ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ಲಾಗಿಂಗ್: ಜಾಗಿಂಗ್ ಮಾಡುತ್ತಾ... ಕಸ ಆಯುತ್ತಾ...

Last Updated 23 ಜುಲೈ 2022, 20:30 IST
ಅಕ್ಷರ ಗಾತ್ರ

ಜಾಗಿಂಗ್ ಮಾಡುವವರಲ್ಲಿ ಪರಿಸರದ ಜಾಗೃತಿ ಮೂಡಿಸಿ ಅವರ ನೆರವಿನಿಂದ ಸ್ವಚ್ಛತಾ ಕೆಲಸ ನಡೆಸುವ ‘ಪ್ಲಾಗಿಂಗ್’ ಪರಿಕಲ್ಪನೆಯನ್ನು ಯಶಸ್ವಿಯಾಗಿ ಕಾರ್ಯರೂಪಕ್ಕಿಳಿಸಿದ ಪುಣೆ ಮೂಲದ ವಿವೇಕ್‌ ಗುರವ್, ಸಮುದಾಯದಲ್ಲಿ ಬದಲಾವಣೆಗೆ ಕಾರಣರಾಗಿರುವ ಪರಿಸರ ಹೋರಾಟಗಾರ.

ಪುಣೆಯಲ್ಲಿ ಯಶಸ್ವಿಯಾಗಿ ನಡೆಸುತ್ತಿರುವ ಪ್ಲಾಗಿಂಗ್ ಅಭಿಯಾನವನ್ನು ಬ್ರಿಟನ್‌ನ ಬ್ರಿಸ್ಟಲ್‌ ನಗರದಲ್ಲೂ ಕೈಗೊಂಡು ಅಲ್ಲಿನ ಪ್ರಧಾನಿಯ ಮೆಚ್ಚುಗೆ ಗಳಿಸಿದ್ದಾರೆ. ಜಾಗಿಂಗ್‌ ವೇಳೆ ಕೈಯಲ್ಲಿ ಚೀಲ ಹಿಡಿದುಕೊಂಡು ಪ್ಲಾಸ್ಟಿಕ್‌, ಇತರ ತ್ಯಾಜ್ಯ ಸಂಗ್ರಹಿಸುವುದೇ ‘ಪ್ಲಾಗಿಂಗ್’. ಸ್ವಚ್ಛತಾ ಕೆಲಸವನ್ನು ಇನ್ನಷ್ಟು ಆಸಕ್ತಿ, ಮನರಂಜನೆಯೊಂದಿಗೆ ಮಾಡುವ ಪರಿಕಲ್ಪನೆ ಇದು.

‘ಪುಣೆ ಪ್ಲಾಗರ್ಸ್‌’ ಹೆಸರಿನ ಸ್ವಯಂಸೇವಕರ ಬಳಗ ಕಟ್ಟಿಕೊಂಡು, ಅಭಿಯಾನ ನಡೆಸುತ್ತಿರುವ ವಿವೇಕ್‌, ‘ಪರಿಸರ ನೀತಿ ಮತ್ತು‌ ನಿರ್ವಹಣೆ’ ವಿಷಯದಲ್ಲಿ ಎಂಎಸ್ಸಿ ಮಾಡಲು 2021ರ ಸೆಪ್ಟೆಂಬರ್‌ನಲ್ಲಿ ಬ್ರಿಟನ್‌ನ ಬ್ರಿಸ್ಟಲ್‌ ನಗರದಲ್ಲಿರುವ ಬ್ರಿಸ್ಟಲ್ ವಿಶ್ವವಿದ್ಯಾಲಯ ಸೇರಿದ್ದರು.

ಪುಣೆಯಲ್ಲಿ ನಡೆಸುತ್ತಿರುವ ಪ್ಲಾಗಿಂಗ್ ಅಭಿಯಾನ‌ವನ್ನು ಅಲ್ಲೂ ಆರಂಭಿಸಿದರು.‌ ಬ್ರಿಸ್ಟಲ್ ವಿ.ವಿ.ಯಲ್ಲಿ ವ್ಯಾಸಂಗ ಆರಂಭಿಸಿದ ಬೆನ್ನಲ್ಲೇ ‘ಬ್ರಿಸ್ಟಲ್ ಪ್ಲಾಗರ್ಸ್’ ಹೆಸರಿನ ತಂಡ ಕಟ್ಟಿಕೊಂಡು ನಗರದ ರಸ್ತೆ, ಬೀದಿ ಬದಿಗಳಲ್ಲಿ ಸ್ವಚ್ಛತೆಗೆ ಮುಂದಾದರು. 12 ರಾಷ್ಟ್ರಗಳ 140 ಸದಸ್ಯರನ್ನು ಬ್ರಿಸ್ಟಲ್ ಪ್ಲಾಗರ್ಸ್ ಹೊಂದಿದೆ.‌ ಇದರಲ್ಲಿ ಅರ್ಧಕ್ಕೂ ಹೆಚ್ಚಿನವರು ಭಾರತೀಯರು. ಈ‌ ತಂಡ ಬ್ರಿಸ್ಟಲ್‌ನಲ್ಲಿ ಈಗಾಗಲೇ 400 ಮೈಲುಗಳಷ್ಟು ದೂರ ಪ್ಲಾಗಿಂಗ್ ಮಾಡಿದ್ದು, 3,750 ಕೆ.ಜಿ ತ್ಯಾಜ್ಯ ಸಂಗ್ರಹಿಸಿದೆ.

ವಿವೇಕ್‌ ಅವರ ಪರಿಸರ ಕಾಳಜಿಯನ್ನು ಗುರುತಿಸಿದ ಬ್ರಿಟನ್‌ ಪ್ರಧಾನಿ, ಇತ್ತೀಚೆಗೆ ‘ಪಾಯಿಂಟ್ಸ್ ಆಫ್ ಲೈಟ್ಸ್’ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ. ಸಮುದಾಯದಲ್ಲಿ ಬದಲಾವಣೆಗೆ ಕಾರಣರಾದ, ‘ಸ್ಫೂರ್ತಿದಾಯಕ ಸ್ವಯಂಸೇವಕ’ರಿಗೆ ನೀಡುವ ಪ್ರಶಸ್ತಿ ಇದು. 2014ರ ಏ‍ಪ್ರಿಲ್‌ನಲ್ಲಿ ಆರಂಭಿಸಲಾದ ಈ ಗೌರವಕ್ಕೆ ಭಾಜನರಾದವರಲ್ಲಿ ವಿವೇಕ್ 1,967ನೆಯವರು.

ಬ್ರಿಟನ್‌ ಪ್ರಧಾನಿಯ ಪ್ರಶಂಸೆಯ ನುಡಿಗಳು ಮತ್ತು ಸಹಿ ಒಳಗೊಂಡಿರುವ ಪತ್ರ ಹಾಗೂ ಸರ್ಟಿಫಿಕೇಟ್‌ ಒಳಗೊಂಡಿರುತ್ತದೆ. ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವ ಬ್ರಿಟನ್‌ನ ಪ್ರಜೆಗಳಿಗೆ ಈ ಪ್ರಶಸ್ತಿಯನ್ನು ಸಾಮಾನ್ಯವಾಗಿ ನೀಡಲಾಗುತ್ತದೆ. ಈ ಗೌರವ ಪಡೆದ ವಿದೇಶಿಯರ ಸಂಖ್ಯೆ ವಿರಳ. ಅದರಲ್ಲೂ ಭಾರತದ ವಿದ್ಯಾರ್ಥಿಯೊಬ್ಬ ಪ್ರಶಸ್ತಿ ಪಡೆದದ್ದು ಇದೇ ಮೊದಲು.

‘ಇದು ನನಗೆ ದೊರೆತ ಬಲುದೊಡ್ಡ ಗೌರವ. ಭಾರತ ಮತ್ತು ಬ್ರಿಟನ್‌ನಲ್ಲಿ ಪ್ಲಾಗಿಂಗ್ ಅಭಿಯಾನ ದೊಡ್ಡ ಪ್ರಮಾಣದಲ್ಲಿ ನಡೆಯಬೇಕಿರುವುದು ಕಾಲದ ಬೇಡಿಕೆಯಾಗಿದೆ. ನಾವು ನಡೆಸಿಕೊಂಡು ಬರುತ್ತಿರುವ ಚಳವಳಿಯ ಬಲ ವರ್ಧನೆಗೆ ಈ ಪ್ರಶಸ್ತಿ ನೆರವಾಗಲಿದೆ’ ಎಂಬುದು ವಿವೇಕ್‌ ಪ್ರತಿಕ್ರಿಯೆ.

ಎಂಎಸ್ಸಿ ಕೋರ್ಸ್ ಸದ್ಯದಲ್ಲೇ ಪೂರ್ಣಗೊಳಿಸಲಿರುವ ವಿವೇಕ್ ಕೆಲಕಾಲ ಬ್ರಿಟನ್‌ನಲ್ಲೇ ಇದ್ದುಕೊಂಡು ಪರಿಸರ ವಿಜ್ಞಾನ, ಹವಾಮಾನ ವೈಪರೀತ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಅಧ್ಯಯನ ನಡೆಸಲು ಬಯಸಿದ್ದಾರೆ.

‘ಅಭಿವೃದ್ಧಿ ಹೊಂದಿದ ದೇಶಗಳು ಮತ್ತು ಅಭಿವೃದ್ಧಿ ಹೊಂದುತ್ತಿರುವ ದೇಶಗಳು ಹವಾಮಾನ ವೈಪರೀತ್ಯದ ಬಗ್ಗೆ ಹೊಂದಿರುವ ತಿಳಿವಳಿಕೆಯಲ್ಲಿ ಸಾಕಷ್ಟು ಅಂತರವಿದೆ. ಆ ಅಂತರ ಕಡಿಮೆ ಮಾಡುವುದು ನನ್ನ ಉದ್ದೇಶ’ ಎನ್ನುತ್ತಾರೆ ವಿವೇಕ್‌.

ಪುಣೆಯ ಎಂಐಟಿ ಅಕಾಡೆಮಿ ಆಫ್‌ ಎಂಜಿನಿಯರಿಂಗ್‌ನಲ್ಲಿ ಕಂಪ್ಯೂಟರ್‌ ಸೈನ್ಸ್‌ನಲ್ಲಿ ಬಿಇ ಪೂರೈಸಿರುವ ವಿವೇಕ್, ಪರಿಸರ ವಿಜ್ಞಾನದ ಬಗ್ಗೆ ಹೊಂದಿರುವ ಉತ್ಕಟ ಅಭಿಲಾಷೆಯಿಂದ ಶಿಕ್ಷಣದ ಪಥವನ್ನೇ ಬದಲಿಸಿದ್ದಾರೆ.

ಇಂದ್ರಾಯಣಿ ನದಿ ದಡದಿಂದ...

ವಿವೇಕ್ ಅವರಿಗೆ ಎಳೆ ವಯಸ್ಸಿನಲ್ಲೇ ಪರಿಸರದ ಮೇಲೆ‌‌ ಎಲ್ಲಿಲ್ಲದ ಪ್ರೀತಿ.‌ ಮನೆಯ ಸುತ್ತಮುತ್ತಲಿನ ಬೀದಿಗಳಲ್ಲಿ ಗಿಡಗಳನ್ನು ನೆಟ್ಟು ಪೋಷಿಸುತ್ತಿದ್ದರು. ಆದರೆ ಅವರಲ್ಲಿ ಹುದುಗಿದ್ದ ಪರಿಸರ ಸಂರಕ್ಷಣೆಯ ಹಂಬಲ ಒಂದು‌ ಆಂದೋಲನವಾಗಿ ಹೊರಹೊಮ್ಮಿದ್ದು ಇಂದ್ರಾಯಣಿ ನದಿ ದಡದಲ್ಲಿ.

ಕೊಲ್ಲಾಪುರದ ಜಯಸಿಂಗಪುರದಲ್ಲಿ ಹುಟ್ಟಿದ ವಿವೇಕ್‌, ಪಿಯುಸಿವರೆಗೆ ಅಲ್ಲೇ ಶಿಕ್ಷಣ ಪೂರೈಸಿದ್ದರು. ಎಂಜಿನಿಯರಿಂಗ್‌ ಶಿಕ್ಷಣಕ್ಕೆ ಪುಣೆಗೆ ಬಂದಿದ್ದರು.

‘ಎಂಜಿನಿಯರಿಂಗ್ ಪದವಿ ಪಡೆಯಲು 2014‌ರಲ್ಲಿ ಪುಣೆಗೆ ಬಂದೆ. ಇಂದ್ರಾಯಣಿ ನದಿಯ ಪರಿಸರ ತೀರಾ ಕೆಟ್ಟುಹೋಗಿತ್ತು. ಜನರು ಕಸ ತಂದು ನದಿಗೆ ಸುರಿಯುತ್ತಿದ್ದರು. ಕಾಲೇಜು ತರಗತಿ ಕೊನೆಗೊಂಡ ಬಳಿಕ ನಾನು ಗೆಳೆಯರ ಜತೆ ನದಿ ದಡದಲ್ಲಿ ವಾಯುವಿಹಾರ ಮಾಡುತ್ತಿದ್ದೆ. ಇಡೀ ಪ್ರದೇಶವನ್ನು ನಾವು ಏಕೆ ಸ್ವಚ್ಛಗೊಳಿಸಬಾರದು ಎಂಬ ಯೋಚನೆ ಮನಸ್ಸಿಗೆ ಹೊಳೆಯಿತು. ನದಿಯಲ್ಲಿ ನೀರು ಇದ್ದರೂ, ಬಳಕೆಗೆ ಯೋಗ್ಯವಲ್ಲದ ಪರಿಸ್ಥಿತಿಯಿತ್ತು’ ಎಂಬುದನ್ನು ವಿವೇಕ್ ನೆನಪಿಸಿಕೊಂಡರು.

‘ನದಿಗೆ ತ್ಯಾಜ್ಯ ಸುರಿಯುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸ್ಥಳೀಯ ಆಡಳಿತಕ್ಕೆ ಹಲವು ಸಲ ಮನವಿ ಮಾಡಿದ್ದರೂ ಸಕಾರಾತ್ಮಕ
ಪ್ರತಿಕ್ರಿಯೆ ದೊರೆಯಲಿಲ್ಲ. ಆದ್ದರಿಂದ ನಾವೇ ಒಂದಷ್ಟು ಗೆಳೆಯರು ಸೇರಿಕೊಂಡು ನದಿಯ ಸ್ವಚ್ಛತೆಗೆ ಮುಂದಾದೆವು’ ಎಂದು ಅಭಿಯಾನದ ಆರಂಭವನ್ನು ವಿವರಿಸಿದರು.

ನದಿ ಸ್ವಚ್ಛತಾ ಕೆಲಸ ಐದು ವರ್ಷ ನಿರಂತರ ನಡೆಯಿತು. ಬರಬರುತ್ತಾ ಎಲ್ಲರಿಗೂ ಏಕತಾನತೆ ಎನಿಸತೊಡಗಿತು. ತಂಡದ ಒಬ್ಬೊಬ್ಬರೇ ಆಸಕ್ತಿ ಕಳೆದುಕೊಂಡರು. 300 ಮಂದಿಯಿದ್ದ ತಂಡದ ಸದಸ್ಯರ ಸಂಖ್ಯೆ 30–40ಕ್ಕೆ ಇಳಿಯಿತು. ಅಭಿಯಾನಕ್ಕೆ ಹೊಸ ರೂಪ ಕೊಡಬೇಕು ಎಂದು ವಿವೇಕ್‌ ನಿರ್ಧರಿಸಿದರು. ಆ ಬಗ್ಗೆ ಆಲೋಚನೆ ಮಾಡುತ್ತಿರುವಾಗ ಸ್ವೀಡನ್‌ನಲ್ಲಿ ಆರಂಭವಾಗಿ ಇತರ ದೇಶಗಳಿಗೆ ವಿಸ್ತರಿಸಿಕೊಂಡಿರುವ ‘ಪ್ಲಾಗಿಂಗ್’ ಬಗ್ಗೆ ಅವರು ತಿಳಿದುಕೊಂಡರು.

300ನೇ ಅಭಿಯಾನಕ್ಕೆ ಸಿದ್ಧತೆ

‘ಪ್ಲಾಗಿಂಗ್ ಪರಿಕಲ್ಪನೆಯನ್ನು ಪುಣೆಯಲ್ಲಿ ಮೊದಲ ಬಾರಿ ಪರಿಚಯಿಸಿದೆ. 2019ರ ಅಕ್ಟೋಬರ್‌ನಲ್ಲಿ ಪುಣೆ ಪ್ಲಾಗರ್ಸ್‌ ಬಳಗ ರಚಿಸಲಾಯಿತು. ಇದು ಯುವಕರು, ವಿದ್ಯಾರ್ಥಿಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಆಕರ್ಷಿಸಿತು. ಪ್ರತಿ ಶನಿವಾರ ಹಾಗೂ ಭಾನುವಾರ ಪ್ಲಾಗಿಂಗ್ ಅಭಿಯಾನ ಆಯೋಜಿಸತೊಡಗಿದೆ. ದೈಹಿಕ ಆರೋಗ್ಯ ಕಾಪಾಡುವ ಜತೆಯಲ್ಲೇ ಸ್ವಚ್ಛತಾ ಕಾರ್ಯ ನಡೆಸುವ ಈ ಹೊಸ ಪರಿಕಲ್ಪನೆ ಜನಪ್ರಿಯತೆ ಗಳಿಸಿತು. ಬರಬರುತ್ತಾ ನಮ್ಮ ಬಳಗ ದೊಡ್ಡದಾಗಿ ಬೆಳೆಯಿತು. ಒಂದೊಂದು ಅಭಿಯಾನದಲ್ಲಿ 4–5 ಕಿ.ಮೀ. ಜಾಗಿಂಗ್‌ ನಡೆಸಿ ತ್ಯಾಜ್ಯ ಸಂಗ್ರಹಿಸುತ್ತಿದ್ದೆವು. ಕೆಲವೊಮ್ಮೆ ಇದು 7–8 ಕಿ.ಮೀ. ವರೆಗೂ ಮುಂದುವರಿಯುತ್ತಿತ್ತು’ ಎಂದು ಹೇಳಿದರು.

ಪುಣೆ ಪ್ಲಾಗರ್ಸ್‌ ತಂಡ ಇದುವರೆಗೆ 1,000 ಟನ್‌ ತ್ಯಾಜ್ಯ ಸಂಗ್ರಹಿಸಿದ್ದು, ವಿಲೇವಾರಿ ಘಟಕಗಳಿಗೆ ಕಳುಹಿಸಲಾಗಿದೆ. ಪುಣೆಯಲ್ಲಿ 300ನೇ ಪ್ಲಾಗಿಂಗ್‌ ಅಭಿಯಾನಕ್ಕೆ ಸಿದ್ಧತೆ ನಡೆದಿದೆ.

ವಿವೇಕ್‌ ಅವರ ಗೆಳೆಯರು ಇತರ ನಗರಗಳಲ್ಲೂ ಅಭಿಯಾನಕ್ಕೆ ಚಾಲನೆ ನೀಡಿದ್ಧಾರೆ. ದೇಶದ ವಿವಿಧ ನಗರಗಳಲ್ಲಿ ಹತ್ತು ಸಾವಿರಕ್ಕೂ ಅಧಿಕ ಸ್ವಯಂಸೇವಕರು ಪ್ಲಾಗಿಂಗ್ ಅಭಿಯಾನದಲ್ಲಿ ಸಕ್ರಿಯವಾಗಿ ತೊಡಗಿಕೊಂಡಿದ್ದಾರೆ. ಮುಂಬೈ, ನಾಸಿಕ್‌, ಕೋಲ್ಕತ್ತ, ಔರಂಗಾಬಾದ್‌, ಪಟಿಯಾಲ ಸೇರಿದಂತೆ ಇತರ ಕೆಲವು ನಗರಗಳಲ್ಲೂ ಪ್ಲಾಗರ್ಸ್‌ ತಂಡಗಳು ಸಕ್ರಿಯವಾಗಿವೆ.

ಆರಂಭದ ದಿನಗಳಲ್ಲಿ ವಿವೇಕ್‌, ಗೆಳೆಯರು ಮತ್ತು ಪೋಷಕರ ವಿರೋಧ ಎದುರಿಸಿದ್ದರು. ಗೆಳೆಯರು ಇವರನ್ನು ‘ಕಚ್ರಾವಾಲಾ’ ಎಂದು ಲೇವಡಿ ಮಾಡಿದ್ದೂ ಇದೆ. ‘ನಿನ್ನನ್ನು ಈ ಕೊಳಕು ಕೆಲಸ ಮಾಡಲು ನಾವು ಪುಣೆಗೆ ಕಳುಹಿಸಿಲ್ಲ’ ಎಂದು ತಂದೆ–ತಾಯಿ ಬುದ್ಧಿವಾದವನ್ನೂ ಹೇಳಿದ್ದರು.

‘ಬರಬರುತ್ತಾ ಎಲ್ಲರೂ ನನಗೆ ಪ್ರೋತ್ಸಾಹ ನೀಡತೊಡಗಿದರು. ಬ್ರಿಟನ್‌ ಪ್ರಧಾನಿಯಿಂದ ಪ್ರಶಂಸೆಗೆ ಪಾತ್ರವಾದದ್ದು ತಿಳಿಸಿದಾಗ ಹೆತ್ತವರು ನನ್ನ ಬಗ್ಗೆ ಹೆಮ್ಮೆಪಟ್ಟರು’ ಎಂದು ಸಾರ್ಥಕತೆಯ ಭಾವ ವ್ಯಕ್ತಪಡಿಸುವರು.

‘ಜನರು ಎಲ್ಲೆಂದರಲ್ಲಿ ಕಸ ಎಸೆಯುತ್ತಲೇ ಇರುತ್ತಾರೆ. ಅವರು ಎಸೆಯಲಿ, ನಾವು ಹೆಕ್ಕುತ್ತಲೇ ಇರುತ್ತೇವೆ’ ಎನ್ನುವ ವಿವೇಕ್‌ ಅವರಂತಹ ಪರಿಸರ ಹೋರಾಟಗಾರರು ಭರವಸೆಯ ಬೆಳಗಾಗಿ ಕಾಣುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT