ಶುಕ್ರವಾರ, ಆಗಸ್ಟ್ 6, 2021
21 °C

ಅಣೆಕಟ್ಟು ಎಂಬ ವಿಲನ್ ಕಮ್ ಹೀರೊ

ಗುರುರಾಜ್ ಎಸ್. ದಾವಣಗೆರೆ Updated:

ಅಕ್ಷರ ಗಾತ್ರ : | |

Prajavani

ಕಳೆದ ವರ್ಷದ ಆಗಸ್ಟ್ ತಿಂಗಳ ಮೊದಲನೆಯ ವಾರ. ಕರ್ನಾಟಕ ಮತ್ತು ಮಹಾರಾಷ್ಟ್ರದಲ್ಲಿ ಕಂಡು ಕೇಳರಿಯದ ರಣಭೀಕರ ಮಳೆ ಸುರಿದು ಪ್ರವಾಹ ಪರಿಸ್ಥಿತಿ ಏರ್ಪಟ್ಟಿತ್ತು. ನಮ್ಮಲ್ಲಿ ವಾಡಿಕೆಗಿಂತ 128 ಪಟ್ಟು ಹೆಚ್ಚು ಮಳೆ ಬಿದ್ದಿತ್ತು. ಬೆಳಗಾವಿ ಜಿಲ್ಲೆಯೊಂದರಲ್ಲೇ 658 ಪಟ್ಟು ಹೆಚ್ಚು ಮಳೆ ಸುರಿದು ಆಗಸ್ಟ್ 5ರ ವೇಳೆಗೆ ಆ ಜಿಲ್ಲೆಯ ಎಲ್ಲಾ ಅಣೆಕಟ್ಟುಗಳು ತುಂಬಿ ತುಳುಕುತ್ತಿದ್ದವು. 71 ಜನ ಜೀವ ಕಳೆದುಕೊಂಡಿದ್ದರು. ಸುರಿದ ಮಳೆಗಿಂತ ಅಣೆಕಟ್ಟಿನಿಂದ ಹೊರಬಿಟ್ಟ ನೀರಿನಿಂದ ಪ್ರವಾಹ ತಲೆದೋರಿದ್ದು ವಿಪರ್ಯಾಸವೆನಿಸಿತ್ತು.

ಹಿಡಕಲ್ ಜಲಾಶಯದಿಂದ ಘಟಪ್ರಭ ನದಿಗೆ ಹೆಚ್ಚುವರಿ ನೀರು ಬಿಟ್ಟಿದ್ದರಿಂದ ಜಲಾಶಯದ ಹೊರಹರಿವು ಒಳ ಹರಿವಿಗಿಂತ ಜಾಸ್ತಿಯಾಗಿ, ಅಣೆಕಟ್ಟಿನ ಕೆಳಭಾಗದ ಪ್ರದೇಶಗಳಲ್ಲಿ ಪ್ರವಾಹ ಪರಿಸ್ಥಿತಿ ತಲೆದೋರಿತ್ತು. ಇತ್ತ ಮಲಪ್ರಭಾ ನದಿಗೆ ನಿರ್ಮಿಸಲಾದ ಅಣೆಕಟ್ಟಿನಿಂದಲೂ ಹೆಚ್ಚುವರಿ ನೀರನ್ನು ಹೊರಗೆ ಬಿಡಲಾಯಿತು. ಘೋರ ಮಳೆ ಮತ್ತು ಪ್ರವಾಹದಿಂದ 340 ಹಳ್ಳಿಗಳು ಜಲಾವೃತವಾಗಿದ್ದವು. 11 ಮನೆ ಶಾಶ್ವತ ನೆಲಸಮವಾದರೆ 5,000 ಮನೆಗಳು ಭಾಗಶಃ ಜಖಂಗೊಂಡವು. ಮೂರು ಲಕ್ಷ ಜನರನ್ನು ಸ್ಥಳಾಂತರಿಸಲಾಯಿತು. 53,000 ಜನರನ್ನು ರಕ್ಷಿಸಲಾಯಿತು. ಕರ್ನಾಟಕದಾದ್ಯಂತ ಅರ್ಭಟಿಸಿದ ಮಳೆ 136ಕ್ಕೂ ಹೆಚ್ಚು ಪ್ರಮುಖ ರಸ್ತೆಗಳನ್ನು ಮಾಯ ಮಾಡಿತ್ತು. ನಲವತ್ತು ಸಾವಿರ ಮನೆಗಳು ನೆಲಕ್ಕುರುಳಿ, ಬೆಳೆದಿದ್ದ ಬೆಳೆ ಮುಳುಗಿ ₹ 50 ಸಾವಿರ ಕೋಟಿ ನಷ್ಟವಾಯಿತು. ಜೀವದಾಯಕ ಮಳೆ ಜೀವ ಮತ್ತು ಬದುಕಿನ ಆಸರೆ ಎರಡನ್ನೂ ತಪ್ಪಿಸಿತ್ತು. ತಡೆಯಲೆಂದು ಕಟ್ಟಿದ ಅಣೆಕಟ್ಟುಗಳಿಂದಲೇ ಪ್ರವಾಹ ಉಂಟಾಗಿತ್ತು.

ಹಿಂದೆಲ್ಲಾ ಮಳೆಗಾಲ ಪ್ರಾರಂಭವಾದೊಡನೆ ಇಳೆಯ ಜೀವಕಳೆ ಹೆಚ್ಚುತ್ತಿತ್ತು. ಛಿದ್ರಗೊಂಡ ಹಸಿರಿನ ಹೊದಿಕೆಗೆ ಹೊಲಿಗೆ ಬೀಳುತ್ತಿತ್ತು. ರೈತನಲ್ಲಿ ಸಂಭ್ರಮ ಮನೆ ಮಾಡಿ ಕೃಷಿ ಚಟುವಟಿಕೆ ಪ್ರಾರಂಭಿಸುವ ಉಮೇದು ಹೆಚ್ಚುತ್ತಿತ್ತು. ಸಾಮಾನ್ಯ ಜನರ ದೈನಂದಿನ ಜೀವನಕ್ಕೆ ಹೊಸ ಹುಮ್ಮಸ್ಸು ಮೂಡುತ್ತಿತ್ತು. ಕೃಷಿ ಕೆಲಸಕ್ಕೆ ಬೇಕಾದ ನೀರೊದಗಿಸುವ ಜವಾಬ್ದಾರಿ ಹೊತ್ತ ನಿಗಮ, ಮಂಡಳಿ, ಪ್ರಾಧಿಕಾರದವರು ನಿರುಮ್ಮಳರಾಗುತ್ತಿದ್ದರು. ಕುಡಿಯುವ ಮತ್ತು ಬಳಕೆ ನೀರು ಒದಗಿಸುವ ಪಂಚಾಯಿತಿ, ಪುರ-ನಗರ ಸಭೆಗಳು ‘ಮಳೆ ಚೆನ್ನಾಗಿ ಬಂದದ್ದರಿಂದ ಸದ್ಯ ಬಚಾವಾದೆವು’ ಎಂದು ಗೆಲುವಾಗುತ್ತಿದ್ದರು.

ಈಗ ಪರಿಸ್ಥಿತಿ ಬದಲಾಗಿದೆ. ಮಳೆ ಬೀಳುತ್ತಿಲ್ಲ, ಸುರಿಯುತ್ತಿದೆ, ಇಲ್ಲವೆ ನುಗ್ಗುತ್ತಿದೆ. ವಾಡಿಕೆಗಿಂತ ನೂರಿನ್ನೂರು ಪಟ್ಟು ಜಾಸ್ತಿ ಮಳೆ ಬಂದು ಬೆಳೆದ ಬೆಳೆ, ಕಟ್ಟಿದ ಮನೆ, ಕೆರೆ ಏರಿ, ತಡೆಗೋಡೆಗಳನ್ನೆಲ್ಲ ನುಂಗಿ ಹಾಕಿ ಜನರನ್ನು ಅಕ್ಷರಶಃ ಬೀದಿಗೆ ಬೀಳಿಸುತ್ತಿದೆ. ಸುರಿಯುವ ಧಾರಾಕಾರ ಮಳೆಗೆ ಬೇಕಾದಷ್ಟು ಸ್ಥಳ ನಮ್ಮ ಜಲಾಶಯ – ಅಣೆಕಟ್ಟುಗಳಲ್ಲಿಲ್ಲ. ಹೆಚ್ಚುತ್ತಿರುವ ಹೂಳಿನಿಂದಾಗಿ, ಬಹುತೇಕ ಅಣೆಕಟ್ಟುಗಳ ನೀರು ಸಂಗ್ರಹಣಾ ಪ್ರಮಾಣ ಗಣನೀಯವಾಗಿ ಕಡಿಮೆಯಾಗಿದ್ದು, ಬೀಳುವ ಅರ್ಧ ಮಳೆಗೇ ತುಂಬಿ ಬಿರಿಯುವ ಅಣೆಕಟ್ಟುಗಳ ಸಂಖ್ಯೆ ಹೆಚ್ಚುತ್ತಿದೆ. ಹೆಚ್ಚುವರಿ ನೀರನ್ನು ಹಿಡಿದಿಡಲೆಂದು ನಿರ್ಮಾಣಗೊಂಡಿರುವ ಅಣೆಕಟ್ಟುಗಳೇ, ಅನಿವಾರ್ಯವಾಗಿ ನೀರನ್ನು ಹೊರಬಿಟ್ಟು ಪ್ರವಾಹಗಳನ್ನುಂಟು ಮಾಡುತ್ತಿವೆ. ಪ್ರತೀ ಮಳೆಗಾಲವನ್ನು ಹೇಗಪ್ಪಾ ನಿಭಾಯಿಸುವುದು ಎಂಬ ಆತಂಕಪಡುವ ಅಣೆಕಟ್ಟೆ ನಿರ್ವಹಣಾ ಅಧಿಕಾರಿಗಳು ಹವಾಮಾನ ಇಲಾಖೆಯ ಅಧಿಕ ಮಳೆಯ ಪ್ರಕಟಣೆ ಹೊರಬಿದ್ದಾಗಲೆಲ್ಲ ಗಾಬರಿಗೊಳ್ಳುತ್ತಾರೆ.

ಅದಕ್ಕೆ ಕಾರಣವಿಲ್ಲದಿಲ್ಲ. ಕಳೆದ ಹತ್ತು ವರ್ಷಗಳಲ್ಲಿ ದೇಶಾದ್ಯಂತ ಮಳೆಯಿಂದಾದ ಅನಾಹುತಗಳು ಕಣ್ಣೆದುರಿಗಿವೆ. ಹಿಂದಿನ ವರ್ಷ ಭಾರತದ ಹದಿಮೂರು ರಾಜ್ಯಗಳಲ್ಲಿ ಪ್ರವಾಹ ಪರಿಸ್ಥಿತಿ ಏರ್ಪಟ್ಟಿತ್ತು. ಬಿಹಾರ, ಒಡಿಶಾ, ಕೇರಳ, ಮಹಾರಾಷ್ಟ್ರ, ಕರ್ನಾಟಕ ಹೀಗೆ ಅನೇಕ ರಾಜ್ಯಗಳ ಜನ-ಜಾನುವಾರುಗಳ ಪ್ರಾಣಕ್ಕೆ ಎರವಾದ ಮಳೆ 1850 ಜನರನ್ನು ಬಲಿ ತೆಗೆದುಕೊಂಡಿತ್ತು.

ಕರ್ನಾಟಕವೊಂದರಲ್ಲೇ ಕಳೆದ 25 ವರ್ಷಗಳಲ್ಲಿ ಬರದಿದ್ದ ಮಳೆ ಸುರಿದಿತ್ತು. ಪಕ್ಕದ ಮಹಾರಾಷ್ಟ್ರದಲ್ಲೂ ಪರಿಸ್ಥಿತಿ ಭಿನ್ನವಾಗಿರಲಿಲ್ಲ. ವಾಡಿಕೆಗಿಂತ 400 ಪಟ್ಟು ಹೆಚ್ಚು ಮಳೆ ಸುರಿದು ಅಲ್ಲಿನ ದೊಡ್ಡ ಡ್ಯಾಂ‌ಗಳಾದ ಕೊಯ್ನಾ, ವರ್ನಾ ಮತ್ತು ರಾಧಾನಗರಿಗಳು ಮುಂಗಾರು ಪ್ರಾರಂಭದಲ್ಲೇ ತುಂಬಿ ನೀರು ಅಪಾಯದ ಮಟ್ಟ ತಲುಪಿದ್ದವು. ಸತಾರ, ಸಾಂಗ್ಲಿ, ಕೊಲ್ಹಾಪುರ ಜಿಲ್ಲೆಯಲ್ಲಿರುವ ಈ ಡ್ಯಾಂ‌ಗಳು ಆಗಸ್ಟ್ ತಿಂಗಳ ಮೊದಲ ಎಂಟು ದಿನಗಳಲ್ಲಿ ಸಂಗ್ರಹಣಾ ಸಾಮರ್ಥ್ಯಕ್ಕಿಂತ ಎರಡು ಪಟ್ಟು ಹೆಚ್ಚು ನೀರಿನ ಒಳ ಹರಿವು ಹೊಂದಿದ್ದವು. ಜುಲೈ 2ರಂದು ಒಡೆದು ಹೋದ ರತ್ನಗಿರಿ ಜಿಲ್ಲೆಯ ತಿವಾರೆ ಡ್ಯಾಂ ನೀರು 19 ಜನರನ್ನು ಬಲಿ ಪಡೆದಿತ್ತು. ಈ ಪ್ರವಾಹದ ಪರಿಪಾಟಲು ಕೇವಲ ದಕ್ಷಿಣದ ರಾಜ್ಯಗಳದ್ದಲ್ಲ. ಭಾರತದ ಎಲ್ಲಾ ಭಾಗಗಳಲ್ಲಿ ನಿರ್ಮಿಸಲಾಗಿರುವ ಬಹುತೇಕ ಡ್ಯಾಂ‌ಗಳು ಪ್ರವಾಹ ತಡೆಯುವಲ್ಲಿ ವಿಫಲವಾಗಿದ್ದು, ಹುಟ್ಟುಹಾಕುವಲ್ಲಿ ಯಶಸ್ವಿಯಾಗಿವೆ ಎಂಬ ಆಪಾದನೆ ಇದೆ.

ಕಳೆದ ದಶಕದಲ್ಲಿ ಅಣೆಕಟ್ಟೆಯ ನೀರಿನಿಂದ 26 ಬಾರಿ ಪ್ರವಾಹ ಪರಿಸ್ಥಿತಿ ತಲೆದೋರಿದೆ. ಸಟ್ಲೇಜ್ ನದಿಗೆ ನಿರ್ಮಿಸಲಾಗಿರುವ ಭಾಕ್ರಾನಂಗಲ್, ಬಿಹಾರದ ಕೋಸಿ, ಉತ್ತರಾ ಖಂಡದ ಟೆಹರಿ, ನಾಗಾಲ್ಯಾಂಡ್‍ನ ಡೊಯಾಂಗ್, ಅರುಣಾಚಲಪ್ರದೇಶ ಮತ್ತು ಅಸ್ಸಾಂನ ರಂಗಾ ನದಿ, ಗುಜರಾತ್‍ನ ಉಕಾಯ್, ಒಡಿಶಾದ ಹಿರಾಕುಡ್, ಪಶ್ಚಿಮ ಬಂಗಾಳದ ದಾಮೋದರ್, ತಮಿಳುನಾಡಿನ ಚೆಂಬಾರಾಮಒಡ್ಕಂ, ಮಧ್ಯಪ್ರದೇಶದ ಬನ್‍ಸಾಗರ್ ಜಲಾಶಯಗಳು ಪ್ರವಾಹ ಪರಿಸ್ಥಿತಿ ನಿರ್ಮಿಸಿ ಜನರ ಬದುಕನ್ನು ಕಸಿದುಕೊಂಡಿವೆ.

ಇರದ ಹೊಂದಾಣಿಕೆ –ಇಳಿಯದ ಪ್ರವಾಹ

ಜಲಾನಯನ ಪ್ರದೇಶ ಮತ್ತು ಅಣೆಕಟ್ಟು ನಿರ್ವಹಿಸುವ ಅಧಿಕಾರಿಗಳ ನಡುವೆ ಹೊಂದಾಣಿಕೆ ಮತ್ತು ಸಹಕಾರ ಇಲ್ಲದಿರುವುದು ಪ್ರವಾಹ ಪರಿಸ್ಥಿತಿ ಬಿಗಡಾಯಿಸಲು ಕಾರಣ ಎನ್ನುತ್ತಾರೆ ಮಂಥನ್ ಅಧ್ಯಯನ ಕೇಂದ್ರದ ಶ್ರೀಪಾದ್ ಧರ್ಮಾಧಿಕಾರಿ. ಎರಡೂ ತಾಣಗಳ ಅಧಿಕಾರಿಗಳು ಭಾರತೀಯ ಹವಾಮಾನ ಇಲಾಖೆಯ ಜೊತೆ ಕೆಲಸ ಮಾಡಿ, ಚರ್ಚಿಸಿ ಅವರು ನೀಡುವ ಮಳೆಮಾದರಿಗಳನ್ನು ಅರ್ಥಮಾಡಿಕೊಳ್ಳಬೇಕು. ಆದರೆ ಆ ಕೆಲಸ ಆಗುತ್ತಿಲ್ಲ ಎಂಬುದು ಅವರ ದೂರು.

ಕರ್ನಾಟಕ ಮತ್ತು ಮಹಾರಾಷ್ಟ್ರ ರಾಜ್ಯಗಳಲ್ಲಿನ ಪ್ರವಾಹವನ್ನು ವಿಶ್ಲೇಷಿಸಿರುವ ಸೌತ್ ಏಶಿಯ ನೆಟ್‍ವರ್ಕ್ ಆನ್ ಡ್ಯಾಮ್ಸ್, ರಿವರ್ಸ್ ಅಂಡ್ ಪೀಪಲ್ ಸಂಸ್ಥೆಯು ಜುಲೈ ತಿಂಗಳ ಕೊನೆಯ ವಾರದಿಂದ ಅಣೆಕಟ್ಟುಗಳ ಶೇಕಡ 40 – 45ರಷ್ಟು ಸಂಗ್ರಹವನ್ನು ಖಾಲಿ ಮಾಡಿಕೊಂಡಿದ್ದರೆ ಅಷ್ಟು ದೊಡ್ಡ ಅನಾಹುತವಾಗುತ್ತಿರಲಿಲ್ಲ ಎಂದು ವರದಿ ನೀಡಿದೆ.

ಬೇಸಿಗೆ ಮುಗಿಯುವ ವೇಳೆಗೆ ನಮ್ಮ ಬಹುಪಾಲು ಜಲಾಶಯಗಳು ಒಣಗಿ ಹೋಗಿರುತ್ತವೆ. ಸರಿಯಾಗಿ ಮಳೆಯಾಗದಿದ್ದರೆ ಕೊರತೆ ಎದುರಾಗಬಹುದೆನ್ನುವ ಆತಂಕದಿಂದ ಮಳೆ ಪ್ರಾರಂಭಗೊಳ್ಳುತ್ತಿದ್ದಂತೆ ನೀರಿನ ಸಂಗ್ರಹಣೆ ಶುರುವಾಗುತ್ತದೆ. ಅದೇನೂ ಅಂಥ ಸಮಸ್ಯೆಯಲ್ಲ ಎನ್ನುವ ನೀರಿನ ತಜ್ಞರು ಜಲಾಶಯಗಳಲ್ಲಿ ನೀರು ಸಂಗ್ರಹಿಸಲು, ಹರಿಸಲು ಇರುವ ‘ರೂಲ್ ಕರ್ವ್’ ಸೂತ್ರವನ್ನು ನಮ್ಮ ಡ್ಯಾಂ‌ ಆಪರೇಟರ್‌ಗಳು ಅದನ್ನು ಅನುಸರಿಸುವುದೇ ಇಲ್ಲ ಎಂದು ದೂರುತ್ತಾರೆ. ಅಣೆಕಟ್ಟಿನಲ್ಲಿ ಸಂಗ್ರವಾಗಿರುವ ನೀರನ್ನು ವಿವಿಧ ವಲಯಗಳನ್ನಾಗಿ ವಿಂಗಡಿಸಿ ವಿದ್ಯುತ್ ಉತ್ಪಾದನೆ, ನೀರಾವರಿ, ಬೇಸಿಗೆ ಬೆಳೆ, ಕುಡಿಯುವ ನೀರಿನ ಯೋಜನೆಗಳಿಗೆ ಬೇಕಾಗುವ ನೀರನ್ನು ವರ್ಷಪೂರ್ತಿ ಪೂರೈಸುತ್ತ, ಒಳ -ಹೊರಹರಿವನ್ನು ನಿಭಾಯಿಸುತ್ತ, ಜಲಾಶಯದ ನೀರನ್ನು ಖಾಲಿ ಮಾಡದೆ ಬರ ಮತ್ತು ಪ್ರವಾಹ ಪರಿಸ್ಥಿತಿಗಳನ್ನು ನಿಯಂತ್ರಿಸುವ ಸೂತ್ರವನ್ನು ‘ರೂಲ್ ಕರ್ವ್’ಎನ್ನುತ್ತಾರೆ.

1950ರಷ್ಟು ಹಿಂದೆ ಜಾರಿಗೆ ಬಂದ ‘ರೂಲ್‍ ಕರ್ವ್’ ಈಗ ಹೇಗೆ ಅನ್ವಯವಾಗುತ್ತದೆ. ಆಗ ಇದ್ದ ಮತ್ತು ಈಗ ಇರುವ ಮಳೆಗಾಲವೇ ಬೇರೆ, ಎಪ್ಪತ್ತು ವರ್ಷಗಳ ಹಿಂದಿನ ವಾಯುಗುಣ ಈಗಿಲ್ಲ. ವಾಯುಗುಣ ಬದಲಾದಂತೆ ನಮ್ಮ ನಿರ್ವಹಣಾ ಕ್ರಮಗಳೂ ಬದಲಾಗಬೇಕು ಎಂದು ಒತ್ತಾಯಿಸಿರುವ ಪುಣೆಯ ಪಾರ್ಟಿಸಿಪೇಟಿವ್ ಎಕೊಸಿಸ್ಟಂ ಮ್ಯಾನೇಜ್‍ಮೆಂಟ್‍ನ ಕೆ.ಜೆ. ಜಾಯ್ ಹೊಸ ಡ್ಯಾಂ‌ಗಳ ನಿರ್ಮಾಣದಲ್ಲಾದರೂ ಬದಲಾದ ವಾಯುಗುಣವನ್ನು ಗಮನವಿಟ್ಟುಕೊಂಡು ಕೆಲಸ ಮಾಡಬೇಕು ಎಂದಿದ್ದಾರೆ.

ಡ್ಯಾಂ‌ಗಳ ಪರಿಣಾಮಕಾರಿ ನಿರ್ವಹಣೆಗೆ ಸೂತ್ರ ರೂಪಿಸಿರುವ ಪುಣೆಯ ಹವಾಮಾನ ಇಲಾಖೆ, ದೇಶದ ನೂರಾ ಒಂದು ಜಲಾನಯನ ಪ್ರದೇಶಗಳ ಮಳೆ ಮಾಹಿತಿಯನ್ನು ಡ್ಯಾಂ‌ ಆಪರೇಟರ್‌ಗಳಿಗೆ ತಿಳಿಸುವ ಕೆಲಸವನ್ನು ಕಳೆದ ಆಗಸ್ಟ್‌ನಿಂದಲೇ ಪ್ರಾರಂಭಿಸಿದೆ. ಆದರೆ, ಅವರು ತಿಳಿಸುವ ಮಾಹಿತಿಯನ್ನು ಹೀಗೆ ಉಪಯೋಗಿಸಿಕೊಳ್ಳಬೇಕೆನ್ನುವ ಸಮಗ್ರ ಯೋಜನೆ ಕೇಂದ್ರೀಯ ನೀರು ಪ್ರಾಧಿಕಾರ, ರಾಜ್ಯ ನೀರು ಮಂಡಳಿ ಮತ್ತು ಡ್ಯಾಂ‌ ಅಧಿಕಾರಿಗಳ ಬಳಿ ಇಲ್ಲ ಎಂದು ಸಂಸ್ಥೆ ಹೇಳಿದೆ.

ಸ್ಥಿತಿಗತಿ ಮತ್ತು ಪರಿಹಾರ

ದೇಶದಲ್ಲಿ 5,745 ದೊಡ್ಡ ಡ್ಯಾಂ‌ಗಳಿವೆ. ಅವುಗಳಲ್ಲಿ 293 ನೂರು ವರ್ಷ ಹಳೆಯವು. ಶೇಕಡ 25ರ ವಯಸ್ಸು 50ರಿಂದ 100 ರ ಒಳಗಿದೆ. ಇನ್ನೈದು ವರ್ಷಗಳಲ್ಲಿ 301 ಡ್ಯಾಂಗಳಿಗೆ 75 ವರ್ಷ ವಯಸ್ಸಾಗುತ್ತದೆ. ನಮ್ಮ ಡ್ಯಾಂ‌ಗಳನ್ನು ನೂರು ವರ್ಷಗಳಿಗೆ ವಿನ್ಯಾಸಗೊಳಿಸಲಾಗಿದೆ ಎಂದಿರುವ ಎಕನಾಮಿಕ್ ಅಂಡ್ ಪೊಲಿಟಿಕಲ್ ವೀಕ್ಲಿ, ಕಾಲಕ್ರಮೇಣ ಅಣೆಕಟ್ಟಿಗೆ ಬಳಸಲಾಗಿರುವ ಉಕ್ಕು, ಸಿಮೆಂಟು ಶಕ್ತಿ ಕಳೆದುಕೊಂಡು ಅಪಾಯ ಎದುರಾಗುತ್ತದೆ ಎಂದಿದೆ.

ಇದನ್ನು ಸಾರಾಸಗಟಾಗಿ ತಿರಸ್ಕರಿಸಿರುವ ಕೇಂದ್ರೀಯ ಜಲ ಪ್ರಾಧಿಕಾರ ಡ್ಯಾಂ‌ನ ವಯಸ್ಸಿಗೂ, ಪ್ರವಾಹ ಪರಿಸ್ಥಿತಿಗೂ ಯಾವ ಸಂಬಂಧವೂ ಇಲ್ಲ ಎಂದು ಹೇಳಿ, ಶೇಕಡ 45ರಷ್ಟು ಅಣೆಕಟ್ಟುಗಳಲ್ಲಿ ಸಮಸ್ಯೆ ಎದುರಾದದ್ದು ನಿಜ. ಆದರೆ, ಅದು ಕಟ್ಟಿದ ಮೊದಲ ಐದು ವರ್ಷಗಳಲ್ಲಿ ಮಾತ್ರ. 50 ರಿಂದ 100 ವರ್ಷದೊಳಗಿನ ಅಣೆಕಟ್ಟುಗಳ ವೈಫಲ್ಯ ಶೇಕಡ 16 ರಷ್ಟಿದ್ದರೆ, ನೂರು ದಾಟಿದ ಅಣೆಕಟ್ಟೆಗಳ ವೈಫಲ್ಯ ಕೇವಲ ಶೇಕಡ 5.5 ರಷ್ಟು ಎಂಬ ಅಂಕಿ ಅಂಶ ನೀಡಿದೆ.

ಕೇಂದ್ರೀಯ ಜಲ ಪ್ರಾಧಿಕಾರದ ಡ್ಯಾಂ‌ ಸುರಕ್ಷಾ ತಜ್ಞ ಗುಲ್ಶನ್ ರಾಜ್ ಪ್ರಕಾರ ಪ್ರತಿಯೊಂದು ಜಲಾಶಯಕ್ಕೂ ತನ್ನದೇ ಆದ ನಿರ್ವಹಣಾ ಕೈಪಿಡಿ ಇರಬೇಕು. ಅದಕ್ಕೆಂದೇ 2019ರಲ್ಲಿ ‘ಡ್ಯಾಮ್ ಸೇಫ್ಟಿ ಬಿಲ್’ ಅನ್ನು ಲೋಕಸಭೆಯಲ್ಲಿ ಪಾಸ್ ಮಾಡಲಾಗಿದೆ. ಕನಿಷ್ಠ ಪಕ್ಷ ‘ರೂಲ್ ಕರ್ವ್’ನ್ನಾದರೂ ಅನುಸರಿಸಿದರೆ ಅಣೆಕಟ್ಟುಗಳಲ್ಲಿ ಉಂಟಾಗುವ ಪ್ರವಾಹ ಕಡಿಮೆಯಾಗಿ ಅವುಗಳ ಬಗೆಗೆ ಹೆಚ್ಚುತ್ತಿರುವ ಕುಖ್ಯಾತಿ ಕಡಿಮೆಯಾಗಬಹುದು ಎಂದಿದ್ದಾರೆ. ಕಾಯ್ದೆಯಲ್ಲಿ ಡ್ಯಾಂನ ಕಣ್ಗಾವಲು, ತಪಾಸಣೆ, ನಿರ್ವಹಣೆ ಮತ್ತು ಕಾರ್ಯಾಚರಣೆಗೆ ಮಾತ್ರ ಒತ್ತು ನೀಡಿ ಪ್ರವಾಹ ನಿಯಂತ್ರಣಕ್ಕೆ ಯಾವುದೇ ಸ್ಪಷ್ಟ ನಿಯಮಗಳಿಲ್ಲದಿರುವುದರಿಂದ ಅದು ರಾಜ್ಯಸಭೆಯಲ್ಲಿ ಇನ್ನೂ ಪಾಸ್ ಆಗಿಲ್ಲ.

ಅಣೆಕಟ್ಟಿನಿಂದಾಗುವ ಪ್ರವಾಹದ ಶಾಶ್ವತ ಪರಿಹಾರಕ್ಕೆ ಇರುವ ಎಲ್ಲ ನದಿಗಳನ್ನು ಕಾಲುವೆಕರಣ (ಕೆನಾಲೈಸಷನ್) ಮಾಡಬೇಕು ಎಂದಿರುವ ಪಂಜಾಬಿನ ಮುಖ್ಯಮಂತ್ರಿ ಅಮರೀಂದರ್ ಸಿಂಗ್ ತಮ್ಮ ರಾಜ್ಯದಲ್ಲಿ ಆ ಕ್ರಮಕ್ಕೆ ಮುಂದಾಗಿದ್ದಾರೆ. ಇದು ಸರಿಯಾದ ಕ್ರಮವಲ್ಲ, ನದಿ ಕೇವಲ ನೀರು ಸಾಗಿಸುವ ವಾಹಕವಲ್ಲ, ಅದಕ್ಕೆ ತನ್ನದೇ ಆದ ಜೈವಿಕ ಪರಿಸರ, ಸಾಂಸ್ಕೃತಿಕ, ಭೌಗೋಳಿಕ, ನಾಗರಿಕ ಆಯಾಮಗಳಿವೆ. ನದಿಗೆ ತನ್ನದೇ ಆದ ಜಾಗ ಬೇಕಾಗುತ್ತದೆ. ಅದನ್ನು ಯಾವ ಕಾರಣಕ್ಕೂ ಕಡಿಮೆ ಮಾಡಬಾರದು ಮತ್ತು ಅದರ ಸ್ವರೂಪ ಕೆಡಿಸಬಾರದು ಎಂದಿರುವ ಯಮುನಾ ಪುನಶ್ಚೇತನ ಅಭಿಯಾನದ ಮನೋಜ್ ಮಿಶ್ರ ಬಿಹಾರದ ಕೋಸಿ ನದಿಯ ವಿಷಯದಲ್ಲೇನಾಗಿದೆ ಎಂಬುದನ್ನು ಮರೆಯಬಾರದು ಎಂದು ಅಗ್ರಹಿಸಿದ್ದಾರೆ.

ಕರ್ನಾಟಕದ ಕೆರೆಗಳ ಭಗೀರಥ ಎಂದೇ ಖ್ಯಾತರಾಗಿರುವ ಶಿವಾನಂದ ಕಳವೆ ‘ಪ್ರವಾಹಗಳಿಗೆ ಅಣೆಕಟ್ಟುಗಳನ್ನು ದೂರುವುದು ಸರಿಯಲ್ಲ. ಭತ್ತ, ಬಾಳೆ, ಅಡಿಕೆ ಮತ್ತು ಕಬ್ಬಿನ ಬೆಳೆಗಳಿಗೆ ಸದಾ ನೀರು ನೀಡಿ ಕೋಟ್ಯಂತರ ಜನರ ಹೊಟ್ಟೆ ತುಂಬಿಸುವಲ್ಲಿ ಅವುಗಳ ಪಾತ್ರ ದೊಡ್ಡದಿದೆ’ ಎನ್ನುತ್ತಾರೆ.

‘ಸರಣಿ ಕೆರೆಗಳನ್ನು ಪುನಶ್ಚೇತನಗೊಳಿಸಿ, ನೀರು ಹರಿಸಿ, ನುಗ್ಗುವ ಪ್ರವಾಹದ ನೀರಿನ ಪ್ರಮಾಣ ಕಡಿಮೆ ಮಾಡಬಹುದು. ವಿಕೇಂದ್ರೀಕೃತ ನೀರಾವರಿ ವ್ಯವಸ್ಥೆಯಿಂದ ಅಣೆಕಟ್ಟೆಯಿಂದ ನುಗ್ಗುವ ನೀರನ್ನು ತಡೆಯಬಹುದು ಮತ್ತು ಬಿದ್ದ ಮಳೆ ಹನಿಯನ್ನು ಬಿದ್ದಲ್ಲಿಯೆ ಬಳಸಿಕೊಳ್ಳುವ ಇನ್-ಸಿಟು ಕ್ರಮವನ್ನು ನಮ್ಮ ರೈತರಿಗೆ ಹೇಳಿಕೊಟ್ಟು ಮಳೆಗಾಲದ ಪ್ರವಾಹ ಪರಿಸ್ಥಿತಿಯನ್ನು ಯಶಸ್ವಿಯಾಗಿ ನಿರ್ವಹಿಸಬಹುದು’ ಎನ್ನುವ ಅವರು, ಪ್ರವಾಹದ ಜೊತೆ ಬದುಕು ಕಟ್ಟಿಕೊಳ್ಳಬೇಕೇ ಹೊರತು ಅದರ ವಿರುದ್ಧ ನಿಲ್ಲುವುದು ಆಗದ ಕೆಲಸ ಎಂದು ಅಭಿಪ್ರಾಯಪಡುತ್ತಾರೆ. ‘1978 ರ ನಂತರ ಹೊಸಕೆರೆಗಳನ್ನು ನಾವು ನಿರ್ಮಿಸಿಲ್ಲ. ಈಗ ಅದಕ್ಕೆ ಅವಕಾಶವಿದೆ ಎಂದಿರುವ ಅವರು ರೈತನ ಹೊಲದಲ್ಲಿ ಬೀಳುವ ಮಳೆಯ ಆಡಿಟ್ ಆಗಬೇಕು’ ಎಂದು ಸಲಹೆ ನೀಡುತ್ತಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು