ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PV Web Exclusive | ಬೆಳ್ಳಂದೂರು: ಎನ್‌ಜಿಟಿಗೇ ಸರ್ಕಾರದಿಂದ ತಪ್ಪು ಮಾಹಿತಿ

ಪ್ರಕೃತಿ ಮಡಿಲು; ಕೆರೆ ಸೌಂದರ್ಯೀಕರಣಕ್ಕೇ ಆಸಕ್ತಿ, ಪುನರುಜ್ಜೀವನಕ್ಕಲ್ಲ
Last Updated 14 ನವೆಂಬರ್ 2020, 10:13 IST
ಅಕ್ಷರ ಗಾತ್ರ

ಬೆಳ್ಳಂದೂರು ಕೆರೆಯ ನೊರೆ, ಬೆಂಕಿಯ ಬೇಗೆ ಬೆಂಗಳೂರಿಗೇ ಮಾತ್ರವಲ್ಲ ರಾಷ್ಟ್ರಮಟ್ಟಕ್ಕೂ ತಟ್ಟಿತ್ತು. ಕೆರೆಗೆ ಬೆಂಕಿ ಬಿದ್ದ ಮೇಲೆ ಅದರ ಶುಚಿ ಮಾಡಿ, ಸ್ವಚ್ಛವಾಗಿಟ್ಟುಕೊಳ್ಳುವ ಭರವಸೆಯನ್ನು ಕೇಂದ್ರ ಪರಿಸರ ಸಚಿವರೂ ಸೇರಿದಂತೆ ಎಲ್ಲರೂ ಹೇಳಿದ್ದರು. ರಾಜ್ಯ ಸರ್ಕಾರ ಈ ನಿಟ್ಟಿನಲ್ಲಿ ಸಾಕಷ್ಟು ಯೋಜನೆಗಳನ್ನು ಪ್ರಕಟಿಸಿತ್ತು. ಆದರೆ, ಬೆಳ್ಳಂದೂರು, ವರ್ತೂರು, ಅಗರ ಕೆರೆಗಳ ಪುನರುಜ್ಜೀವನ ಕಾರ್ಯದಲ್ಲಿ ರಾಷ್ಟ್ರೀಯ ಹಸಿರು ನ್ಯಾಯಮಂಡಳಿಗೇ (ಎನ್‌ಜಿಟಿ) ಸರ್ಕಾರ ತಪ್ಪು ಮಾಹಿತಿ ನೀಡಿದೆ...

ಹೌದು, ಎನ್‌ಜಿಟಿಗೆ ರಾಜ್ಯ ಸರ್ಕಾರ ಸಲ್ಲಿಸಿರುವ ವರದಿಯಲ್ಲಿ ವಾಸ್ತವ ಅಂಶವನ್ನು ಮರೆಮಾಚಲಾಗಿದೆ ಹಾಗೂ ತಪ್ಪು ಮಾಹಿತಿ ನೀಡಲಾಗಿದೆ. ಜವಾಬ್ದಾರಿಗಳ ನಿರ್ಲಕ್ಷ್ಯ, ಪಾರದರ್ಶಕವಲ್ಲದ ಕಾರ್ಯಾಚರಣೆಯಿಂದ ಸಾರ್ವಜನಿಕ ಪರಿಶೀಲನೆಯಿಂದ ತಪ್ಪಿಸಿಕೊಳ್ಳುವ ಅಂಶಗಳು ಸೇರಿವೆ ಎಂದು ಎನ್‌ಜಿಟಿ ನೇಮಕ ಮಾಡಿರುವ ತಜ್ಞರ ಸಮಿತಿಯ ಅಧ್ಯಕ್ಷ ನ್ಯಾ. ಎನ್‌. ಸಂತೋಷ್‌ ಹೆಗ್ಡೆ ಅವರಿಗೆ ಬೆಂಗಳೂರು ಎನ್ವಿರಾನ್ಮೆಂಟ್‌ ಟ್ರಸ್ಟ್‌ (ಬಿಇಟಿ) ಅಧ್ಯಕ್ಷ ಎ.ಎನ್‌. ಯಲ್ಲಪ್ಪರೆಡ್ಡಿ ಪತ್ರ ಬರೆದು,‘ಸಿಟಿಜನ್ಸ್‌ ಅಜೆಂಡಾ ಫಾರ್‌ ಬೆಳ್ಳಂದೂರು/ವರ್ತೂರು ಕ್ಯಾಚ್‌ಮೆಂಟ್’ ಸಮಗ್ರ ತನಿಖಾ ವರದಿಯನ್ನು ಸಲ್ಲಿಸಿದ್ದಾರೆ.

ದೇಶದ ಗಮನವನ್ನು ಸೆಳೆದಿದ್ದ ಬೆಳ್ಳಂದೂರು ಕೆರೆಯ ನೊರೆ–ಬೆಂಕಿಯನ್ನು ನಿಯಂತ್ರಿಸುವಲ್ಲಿ ಅಥವಾ ಮಾಲಿನ್ಯ ನಿಯಂತ್ರಣಕ್ಕೆ ಸರ್ಕಾರ ಕಣ್ಣೊರೆಸುವ ತಂತ್ರವನ್ನಷ್ಟೇ ಅಳವಡಿಸಿಕೊಂಡಿದೆ. ವಾಸ್ತವವಾಗಿ ಯಾವ ಕಾಮಗಾರಿ ಆಗಬೇಕೋ ಅದು ಇಲ್ಲಿ ನಡೆದಿಲ್ಲ. ಎನ್‌ಜಿಟಿಗೆ ಹಲವು ವರ್ಷಗಳಿಂದ ಸಲ್ಲಿಸಿರುವ ಮಾಹಿತಿಗಳು ಬೇಜವಾಬ್ದಾರಿ, ನಿರ್ಲಕ್ಷ್ಯದಿಂದ ಕೂಡಿವೆ. ಸಂಸ್ಕರಿತ ನೀರು ಅತ್ಯಂತ ಪ್ರಮುಖವಾಗಿರುವ ಇಂದಿನ ದಿನಗಳಲ್ಲಿ, ಸಂಸ್ಕರಿಸಿದ ನೀರಿನ ಬಳಕೆಯ ನೀತಿ ಇಲ್ಲದಿರುವುದೇ ದೊಡ್ಡ ಕೊರೆತೆ. ಸಂಸ್ಕರಿಸಿದ ನೀರನ್ನು ಸಣ್ಣ ನೀರಾವರಿ ಇಲಾಖೆಗೆ ಪೂರೈಸಲಾಗುತ್ತಿದೆ ಎಂದು ಹೇಳಲಾಗಿದೆ. ಆದರೆ, ಅದರ ಗುಣಮಟ್ಟದ ಬಗ್ಗೆ ಏನೂ ತಿಳಿಸಿಲ್ಲ. ಇದು ಸರ್ಕಾರದ ಬೇಜವಾಬ್ದಾರಿಯಾಗಿದೆ ಎಂದು ವರದಿ ಬೊಟ್ಟುಮಾಡಿದೆ.

ಬೆಳ್ಳಂದೂರು, ವರ್ತೂರು ಕೆರೆಗಳ ಮಾಲಿನ್ಯ ನಿಯಂತ್ರಿಸಲು ನೂರಾರು ಕೋಟಿ ರೂಪಾಯಿಗಳ ಯೋಜನೆ ಮಾಡಲಾಗಿದೆ. ಆದರೆ, ಈ ಕೆರೆಗಳ ಮಾಲಿನ್ಯ ನಿಯಂತ್ರಣದ ಬದಲು ಆ ಕೆರೆಗಳ ಸೌಂದರ್ಯೀಕರಣ ಕಾಮಗಾರಿಗಳೇ ಹೆಚ್ಚಾಗಿ ಆಗುತ್ತಿವೆ. ಸೌಂದರ್ಯಕ್ಕಿಂತ ಕೆರೆಯ ಪುನರುಜ್ಜೀವನ ಅಗತ್ಯ ಎಂಬ ಸ್ಥಳೀಯರ ವಾದಕ್ಕೆ, ಬಿಇಟಿ ಸಮಗ್ರವಾದ ವಾಸ್ತವ ವರದಿಯನ್ನು ಎನ್‌ಜಿಟಿಗೆ ಸಲ್ಲಿಸಿದೆ.

ಕೋಲಾರ ಹಾಗೂ ಚಿಕ್ಕಬಳ್ಳಾಪುರದ ಕೆರೆಗಳನ್ನು ತುಂಬಿಸುತ್ತಿರುವುದು ಇದೇ ಕೆಸಿ ವ್ಯಾಲಿ. ಅಂದರೆ ಕೋರಮಂಗಲ–ಚೆಲ್ಲಘಟ್ಟ ಕಣಿವೆಯ ಕೆರೆಗಳ ನೀರನ್ನು ಸಂಸ್ಕರಿಸಿ ಪೈಪುಗಳ ಮೂಲಕ ಪೂರೈಸಲಾಗುತ್ತಿದೆ. ಇದಕ್ಕೆ ಬೆಳ್ಳಂದೂರು, ವರ್ತೂರು ಕೆರೆಗಳೇ ಮೂಲ. ಆದರೆ, ತ್ಯಾಜ್ಯ ಅಥವಾ ಮಾಲಿನ್ಯವನ್ನು ಗುಣಮಟ್ಟಕ್ಕೆ ಅನುಸಾರವಾಗಿ ತೆರವು ಮಾಡದೆ ಸಂಸ್ಕರಿಸಿದ ನೀರು ಎಂದು ಕೆರೆಗಳನ್ನು ತುಂಬಿಸಲಾಗುತ್ತಿದೆ. ಈ ಬಗ್ಗೆ ಸೂಕ್ತ ತನಿಖೆಯ ಅಗತ್ಯವೂ ಇದೆ ಎನ್ನುವುದು ಪರಿಸರಪ್ರೇಮಿಗಳ ವಾದ.

ವರದಿಯಲ್ಲಿರುವ 31 ಕಾರ್ಯಸೂಚಿಗಳು

1. ಸಂಸ್ಕರಿಸಿದ ನೀರನ್ನುಬೆಳ್ಳಂದೂರು ಹಾಗೂ ವರ್ತೂರು ಅಚ್ಚುಕಟ್ಟು ಪ್ರದೇಶದಲ್ಲಿ ಬಳಸಿಕೊಳ್ಳಲು ಸ್ಪಷ್ಟ ನೀತಿಯನ್ನು ರಚಿಸಬೇಕು.

2. ಮಡಿವಾಳ ಕೆರೆ ಬಳಿ ಇರುವ ನಿಷ್ಕ್ರಿಯ ಎಸ್‌ಟಿಪಿಯ ಮಾಹಿತಿಯನ್ನು ಎನ್‌ಜಿಟಿ ಗಮನಕ್ಕೆ ತಂದು, ಅದನ್ನು ಸುಸ್ಥಿತಿಗೆ ತರಲು ಕ್ರಿಯಾಯೋಜನೆಯನ್ನು ಸಲ್ಲಿಸಬೇಕು.

3. ಪ್ರತಿ ಎಸ್‌ಟಿಪಿಯ ಕಾರ್ಯನಿರ್ವಹಣಾ ಸಾಮರ್ಥ್ಯವನ್ನು ವಾರಕ್ಕೊಮ್ಮೆ ಕನಿಷ್ಠ, ಗರಿಷ್ಠ ಹಾಗೂ ಸರಾಸರಿಯ ಲೆಕ್ಕ ಹಾಕಬೇಕು. ಸಂಸ್ಕರಿಸಿದ ನೀರಿನ ಬಳಕೆಗೆ ಯೋಜನೆ ರೂಪಿಸಬೇಕು. ಎಲ್ಲ ಮಾಹಿತಿಯನ್ನು ವೆಬ್‌ಸೈಟ್‌ನಲ್ಲಿ ಹಾಕಬೇಕು.

4. ರಾಜಕಾಲುವೆ, ಒಳಚರಂಡಿ ನೀರಿನ ಹರಿವಿನ ಮಟ್ಟ ಹಾಗೂ ಒಳಚರಂಡಿ ಹೂಳು ನಿರ್ವಹಣೆ ಪಾರದರ್ಶಕವಾಗಿರಬೇಕು. ಇವುಗಳ ಮಾಪನ ಮಾಡಿ ನಿರ್ವಹಣೆ ಮಾಡಲು ಮೇಲ್ವಿಚಾರಣಾ ಸಮಿತಿ ರಚಿಸಬೇಕು. ಎಲ್ಲ ಮಾಹಿತಿ ವೆಬ್‌ಸೈಟ್‌ನಲ್ಲಿ ಲಭ್ಯವಿರಬೇಕು.

5. ಸಂಸ್ಕರಿಸಿದ ಒಳಚರಂಡಿ ನೀರಿನ ಗುಣಮಟ್ಟದ ಡೇಟಾವನ್ನು ಸರಾಸರಿ, ಕನಿಷ್ಠ, ಗರಿಷ್ಠದ ಮಾಪನದಲ್ಲಿ ಪರಿಶೀಲಿಸಿ, ಮಾಹಿತಿ ಸಂಗ್ರಹಿಸಿಡಬೇಕು.

6. ಬಿಡಬ್ಲ್ಯುಎಸ್‌ಎಸ್‌ಬಿ ಆನ್‌ಲೈನ್‌ನಲ್ಲಿ ವಾಸ್ತವ ಮೇಲ್ವಿಚಾರಣೆಯ ಡೇಟಾವನ್ನು ನಿಖರವಾಗಿ ದಾಖಲಿಸಬೇಕು.

7. ವಿದ್ಯುತ್‌ ನಿಲುಗಡೆ ಸಮಸ್ಯೆಗೆ ಪರಿಹಾರ ಕಲ್ಪಿಸುವ ಕ್ರಿಯಾಯೋಜನೆ ರೂಪಿಸಬೇಕು. ಅಕ್ರಮವಾಗಿ ತ್ಯಾಜ್ಯ ವಿಲೇವಾರಿ ಮಾಡುವವರ ಮೇಲೆ ಕ್ರಮ ಕೈಗೊಳ್ಳಬೇಕು.

8. ಕೆಎಸ್‌ಪಿಸಿಬಿ / ಸಿಪಿಸಿಬಿ / ಎಲ್‌ಡಿಎಗಳು ಪರಿಹಾರೋಪಾಯಗಳ ಕಾರ್ಯಸಾಧ್ಯತಾ ಅಧ್ಯಯನವನ್ನು ಮೊದಲು ಮಾಡಬೇಕು. ಎನ್‌ಜಿಟಿಯಿಂದ ಆದೇಶ ಪಡೆಯುವುದು ಕಡ್ಡಾಯ.

9. ಬಿಡಬ್ಲ್ಯುಎಸ್‌ಎಸ್‌ಬಿಯ ಲ್ಯಾಬ್‌ಗಳನ್ನು ಕೆಎಸ್‌ಪಿಸಿಬಿ / ಸಿಪಿಸಿಬಿ ಪರಿಶೀಲಿಸಬೇಕು. ಇಟಿಎ ಕಾಯ್ದೆಯ ಮಾನದಂಡಗಳ ಅನುಸಾರ ಕಾರ್ಯನಿರ್ವಹಿಸುವಂತೆ ಮಾಡಬೇಕು.

10. ಹೂಳು ಮತ್ತು ತ್ಯಾಜ್ಯಗಳನ್ನು ಕಾನೂನು ಪ್ರಕಾರ ತಕ್ಷಣದಿಂದ ವಿಲೇವಾರಿ ಮಾಡಬೇಕು.

11. ಜೈವಿಕ ವೈವಿಧ್ಯತೆಗೆ ಅವಕಾಶವಿರುವ ಪ್ರದೇಶವನ್ನು ಬಫರ್‌ ಝೋನ್‌ನಲ್ಲಿ ತಕ್ಷಣವೇ ಗುರುತಿಸಿ (ಚದರ ಅಡಿಗಳಲ್ಲಿ), ಗಿಡಗಳನ್ನು ನೆಡಲು ಪ್ರಾರಂಭಿಸಬೇಕು.

12. ಬೆಳ್ಳಂದೂರು ಮತ್ತು ವರ್ತೂರು ಅಚ್ಚುಕಟ್ಟು ಪ್ರದೇಶದಲ್ಲಿ ರಾಜಕಾಲುವೆಗಳ ಒತ್ತುವರಿ ಸಮಗ್ರ ಮಾಹಿತಿಯನ್ನು ಕಂದಾಯ ಇಲಾಖೆ ಗುರುತಿಸಿ, ನೀಡಬೇಕು. ಬಿಬಿಎಂಪಿ ಈ ಒತ್ತುವರಿ ತೆರವು ಕಾರ್ಯದ ಮಾಹಿತಿಯನ್ನು ತಿಂಗಳಿಗೊಮ್ಮೆ ಎನ್‌ಜಿಟಿಗೆ ಒದಗಿಸಬೇಕು.

13. ಜೀವವೈವಿಧ್ಯ ಉದ್ಯಾನದ ನಿರ್ವಹಣೆಗೆ ಪೂರ್ಣಕಾಲಿಕ ನಿರ್ವಹಣೆಗಾರರನ್ನು ಬಿಬಿಎಂಪಿ/ ಬಿಡಿಎ ನೇಮಿಸಿ, ನಿರ್ವಹಣೆ ಮಾಡಬೇಕು.

14. ಹೂಳು ತೆಗೆಯುತ್ತಿರುವ ಕೆರೆಯ ಮೇಲ್ಭಾಗದಲ್ಲಿ ಉಳಿಯುವ ಚೆಕ್ಕೆ ತುಂಬಾ ಅಪಾಯಕಾರಿ. ಅದನ್ನು ಕೂಡಲೇ ಕಾಯ್ದೆಯಂತೆ ನಿರ್ವಹಣೆ ಮಾಡಬೇಕು.

15. ಬೆಳ್ಳಂದೂರು / ವರ್ತೂರು ಅಚ್ಚುಕಟ್ಟು ಪ್ರದೇಶದಲ್ಲಿರುವ ಅಕ್ರಮ ಕೈಗಾರಿಕೆಗಳ ವರದಿಯನ್ನು ಕೆಎಸ್‌ಪಿಸಿಬಿ ನೀಡಬೇಕು. ಈ ಕೈಗಾರಿಕೆಗಳಿಂದ ಆಗುತ್ತಿರುವ ಮಾಲಿನ್ಯದ ಪ್ರಮಾಣ ಹಾಗೂ ಮಾಲಿನ್ಯ ನಿಯಂತ್ರಣಕ್ಕೆ ಕೈಗೊಳ್ಳಬಹುದಾದ ಕ್ಷಿಪ್ರ ಕ್ರಮದ ಬಗ್ಗೆಯೂ ಕ್ರಿಯಾಯೋಜನೆ ನೀಡಬೇಕು.

16. ಅಕ್ರಮ ಕೈಗಾರಿಕೆಗಳನ್ನು ಗುರುತಿಸುವ ಹಾಗೂ ತೆರವುಮಾಡುವ ಅಭಿಯಾನವನ್ನು ತ್ರೈಮಾಸಿಕಕ್ಕೊಮ್ಮೆ ನಡೆಸಲು ಮೇಲ್ವಿಚಾರಣಾ ಸಮಿತಿಗೆ ನ್ಯಾಯಮಂಡಳಿ ಆದೇಶ ನೀಡಬೇಕು. ಕೆಎಸ್‌ಪಿಸಿಬಿ ಇದಕ್ಕಾಗಿ ಪ್ರತ್ಯೇಕ ಘಟಕ ಮಾಡಬೇಕು. ಸರ್ಕಾರದಿಂದ ಆದೇಶವಾಗಬೇಕು.

17. ವಾಹನಗಳ ಸರ್ವೀಸ್‌ ಸ್ಟೇಷನ್, ಧೋಬಿ ಘಾಟ್‌ ಮತ್ತು ಗಾರ್ಮೆಂಟ್ಸ್‌–ಡೈಯಿಂಗ್‌ ಘಟಕಗಳ ಮೇಲೆ ಕೆಎಸ್‌ಪಿಸಿಬಿ ಮತ್ತು ಮೇಲ್ವಿಚಾರಣಾ ಕಮಿಟಿ ನಿರಂತರ ನಿಗಾವಹಿಸಬೇಕು.

18. ಬೆಳ್ಳಂದೂರು / ವರ್ತೂರು ಅಚ್ಚುಕಟ್ಟು ಪ್ರದೇಶಗಳಲ್ಲಿರುವ ಎಸ್‌ಟಿಬಿ, ಇಟಿಪಿ ಮತ್ತು ಸಿಇಟಿಪಿಗಳ ಮಾಸಿಕ ಅನುಸರಣೆ ವರದಿಯನ್ನು ಕೆಎಸ್‌ಪಿಸಿಬಿ ನೀಡಬೇಕು.

19. ಮಾಲಿನ್ಯ ನಿಯಂತ್ರಣಕ್ಕೆ ಅಗತ್ಯವಾದ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಎಸ್‌ಟಿಬಿ, ಇಟಿಪಿ ಮತ್ತು ಸಿಇಟಿಪಿ ಸೌಲಭ್ಯಗಳ ಮ್ಯಾಕ್ರೊ ಚಿತ್ರಗಳನ್ನು ಕೆಎಸ್‌ಪಿಸಿಬಿ / ಸಿಪಿಸಿಬಿ ಸಿದ್ಧಪಡಿಸಬೇಕು.

20. ಲಾಕ್‌ಡೌನ್‌ಗಿಂತ ಮೊದಲು ಮತ್ತು ನಂತರದ ನೈಜ ಸಮಯದ ಕೆರೆ ನಿರ್ವಹಣೆ ವಿಶ್ಲೇಷಣಾ ವರದಿಯನ್ನು ಕೆಎಸ್‌ಪಿಸಿಬಿ ಬಿಡುಗಡೆ ಮಾಡಬೇಕು.

21. ತ್ಯಾಜ್ಯ ವಿಸರ್ಜನೆ ಮೂಲಗಳನ್ನು ಕಂಡುಹಿಡಿದು, ಮಾಲಿನ್ಯಕಾರಕ ಪಾವತಿ ಕಾಯ್ದೆಯಡಿ ಅವರನ್ನು ಹೊಣೆಗಾರರನ್ನಾಗಿ ಮಾಡಿ ದಂಡ ವಿಧಿಸಬೇಕು.

22. ಎನ್‌ಜಿಟಿ ಆದೇಶದಂತೆ ಕೆಎಸ್‌ಪಿಸಿಬಿ ನೀರಿನ ಗುಣಮಟ್ಟದ ನಿರ್ವಹಣೆ ಕಾರ್ಯಕ್ರಮವನ್ನು ರೂಪಿಸಬೇಕು.

23. ಪಾರದರ್ಶಕತೆ ಹಾಗೂ ಹೊಣೆಗಾರಿಕಗೆ ವೆಬ್‌ಸೈಟ್‌ ಪ್ರಮುಖ ಸಾಧನವಾಗಿದ್ದು, ಇದನ್ನು ನಿರಂತರವಾಗಿ ನವೀಕರಿಸಿ ನಾಗರಿಕರಿಗೆ ಮಾಹಿತಿ ಒದಗಿಸಬೇಕು.

24. ಅಗತ್ಯ ಕೆಲಸ ಮುಗಿದ ಮೇಲೆ ದಿಕ್ಕು ಬದಲಿಸಿದ ಕಾಲುವೆಗಳನ್ನು ತೆಗೆದುಹಾಕಲು ಎನ್‌ಜಿಟಿಯಿಂದ ಮೇಲ್ವಿಚಾರಣಾ ಸಮಿತಿ ಆದೇಶ ಪಡೆಯಬೇಕು.

25. ಪ್ರಸ್ತುತ ಕಾನೂನು ಮತ್ತು ವೈಜ್ಞಾನಿಕ ನೀತಿಯಂತೆ ಉಳಿದಿರುವ ಕೆಲಸಗಳಿಗೆ ಡಿಪಿಆರ್ (ವಿಸ್ತೃತ ಯೋಜನಾ ವರದಿ) ತಯಾರಿಸಬೇಕು. ಈ ಡಿಪಿಆರ್‌ ಸಾರ್ವಜನಿಕ ಸಮಾಲೋಚನೆಗೆ ಒಳಗಾಗಬೇಕು.

26. 1000 ಲೀಟರ್ ನೀರು ಸಂಗ್ರಹಿಸುವ ಘಟಕ ರಚಿಸಲು ₹452 ವೆಚ್ಚವಾಗುತ್ತದೆ. ಈ ವೆಚ್ಚ ಸರಿಯೇ? ಮೇಲ್ವಿಚಾರಣಾ ಸಮಿತಿ ಈ ಬಗ್ಗೆ ವಿಶ್ಲೇಷಣೆ ಮಾಡಿ, ಖಚಿತಪಡಿಸಿಕೊಳ್ಳಬೇಕು.

27. ಬೆಳ್ಳಂದೂರು ಕೆರೆ ಕಲುಷಿತ ತಾಣವೆಂದು ಗುರುತಿಸಲಾಗಿದ್ದು, ಎನ್‌ಜಿಟಿ ಆದೇಶದಲ್ಲಿನ ಮಾರ್ಗಸೂಚಿಯಂತೆ ಹೂಳು ತೆಗೆಯುವ ಕಾಮಗಾರಿ ನಡೆಸಬೇಕು.

28. ಹೈಕೋರ್ಟ್‌ ಆದೇಶದಂತೆ ಕೆರೆ ಸಮಿತಿಯನ್ನು ರಚಿಸಿ, ಲೇಕ್‌ ವಾರ್ಡನ್‌ ಅಥವಾ ಕೆರೆಯ ಮುಖ್ಯ ವಾರ್ಡನ್‌ ಅವರನ್ನು ನೇಮಿಸಬೇಕು. ಬೆಳ್ಳಂದೂರು ಕೆರೆಯ ನಿರ್ವಹಣಾ ಯೋಜನೆಯನ್ನು ಕೆರೆ ಸಮಿತಿಯಿಂದ ಕಡ್ಡಾಯವಾಗಿ ಅನುಮೋದಿಸಿಕೊಳ್ಳಬೇಕು. ಇದೇ ಪ್ರಕ್ರಿಯೆ ಅಗರ ಕೆರೆ ಹಾಗೂ ವರ್ತೂರು ಕೆರೆಯಲ್ಲೂ ಆಗಬೇಕು.

29. ಕಾಲುವೆಗಳನ್ನು ಒತ್ತುವರಿ ಮಾಡಿ, ಕೆರೆಯನ್ನು ಕಲುಷಿತಗೊಳಿಸುವ ಪ್ರಕರಣಗಳಿದ್ದರೆ ಅದನ್ನು ಎನ್‌ಜಿಟಿಯ ಗಮನಕ್ಕೆ ತಂದು ಕ್ರಮ ಕೈಗೊಳ್ಳಬೇಕು. ಈ ಒತ್ತುವರಿಗಳ ತೆರವಿಗೆ ಸೂಕ್ತ ತಾಂತ್ರಿಕ ನೆರವು ಪಡೆದುಕೊಳ್ಳಬೇಕು. ಇದಕ್ಕೆ ಅಧಿಕಾರಿಗಳನ್ನು ಜವಾಬ್ದಾರರನ್ನಾಗಿಸಬೇಕು.

30. ಬೆಂಕಿ ಅವಘಡಗಳನ್ನು ದಾಖಲಿಸಿ, ಪರಿಶೀಲಿಸಬೇಕು. ಕೆರೆ ದಡದಲ್ಲಿರುವ ಘನತ್ಯಾಜ್ಯವನ್ನು ಎನ್‌ಜಿಟಿ ನಿರ್ದೇಶನದ ಮೇರೆಗೂ ತೆರವು ಮಾಡದ ಅಧಿಕಾರಿಗಳಿಗೆ ಹೊಣೆಗಾರಿಕೆ ವಹಿಸಬೇಕು. ದಡದಲ್ಲಿರುವ ಘನತ್ಯಾಜ್ಯದ ಬಗ್ಗೆ ದ್ರೋಣ್‌ ಮೂಲಕ ಸಮೀಕ್ಷೆ ನಡೆಸಬೇಕು.

31. ಗಾಳಿ, ನೀರು, ಕೆಸರು ಹಾಗೂ ಸಸ್ಯ ವರ್ಗಗಳಲ್ಲಿ ಅಪಾಯಕಾರಿ ರಾಸಾಯನಿಕ ಅಂಶಗಳ (ಡೈಯಾಕ್ಸಿನ್‌, ಫೌರಾನ್ಸ್ ಹಾಗೂ ಮೀಥೇನ್‌ ಗ್ಯಾಸ್‌) ಪ್ರಮಾಣವನ್ನು ಕೆಎಸ್‌ಪಿಸಿಬಿ ಪರಿಶೀಲಿಸಲು ತನ್ನ ಪ್ರಯೋಗಾಲಯವನ್ನು ಉನ್ನತೀಕರಿಸಬೇಕು. ವಾಯು ಗುಣಮಟ್ಟ ಮೇಲ್ವಿಚಾರಣಾ ಕೇಂದ್ರವನ್ನು ಸ್ಥಾಪಿಸಿ, ವಾಯು ಗುಣಮಟ್ಟದ ದಾಖಲೆಗಳನ್ನು ಸಂಗ್ರಹಿಸಬೇಕು.

ಸರ್ಕಾರ ನಿದ್ರೆಯಿಂದ ಹೊರಬರಲಿ: ಯಲ್ಲಪ್ಪರೆಡ್ಡಿ
‘ನಮ್ಮ ಸಮಗ್ರ ವರದಿಯಲ್ಲಿ 31 ಕಾರ್ಯಸೂಚಿ ಅಂಶಗಳನ್ನು ಗುರುತಿಸಲಾಗಿದ್ದು, ಸರ್ಕಾರವು ನಿದ್ರೆಯಿಂದ ಹೊರ ಬಂದು ಅವುಗಳನ್ನು ಕಾರ್ಯರೂಪಕ್ಕೆ ತರುತ್ತದೆ ಎಂದು ನಾವು ಭಾವಿಸುತ್ತೇವೆ. ಕೆರೆಗಳ ಸುಂದರೀಕರಣದ ಬದಲು ಪುನರುಜ್ಜೀವನಕ್ಕೆ ಕಾಮಗಾರಿ ನಡೆಸಬೇಕು.ಈ ವರದಿಯಲ್ಲಿ ನೀಡಿರುವ ವಾಸ್ತವ ಮಾಹಿತಿ, ಡೇಟಾ ಮತ್ತು ಒಳನೋಟಗಳನ್ನು ಬಳಸಿಕೊಂಡು ನಾಗರಿಕರು ಅದನ್ನು ಸರ್ಕಾರದಿಂದ ಮಾಡಿಸಿಕೊಳ್ಳಬಹುದು’ ಎನ್ನುತ್ತಾರೆ ಎ.ಎನ್‌. ಯಲ್ಲಪ್ಪರೆಡ್ಡಿ.

‘ಸರ್ಕಾರ, ರಾಜಕೀಯ ಮತ್ತು ಸಾರ್ವಜನಿಕರ ಮನಃಸ್ಥಿತಿ ಕೆರೆಗಳನ್ನು ಸೌಂದರ್ಯೀಕರಣಗೊಳಿಸುವುದೇ ಆಗಿದೆ. ಪುನರುಜ್ಜೀವನದ ಮೇಲೆ ಅವರಿಗೆ ಆಸಕ್ತಿ ಇಲ್ಲ. ಅದರಲ್ಲೂ ಮಾಲಿನ್ಯ ತಡೆಗಟ್ಟುವ ಮಾತು ಇಲ್ಲವೇ ಇಲ್ಲ ಎಂಬುದು ನೋವಿನ ಸಂಗತಿ. ಮಾಲಿನ್ಯವನ್ನು ತೆರವುಗೊಳಿಸಬೇಕಾದ ಪುನರುಜ್ಜೀವನ ಕಾಮಗಾರಿ ಸೌಂದರ್ಯೀಕರಣಕ್ಕೆ ಮೀಸಲಾಗಿದೆ. ಪರಿಸರದಲ್ಲಿ ಮಾಲಿನ್ಯವು ಅತ್ಯಂತ ಸಂಕೀರ್ಣದ ಸ್ವರೂಪದಲ್ಲಿದೆ. ಇದನ್ನು ಹಂತಹಂತವಾಗಿ ನಿರ್ಮೂಲನೆಗೊಳಿಸಲು ತನಿಖೆ ಹಾಗೂ ಸಂಶೋಧನೆ ಅಗತ್ಯ. ನಿರಂತರ ಜಾಗರೂಕತೆಯ ಅಗತ್ಯವಿದೆ’ ಎಂದರು.

‘ಇಂತಹ ಅತ್ಯಂತ ದೊಡ್ಡ ಸಂಕಷ್ಟವನ್ನು ಪರಿಹರಿಸಲು ನಮಗೆ ‘ಉದ್ದೇಶ/ಗುರಿ’ ಬೇಕು. ಸರ್ಕಾರ ಮತ್ತು ರಾಜಕಾರಣಿಗಳ ಆಶಯ ಅತ್ಯಂತ ಪ್ರಮುಖವಾದದ್ದು. ಆದರೆ ಇದ್ಯಾವುದೂ ಇಲ್ಲ. ಸರ್ಕಾರಗಳು ಬದಲಾಗುತ್ತಿರುವುದರಿಂದ ನ್ಯಾಯಾಂಗ ಮತ್ತು ನಾಗರಿಕ ಸಮಾಜಗಳು ಈ ಬಗ್ಗೆ ಕ್ರಮ ಕೈಗೊಳ್ಳಬೇಕಾದ ಅಗತ್ಯವಿದೆ’ ಎಂದು ಯಲ್ಲಪ್ಪರೆಡ್ಡಿ ಅಭಿಪ್ರಾಯಪಟ್ಟರು.

ವರದಿ ಸಲ್ಲಿಸಲು ಎನ್‌ಜಿಟಿ ಸೂಚನೆ
ಬೆಳ್ಳಂದೂರು ಹಾಗೂ ವರ್ತೂರು ಕೆರೆಗಳ ಪುನರುಜ್ಜೀವನ ಕಾರ್ಯದಲ್ಲಿ ಸಾಕಷ್ಟು ಸಮಸ್ಯೆಗಳಿದ್ದು, ಕಾಮಗಾರಿ ಅವೈಜ್ಞಾನಿಕವಾಗಿದೆ ಎಂದು ಬಿಇಟಿ ತಜ್ಞರ ತಂಡ ಸರ್ಕಾರಕ್ಕೆ ವಾಸ್ತವತೆ ಹಾಗೂ ಅಂಕಿ–ಅಂಶಗಳ ವರದಿಯನ್ನು ಸಲ್ಲಿಸಿ, ಸರಿಪಡಿಸಲು ಮನವಿ ಮಾಡಿತ್ತು. 2020ರ ಫೆಬ್ರವರಿಯಲ್ಲಿ ಇತರೆ ತಾಂತ್ರಿಕ ಸಮಿತಿ ಸದಸ್ಯರೊಂದಿಗೆ ಬಹಿರಂಗ ಪತ್ರವನ್ನೂ ಸರ್ಕಾರಕ್ಕೆ ಬರೆದು, ಕಾಮಗಾರಿ ಸ್ಥಗಿತಗೊಳಿಸಿ, ಪ್ರಮುಖವಾದ ಕ್ರಮಗಳನ್ನು ಕೈಗೊಳ್ಳುವಂತೆ ಮನವಿ ಮಾಡಿತು. ಈ ವರದಿಯನ್ನೇ ಎನ್‌ಜಿಟಿಗೂ ಸಲ್ಲಿಸಲಾಯಿತು.

ಎನ್‌ಜಿಟಿ 2020ರ ಆಗಸ್ಟ್‌ 13ರಂದು ಆದೇಶ ಹೊರಡಿಸಿ, ಮೇಲ್ವಿಚಾರಣಾ ಸಮಿತಿ ಈ ಪತ್ರವನ್ನು ಪರಿಗಣಿಸುವಂತೆ ಸೂಚಿಸಿತು. ಇದರಂತೆ ನ್ಯಾ. ಸಂತೋಷ್‌ ಹೆಗ್ಡೆ ನೇತೃತ್ವದ ಮೇಲ್ವಿಚಾರಣಾ ಸಮಿತಿ, 2020ರ ಸೆಪ್ಟೆಂಬರ್‌ 28ರಂದು ವರ್ಚ್ಯುಯಲ್‌ ಸಭೆಯನ್ನು ನಡೆಸಿ, ವರದಿ ಸಲ್ಲಿಸುವಂತೆ ಬಿಇಟಿಗೆ ಸೂಚಿಸಿತು. ಇದರಂತೆ, ಯಲ್ಲಪ್ಪರೆಡ್ಡಿ ನೇತೃತ್ವದ ನಿರ್ಮಲಾ ಗೌಡ, ಡಾ. ನಿಧಿ ಪಲಿವಾಲ್‌ ಅವರನ್ನೊಳಗೊಂಡ ಬಿಇಟಿ ತಂಡ ‘ಸಿಟಿಜನ್ಸ್‌ ಅಜೆಂಡಾ ಫಾರ್‌ ಬೆಳ್ಳಂದೂರು/ವರ್ತೂರು ಕ್ಯಾಚ್‌ಮೆಂಟ್’ ಎಂಬ ಸಮಗ್ರ ಮಾಹಿತಿಯುಳ್ಳ ವರದಿಯನ್ನು ನ್ಯಾ. ಸಂತೋಷ್‌ ಹೆಗ್ಡೆ ಅವರಿಗೆ ನವೆಂಬರ್‌ 7ರಂದು ಇ–ಮೇಲ್‌ ಮೂಲಕ ಕಳುಹಿಸಿಕೊಟ್ಟಿದೆ. ಇದೇ ವರದಿಯನ್ನು ಸರ್ಕಾರದ ಮುಖ್ಯ ಕಾರ್ಯದರ್ಶಿ ಸೇರಿದಂತೆ, ನಗರಾಭಿವೃದ್ಧಿ, ಬಿಡಿಎ, ಬಿಬಿಎಂಪಿ, ಬಿಡಬ್ಲ್ಯುಎಸ್ಎಸ್‌ಬಿ, ಮಾಲಿನ್ಯ ನಿಯಂತ್ರಣ ಮಂಡಳಿ (ಕೆಎಸ್‌ಪಿಸಿಬಿ), ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಗೂ (ಸಿಪಿಸಿಬಿ) ಕಳುಹಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT