ಶನಿವಾರ, ಅಕ್ಟೋಬರ್ 31, 2020
24 °C

PV Web Exclusive: ಕುರುವರಿ ಸೀತಾರಾಮರ ಸಹಜ ಬದುಕಿನ ಕಾಡು

ಪ್ರಕಾಶ ಕುಗ್ವೆ Updated:

ಅಕ್ಷರ ಗಾತ್ರ : | |

Prajavani

ಶಿವಮೊಗ್ಗ ಜಿಲ್ಲೆ ಸಾಗರದ ಕೃಷಿಕ ಕುರುವರಿ ಸೀತಾರಾಮ ಮನೆ ಸುತ್ತಮುತ್ತ ಇರುವ 15 ಎಕರೆ ಕಾಡಿನಲ್ಲಿ ಜೀವ ವೈವಿಧ್ಯತೆಯ ಲೋಕವೇ ತೆರೆದುಕೊಳ್ಳುತ್ತದೆ. ಕೃಷಿ ಭೂಮಿಯಲ್ಲಿ ಒಂದು ಬೀಜ ಬಿತ್ತಿಲ್ಲ; ಸಸಿನೂ ನೆಟ್ಟಿಲ್ಲ. ಅದರೂ ದಟ್ಟ ಕಾಡು ಸೃಷ್ಟಿಯಾಗಿದ್ದು ಹೇಗೆ? –ಅವರ ಮಾತುಗಳಲ್ಲೇ ಕೇಳೋಣ....

ಇವರು ಕುರುವರಿ ಸೀತಾರಾಮ, ಕೃಷಿಕರು. ಊರು ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ಕುರುವರಿ. ಸಾಗರ ಪೇಟೆಯಿಂದ ಇಕ್ಕೇರಿ ರಸ್ತೆ ಕಡೆ 9 ಕಿ.ಮೀ. ಸಾಗಿದರೆ ಆವಿನಹಳ್ಳಿ ಸಿಗುತ್ತದೆ. ಅಲ್ಲೇ ಅಡ್ಡದಾರಿಯಲ್ಲಿ 1 ಕಿ.ಮೀ. ಮುಂದಕ್ಕೆ ಹೋದರೆ ಸೀತಾರಾಮ ಅವರ ಕಾಡಿನ ‘ಸಾಮ್ರಾಜ್ಯ’ ಎದುರಾಗುತ್ತದೆ.

ಕೊರೊನಾದಿಂದಾಗಿ ಈಗ ಬಹಳಷ್ಟು ಪೇಟೆ ಮಂದಿ ಹಳ್ಳಿ ಸೇರಿಕೊಂಡಿದ್ದಾರೆ. ಸೀತಾರಾಮ ಅವರು 25 ವರ್ಷಗಳ ಹಿಂದೆಯೇ ಹಳ್ಳಿಯನ್ನೇ ಗಟ್ಟಿ ನೆಲೆ ಮಾಡಿಕೊಂಡವರು. ಕುವೆಂಪು ವಿಶ್ವವಿದ್ಯಾಲಯದಲ್ಲಿ ಇಂಗ್ಲಿಷ್‌ ಸ್ನಾತಕೋತ್ತರ ಪದವಿ ಮುಗಿಯುತ್ತಿದ್ದಂತೆಯೇ ತಮ್ಮ ಹಳ್ಳಿ ಸೇರಿಕೊಂಡರು. ಓದುತ್ತಿರುವಾಗಲೇ ಫುಕುವೋಕಾನ ಸಿದ್ಧಾಂತಗಳಿಗೆ ಆಕರ್ಷಣೆಗೊಂಡರು. ಇದು ಅವರಿಗೆ ಬರೀ ಕ್ರಾಂತಿಕಾರಿ ಆಲೋಚನೆಯಾಗಿರಲಿಲ್ಲ; ಹೃದಯ ಮತ್ತು ಬುದ್ಧಿ ಬೆರೆತು ಕೈಗೊಂಡ ನಿರ್ಧಾರವಾಗಿತ್ತು. ಫುಕುವೋಕಾನಿಗಿಂತ ಭಿನ್ನ ಪ್ರಯೋಗವನ್ನು ಅವರು ಕೇವಲ ಕೃಷಿಗೆ ಸೀಮಿತಗೊಳಿಸಿಕೊಳ್ಳಲಿಲ್ಲ; ಬದುಕಿಗೂ ಅಳವಡಿಸಿಕೊಂಡರು. ಹಳ್ಳಿಗೆ ಹಿಂತಿರುಗಲು ಫುಕುವೋಕಾ ಕಾರಣವಾದರೆ, ಮುಂದೆ ವಿಭಿನ್ನ ಜೀವನ ಕ್ರಮ ಅನುಸರಿಸಲು ಸಾಹಿತಿ ಪೂರ್ಣಚಂದ್ರ ತೇಜಸ್ವಿ ಮಾರ್ಗವಾದರು.

ನಿಸರ್ಗದ ಬಗ್ಗೆ ಅವರಿಗೆ ಕುತೂಹಲ ಹುಟ್ಟಿಕೊಳ್ಳಲು ಕಾರಣವಾದ ಘಟನೆಯೊಂದನ್ನು ಅವರು ನೆನಪಿಸಿಕೊಳ್ಳುವುದು ಹೀಗೆ.... ‘ಒಮ್ಮೆ ನಾನು ದನ ಕಾಯುತ್ತಿದ್ದಾಗ, ಚಿರತೆಯೊಂದು ದನ ತಿಂದಿತು ಎಂಬ ಕಾರಣಕ್ಕೆ ಊರಿನ ಜನ ಅದನ್ನು ಹೊಡೆದು ಸಾಯಿಸಿದರು. ಇದು ಮನಸ್ಸಿಗೆ ಮೇಲೆ ಗಾಢ ಪರಿಣಾಮ ಬೀರಿತು. ಚಿರತೆಗೆ, ದನ ಸಹಜವಾದ ಆಹಾರ. ಅದು ನಿಸರ್ಗದ ನಿಯಮ. ಅದು ಕೆಟ್ಟದ್ದಲ್ಲ; ಚಿರತೆಯನ್ನು ನಾವು ಕ್ರೂರಿ ಎಂಬ ಹಣೆಪಟ್ಟಿ ಕಟ್ಟಿ ಸಾಯಿಸುವುದು ನಿಸರ್ಗ ವಿರೋಧಿ ಅನ್ನಿಸಿತು. ಅಂದಿನಿಂದ ನಿಸರ್ಗ ಧರ್ಮವನ್ನು ಅರಿಯಲು ಪ್ರಯತ್ನಿಸಿದೆ’ ಎನ್ನುತ್ತಾರೆ ಸೀತಾರಾಮ.

ಸುಮಾರು 20 ವರ್ಷಗಳ ಹಿಂದೆ ತಮ್ಮ ಮನೆಯ ಸುತ್ತಮುತ್ತ ಇದ್ದ ಕುರುಚಲು ಈಗ ದಟ್ಟ ಕಾಡಾಗಿ ಬೆಳೆದ ಪವಾಡವನ್ನು ಸೀತಾರಾಮ ಹೇಳುತ್ತಾ ಸಾಗಿದರು.

‘ಮನೆ ಸುತ್ತಮುತ್ತ ಸುಮಾರು 15 ಎಕರೆ ಕಾಡಿದೆ. ಇದು ನಾನು ಬೆಳೆಸಿದೆ ಎಂದು ಹೇಳುವುದಿಲ್ಲ. ಅದು ಬೆಳೆದಿದೆ. ಯಾವುದೇ ಪ್ರದೇಶದಲ್ಲಿ ಮನುಷ್ಯನ ಹಸ್ತಕ್ಷೇಪ ಇಲ್ಲದಿದ್ದರೆ ಕಾಡು ಸಹಜವಾಗಿಯೇ ಬೆಳೆಯುತ್ತದೆ. ಈ ಕಾಡಲ್ಲಿ ಸಾವಿರಾರು ಜಾತಿಯ ಅಪರೂಪದ ಮರ, ಗಿಡಗಳಿವೆ. ಯಾವುದನ್ನೂ ನಾನು ನೆಡಲಿಲ್ಲ, ಬೆಳೆಸಲಿಲ್ಲ. ಕಾಡಿನ ಅಂಚಿನಲ್ಲಿ ಮಾವು, ಪೇರಲ, ಸಫೋಟ, ಹಲಸು, ಉಪ್ಪಗೆ ಹೀಗೆ ಕೆಲವು ಹಣ್ಣಿನ ಗಿಡಗಳನ್ನು ಹಾಕಿದ್ದೆ. ಈಗ ಇಲ್ಲಿ ನೆಲೆ ಕಂಡ ಪ್ರಾಣಿ–ಪಕ್ಷಿಗಳಿಗೆ ಲೆಕ್ಕ ಇಲ್ಲ’ ಎನ್ನುತ್ತಾರೆ.

ಕೃಷಿ ಜಮೀನು ಈಗ ಕಾಡು!

‘10 ವರ್ಷಗಳ ಹಿಂದೆ ಮನೆಯ ಹತ್ತಿರವೇ ಒಂದು ಎಕರೆ ಅಡಿಕೆ ತೋಟ ಮಾಡಿದೆ. ಬೇಸಿಗೆಯಲ್ಲಿ ಬೋರ್‌ವೆಲ್‌ ತೆಗೆದು ಅದಕ್ಕೆ ನೀರು ಕೊಡುವುದು ಕೃತಕ ಅನಿಸಿತ್ತು. ಕೃಷಿ ಮಾಡದೆ ಹಾಗೇ ಬಿಟ್ಟೆ. ಈಗ ಅದು ದಟ್ಟ ಕಾಡಾಗಿ ಬೆಳೆದಿದೆ. ನನಗೇ ಆಶ್ಚರ್ಯ; ಇಲ್ಲಿ ಒಂದು ಸಸಿ ಹಾಕಿಲ್ಲ; ಬೀಜನೂ ನೆಟ್ಟಿಲ್ಲ. ಅಲ್ಲಿ ವೈವಿಧ್ಯಮಯ ಜೀವ ಪರಿಸರ ಸೃಷ್ಟಿಯಾಗಿದೆ. ನಿಸರ್ಗಕ್ಕೆ ಅಂತಹ ಶಕ್ತಿ ಇದೆ’ ಎಂದರು ಸೀತಾರಾಮ.

‘ಮಕ್ಕಳಿಬ್ಬರೂ ಕಾಡಿನಲ್ಲೇ ಓದುವುದು. ಮನೆಯಲ್ಲಿ ಕುಳಿತು ಓದುವುದಕ್ಕಿಂತ ಕಾಡಿನಲ್ಲಿ ಓದುವುದು ಹೆಚ್ಚು ಖುಷಿ ಹಾಗೂ ಬಹುಬೇಗ ಗ್ರಹಿಸಲು ಸಾಧ್ಯ ಎಂಬ ಅಭಿಪ್ರಾಯ ಅವರಿಬ್ಬರದ್ದು. ನಾನೂ ಕೆಲವೊಮ್ಮೆ ಅಲ್ಲೇ ಮಲಗಿ ಬಂದಿದ್ದೂ ಇದೆ. ಕಾಡಿನ ಒಳಗೆ ಹೋಗುತ್ತಿದ್ದಂತೆ ಮನಸ್ಸು ನಿರಾಳ ಆಗುತ್ತೆ’

‘ನಾವು ಕಾಡನ್ನು ಸಹಜವಾಗಿಟ್ಟಿದ್ದರೆ ಇವತ್ತು ಕೊರೊನಾದಂತಹ ಕಾಯಿಲೆಗಳು ಬರುತ್ತಿರಲಿಲ್ಲ. ಮಲೆನಾಡಿನಲ್ಲಿ ಜಲಸಂರಕ್ಷಣೆ ಹೆಸರಿನಲ್ಲಿ ಇಂಗುಗುಂಡಿ ನಿರ್ಮಿಸುತ್ತಿದ್ದಾರೆ. ಇದು ಅವೈಜ್ಞಾನಿಕ. ಘಟ್ಟದ ಮೇಲೆ ಇಂಗುಗುಂಡಿ ಸರಿ ಅಲ್ಲ. ಅದು ಬಯಲು ನಾಡಿಗೇ ಸರಿ. ನಮ್ಮ ಆಡಳಿತಗಾರರಿಗೂ ಕಾಡಿನ ಶಿಕ್ಷಣ ಕೊಡುವುದು ಇಂದು ಅಗತ್ಯವಿದೆ. ನಮಗೆ ನೀರು ಹೇಗೆ ಸಿಗುತ್ತೆ? ಗಾಳಿ ಎಲ್ಲಿಂದ ಬರುತ್ತೆ? ಇತ್ಯಾದಿ ಕನಿಷ್ಠ ತಿಳಿವಳಿಕೆಗಳನ್ನಾದರೂ ಅವರಲ್ಲಿ ಮೂಡಿಸಬೇಕಿದೆ’ ಎಂಬ ಅಭಿಪ್ರಾಯ ಸೀತಾರಾಮ ಅವರದ್ದು.

‘ಕಾಡು ಎಂದರೆ ಕೇವಲ ಮರ, ಗಿಡ ಅಲ್ಲ. ಅದು ಜೀವನ ನೆಲೆ. ಕಾಡು ಎಲ್ಲರ ದೇವಾಲಯ, ಆರೋಗ್ಯ ಕೇಂದ್ರವೂ ಹೌದು; ಪಾಠಶಾಲೆಯೂ ಹೌದು. ಮನುಷ್ಯ ಎಂದು ಒಂದು ಜಾತಿ. ನಿಸರ್ಗವೇ ನಮ್ಮೆಲ್ಲರ ಧರ್ಮವಾಗಬೇಕು. ಭೂಮಿಯೇ ನಮ್ಮ ರಾಷ್ಟ್ರೀಯತೆಯಾಗಬೇಕು. ಹೀಗಾದರೆ ಬದುಕು ಹಸನು’ ಎಂಬುದು ಅವರ ಸ್ಪಷ್ಟ ಮಾತು.

ಸೀತಾರಾಮ ಲೇಖಕರೂ ಹೌದು. ಹಲವು ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ಲೇಖನಗಳನ್ನೂ ಬರೆದಿದ್ದಾರೆ. ಅವರ ‘ಸಹಜ ಬದುಕು’ ಮಲೆನಾಡಿನ ಭಾಗದಲ್ಲಿ ಹೊಸ ಬಗೆಯ ಚಿಂತನೆಗಳನ್ನು ಹುಟ್ಟುಹಾಕಿತು. ಈಗ ‘ನಿಸರ್ಗ ಅರ್ಥಶಾಸ್ತ್ರ’ ಹಾಗೂ ‘ನಿಸರ್ಗ ಅಧ್ಯಾತ್ಮ’ ಎಂಬ ಪುಸ್ತಕಗಳ ರಚನೆಯಲ್ಲಿ ಅವರು ತೊಡಗಿದ್ದಾರೆ. ಕಾಡು ಕೇಂದ್ರಿತ ಅಧ್ಯಯನ ಕೇಂದ್ರ ಸ್ಥಾಪಿಸಬೇಕು; ಹಳೆಯ ವಸ್ತುಗಳ ಸಂಗ್ರಹಾಲಯಕ್ಕೊಂದು ಸಾಂಸ್ಥಿಕ ರೂಪ ನೀಡಬೇಕೆಂಬ ಹಂಬಲವೂ ಅವರದ್ದು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು