ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವ ಜೀವವೈವಿಧ್ಯ ದಿನ: ಬಾನಾಡಿಗಳ ಸಂಗದಲ್ಲಿ...

Last Updated 26 ಮೇ 2022, 7:34 IST
ಅಕ್ಷರ ಗಾತ್ರ

1998ರಲ್ಲಿ ನಾನು ಎರಡನೇ ವರ್ಷದ ಬಿಎಸ್ಸಿ ಓದುತ್ತಿದ್ದಾಗ ನನ್ನ ಸ್ನೇಹಿತೆಯೊಂದಿಗೆ ಮೊದಲ ಬಾರಿಗೆ ವಿಶ್ವ ವನ್ಯಜೀವಿ ನಿಧಿ (ಡಬ್ಲ್ಯುಡಬ್ಲ್ಯುಎಫ್‌) ತಂಡದೊಂದಿಗೆ ಪಕ್ಷಿ ವೀಕ್ಷಣೆಗೆ ಕನಕಪುರದ ಹತ್ತಿರ ಇರುವ ಕಾಡಿನ ಅಂಚಿನಲ್ಲಿರುವ ಕೆರೆಗೆ ಹೋಗಿದ್ದೆ. ಅಂದು ಕಾರ್ತಿಕೇಯನ್ ಶ್ರೀನಿವಾಸನ್ ಅವರು ನಮಗೆ ಪಕ್ಷಿಗಳ ಬಗೆಗೆ -ಪಕ್ಷಿಗಳನ್ನು ಗುರುತಿಸುವುದು, ಅವುಗಳ ಆಹಾರ ಪದ್ಧತಿ, ಪರಿಸರ ವ್ಯವಸ್ಥೆಯಲ್ಲಿ ಅವುಗಳ ಪಾತ್ರ, ಅವುಗಳ ಆವಾಸಸ್ಥಾನ, ಬೇರೆ ಪ್ರದೇಶಗಳಿಗೆ ವಲಸೆ ಹೋಗುವ ಹಾಗೂ ಬೇರೆ ಪ್ರದೇಶಗಳಿಂದ ವಲಸೆ ಬರುವ ಬಾನಾಡಿಗಳ ಕುರಿತು- ವಿವರಣೆ ನೀಡಿದರು.

ಚಿಟ್ಟೆಗಳಲ್ಲಿ ಮುನ್ನೂರಕ್ಕೂ ಹೆಚ್ಚು ಪ್ರಭೇದಗಳಿವೆ ಎಂದು ಅವರು ತಿಳಿಸಿದಾಗ ನನಗೆ ಆಶ್ಚರ್ಯವಾಗಿತ್ತು. ಹೆಚ್ಚು ಚಿಟ್ಟೆಗಳಿದ್ದರೆ ಅಂತಹ ಪ್ರದೇಶದ ಮಣ್ಣಿಗೆ ಕಡಿಮೆ ರಾಸಾಯನಿಕ ಹಾನಿ ಮತ್ತು ಅಂತಹ ಪ್ರದೇಶದಲ್ಲಿ ಕಡಿಮೆ ವಾಯು ಮಾಲಿನ್ಯದ ಪ್ರಮಾಣವನ್ನು ಸೂಚಿಸುತ್ತದೆ ಎಂದು ಅವರು ಹೇಳಿದರು. ನಾವೆಲ್ಲಾ ಚಿಟ್ಟೆ, ಪಕ್ಷಿಗಳು ಎಷ್ಟೆಲ್ಲಾ ರೀತಿಯಲ್ಲಿ ಪರಿಸರದ ಪರಿಸ್ಥಿತಿಯನ್ನು ತಿಳಿದುಕೊಳ್ಳುವುದರಲ್ಲಿ ನಮಗೆ ಸಹಕಾರಿಯಾಗಿರುತ್ತವೆ ಎಂದು ಅರಿತುಕೊಂಡೆವು.

ಪಕ್ಷಿಗಳು ನಮ್ಮ ಜೀವಜಾಲದ ಪ್ರಬಲ ಕೊಂಡಿ. ಸುಂದರ ಮತ್ತು ಆಕರ್ಷಕವಾಗಿರುವ ಇವುಗಳು ಅನೇಕ ನೈಸರ್ಗಿಕ ಪ್ರಕ್ರಿಯೆಗಳಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಹೂವಿಂದ ಹೂವಿಗೆ ಹಾರುತ್ತಾ ಮಕರಂದ ಹೀರುತ್ತ ಪರಾಗ ಸ್ಪರ್ಶಕ್ಕೆ ಸಹಾಯ ಮಾಡುತ್ತವೆ. ಗಿಡದಿಂದ ಗಿಡಕ್ಕೆ ಹಾರುತ್ತಾ ಹಣ್ಣುಗಳನ್ನು ತಿನ್ನುತ್ತಾ ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಬೀಜಗಳನ್ನು ಹಾಕಿ ಬೀಜ ಪ್ರಸರಣ ಮಾಡಿ ವೃಕ್ಷ ವೈವಿಧ್ಯಕ್ಕೆ ಕಾರಣವಾಗುತ್ತವೆ.

ಅನೇಕ ಹಕ್ಕಿಗಳು ಹುಳ ಹುಪ್ಪಟೆ ತಿಂದು ರೈತನಿಗೆ ಕೀಟ ನಿಯಂತ್ರಣದಲ್ಲಿಯೂ ಸಹಾಯ ಮಾಡುತ್ತಿವೆ. ಕಾಡಿನ ಬೆಳವಣಿಗೆಯ ವೈವಿಧ್ಯದ ಸೃಷ್ಟಿಯಲ್ಲಿ ಸೂಕ್ಷ್ಮ ಕೆಲಸವನ್ನು ಅಚ್ಚುಕಟ್ಟಾಗಿ ಮಾಡುತ್ತವೆ. ದೂರದೂರದ ಯಾವುದೋ ದೇಶದ ಯಾವುದೋ ಭೂ ಪ್ರದೇಶದಿಂದ ನಮ್ಮ ನಾಡನ್ನು ಪ್ರತಿವರ್ಷ ಹುಡುಕಿ ಬಂದು ಸಂತಾನೋತ್ಪತ್ತಿ ನಡೆಸಿ ಅಥವಾ ಚಳಿಗಾಲ ಕಳೆದ ನಂತರ ಊರಿಗೆ ವಾಪಸಾಗುವ ಪುಟ್ಟಹಕ್ಕಿಯ ಅಗಾಧ ಶಕ್ತಿಯ ಮುಂದೆ ಜೆಟ್ ವಿಮಾನಗಳನ್ನು ನಿವಾಳಿಸಿ ಎಸೆಯಬೇಕು.

ನಿಮಗೆ ಗೊತ್ತೆ? ಪಕ್ಷಿಗಳಲ್ಲಿ ಪ್ರಮುಖವಾಗಿ ಆರು ವಿಧಗಳಿವೆ.
1. ಅರ್ಬೊರಿಯಲ್ ಪಕ್ಷಿಗಳು (Arboreal birds):
ಅರ್ಬೊರಿಯಲ್ ಎಂಬ ಪದವು ಹೆಚ್ಚಾಗಿ ಮರಗಳ ಮೇಲೆ ವಾಸಿಸುವ ಎಂಬ ಅರ್ಥ ಕೊಡುತ್ತದೆ. ಈ ಪಕ್ಷಿಗಳ ಗುಂಪು ಪೊದೆಗಳಲ್ಲಿ ಅಥವಾ ಪೊದೆಗಳ ಸುತ್ತಲೂ ತಮ್ಮ ಜೀವನವನ್ನು ನಡೆಸುತ್ತದೆ.

2. ಭೂಮಿಯ ಹಕ್ಕಿಗಳು (Terrestrial birds): ನೆಲದ ಮೇಲೆ ಹೆಚ್ಚಿನ ಸಮಯವನ್ನು ಕಳೆಯುವ ಪಕ್ಷಿಗಳು ಇವು. ಹಾರುವ ಸಾಮರ್ಥ್ಯವಿದ್ದರೂ ಅವು ನಡೆಯುತ್ತಲೇ ಇರುತ್ತವೆ, ಓಡುತ್ತವೆ, ನೆಲದ ಮೇಲೆ ಕುಳಿತುಕೊಳ್ಳುತ್ತವೆ.

3. ಬೇಟೆಯ ಪಕ್ಷಿಗಳು (Birds of prey): ಕೆಲವು ಪಕ್ಷಿಗಳು ಬೇಟೆಯನ್ನು ಮಾತ್ರ ಹಿಡಿಯುತ್ತವೆ. ಈ ಪಕ್ಷಿಗಳು ಚೂಪಾದ ಕೊಕ್ಕುಗಳೊಂದಿಗೆ ಮುಖ್ಯವಾಗಿ ಹಗಲಿನಲ್ಲಿ ಸಕ್ರಿಯವಾಗಿರುತ್ತವೆ (diurnal).

4. ವೈಮಾನಿಕ ಪಕ್ಷಿಗಳು (Aerial birds): ಹೆಚ್ಚಾಗಿ ಗಾಳಿಯಲ್ಲಿ ಹಾರುತ್ತ ಇರುತ್ತವೆ. ದುರ್ಬಲ ಅಥವಾ ವೆಸ್ಟಿಜಿಯಲ್ ಪರ್ಚಿಂಗ್ ಪಾದಗಳನ್ನು ಹೊಂದಿರುತ್ತವೆ. ಆದಾಗ್ಯೂ, ರೆಕ್ಕೆಗಳು ಬಲವಾಗಿರುತ್ತವೆ ಮತ್ತು ಹಾರಾಟಕ್ಕೆ ಬೇಕಾದ ಶಕ್ತಿಯನ್ನು ಹೊಂದಿರುತ್ತವೆ.

5. ಈಜು ಮತ್ತು ಡೈವಿಂಗ್ ಪಕ್ಷಿಗಳು (Swimming and diving birds): ಈ ರೀತಿಯ ಪಕ್ಷಿಗಳು ನೀರಿನಲ್ಲಿ ವಾಸಿಸುತ್ತವೆ. ಕೆಲವು ಪಕ್ಷಿಗಳು ಮೊಟ್ಟೆಯಿಡಲು ಭೂಮಿಗೆ ಬರುತ್ತವೆ. ಆದರೆ, ಹೆಚ್ಚಿನ ಬೆಳವಣಿಗೆಗಾಗಿ ನೀರಿಗೆ ಹಿಂತಿರುಗುತ್ತವೆ.

6. ತೀರದ ಹಕ್ಕಿಗಳು ಅಥವಾ ಅಲೆದಾಡುವ ಪಕ್ಷಿಗಳು (Shore birds and wading birds): ಈ ಜಲಚರ ಪಕ್ಷಿಗಳು ವಿರಳವಾಗಿ ಈಜುತ್ತವೆ.

ನಾವು ಬೆಂಗಳೂರಿನ ರಾಚೇನಹಳ್ಳಿ ಕೆರೆಯ ಪುನಶ್ಚೇತನದ ಕೆಲಸವನ್ನು 2014ರಲ್ಲಿ ಕೈಗೊಂಡಾಗ ಕೆಲವು ಪಕ್ಷಿಗಳನ್ನು ಬಹಳ ಸೂಕ್ಷ್ಮವಾಗಿ ಅಧ್ಯಯನ ಮಾಡುವ ಅವಕಾಶ ನನಗೆ ಸಿಕ್ಕಿತು. ಪದ್ಮಾ ಮತ್ತು ಅಶೋಕ್ ದಂಪತಿ ನಮಗೆ ಕೆರೆಗಳಲ್ಲಿ ಕಾಣುವ ಪಕ್ಷಿಗಳ ಬಗ್ಗೆ ಪರಿಚಯ ಮಾಡಿಸಿದ್ದರು. ನಮ್ಮ ಜಲಮಿತ್ರ ಸ್ವಯಂಸೇವಕರ ಗುಂಪಿನ ಶ್ರೀನಾಥ್ ಬಿದರೆ ಅವರು ಫೋಟೊಗ್ರಫಿ ಮತ್ತು ಪಕ್ಷಿ ವೀಕ್ಷಣೆಯಲ್ಲಿ ಪರಿಣತರು.

ಪ್ರತೀ ಭಾನುವಾರ ಬೆಳಿಗ್ಗೆ ನಾವು ರಾಚೇನಹಳ್ಳಿ ಕೆರೆಗೆ ಪಕ್ಷಿ ವೀಕ್ಷಣೆಗಾಗಿ ಹೋಗುತ್ತಿದ್ದೆವು. ಕೆರೆಗೆ ವಾಯು ವಿಹಾರಕ್ಕಾಗಿ ಬರುತ್ತಿದ್ದ ಜನರಿಗೆ ಪ್ರತ್ಯೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ನೀರಿನ ಹಕ್ಕಿಗಳು, ಕೆರೆಯ ಮೀನುಗಳು, ನೀರಿನ ಗುಣಮಟ್ಟ, ಇತರ ಪಕ್ಷಿಗಳು, ಗಿಡ ಮರಗಳು ಮತ್ತು ಇವುಗಳಮಧ್ಯೆ ಇರುವ ಅವಲಂಬನೆ ಕುರಿತು ತಿಳಿಸಲು ಪ್ರಾರಂಭಿಸಿದೆವು. ಇದರಿಂದ ಕೆರೆಯಲ್ಲಿ ಪಕ್ಷಿಗಳಿಗೆ ಹಾನಿಯಾಗುವಂತಹ ಚಟುವಟಿಕೆ ನಿಯಂತ್ರಿಸಿ ಕೆರೆಯಜಾಗ ಮತ್ತು ಪರಿಸರವನ್ನು ಕಾಪಾಡುವಲ್ಲಿ ಹೆಚ್ಚು ಜನರು ನಮ್ಮೊಂದಿಗೆ ಕೈಜೋಡಿಸಿದರು.

ನಮ್ಮ ಕೆರೆಯಲ್ಲಿ ಸುಮಾರು 60ಕ್ಕೂ ಹೆಚ್ಚು ಪ್ರಕಾರದ ಪಕ್ಷಿಗಳನ್ನು ಕಾಣಬಹುದು. ಕೆರೆಯಲ್ಲಿ ಗ್ಲಾಸಿ ಐಬಿಸ್, ಲಿಟಲ್ ಗ್ರೀಬ್, ಲೋಟೆನ್ಸ್ ಸನ್‌ಬರ್ಡ್, ಹೆಜ್ಜಾರ್ಲೆ ಮೊದಲಾದ ಪಕ್ಷಿಗಳನ್ನು ಕಾಣಬಹುದು.

ಪ್ರಸಕ್ತ ವಿಶ್ವ ಜೀವವ್ಯೆವಿಧ್ಯ ದಿನದ ಘೋಷಣೆಯು ‘ಎಲ್ಲಾ ಜೀವಿಗಳಿಗಾಗಿ ಸಮಾನ ಭವಿಷ್ಯವನ್ನು ನಿರ್ಮಿಸುವುದು’ ಎಂಬುದಾಗಿದೆ. ಜೀವವೈವಿಧ್ಯಮತ್ತು ಅಭಿವೃದ್ಧಿ ವಿಷಯಗಳಲ್ಲಿ ಸಮತೋಲನವನ್ನು ಕಾಪಾಡಿಕೊಂಡು ಭೂಮಿ ಮೇಲಿನ ಎಲ್ಲ ಜೀವಿಗಳಿಗೆ ಹಾನಿಯಾಗದಂತೆ ಸಹಬಾಳ್ವೆಯನ್ನು ಉತ್ತೇಜಿಸುವ ಅಗತ್ಯವನ್ನು ಅದು ಪ್ರತಿಪಾದಿಸುತ್ತದೆ. ಹವಾಮಾನ ಹಾಗೂ ಪರಿಸರದಲ್ಲಿ ಆಗುವ ಬದಲಾವಣೆಗಳಿಗೆ ಜೀವವೈವಿಧ್ಯವೇ ಅಡಿಪಾಯವಾಗಿದೆ. ಅದನ್ನು ಕಾಪಾಡಿಕೊಳ್ಳುವುದು ಅತಿ ಮುಖ್ಯವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT