ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ಲಾಸ್ಟಿಕ್ ಬ್ಯಾಗ್ ಮುಕ್ತ ದಿನ - ನೀನ್ಯಾರಿಗೂ ಸಲ್ಲದವಳು

Last Updated 2 ಜುಲೈ 2022, 19:45 IST
ಅಕ್ಷರ ಗಾತ್ರ

ಏಕಬಳಕೆಯ ಪ್ಲಾಸ್ಟಿಕ್‌ ಸಾಮಗ್ರಿಗಳ ಬಳಕೆಗೆ ನಿಷೇಧ ಜಾರಿಯಾದ ಈ ಹೊತ್ತಿನಲ್ಲಿನೊರೆಕಾಯಿಯ ನೆನಪು ಮತ್ತೆ ಮತ್ತೆ ಆಗುತ್ತಿದೆ, ಏಕೋ?

ಅದು ಬಿರು ಬೇಸಿಗೆಯ ಸಮಯ. ಆಗಿನ್ನೂ ನಮ್ಮದು ಪ್ರೈಮರಿ ಸ್ಕೂಲು. ಅಜ್ಜಿ ಮನೆಗೆ ರಜೆ ಕಳೆಯಲು ಹೋದ ಮೊಮ್ಮಕ್ಕಳಿಗೆ ಮಧ್ಯಾಹ್ನದ ಮೇಲೆ ಅಜ್ಜಿ ಹೇಳಿದ ಡ್ಯೂಟಿ. ಮನೆಯ ಹಿಂಬದಿಯಿದ್ದ ಕಾಡಿನಿಂದ ನೊರೆಕಾಯಿ ತರುವ ಕೆಲಸವದು. ನೊರೆಕಾಯಿ ಎಂದರೆ ಗೊತ್ತಾಯಿತಲ್ಲವೇ... ಅಂಟುವಾಳ. ದೋಟಿ ಹಿಡಿದು ಹೊರಟರೆ ಮೈಕೈ, ಬಟ್ಟೆಯೆಲ್ಲ ಅಂಟು ಮಾಡಿಕೊಂಡು ಚೀಲ ತುಂಬಾ ನೊರೆಕಾಯಿಯನ್ನು ತಂದು ಅಜ್ಜಿಗೆ ಹಸ್ತಾಂತರಿಸಿದರೆ ಸಂಜೆ ಆಟಕ್ಕೆ ಮತ್ತೆ ನಾವು ಸಿದ್ಧ.

ಹೀಗೆ ತಂದ ನೊರೆಕಾಯಿಯನ್ನು ಬಿಸಿಲಿಗೆ ಒಣಹಾಕುತ್ತಿದ್ದ ಅಜ್ಜಿ, ಅವುಗಳು ಒಣಗಿದ ಮೇಲೆ ಅಟ್ಟದಲ್ಲಿ ಶೇಖರಿಸಿಡುತ್ತಿದ್ದರು. ಇವುಗಳೇನಕ್ಕೆ ಎನ್ನುವುದು ಆಗ ನಮಗೆ ಅಗತ್ಯವಿಲ್ಲದ ಪ್ರಶ್ನೆ. ಬೆಳೆದಂತೆ ಸೋಪು, ಶ್ಯಾಂಪು, ಡಿಶ್‌ವಾಶರ್‌ ಹೀಗೆ ಬಗೆಬಗೆಯ ನಾಮಧೇಯಗಳ ನೊರೆ ಕಕ್ಕುವ ಉತ್ಪನ್ನಗಳು ಕೈಗೆ ಸಿಕ್ಕಾಗ, ಮತ್ತದೇ ನೊರೆಕಾಯಿ ನೆನಪಾಯಿತು. ನನ್ನ ಹೆಸರು ಅಮ್ಮನ ಮೊಬೈಲ್‌ ಮೇಲೆ ಕಾಣಿಸಿತ್ತು. ಹಲೋ ಎಂದವಳಿಗೆ... ‘ಆ ನೊರೆಕಾಯಿ ತರ್ತಿದ್ವಲ್ವಾ, ಅಜ್ಜಿ ಏನ್ಮಾಡ್ತಿದ್ರು?’ ಎಂಬ ಪ್ರಶ್ನೆಯೆಸೆದೆ. ಅಮ್ಮನೂ ತನ್ನ ಬಾಲ್ಯಕ್ಕೆ ಹೊರಳಿದಳು. ‘ಬಿಸಿಲಲ್ಲಿ ಒಣಗಿಸಿದ ಕಾಯಿಯನ್ನು ಬಟ್ಟೆಯೊಳಗಿಟ್ಟು ಅದನ್ನು ಹೊರಗಿನಿಂದಲೇ ಜಜ್ಜಿ, ಅದನ್ನು ನೀರಿನಲ್ಲಿ ನೆನೆಸಿದರೆ ಕಾಯಿಗಳು ನೊರೆ ಬಿಡುತ್ತಿದ್ದವಂತೆ. ಪಾತ್ರೆ ತೊಳೆಯಲು, ಬಟ್ಟೆ ಒಗೆಯಲು, ತಲೆಸ್ನಾನ ಮಾಡಲು ಹೀಗೆ ಈ ನೊರೆಯ ನೀರನ್ನು ಎಲ್ಲದಕ್ಕೂ ಬಳಸುತ್ತಿದ್ದೆವು’ ಎಂದು, ಏಕಾಏಕಿ ‘ಈಗೇಕೆ ನೆನಪಾಯಿತು’ ಮರುಪ್ರಶ್ನಿಸಿದಳು ಅಮ್ಮ. ‘ಸುಮ್ಮನೆ’ ಎಂದಷ್ಟೇ ಉತ್ತರಿಸಿದೆ.

ನೊರೆಕಾಯಿಯ ನೆನಪು ಏಕಾಏಕಿ ಉಕ್ಕಿ ಬರಲೂ ಕಾರಣವಿದೆ. ಇತ್ತೀಚೆಗಷ್ಟೇ ‘ಆರ್ಗನೈಸೇಷನ್‌ ಫಾರ್‌ ಎಕಾನಾಮಿಕ್‌ ಡೆವಲಪ್‌ಮೆಂಟ್‌ ಆ್ಯಂಡ್‌ ಕಾರ್ಪೊರೇಷನ್‌ (ಒಇಸಿಡಿ)’ ತಯಾರಿಸಿದ ವರದಿಯೊಂದನ್ನು ಗಮನಿಸಿದ್ದೆ. ವರದಿಯ ಆರಂಭದಲ್ಲೇ ‘ಪ್ರಪಂಚದಾದ್ಯಂತ ಉತ್ಪತ್ತಿಯಾಗುತ್ತಿರುವ ಪ್ಲಾಸ್ಟಿಕ್‌ ತ್ಯಾಜ್ಯದ ಪ್ರಮಾಣ 2060ರೊಳಗೆ ಮೂರು ಪಟ್ಟು ಹೆಚ್ಚಲಿದೆ. ಈ ಪೈಕಿ ಅರ್ಧದಷ್ಟು ಭೂಗರ್ಭ ಸೇರಲಿದೆ. ಕೆರೆ, ನದಿ ಹಾಗೂ ಸಮುದ್ರಕ್ಕೆ ಸೇರುವ ಪ್ಲಾಸ್ಟಿಕ್‌ ಪ್ರಮಾಣವೂ ಮೂರು ಪಟ್ಟು ಅಧಿಕವಾಗಿರಲಿದೆ. ಆಫ್ರಿಕಾ ಏಷ್ಯಾದಂತಹ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಲ್ಲಿ ಈ ಪ್ರಮಾಣ ಹೆಚ್ಚಿರಲಿದ್ದು, ಪ್ಲಾಸ್ಟಿಕ್‌ ಬಳಕೆಯು 460 ಮಿಲಿಯನ್‌ ಟನ್‌ನಿಂದ 1,231 ಮಿಲಿಯನ್‌ ಟನ್‌ಗೆ ಏರಿಕೆಯಾಗಲಿದೆ’ ಎನ್ನುವುದನ್ನು ಓದಿ ಮನೆಯೊಳಗಿದ್ದ ಪ್ಲಾಸ್ಟಿಕ್‌ ವಸ್ತುಗಳೆಲ್ಲ ಸ್ಮೃತಿಪಟಲದಲ್ಲಿ ಗಿರಕಿ ಹೊಡೆಯತೊಡಗಿದವು.

ಇದರ ಬೆನ್ನಲ್ಲೇ ‘ಭಾರತದಲ್ಲಿ ಜುಲೈ 1ರಿಂದ ಒಮ್ಮೆ ಉಪಯೋಗಿಸಿ ಎಸೆಯುವ ಪ್ಲಾಸ್ಟಿಕ್‌ ವಸ್ತುಗಳಾದ ಇಯರ್‌ಬಡ್‌ಗೆ ಬಳಸುವ ಪ್ಲಾಸ್ಟಿಕ್‌ ಕಡ್ಡಿ, ಪ್ಲಾಸ್ಟಿಕ್‌ ಧ್ವಜ, ಥರ್ಮಕೋಲ್‌, ತಟ್ಟೆ, ಚಮಚ, ಸಿಗರೇಟ್‌ ಪ್ಯಾಕೆಟ್‌, ಸಿಹಿ ತಿಂಡಿ ಪೊಟ್ಟಣಗಳ ಸುತ್ತ ಸುತ್ತವ ತೆಳುವಾದ ಪ್ಲಾಸ್ಟಿಕ್‌, ಬಳಸಿ ಬೀಸಾಡುವ ಪ್ಲಾಸ್ಟಿಕ್‌ ಬ್ಯಾಗ್‌ಗೆ ನಿಷೇಧ’ ಸುದ್ದಿಯೂ ಕಣ್ಣಿಗೆ ಬಿತ್ತು. ಇವೆಲ್ಲವೂ ನೊರೆಕಾಯಿಯ ನೊರೆ ಹೆಚ್ಚಿಸಿದವು.

ಪರಿಸರಕ್ಕೆ ಏನೂ ಹಾನಿ ಮಾಡದೆ ಬಟ್ಟೆಯೊಳಗೆ ಕುಳಿತು ನೊರೆ ಬಿಡುತ್ತಿದ್ದ ನೊರೆಕಾಯಿಗಳೆಲ್ಲಿ! ಪ್ಲಾಸ್ಟಿಕ್‌ ಬಾಟಲ್‌, ಕವರ್‌ನೊಳಗಿಂದ ಪರಿಸರಕ್ಕೆಲ್ಲ ನೊರೆಕಕ್ಕುವ ಉತ್ಪನ್ನಗಳೆಲ್ಲಿ!

ಕಾಲ ಎಷ್ಟು ಬದಲಾಗಿದೆ ಎಂದರೆ ಸೋಪೊಂದಿದ್ದರೆ ಸಾಕು ಎನ್ನುತ್ತಿದ್ದ ಸ್ನಾನಗೃಹಗಳಲ್ಲೀಗ, ಪ್ಲಾಸ್ಟಿಕ್‌ ಲೋಕವೇ ಸೃಷ್ಟಿಯಾಗಿದೆ. ಮೈಗೊಂದು, ತಲೆಗೊಂದು, ಮುಖಕ್ಕೊಂದು, ಕೈಗೊಂದು, ಕಾಲಿಗೊಂದು ಸೋಪು, ಶ್ಯಾಂಪು, ವಾಶ್‌ಗಳು ಪ್ಲಾಸ್ಟಿಕ್‌ ಒಳಗೆ ಅಡಗಿ ಕುಳಿತಿವೆ. ದಂತಪಂಕ್ತಿಗೂ ಹತ್ತಾರು ಉತ್ಪನ್ನಗಳು ಶೆಲ್ಫೇರಿವೆ! ಬೇವಿನ ಕಡ್ಡಿ ಹೋಗಿ ಮೈಮಾಟದ ಬ್ರಷ್‌ಗಳು ಬಂದಿವೆ, ಅದರಲ್ಲೂ ನೂರು ಬಗೆಗಳಿವೆ. ಪೌಡರ್‌ ಸಾಲದಕ್ಕೆ ಪೇಸ್ಟ್‌, ಪೇಸ್ಟ್‌ ಜೊತೆಗೆ ಮೌತ್‌ವಾಶ್‌, ಸಾಲದಕ್ಕೆ ಫ್ಲಾಸ್‌! ಎಲ್ಲವೂ ಪ್ಲಾಸ್ಟಿಕ್‌ನಲ್ಲೇ ಸುತ್ತಿಬಂದವುಗಳು. ಇನ್ನು ಸ್ನಾನಗೃಹದ ನೆಲಕ್ಕೊಂದು, ಗೋಡೆಗೊಂದು ಕ್ಲೀನರ್‌, ಎರಡು ಮಾದರಿಯ ಟಾಯ್ಲೆಟ್‌ಗಳಿಗೂ ಬೇರೆ ಬೇರೆ ಮಾದರಿಯ ಕ್ಲೀನಿಂಗ್‌ ಲಿಕ್ವಿಡ್‌! ಹೀಗೆ ಆ ಪುಟ್ಟ ಗೂಡಿನೊಳಗೆ ಪ್ಲಾಸ್ಟಿಕ್‌ ಸಾಮ್ರಾಜ್ಯದ ಒಡ್ಡೋಲಗ, ಸಾಮ್ರಾಜ್ಯ ವಿಸ್ತರಣೆಯ ಮುಂದಿನ ಪಿತೂರಿ ಬೇರೆ. ಅಂಗಡಿಗಳತ್ತ ಕಣ್ಣು ಹಾಯಿಸಿದರೆ, ಲಾಲಿಪಪ್‌ನಂತೆ ನೇತಾಡುವ ಬಳಸಿ ಬಿಸಾಕುವ ಶೇವಿಂಗ್‌ ಸೆಟ್‌ಗಳು, ಬಗೆಬಗೆಯ ಪ್ಲಾಸ್ಟಿಕ್‌ ಬಾಚಣಿಕೆಗಳು, ಶ್ಯಾಂಪೂ, ಮಸಾಲೆ ಸ್ಯಾಚೆಗಳು... ಹೀಗೆ ಯೋಚಿಸುವಾಗ ಮತ್ತೆ ಮತ್ತೆ ನೆನಪಾಗುತ್ತವೆ ನೊರೆಕಾಯಿ, ಬೂದಿ, ಸೀಗೆ ಕಾಯಿ, ಬೇವಿನ ಕಡ್ಡಿ.

ಈಗ ನಾವು ಇಟ್ಟಿರುವ ಬಿಡುಬೀಸಾದ ಹೆಜ್ಜೆಯನ್ನು ಮತ್ತೆ ಹಿಂದೆ ತೆಗೆದುಕೊಳ್ಳುವುದು ಕಷ್ಟ. ಪಾನೀಯಕ್ಕೆ ಕೃತಕ ನಿಂಬೆ ಹಣ್ಣಿನ ರಸದ ಸ್ವಾದ ನೀಡಿ, ಡಿಶ್‌ವಾಶರ್‌ಗೆ ನೂರು ನೈಸರ್ಗಿಕ ನಿಂಬೆಗಳನ್ನು ಹಿಂಡುವ ಕಾಲವಿದು. ಹೀಗಾಗಿ ಮತ್ತೆ ಬೇರಿನೆಡೆಗೆ ಹೆಜ್ಜೆ ಕಷ್ಟಸಾಧ್ಯ. ಹೀಗಿದ್ದರೂ, ಪ್ಲಾಸ್ಟಿಕ್‌ ತ್ಯಾಜ್ಯ ನಿಯಂತ್ರಣಕ್ಕೆ ಹಲವು ಬದಲಾವಣೆಗಳು ಸದ್ದಿಲ್ಲದೇ ಸುತ್ತ ನಡೆಯುತ್ತಿವೆ. ಇವು ಪೂರ್ಣ ಪ್ರಮಾಣದಲ್ಲಾಗಲು ಭಾರತದಂಥ ದೇಶದಲ್ಲಿ ಇನ್ನೂ ದಶಕಗಳೇ ಬೇಕು.

ಸದ್ಯ ನಗರ ಪ್ರದೇಶಗಳಲ್ಲಿ ಕಣ್ಣಿಗೆ ಕಾಣಿಸುವ ಬದಲಾವಣೆ ಎಂದರೆ ಪೇಪರ್‌ನಿಂದ ಮಾಡಿದ ಸ್ಟ್ರಾ ಹಾಗೂ ಅಡಿಕೆ ಹಾಳೆ ತಟ್ಟೆಗಳ ಬಳಕೆ. ಬಿದಿರಿನಿಂದ ಮಾಡಿದ ಹಲ್ಲುಜ್ಜುವ ಬ್ರಷ್‌ಗಳು ಫ್ಯಾಷನ್‌ ರೂಪದಲ್ಲಿ ಬಳಕೆಯಾಗಲು ಆರಂಭಿಸಿವೆ. ಇವುಗಳ ಹೊರತಾಗಿಯೂ ಹಲವು ಪರಿಸರಸ್ನೇಹಿ ಉತ್ಪನ್ನಗಳು ಕ್ರಮೇಣವಾಗಿ ಮಾರುಕಟ್ಟೆಗೆ ಹೆಜ್ಜೆ ಇಡುತ್ತಿವೆ. ಇಂಥ ಕೆಲ ಉತ್ಪನ್ನಗಳು ನನ್ನ ಕಣ್ಣಿಗೆ ಬಿದ್ದಿದ್ದು ಇನ್‌ಸ್ಟಾಗ್ರಾಂ ರೀಲ್ಸ್‌ನಲ್ಲಿ.

ಬಂದಿವೆ ಪೆಲೆಟ್ಸ್‌ಗಳು, ಮಾತ್ರೆಗಳು!

ಬಟ್ಟೆ ಒಗೆಯುವ ಪೌಡರ್‌, ಪಾತ್ರೆ ತೊಳೆಯುವ ಡಿಶ್‌ವಾಶರ್‌ ಕಾಗದದಿಂದ ಮಾಡಿದ ಚೀಲದಲ್ಲಿ ಬರಲು ಸಾಧ್ಯವೆ? ಟ್ಯೂಬ್‌ನಲ್ಲಿ ಬರುತ್ತಿದ್ದ ಟೂತ್‌ಪೇಸ್ಟ್‌ ಇದೀಗ ಗಾಜಿನ ಬಾಟಲಿಯಲ್ಲಿ ಮಾತ್ರೆ ರೂಪದಲ್ಲಿ ಬಂದರೆ? ಹೌದು, ತಂತ್ರಜ್ಞಾನದಿಂದ ಇದೆಲ್ಲವೂ ಈಗ ಸಾಧ್ಯವಾಗಿದೆ. ಪೌಡರ್‌ ಹಾಗೂ ಡಿಶ್‌ವಾಶರ್‌ಗಳನ್ನು ಜೀರಿಗೆ ಗಾತ್ರಕ್ಕೆ ಹರಳುಗಟ್ಟಿಸಿ (ಗ್ರೈನ್ಯೂಲ್ಸ್‌), ನೀರಿನಲ್ಲಿ ಇವುಗಳನ್ನು ಬೆರೆಸಿ ಬಳಸಿಕೊಳ್ಳುವಂತೆ ಅವುಗಳನ್ನು ಕಾಗದದ ಚೀಲದಲ್ಲಿ ಮಾರಾಟ ಮಾಡಲಾಗುತ್ತಿದೆ. ಚ್ಯೂಯಿಂಗ್‌ ಗಮ್‌ ಮಾದರಿಯಲ್ಲಿ ಟೂತ್‌ಪೇಸ್ಟ್‌ ಮಾತ್ರೆಗಳನ್ನು ಜಗಿದು ಬ್ರಷ್‌ ಮಾಡಿದರೆ ಹಲ್ಲುಗಳು ಫಳಫಳ!

ಕಿವಿಗೆ ಸದಾ ಇಯರ್‌ಬಡ್‌ ಹಾಕುವ ಅಭ್ಯಾಸವಿದ್ದ ನನಗೆ, ‘ಇಯರ್‌ಬಡ್‌ ಸಿಗಲ್ಲ’ ಅನ್ನೋ ಸುದ್ದಿ ಕೇಳಿ ಒಮ್ಮೆ ಆಘಾತ! ಹೀಗಿದ್ದರೂ ಒಂದು ಸಮಾಧಾನವಿತ್ತು. ಏಕೆಂದರೆ ಈ ಲೇಖನ ಬರೆಯುವುದಕ್ಕಾಗಿ ಅಂತರ್ಜಾಲದಲ್ಲಿ ಈಜಾಡುತ್ತಿರುವಾಗ ಆಕೆ ಕಣ್ಣಿಗೆ ಬಿದ್ದಿದ್ದಳು. ‘ಬಿದಿರು ನೀನಾರಿಗಲ್ಲದವಳೆ...’ ಎಂಬ ಮಾತಿಗೆ ಪೂರಕವಾಗಿ ಆಕೆ ಅಲ್ಲಿ ಜನ್ಮತಾಳಿದ್ದಳು. ಆಗೊಮ್ಮೆ ಸಮಾಧಾನವಾಗಿತ್ತು. ಪ್ಲಾಸ್ಟಿಕ್‌ ಬಟ್ಟೆ ಕಳಚಿ ನನ್ನ ಇಯರ್‌ಬಡ್‌ ಬಿದಿರನ್ನೇರಿದ್ದಳು. ಇಂದು ಹಲವು ಪ್ಲಾಸ್ಟಿಕ್ ಉತ್ಪನ್ನಗಳಿಗೆ ಬಿದಿರು ಪರ್ಯಾಯವಾಗುತ್ತಿದೆ. ಇದಕ್ಕೆ ಸೇರ್ಪಡೆ ಇಯರ್‌ಬಡ್‌. ಸರ್ಕಾರದ ಹೊಸ ನಿಯಮ ಮತ್ತಷ್ಟು ಬಿದಿರಿನ ಉತ್ಪನ್ನಗಳನ್ನು ಮಾರುಕಟ್ಟೆಗೆ ಪರಿಚಯಿಸುವುದು ಖಚಿತ. ಇವುಗಳಿಂದ ಒಂದಿಷ್ಟು ಪ್ಲಾಸ್ಟಿಕ್‌ ಬಳಕೆ ಕಡಿಮೆಯಾದರೆ ಪರಿಸರಕ್ಕೂ ಮತ್ತೊಂದು ದಿನ ಉಸಿರಾಡುವ ಅವಕಾಶ ಸಿಗಬಹುದು. ನಮಗೂ!

ಹೀಗೆ ಯೋಚಿಸಿದಾಗ ಅದೆಷ್ಟೋ ತ್ಯಾಜ್ಯಗಳ ಸ್ಟಾರ್ಟ್‌ಅಪ್‌ ಸಂಸ್ಥಾಪಕರಂತೆ ನಾವು ಕಾಣಿಸತೊಡಗುತ್ತೇವೆ. ಉದಾಹರಣೆಗೆ, ಹಲವು ಉತ್ಪನ್ನಗಳ ಜೊತೆಗೆ ಬರುವ ಸಿಲಿಕಾ ಬ್ಯಾಗ್ಸ್‌ ಬಗ್ಗೆ ಯೋಚಿಸಿದ್ದೀರಾ? ಈ ಹಿಂದೆ ಅದು ಸಿಕ್ಕಿದಾಗ ಅದನ್ನು ನೀವು ಏನು ಮಾಡಿದ್ರಿ? ಹೀಗೊಮ್ಮೆ ನೆನಪಿಸಿಕೊಂಡಾಗ ಈ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ಸದ್ಯ ಪ್ಲಾಸ್ಟಿಕ್‌ ತ್ಯಾಜ್ಯದ ಬಗ್ಗೆ ಜನರಲ್ಲೊಂದಿಷ್ಟು ಅರಿವು ಮೂಡಿದ್ದರೂ, ಇವುಗಳ ಪರ್ಯಾಯ ಉತ್ಪನ್ನಗಳ ಬೆಲೆ ಕೈಕಟ್ಟಿಸುತ್ತದೆ. ಕೊನೆಗೆ ಪ್ಲಾಸ್ಟಿಕ್‌ ಭೂತವೇ ಗತಿ ಎಂಬಂತಾಗಲಿದೆ ಸ್ಥಿತಿ. ಆದರೆ, ಹಾಗಾಗಬಾರದು. ಇದಕ್ಕೊಂದು ಪರ್ಯಾಯ ಮಾರ್ಗವನ್ನು ಹುಡುಕಲೇಬೇಕು, ಅಲ್ಲವೇ?

ನಿಷೇಧ: ಕೀನ್ಯಾ ಮುಂದು

2030ರೊಳಗಾಗಿ ಪ್ಲಾಸ್ಟಿಕ್‌ ಬಳಕೆ ಪ್ರಮಾಣವನ್ನು ಗಣನೀಯವಾಗಿ ಕಡಿಮೆ ಮಾಡುವ ಪ್ರತಿಜ್ಞೆಯನ್ನು 170 ದೇಶಗಳು 2019ರಲ್ಲಿ ನಡೆದ ವಿಶ್ವಸಂಸ್ಥೆ ಪರಿಸರ ಸಮಾವೇಶದಲ್ಲಿ ತೆಗೆದುಕೊಂಡಿದ್ದವು. ಆದರೆ, ಒಇಸಿಡಿ ವರದಿ ನೋಡಿದರೆ ಪ್ರತಿಜ್ಞೆಯ ಅನುಷ್ಠಾನದ ಬಗ್ಗೆ ಪ್ರಶ್ನೆ ಮೂಡುತ್ತದೆ. ಕೆಲ ರಾಷ್ಟ್ರಗಳು ಪ್ಲಾಸ್ಟಿಕ್‌ ತ್ಯಾಜ್ಯ ನಿಯಂತ್ರಣಕ್ಕೆ ಗಂಭೀರವಾದ ಹೆಜ್ಜೆ ಇಟ್ಟಿವೆ. ಈ ರೀತಿ ಕಠಿಣ ಕ್ರಮ ತೆಗೆದುಕೊಂಡ ರಾಷ್ಟ್ರಗಳ ಪೈಕಿ ಕೀನ್ಯಾ ಮೊದಲಿದೆ.

ವಿಶ್ವ ಆರ್ಥಿಕ ವೇದಿಕೆಯ ವರದಿ ಪ್ರಕಾರ, ಕೀನ್ಯಾದಲ್ಲಿ 2017ರಲ್ಲೇ ಒಂದು ಬಾರಿ ಬಳಸಿ ಎಸೆಯುವ (Single use) ಪ್ಲಾಸ್ಟಿಕ್‌ ಚೀಲಗಳನ್ನು ನಿಷೇಧಿಸಲಾಗಿದೆ. ರಾಷ್ಟ್ರೀಯ ಉದ್ಯಾನ, ಅರಣ್ಯ, ಸಮುದ್ರ ತೀರಗಳಿಗೆ ತೆರಳುವ ಪ್ರವಾಸಿಗರು ಪ್ಲಾಸ್ಟಿಕ್‌ ಬಾಟಲ್‌, ತಟ್ಟೆಗಳನ್ನು ಒಯ್ಯುವಂತಿಲ್ಲ ಎನ್ನುವ ಕಠಿಣ ನಿಯಮವೂ ಇಲ್ಲಿದೆ. ಜಿಂಬಾಬ್ವೆಯಲ್ಲಿ ಥರ್ಮಾಕೋಲ್‌ನ ಆಹಾರದ ಪೊಟ್ಟಣಗಳನ್ನು ನಿಷೇಧಿಸಲಾಗಿದೆ. ಈ ನಿಯಮ ಉಲ್ಲಂಘಿಸಿದವರಿಗೆ ₹3 ಲಕ್ಷದವರೆಗೂ ದಂಡವಿದೆ. ಬ್ರಿಟನ್‌ನಲ್ಲಿ ಪ್ಲಾಸ್ಟಿಕ್‌ ಚೀಲಗಳ ಮೇಲೆ ತೆರಿಗೆ ವಿಧಿಸಲಾಗಿದ್ದು, ಅಮೆರಿಕ, ಯುರೋಪ್‌ ಒಕ್ಕೂಟ, ಚೀನಾಗಳಲ್ಲಿ ಒಮ್ಮೆ ಬಳಸಿ ಎಸೆಯುವ ಪ್ಲಾಸ್ಟಿಕ್‌ ಉತ್ಪನ್ನಗಳನ್ನು ನಿಷೇಧವಿದೆ. ಭಾರತ ಈ ಪಟ್ಟಿಗೆ ಹೊಸ ಸೇರ್ಪಡೆ. ಅಂದಹಾಗೆ, ನಮ್ಮ ಮಂಗಳೂರು ಪಾಲಿಕೆಯ ಸಭೆಯಲ್ಲಿ ಬಾಟಲಿ–ಲೋಟದಲ್ಲಿ ನೀರು ಕೊಡುವುದಿಲ್ಲ. ಸ್ಟೀಲ್‌ ಜಗ್‌ ಮತ್ತು ಲೋಟದಲ್ಲಿ ನೀರು ಕೊಡಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT