ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PV Web Exclusive | ‘ಕೆರೆಗಳ ನಗರಿ’ಯಲ್ಲಿ ಬೇಲಿ ಕಾಣದ 33 ಕೆರೆಗಳು!

ಪ್ರಕೃತಿ ಮಡಿಲು
Last Updated 7 ನವೆಂಬರ್ 2020, 11:15 IST
ಅಕ್ಷರ ಗಾತ್ರ

ರಾಜಧಾನಿ ಬೆಂಗಳೂರಿನಲ್ಲಿ ಅತಿಹೆಚ್ಚು ಮಳೆ ಸುರಿದು, ಬಡಾವಣೆಗಳು ತುಂಬಿತುಳುಕಿ, ಸಂಕಷ್ಟ ಎದುರಾದಾಗ ಮಾತ್ರ ಕೆರೆಗಳು ನೆನಪಾಗುತ್ತವೆ. ಒತ್ತುವರಿ ತೆರವು, ಅಭಿವೃದ್ಧಿ, ಕಾಲುವೆ ಸಂರಕ್ಷಣೆಯ ಮಾತುಗಳಾಗುತ್ತವೆ. ಈ ಮಾತುಗಳು ದಶಕದಿಂದ ಕೇಳಿ ಬರುತ್ತಲೇ ಇದೆ. ಮಳೆ ನಿಂತುಹೋದ ಮೇಲೆ ಎಲ್ಲವೂ ಎಲ್ಲರಿಗೂ ಮರೆತುಹೋಗುತ್ತದೆ. ಹೀಗಾಗಿಯೇ, ಕೆರೆಗಳ ನಗರಿ ಬೆಂಗಳೂರಿನಲ್ಲಿ 33 ಕೆರೆಗಳು ಬೇಲಿಯನ್ನೇ ಕಂಡಿಲ್ಲ. ಇನ್ನು ಅಭಿವೃದ್ಧಿಯ ಮಾತೆಲ್ಲಿ?

ಬೆಂಗಳೂರಿನ ಕೆರೆಗಳ ಅಭಿವೃದ್ಧಿಗೆ 2008ರಿಂದಲೂ ಸರ್ಕಾರ ₹1,000 ಕೋಟಿಗೂ ಮೀರಿ ಹಣ ಬಿಡುಗಡೆ ಮಾಡಿದೆ. ಬಿಬಿಎಂಪಿ, ಬಿಡಿಎ, ಅರಣ್ಯ ಇಲಾಖೆ, ಕೆರೆ ಅಭಿವೃದ್ಧಿ ಪ್ರಾಧಿಕಾರ ಎಂದು ಕೆರೆಗಳ ಅಭಿವೃದ್ಧಿಗೆ ಇಲಾಖೆಗಳ ಜವಾಬ್ದಾರಿ ಆಗಾಗ್ಗೆ ಬದಲಾದವು. ಆದರೆ ಕೆರೆಗಳನ್ನು ಉಳಿಸಿಕೊಳ್ಳಲು ಮೊದಲು ಮಾಡಬೇಕಾದ ಬೇಲಿ ಹಾಕುವ ಕಾರ್ಯ ಮಾತ್ರ ಜೀವಂತವಾಗಿರುವ ಕೆರೆಗಳಲ್ಲಿ ಇನ್ನೂ ಕೈಗೂಡಿಲ್ಲ. ಅಷ್ಟೇ ಅಲ್ಲ, ಕೆರೆಗಳನ್ನು ಉಳಿಸಿಕೊಳ್ಳಲು, ಒತ್ತುವರಿಯನ್ನು ತೆರವುಗೊಳಿಸಲು ನೇಮಿಸಲಾದ ತಹಶೀಲ್ದಾರ್‌ಗಳು ಕೂಡ ಬಿಬಿಎಂಪಿಗೆ ಬಂದು ಕಾರ್ಯವಹಿಸಿಕೊಂಡಿಲ್ಲ. ಬೇಲಿ ಹಾಕಲು ಗಡಿ ನಿರ್ಧರಿಸಿಲ್ಲ. ಹೀಗಾಗಿ ಬೇಲಿ ಇಲ್ಲದ ಕೆರೆಗಳನ್ನು ಭೂದಾಹಿಗಳು ಇನ್ನೂ ಮೇಯುತ್ತಿದ್ದಾರೆ.

ಬೆಂಗಳೂರಿನಲ್ಲಿ ‘205’ ಕೆರೆಗಳಿವೆ. ಹಲವು ಇಲಾಖೆಗಳು ನೀಡಿದ ಮಾಹಿತಿ ಹಾಗೂ ಇತರೆ ಸರ್ವೆಗಳ ನಂತರ ಬಿಬಿಎಂಪಿ ಒಟ್ಟಾಗಿ ಸೇರಿಸಿ ಈ 205 ಕೆರೆಗಳ ಪಟ್ಟಿ ಮಾಡಿದೆ. ಬೆಂಗಳೂರಿನಲ್ಲಿರುವ ಎಲ್ಲ ಕೆರೆಗಳ ಅಭಿವೃದ್ಧಿ ಇದೀಗ ಬಿಬಿಎಂಪಿಯದ್ದೇ ಜವಾಬ್ದಾರಿ. ಇದಕ್ಕಾಗಿ ವರ್ಷವರ್ಷ ಹಣವೂ ಬಿಡುಗಡೆ ಆಗುತ್ತಿದೆ. ಆದರೆ, ಇನ್ನೂ 33 ಕೆರೆಗಳಲ್ಲಿ ಒತ್ತುವರಿ ತೆರವು, ಬೇಲಿ ಹಾಕುವ ಕೆಲಸ ಮಾಡಲು ಬಿಬಿಎಂಪಿಗೆ ಸಾಧ್ಯವಾಗಿಲ್ಲ. ಏಕೆಂದರೆ, ಈಗಾಗಲೇ ಕೋಟ್ಯಂತರ ವೆಚ್ಚದಲ್ಲಿ ಅಭಿವೃದ್ಧಿ ಕಂಡಿರುವ ಕೆರೆಗಳಿಗೇ ‘ಪುನರ್‌ ನವೀಕರಣ’, ‘ಉನ್ನತೀಕರಣ’ದ ಹೆಸರಲ್ಲಿ ಮತ್ತಷ್ಟು ಕೋಟಿ ಮಂಜೂರಾಗುತ್ತಿವೆ.

ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅವರಿಗೆ ಬಿಬಿಎಂಪಿ ಆಯುಕ್ತರು ‘ಬೆಂಗಳೂರಿನ ಕೆರೆಗಳ ಸರ್ವೆ ಹಾಗೂ ಒತ್ತುವರಿ ತೆರವುಗೊಳಿಸುವ ಕಾರ್ಯಕ್ಕೆ ಸಂಬಂಧಿಸಿದಂತೆ ಸರ್ಕಾರಕ್ಕೆ ಕ್ರಿಯಾಯೋಜನೆ ಅನುಮೋದನೆ’ ವಿಷಯವಾಗಿ ಪತ್ರ ಬರೆದಿದ್ದಾರೆ. 33 ಕೆರೆಗಳಲ್ಲಿರುವ ಒತ್ತುವರಿ ತೆರವು, ಬೇಲಿ ನಿರ್ಮಾಣ, ನಿರ್ವಹಣಾ ವೆಚ್ಚಗಳ ಕ್ರಿಯಾಯೋಜನೆ ಇದು. ಇದಕ್ಕಾಗಿ ₹30.9 ಕೋಟಿ ಹಣ ವೆಚ್ಚ ಮಾಡುವ ಪ್ರಸ್ತಾವನೆ ಇದೆ. ಅಕ್ಟೋಬರ್‌ 6ರಂದು ಈ ಪತ್ರ ಬರೆದು ವಿನಂತಿಸಲಾಗಿದೆ. ಅಲ್ಲದೆ, ನ್ಯಾಯಾಲಯದ ಆದೇಶದಂತೆ ಕ್ರಮ ಕೈಗೊಳ್ಳಲು ಈ ಕ್ರಿಯಾಯೋಜನೆಗೆ ಅನುಮತಿ ನೀಡಿ, ಅನುದಾನ ಬಿಡುಗಡೆ ಮಾಡಬೇಕೆಂದು ಬಿಬಿಎಂಪಿ ಆಯುಕ್ತರು ಕೋರಿದ್ದಾರೆ. ಆದರೆ, ಈವರೆಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.

ಬಿಬಿಎಂಪಿ ವ್ಯಾಪ್ತಿಯ ಐದು ವಲಯಗಳಲ್ಲಿರುವ 33 ಕೆರೆಗಳ ಒಟ್ಟುವಿಸ್ತೀರ್ಣ 695 ಎಕರೆ 30 ಗುಂಟೆ. ಇದರಲ್ಲಿ 14 ಎಕರೆ 15 ಗುಂಟೆ ಒತ್ತುವರಿಯಾಗಿದೆ. ಒತ್ತುವರಿ ತೆರವಿಗೆ ₹94 ಲಕ್ಷ; ಬೇಲಿ ನಿರ್ಮಾಣಕ್ಕೆ ₹19.46 ಕೋಟಿ; ಭದ್ರತಾ ಕೊಠಡಿ, ಶೌಚಾಲಯ ನಿರ್ಮಾಣಕ್ಕೆ ₹7.16 ಕೋಟಿ, ಇತರೆ/ ಭ‌ದ್ರತಾ ವೆಚ್ಚ (ವಾರ್ಷಿಕ) ₹3.34 ಕೋಟಿ ಸೇರಿದಂತೆ ಒಟ್ಟು₹30.9 ಕೋಟಿ ಕ್ರಿಯಾಯೋಜನೆ ಇದು. ಇದರ ಜೊತೆಗೆ ಕೆರೆಗಳ ಅಭಿವೃದ್ಧಿಗೆ ಅಗತ್ಯವಾದ ಸಿಬ್ಬಂದಿ ನೇಮಕಕ್ಕೂ ಪ್ರಸ್ತಾವ ಸಲ್ಲಿಸಲಾಗಿದೆ.

ಬೆಂಗಳೂರಿನಲ್ಲಿ 2019ರಲ್ಲಿ ಭಾರಿ ಮಳೆಯಾದ ಸಂದರ್ಭದಲ್ಲಿ ಕೆರೆಗಳ ಅಸಮರ್ಪಕ ನಿರ್ವಹಣೆ ಹಾಗೂ ವಿವಿಧ ಇಲಾಖೆಗಳ ಸಮನ್ವಯ ಕೊರತೆಯಿಂದ ದೊಡ್ಡಬಿದರಕಲ್ಲು, ಹೊಸಕೆರೆಹಳ್ಳಿ ಮತ್ತು ಹುಳಿಮಾವು ಕೆರೆಗಳ ದಂಡೆ ಒಡೆದು ಖಾಸಗಿ ಹಾಗೂ ಸಾರ್ವಜನಿಕ ಆಸ್ತಿಗೆ ನಷ್ಟ ಉಂಟಾಗಿದೆ. ಈ ಸಂಬಂಧ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿತ್ತು. ಈ ಸಂದರ್ಭದಲ್ಲಿ ಭಾರತೀಯ ವಿಜ್ಞಾನ ಸಂಸ್ಥೆಯ ನಿವೃತ್ತ ಪ್ರಾಧ್ಯಾಪಕರಾದ ಡಾ.ಬಿ.ಆರ್‌. ಶ್ರೀನಿವಾಸಮೂರ್ತಿ ಅಧ್ಯಕ್ಷತೆಯಲ್ಲಿ ಮೂವರು ತಾಂತ್ರಿಕ ತಜ್ಞರ ಸಮಿತಿ ರಚಿಸಿ, ವರದಿ ಸಲ್ಲಿಸಲು ಹೈಕೋರ್ಟ್‌ ಸೂಚಿಸಿತ್ತು. 2019ರ ಡಿಸೆಂಬರ್‌ 17ರಂದು ಮಧ್ಯಂತರ ವರದಿ ಹಾಗೂ 2020ರ ಜನವರಿ 20ರಂದು ಸಮಿತಿ ಅಂತಿಮ ವರದಿಯನ್ನೂ ನೀಡಿದೆ. ಇದರಂತೆ ಬಿಬಿಎಂಪಿ ಕಾರ್ಯನಿರ್ವಹಿಸಲು ಕ್ರಿಯಾಯೋಜನೆಗೆ ಅನುಮೋದನೆ ನೀಡುವಂತೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ಕೆರೆಗಳ ಅಭಿವೃದ್ಧಿಗಾಗಿಯೇ ‘ಮುಖ್ಯಮಂತ್ರಿಗಳ ನವ ನಗರೋತ್ಥಾನ’ ಯೋಜನೆಯಲ್ಲಿ ₹348 ಕೋಟಿ ಹಣ ವಿನಿಯೋಗಿಸಲಾಗುತ್ತಿದೆ. ಆದರೆ ಇದರಲ್ಲಿ ಈ ಬೇಲಿ ಕಾಣದ 33 ಕೆರೆಗಳಿಲ್ಲ. ಅದಕ್ಕಾಗಿಯೇ ಹೆಚ್ಚುವರಿಯಾಗಿ ₹30 ಕೋಟಿಯ ಕ್ರಿಯಾಯೋಜನೆಗೆ ಅನುಮೋದನೆ ಹಾಗೂ ಅನುದಾನವನ್ನು ಬಿಬಿಎಂಪಿ ಕೇಳುತ್ತಿದೆ. ಹೊಸದಾಗಿ ಹಣ ನೀಡುವ ಬದಲು ‘ಮುಖ್ಯಮಂತ್ರಿಗಳ ನವ ನಗರೋತ್ಥಾನ’ ಯೋಜನೆಯಲ್ಲೇ ಇತರೆ ಕೆರೆಗಳ ನವೀಕರಣಕ್ಕೆ ನೀಡಲಾಗುವ ಹಣವನ್ನೇ ಬೇಲಿ ಕಾಣದ ಕೆರೆಗಳಿಗೆ ನೀಡಿದರೆ ಅವು ಉಳಿಯುತ್ತವೆ. ಕೆರೆಗಳಿಗೆ ಬೇಲಿ ಬಿದ್ದರೆ ಅವು ಉಳಿದಂತೆಯೇ ಸರಿ. ಅಭಿವೃದ್ಧಿ, ಪುನರ್‌ ಅಭಿವೃದ್ಧಿ, ನವೀಕರಣ, ಹೊಸ ಉಪಕರಣಗಳ ಸ್ಥಾಪನೆ ಮುಂದೆಯೂ ಮಾಡಬಹುದು. ಇದನ್ನು ಮೊದಲು ರಾಜಕಾರಣಿಗಳು ನಂತರ ಅಧಿಕಾರಿಗಳು ಅರಿಯಬೇಕಿದೆ.

ಬೇಲಿ ಕಾಣದ 33 ಕೆರೆಗಳು

ಬೊಮ್ಮನಹಳ್ಳಿ ವಲಯ (8): ಪರಪ್ಪನ ಅಗ್ರಹಾರ ಕೆರೆ, ಅಂಜನಾಪುರ/ಆಲಹಳ್ಳಿ ಕೆರೆ, ಕೊತ್ತನೂರು ಕೆರೆ, ಗುಬ್ಬಲಾಳು ಕೆರೆ, ಕೆಂಬತ್ತಹಳ್ಳಿ ಕೆರೆ, ಸುಬ್ರಮಣ್ಯ ಕೆರೆ, ಕೂಡ್ಲು ದೊಡ್ಡಕೆರೆ, ಸಾರಕ್ಕಿ/ಪುಟ್ಟೇನಹಳ್ಳಿ ಕೆರೆ.

ರಾಜರಾಜೇಶ್ವರಿ ವಲಯ (6): ಕೆಂಚೇನಹಳ್ಳಿ ಕೆರೆ, ಲಿಂಗಧೀರಹಳ್ಳಿ ಕೆರೆ, ಹಂದ್ರಹಳ್ಳಿ ಕೆರೆ, ಜೋಗಿ ಕೆರೆ, ಉಲ್ಲಾಳು ಕೆರೆ, ಶ್ರೀಗಂಧಕಾವಲು ಕೆರೆ.

ದಾಸರಹಳ್ಳಿ ವಲಯ (2): ನರಸಪ್ಪನಹಳ್ಳಿ ಕೆರೆ, ಶಿವಪುರ ಕೆರೆ,

ಯಲಹಂಕ ವಲಯ (6): ಅಗ್ರಹಾರ ಕೆರೆ, ಕತ್ತಿಗೇನಹಳ್ಳಿ ಕೆರೆ, ಲಕ್ಷ್ಮೀಪುರ ಕೆರೆ, ನರಸೀಪುರ ಕೆರೆ, ವಡೇರಹಳ್ಳಿ ಕೆರೆ, ಚಿಕ್ಕನಹಳ್ಳಿ ಕೆರೆ.

ಮಹದೇವಪುರ ವಲಯ (11): ಕೈಕೊಂಡನಹಳ್ಳಿ ಕೆರೆ, ಸೀಗೇಹಳ್ಳ ಕೆರೆ, ದೇವಸಂದ್ರ ಕೆರೆ, ದೊಡ್ಡ ಕಾಣೇನಹಳ್ಳಿ ಕೆರೆ, ಮುನ್ನೇಕೊಳಲು ಕೆರೆ, ಹರಳೂರು ಕೆರೆ, ಶೌಲೆ ಕೆರೆ, ಗರುಡಾಚಾರ್‌ಪಾಳ್ಯ ಕೆರೆ, ಭೋಗನಹಳ್ಳಿ ಕೆರೆ, ಜುನ್ನಸಂದ್ರ ಕೆರೆ, ಸೀತಾರಾಂಪಾಳ್ಯ ಕೆರೆ.

ಕೆಲಸಕ್ಕೆ ಬಾರದ ತಹಶೀಲ್ದಾರರು

ಕೆರೆ ಒತ್ತುವರಿ ತೆರವುಗೊಳಿಸುವ ಕಾರ್ಯಕ್ಕಾಗಿ ರಾಜ್ಯ ಸರ್ಕಾರ ನೇಮಕ ಮಾಡಿರುವ ತಹಶೀಲ್ದಾರ್‌ರರು ಬಿಬಿಎಂಪಿಯಲ್ಲಿ ಇನ್ನೂ ಕಾರ್ಯನಿರತರಾಗಿಲ್ಲ. ಹೈಕೋರ್ಟ್‌ ಆದೇಶದಂತೆ ಒತ್ತುವರಿ ತೆರವು ಮಾಡಲು ಬಿಬಿಎಂಪಿ ತಹಶೀಲ್ದಾರ್‌ಗಳ ನೇಮಕಕ್ಕೆ ಸರ್ಕಾರವನ್ನು ವಿನಂತಿಸಿತ್ತು. ಈ ಸಂಬಂಧ ತಹಶೀಲ್ದಾರರಿಗೆ ಮೆಜಿಸ್ಟ್ರಿಯಲ್‌ ಅಧಿಕಾರ ನೀಡಿ, ವಿಶೇಷ ಕಾರ್ಯನಿರ್ವಾಹಕ ದಂಡಾಧಿಕಾರಿ ಎಂದು ಇಬ್ಬರನ್ನು ಒಳಾಡಳಿತ ಇಲಾಖೆ 2020ರ ಸೆಪ್ಟೆಂಬರ್‌ 16ರಂದು ಆದೇಶ ಹೊರಡಿಸಿತ್ತು. ಆದರೆ, ಅಕ್ಟೋಬರ್‌ 6ರವರೆಗೂ ನೇಮಕವಾಗಿರುವ ಶ್ರೀಧರಮೂರ್ತಿ ಹಾಗೂ ನರಸಿಂಹಮೂರ್ತಿ ಕೆಲಸಕ್ಕೆ ಹಾಜರಾಗಿಲ್ಲ ಎಂದು ಬಿಬಿಎಂಪಿ ಆಯುಕ್ತರು ನಗರಾಭಿವೃದ್ಧಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಹಾಗೂ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ. ಆದರೂ ತಹಶೀಲ್ದಾರರು ಕಾರ್ಯನಿರ್ವಹಿಸಲು ಬಿಬಿಎಂಪಿಗೆ ಇನ್ನೂ ಬಂದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT