ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PV Web Exclusive: ಮುಂಗುಸಿ ಸಂಕುಲಕ್ಕೆ ಅದರ ಬಾಲವೇ ಶತ್ರುವಾಯ್ತು!

Last Updated 24 ಸೆಪ್ಟೆಂಬರ್ 2020, 6:44 IST
ಅಕ್ಷರ ಗಾತ್ರ

‘ಕೇಳಿದ್ದು ಸುಳ್ಳಾಗಬಹುದೂ ನೋಡಿದ್ದು ಸುಳ್ಳಾಗಬಹುದು

ನಿಧಾನಿಸೀ ಯೋಚಿಸಿದಾಗ ನಿಜವು ತಿಳಿವುದೂ...’

–‘ರಾಮ ಲಕ್ಷ್ಮಣ’ ಸಿನಿಮಾದ ಹಾಡು ಇದು. ಈ ಸಾಂಗ್‌ ಕೇಳದ ಕನ್ನಡಿಗರು ವಿರಳ. ಮುಂಗುಸಿಯ ನಿಷ್ಠೆ ಸಾರುವ ಇದನ್ನು ರಚಿಸಿದ್ದು ಚಿ. ಉದಯಶಂಕರ್. ಈ ಹಾಡು ರಚನೆಯಾಗಿ ನಾಲ್ಕು ದಶಕಗಳೇ ಉರುಳಿವೆ. ರಾಜನ್–ನಾಗೇಂದ್ರ ಸಂಗೀತ ಸಂಯೋಜಿಸಿದ್ದ ಇದಕ್ಕೆ ಧ್ವನಿಯಾಗಿರುವುದು ಎಸ್. ಜಾನಕಿ.

ಗಂಗೆ ಮತ್ತು ಮುಂಗುಸಿ ನಡುವಿನ ಮಧುರ ಬಾಂಧವ್ಯ ಕುರಿತು ಆರಂಭವಾಗುವ ಈ ಹಾಡು ಅದರ ಸಾವಿನೊಂದಿಗೆ ಮುಕ್ತಾಯವಾಗುತ್ತದೆ. ನಾಗರಹಾವಿನ ವಿರುದ್ಧದ ದ್ವೇಷದಿಂದ ನಮಗೆಲ್ಲಾ ಮುಂಗುಸಿಗಳು ಹೆಚ್ಚು ಚಿರಪರಿಚಿತ. ಅವು ತನ್ನ ಬಾಲ ಮೇಲೆತ್ತಿಕೊಂಡು ಹಾವಿನೊಟ್ಟಿಗೆ ಕಾದಾಟಕ್ಕೆ ಇಳಿಯುವುದನ್ನು ನೋಡಿದ್ದೇವೆ. ಆದರೆ, ಸಿನಿಮಾಗಳಲ್ಲಿ ತೋರಿಸುವಂತೆ ಎಲ್ಲಾ ಮುಂಗುಸಿಗಳು ಹಾವಿನೊಟ್ಟಿಗೆ ಕದನಕ್ಕೆ ಇಳಿಯುವುದಿಲ್ಲ. ಕೆಲವು ಧೈರ್ಯಶಾಲಿ ತಳಿಗಳಷ್ಟೇ ಕದನಕ್ಕೆ ಇಳಿಯುತ್ತವೆ.

ವಿಶ್ವದಲ್ಲಿ ಸುಮಾರು 30ಕ್ಕೂ ಹೆಚ್ಚು ಪ್ರಭೇದಕ್ಕೆ ಸೇರಿದ ಮುಂಗುಸಿಗಳಿವೆ. ಇವುಗಳ ದೇಹದ ಉದ್ದ 1ರಿಂದ 4 ಅಡಿ. ಕಾಲುಗಳು ಮೋಟವಾಗಿರುತ್ತವೆ. ಹೊಲ, ಗದ್ದೆ, ತೋಟ, ಪೊದೆಗಳಲ್ಲಿ ಸಾಮಾನ್ಯವಾಗಿ ಕಾಣಸಿಗುತ್ತವೆ. ಕಂದು, ಬೂದುಬಣ್ಣದ ಮುಂಗುಸಿಗಳು ಜನರ ಕಣ್ಣಿಗೆ ಬಿದ್ದ ತಕ್ಷಣವೇ ಪೊದೆಗಳಲ್ಲಿ ನುಸುಳಿ ಮರೆಯಾಗುತ್ತವೆ. ಬಿಲಗಳೇ ಇವುಗಳ ಆವಾಸ. ದಂಶಕ ಪ್ರಾಣಿಗಳು, ಸಣ್ಣ ಪಕ್ಷಿಗಳು, ಸರೀಸೃಪ, ಕಪ್ಪೆ, ಕ್ರಿಮಿ–ಕೀಟಗಳನ್ನು ಭಕ್ಷಿಸುತ್ತವೆ.

ಹೆಣ್ಣುಗಳದ್ದೇ ಪಾರುಪತ್ಯ

ಇವು ಸಂಘಜೀವಿಗಳು. ಕೆಲವೊಮ್ಮೆ ಒಂಟಿಯಾಗಿಯೂ ಬದುಕುತ್ತವೆ. ಅವುಗಳ ಜೀವನಶೈಲಿಯೂ ಅಷ್ಟೇ ಕುತೂಹಲಕಾರಿ. ಮುಂಗುಸಿ ಸಂಕುಲದಲ್ಲಿ ಹೆಣ್ಣುಗಳದ್ದೇ ಆಧಿಪತ್ಯ. ಆನೆಗಳಂತೆ ಗುಂಪಿನ ನಾಯಕತ್ವವಹಿಸಿಕೊಳ್ಳುವುದು ಹಿರಿಯ ಹೆಣ್ಣು. ಇವುಗಳದ್ದು ಮಾತೃಪ್ರಧಾನ ವ್ಯವಸ್ಥೆ.

ನಾಯಕಿಯಿಂದ ಬರುವ ಆಜ್ಞೆಗಳನ್ನು ಪಾಲಿಸುವುದಷ್ಟೇ ಗುಂಪಿನ ಉಳಿದ ಸದಸ್ಯರ ಕೆಲಸ. ಗುಂಪಿನ ರಕ್ಷಣೆ ಮಾತ್ರ ಗಂಡಿನದ್ದು. ಹೆಚ್ಚು ಸಾಮರ್ಥ್ಯ ಹೊಂದಿದ ಗಂಡಿನ ಹೆಗಲಿಗೇರುತ್ತದೆ ಈ ಜವಾಬ್ದಾರಿ. ಇದು ಅಪಾಯ ಎದುರಾದಾಗ ಗುಂಪಿನ ಸದಸ್ಯರಿಗೆ ಎಚ್ಚರಿಕೆ ನೀಡುತ್ತದೆ. ಗಂಡು ಮತ್ತು ಹೆಣ್ಣು ಮಿಲನ ಕ್ರಿಯೆ ನಡೆಸುವಾಗ ‘ಕಿಸಿಕಿಸಿ’ ನಗುವಂತಹ ಜೋರಾದ ಸದ್ದು ಕೇಳಿಬರುವುದು ಉಂಟು.

ಬಾಲವೇ ಇವುಗಳಿಗೆ ಆಪತ್ತು

ಮುಂಗುಸಿಗಳ ಕುಚ್ಚು ಕುಚ್ಚಾದ ಬಾಲ ನೋಡಲು ಚೆಂದ. ಇದೇ ಅವುಗಳ ಬದುಕಿಗೂ ಮುಳುವಾಗಿದೆ. ಇವುಗಳ ಕೂದಲು ಬಳಸಿ ಮೇಕಪ್‌ ಬ್ರಷ್‌, ಪೈಂಟ್‌ ಬ್ರಷ್‌ಗಳನ್ನು ತಯಾರಿಸಲಾಗುತ್ತಿದೆ. ದಿ ವೈಲ್ಡ್‌ಲೈಫ್‌ ಕ್ರೈಮ್‌ ಕಂಟ್ರೋಲ್‌ ಬ್ಯೂರೊ(ಡಬ್ಲ್ಯುಸಿಸಿಬಿ) ಮತ್ತು ವೈಲ್ಡ್‌ಲೈಫ್‌ ಟ್ರಸ್ಟ್‌ ಆಫ್‌ ಇಂಡಿಯಾ(ಡಬ್ಲ್ಯುಟಿಐ)ದ ವರದಿ ಪ್ರಕಾರ ಪ್ರತಿವರ್ಷ ಭಾರತದಲ್ಲಿ ಇವುಗಳ ಕೂದಲಿನಿಂದ ಬ್ರಷ್‌ಗಳ‌ ತಯಾರಿಕೆಗಾಗಿಯೇ ಒಂದು ಲಕ್ಷ ಮುಂಗುಸಿಗಳ ಮಾರಣಹೋಮ ನಡೆಯುತ್ತಿದೆ.

ಒಂದು ಮುಂಗುಸಿಯು ಸುಮಾರು 40 ಗ್ರಾಂ‌ನಷ್ಟು ಕೂದಲು ಹೊಂದಿರುತ್ತದೆ. ಈ ಪೈಕಿ ಬ್ರಷ್ ತಯಾರಿಕೆಗೆ ಬಳಕೆಯಾಗುವುದು 20 ಗ್ರಾಂ ಮಾತ್ರ. ಗುಣಮಟ್ಟದ 1 ಕೆಜಿ ಬ್ರಷ್‌ ತಯಾರಿಕೆಗೆ 50 ಮುಂಗುಸಿಗಳ ಗೋಣು ಮುರಿಯಲಾಗುತ್ತಿದೆ.

ವನ್ಯಜೀವಿ ಸಂರಕ್ಷಣಾ ಕಾಯ್ದೆ–1972ರ ಪರಿಚ್ಛೇದ 2ರಲ್ಲಿ ಇವು ಬರುತ್ತವೆ. ಇವುಗಳ ಬೇಟೆ, ಮಾರಾಟ, ಹತ್ಯೆ ನಿಷಿದ್ಧ. ಇವುಗಳನ್ನು ಹತ್ಯೆ ಮಾಡಿದರೆ 3 ವರ್ಷ ಶಿಕ್ಷೆ ಹಾಗೂ ₹ 10 ಸಾವಿರ ದಂಡ ವಿಧಿಸಲು ಕಾನೂನನಡಿ ಅವಕಾಶವಿದೆ. ಆದರೆ, ವನ್ಯಜೀವಿ ವ್ಯಾಪಾರ ಇವುಗಳ ಬದುಕಿಗೆ ಕಂಟಕವಾಗಿ ಪರಿಣಮಿಸಿದೆ.

ರಾಜಸ್ಥಾನ, ಉತ್ತರಪ್ರದೇಶ, ಮಹಾರಾಷ್ಟ್ರ, ತಮಿಳುನಾಡು ಮತ್ತು ಕೇರಳದಲ್ಲಿ ಕೂದಲಿಗಾಗಿಯೇ ಇವುಗಳ ಹತ್ಯೆ ಎಗ್ಗಿಲ್ಲದೆ ನಡೆಯುತ್ತಿದೆ. ತಮಿಳುನಾಡು ಮತ್ತು ಕೇರಳದ ಗಡಿಗೆ ಹೊಂದಿಕೊಂಡಿರುವ ಕರ್ನಾಟಕದ ಜಿಲ್ಲೆಗಳಲ್ಲೂ ಈ ದಂಧೆ ಅವ್ಯಾಹತವಾಗಿದೆ.‌

ಕಂದು ಬಣ್ಣದ ಮುಂಗುಸಿಗಳ ಕೂದಲು ಹೆಚ್ಚಾಗಿ ಬ್ರಷ್‌ಗಳ ತಯಾರಿಕೆಗೆ ಬಳಕೆಯಾಗುತ್ತಿದೆ. ಕ್ಯಾನ್ವಾಸ್‌ ಮೇಲೆ ಚೆಂದದ ಗೆರೆಗಳನ್ನು ಎಳೆಯಲು ಇವುಗಳ ಕೂದಲಿನಿಂದ ತಯಾರಿಸಿದ ಬ್ರಷ್‌ಗಳು ಹೆಚ್ಚು ಸಹಕಾರಿಯಂತೆ. ಇಂದಿಗೂ ಕೆಲವು ವೃತ್ತಿಪರ ಚಿತ್ರಕಾರರು ಇಂತಹ ಬ್ರಷ್‌ಗಳನ್ನು ಬಳಸುತ್ತಾರೆ.ಆದರೆ, ಬಹಳಷ್ಟು ಕಲಾವಿದರಿಗೆ ಇದರ ಬಗ್ಗೆ ಅರಿವು ಕಡಿಮೆ. ದೇಶದಲ್ಲಿ ಇವುಗಳ ಸಂರಕ್ಷಣೆಗಾಗಿ ಮುಂದಾಗಿರುವ ಆರ್ಟಿಸ್ಟ್ ಆಫ್‌ ಅನಿಮಲ್ಸ್‌‌ ಗುಂಪು ‘ಮುಂಗುಸಿ ಕೂದಲಿನಿಂದ ತಯಾರಿಸಿದ ಬ್ರಷ್‌ಗಳಿಗೆ ಗುಡ್‌ ಬೈ’ ಹೇಳುವ ಅಭಿಯಾನ ಆರಂಭಿಸಿದೆ. ಇದಕ್ಕೆ ನೂರಾರು ಕಲಾವಿದರು ಕೈ ಜೋಡಿಸಿದ್ದಾರೆ.

ದಿ ವೈಲ್ಡ್‌ಲೈಫ್‌ ಕ್ರೈಮ್‌ ಕಂಟ್ರೋಲ್‌ ಬ್ಯೂರೊ ‘ಆಪರೇಷನ್‌ ಕ್ಲೀನ್‌ ಆರ್ಟ್’ ಕಾರ್ಯಾಚರಣೆಯನ್ನೂ ಹಮ್ಮಿಕೊಂಡಿದೆ. ಡಬ್ಲ್ಯುಸಿಸಿಬಿ ನೇತೃತ್ವದಡಿ ವೈಲ್ಡ್‌ಲೈಫ್‌ ಟ್ರಸ್ಟ್‌ ಆಫ್‌ ಇಂಡಿಯಾ, ವೈಲ್ಡ್‌ಲೈಫ್ ವೆಲ್‌ಫೇರ್‌ ಅಸೋಸಿಯೇಷನ್‌ ಸೇರಿದಂತೆ ಹಲವು ಸ್ವಯಂಸೇವಾ ಸಂಸ್ಥೆಗಳು ಕಳೆದ ವರ್ಷದ ಅಕ್ಟೋಬರ್‌ನಲ್ಲಿ ಮಹಾರಾಷ್ಟ್ರದ ವಿವಿಧೆಡೆ ದಾಳಿ ನಡೆಸಿದ್ದು ಉಂಟು. ಆ ವೇಳೆ ಮುಂಗುಸಿಯ ಕೂದಲಿನಿಂದ ತಯಾರಿಸಿದ 54,352 ಪೈಂಟ್‌ ಬ್ರಷ್‌ಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಈ ಬ್ರಷ್‌ಗಳ ತೂಕ 113 ಕೆ.ಜಿಯಷ್ಟಿತ್ತು.

ವಿದೇಶಗಳಿಗೂ ಬ್ರಷ್‌ಗಳ ಪೂರೈಕೆ

ಅಮೆರಿಕ, ಯುರೋಪ್‌, ಮಧ್ಯ ಏಷ್ಯಾ ರಾಷ್ಟ್ರಗಳಿಗೂ ಈ ಬ್ರಷ್‌ಗಳು ಪೂರೈಕೆಯಾಗುತ್ತವೆ. ಉರುಳು ಹಾಕಿ ಅಥವಾ ಬಲೆ ಬಳಸಿ ಇವುಗಳನ್ನು ಹಿಡಿಯಲಾಗುತ್ತದೆ. ಮಾಂಸ ತಿನ್ನುವ ಬೇಟೆಗಾರರು, ಕೂದಲನ್ನು ಮಧ್ಯವರ್ತಿಗಳಿಗೆ ಮಾರಾಟ ಮಾಡುತ್ತಾರೆ. ಹಳ್ಳಿಗಳು ಮತ್ತು ಕಾಡಂಚಿನಲ್ಲಿ ಕೂದಲು ಸಂಗ್ರಹಿಸುವ ಮಧ್ಯವರ್ತಿಗಳು ಫ್ಯಾಕ್ಟರಿಗಳಿಗೆ ಮಾರಾಟ ಮಾಡುತ್ತಾರೆ.

ಪ್ರಸ್ತುತ ಆಹಾರ ಜಾಲದಲ್ಲಿನ ದಿಢೀರ್‌ ಬದಲಾವಣೆಯು ಮುಂಗುಸಿ ಸಂಕುಲದ ಕೊರಳು ಬಿಗಿದಿದೆ. ಇವುಗಳ ಆವಾಸ ಕೂಡ ಕಿರಿದಾಗುತ್ತಿದೆ. ಈ ನಡುವೆಯೇ ಬ್ರಷ್‌ಗಳಿಗಾಗಿ ಇವುಗಳ ಹತ್ಯೆ ನಡೆಯುತ್ತಿರುವುದು ದುರಂತ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT