ಗುರುವಾರ , ಜೂನ್ 30, 2022
24 °C

ನಗುವ ಕೈತೋಟ ಬಾಡದಿರಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೇಸಿಗೆ ಕಾಲ ಮುಗಿಯುವ ಹೊತ್ತಿಗೆ ಅದೆಷ್ಟು ಗಿಡಗಳು ಬಾಡಿ ನೆಲಕಚ್ಚುತ್ತವೋ ಲೆಕ್ಕವಿಲ್ಲ. ಆದರೆ, ಸ್ವಲ್ಪ ಮುತುವರ್ಜಿ ವಹಿಸಿ, ಒಂದಷ್ಟು ರಕ್ಷಣಾತ್ಮಕ ಕ್ರಮಗಳನ್ನು ಅನುಸರಿಸಿದರೆ, ಗಿಡಗಳನ್ನು ಕಳೆದುಕೊಳ್ಳುವಂತಹ ಅಪಾಯದಿಂದ ಪಾರಾಗಬಹುದು, ತೋಟವನ್ನು ಹಸಿರಾಗಿಟ್ಟುಕೊಳ್ಳಬಹುದು.

1. ಗಿಡಗಳ ರಕ್ಷಣೆಗೆ ಆದ್ಯತೆ

ಬೆಳಿಗ್ಗೆ ಅಥವಾ ಸಂಜೆ (ತಂಪು ಹೊತ್ತಿನಲ್ಲಿ) ಮಾತ್ರ ಗಿಡಗಳನ್ನು ಆರೈಕೆ ಮಾಡಿ. ಕುಂಡದಲ್ಲಿರಲಿ, ಕಂಟೇನರ್‌ಗಳಲ್ಲಿರಲಿ ಅಥವಾ ನೆಲದಲ್ಲಿರಲಿ (ಸಣ್ಣ ಹಾಗೂ ಸೂಕ್ಷ್ಮ ಗಿಡಗಳಿಗೆ) ಅವುಗಳಿಗೆ ತೀಕ್ಷ್ಣ ಬಿಸಿಲು ತಾಗದಂತೆ ನೆರಳು ಮಾಡಿ. ನೆರಳು ಮಾಡಲು ತೆಳುವಾದ ತಿಳಿ ಬಣ್ಣದ ಬಟ್ಟೆಗಳನ್ನು ಬಳಸಬಹುದು. ನಿಮ್ಮಲ್ಲಿ ಶೇಡ್‌ನೆಟ್‌ಗಳಿದ್ದರೆ, ಅವುಗಳನ್ನು ಬಳಸಿ ನೆರಳು ಮಾಡಿ. ಇದರಿಂದ, ಮಧ್ಯಾಹ್ನದ ಉರಿ ಬಿಸಿಲು ನೇರವಾಗಿ ಗಿಡಗಳ ಮೇಲೆ ಬೀಳುವುದನ್ನು ತಪ್ಪಿಸಬಹದು. ಇದು ಬೇಸಿಗೆಯ ಆರಂಭದಿಂದಲೂ ಕೈಗೊಳ್ಳಬೇಕಾದ ಪ್ರಕ್ರಿಯೆ.  

2. ಮಣ್ಣಿನ ಫಲವತ್ತತೆ ಹೆಚ್ಚಿಸಿ

ಬೇಸಿಗೆ ಆರಂಭವಾಗುತ್ತಲೇ ಕೈತೋಟದ (ಕುಂಡ/ನೆಲ/ಕಂಟೇನರ್‌ನಲ್ಲಿರುವ) ಮಣ್ಣನ್ನು ಸಡಿಲ ಮಾಡಿ. ಆಗ ಬೇರುಗಳಿಗೆ ಗಾಳಿಯಾಡುತ್ತದೆ. ಮಣ್ಣಿಗೆ ಸಾವಯವ ಗೊಬ್ಬರ (ಎರೆಹುಳು ಗೊಬ್ಬರ, ಮನೆಯ ತ್ಯಾಜ್ಯದಿಂದ ತಯಾರಿಸಿದ ಗೊಬ್ಬರ, ಸಗಣಿಗೊಬ್ಬರ)ವನ್ನು ಸೇರಿಸಿ. ಇದರಿಂದ ಮಣ್ಣಿನಲ್ಲಿ ಸೂಕ್ಷ್ಮಾಣು ಜೀವಿಗಳು ಹೆಚ್ಚಾಗಿ, ಮಣ್ಣಿನ ಫಲವತ್ತತೆಯೂ ಹೆಚ್ಚುತ್ತದೆ. ಹನಿಸಿದ ನೀರು ಬೇರಿಗೆ ಇಳಿಯುತ್ತದೆ. ಬೇರಿಗೆ ತೇವಾಂಶ, ಪೂರಕ ಪೋಷಕಾಂಶ ಲಭ್ಯವಾಗುವುದರಿಂದ ಗಿಡಗಳು ಹಸಿರಿನಿಂದ ನಳನಳಿಸುತ್ತಿರುತ್ತವೆ.

3. ದಿನಕ್ಕೆರಡು ಬಾರಿ  ನೀರುಣಿಸಿ 

ವಾತಾವರಣ ತಂಪಾಗಿದ್ದ ಸಮಯದಲ್ಲಿ ಅಂದರೆ, ಬೆಳಿಗ್ಗೆ ಮತ್ತು ಸಂಜೆ ಮಾತ್ರ ಗಿಡಗಳಿಗೆ ನೀರುಣಿಸಿ. ಮಧ್ಯಾಹ್ನ ಬಿಸಿಲಿದ್ದಾಗ ನೀರು ಹಾಕಿದರೆ, ಇದು ಗಿಡಗಳಿಗೆ ಉಪಯೋಗಕ್ಕಿಂತ ಅಪಾಯವೇ ಹೆಚ್ಚು. ಕುಂಡಗಳಿಗೆ ಹಾಕಿದ ನೀರು ಬೇಗನೆ ಆವಿಯಾಗುವುದರಿಂದ, ಆಗಾಗ್ಗೆ ನೀರು ಹಾಕುತ್ತಿರಬೇಕು. ಕುಂಡಗಳ ಕೆಳಗೆ ತಟ್ಟೆಗಳನ್ನು ಇಟ್ಟು, ಬಸಿದು ತಟ್ಟೆಗಳಲ್ಲಿ ಸಂಗ್ರಹವಾದ ನೀರನ್ನು ಮರುಬಳಕೆ ಮಾಡಬಹುದು.

4. ಮುಚ್ಚಿಗೆ ಬಹಳ ಮುಖ್ಯ

ಬೇಸಿಗೆಯಲ್ಲಿ ಗಿಡಗಳಿಗೆ ಎಷ್ಟೇ ನೀರು ಹಾಕಿದರೂ ಬೇಗ ಆವಿಯಾಗುತ್ತದೆ. ಆದರಿಂದ, ಗಿಡಗಳ ಪಾತಿಗೆ ಸಾವಯವ ತ್ಯಾಜ್ಯದಿಂದ ಮುಚ್ಚಿಗೆ ಮಾಡಿ(Mulching). ಒಣ ಎಲೆ, ಹಸಿ ಎಲೆ, ಗಿಡದಿಂದ ಕೆಳಗುದುರಿದ ಹೂವುಗಳು, ನಿಮ್ಮ ಮನೆಯಲ್ಲಿ ಬಳಸಿದ ತೆಂಗಿನ ಕಾಯಿಯ ಗುಂಜು(ಜುಂಗು), ಸೊಪ್ಪು– ತರಕಾರಿ ಸಿಪ್ಪೆ ಇಂಥವನ್ನು ಕುಂಡಗಳಿಗೆ/ಗಿಡಗಳ ಬುಡಕ್ಕೆ ಹಾಕಿ ಮುಚ್ಚಿಗೆ ಮಾಡಿ. ಇದರಿಂದ ಮಣ್ಣಿನಲ್ಲಿರುವ ತೇವಾಂಶ ಆವಿಯಾಗುವುದು ತಪ್ಪುತ್ತದೆ. ಮುಚ್ಚಿಗೆ ಮಾಡಿರುವ ಸಾವಯವ ವಸ್ತುಗಳು ಕರಗಿ ಗಿಡಕ್ಕೆ ಗೊಬ್ಬರವಾಗುತ್ತದೆ.

5. ಬರ್ಡ್‌ ಬಾತ್‌...

ಕೈತೋಟ/ತಾರಸಿ ತೋಟದ ನಡುವೆ ಅಲ್ಲಲ್ಲಿ ಅಗಲವಾದ ಪಾತ್ರೆಯಲ್ಲಿ ನೀರು ತುಂಬಿಸಿಡಿ. ಬಾಯಾರಿದ ಪಕ್ಷಿಗಳು ಬಂದು ನೀರು ಕುಡಿಯಲು ಇದು ನೆರವಾಗುತ್ತದೆ. ಅಷ್ಟೇ ಅಲ್ಲ  ಸಣ್ಣ ಪಕ್ಷಿಗಳು, ಪಾತ್ರೆಯ ನೀರಿನಲ್ಲಿ ಮುಳುಗೇಳುತ್ತಾ(ಬರ್ಡ್ ಬಾತ್‌) ತಾಪವನ್ನು ತಣಿಸಿಕೊಳ್ಳುತ್ತವೆ. ಮನೆಯ ಅಂಗಳ, ತಾರಸಿಯಲ್ಲಿ ಪಕ್ಷಿಗಳು ಹಾರಾಟವಿದ್ದರೆ, ಕೈತೋಟದ ಅಂದ ಹೆಚ್ಚುತ್ತದೆ.

6. ತೂಗು ಕುಂಡಗಳು

ನಿಮ್ಮ ಕೈತೋಟದಲ್ಲಿ ಮರಗಳಿದ್ದರೆ, ಅದರ ಟೊಂಗೆಗಳಿಗೆ ಹೂವು ಅರಳಿರುವ ಕುಂಡಗಳನ್ನು ತೂಗು ಹಾಕಿ. ಕಾಂಪೌಂಡ್‌ ಮೇಲೆ ಕಂಬಿಗಳಿದ್ದರೆ ಅಲ್ಲಿಗೂ ಗಿಡಗಳನ್ನು ತೂಗು ಹಾಕಿ. ಅಂಗಳದ ಸೊಬಗು ಇಮ್ಮಡಿಸುತ್ತದೆ.

7. ಸೂಕ್ತ ಗಿಡಗಳನ್ನು ಆರಿಸಿಕೊಳ್ಳಿ

ಬೇಸಿಗೆಯಲ್ಲಿ ಹೂವು ಅರಳುವಂತಹ ಗಿಡಗಳನ್ನು ಆಯ್ಕೆ ಮಾಡಿ(ಮಳೆಗಾಲದಲ್ಲೇ ಪ್ಲಾನ್ ಮಾಡಬೇಕು) ಕೈತೋಟದಲ್ಲಿ ನೆಡಿ. ಉರಿವ ಬಿಸಿಲಿನಲ್ಲಿ ಅರಳಿದ ಹೂವುಗಳನ್ನು ನೋಡಿದಾಗ ಮನಸ್ಸಿಗೆ ಹಿತವೆನಿಸುತ್ತದೆ. ಅದರಲ್ಲೂ ಬಣ್ಣ ಬಣ್ಣದ ಹೂವುಗಳನ್ನು ನೋಡಿದರೆ, ಮನಸ್ಸು ಅರಳುತ್ತದೆ. ಕೈತೋಟದಲ್ಲಿ ಸುಂದರ ಹೂವಿನ ಗಿಡಗಳಿದ್ದರೆ, ಮನೆಗೊಂದು ಸೊಬಗು. ದಾಸವಾಳ, ಬೋಗನ್‍ವಿಲ್ಲಾ, ಕರವೀರ, ಗುಲಾಬಿ ಇಂಥವು, ನಮ್ಮ ನೆಲದ ವಾತಾವರಣಕ್ಕೆ ಒಗ್ಗಿ ಬೆಳೆಯುವ ಹೂವಿನ ಗಿಡಗಳು.  

8. ನೆರಳಿನಲ್ಲಿ ವಿರಮಿಸಿ

ಕೈತೋಟದಲ್ಲಿ ನೆರಳಿನ ಜಾಗವಿದ್ದರೆ (ಮೊದಲೇ ವಿನ್ಯಾಸ ಮಾಡಿದರೆ ಒಳ್ಳೆಯದು), ಅಲ್ಲಿ ಎರಡು ಕುರ್ಚಿ, ಒಂದು ಸೋಫಾ, ಮುಂದೊಂದು ಟೀಪಾಯಿ ಜೋಡಿಸಿ. ಇಡೀ ಕುಟುಂಬದವರು ಮರದ ನೆರಳಲ್ಲಿ ಕುಳಿತು ಸಂಜೆಯ ಕಾಫಿ ಹೀರುತ್ತಾ, ಕೈತೋಟದ ಸೌಂದರ್ಯವನ್ನು ಆಸ್ವಾದಿಸಬಹುದು. 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು