ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀರ ನೋವಿಗೆ ನೂರೆಂಟು ಮುಖಗಳು

ಮುಂಗಾರಿನ ಆಗಮನದ ಈ ಹಂತದಲ್ಲಿ ಬೇಸಿಗೆಯ ಬೇಗುದಿಯನ್ನೊಮ್ಮೆ ನೆನೆದರೆ ನೀರ ನೆಮ್ಮದಿಗೆ ದಾರಿ ಹೊಳೆದೀತು
Last Updated 8 ಜೂನ್ 2019, 19:30 IST
ಅಕ್ಷರ ಗಾತ್ರ

ಕುಂಭದ್ರೋಣ ಮಳೆಗೆ ಹೆಸರಾದ ಕರಾವಳಿ ಪ್ರವಾಹ ಭೀತಿಯನ್ನು ಮಡಿಲಲ್ಲಿ ಕಟ್ಟಿಕೊಂಡು ಜನಿಸಿದೆ. ನೋಡಿದಲ್ಲೆಲ್ಲ ಹಳ್ಳ, ನದಿಗಳಿವೆ. ಪ್ರಾಕೃತಿಕ ಸೊಬಗಿನ ನೆಲೆ ಈಗ ಬೇಸಿಗೆಯಲ್ಲಿ ಖಾಲಿ ಬಿಂದಿಗೆ, ಟ್ಯಾಂಕರ್ ನೀರಿನ ಜಾತ್ರೆ ನಡೆಸುತ್ತಿದೆ. ಕೊಳವೆ ಬಾವಿಯಿಂದ ನೀರೆತ್ತುವ ನೋಟಗಳು ಬಯಲುಸೀಮೆಯಂತೆ ಕಾಣಿಸುತ್ತಿದೆ. ಕಾಲ ಎಷ್ಟು ಕೆಟ್ಟಿದೆಯೆಂದರೆ ನಾವು ಈಗ ನದಿ ನಾಡಿಗೆ ನೀರ ನೆಮ್ಮದಿಯ ದಾರಿ ಹುಡುಕಬೇಕಾಗಿದೆ.

***

ಮುಂಗಾರು ಶುರುವಾದರೆ ನೆರೆಹಾವಳಿ, ಈಗ ಬತ್ತಿದ ನದಿಗಳಲ್ಲಿ ನೀರ ನೋವಿನ ನೋಟಗಳು. ನಾಲ್ಕೈದು ತಿಂಗಳು ಮಳೆಯ ಕರಾವಳಿಯಲ್ಲಿ ಎಕರೆಯಲ್ಲಿ ಸುಮಾರು ಒಂದು ಕೋಟಿ ಇಪ್ಪತ್ತೈದು ಲಕ್ಷ ಲೀಟರ್ ಮಳೆ ನೀರು ಸುರಿಯುತ್ತದೆ. ನೀರಿನ ಸಮಸ್ಯೆಗೆ ಮಳೆ ಕೊರತೆ, ನದಿ ಬತ್ತುವುದು, ಕೆರೆ ಒಣಗುವುದು ಕಾರಣವೆಂದು ಭಾವಿಸಿದವರು ಕರಾವಳಿ ಜಲಕ್ಷಾಮಕ್ಕೆ ಅಚ್ಚರಿ ಪಡಬೇಕು. ಬೇಸಿಗೆಯಲ್ಲಿ ಕರಾವಳಿ ಸೇತುವೆಯಿಂದ ನೀರು ನೋಡಿ ಇಷ್ಟೊಂದು ಜಲರಾಶಿಯಿದೆಯೆಂದು ಮಾತಾಡಬಹುದು. ಆದರೆ, ಅದು ಉಪ್ಪುನೀರು!

ಘಟ್ಟದ ಹಳ್ಳ ತೊರೆಗಳು ಒಣಗುತ್ತಿದ್ದಂತೆ ಕಡಲಿನ ಉಪ್ಪು ನೀರು ಅದೇ ನದಿ ಪಾತ್ರದಲ್ಲಿ ಹಿಮ್ಮುಖವಾಗಿ ಪ್ರವಹಿಸುತ್ತದೆ. ಸಾಗರ ಸಂಗಮದಿಂದ 15-20 ಕಿಲೋ ಮೀಟರ್ ದೂರದ ಘಟ್ಟದ ತಪ್ಪಲಿನವರೆಗೂ ಸಾಗುತ್ತ ಸಿಹಿನೀರಿನ ಸರಹದ್ದಿನಲ್ಲಿ ನುಸುಳಿ ಸಮಸ್ಯೆ ಸೃಷ್ಟಿಸುತ್ತದೆ. ನದಿಯಂಚಿನ ಬಾವಿ ನೀರು ಉಪ್ಪಾಗಿ ಹಾಳಾಗುತ್ತಿದೆ, ಬೆಳೆಗಳಿಗೆ ತಗಲಿ ಹಸಿರು ಕಮರುತ್ತದೆ. ಹೆಸರು ಕ್ಷೀರಸಾಗರ, ಕುಡಿಯಲು ಹಾಲಿಲ್ಲವೆಂಬಂತೆ ಕರಾವಳಿ ನದಿ ನಾಡಿನ ಜನ ಟ್ಯಾಂಕರ್ ನೀರಿಗೆ ಕಾಯುವ ಪರಿಸ್ಥಿತಿ ಉದ್ಭವಿಸಿದೆ. ನದಿಯಂಚಿನ ಪುಣ್ಯಕ್ಷೇತ್ರಗಳಲ್ಲಿ ಭಕ್ತರ ಸ್ನಾನಕ್ಕಲ್ಲ; ದೇವರ ಪೂಜೆಗೂ ನೀರು ಹುಡುಕುವಂತಾಗಿದೆ.

ನದಿಗಳು ಸಾಗರ ಸೇರುವ ಸಂದರ್ಭದಲ್ಲಿ 300-400 ಮೀಟರ್ ಅಗಲಕ್ಕೆ ಹರಿಯುತ್ತವೆ. ವಿಶಾಲ ನದಿಗಳಿಗೆ ಉಪ್ಪುನೀರು ಬರದಂತೆ ತಡೆಯುವುದು ಕಷ್ಟ. ಜನವರಿಯಲ್ಲಿ ಘಟ್ಟದ ಹಳ್ಳಗಳ ಹರಿವು ಕಡಿಮೆಯಾಗುತ್ತಿದ್ದಂತೆ ಉಪ್ಪುನೀರು ಸಹಜವಾಗಿ ಪ್ರವೇಶಿಸುತ್ತದೆ. ಸಮುದ್ರ ತಟದಿಂದ ನಾಲ್ಕೈದು ಕಿಲೋ ಮೀಟರ್ ಸನಿಹದಲ್ಲಿ ತಾಲ್ಲೂಕು ಕೇಂದ್ರಗಳಿವೆ, ಅಪಾರ ಜನವಸತಿ ನೆಲೆಗಳಿವೆ. ಊರಿಗೊಂದು ಪುಣ್ಯಕ್ಷೇತ್ರ, ಪ್ರವಾಸಿ ತಾಣಗಳಿವೆ. ಎಲ್ಲರಿಗೂ ನೀರು ಬೇಕು. ಕರಾವಳಿ ತಾಲ್ಲೂಕಿನ ಜನಸಂಖ್ಯೆಯ ಶೇಕಡಾ 40-50 ರಷ್ಟು ಜನ ನಗರವಾಸಿಗಳು. ಬಹುತೇಕ ಜನ ಸಾರ್ವಜನಿಕ ನೀರಾವರಿ ವ್ಯವಸ್ಥೆ ಅವಲಂಬಿತರು. ಇಲ್ಲಿ ಕೇಂದ್ರೀಕೃತ ನದಿ ನೀರಾವರಿ ಯೋಜನೆಗಳಿವೆ. ನೇತ್ರಾವತಿ, ಕುಮಾರಧಾರಾ, ಗುರುಪುರ, ಸೌಪರ್ಣಿಕಾ, ವೆಂಕಟಾಪುರ, ಶರಾವತಿ, ಅಘನಾಶಿನಿ, ಗಂಗಾವಳಿ ಮುಂತಾದ ಎಲ್ಲ ನದಿ, ಹಳ್ಳಗಳು ನಗರಗಳಿಗೆ ನೆರವಾಗಿವೆ.

ಹತ್ತು ವರ್ಷಗಳ ಹಿಂದೆ ದಿನಕ್ಕೆ 15 ಲಕ್ಷ ಲೀಟರ್ ಬಳಸುತ್ತಿದ್ದ ನಗರದ ಇಂದಿನ ಬೇಡಿಕೆ 75-80 ಲಕ್ಷಕ್ಕೆ ಏರಿದೆ. ಮನೆಯ ತೆರೆದ ಬಾವಿಯಿಂದ ನೀರೆತ್ತುವ ಕಾಲದಲ್ಲಿ ನೀರಿನ ಕೊರತೆ ಮನೆ ಮನೆಗೆ ಅರಿವಾಗಿ ಬೇಸಿಗೆಯ ಮಿತ ಬಳಕೆ ಅನಿವಾರ್ಯವಾಗಿತ್ತು. ಈಗ ದೂರದ ನದಿ ನೀರು ಬರುವಾಗ ಕಣ್ಮುಚ್ಚಿ ಬಳಸುತ್ತ ಜಲದ ಕುರಿತ ಅಜ್ಞಾನ ಹೆಚ್ಚಿದೆ. ಐದು ಜನರ ಕುಟುಂಬಕ್ಕೆ ದಿನಕ್ಕೆ ಸರಾಸರಿ 800-1000 ಲೀಟರ್ ಬೇಕು, ಅಗಾಧ ಬೇಡಿಕೆ ಸಮಸ್ಯೆಯ ಮೂಲ. ನಗರದ ಲಕ್ಷಾಂತರ ಜನ ಬಳಸಿದ ತ್ಯಾಜ್ಯಗಳು ಚರಂಡಿ ಸೇರಿ ನೀರಿನ ನಿರ್ವಹಣೆ ಕಷ್ಟವಾಗಿ ಅಂತರ್ಜಲ ಕಲುಷಿತವಾಗುತ್ತಿದೆ.

ಏರಿದ ಜನಸಂಖ್ಯೆ, ನೀರಿನ ಬಳಕೆಗೆ ನದಿಗೆ ಒತ್ತಡ

ಬೃಹತ್ ಅಣೆಕಟ್ಟು ನಿರ್ಮಿಸಿ ನೀರು ಶೇಖರಿಸಿ ಪೂರೈಸುವುದು ಕರಾವಳಿಯಲ್ಲಿ ಅಸಾಧ್ಯ. ಹರಿಯುವ ನೀರಿಗೆ ಸಣ್ಣ ತಡೆ ಹಾಕಿ ನದಿಯ ಆಳದ ಗುಂಡಿಗಳಿಂದ ನೀರೆತ್ತುವ ಕಾರ್ಯ ನಡೆಯಬೇಕು. ನದಿಯ ಒಳ ಹರಿವು ಇದ್ದರಷ್ಟೇ ಯೋಜನೆ ಸುಸ್ಥಿರ. ನಗರಗಳ ಕುಡಿಯುವ ನೀರಿನ ಬೇಡಿಕೆ ಫೆಬ್ರುವರಿಯಿಂದ ಏರುತ್ತ ಮಾರ್ಚ್ ಏಪ್ರಿಲ್ ಹೊತ್ತಿಗೆ ತೀವ್ರತೆ ತಲುಪುತ್ತದೆ. ಘಟ್ಟದಲ್ಲಿ ಏರಿದ ಜನಸಂಖ್ಯೆ, ಕೃಷಿ ವಿಸ್ತರಣೆಗೆ ಅನುಗುಣವಾಗಿ ಅಲ್ಲಿನ ನೀರಿನ ಬೇಡಿಕೆಯೂ ಹೆಚ್ಚುತ್ತಿದೆ. ಮಳೆ ಕೊರತೆಯ ದಿನಗಳಲ್ಲಿ ನದಿ ಅವಲಂಬಿತರೆಲ್ಲರಿಗೂ ಸಮಸ್ಯೆ ಬಾಧಿಸುತ್ತಿದೆ. 750-1220 ಮೀಟರ್ ಎತ್ತರದ ಪಶ್ಚಿಮಘಟ್ಟ ದಕ್ಷಿಣ ಪ್ರಸ್ಥಭೂಮಿಗೆ ಸಾಗುವ ಮಳೆ ತಡೆದು ಅಪಾರ ಮಳೆ ಸುರಿಯಲು ನೆರವಾಗಿದೆ. 14ಕ್ಕೂ ಹೆಚ್ಚು ಚಿಕ್ಕ ದೊಡ್ಡ ನದಿಗಳು ರಾಜ್ಯದ ಕರಾವಳಿ ಜನಜೀವನಕ್ಕೆ ಅನುಕೂಲವಾಗಿವೆ. 320 ಕಿಲೋ ಮೀಟರ್ ಉದ್ದ, 30-40 ಕಿಲೋ ಅಗಲದ ಪಟ್ಟಿಯಲ್ಲಿ ಮೆಕ್ಕಲು(ರೇತಿ), ಜಂಬಿಟ್ಟಿಗೆ ಮಣ್ಣಿದೆ. ಕರಾವಳಿ ಬಯಲಿನಲ್ಲಿ 75-150 ಮೀಟರ್ ಎತ್ತರದ ಚಿಕ್ಕ ಚಿಕ್ಕ ಗುಡ್ಡ ಬೆಟ್ಟಗಳ ಸರಣಿಯ ವಿನ್ಯಾಸವಿದೆ. ಒಂದೊಂದು ಪ್ರಾಂತ್ಯದ ಭೂಲಕ್ಷಣ, ಶಿಲಾವಿನ್ಯಾಸ, ನೆಲದಲ್ಲಿನ ಏರುತಗ್ಗು ಅನುಸರಿಸಿ ಮಳೆನೀರಿನ ಎಷ್ಟು ಭಾಗ ನೆಲದೊಳಗೆ ಜಿನುಗಿ ಅಂತರ್ಜಲವಾಗುತ್ತದೆಂದು ಅರಿಯಬಹುದು. ಇಲ್ಲಿ ಸರಿಸುಮಾರು ಶೇಕಡಾ 8 ಭಾಗ ಅಂತರ್ಜಲಕ್ಕೆ ಸೇರುತ್ತದೆ.

ಕೆರೆಗಳ ಸಂಖ್ಯೆ ಕಡಿಮೆ, ಗಾತ್ರವೂ ಚಿಕ್ಕದು. ಘಟ್ಟದ ಕಾಡಿನಲ್ಲಿ ಇಂಗುವ ನೀರು ನದಿ, ಹಳ್ಳಗಳ ಜೀವವಾಗಿದೆ. ಕೃಷಿ, ಜನಸಂಖ್ಯೆ, ಉದ್ಯಮಗಳು ನದಿ ಕಣಿವೆಯ ಧಾರಣಾ ಸಾಮರ್ಥ್ಯ ಮೀರಿ ಬೆಳೆದು ನಿಂತಿವೆ. ನೀರಿನ ಮಹತ್ವಕ್ಕಿಂತ ನೆಲದ ಬೆಲೆ ಏರಿ ಇಂದು ಗುಡ್ಡಗಳು ಅಭಿವೃದ್ಧಿಯ ಆರ್ಭಟಕ್ಕೆ ನೆಲಸಮವಾಗುವ ನೋಟಗಳಿವೆ. ಕರಾವಳಿಯಿಂದ ಘಟ್ಟ ಸಂಪರ್ಕಿಸುವ ರಸ್ತೆಗಳು ನದಿಯಂಚಿನಲ್ಲಿ ಸಾಗುತ್ತವೆ. ರಸ್ತೆ ಸುಧಾರಣೆ, ವಿಸ್ತರಣೆಯಿಂದ ಅಲ್ಲಿನ ಅರಣ್ಯಕ್ಕೆ ತೊಂದರೆಯಾಗಿದೆ. ಮುಖ್ಯವಾಗಿ ರಸ್ತೆ ಅಕ್ಕಪಕ್ಕದ ಕಾಲುವೆಗಳು ಕಡಿದಾದ ಘಟ್ಟದ ಮಳೆ ನೀರನ್ನು ಶೀಘ್ರ ನದಿಗೆ ತಲುಪಿಸುವ ಅಸ್ತ್ರಗಳಾಗಿವೆ. ಕಾಡಿನಲ್ಲಿ ಇಂಗುತ್ತಿದ್ದ ನೀರಿಗೆ ವೇಗ ಬಂದಿದೆ. ಭತ್ತದ ಬೇಸಾಯ ಕ್ಷೇತ್ರ ಕಡಿಮೆಯಾಗುತ್ತಿರುವುದು ಅಂತರ್ಜಲ ಕುಸಿತಕ್ಕೆ ಇನ್ನೊಂದು ಕಾರಣವಾಗಿದೆ. ಜನಸಾಂದ್ರತೆ ಹೆಚ್ಚುತ್ತಿದೆ, ಗದ್ದೆಗೆ ಕೆಂಪುಮಣ್ಣು ಹಾಕುತ್ತ ವಸತಿ ನೆಲೆಗಳು ಬೆಳೆಯುತ್ತಿವೆ. ಅಂಕುಡೊಂಕಾಗಿ ಹರಿಯುವ ಹಳ್ಳಗಳ ನೀರನ್ನು ನೇರಕ್ಕೆ ಸಾಗರಕ್ಕೆ ತಲುಪಿಸುವ ಪ್ರಯತ್ನಗಳಿವೆ. ನೀರುಳಿಯುವ ನೈಸರ್ಗಿಕ ಸಾಧ್ಯತೆಗಳು ಕ್ಷೀಣಿಸಿವೆ.

20 ವರ್ಷಗಳ ಹಿಂದೆ ದಿನಕ್ಕೆ ನೂರಾರು ಜನ ಬರುತ್ತಿದ್ದ ಪುಣ್ಯಕ್ಷೇತ್ರದಲ್ಲಿ ವ್ಯವಸ್ಥೆ ಸುಧಾರಿಸಿದೆ, ನಿತ್ಯವೂ ಜನಜಾತ್ರೆಯಿದೆ. ಅನ್ನಪ್ರಸಾದ, ವಸತಿ ವ್ಯವಸ್ಥೆಗೆ ಪ್ರತಿದಿನ ಲಕ್ಷಾಂತರ ಲೀಟರ್ ನೀರು ಬೇಕು. 35-40 ಸಾವಿರ ಪ್ರವಾಸಿಗರ ಜೊತೆಗೆ ಸ್ಥಳೀಯ ಮೂಲನಿವಾಸಿಗಳ ಅಗತ್ಯಕ್ಕೆ ನದಿ ಅವಲಂಬಿಸಬೇಕಾಗಿದೆ. ಈ ನದಿಗಳೋ ವರ್ಷದ ಮೂರು ನಾಲ್ಕು ತಿಂಗಳ ಮಳೆ ನಂಬಿ ಹರಿಯುವಂಥವು! ಬೇಸಿಗೆಯ ರಜಾ ದಿನಗಳಂತೂ ಕರಾವಳಿ ಪ್ರವಾಸೋದ್ಯಮ ಉಚ್ಛ್ರಾಯ ಕಾಲ. ಹೊಟೆಲ್, ರೆಸಾರ್ಟ್ ಭರ್ತಿಯಾಗುತ್ತಿವೆ. ನೀರಿನ ಸಮಸ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿರುವ ಕಾಲದಲ್ಲಿ ಪರಿಹಾರ ಹುಡುಕಲು ಬಿಡುವಿಲ್ಲದಂತೆ ಪ್ರವಾಸಿಗರ ಸಂಖ್ಯೆ ದುಪ್ಪಟ್ಟಾಗಿ ಬೆಳೆಯುತ್ತಿದೆ. ಪ್ರವಾಸಿಗರನ್ನು ನಂಬಿಕೊಂಡು ಅಂಗಡಿ, ಹೊಟೆಲ್, ಲಾಡ್ಜ್, ವಾಹನ ವ್ಯವಹಾರ ಸಾಗಿದೆ. ಯಾವುದನ್ನು ಯಾರೂ ನಿಯಂತ್ರಿಸುವ ಸ್ಥಿತಿಯಿಲ್ಲ. ಸಂರಕ್ಷಣೆಯ ಬೆರಳೆಣಿಕೆಯ ಕೈಗಳಿಂದ ಪರಿಹಾರ ಕಷ್ಟ, ಪರಿಸ್ಥಿತಿ ಕೈಮೀರಿ ನೇತ್ರಾವತಿ, ಗಂಗಾವಳಿ, ಅಘನಾಶಿನಿ, ವೆಂಕಟಾಪುರ ಮುಂತಾದ ನದಿಗಳೆಲ್ಲ ಅಳುತ್ತಿವೆ.

ಘಟ್ಟದ ಆರಂಭದಿಂದ ನದಿ, ಹಳ್ಳಗಳಲ್ಲಿ ಬೇಸಿಗೆ ಜಲ ಸಂರಕ್ಷಣೆಗೆ ಸರಕಾರದ ಕಿಂಡಿ ತಡೆ ಅಣೆಕಟ್ಟೆಯ ರಚನೆಗಳಿವೆ. ಸ್ಥಳ ಆಯ್ಕೆ, ನಿರ್ವಹಣೆ, ನಿರ್ಮಾಣದಲ್ಲಿನ ಸಮಸ್ಯೆಗಳಿಂದ ಇವುಗಳಲ್ಲಿ ಶೇಕಡಾ 10ರಷ್ಟು ಬಳಕೆಯಲ್ಲಿ ಇಲ್ಲ. ರೈತರ ಮಣ್ಣಿನ ಕಟ್ಟಗಳು ನೀಡುವಷ್ಟು ಪ್ರಯೋಜನ ನೀಡಲು ಸೋತಿವೆ. ಬೇಸಿಗೆಯಲ್ಲಿ ಕರಾವಳಿ ನದಿ ಒಣಗುವುದಕ್ಕೆ ಚಳಿಗಾಲದ ಡಿಸೆಂಬರ್‍ನಲ್ಲಿ ಘಟ್ಟದ ತಪ್ಪಲಿನ ಹಳ್ಳಗಳ ನೀರು ಕಡಿಮೆಯಾಗುತ್ತಿರುವುದು ಕಾರಣವಾಗಿದೆ. ಕರಾವಳಿ ನದಿ ಒಣಗಲು ಸ್ಥಳೀಯ ಪರಿಸರ ಬದಲಾವಣೆ ಜೊತೆಗೆ ಸುಳ್ಯ, ಮಡಿಕೇರಿ, ಆಗುಂಬೆ, ಕುದುರೆಮುಖ, ದೇವಿಮನೆ, ಅರೆಬೈಲ್ ಘಟ್ಟದ ಮೇಲಿನ ಅರಣ್ಯನಾಶದ ಒತ್ತಡದ ಕಾರಣಗಳೂ ಇವೆ.

ನವೆಂಬರ್ ಎಚ್ಚರ, ಕರಾವಳಿ ನೀರ ಸಮಸ್ಯೆಗೆ ಪರಿಹಾರ

ಸಂಕದ ಹೊಳೆಯ ಉತ್ತರ ದಂಡೆಯಲ್ಲಿ ಭಟ್ಕಳ ನಗರವಿದೆ. ಈ ಹೊಳೆ ನೀರು ಗುಡ್ಡದ ತಪ್ಪಲಿನ ಸುಂದರ ಕಣಿವೆಯಲ್ಲಿ ಕೃಷಿಗೆ ಬಳಕೆಯಾಗುತ್ತದೆ. ಕೃಷಿಕರು ತಮ್ಮ ಸ್ವಂತ ಶ್ರಮದಿಂದ ಇದಕ್ಕೆ ಬೇಸಿಗೆಯಲ್ಲಿ ಒಡ್ಡು ಹಾಕುತ್ತಾರೆ. ಬೇಸಿಗೆ ಭತ್ತದ ಕೃಷಿಗೆ ನೀರು ಬಳಕೆಯಾಗುತ್ತದೆ. ಮಳೆಗಾಲದ ಪ್ರವಾಹ ಸಂದರ್ಭದಲ್ಲಿ ಒಡ್ಡು ಒಡೆದು ಹೋಗುತ್ತದೆ, ಬೇಸಿಗೆಯಲ್ಲಿ ರೈತರು ಪುನಃ ಈ ಒಡ್ಡುಗಳನ್ನು ನವೆಂಬರ್ 17ರಿಂದ ಡಿಸೆಂಬರ್ 16ರ ಸಮಯದಲ್ಲಿ ದುರಸ್ತಿ ಮಾಡುವರು. ಕ್ರಿ.ಶ. 1801ರ ಫೆಬ್ರುವರಿ 18ರಂದು ಅಧ್ಯಯನಕಾರ ಡಾ.ಫ್ರಾನ್ಸಿಸ್ ಬುಕಾನನ್ ಇಲ್ಲಿಗೆ ಭೇಟಿ ನೀಡಿ ಒಡ್ಡಿನ ವಿವರ ದಾಖಲಿಸಿದ್ದಾರೆ. ಬುಕಾನನ್ ಭೇಟಿಯ ನಂತರ ಸರಿಯಾಗಿ 200 ವರ್ಷಗಳ ನಂತರ ಕ್ರಿ.ಶ. 2001ರ ಫೆಬ್ರುವರಿ 18ಕ್ಕೆ ಈ ಪ್ರದೇಶ ನೋಡಿದಾಗಲೂ ಒಡ್ಡಿನ ನಿರ್ಮಾಣ ನಡೆದಿತ್ತು. ಉತ್ತರ ಕನ್ನಡದ ಭಟ್ಕಳದ ಬೃಂದಾವನ ಹೊಳೆ, ಬಾಳಗಟ್ನ ಹೊಳೆ, ಕುಂಬಾರ ಹೊಳೆ, ಸಂಕದಹೊಳೆ, ಸಾರದ ಹೊಳೆಗಳಲ್ಲಿ ಮಣ್ಣಿನ ಒಡ್ಡಿನ ಮೂಲಕ ಬೇಸಿಗೆಯ ಕೃಷಿಯಿತ್ತು. ಈಗ ಒಡ್ಡು ನಿರ್ಮಾಣ ನಿಂತಿದೆ. ಬೇಸಿಗೆ ಭತ್ತ ಬೆಳೆಯುವವರು ಯಾರೂ ಇಲ್ಲ. ಗದ್ದೆಗಳು ಅಡಿಕೆ ತೋಟವಾಗಿದೆ, ಪರಿಶ್ರಮದ ಕೃಷಿ ಸಾಂಪ್ರದಾಯಿಕ ಬದುಕು ಬದಲಾಗಿದ್ದರಿಂದ ಕರಾವಳಿ ಜಲ ಸಮಸ್ಯೆ ಹೆಚ್ಚಿದೆ.

ಕರಾವಳಿಯಲ್ಲಿ ಭೂಮಿ ಹಿಡುವಳಿ ಬಹಳ ಕಡಿಮೆ. ತೋಟ ಉಳಿಸಲು ಪಂಪು, ಬಾವಿಗಳ ಸಂಖ್ಯೆ ಹೆಚ್ಚಿದೆ. ಕ್ರಿ.ಶ. 1998ರಲ್ಲಿ ಕುಮಟಾ ತಾಲ್ಲೂಕಿನ ಮೂರೂರು, ಕಲ್ಲಬ್ಬೆ, ಹೊಸಾಡ ಮೂರು ಹಳ್ಳಿಗಳ ಸುಮಾರು 350 ಎಕರೆ ತೋಟಕ್ಕೆ 450ಕ್ಕೂ ಹೆಚ್ಚು ನೀರಾವರಿ ಪಂಪುಗಳಿದ್ದವು. ಈಗ ಇವುಗಳ ಸಂಖ್ಯೆ 600 ದಾಟಿರಬಹುದು! ಒಡ್ಡು ಹಾಕುವ ಪದ್ಧತಿ ಕೈಬಿಟ್ಟಿದ್ದರಿಂದ ಆರೆಂಟು ಅಡಿಯಿದ್ದ ಹಳ್ಳಗಳ ಆಳ ಹದಿನೈದು ಇಪ್ಪತ್ತು ಅಡಿಗೆ ಇಳಿಯಿತು. ತೋಟದಂಚಿನ ಆಳ ಬಸಿಗಾಲುವೆಗಳಂತೆ ನೀರಿನ ಓಟದ ಜೊತೆಗೆ ಅಂತರ್ಜಲವೂ ಕುಸಿಯಿತು. ಕೆಲವೆಡೆ ಮಳೆಗಾಲ ಮುಗಿದು ಹತ್ತು ದಿನಕ್ಕೆ ತೋಟಕ್ಕೆ ನೀರುಣಿಸುವ ದುಃಸ್ಥಿತಿ ತಲೆದೋರಿತ್ತು.

ಅಡಿಕೆಗೆ ಸಹಕಾರಿ ರಂಗದ ವ್ಯವಸ್ಥಿತ ಮಾರುಕಟ್ಟೆಯಿದೆ. ಉತ್ಪನ್ನವನ್ನು ದರ ಸಿಗುವ ತನಕ ಕೆಡದಂತೆ ಇಟ್ಟು ಮಾರಬಹುದು. ಇದರಿಂದ ಅಡಿಕೆಯ ಪ್ರೀತಿ ಕರಾವಳಿಗೆ ಹೊಂದಿಕೊಂಡ ನದಿಯಂಚಿನ ಕಣಿವೆಗೆಲ್ಲ ಅಕ್ಕರೆಯಾಗಿದೆ. ಬಾಳೆ, ತೆಂಗಿನ ತೋಟಗಳು ವಿಸ್ತರಿಸಿವೆ. ಕರಾವಳಿ ಪ್ರದೇಶಕ್ಕೆ ಬಯಲು ಸೀಮೆಯಂತೆ ಬೃಹತ್ ನೀರಾವರಿ ಯೋಜನೆಯಿಲ್ಲ. ರೈತರ ಖಾಸಗಿ ಯತ್ನದಿಂದ ನದಿ, ಹಳ್ಳದ ನೀರು ಅವಲಂಬಿಸಿ ತೋಟಗಳು ಹೆಚ್ಚಿವೆ. ಉಚಿತ ವಿದ್ಯುತ್ ಸೌಲಭ್ಯ ಕ್ಷೇತ್ರ ವಿಸ್ತರಣೆಗೆ ಹೊಸ ವೇಗ ಒದಗಿಸಿದೆ. ಬೆಳೆಯುತ್ತಿರುವ ಜನಸಂಖ್ಯೆಗೆ ತೋಟ ಮಾಡುವುದು ಹೊಸ ಉದ್ಯೋಗವಾಯ್ತು. ಇದರ ಜೊತೆಗೆ ಅರಣ್ಯ ಅತಿಕ್ರಮಣದ ನೆಲೆಗಳು ಆದಾಯಕ್ಕೆ ಅಡಿಕೆ ಅವಲಂಬಿಸಿದವು. ಇಂದು ಕರಾವಳಿಗೆ ಹೊಂದಿಕೊಂಡ ಪಶ್ಚಿಮ ಘಟ್ಟದ ನದಿ ಕಣಿವೆಗಳಲ್ಲಿ ಹತ್ತು ಕಿಲೋ ಮೀಟರ್ ಸಾಗಿದರೆ ಸಾವಿರಾರು ಪಂಪುಗಳು ನದಿಯಿಂದ ನೀರೆತ್ತುವುದನ್ನು ನೋಡಬಹುದು. ಇತ್ತೀಚೆಗೆ ಕಾರವಾರಕ್ಕೆ ಕುಡಿಯುವ ನೀರು ಒದಗಿಸುವ ಗಂಗಾವಳಿ ನದಿ ಸಂಪೂರ್ಣ ಒಣಗಿದೆ, ಮಾಹಿತಿ ಪ್ರಕಾರ ಹಳ್ಳದ ದಂಡೆಯ ಹತ್ತು ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಸುಮಾರು 2,500 ಎಚ್‍ಪಿ ನೀರಾವರಿ ಪಂಪುಗಳಿವೆ. ನದಿ ಅವಲಂಬಿತ ಕೃಷಿ ಬದುಕು ನೀರಿನ ಸಮಸ್ಯೆಯಿಂದ ಕಂಗೆಟ್ಟಿದೆ.

ಮರಳ ಹೊಂಡದಲ್ಲಿ ನೀರಿದ್ದಷ್ಟೇ ಬೆಳೆ

ಕರಾವಳಿ ಗದ್ದೆ ಬಯಲಿನಲ್ಲಿ ಮಳೆ ಮುಗಿದ ತಕ್ಷಣ ತರಕಾರಿ ಬೇಸಾಯ ಶುರುವಾಗುತ್ತದೆ. ಕೆಂಪು ಹರಿವೆ, ಮೆಣಸು, ಮೂಲಂಗಿ, ಗೆಣಸು, ಬದನೆ, ಪಡವಳ, ಬೂದುಗುಂಬಳ ಮುಂತಾದ ಕಾಯಿಪಲ್ಲೆ ಹಬ್ಬ ಮೇಳೈಸುತ್ತದೆ. ಸಾಕಷ್ಟು ನೀರಿರುವ ಡಿಸೆಂಬರ್-ಫೆಬ್ರುವರಿ ಕಾಲಕ್ಕೆ ಬೆಳೆ ಪಡೆಯುವ ತಂತ್ರ ಇವರದು. ಮಳೆಗಾಲದ ಭತ್ತದ ಕೊಯ್ಲು ಮುಗಿದ ತಕ್ಷಣ ಗದ್ದೆಯ ಮರಳುಮಿಶ್ರಿತ ಮಣ್ಣಲ್ಲಿ ನೀರಾವರಿ ಹೊಂಡ ತೆಗೆಯುವ ಕೆಲಸ ಶುರುವಾಗುತ್ತಿತ್ತು. ಮರಳು ಮಣ್ಣಿನಲ್ಲಿ ಕೃಷಿ ನೀರಾವರಿಗೆ ಆರೆಂಟು ಅಡಿ ಹೊಂಡ ತೆಗೆಯಬೇಕು. ಹೊಂಡದಲ್ಲಿ ಎರಡಡಿ ನೀರು ಭರ್ತಿಯಾದರೆ ಬಿಂದಿಗೆ ಮುಳುಗುತ್ತದೆ, ಆಗ ನೀರು ತುಂಬಬಹುದು. ನಮ್ಮ ಲೆಕ್ಕದ ಪ್ರಕಾರ ಇನ್ನಷ್ಟು ಆಳ ತೆಗೆದರೆ ನೀರು ಹೆಚ್ಚು ಸಂಗ್ರಹವಾಗುತ್ತದೆ. ಆದರೆ ಮರಳು ಮಣ್ಣಿನಲ್ಲಿ ಇನ್ನೂ ಆಳವಾದರೆ ಕುಸಿಯುತ್ತದೆ. ನಿರ್ಮಿಸಿದ್ದು ಕ್ಷಣಾರ್ಧದಲ್ಲಿ ನೆಲಸಮವಾಗುತ್ತದೆ. ಬಿಂದಿಗೆ ಮುಳುಗುವಷ್ಟು ನೀರು ದೊರಕಿದಾಗ ಅಗೆತ ನಿಲ್ಲಿಸಿ ಜಾಣ್ಮೆಯಲ್ಲಿ ಬಾವಿ ನಿರ್ಮಿಸುತ್ತಿದ್ದರು. ಅಂತರ್ಜಲ ಇಳಿಯುತ್ತ ಹೋದಂತೆ ಅಷ್ಟಷ್ಟು ದಿನಕ್ಕೆ ಆಳ ಮಾಡುತ್ತಿದ್ದರು.

ಕರಾವಳಿ ಬಯಲಿನ ಅಂತರ್ಜಲ ಕುಸಿತದ ನೋಟಗಳನ್ನು ಮರಳ ಬಾವಿಗಳ ಮೂಲಕ ಅರಿಯಬಹುದಿತ್ತು. ದಶಕಗಳ ಹಿಂದೆ ಉತ್ತರ ಕನ್ನಡದ ಅಂಕೋಲಾ, ಕುಮಟಾ, ಹೊನ್ನಾವರ ಬಯಲಿನಲ್ಲಿ ಸಾಂಪ್ರದಾಯಿಕ ತರಕಾರಿ ಬದುಕಿಗಾಗಿ ಹೀಗೆ ಸಾವಿರಾರು ಹೊಂಡ ನಿರ್ಮಿಸುತ್ತಿದ್ದರು. ಪ್ರತಿ ಎಕರೆಯಲ್ಲಿ ಇಂಥ ಆರೆಂಟು ಹೊಂಡಗಳನ್ನು ದಶಕದ ಹಿಂದೆ ನೋಡಬಹುದಿತ್ತು. ಈಗ ಕೃಷಿಕರು ಕೆಲಸ ನಿಲ್ಲಿಸಿದ್ದಾರೆ. ಹೆದ್ದಾರಿ ಅಗಲೀಕರಣದಿಂದ ಭೂಮಿಗೆ ಬೆಲೆ ಏರಿ ಗದ್ದೆಗಳು ಮನೆಗಳಾಗುತ್ತಿವೆ.

ನದಿಗಳು ಅಂಕುಡೊಂಕಾಗಿ ಕಲ್ಲುಪದರಗಳ ಮೇಲೆ ಹರಿಯುತ್ತಿವೆ. ಘಟ್ಟದಿಂದ ಪ್ರವಾಹ ದುಮ್ಮಿಕ್ಕುವ ಭರಾಟೆಯಲ್ಲಿ ಆಳದ ಗುಂಡಿಗಳು ನಿರ್ಮಾಣವಾಗಿವೆ. ಪ್ರತಿ ಕಿಲೋ ಮೀಟರ್‍ಗೆ ಮೂರು ನಾಲ್ಕು ವಿಶಾಲ ಸರಣಿ ಕೆರೆಗಳಂತೆ ರೂಪುಗೊಂಡಿವೆ. 80ರ ದಶಕದ ನಂತರದಲ್ಲಿ ಪಶ್ಚಿಮಘಟ್ಟದ ಗುಡ್ಡದ ನೆಲೆಯಲ್ಲಿ ಅಕೇಶಿಯಾ, ಕಾಫೀ, ಅಡಿಕೆ, ತೆಂಗು, ರಬ್ಬರ್, ಶುಂಠಿ, ಲಾವಂಚ ಬೆಳೆಗಳಿಗೆ ಭೂಮಿ ಹದಗೊಳಿಸುವ ಭರಾಟೆಯಲ್ಲಿ ಭೂಮಿ ಅಗೆತ ಜೋರಾಗಿದೆ. ರೈಲು ಮಾರ್ಗ, ಹೆದ್ದಾರಿ, ಗಣಿಗಾರಿಕೆ ಪರಿಣಾಮಗಳಿಂದಲೂ ಅಪಾರ ಮಣ್ಣು ಸವಕಳಿಯಾಗಿ ನದಿ ಹಳ್ಳಗಳ ಆಳದ ಗುಂಡಿಗಳಲ್ಲಿ ಶೇಖರಣೆಯಾಗಿದೆ. ಭಯ ಹುಟ್ಟಿಸುತ್ತಿದ್ದ ಭೂತನ ಗುಂಡಿ, ಮೊಸಳೆ ಗುಂಡಿಗಳು ಇಂದು ಬೇಸಿಗೆಯಲ್ಲಿ ನೀರು ಒಣಗಿ ಆಟದ ಬಯಲಿನಂತೆ ಕಾಣಿಸುತ್ತಿವೆ. ಹದಿನೈದು ಇಪ್ಪತ್ತು ಅಡಿ ಆಳ ನೀರಿನಲ್ಲಿ ನೀರು ನಾಯಿಗಳ ಆವಾಸವಿತ್ತು. ಇಂಥ ನೆಲೆಗಳು ನಾಶಗೊಂಡಿವೆ. ನದಿಯಂಚಿನ ಫಲವತ್ತಾದ ಭೂಮಿ ಅತಿಕ್ರಮಿಸುವ ಸಮರದಲ್ಲಿ ನದಿ ಕಾಡು ಕಣ್ಮರೆಯಾಗಿದೆ. ಕಳೆದ 50 ವರ್ಷಗಳಲ್ಲಿ ಕರಾವಳಿ ನದಿ, ಬಯಲಿನ ಸ್ವರೂಪ ಅದಲು ಬದಲಾಗಿ ನೀರ ನೆಮ್ಮದಿಯ ನೆಲೆಯಲ್ಲಿ ಆತಂಕ ಹುಟ್ಟಿಸಿದೆ.

ಇನ್ನು ಅಬ್ಬರದ ಮಳೆ ಬಂದು ಇದೇ ನದಿಗಳಲ್ಲಿ ಪ್ರವಾಹ ಹರಿಯುತ್ತದೆ. ಮುಂದಿನ ವರ್ಷ ಮತ್ತೆ ಬೇಸಿಗೆ ಬರಲಿದೆ, ನೀರಿನ ಸಮಸ್ಯೆ ಪುನರಾವರ್ತನೆಯಾಗಲಿದೆ. ಸಂರಕ್ಷಣೆಯ ಬಗ್ಗೆ ಸಮುದಾಯ ಎಚ್ಚರವಾಗದಿದ್ದರೆ ಯಾವ ಸರಕಾರ ಏನೂ ಮಾಡುವುದಿಲ್ಲ. ಘಟ್ಟದ ಜಂಬಿಟ್ಟಿಗೆ ನೆಲೆಯ ಕಣಿವೆಯ ಮದಕಗಳಿಗೆ ಮರುಜೀವ ನೀಡುವ ಕಾರ್ಯ ಅಗತ್ಯವಿದೆ. ಮುಖ್ಯವಾಗಿ ಮಳೆ ಮುಗಿದು ನವೆಂಬರ್-ಡಿಸೆಂಬರ್ ಹೊತ್ತಿಗೆ ಸಮರೋಪಾದಿಯಲ್ಲಿ ಹಳ್ಳಿ ಹಳ್ಳಿಗಳಲ್ಲಿ ಹಳ್ಳಕ್ಕೆ ಒಡ್ಡು ನಿರ್ಮಿಸಿ ಬೇಸಿಗೆ ಜಲಕ್ಷಾಮ ಗೆಲ್ಲಲು ಓಡುವ ನೀರು ತಡೆಯುವ ತಂತ್ರ ಅನುಸರಿಸಬೇಕಿದೆ. ಜಲಕ್ಷಾಮದಿಂದ ಬಳಲುತ್ತಿರುವ ಕರಾವಳಿಗೆ ನದಿ ತಿರುವು ಯೋಜನೆಗಳು ಭಯಾಘಾತ ಹುಟ್ಟಿಸಿವೆ. ಜೀವಜಲ ಸಂರಕ್ಷಣೆಗೆ ಸಾಧ್ಯವಾದ ಎಲ್ಲ ಪ್ರಯತ್ನ ಅಗತ್ಯವಿದೆ. ಈಗಾಗಲೇ ಸೂಕ್ಷ್ಮ ನದಿ ಕಣಿವೆಯ ನೆಲೆಯಲ್ಲಿ ಸಂಯಮದ ಗಡಿ ಮೀರಿ ಮುನ್ನುಗ್ಗಿದ್ದೇವೆ, ನೀರಿನ ಸಮಸ್ಯೆಗಳಿಂದ ಬಚಾವಾಗಲು ನಿಧಾನಕ್ಕೆ ಒಂದೊಂದು ಹೆಜ್ಜೆ ಹಿಂದಕ್ಕೆ ಸರಿಯಲು ಕಲಿತರೆ ಹಿರಿಯಜ್ಜನ ಕೃಷಿ ಬದುಕಿನ ಪಾರಂಪರಿಕ ಜ್ಞಾನದಲ್ಲಿ ಸಂರಕ್ಷಣೆಯ ನೆಲದ ಬೆಳಕು ಕಾಣಿಸಬಹುದು. ಲಕ್ಷಾಂತರ ಜನಕ್ಕೆ ಆರೋಗ್ಯ, ವಿದ್ಯೆ, ಭಕ್ತಿಯ ಮಾರ್ಗ ತೋರಿಸುವ ನೆಲೆ ಕುಡಿಯುವ ನೀರಿನ ವಿಚಾರಕ್ಕೆ ತಲೆ ತಗ್ಗಿಸುವುದು ಸರಿಯೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT