ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PV Web Exclusive | ಪ್ರಕೃತಿ ಮಡಿಲು: ಬಯಲು ಸೀಮೆಯಲ್ಲಿ ಮಲೆನಾಡ ವೈಭವ

ಕಪ್ಪತಗುಡ್ಡ
Last Updated 3 ಅಕ್ಟೋಬರ್ 2020, 8:13 IST
ಅಕ್ಷರ ಗಾತ್ರ
ADVERTISEMENT
""
""

ಅಂಕು-ಡೊಂಕಾಗಿ ಹಸಿರು ಹೊದ್ದು ಮಲಗಿರುವ ಹೊಲಗಳು, ಗಾಲ್ಫ್ ಕ್ರೀಡಾಂಗಣದಂತೆ ಒಮ್ಮೆಗೆ ಕಣ್ಣನ್ನು ಆವರಿಸಿಕೊಳ್ಳುತ್ತದೆ. ಹಳ್ಳಿಗಳ ಕಿರಿದಾದ ಕಾಂಕ್ರೀಟ್ ರಸ್ತೆಗಳನ್ನು ದಾಟಿ ಹೋದಮೇಲಂತೂ ಮೋಡಗಳನ್ನೇ ಹೊದ್ದುಕೊಂಡು ಆಕಾಶ ಚುಂಬಿಸುತ್ತಿರುವ ಹಸಿರುರಾಶಿ ಕಣ್ಮನಗಳನ್ನು ತುಂಬಿಕೊಳ್ಳುತ್ತದೆ. ಕಡಿದಾದ ರಸ್ತೆ ಹಾಗೂ ಒಂದೆರಡು ಏರ್-ಪಿನ್ ತಿರುವುಗಳಲ್ಲಿ ಪ್ರಕೃತಿಯ ಸೊಬಗನ್ನು ಸವಿಯುತ್ತ ತುತ್ತ ತುದಿಯನ್ನು ತಲುಪಿದ ಮೇಲೆ, ಮೋಡವನ್ನು ಹೊದ್ದುಕೊಳ್ಳುವ ಸರದಿ ನಮ್ಮದಾಗುತ್ತದೆ... ಅಲ್ಲಿಂದ ಎಲ್ಲವೂ ನಯನ ಮನೋಹರ; ಮೈ-ಮನ ಆಹ್ಲಾದಕರ ಲೋಕದಲ್ಲಿ ವಿಹರಿಸುತ್ತದೆ...

ಇಂತಹ ಅನುಭವ ರಾಜ್ಯ ಮಲೆನಾಡಿನಲ್ಲಿ ಸಾಕಷ್ಟು ಪ್ರದೇಶಗಳಲ್ಲಾಗುತ್ತದೆ. ಆದರೆ, ಕಿಲೋಮೀಟರ್ ಗಟ್ಟಲೆ ನೋಡಿದರೂ ಕೆಂಪು-ಕಪ್ಪು ಮಣ್ಣು ಹೊದ್ದು ಮಲಗಿರುವ ಸಮತಟ್ಟಿನ ಹೊಲಗಳನ್ನೇ ಕಾಣುವ ಬಯಲುಸೀಮೆ ಪ್ರದೇಶಗಳಲ್ಲಿ ಇಂತಹ ದೃಶ್ಯ ತೀರಾ ಅಪರೂಪ. ಅದರಲ್ಲೂ ನೀರಿನ ಸೆಳೆತಕಾಣದ, ಸಾವಿರಾರು ಅಡಿ ಕೊರೆದರೂ ರಾಸಾಯನಿಕಯುಕ್ತ ನೀರೇ ಸಿಗುವ ಗದಗ ಜಿಲ್ಲೆಯಲ್ಲಿ ಇಂತಹದೊಂದು ಮನಮೋಹಕ ತಾಣ ಇದೆ ಎಂಬುದು ಇದೇ ಜಿಲ್ಲೆಯ ಬಹುತೇಕರಿಗೆ ಗೊತ್ತಿಲ್ಲ. ಗುಡ್ಡದ ಸೌಂದರ್ಯದ ಜೊತೆಗಿರುವ ಫೋಟೊವನ್ನು ಹಂಚಿಕೊಂಡಾಗ ಇದ್ಯಾವ ಮಲೆನಾಡು, ಎಲ್ಲಿದೆ ಇದು ಎಂಬ ಪ್ರಶ್ನೆಗಳು ಗದುಗಿನ ಗೆಳೆಯರು ಸೇರಿದಂತೆ ಸುತ್ತಮುತ್ತಲಿನ ಜಿಲ್ಲೆಯವರಿಂದಲೂ ಎದುರಾಗುತ್ತವೆ. ಇದಕ್ಕೆಲ್ಲ ಉತ್ತರ, ಕಪ್ಪತಗುಡ್ಡ.

ಗದುಗಿನಿಂದ ಮುಂಡರಗಿ ಕಡೆಗೆ ಹೋಗುವ ರಸ್ತೆಯಲ್ಲಿ ಬಯಲುಸೀಮೆಯ ಸಮನಾದ ನೋಟದ ನಡುವೆ ಒಂದಷ್ಟು ಕಿಮೀ ಸಂಚರಿಸಿ, ಬಲಕ್ಕೆ ತಿರುಗಿದರೆ ಅಂಕು-ಡೊಂಕಿನ ಗಾಲ್ಫ್ ಕ್ರೀಡಾಂಗಣವನ್ನು ನೆನಪಿಸುವ ಹೊಲಗಳ ನಡುವಿನ ರಸ್ತೆಯಲ್ಲಿ ನಾಲ್ಕೈದು ಕಿ.ಮೀ ಮುಂದುವರಿದರೆ ‘ಚಿನ್ನದ ಗಣಿ’ ಅನಾವರಣಗೊಳ್ಳುತ್ತದೆ.

ನವಿಲುಗಳ ಸ್ವಾಗತ
ಕಪ್ಪತಗುಡ್ಡ ಹತ್ತುವ ಯಾನ ಆರಂಭಕ್ಕೆ ನವಿಲುಗಳ ಸ್ವಾಗತ ಸಿಗುತ್ತದೆ. 10 ಕಿ.ಮೀ ಕ್ರಮಿಸಿದರೆ ಬೆಟ್ಟದ ತುದಿ ತಲುಪಬಹುದು. ಈ ದಾರಿ ಅರ್ಧ ಸವಿದ ಕೂಡಲೇ ಬೆಟ್ಟದ ಒಡಲು ‘ರಕ್ತಮಯವಾಗಿರುವುದನ್ನು’ ಕಾಣಬಹುದು. ಅಂದರೆ, ಗಣಿಗಾರಿಕೆ ಗುಡ್ಡದ ಒಡಲನ್ನು ಕೆತ್ತಿಹಾಕಿದ್ದು, ಕೆಂಪಾದ ಬೃಹತ್ ಮೆಟ್ಟಿಲುಗಳು ಕಾಣುತ್ತವೆ. ಹತ್ತಾರು ಮೆಟ್ಟಿಲುಗಳಂತೆ ಕಡಿದು, ದೊಡ್ಡ ಹೊಂಡವನ್ನೇ ನಿರ್ಮಿಸಲಾಗಿದೆ. ಪ್ರಕೃತಿಯ ಸಂಪತ್ತಿಗಾಗಿ ವನ್ಯಜೀವಿಗಳ ತಾಣವನ್ನು ‘ಕಡಿಯಲಾಗಿದೆ’. ಹಸಿರಿನಿಂದ ಕಂಗೊಳಿಸುವ ಗುಡ್ಡದ ನಡುವೆ ಕೆಂಪುಮಣ್ಣಿನ ಸಂಪತ್ತನ್ನು ಕೊರೆದು ತೆಗೆದುಕೊಂಡಿರುವುದು ಸ್ಪಷ್ಟವಾಗಿ ಗೋಚರಿಸುತ್ತದೆ.

ಇಂತಹ ಆಘಾತಕಾರಿ ದೃಶ್ಯವನ್ನು ಸಹಿಸಿಕೊಂಡು ಗುಡ್ಡದ ಮೇಲೇರಿದರೆ, ಪ್ರಕೃತಿ ಸೌಂದರ್ಯ ಅನಾವರಣಗೊಳ್ಳುತ್ತದೆ. ಬಯಲುಸೀಮೆಯ ಯಾವುದೇ ಕುರುಹೂ ಇಲ್ಲದೆ, ನೂರಾರು ಕಿಲೋಮೀಟರ್ ಹಸಿರು ಕಂಗೊಳಿಸುತ್ತದೆ. ಪವನ ವಿದ್ಯುತ್ ಚಕ್ರಗಳ ಸುತ್ತುವ ಸದ್ದಿನ ನಡುವೆ, ಸುಯ್ಯೆಂದು ಮೈ-ಮನವನ್ನು ಮುದಗೊಳಿಸುವ ವಾತಾವರಣ ಆನಂದ ನೀಡುತ್ತದೆ. ಮಳೆಗಾಲದಲ್ಲಿ ಆಗಾಗ ವರುಣನ ತಂಪನೆಯ ಸಿಂಚನಕ್ಕೆ ಮೈಯೊಡ್ಡಿದರೆ ಎಲ್ಲ ದಣಿವೂ ಮಾಯ!

ಚಿನ್ನದ ಗಣಿ
ಹೌದು, ಕಪ್ಪತಗುಡ್ಡ ‘ಚಿನ್ನದ ಗಣಿಯೇ’. ಕೆಂಪು ಕಲ್ಲು-ಮಣ್ಣಿನ ಜೋಡಿ ಗುಡ್ಡಗಳು 244.15 ಚದರ ಕಿ.ಮೀ. ವ್ಯಾಪ್ತಿಯಲ್ಲಿ ಹರಡಿಕೊಂಡಿವೆ. ಔಷಧೀಯ ಸಸ್ಯಗಳು, ಗಿಡಮೂಲಿಕೆಗಳನ್ನು ಯಥೇಚ್ಛವಾಗಿ ಹೊಂದಿರುವ ಕಪ್ಪತಗುಡ್ಡ, ವನ್ಯಜೀವಿಗಳ ತಾಣವೂ ಹೌದು. ಇಂತಹ ಗುಡ್ಡಗಳನ್ನು ಕೊರೆದು, ಅದರೊಳಗಿನ ‘ನಿಕ್ಷೇಪವನ್ನು’ ಸೂರೆ ಮಾಡುವ ಪ್ರಯತ್ನಗಳು ವರ್ಷಗಳಿಂದಲೂ ನಡೆಯುತ್ತಲೇ ಇದೆ. ಆದರೆ, ಇದಕ್ಕೆ ಗದುಗಿನ ತೋಂಟದಾರ್ಯ ಸ್ವಾಮೀಜಿಯವರ ದೃಢ ಸಂಕಲ್ಪ, ಸ್ಥಳೀಯರ ಹೋರಾಟ ತಡೆಯಾಯಿತು. ಆದ್ದರಿಂದಲೇ ಕಪ್ಪತಗುಡ್ಡ ಕೊನೆಗೂ ಅಂದರೆ 2019ರಲ್ಲಿ ‘ವನ್ಯಜೀವಿಧಾಮ’ ಸ್ಥಾನವನ್ನು ಪಡೆದುಕೊಂಡಿತು.

ಇಷ್ಟಾದರೂ ಕಪ್ಪತಗುಡ್ಡ ಆತಂಕದಿಂದ ದೂರಾಗಿಲ್ಲ. ಗುಡ್ಡದಲ್ಲಿ ಕ್ವಾರಿ ಅಥವಾ ಗಣಿಗಾರಿಕೆ ನಿಂತಿದ್ದರೂ, ಬುಡದಲ್ಲಿ ಇನ್ನೂ ಕ್ವಾರಿಗಳು ನಡೆಯುತ್ತಲೇ ಇವೆ. ಇದನ್ನು ನಿಲ್ಲಿಸಲು ಸರ್ಕಾರ ಇತ್ತೀಚೆಗೆ ನೋಟಿಸ್ ಸಹ ನೀಡಿದೆ. ಆದರೆ, ‘ಕ್ವಾರಿಗಾಗಿ ಬಹಳಷ್ಟು ಕೋಟಿ ಹೂಡಿಕೆ ಮಾಡಿದ್ದೇವೆ. ನೀವೇ ಅನುಮತಿ ನೀಡಿ ಈಗ ಇಲ್ಲ ಎಂದರೆ ಹೇಗೆ’ ಎಂಬುದು ಗುತ್ತಿಗೆ ಪಡೆದವರ ಪ್ರಶ್ನೆ ಹಾಗೂ ವಾದ. ನಿಜ, ಸರ್ಕಾರ ತೆಗೆದುಕೊಂಡಿದ್ದ ಇಂತಹ ಪ್ರಕೃತಿಮಾರಕ ನಿರ್ಧಾರವನ್ನು ಒಪ್ಪಲು ಸಾಧ್ಯವೇ ಇಲ್ಲ. ಹೋರಾಟದಿಂದ ಸರ್ಕಾರದ ಕಣ್ಣೂ ಈಗ ತೆರೆದಿದೆ. ಆ ತೆರೆದ ಕಣ್ಣು ಮತ್ತೆ ಮುಚ್ಚಿಕೊಳ್ಳುವ ಮುನ್ನ ಸ್ಪಷ್ಟ ಹಾಗೂ ದೃಢ ನಿರ್ಧಾರ ಹಾಗೂ ಆದೇಶಗಳಾಗಬೇಕು. ಅಷ್ಟು ಮಾತ್ರ ಸಾಕಾಗುವುದಿಲ್ಲ, ಕಪ್ಪತಗುಡ್ಡವನ್ನು ವನ್ಯಜೀವಿಧಾಮವನ್ನಾಗಿ ಉಳಿಸಿಕೊಳ್ಳಲು ಆದೇಶಗಳ ಕಾರ್ಯಾನುಷ್ಠಾನವಾಗಬೇಕು.

ಕಪ್ಪತಗುಡ್ಡ ವನ್ಯಜೀವಿಧಾಮ ಎಂದಾಗಿದ್ದರೂ, ಗುಡ್ಡಕ್ಕೆ ಹೋಗಲು ಬರುವ ಹಾದಿಯಲ್ಲಿ ಯಾವುದೇ ರಕ್ಷಣೆ ಇಲ್ಲ ಎಂಬುದು ಸ್ಪಷ್ಟ. ಅರಣ್ಯ ಇಲಾಖೆಯವರು ಒಂದು ಚೆಕ್ ಪೋಸ್ಟ್ ಅಥವಾ ಒಂದು ತಡೆಯನ್ನು ಹಾಕಿ, ಇಲ್ಲಿಗೆ ಬರುವವರ ಒಂದು ಮಾಹಿತಿಯನ್ನೂ ಪಡೆಯುವುದಿಲ್ಲ. ಪ್ರವಾಸಿಗರಿಗೆ ಅಂಕುಶ ಹಾಕಬಾರದು ನಿಜ. ಆದರೆ, ಒಂದಷ್ಟು ರಕ್ಷಣಾತ್ಮಕ ಕ್ರಮಗಳು ಅಗತ್ಯ ಅಲ್ಲವೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT