಾಣ ಮಾಡಿದ್ದು ಕೆಲವೇ ಕಡೆ. ಅದರಲ್ಲಿ ನಿಡಸೋಸಿಯೂ ಒಂದು. ತುಳಸಿಯಂತೆಯೇ ಬಿಲ್ವ ಪತ್ರಿಯಲ್ಲೂ ಔಷಧೀಯ ಗುಣಗಳಿವೆ. ಹಾಗಾಗಿ, ಹಳ್ಳಿಯ ಜನರೂ ಶ್ರದ್ಧೆಯಿಂದ ಇದನ್ನು ಬೆಳೆಸಿದ್ದಾರೆ’ ಎಂದು ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ಸಸಿಗಳೇ ಕಾಣಿಕೆ: ನಿಡಸೋಸಿ– ಸಂಕೇಶ್ವರ ಮಾರ್ಗದಲ್ಲಿ ವಿವಿಧ ತಳಿಯ 100 ಸಸಿ ನೆಡಲಾಗಿದೆ. ಬೇಸಿಗೆಯಲ್ಲಿ ಭಕ್ತರೇ ಅವುಗಳಿಗೆ ನೀರುಣಿಸಿ ಪೋಷಿಸುತ್ತಾರೆ. ಕಮತನೂರ ಹಾಗೂ ಸಂಕೇಶ್ವರದ ತೋಟಗಳಲ್ಲೂ ಬಿಲ್ವಮರಗಳನ್ನು ಬೆಳೆಸಿದ್ದೇವೆ. ಪ್ರತಿವರ್ಷ ಮಠದಲ್ಲಿ ನಡೆಯುವ ಜಾತ್ರಾ ಮಹೋತ್ಸವದಲ್ಲಿ ಕರ್ನಾಟಕ ಹಾಗೂ ಮಹಾರಾಷ್ಟ್ರದ ಭಕ್ತರು ಸ್ವಯಂಸೇವಕರಾಗಿ ಸೇವೆ ಮಾಡುತ್ತಾರೆ. ಅಂಥವರಿಗೆ ಆಶೀರ್ವಾದ ರೂಪದಲ್ಲಿ ಕರಿಬೇವು, ತೆಂಗು, ಮಾವು ಮತ್ತಿತರ ಸಸಿಗಳನ್ನು ನೀಡುವುದು ನಮ್ಮ ರೂಢಿ ಎನ್ನುತ್ತಾರೆ ಶ್ರೀಗಳು.

78 ವರ್ಷ ವಯಸ್ಸಿನ ಸ್ವಾಮೀಜಿ ಅವರ ಪರಿಸರ ಪ್ರೇಮ ಇಷ್ಟಕ್ಕೇ ನಿಂತಿಲ್ಲ. ಹರಗಾಪುರ ಬಳಿಯ ಮಠದ ಜಾಗದಲ್ಲಿ ಸರ್ಕಾರ ಹಾಗೂ ಸಂಘಟನೆಗಳ ನೆರವಿನೊದಿಗೆ 2000ಕ್ಕೂ ಹೆಚ್ಚು ಗಿಡಗಳನ್ನು ಬೆಳೆಸಿದ್ದಾರೆ ಎನ್ನುತ್ತಾರೆ ಮಠದ ಭಕ್ತ ಮಹಾದೇವ ಬ್ಯಾಳಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT