ಮಂಗಳವಾರ, ಆಗಸ್ಟ್ 16, 2022
29 °C
ಪ್ರಕೃತಿ ಮಡಿಲು

PV Web Exclusive: ಪ್ರಕೃತಿ ಮಡಿಲು, ಕೆರೆಯಲ್ಲೇ ಕೊಳೆಯುವುದು ಕೊಳಕು!

ಆರ್. ಮಂಜುನಾಥ್‌ Updated:

ಅಕ್ಷರ ಗಾತ್ರ : | |

Prajavani

ಕಾರಂಜಿಯಂತೆ ನೀರು ಬುಳುಗುಡುತ್ತದೆ, ಚಿಮ್ಮುತ್ತದೆ; ಗಿಡಗಳು ತೇಲುತ್ತಿರುತ್ತವೆ; ಜಲಚರಗಳ ಚಿನ್ನಾಟಕ್ಕೆ ಕೊಳಕಿನ ತಡೆ ಇರುವುದಿಲ್ಲ... ಕೊಳಕೇ ತುಂಬಿರುವ ಕೆರೆಗಳಲ್ಲೂ ಇದೆಲ್ಲ ಸಾಧ್ಯ. ಅದಕ್ಕೆ ಬೇಕಿರುವುದು ‘ಮಧ್ಯಸ್ಥಿಕೆ’. ಅಂದರೆ ತಂತ್ರಜ್ಞಾನದ ಮಧ್ಯಪ್ರವೇಶ. ಅದಕ್ಕಿರುವ ಹೆಸರು ‘ಜೈವಿಕ ಚಿಕಿತ್ಸೆ’.

ರಾಜ್ಯದಲ್ಲಿ ಸಾವಿರಾರು ಕೋಟಿ ವೆಚ್ಚ ಮಾಡಿದರೂ ಜಲಮೂಲಗಳ ಒಡಲು ಮಾತ್ರ ಕೊಳಕಿನಿಂದಲೇ ತುಂಬಿಹೋಗಿದೆ. ನಗರ ಪ್ರದೇಶಗಳು ಮಾತ್ರವಲ್ಲ ಪಟ್ಟಣ–ಗ್ರಾಮಗಳಲ್ಲೂ ಒಳಚರಂಡಿ ಮಾಲಿನ್ಯ ಕೆರೆಗಳನ್ನು ಇನ್ನಿಲ್ಲದಂತೆ ಕಾಡುತ್ತಲೇ ಇದೆ. ಈ ಮಾಲಿನ್ಯವನ್ನು ಕೆರೆಯ ಒಡಲಲ್ಲೇ ಕರಗಿಸುವ ತಂತ್ರವೇ ‘ಜೈವಿಕ ಪರಿಹಾರ’.

ಕೆರೆಗಳ ಅಭಿವೃದ್ಧಿಗೆ ಸಾಕಷ್ಟು ಕೋಟಿ ವೆಚ್ಚ ಮಾಡಿದರೂ ಒಳನುಗ್ಗುವ ಕೊಳಕನ್ನು ತಡೆಯಲು ಸಾಧ್ಯವಾಗುತ್ತಿಲ್ಲ. ಕೆರೆಗೆ ಕೊಳಕು ಸೇರಿದ ಮೇಲಂತೂ ಅದನ್ನು ತೆಗೆಯಲು ಮತ್ತಷ್ಟು ಕೋಟಿಗಳ ವೆಚ್ಚ ‘ಹೂಳಿನ’ ರೂಪದಲ್ಲಿ ಕರಗಿಹೋಗುತ್ತದೆ. ಆದರೆ, ಕೆರೆಯಲ್ಲಿರುವ ಹೊಲಸು ಮಾತ್ರ ಹಾಗೆಯೇ ಉಳಿಯುತ್ತದೆ. ಇಂತಹ ಹೊಲಸೇ ಜಲಕಳೆಗೆ ಪೌಷ್ಟಿಕಾಂಶ. ಆ ಕೊಳಕನ್ನು ಕೆರೆಯಲ್ಲೇ ಕರಗಿಸಿ, ಜಲಕಳೆಯನ್ನು ತೊಲಗಿಸಿ, ದುರ್ವಾಸನೆಯನ್ನು ನಿರ್ಮೂಲನೆ ಮಾಡಿ, ಜಲಚರಗಳ ನಿರ್ಭೀತ ಜೀವನಕ್ಕೆ ಅನುವು ಮಾಡಿಕೊಡುವುದೇ ‘ಜೈವಿಕ ಪರಿಹಾರ’.

ಬೆಂಗಳೂರಿನಲ್ಲಿ 35 ಎಕರೆ ವಿಸ್ತೀರ್ಣದಲ್ಲಿರುವ ಹೆಬ್ಬಗೋಡಿ ಕೆರೆಯಲ್ಲಿ ‘ಜೈವಿಕ ಪರಿಹಾರ’ವನ್ನು ಜೆಎಂಎಸ್‌ ಬಯೊಟೆಕ್‌ ಸಂಸ್ಥೆ ಯಶಸ್ವಿಯಾಗಿ ಅನುಷ್ಟಾನಕ್ಕೆ ತಂದಿದೆ. ಎರಡು ವರ್ಷದಿಂದ ಅದರ ನಿರ್ವಹಣೆ ಮಾಡುತ್ತಿರುವ ಜೆಎಂಎಸ್‌, ಇದೀಗ ರಾಜ್ಯದಲ್ಲಿ ಪ್ರಸಿದ್ಧ ಕೆರೆಗಳಲ್ಲಿ ಒಂದಾಗಿರುವ ಧಾರವಾಡ ಜಿಲ್ಲೆಯ ಹುಬ್ಬಳ್ಳಿಯ ಉಣಕಲ್‌ ಕೆರೆಗೂ ‘ಜೈವಿಕ ಪರಿಹಾರ’ ನೀಡಲು ಮುಂದಾಗಿದೆ. 229ಕ್ಕೂ ಹೆಚ್ಚು ಎಕರೆ ವಿಸ್ತೀರ್ಣದಲ್ಲಿರುವ ಉಣಕಲ್ ಕೆರೆ, ಹುಬ್ಬಳ್ಳಿಗೆ ಒಂದು ಕಾಲದಲ್ಲಿ ಕುಡಿಯುವ ನೀರು ಕೊಟ್ಟಿತ್ತು. ಉಣಕಲ್‌ ಕೆರೆ ಇಂದು ಹೊಲಸಿನ ತಾಣ. ಅದಕ್ಕೀಗ ‘ಜೈವಿಕ ಚಿಕಿತ್ಸೆ’ ದೊರೆಯಲಿದೆ. ಈ ಚಿಕಿತ್ಸೆ ಇಲ್ಲೂ ಯಶ ಕಂಡರೆ, ಇದು ರಾಜ್ಯದ ಸಾವಿರಾರು ಕೆರೆಗಳಿಗೆ ಮಾದರಿಯಾಗಬಲ್ಲದು.

ಆರು ‘ಮಧ್ಯಸ್ಥಿಕೆ’ಗಳ ಮೂಲಕ ಸುಸ್ಥಿರ ಹಾಗೂ ಆರೋಗ್ಯಕರ ಜೀವವೈವಿಧ್ಯವನ್ನು ಸಾಧಿಸುತ್ತದೆ ‘ಜೈವಿಕ ಪರಿಹಾರ’. ಅದರ ‘ಜೈವಿಕ ಚಿಕಿತ್ಸಾ’ ವಿಧಾನಗಳೆಂದರೆ; ಬಯೊರೆಮೆಡಿಯೇಷನ್; ಏರೇಷನ್ ಸಿಸ್ಟಮ್ಸ್; ಆರ್ಟಿಫಿಸಿಯಲ್‌ ಫ್ಲೋಟಿಂಗ್‌ ಐಲ್ಯಾಂಡ್ಸ್‌; ಜೆಎಂಎಸ್ ಬಯೊ–ಫ್ರೇಮ್ಸ್; ಜೆಎಂಎಸ್‌–ಟ್ರಾಶ್ ಬ್ಯಾರಿಯರ್; ವಾಟರ್‌ ಹಯಾಸಿಂತ್‌ ರಿಮೂವಲ್‌.

ಬಯೊರೆಮೆಡಿಯೇಷನ್‌ (ಜೈವಿಕ ಪರಿಹಾರ)


ಜೈವಿಕ ಪರಿಹಾರ– ಜೈವಿಕ ಚಿಕಿತ್ಸೆಯ ನಕ್ಷೆ

ಜೈವಿಕ ಪರಿಹಾರದ ಮೂಲಕ ಕಲುಷಿತ ಜಲಮೂಲಗಳಲ್ಲಿರುವ ಪೋಷಕಾಂಶಗಳ ಪ್ರಮಾಣವನ್ನು ಕಡಿಮೆ ಮಾಡುವುದು. ಅಂದರೆ ನೈಸರ್ಗಿಕ ಮಾಲಿನ್ಯ ಪರಿಹಾರ ವ್ಯವಸ್ಥೆ. ಕೆರೆ ಹಾಗೂ ಕುಂಟೆಗಳಿಗೆ ‘ಜೈವಿಕ ಚಿಕಿತ್ಸೆ’ ಮೂಲಕ ಸ್ವಯಂ ಶುದ್ಧೀಕರಣದ ಶಕ್ತಿ ಒದಗಿಸಲಾಗುತ್ತದೆ.

ಬಯೊ–ಎಂಜೈಮ್ಸ್ (ಜೈವಿಕ–ಕಿಣ್ವಗಳು): ಸೂಕ್ಷ್ಮಜೀವಿಗಳು, ಫೋಟೊಸಿಂಥೆಟಿಕ್‌ ಬ್ಯಾಕ್ಟೀರಿಯಾ ಮತ್ತು ಕಿಣ್ವಗಳ ಮಿಶ್ರಣವೇ ಜೈವಿಕ–ಕಿಣ್ವಗಳು. ಇದನ್ನು ಸ್ಥಳೀಯ ಕೆರೆ ಒಡಲಲ್ಲಿರುವ ನೀರನ್ನೇ ಉಪಯೋಗಿಸಿಕೊಂಡು ತಯಾರಿಸಿ, ಒಳಹರಿವಿನಲ್ಲೇ ಸೇರಿಸಲಾಗುತ್ತದೆ. ಸಾಮಾನ್ಯವಾಗಿ ನೀರಿನಲ್ಲಿ ಕರಗದ ಗ್ರೀಸ್, ಫ್ಯಾಟ್, ಸ್ಟಾರ್ಚ್‌, ಡಿಟರ್ಜಂಟ್‌, ಪೋಷಕಾಂಶಗಳನ್ನು ಇದು ಕರಗಿಸುತ್ತದೆ. ಕ್ಷಿಪ್ರವಾಗಿ ಕಾರ್ಯನಿರ್ವಹಿಸುವ ಜೈವಿಕ–ಕಿಣ್ವಗಳು, ಹರಿವನ್ನು ಸುಲಭಗೊಳಿಸುತ್ತದೆ; ವಾಸನೆಯನ್ನು ಕಡಿಮೆಗೊಳಿಸಿ, ನಿಯಂತ್ರಿಸುತ್ತದೆ; ಇದು ಅತ್ಯಂತ ಸುರಕ್ಷಿತ ಹಾಗೂ ಪರಿಸರ ಸ್ನೇಹಿ.

ಏರೇಷನ್ ಸಿಸ್ಟಮ್ಸ್ (ಗಾಳಿ ವ್ಯವಸ್ಥೆ): ಕೆರೆಯಲ್ಲಿ ಜೈವಿಕ ಕ್ರಿಯೆಗಳಾಗಬೇಕೆಂದರೆ ಆಮ್ಲಜನಕ ಅತ್ಯಂತ ಮುಖ್ಯ. ಇದು ಕರಗಿದ ಸ್ವರೂಪದಲ್ಲಿರುವುದೂ ಅವಶ್ಯ. ಮಲಿನಗೊಂಡಿರುವ ಕೆರೆಯ ಮಧ್ಯಪದರದಲ್ಲಿ ಆಮ್ಲಜನಕ ಕರಗಿದ ಸ್ವರೂಪದಲ್ಲಿ ಇರದಿದ್ದರೆ ಜೈವಿಕ ಶುದ್ಧ ಪ್ರಕ್ರಿಯೆ ಸಾಧ್ಯವಾಗುವುದಿಲ್ಲ. ಹೀಗಾಗಿ, ನೀರಿನ ಹರಿವು ಅಥವಾ ಚಲನೆಯನ್ನು ಕೃತಕವಾಗಿ ಸೃಷ್ಟಿಸಿ ಆಮ್ಲಜನಕದ ಪೂರೈಕೆ ಮಾಡಲಾಗುತ್ತದೆ. ಮಾನವ ಚಟುವಟಿಕೆಗಳಾದ ಒಳಚರಂಡಿ ನೀರು, ಕೃಷಿ ತ್ಯಾಜ್ಯ ಅಥವಾ ಅತಿಯಾದ ಮೀನುಗಾರಿಕೆಯಿಂದ ಆಮ್ಲಜನಕದ ಕೊರತೆ ಉಂಟಾಗುತ್ತದೆ. ಇಂತಹ ಕೆರೆಗಳ ನೀರಿಗೆ ‘ಗಾಳಿ ವ್ಯವಸ್ಥೆ’ ಅಗತ್ಯ. ಕೆರೆಯ ಮಧ್ಯಪದರದಲ್ಲಿ ಆಮ್ಲಜನಕವನ್ನು ಹೆಚ್ಚಿಸಲು ಕೃತಕವಾಗಿ ಗಾಳಿಯನ್ನು ಬಿಟ್ಟು, ಅದು ನೀರು ಚಿಮ್ಮುವಂತೆ ಮಾಡಲಾಗುತ್ತದೆ. ಒಂದು ರೀತಿಯ ಸಣ್ಣಸಣ್ಣ ಕಾರಂಜಿಗಳು ಈ ‘ಗಾಳಿ ವ್ಯವಸ್ಥೆ’ಯಿಂದ ಸೃಷ್ಟಿಯಾಗುತ್ತವೆ. ಇವು ಕೆರೆಗೆ ಅತ್ಯಂತ ಅಗತ್ಯವಾದ ಕರಗಿದ ಸ್ವರೂಪದ ಆಮ್ಲಜನಕವನ್ನು ಒದಗಿಸಿ, ಜೈವಿಕ–ಕಿಣ್ವಗಳು ತಮ್ಮ ಕಾರ್ಯ ಮಾಡಲು ನೆರವಾಗುತ್ತವೆ.


ಬೆಂಗಳೂರಿನ ಹೆಬ್ಬಗೋಡಿ ಕೆರೆಯಲ್ಲಿರುವ ಜೈವಿಕ–ಕಿಣ್ವಗಳನ್ನು ತಯಾರಿಸುವ ಘಟಕ ಹಾಗೂ ಮಿಶ್ರಣವನ್ನು ಕೆರೆಗೆ ಹರಿಸುವುದು

ಆರ್ಟಿಫಿಸಿಯಲ್ ಫ್ಲೋಟಿಂಗ್‌ ಐಲ್ಯಾಂಡ್ಸ್ (ತೇಲುವ ಕೃತಕ ದ್ವೀಪಗಳು): ಮಲಿನಕೆರೆಗಳಲ್ಲಿ ಜಲಕಳೆಯದ್ದೇ ಸಾಮ್ರಾಜ್ಯ. ಇದಕ್ಕೆ ಭರಪೂರವಾಗಿ ಸಿಗುವ ಪೋಷಕಾಂಶಗಳನ್ನು ಜೈವಿಕ–ಕಿಣ್ವಗಳು ಕರಗಿಸಿ, ನಾಶಗೊಳಿಸುತ್ತವೆ. ಈ ಜಲಕಳೆಗೆ ಬದಲಾಗಿ ಸೂಕ್ಷ್ಮ ಪರಿಸರ ವ್ಯವಸ್ಥೆಯನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಹಾಗೂ ಮೇಲ್ಭಾಗದ ಮಾಲಿನ್ಯವನ್ನು ಸ್ವಚ್ಛಗೊಳಿಸುವ ಸಾಧನವಾಗಿ ತೇಲುವ ಕೃತಕ ದ್ವೀಪಗಳನ್ನು ಕೆರೆಯಲ್ಲಿ ನಿರ್ಮಿಸಲಾಗುತ್ತದೆ. ಇದರಲ್ಲಿರುವ ಗಿಡಗಳು ಪೋಷಕಾಂಶಗಳನ್ನು ಹೀರಿಕೊಳ್ಳುತ್ತವೆ. ಅಗತ್ಯವಾದ ಪೋಷಕಾಂಶಗಳು ಜಲಚರಗಳಿಗೂ ಈ ತೇಲುವ ದ್ವೀಪಗಳಿಂದ ಲಭ್ಯವಾಗುತ್ತವೆ.

ಬಯೊ–ಫ್ರೇಮ್ಸ್ (ಜೈವಿಕ ಚೌಕಟ್ಟುಗಳು): ಕೆರೆಯಲ್ಲಿರುವ ಒಳಚರಂಡಿ ಮಾಲಿನ್ಯವನ್ನು ಸ್ವಚ್ಛಗೊಳಿಸಲು ಅಲ್ಲಲ್ಲೇ ಜೈವಿಕ ಚೌಕಟ್ಟುಗಳನ್ನು ನಿರ್ಮಿಸಿ, ನೀರಿನ ಗುಣಮಟ್ಟವನ್ನು ಕಾಯ್ದುಕೊಳ್ಳಲಾಗುತ್ತದೆ. ಜೈವಿಕ–ಕಿಣ್ವಗಳೇ ಜೈವಿಕ ಚೌಕಟ್ಟುಗಳಾಗಿ ಕಾರ್ಯನಿರ್ವಹಿಸುತ್ತವೆ.


ಕೆರೆಯ ಮಧ್ಯಪದರದಲ್ಲಿ ಆಮ್ಲಜನಕವನ್ನು ಹೆಚ್ಚಿಸುವ ಕೃತಕ ‘ಗಾಳಿ ವ್ಯವಸ್ಥೆ’

ಟ್ರಾಶ್ ಬ್ಯಾರಿಯರ್ (ತ್ಯಾಜ್ಯಕ್ಕೆ ತಡೆ): ಕೆರೆಗಳ ಒಳಹರಿವಿನ ಪ್ರದೇಶದಲ್ಲಿ ತ್ಯಾಜ್ಯ ತಡೆಯನ್ನು ನಿರ್ಮಿಸಲಾಗುತ್ತದೆ. 3 ಅಡಿ ಆಳವಿರುವ ತೇಲುವ ಕೃತಕ ತಡೆಗೋಡೆ, ತ್ಯಾಜ್ಯ ಕೆರೆಯ ಒಳಗೆ ಹೋಗುವುದುನ್ನು ತಡೆಯುತ್ತದೆ.

ವಾಟರ್‌ ಹಯಾಸಿಂತ್‌ ರಿಮೂವಲ್‌ (ಜಲಕಳೆ ನಿರ್ಮೂಲನೆ): ಮಲಿನ ಕೆರೆಗಳಲ್ಲಿರುವ ಜಲಕಳೆಯ ಸಾಮ್ರಾಜ್ಯ ನಾಶಕ್ಕೆ ಅವುಗಳಿಗೆ ಅಗತ್ಯವಾದ ಪೋಷಕಾಂಶಗಳನ್ನೇ  ನಿರ್ಮೂಲನೆ ಮಾಡಲಾಗುತ್ತದೆ. ಜೈವಿಕ–ಕಿಣ್ವಗಳು ಜಲಕಳೆಗೆ ಅಗತ್ಯವಾದ ಪೋಷಕಾಂಶಗಳನ್ನು ಕರಗಿಸುವುದರಿಂದ ಜಲಕಳೆ ಸೊರಗುತ್ತದೆ, ಒಣಗುತ್ತದೆ.

ಮನರಂಜನಾ ತಾಣ


ಬೆಂಗಳೂರಿನ ಹೆಬ್ಬಗೋಡಿ ಕೆರೆಯಲ್ಲಿ ಸೃಷ್ಟಿಯಾಗಿರುವ ಕೃತಕ ತೇಲುವ ದ್ವೀಪಗಳು

‘ಕೆರೆಗೆ ಒಳಚರಂಡಿ ನೀರು, ಮಾಲಿನ್ಯ ಹೋಗುವುದಿಲ್ಲ ಎಂಬ ಪರಿಸ್ಥಿತಿ ರಾಜ್ಯದಲ್ಲಿ ಎಲ್ಲೂ ಇಲ್ಲ. ಅದು ಕೆರೆಗೆ ಸೇರುವ ಮೊದಲೇ ಸಂಸ್ಕರಿಸಿ ಬಿಡಬೇಕೆಂಬ ವ್ಯವಸ್ಥೆ ಎಲ್ಲೆಡೆ ಮಾಡಲು ಸಾಧ್ಯವೂ ಇಲ್ಲದಂತಾಗಿದೆ. ಆದ್ದರಿಂದ ಕೆರೆಯೊಳಗೇ ಮಾಲಿನ್ಯವನ್ನು ಕರಗಿಸಿ, ಕೆರೆ ನೀರನ್ನು ಸ್ವಚ್ಛಗೊಳಿಸುವ ತಂತ್ರಜ್ಞಾನವನ್ನು ‘ಜೈವಿಕ ವ್ಯವಸ್ಥೆ’ಯಡಿ ನಾವು ಮಾಡುತ್ತಿದ್ದೇವೆ. ಬೆಂಗಳೂರಿನ ಹೆಬ್ಬಗೋಡಿ ಕೆರೆಯಲ್ಲಿ ಯಶಸ್ಸು ಕಂಡಿದ್ದೇವೆ. ಇದೀಗ ಬೃಹತ್‌ ಉಣಕಲ್‌ ಕೆರೆಯಲ್ಲಿ ಅದನ್ನು ಅನುಷ್ಟಾನಗೊಳಿಸುತ್ತಿದ್ದೇವೆ. ಇನ್ನು ಮೂರ್ನಾಲ್ಕು ತಿಂಗಳಲ್ಲಿ ಉಣಕಲ್‌ ಕೆರೆ ಸ್ವಚ್ಛಗೊಳ್ಳಲಿದೆ’ ಎನ್ನುತ್ತಾರೆ ಜೆಎಂಎಸ್ ಬಯೊಟೆಕ್‌ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಡಾ. ಪ್ರಕಾಶ್‌ ಎಂ. ಕುಲಕರ್ಣಿ.

‘ಕಡಿಮೆ ವಿದ್ಯುತ್‌ ಬಳಸಿಕೊಂಡು ಅತ್ಯಾಧುನಿಕ ಯಂತ್ರಗಳ ಮೂಲಕ ‘ಜೈವಿಕ ಚಿಕಿತ್ಸೆ’ಯನ್ನು ನಿರ್ವಹಿಸಲಾಗುತ್ತದೆ. ಸೋಲಾರ್‌ ವಿದ್ಯುತ್‌ ಅನ್ನೂ ಉತ್ಪಾದಿಸಿ ಅದನ್ನೇ ಬಳಸಿಕೊಳ್ಳುವ ಯೋಜನೆ ಇದೆ. ಐದು ವರ್ಷ ಕೆರೆಯನ್ನು ‘ಜೈವಿಕ ಚಿಕಿತ್ಸೆ’ ಮೂಲಕ ನಾವೇ ಸಂಪೂರ್ಣವಾಗಿ ನಿರ್ವಹಣೆ ಮಾಡಿ, ಸ್ವಚ್ಛ ಹಾಗೂ ಸುಂದರವಾಗಿರಿಸುತ್ತೇವೆ. ಉಣಕಲ್‌ ಕೆರೆ ನಾಗರಿಕರಿಗೆ ಅತ್ಯುತ್ತಮ ಮನರಂಜನಾ ತಾಣವಾಗಲಿದೆ’ ಎನ್ನುತ್ತಾರೆ ಕುಲಕರ್ಣಿ.

‘ಉಣಕಲ್ ಕೆರೆಗೆ ಹರಿಯುತ್ತಿರುವ ಮಾಲಿನ್ಯವನ್ನು ನಮ್ಮ ‘ಜೈವಿಕ ಚಿಕಿತ್ಸೆ’ ಮೂಲಕ ನಿವಾರಿಸಿ, ಸ್ವಚ್ಛ ನೀರು ಕೆರೆಯಲ್ಲಿರುವಂತೆ ನಾವು ಐದು ವರ್ಷ ನಿರ್ವಹಣೆ ಮಾಡುತ್ತೇವೆ’ ಎನ್ನುತ್ತಾರೆ ಜೆಎಂಎಸ್‌ ಬಯೊಟೆಕ್‌ ಸಂಸ್ಥೆಯ ನಿರ್ದೇಶಕ ನವೀನ್‌ ದೊಡ್ಡಮನಿ.


ಬೆಂಗಳೂರಿನ ಹೆಬ್ಬಗೋಡಿ ಕೆರೆಯ ಅಂಚಿನಲ್ಲಿ ನಿರ್ಮಿಸಿರುವ ಕೃತಕ ತ್ಯಾಜ್ಯ ತಡೆಗೋಡೆ

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು