ಬುಧವಾರ, ಅಕ್ಟೋಬರ್ 28, 2020
25 °C

PV Web Exclusive: ಇದು ದೇವರಕಾಡು...

ರಾಮಕೃಷ್ಣ ಸಿದ್ರಪಾಲ Updated:

ಅಕ್ಷರ ಗಾತ್ರ : | |

Prajavani

ನಮ್ಮ ಸುತ್ತಮುತ್ತ ರಮಣೀಯ ತಾಣಗಳು ಅನೇಕ. ಅಂಥವುಗಳಲ್ಲಿ ಧಾರವಾಡ ಜಿಲ್ಲಾ ವ್ಯಾಪ್ತಿಯ ಕಲಘಟಗಿ ತಾಲ್ಲೂಕಿನ ‘ದೇವರಕಾಡು’ ಎಂದು ಕರೆಯುವ ಬೂದನಗುಡ್ಡವೂ ಒಂದು. ಇದು ಜಿಲ್ಲೆಯ ಪ್ರಮುಖ ಬೆಟ್ಟದ ಶ್ರೇಣಿಯಾಗಿದೆ. ಈ ತಾಣದಲ್ಲಿ ಸುಮಾರು 12ನೇ ಶತಮಾನ ಕಾಲದ್ದು ಎನ್ನಲಾಗುವ ಚೆನ್ನ ಬಸವಣ್ಣನ ದೇಗುಲವೂ ಇದೆ. ಚಾರಣಿಗರಿಗೆ, ಸೈಕಲ್ ಸವಾರಿ ಮಾಡಲು ಇಷ್ಟವಿರುವವರಿಗೆ ಹೇಳಿ ಮಾಡಿಸಿದ ಜಾಗವಿದು...ಮೆಟ್ಟಿಲು ಹತ್ತಿ ಈ ಗುಡ್ಡವೇರಿ ಮೈಸೋಕುವ ಕುಳಿರ್ಗಾಳಿಗೆ ಮೈಯೊಡ್ಡಿದರೆ ಜಗದ ಜಂಜಡವೆಲ್ಲ ದೂರ... 

ಕಣ್ಣು ಹಾಯಿಸಿದಷ್ಟು ದೂರ ಕಲಾವಿದ ಕ್ಯಾನ್ವಾಸ್‌ ಮೇಲೆ ಗುಡ್ಡಬೆಟ್ಟ ಚಿತ್ರಿಸಿದಂತೆ ಕಾಣುವ ದೃಶ್ಯ, ಮೆಟ್ಟಿಲು ಹತ್ತಿ ಎತ್ತರದ ಗುಡ್ಡ ಹತ್ತಿದರೆ ಚೆನ್ನ ಬಸವಣ್ಣನ ದೇಗುಲ, ಉಸಿರು ತುಂಬಿ ಮೈಮನ ಹಗುರಾಗಿಸುವಷ್ಟು ತಂಗಾಳಿ, ಇನ್ನೊಂದು ಬದಿಯಲ್ಲಿ ಬೆಂಕಿಪೊಟ್ಟಣದಷ್ಟು ಅಳತೆಯಲ್ಲಿ ಕಾಣುವ ಮನೆಗಳು, ದೂರದಲ್ಲಿ ಆಕಾಶ ಬಾಗಿ ಭೂಮಿಗೆ ಅಂಟಿಕೊಂಡು ಇನ್ನು ಮುಂದಿನದು ನಿಲುಕಲಾರದೆಂಬ ಸಂದೇಶ ಸಾರುವ ನಿಸರ್ಗ...

ಇಷ್ಟೆಲ್ಲ ರಮಣೀಯ ತಾಣವಿರುವುದು ಹುಬ್ಬಳ್ಳಿಯಿಂದ 14 ಕಿಮೀ ದೂರದಲ್ಲಿರುವ ಬೂದನಗುಡ್ಡ ಅಥವಾ ಬಸವಣ್ಣನ ಗುಡ್ಡವೆಂಬ ಮನೋಹರ ತಾಣ. ಕಲಘಟಗಿ  ತಾಲ್ಲೂಕಿನ ಉಗ್ಗಿನಕೇರಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿದೆ. ಇಲ್ಲಿನ ಬಸವೇಶ್ವರ ದೇವಸ್ಥಾನ ಭಕ್ತರ ಪಾಲಿನ ಪುಣ್ಯಕ್ಷೇತ್ರ.

ಸುಮಾರು 12ನೇ ಶತಮಾನದಲ್ಲಿ ಕಲ್ಯಾಣದಿಂದ ಉಳವಿಗೆ ಹೊರಟ ಮಾರ್ಗದಲ್ಲಿ ಚನ್ನಬಸವಣ್ಣನವರು ತಮ್ಮ ಶರಣ ಗಣದೊಂದಿಗೆ ಇಲ್ಲಿ ತಂಗಿದ್ದರು ಎನ್ನುವುದು ಭಕ್ತರ ನಂಬುಗೆ. ಬಸವಣ್ಣ ಊರಿದ ಬೆತ್ತದ ಕೋಲು, ಹೆಜ್ಜೆ ಗುರುತು, ಅವರು ವಾಸ ಮಾಡಿದ್ದರು ಎನ್ನಲಾದ ಪುಟ್ಟ ಗುಹೆಗಳನ್ನು ಭಕ್ತರು ಈಗಲೂ ಗುರುತಿಸಿ ಹೇಳುವರು.

ಶ್ರಾವಣ ಮಾಸದಲ್ಲಿ ಜಾತ್ರಾದಿ ಕಾರ್ಯಕ್ರಮಗಳು ನಡೆಯುವ ಇಲ್ಲಿ  ಸುರಿವ ಮಳೆಯ ನಡುವೆಯೇ ದೇವರ ದರ್ಶನ ಪಡೆವ ಭಕ್ತರು  ಬಸವಣ್ಣನಿಗೆ ಹರಕೆ ಸಲ್ಲಿಸುವ ವಾಡಿಕೆಯಿದೆ. ಅಲಂಕೃತ ಪಲ್ಲಕ್ಕಿಯೊಂದಿಗೆ ವಾದ್ಯ ಮೇಳಗಳ ಸಹಿತ ಭಕ್ತರು ಇಲ್ಲಿಗೆ ಬರುವರು. 


ಬೂದನಗುಡ್ಡದಿಂದ ಕಾಣುವ ವಿಹಂಗಮ ನೋಟ

ಔಷಧೀಯ ಸಸ್ಯಗಳ ತಾಣ...

ಧಾರವಾಡ ಜಿಲ್ಲೆಯು ಪಶ್ಚಿಮದಿಂದ ಪೂರ್ವಕ್ಕೆ ಇಳಿಜಾರಾಗಿದ್ದು ಪಶ್ಚಿಮದ ಮಲೆನಾಡು ಮತ್ತು ಪೂರ್ವದ ಬಯಲುನಾಡು ಎಂದು ವಿಂಗಡಿಸುತ್ತಾರೆ. ಮಲೆನಾಡು ಅಥವಾ ಸಹ್ಯಾದ್ರಿ ಪ್ರದೇಶವು ಜಿಲ್ಲೆಯ ಪಶ್ಚಿಮ ಭಾಗದಲ್ಲಿ ಸುಮಾರು 25ರಿಂದ 30 ಕಿಮೀ ಅಗಲವಾಗಿದ್ದು ಧಾರವಾಡ, ಕಲಘಟಗಿ ಯಿಂದ ಹಾವೇರಿ ಜಿಲ್ಲೆಯವರೆಗೆ ವ್ಯಾಪಿಸಿಕೊಳ್ಳುತ್ತದೆ. ಧಾರವಾಡ ಮತ್ತು ಕಲಘಟಗಿ ನಡುವೆ ಇರುವುದು ಬೂದನಗುಡ್ಡ. 

ಈ  ’ದೇವರಕಾಡು’ ಸುಮಾರು 13 ಕಿಮೀ ಉದ್ದಕ್ಕೆ ಮತ್ತು 1.6 ಕಿಮೀ ಅಗಲಕ್ಕೆ ದಕ್ಷಿಣೋತ್ತರವಾಗಿ ಹಬ್ಬಿದೆ. ಇದು ಸುತ್ತಲಿನ ಪ್ರದೇಶಕ್ಕಿಂತ ಸುಮಾರು 152 ಮೀಟರ್‌ನಷ್ಟು ಎತ್ತರವಾಗಿದ್ದು ಇಲ್ಲಿ 745 ಮೀ ಮತ್ತು 719 ಮೀ ಎತ್ತರದ ಎರಡು ಶಿಖರಗಳಿವೆ.

ಪಶ್ಚಿಮ ಘಟ್ಟದಷ್ಟೇ ಅಪರೂಪದ ಪ್ರದೇಶ ಈ ಬೂದನಗುಡ್ಡ. ಈ ತಾಣದಲ್ಲಿ ಔಷಧೀಯ ಸಸ್ಯಗಳು ಅನೇಕ.  ಕುರುಚಲು ಹಾಗೂ ಒಣ ಪರ್ಣಪಾತಿ ಕಾಡುಗಳಿಂದ ಈ ಗುಡ್ಡ ಆವರಿಸಿದೆ. ಅರಣ್ಯ ಇಲಾಖೆಯಿಂದ ರಕ್ಷಣೆಯಲ್ಲಿರುವ ಪ್ರದೇಶವಿದು.

ಹಾಲೆ, ಸಪ್ತವರ್ಣಿ, ಇಂಗಳದ ಮರ, ಕಾಸರಕ, ಕೊಡಸಿಗ, ಪುರುಷರತ್ನ, ಶತಾವರಿ, ಮಧುನಾಶಿನಿ, ಅಮೃತಬಳ್ಳಿ, ಕವಳಿ ಹಣ್ಣಿನ ಗಿಡ, ಕಾರೆಹಣ್ಣು, ಅಂಕೋಲೆ ಮರ,ಕಾಡು ಮಲ್ಲಿಗೆ ಸೇರಿದಂತೆ ಹಲವು ಬಗೆಯ ಔಷಧೀಯ ಸಸ್ಯಗಳು, ಹಾಗೂ ಸುಗಂಧ ಸಸ್ಯಗಳು ಗುಡ್ಡದ ತುಂಬ ಹರಡಿಕೊಂಡಿವೆ.

ಈ ಬೂದನಗುಡ್ಡದ ಪರಿಸರದಲ್ಲಿ ನವಿಲುಗಳ ಓಡಾಡಿಕೊಂಡಿರುತ್ತವೆ. ಬೆಳಗಿನ ಹೊತ್ತಿನಲ್ಲಿ ಗುಡ್ಡ ಏರಿದರೆ ಇವುಗಳ ನೋಟ ಸಾಮಾನ್ಯ. ಈ ಗುಡ್ಡದ ಇನ್ನೊಂದು ಅಂಚಿನಲ್ಲಿ ಬಂಡೆಗಳ ಸಾಲೇ ಇದೆ. ದೂರದಿಂದ ನೋಡಿದಲ್ಲಿ ಈ ಬಂಡೆಯ ತುದಿಗೆ ದೇವಸ್ಥಾನ ಅಂಟಿಕೊಂಡಂತೆ ಭಾಸವಾಗುತ್ತದೆ.

ದುರಂತವೆಂದರೆ ಗಣಿಗಾರಿಕೆಯ ಸಮಸ್ಯೆ ಈ ಬೂದನಗುಡ್ಡವನ್ನೂ ಬಿಟ್ಟಿಲ್ಲ. ಬೆಟ್ಟದ ಬಂಡೆಗಳು ಕಲ್ಲು ಗಣಿಗಾರಿಕೆಗೆ ತುತ್ತಾಗಿವೆ. ಹೀಗಾಗಿ ಇಲ್ಲಿನ ಪ್ರಾಕೃತಿಕ ಸೌಂದರ್ಯಕ್ಕೆ ತುಸು ಧಕ್ಕೆಯಾಗಿದೆ. ಹಿಂದೊಮ್ಮೆ ಇದು ಹುಲಿಗಳ ತಾಣವೂ ಆಗಿತ್ತು, ರಾತ್ರಿಯಲ್ಲಿ ಹುಲಿಗಳು ಈ ಗುಡ್ಡದ ಸುತ್ತ ಅಡ್ಡಾಡುತ್ತಿದ್ದವು. ಈಗ ಅವೆಲ್ಲ ಕಡಿಮೆಯಾಗಿವೆ  ಎನ್ನುತ್ತಾರೆ ಸ್ಥಳೀಯರು.


ದೇವರಕಾಡಿನ ವಿಹಂಗಮ ನೋಟ

ಹೋಗುವುದು ಹೇಗೆ?

ಹುಬ್ಬಳ್ಳಿಯಿಂದ ಕಾರವಾರ ಹೆದ್ದಾರಿಯಲ್ಲಿ ಸುಮಾರು 12 ಕಿಮೀ ಸಾಗಿದರೆ ಅಲ್ಲಿಂದ ಬಲಕ್ಕೆ ಚಳಮಟ್ಟಿ ಕ್ರಾಸ್ ನಲ್ಲಿ ಹೊರಳಿ ಎರಡು ಕಿಮೀ ಸಾಗಿದರೆ ಎದುರಿಗೆ ಕಾಣುವುದೇ ಬೂದನಗುಡ್ಡ. ಕಲಘಟಗಿ ಕಡೆಯಿಂದ ಬಂದರೆ 18 ಕಿಮೀ. ಬಹಳಷ್ಟು ಸೈಕಲ್‌ಸವಾರರು ಈ ತಾಣಕ್ಕೆ ಸೈಕಲ್‌ ತುಳಿದೇ ಬರುತ್ತಾರೆ. ಗುಡ್ಡದ ಕೆಳಭಾಗದಲ್ಲಿ ಚೆನ್ನಾಪುರ ಎಂಬ ಗ್ರಾಮವೂ ಇದೆ. ಧಾರವಾಡದಿಂದ ಬಂದರೆ ಸುಮಾರು 20 ಕಿಮೀ.

ಇಲ್ಲಿಂದ ಸಮೀಪದಲ್ಲಿಯೇ ಇರುವ ಇನ್ನೊಂದು ತಾಣ ನೀರಸಾಗರ. ಧಾರವಾಡಕ್ಕೆ ಬರುವ ದಾರಿಯಲ್ಲಿ ಜೋಡಳ್ಳಿ ಗ್ರಾಮದ ಎಡಕ್ಕೆ ತಿರುಗಿದರೆ ನೀರಸಾಗರ ಜಲಾಶಯ ಕಾಣಬಹುದು. ಈ ವರ್ಷವಂತೂ ಉತ್ತಮ ಮಳೆಯಿಂದಾಗಿ ಈ ಜಲಾಶಯ ತುಂಬಿಕೊಂಡು ನಯನ ಮನೋಹರವಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು