ಭಾನುವಾರ, ಜೂನ್ 26, 2022
28 °C

World Environment Day | ಮಿತಿಯಿಲ್ಲದ ಕಾಡಿನ ಪ್ರೀತಿ

ಸುಕೃತ ಎಸ್‌. Updated:

ಅಕ್ಷರ ಗಾತ್ರ : | |

Prajavani

‘ಇಪ್ಪತ್ತು ವರ್ಷಗಳ ಹಿಂದೆ ನಾನು ಈ ಜಾಗ ಕೊಂಡಾಗ ಅಲ್ಲಲ್ಲಿ ಕೆಲವು ಮರಗಳನ್ನು ಬಿಟ್ಟರೆ, ಇದೊಂದು ಬೋಳು ಗುಡ್ಡವಾಗಿತ್ತು. ಮಲೆನಾಡಿನಲ್ಲಿ ಈ ಸ್ಥಿತಿಯೇ ಎಂದು ಬೇಸರವಾಗಿತ್ತು. ಆದರೆ ಈಗ ಇದೊಂದು ತರಹೇವಾರಿ ಮರ– ಗಿಡಗಳಿಂದ, ಪ್ರಾಣಿ– ಪಕ್ಷಿಗಳಿಂದ ತುಂಬಿದ ಕಾಡು. ಮಾನವನ ಹಸ್ತಕ್ಷೇಪ ಇಲ್ಲದೆ ಪ್ರಕೃತಿ ತಾನಾಗಿಯೇ ಮೈದುಂಬಿಕೊಂಡಿದೆ’

ಶಿವಮೊಗ್ಗದ ಸಾಗರ ತಾಲ್ಲೂಕಿನ ತಾಳಗುಪ್ಪ ಹತ್ತಿರದ ಹಿರೇಮನೆ ಗ್ರಾಮದ ನವಿಲೆ ಎಂಬ ಪುಟ್ಟ ಹಳ್ಳಿಯಲ್ಲಿ ಪೂರ್ಣಿಮಾ ತಾವು ಬೆಳೆಸಿದ ಕಾಡಿನ ಬಗ್ಗೆ ಹೇಳುವಾಗ ಅವರ ಮೊಗದಲ್ಲಿ ಸಂತೃಪ್ತಿಯ ನಗುವಿತ್ತು. ಪೂರ್ಣಿಮಾ ಅವರದ್ದು ಪ್ರಕೃತಿ ಪ್ರೀತಿಯ ಬದುಕು. ತಮ್ಮ ಒಟ್ಟು 12 ಎಕರೆ ಜಾಗದಲ್ಲಿ 4 ಎಕರೆಯಲ್ಲಿ ಅಡಿಕೆ ತೋಟ, ಗದ್ದೆ, ತರಕಾರಿ ಕೃಷಿ ಮಾಡಿಕೊಂಡು ಉಳಿದ ಎಂಟು ಎಕರೆಯಲ್ಲಿ ಕಾಡು ಬೆಳೆಯಲು ಬಿಟ್ಟಿದ್ದಾರೆ. ನಗರ ಪ್ರದೇಶದಿಂದ ದೂರ, ತೋಟ– ಕಾಡಿನ ಮಧ್ಯೆ ಪುಟ್ಟದೊಂದು ಮನೆ. ಸಹ ಜೀವಿಗಳಾಗಿ ನಾಲ್ಕು ಹಸುಗಳು, ಒಂದು ಪುಟ್ಟ ನಾಯಿಮರಿ. ಇದು ಅವರ ಪುಟ್ಟ ಸಂಸಾರ.

ಮೂಲತಃ ಕೊಪ್ಪದವರಾದ ಪೂರ್ಣಿಮಾ ನಿಸರ್ಗದ ಮೇಲಿನ ಪ್ರೀತಿಯಿಂದಾಗಿ 20–22 ವರ್ಷಗಳ ಹಿಂದೆ ನವಿಲೆ ಗ್ರಾಮಕ್ಕೆ ಬಂದು ನೆಲೆಸಿದ್ದಾರೆ. ಗೇಟಿನ ಒಳಹೊಕ್ಕರೆ ಎತ್ತರೆತ್ತರಕ್ಕೆ ಬೆಳೆದ ಅಡಿಕೆ, ಏಲಕ್ಕಿ, ಹಲಸು, ಬಾಳೆ ಹೀಗೆ ತರಹೇವಾರಿ ಬೆಳೆಗಳು. ಮನೆಗೆ ಪ್ರವೇಶಿಸಿದರೆ ಮಣ್ಣು ಮೆತ್ತಿದ ಗೋಡೆಗಳ ಜಗುಲಿ ಸ್ವಾಗತಿಸುತ್ತದೆ.

ಅಮೂಲ್ಯ ಮರಗಳ ಸಂಕುಲ
ಅವರ ತೋಟ, ಕಾಡು ನೋಡಲು ಹೊರಟ ನಮಗೆ ಅಲ್ಲಿಯ ಸಸ್ಯ ಸಂಕುಲ, ಜೀವ ವೈವಿಧ್ಯ ನೋಡಿ ಹಿಂದೊಮ್ಮೆ ಇದು ಬೋಳು ಗುಡ್ಡವಾಗಿತ್ತೇ ಎಂದು ಅಚ್ಚರಿಪಡುವಂತಾಯಿತು. ಹಸಿರೆಲೆಗಳಿಂದ ಕೂಡಿದ ತೇಗ, ಮತ್ತಿ, ಹೊನ್ನೆ, ಆಲ, ನೇರಳೆ, ಸಳ್ಳೆಯಲ್ಲದೇ ಹೆಸರೇ ಗೊತ್ತಿಲ್ಲದ ಮರಗಳ ಸಂಕುಲ ದಟ್ಟ ಕಾಡನ್ನೇ ಸೃಷ್ಟಿಸಿದೆ. ಆಕರ್ಷಕ ಹೂವುಗಳಿಂದ, ಹಣ್ಣುಗಳಿಂದ ತೂಗುವ ಮರಗಳು.. ನೋಡಲು ಇಡೀ ದಿನ ಸಾಲದು!

‘ಮೂಲತಃ ಕೃಷಿ ಕುಟುಂಬ ನಮ್ಮದು. ಕಾಡಿನ ಜೊತೆಗೆ ಬೆಸೆದುಕೊಂಡು ಬದುಕು ಕಟ್ಟಿಕೊಳ್ಳಬೇಕು ಎನ್ನುವ ಬಯಕೆ ಯಾವಾಗಲೂ ಇತ್ತು. ಆದರೆ, ನನ್ನ ಆಯ್ಕೆಯ ಈ ಬದುಕು, ನನ್ನ ಬಂಧುಗಳ ಮಾತಿಗೆ ಆಹಾರವಾಗಬಾರದೆಂದು ದೂರದ ಈ ಊರಿಗೆ ಬಂದೆ...’ ಅವರ ಮಾತು ಕೇಳುತ್ತ, ಕಾಡಿನ ಸೌಂದರ್ಯವನ್ನು ಕಣ್ಣಿನಲ್ಲಿ ತುಂಬಿಕೊಳ್ಳುತ್ತ ಮುಂದಡಿ ಇಡುತ್ತಿದ್ದೆವು ಅಷ್ಟೆ, ಹಳದಿ ಬಣ್ಣದ ಆಕರ್ಷಕ ನಾಗರಹಾವೊಂದು ಬಳಿಯಲ್ಲೇ ಹಾದು ಹೋಯಿತು.


-ಪೂರ್ಣಿಮಾ

‘ಜೀವವೈವಿಧ್ಯವೇ ಇಲ್ಲದ ಜಾಗದಲ್ಲಿ ಈಗ ಹೆಸರೇ ಗೊತ್ತಿಲ್ಲದ ಕೀಟ, ಹೂವು, ಹಣ್ಣಿನ ಮರಗಳು ತಾವಾಗಿಯೇ ಬೆಳೆದಿವೆ. ಬೆಳಿಗ್ಗೆ ಎದ್ದು ಒಮ್ಮೆ ಕಾಡು ಸುತ್ತುವ ಅಭ್ಯಾಸ ನನ್ನದು. ಪ್ರತೀ ದಿನವೂ ಹೊಸದೊಂದು ಹೂವು, ಗಿಡ ಕಾಣಸಿಗುತ್ತದೆ. ಅದನ್ನು ನೋಡುವುದೇ ಸೋಜಿಗ. ಪ್ರತಿನಿತ್ಯವೂ ಕಾಲಿಗೆ ಸಿಗುವ ಹಾವುಗಳ ವೈವಿಧ್ಯ, ಅದರ ಬಣ್ಣ, ರಚನೆ ನೋಡಿ, ಬೆರಗಾಗಿದ್ದೇನೆ’ ಎನ್ನುವ ಪೂರ್ಣಿಮಾ ‘ಮಲೆನಾಡಿಗೆ ಅಕೇಶಿಯಾ ಬೇಡ’ ಎನ್ನುವ ಹೋರಾಟದಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ‘ಒಮ್ಮೆ ಈ ಕಾಡು ಹೊಕ್ಕು ಸಿಗುವ ಅನುಭವ ನೋಡಿ, ಅಕೇಶಿಯಾ ಮರಗಳ ಮಧ್ಯೆ ಇದ್ದು ಬಂದು ನೋಡಿ; ಉಸಿರುಕಟ್ಟಿಸುತ್ತದೆ ಅಲ್ಲಿ. ಜೀವವೈವಿಧ್ಯವೂ ಇರುವುದಿಲ್ಲ..’ ಎಂದು ಸಿಟ್ಟಾದರು.

ಕಾಡಿನ ಒಳಗೆ ಸುಮಾರು ದೂರ ಹೋದ ನಮಗೆ ಆಗಷ್ಟೇ ಶುರುವಾದ ಮಳೆ ವಾಪಸ್ಸಾಗುವ ಸಮಯವನ್ನು ನೆನಪಿಸಿತು. ಪೂರ್ಣಿಮಾ ತರಹ ಒಬ್ಬೊಬ್ಬರೂ ಒಂದಿಷ್ಟು ಕಾಡು ಬೆಳೆಸಿದರೆ ಅರಣ್ಯ ರಕ್ಷಣೆ ಒಂದು ಸಮಸ್ಯೆಯೇ ಅಲ್ಲ ಎನಿಸಿದ್ದು ಸುಳ್ಳಲ್ಲ.

ಸಂಸ್ಥೆ ಕಟ್ಟಬೇಕು...
‘ನಾನು ಕೋಲ್ಕತ್ತದ ಶಾಂತಿನಿಕೇತನದಲ್ಲಿ ಪೇಂಟಿಂಗ್‌ ಕಲಿತವಳು. ಈ ಇಡೀ ಜಾಗವನ್ನು ಒಂದು ಸಂಸ್ಥೆಯಾಗಿ ಬೆಳೆಸಬೇಕು ಎಂದುಕೊಂಡಿದ್ದೇನೆ. ಕೃಷಿಯಲ್ಲಿ ಆಸಕ್ತಿ ಇದ್ದವರು ಕೃಷಿ ಮಾಡಬಹುದು; ಕಾಡಿನ ಬಗ್ಗೆ ಪ್ರೀತಿಯಿದ್ದವರು ಅಲ್ಲಿ ಸುತ್ತಬಹುದು. ಪೇಂಟಿಂಗ್‌ ಕಲಿಯಬಹುದು, ನನಗೆ ಹೊಲಿಗೆಯೂ ಬರುತ್ತದೆ; ಅದನ್ನೂ ಸಹ ಹೇಳಿಕೊಡುತ್ತೇನೆ. ಎಲ್ಲರೂ ಸೇರಿ ಅಡುಗೆ ಮಾಡಿಕೊಂಡು ಕೆಲವು ಕಾಲ ಇಲ್ಲಿ ಇದ್ದು ಹೋಗಬಹುದಾದ ಸಂಸ್ಥೆ ಮಾಡಬೇಕು ಎನ್ನುವ ಹಂಬಲ ಇದೆ. ಅದಕ್ಕಾಗಿ ಯೋಜನೆ ಸಿದ್ಧ ಮಾಡುತ್ತಿದ್ದೇನೆ’ ಎಂದು ತಮ್ಮ ಕನಸು ಬಿಚ್ಚಿಡುತ್ತಾರೆ ಪೂರ್ಣಿಮಾ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು