ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PV Web Exclusive: ಮರಳು ಕುಂಟೆಯಲ್ಲಿ ಮುಂಗರವಳ್ಳಿ ಸಸ್ಯ

ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಕಂಡುಬಂದ ಅಪರೂಪದ ಸಸ್ಯ
Last Updated 4 ಜನವರಿ 2021, 7:00 IST
ಅಕ್ಷರ ಗಾತ್ರ

ಕಾಂಕ್ರೀಟ್ ಕಾಡಾಗಿರುವ ಬೆಂಗಳೂರಿನ ಸುತ್ತಮುತ್ತ ಉಳಿದಿರುವ ಅಷ್ಟಿಷ್ಟು ಅರಣ್ಯ ಪ್ರದೇಶಗಳಲ್ಲಿ ಅಪರೂಪದ ಸಸ್ಯ ಸಂಕುಲಗಳು ಉಳಿದುಕೊಂಡಿರುವುದು ಸಮಾಧಾನದ ಸಂಗತಿ. ಬೆಂಗಳೂರು ಗ್ರಾಮಾಂತರ ಅರಣ್ಯ ವಲಯದ ಮರಳುಕುಂಟೆ ಬಳಿ ಅಪರೂಪದ ಸಸ್ಯವೊಂದು ಹುಲುಸಾಗಿ ಬೆಳೆದಿರುವುದನ್ನು ತಜ್ಞರಿಬ್ಬರು ಪತ್ತೆ ಮಾಡಿದ್ದಾರೆ.

***

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲ್ಲೂಕಿನ ಮರಳುಕುಂಟೆ ಗ್ರಾಮದ ಅರಣ್ಯ ಪ್ರದೇಶದಲ್ಲಿ ಈಚೆಗೆ ಪಕ್ಷಿ ವೀಕ್ಷಣೆ ಭಾಗವಾಗಿ ಅಲೆದಾಡುತ್ತಿರುವಾಗ, ಹವ್ಯಾಸಿ ವನ್ಯಜೀವಿ ಛಾಯಾಗ್ರಾಹಕ ಸುನಿಲ್ ಕುಮಾರ್ ಮರಳುಕುಂಟೆ ಮತ್ತು ಜೀವವೈವಿಧ್ಯ ಸಂಶೋಧಕ ಮಂಜುನಾಥ ಎಸ್. ನಾಯಕ ಅವರು ಭಾರತೀಯ ಮೂಲದ ಮುಂಗರವಳ್ಳಿ ಜಾತಿಗೆ ಸೇರಿದ ಅಪರೂಪದ ಆರೋಹಿ (climber) ಸಸ್ಯವನ್ನು ದಾಖಲಿಸಿದ್ದಾರೆ. ಇದು ವಿಟೇಸಿ ಕುಟುಂಬಕ್ಕೆ ಸೇರಿದ್ದಾಗಿದ್ದು, ಸಿಸ್ಸಸ್ ಅರ್ನೋಟ್ಟಿಯಾನಾ (cissus arnottiana) ತಳಿಗೆ ಸೇರಿದೆ.

‘ವಿಶ್ವದಲ್ಲಿ ವಿಟೇಸಿ ಕುಟುಂಬಕ್ಕೆ ಸೇರಿದ 800 ಜಾತಿಯ ಮುಂಗರವಳ್ಳಿ ಸಸ್ಯಗಳನ್ನು ಗುರುತಿಲಾಗಿದ್ದು, ಭಾರತದಲ್ಲಿ ಈ ಕುಟುಂಬಕ್ಕೆ ಸೇರಿದ 63 ಜಾತಿಯ ಸಸ್ಯಗಳನ್ನು ದಾಖಲಿಸಲಾಗಿದೆ. ಇದು ನೆಟ್ಟಗೆ ಬೆಳೆಯುವ ಪೊದೆಯಾಗಿದ್ದು, ಐದಾರು ಇಂಚಿನಷ್ಟು ಅಗಲ ಎಲೆಯನ್ನು ಹೊಂದಿರುತ್ತದೆ. ಸಾಮಾನ್ಯವಾಗಿ 4ರಿಂದ 4.5 ಅಡಿಯಷ್ಟು ಎತ್ತರಕ್ಕೆ ಬೆಳೆಯುತ್ತದೆ. ಶುಷ್ಕ ಹುಲ್ಲುಗಾವಲಿನ ಅರಣ್ಯದ ಜಲಮೂಲಗಳ ಸಮೀಪ ಈ ಸಸ್ಯಗಳು ಬೆಳೆಯುತ್ತವೆ’ ಎನ್ನುತ್ತಾರೆ ಮಂಜುನಾಥ ನಾಯಕ.

ಮೈತುಂಬ ಮೊಗ್ಗರಳಿಸಿರುವ ಸಸ್ಯ
ಮೈತುಂಬ ಮೊಗ್ಗರಳಿಸಿರುವ ಸಸ್ಯ

ಈ ಸಸ್ಯವು ಏಪ್ರಿಲ್ ತಿಂಗಳಿನಿಂದ ಜುಲೈ ತಿಂಗಳ ನಡುವೆ ಕುಂಕುಮ ಬಣ್ಣದ ಹೂಗಳನ್ನು ಅರಳಿಸುತ್ತದೆ. ಜೇನುಹುಳುಗಳು ಮತ್ತು ಇನ್ನಿತರ ನೊಣಗಳು, ಕಣಜ ಕೀಟಗಳು ಹೂವಿನ ಪರಾಗಸ್ಪರ್ಶ ಮಾಡುತ್ತವೆ. ಸೂರಕ್ಕಿ, ಪಿಕಳಾರ ಮತ್ತು ಇನ್ನಿತರ ಪಕ್ಷಿಗಳು ಇದರ ಕಾಯಿಗಳನ್ನು ತಿಂದು ನೈಸರ್ಗಿಕವಾಗಿ ಬೀಜ ಪ್ರಸರಣ ಕಾರ್ಯ ಮಾಡುತ್ತವೆ. ಇತ್ತೀಚೆಗೆ ಈ ಸಸ್ಯ ಕಾಣುವುದು ಅಪರೂಪವಾಗಿದೆ ಎಂದು ಅವರು ತಿಳಿಸಿದರು.

‘ಸಸ್ಯಶಾಸ್ತ್ರಜ್ಞರ ಪ್ರಕಾರ ಭಾರತದಲ್ಲಿ ಕರ್ನಾಟಕ, ಗುಜರಾತ್, ಮಹಾರಾಷ್ಟ್ರ, ಆಂಧ್ರಪ್ರದೇಶ, ತಮಿಳುನಾಡು ಮತ್ತು ಕೇರಳದ ಕಾಡುಗಳಲ್ಲಿ ಈ ಸಸ್ಯಗಳು ಕಾಣಸಿಗುತ್ತವೆ. ಕರ್ನಾಟಕದಲ್ಲಿ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದಲ್ಲಿ ಇದನ್ನು ದಾಖಲಿಸಲಾಗಿದೆ. ದೇವರಾಯನಬೆಟ್ಟದಲ್ಲೂ ಈ ಸಸ್ಯವಿರುವ ಮಾಹಿತಿ ಲಭ್ಯವಾಗಿದೆ. ಆದರೆ ಇದರ ದಾಖಲೀಕರಣ ಇನ್ನಷ್ಟೇ ಆಗಬೇಕಾಗಿದೆ. ಈಗ ಮರಳುಕುಂಟೆಯಲ್ಲಿ ಈ ಸಸ್ಯ ನಮ್ಮ ಕಣ್ಣಿಗೆ ಬಿದ್ದಿದೆ. ಜತೆಗೆ ಈ ಪೊದೆಯಲ್ಲಿರುವ ಎಲೆಗಳು 11 ಇಂಚಿನಷ್ಟು ಅಗಲವಾಗಿದ್ದವು’ ಎಂದು ಅವರು ಖುಷಿಯಿಂದ ‘ಪ್ರಜಾವಾಣಿ’ ಜೊತೆ ಮಾಹಿತಿ ಹಂಚಿಕೊಂಡರು.

ಸಸ್ಯದ ದೊಡ್ಡ ಗಾತ್ರದ ಎಲೆ
ಸಸ್ಯದ ದೊಡ್ಡ ಗಾತ್ರದ ಎಲೆ

‘ವಿಟೇಸಿ ಕುಟುಂಬದ ಸಿಸ್ಸಸ್ ಪ್ರಭೇದದಲ್ಲಿ ಬರುವ ಎಲ್ಲಾ ಜಾತಿಯ ಸಸ್ಯಗಳು ಔಷಧೀಯ ಮೌಲ್ಯಗಳನ್ನು ಹೊಂದಿವೆ. ಸಾಮಾನ್ಯವಾಗಿ ಅತಿಸಾರ, ಭೇದಿ, ಸಂಧಿವಾತ, ಮೂಲವ್ಯಾಧಿ, ಮಧುಮೇಹ ನಿಯಂತ್ರಣಕ್ಕಾಗಿ ಆಯುರ್ವೇದ ಪದ್ಧತಿಯಲ್ಲಿ ಈ ಸಸ್ಯ ಬಳಕೆಯಲ್ಲಿದೆ. ಕ್ಯಾಲ್ಸಿಯಂ ಅಂಶ ಹೇರಳವಾಗಿರುವುದರಿಂದ ಮೂಳೆಮುರಿತ ಜೋಡಣೆಯ ಔಷಧ ತಯಾರಿಕೆಯಲ್ಲೂ ಇದರ ಬಳಕೆಯಿದೆ. ಸಿಸ್ಸಸ್ ಅರ್ನೋಟ್ಟಿಯಾನಾ ಸಸ್ಯದಲ್ಲಿನ ರಸಾಯನಿಕಗಳು ಜೀವಾಣು ನಿರೋಧ ಮತ್ತು ಬ್ಯಾಕ್ಟೀರಿಯಾ ನಿರೋಧಕವಾಗಿ ಕೆಲಸಮಾಡಬಲ್ಲ ಗುಣಗಳನ್ನು ಹೊಂದಿವೆ. ಈ ಕುರಿತು ಹೆಚ್ಚಿನ ಸಂಶೋಧನೆ ಆಗಬೇಕಾಗಿದೆ’ ಎಂದು ಅವರು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT