ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆದಿನಾರಾಯಣ ಸ್ವಾಮಿ ಬೆಟ್ಟ ‘ಪಾರಂಪರಿಕ ತಾಣ’: ಉರುಂಬಿ ‘ಸೂಕ್ಷ್ಮ ಜೈವಿಕ ಪ್ರದೇಶ’

Last Updated 5 ನವೆಂಬರ್ 2020, 12:56 IST
ಅಕ್ಷರ ಗಾತ್ರ

ಬೆಂಗಳೂರು: ಚಿಕ್ಕಬಳ್ಳಾಪುರ ಜಿಲ್ಲೆ ಗುಡಿಬಂಡೆ ತಾಲ್ಲೂಕಿನಲ್ಲಿರುವ ಆದಿನಾರಾಯಣ ಸ್ವಾಮಿ ಬೆಟ್ಟವನ್ನು ಬಹು ಅಮೂಲ್ಯ ದೇವರ ಕಾಡು ಎಂದು ಗುರುತಿಸಿ ರಾಜ್ಯ ‘ಜೈವಿಕ ಪಾರಂಪರಿಕ ತಾಣ’ ಪಟ್ಟ ನೀಡಲು ಕರ್ನಾಟಕ ಜೀವವೈವಿಧ್ಯ ಮಂಡಳಿ ನಿರ್ಧರಿಸಿದೆ.

ಮಂಡಳಿಯ ಅಧ್ಯಕ್ಷ ಅನಂತ ಹೆಗಡೆ ಅಶೀಸರ ನೇತೃತ್ವದಲ್ಲಿ ಇತ್ತೀಚೆಗೆ ನಡೆದ ಸಭೆಯಲ್ಲಿ ಹಲವು ಮಹತ್ವದ ತೀರ್ಮಾನಗಳನ್ನು ತೆಗೆದುಕೊಳ್ಳಲಾಗಿದೆ.

ದಕ್ಷಿಣ ಜಿಲ್ಲೆ ಕಡಬ ತಾಲ್ಲೂಕಿನ ಕುಮಾರಧಾರಾ ನದಿ ತೀರದ ‘ಉರುಂಬಿ’ ಎಂಬ ಸ್ಥಳಕ್ಕೆ ಸೂಕ್ಷ್ಮ ಜೈವಿಕ ಪ್ರದೇಶ ಪಟ್ಟ, ನೆಲಮಂಗಲ ತಾಲ್ಲೂಕಿನ ಮಹಿಮಾರಂಗ ಬೆಟ್ಟ, ಕೋಲಾರದ ಅಂತರಗಂಗೆ ಬೆಟ್ಟವನ್ನು ಜೀವವೈವಿಧ್ಯ ತಾಣಗಳು ಎಂದು ಘೋಷಿಸಲು ಮಂಡಳಿ ತೀರ್ಮಾನಿಸಿದೆ.

ಚಿಕ್ಕಮಗಳೂರು ಜಿಲ್ಲೆ ಸಖರಾಯ ಪಟ್ಟಣದ ಶಕುನಗಿರಿ ಬೆಟ್ಟ ಪ್ರದೇಶವನ್ನು ಅದರ ಪಕ್ಕದಲ್ಲೇ ಇರುವ ಹೊಗರೇ ಕಾನುಗಿರಿ ಪಾರಂಪರಿಕ ತಾಣಕ್ಕೆ ಸೇರಿಸುವಂತೆ ಶಿಫಾರಸು ಮಾಡಲಾಗಿದೆ. ಬೆಳ್ಳಕ್ಕಿಗಳ ತವರೂರಾಗಿರುವ ಉತ್ತರ ಕನ್ನಡ ಜಿಲ್ಲೆ ಶಿರಸಿ ತಾಲ್ಲೂಕಿನ ಸೋಂದಾ ಗ್ರಾಮದ ಮುಂಡಿಗೆ ಕೆರೆಯನ್ನು ಜೈವಿಕ ತಾಣವೆಂದು ಸ್ಥಳೀಯ ಗ್ರಾಮ ಪಂಚಾಯಿತಿ ಈಗಾಗಲೇ ಗುರುತಿಸಿದೆ. ಸ್ಥಳೀಯರು ಪಕ್ಷಿಧಾಮ ಎಂದು ಘೋಷಿಸುವಂತೆ ಸಲ್ಲಿಸಿದ ಪ್ರಸ್ತಾವನೆಯನ್ನು ಒಪ್ಪಿರುವ ಮಂಡಳಿ, ಈ ಬಗ್ಗೆ ಕ್ರಮ ತೆಗೆದುಕೊಳ್ಳುವಂತೆ ವನ್ಯಜೀವಿ ಇಲಾಖೆಗೆ ಶಿಫಾರಸು ಮಾಡಿದೆ.

ಅಲ್ಲದೆ, ರಾಜ್ಯದ ಎಂಟು ಸ್ಥಳಗಳಲ್ಲಿ ಮತ್ಸ್ಯಧಾಮಗಳನ್ನು ಗುರುತಿಸಿ ಘೋಷಿಸಲು ಮೀನುಗಾರಿಕಾ ಇಲಾಖೆಗೆ ಮಂಡಳಿ ಸೂಚಿಸಿದೆ. ಇನ್ನೂ ಏಳು ಸ್ಥಳಗಳಲ್ಲಿ ಅಪರೂಪದ ಮೀನು ವೈವಿಧ್ಯ ತಾಣಗಳನ್ನು ಗುರುತಿಸಿ, ಘೋಷಿಸಲು ಮಂಡಳಿ ನಿರ್ಧರಿಸಿದ್ದು, ಮೀನುಗಾರಿಕಾ ಇಲಾಖೆ ಜೊತೆ ಚರ್ಚಿಸಲು ಮುಂದಾಗಿದೆ. ವಿನಾಶದ ಅಂಚಿನಲ್ಲಿರುವ ಕುಮಟಾ ತಾಲ್ಲೂಕಿನ ಗಜನಿ ಕಗ್ಗಭತ್ತ, ಹಾಸನದ ರಾಜಮುಡಿ ಅಕ್ಕಿ ಮತ್ತು ಅಂಕೋಲಾ ತಾಲ್ಲೂಕಿನ ಕರೇಈಶಾಡು ಮಾವಿನ ಹಣ್ಣು ತಳಿಗಳಿಗೆ ಕೇಂದ್ರ ಸರ್ಕಾರ ಜಿಯಾಗ್ರಾಫಿಕಲ್ ಇಂಡಿಕೇಟರ್ ಸ್ಥಾನಮಾನ ನೀಡಬೇಕು ಎಂದೂ ಮಂಡಳಿ ಶಿಫಾರಸು ಮಾಡಿದೆ.

ರಾಜ್ಯದಲ್ಲಿ ಈಗಾಗಲೇ 10 ಪಾರಂಪರಿಕ ವೃಕ್ಷಗಳನ್ನು ಗುರುತಿಸಲಾಗಿದೆ. ಇನ್ನಷ್ಟು ಪಾರಂಪರಿಕ ವೃಕ್ಷಗಳನ್ನು ಗುರುತಿಸಲು ತೀರ್ಮಾನಿಸಲಾಗಿದೆ. ಈ ವೃಕ್ಷಗಳನ್ನು ಜೀವವೈವಿಧ್ಯ ಕಾಯ್ದೆ ಅಡಿಯಲ್ಲಿ ಘೋಷಿಸಲು ಮಾರ್ಗದರ್ಶಿ ಸೂತ್ರ ಸಿದ್ಧಪಡಿಸಿ ಸರ್ಕಾರದಿಂದ ಒಪ್ಪಿಗೆ ಪಡೆಯಲು ಸಭೆಯಲ್ಲಿ ತೀರ್ಮಾನಿಸಲಾಗಿದೆ. ಅಲ್ಲದೆ, ಗ್ರಾಮ ಸಾಮೂಹಿಕ ಭೂಮಿ, ಗ್ರಾಮ ನೈಸರ್ಗಿಕ ಸಂಪತ್ತಿನ ಸಂರಕ್ಷಣೆ ಕುರಿತು ಸಮೀಕ್ಷೆ ನಡೆಸಿ ವರದಿ ಪಡೆಯಲು ತಜ್ಞರ ಸಮಿತಿ ರಚಿಸಲು ಕೂಡಾ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT