ಮಂಗಳವಾರ, ಡಿಸೆಂಬರ್ 6, 2022
20 °C

ಗೀಜಗನ ಗೂಡು ನುಂಗಿತ್ತಾ! - ಗೀಜಗ ಕಾಣುತ್ತಿಲ್ಲ ಅವುಗಳ ಗೂಡೂ ಕಾಣುತ್ತಿಲ್ಲ ಯಾಕೋ?

ಅಖಿಲೇಶ್‌ ಚಿಪ್ಪಳಿ Updated:

ಅಕ್ಷರ ಗಾತ್ರ : | |

Prajavani

ನಿಸರ್ಗದ ಜಕಣಾಚಾರಿ ಎಂದೂ ದರ್ಜಿ ಎಂದೂ ಕರೆಯಿಸಿಕೊಳ್ಳುವ ಗೀಜಗ ಇತ್ತೀಚೆಗೆ ಕಾಣುತ್ತಿಲ್ಲ ಅವುಗಳ ಗೂಡೂ ಕಾಣುತ್ತಿಲ್ಲ, ಯಾಕೋ?

ಸುಮಾರು ಎರಡೂವರೆ ದಶಕಗಳ ಹಿಂದೆ ಪ್ರಜಾವಾಣಿಯ ಭಾನುವಾರದ ಪುರವಣಿಯಲ್ಲೊಂದು ಲೇಖನವಿತ್ತು. ಆಗಿನ ರಾಯಚೂರು ಜಿಲ್ಲೆಯ ಕೊಪ್ಪಳ ತಾಲ್ಲೂಕಿನಲ್ಲಿ ಪ್ರತಿವರ್ಷ ಜನವರಿ 14ರಂದು ಗೌರಿ ಹುಣ್ಣಿಮೆ ಆಚರಿಸುವ ಕುರಿತಾದ ಲೇಖನ ಅದಾಗಿತ್ತು. ಆಚರಣೆಯ ಒಂದು ಭಾಗ ಮಾತ್ರ ಮೂಢನಂಬಿಕೆಯ ಪರಕಾಷ್ಠೆಯಾಗಿತ್ತು. ಸಂಜೆಯ ಹೊತ್ತಿಗೆ ಊರಿನ ಯುವಕರು ಜಾಲಿ ಮರಗಳಲ್ಲಿರುವ ಗೀಜಗನ ಗೂಡುಗಳನ್ನು ಕಿತ್ತು ಅದಕ್ಕೆ ಬೆಂಕಿ ಹಚ್ಚಿ, ಗಾಳಿಯಲ್ಲಿ ತಿರುಗಿಸುತ್ತಾ ಊರ ತುಂಬಾ ಓಡುತ್ತಿದ್ದರಂತೆ. ಮೊಟ್ಟೆಗಳಿರುವ, ಮರಿಗಳಿರುವ ಗೂಡುಗಳನ್ನು ಸುಡಲಾಗುತ್ತದೆ ಎಂಬ ಆಘಾತಕಾರಿ ಅಂಶಗಳು ಆ ಲೇಖನದಲ್ಲಿದ್ದವು.

ಗೀಜಗನೊಟ್ಟಿಗೆ ನಾವು ಸಹಬಾಳ್ವೆ ಮಾಡಿದವರೇ ಆಗಿದ್ದೆವು. ನಮ್ಮ ತೋಟದಲ್ಲಿ ಅಡಕೆ ಮರದಿಂದ ಬಿದ್ದ ಹಳೆ ಗೂಡುಗಳನ್ನು ಮನೆಗೆ ತೆಗೆದುಕೊಂಡು ಹೋಗಿ ಅಚ್ಚರಿಯಿಂದ ನೋಡುತ್ತಿದ್ದೆವು. ಮಲೆನಾಡಿನ ಹಳೆಯ ಮುಚ್ಚಿಗೆ ಮನೆಯ ಜಗುಲಿಯಲ್ಲಿ ಅದೊಂಥರ ಆಲಂಕಾರಿಕ ವಸ್ತುವಾಗಿ ನೇತಾಡುತ್ತಿತ್ತು. ಕೊಪ್ಪಳದಲ್ಲಿ ಗೀಜಗನ ಗೂಡು ಸುಡುವ ಸುದ್ದಿ ಓದಿ ಆಘಾತವಾಯಿತು. ಹೀಗಾದರೆ, ಅವುಗಳ ವಂಶವೇ ನಾಶವಾಗಿಬಿಡಬಹುದು ಎಂಬ ಆತಂಕ ಕಾಡಿತು. ಮಾರನೇ ದಿನವೆ ಜಿಲ್ಲಾಧಿಕಾರಿಯವರಿಗೆ ಒಂದು ಪತ್ರ ಬರೆದು, ಈ ಅನಿಷ್ಟ ಪದ್ಧತಿಯನ್ನು ನಿಲ್ಲಿಸಲು ಕೋರಿದ್ದೆ. ಶಿವಮೊಗ್ಗ ಜಿಲ್ಲೆಯ ಸೊರಬ ತಾಲ್ಲೂಕಿನ ಚಂದ್ರಗುತ್ತಿ ಜಾತ್ರೆಯಲ್ಲಿ ಅನಾಗರಿಕವಾದ ಬೆತ್ತಲೆ ಸೇವೆ ನಡೆಯುತ್ತಿತ್ತು. ಸರ್ಕಾರದ ಇಚ್ಛಾಶಕ್ತಿಯಿಂದಾಗಿ ಆ ಅನಿಷ್ಟ ಪದ್ದತಿ ನಿಂತಿದೆ. ಹಾಗೆಯೇ ದಕ್ಷಿಣ ಕನ್ನಡದಲ್ಲಿ ಅಜಲು ಪದ್ಧತಿಯಿತ್ತು. ಅದನ್ನು ಸರ್ಕಾರ ಯಶಸ್ವಿಯಾಗಿ ನಿಲ್ಲಿಸಿದೆ. ಹಾಗೆಯೇ ಗೀಜಗನ ಗೂಡು ಸುಡುವುದನ್ನೂ ನಿಲ್ಲಿಸಲು ಸಾಧ್ಯವೇ ಎಂಬ ಒಕ್ಕಣೆ ಹಾಕಿ ಪತ್ರ ಬರೆದಿದ್ದೆ.


ಸ್ವಂತ ಮನೆಮುಂದೆ ಸ್ವಚ್ಛಂದ ಹಾರಾಟ  

ಹಲವು ಕಾರಣಗಳಿಂದಾಗಿ ಮಲೆನಾಡಿನ ಜೀವಿವೈವಿಧ್ಯ ಅಳಿಯುತ್ತಿದೆ. ಸ್ಥಾನಿಕವಾಗಿ ಅತಿವೇಗವಾಗಿ ಅಳಿದು ಹೋದ ಪಕ್ಷಿಗಳಲ್ಲಿ ನಿಸರ್ಗದ ಜಕಣಾಚಾರಿಯೆಂದೇ ಕರೆಯಬಹುದಾದ ಗೀಜಗಗಳ ಸಂತತಿಯೂ ಒಂದಾಗಿದೆ. ಕೆರೆಗಳ ಬದುಗಳಲ್ಲಿ ಬೆಳೆಯುವ ಬಿದಿರು ಹಾಗೂ ಇನ್ನಿತರ ಮರಗಳ ತುದಿಯ ಕೊಂಬೆಯಲ್ಲಿ ಗೂಡು ಕಟ್ಟುವ ಗೀಜಗಗಳಿಗೆ ಆಹಾರವಾಗಿ ಭತ್ತದ ಬೆಳೆಯಿರಬೇಕು, ಗೂಡು ಕಟ್ಟುವ ಕಚ್ಚಾ ಸಾಮಗ್ರಿಯು ಭತ್ತ, ಕಬ್ಬು ಬೆಳೆಗಳ ಹಸಿ ಎಲೆಗಳೇ ಆಗಿರುತ್ತವೆ. ಕೆರೆಗಳ ಒತ್ತುವರಿ, ಗೂಡು ಕಟ್ಟಿಕೊಳ್ಳುವ ಮರಗಳ ನಾಶ, ಕೃಷಿಯಲ್ಲಿ ವಿಪರೀತ ರಾಸಾಯನಿಕಗಳ ಬಳಕೆ, ವಾಣಿಜ್ಯ ಬೆಳೆಗಳು ಗದ್ದೆಗಳನ್ನು ಆಕ್ರಮಿಸಿಕೊಂಡ ಕಾರಣಕ್ಕೆ ಗೀಜಗಗಳ ನೆಲೆ ಅಳಿಸಿಹೋಗುತ್ತಿದೆ.

ಸಾಗರದ ಅಮಟೇಕೊಪ್ಪದಲ್ಲಿ ಕಳೆದ ಹದಿನೈದು ವರ್ಷಗಳಿಂದ ನಮ್ಮ ನಿರ್ವಹಣೆಯಲ್ಲಿ ಬೆಳೆಯುತ್ತಿರುವ ಖಾಸಗಿ ಕಾಡು ಇದೀಗ ಜೀವಿವೈವಿಧ್ಯದ ಬೀಡಾಗಿದೆ. ಅಡಗಿಸಿಟ್ಟ ಕ್ಯಾಮೆರಾದಲ್ಲಿ ಅನೇಕ ಪ್ರಾಣಿಗಳು ಸೆರೆಸಿಕ್ಕಿವೆ. ಅಪರೂಪದ್ದೂ ಸೇರಿ 170 ಜಾತಿಯ ಪಕ್ಷಿ ಪ್ರಭೇದಗಳನ್ನು ಪಕ್ಷಿತಜ್ಞರು ಅಲ್ಲಿ ಗುರುತಿಸಿದ್ದಾರೆ. ಮಣ್ಣಿನ ಸೂಕ್ಷ್ಮಾಣುಗಳಿಂದ ಹಿಡಿದು ಕಾಟಿಯವರೆಗೆ ಅಲ್ಲೀಗ ಜೀವಿವೈವಿಧ್ಯ ಸಮೃದ್ಧವಾಗಿದೆ.

ಮೂಲತಃ ಸಾಗರ ತಾಲ್ಲೂಕಿನವರೇ ಆದ ನನ್ನ ಸ್ನೇಹಿತರೊಬ್ಬರು ಬೆಂಗಳೂರಿನಲ್ಲಿದ್ದಾರೆ. ಬೆಂಗಳೂರು ಹತ್ತಿರದಲ್ಲಿ ಅವರಿಗೆ ಜಮೀನು ಇದ್ದ ಕಾರಣಕ್ಕೆ ಅವರು ಅರೆಕಾಲಿಕ ಕೃಷಿಕರೂ ಹೌದು. ಬೆಂಗಳೂರಿನ ಆ ಸ್ನೇಹಿತರು ಇನ್ನೂ ಉಷಾಕಿರಣವನ್ನು ನೋಡಿಲ್ಲ; ಮೊದಲು ಹೇಗಿತ್ತು? ಈಗ ಹೇಗಿದೆ ಎಂಬ ಕಲ್ಪನೆ ಕೂಡಾ ಅವರಿಗಿಲ್ಲ. ಆದರೆ, ಹಂತ ಹಂತವಾಗಿ ನಾನು ಕಳುಹಿಸಿದ ಫೋಟೊಗಳು, ವರದಿಗಳು ಅವರನ್ನು ಉಷಾಕಿರಣದ ಕಾಡನ್ನು ಪ್ರೀತಿಸುವಂತೆ ಮಾಡಿವೆ. ಅವರಲ್ಲಿ ಹತ್ತು ಎಕರೆ ಖುಷ್ಕಿ ಜಮೀನು ಇತ್ತು. ಅದನ್ನು ಸದ್ವಿವಿನಿಯೋಗ ಮಾಡಬೇಕು ಎಂದುಕೊಂಡರು. ಮಲೆನಾಡಿನ ಅನಾನಸ್ ಬೆಳೆಗೆ ಉತ್ತರಭಾರತದಲ್ಲಿ ಬಲು ಬೇಡಿಕೆಯಿದೆ. ಅನಾನಸ್ ಕೃಷಿ ಮಾಡಲು ಒಬ್ಬ ರೈತ ಮುಂದೆ ಬಂದ. ಆ ಒಂಬತ್ತು ಎಕರೆಯಲ್ಲಿ ಅಡಕೆ ಇನ್ನಿತರೆ ಗಿಡಗಳನ್ನು ಹಾಕಿದರು.


ಶೀರ್ಷಾಸನವಲ್ಲ. ದ್ವಾರ– ದಾರಿಯ ತಪಾಸಣೆ

ಇವರ ಖುಷ್ಕಿ ಜಮೀನಿನ ಪಕ್ಕದಲ್ಲೇ ಭತ್ತದ ಗದ್ದೆಯೂ ಇದೆ. ಕೋವಿಡ್ ಪ್ರಾರಂಭವಾದ ಸಮಯದಲ್ಲಿ ಅವರು ಫೋನ್ ಮಾಡಿ, ಒಂದು ಎಕರೆಯಲ್ಲಿ ಕಾಡು ಬೆಳೆಸುವ ಇರಾದೆಯಿದೆ, ಸಹಾಯ ಬೇಕಲ್ಲ ಎಂದರು. ಸ್ವಾಭಾವಿಕವಾಗಿ ಇದು ಖುಷಿಯ ಸಂಗತಿಯಾಗಿತ್ತು. ‘ಆಗಲಿ’ ಎಂದೆ. ಮಳೆಗಾಲದಲ್ಲಿ ಸ್ಥಳೀಯ ಪ್ರಭೇದಗಳ ಗಿಡಗಳನ್ನು ನೆಟ್ಟೆವು. ಅಷ್ಟರಲ್ಲಿ, ಅವರು ತಮ್ಮ ಪೂರ್ಣ ಜಮೀನನ್ನು ರಾಸಾಯನಿಕ ರಹಿತ ಮಾಡಿದ್ದರು. ಈಗೊಂದು ಹದಿನೈದು ದಿನದ ಹಿಂದೆ ಫೋನ್ ಮಾಡಿ, ಒಂದಷ್ಟು ಗೀಜಗಗಳು ಗೂಡು ಕಟ್ಟುತ್ತಿವೆ ಎಂದರು. ಆ ಭಾಗದಲ್ಲಿ ಗೀಜಗಗಳ ಮರು ಆಗಮನವಾಗಿತ್ತು.

ಜಲ ಮತ್ತು ಆಹಾರ ಭದ್ರತೆಯಿದ್ದರೆ ಗೀಜಗಗಳು ಮತ್ತೆ ಬಂದು ನೆಲಸಬಲ್ಲವು ಎಂಬುದಕ್ಕೆ ಈ ಘಟನೆ ಸಾಕ್ಷಿ. ನಮ್ಮ ದೇಶದಲ್ಲಿ ವನ್ಯಜೀವಿಗಳಿಗಾಗಿಯೇ ಮೀಸಲಿಟ್ಟ ಪ್ರದೇಶ ಅತಿಕಡಿಮೆಯಿದೆ. ಸರ್ಕಾರದ ಆದ್ಯತೆಗಳು ಮನುಷ್ಯ ಕೇಂದ್ರಿತವಾಗಿದ್ದಾಗ ವನ್ಯಜೀವಿಗಳ ಆವಾಸಸ್ಥಾನ ಕುಗ್ಗುತ್ತಾ ಹೋಗುತ್ತದೆ. ನಮ್ಮ ಉಷಾಕಿರಣವೀಗ ಹಲವರಿಗೆ ಮಾದರಿಯಾಗಿದೆ. ಸಾಗರ ಸಮೀಪದಲ್ಲೇ ಒಟ್ಟು ಮೂರು ಜನ ಸೇರಿ ಎಂಟು ಎಕರೆಯನ್ನು ಕಾಡು ಬೆಳೆಸಲೇ ಮೀಸಲಿಟ್ಟಿದ್ದಾರೆ. ಹುಲಿ, ಆನೆಗಳಂತಹ ಮೇರುಪ್ರಾಣಿಗಳಿಗೆ ಇಂತಹ ಚಿಕ್ಕ ಚಿಕ್ಕ ಕಾಡುಗಳು ಪ್ರಯೋಜನವಾಗದಿದ್ದರೂ, ಇನ್ನಿತರ ಅಸಂಖ್ಯ ಜೀವಸಂಕುಲಗಳಿಗೆ ತವರಾಗುತ್ತವೆ.

ಉಷಾಕಿರಣಕ್ಕೆ ಭೇಟಿ ನೀಡಿದ ಮಹಾನುಭಾವರೊಬ್ಬರು ಇಷ್ಟು ಪ್ರದೇಶದಲ್ಲಿ ಕಾಡು ಬೆಳೆಸಿದರೆ ನಿಮಗಾಗುವ ಪ್ರಯೋಜನವೇನು? ಅದರ ಬದಲು ಭೂಪರಿವರ್ತನೆ ಮಾಡಿದ್ದರೆ, ಹಲವು ಕೋಟಿ ಲಾಭಗಳಿಸಬಹುದಿತ್ತು ಎಂದು ಉಲಿದರು. ಆಗ ಅವರಿಗೊಂದು ಲೆಕ್ಕಾಚಾರ ಹೇಳಿದೆ. 2020ರ ಜೂನ್ 1ರಿಂದ 2021ರ ಮೇ 31ರವರೆಗೆ ನಮ್ಮಲ್ಲಿ ಇಂಗಿದ ನೀರಿನ ಪ್ರಮಾಣ 28 ಕೋಟಿ ಲೀಟರ್. ಒಂದು ಲೀಟರ್ ನೀರಿನ ಬೆಲೆ ₹20 ಎಂದಾದರೆ ಒಟ್ಟು ಮೊತ್ತ ಎಷ್ಟಾಗಬಹುದು ನೀವೇ ಲೆಕ್ಕ ಹಾಕಿ ಎಂದೆ. ಮುಂದುವರಿದು, ಉಷಾಕಿರಣ ನೀಡುವ ಇನ್ನಿತರ ನೈಸರ್ಗಿಕ ಸೇವೆಗಳು, ಅಂದರೆ, ಇಂಗಾಲಾಮ್ಲ ಹೀರಿಕೊಂಡು ಆಮ್ಲಜನಕ ನೀಡುವುದು, ಜೀವಿವೈವಿಧ್ಯಕ್ಕೆ ಆಶ್ರಯ ನೀಡುವುದು, ಮಣ್ಣು ಸವಕಳಿ ತಡೆಯುವುದು ಮುಂತಾದವುಗಳ ಮೌಲ್ಯವನ್ನು ಸೇರಿಸಿದರೆ, ಸೈಟು ಮಾಡಿ ಮಾರಾಟ ಮಾಡುವುದಕ್ಕಿಂತ ಅದೆಷ್ಟೋ ಪಟ್ಟು ಲಾಭವಿದೆ ಎಂಬ ಉತ್ತರಕ್ಕೆ ಅವರು ಪೀಚು ನಗೆ ನಕ್ಕರಷ್ಟೆ.

ಕರ್ನಾಟಕದಲ್ಲಿ ಒಟ್ಟು ಮೂರು ಜಾತಿಯ ಗೀಜಗಗಳಿವೆ. ಬಯಲುನಾಡಿನ ಹುಲ್ಲುಗಾವಲು ಪ್ರದೇಶದಲ್ಲಿ ಮೂರೂ ಜಾತಿಯ ಗೀಜಗಗಳು ಕಂಡು ಬರುತ್ತವೆಯಾದರೂ, ಮಲೆನಾಡಿನ ಜೌಗು ಪ್ರದೇಶದಲ್ಲಿ ಬಾಯಾ ಗೀಜಗ ಮಾತ್ರ ಕಂಡು ಬರುತ್ತದೆ. ಬಯಲು ಹಾಗೂ ಮಲೆನಾಡಿನಲ್ಲಿ ಗೀಜಗಗಳ ಆವಾಸಸ್ಥಾನ, ಅವುಗಳಿಗೆ ಗೂಡು ಕಟ್ಟಲು ಬೇಕಾದ ಕಚ್ಚಾ ಸಾಮಗ್ರಿಗಳು ಮತ್ತು ಆಹಾರದ ಕೊರತೆಯಿಂದ ಇವು ವೇಗದಲ್ಲಿ ಕಣ್ಮರೆಯಾಗುತ್ತಿವೆ.

ಗೀಜಗಗಳನ್ನು ಪಹರೆ ಜೀವಿಗಳೆಂದು ಕರೆಯಬಹುದು. ಇವುಗಳ ಸಂಖ್ಯೆ ನಶಿಸುತ್ತಿದೆಯೆಂದರೆ, ಬಯಲುನಾಡಿನಲ್ಲಿ ಹುಲ್ಲುಗಾವಲು ಹಾಗೂ ಮಲೆನಾಡಿನಲ್ಲಿ ಜೌಗು ಪ್ರದೇಶಗಳಾದ ಕೆರೆ-ಕುಂಟೆಗಳು ಕಡಿಮೆಯಾಗುತ್ತಿವೆ ಎಂದು ಅರ್ಥೈಸಬಹುದು. ಜೊತೆಗೆ ಗೀಜಗನ ಕಲಾವಂತಿಕೆಯ ಮೇರು ಕೃತಿಯಾದ ಅದರ ಗೂಡುಗಳನ್ನು ಕದ್ದು ಮಾರುವುದೂ ಅವುಗಳ ವಿನಾಶಕ್ಕೆ ಒಂದು ಮುಖ್ಯ ಕಾರಣವಾಗಿದೆ. ಮಾನವನ ಹಸ್ತಕ್ಷೇಪದಿಂದ ಪ್ರಪಂಚದ ಎಲ್ಲಾ ಜೀವಸಂಕುಲಗಳು ಆಪತ್ತಿಗೆ ಸಿಲುಕಿರುವುದು ಸತ್ಯಕ್ಕೆ ದೂರವಾದ ಮಾತೇನಲ್ಲವಲ್ಲ. 


ಕಟ್ಟುವುದೆಷ್ಟು ಕಷ್ಟ ಗೊತ್ತಾ...? - ಗೂಡು ನೇಯುವುದರಲ್ಲಿ ನಿರತ ಗೀಜಗ

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು