ಮಂಗಳವಾರ, ಜನವರಿ 28, 2020
19 °C

ಮತ್ಸ್ಯ ಮಂಡಲ ಮಧ್ಯದೊಳಗೆ

ದಿವ್ಯ ಬಿ. ಹೊಸಂಗಡಿ Updated:

ಅಕ್ಷರ ಗಾತ್ರ : | |

Prajavani

ಇದೊಂದು ವಿಚಿತ್ರ ಉಪಾಹಾರ ಗೃಹ.

ಇಲ್ಲಿ ಜನ ಮೇಜಿನ ಮೇಲೆ ತಮ್ಮ ತಟ್ಟೆಯಲ್ಲಿನ ಫ್ರೈ ಮಾಡಿರುವ ಮೀನನ್ನು ಕಚ್ಚುತ್ತಾ ಇದ್ದರೆ, ಮೀನುಗಳು ಅವರ ಕಾಲುಗಳನ್ನು ಕಚ್ಚುತ್ತಿರುತ್ತವೆ. ಇಂಥದ್ದೊಂದು ಮೀನು ಮಸಾಜಿನ ಮೊತ್ತಮೊದಲ ಉಪಾಹಾರ ಗೃಹ ‘ಸೊಟೊ ಕೊಕ್ರೊ ಕೆಂಬಾಂಗ್’ ಇಂಡೋನೇಷ್ಯಾದ ಯೋಗ್ಯಕರ್ತಾ ಎಂಬ ಸಾಂಸ್ಕೃತಿಕ ನಗರಿಯಲ್ಲಿ ಈಗ ಶುರುವಾಗಿದೆ.

ಪಾದ ಮುಳುಗುವಷ್ಟು ಮಟ್ಟಕ್ಕೆ ನೀರು ನಿಲ್ಲಿಸಿ ಅದರಲ್ಲೇ ಮೇಜು ಕುರ್ಚಿಗಳನ್ನು ಇರಿಸಿದ್ದಾರೆ. ನೀರು ಸೀಳಿಕೊಂಡು ಹೆಜ್ಜೆ ಹಾಕಿದಲ್ಲೆಲ್ಲ ಮೀನುಗಳು ಕೈಕಾಲು ಬಡಿಯುತ್ತಾ ಕಾಲಿಗೆ ಅಡರಿಕೊಳ್ಳುತ್ತವೆ. ಮೀನುಗಳು ಪಾದ ಚುಂಬಿಸುತ್ತಾ ನಿಮ್ಮನ್ನು ಮಾದಕ ಲೋಕಕ್ಕೆ ಒಯ್ಯುತ್ತವೆ.

ವೇಯ್ಟರ್‌ಗಳು ಮೆನು ಹೇಳಿ ತಿಂಡಿತೀರ್ಥಗಳ ಉಪಚಾರ ಮಾಡುತ್ತಿದ್ದರೆ, ಮೀನುಗಳು ಸುಕ್ಕು ತೊಗಲನ್ನು ನೆಕ್ಕಿ ತೆಗೆಯುತ್ತಾ ಪಾದೋಪಚಾರ ಮಾಡುತ್ತವೆ.

ಮೊದಮೊದಲಿಗೆ ಗ್ರಾಹಕರಿಗೆ ಇದೊಂದು ವಿಚಿತ್ರ ಅನುಭವ. ಮೀನು ಕಂಡ ಕೂಡಲೇ ನೀರಿನ ಹೊರಗಿದ್ದೂ ಬೆವರಿದ್ದಾರೆ; ಬೆಚ್ಚಿದ್ದಾರೆ. ಕಚಗುಳಿ ಅನುಭವಿಸಿದ್ದಾರೆ. ಅನಂತರ ಬರಬರುತ್ತಾ ಅದೊಂದು ಸಹಜಾನುಭವ. ಮೀನುಗಳು ಕಾಲು ಸವರಿಕೊಂಡು ಹೋಗುತ್ತಿದ್ದರೆ ಹೊಸ ಉತ್ಸಾಹ-ಉನ್ಮೇಷ.

ಆಗ್ನೇಯ ಏಷ್ಯಾದ ಅನೇಕ ಕಡೆ ಇಂತಹ ಫಿಷ್ ಪಾರ್ಲರ್‌ಗಳು ಇವೆ. ಅಲ್ಲಿ ಜನ ತಮ್ಮ ‘ಕಾಲ’ ದೋಷಗಳಿಗೆ ಪರಿಹಾರ ಕಂಡುಕೊಳ್ಳುತ್ತಿದ್ದಾರೆ. ಮೀನು ಮಸಾಜು ಚರ್ಮರೋಗಗಳಿಗೆ ಅತ್ಯುತ್ತಮ ಚಿಕಿತ್ಸೆ ಎನ್ನುವುದು ಅಲ್ಲಿನ ನಂಬಿಕೆ. ಹೋಟೆಲ್ ಮಾಲೀಕ ಇಮಾಮು ನೂರ್ ಅವರು ಮಸಾಜ್ ಪಾರ್ಲರ್‌ನ ಜತೆಗೆ ಉಪಹಾರ ಗೃಹವನ್ನು ಬೆಸೆದಿದ್ದಾರೆ. ಮೀನ ಖಂಡದೊಳಗೆ ಇದ್ದುಕೊಂಡೇ ಮೀನ ತುಂಡುಗಳನ್ನು ಸವಿಯುವ ಅವಕಾಶ. ಜಾವಾದ ಸಾಂಪ್ರದಾಯಿಕ ವಿಶೇಷ ಆಹಾರ ಇಲ್ಲಿ ಸಿಗುತ್ತದೆ. ಕೇವಲ ಅಕ್ಕಪಕ್ಕದವರಿಗೆ ಸಹಾಯ ಮಾಡಲು ಸಣ್ಣಮಟ್ಟದಲ್ಲಿ ಶುರು ಮಾಡಿದ ಈ ಹೋಟೆಲ್‌ಗೆ ಈಗ ದೇಶ ವಿದೇಶಗಳಿಂದ ಗ್ರಾಹಕರು ಹುಡುಕಿಕೊಂಡು ಬರುವಂತಾಗಿದೆ.

ಇಮಾಮ್ ನೂರ್ ಅವರು ಉಪಾಹಾರ ಗೃಹದ ಸಂಪೂರ್ಣ ಯಶಸ್ಸನ್ನು ತಮ್ಮ ತಂದೆಗೆ ಅರ್ಪಿಸಿದ್ದಾರೆ. ಅವರ ತಂದೆ ಮುಕ್ತ ವಾತಾವರಣದ ಬಯಲು ರೆಸ್ಟೋರೆಂಟ್‌ನ ಕನಸು ಕಂಡಿದ್ದಾರೆ. ನೂರ್ ಅದನ್ನು ನನಸು ಮಾಡಿದ್ದಾರೆ. ಸುಮಾರು 7000ದಷ್ಟು ಕೆಂಪು ನೈಲ್ ತಿಲೇಪಿಯ ಮೀನುಗಳನ್ನು ಹೋಟೆಲ್ ನೀರಲ್ಲಿ ಹರಿಯಬಿಟ್ಟಿದ್ದಾರೆ. ಅವು ತಮ್ಮ ಪಾಡಿಗೆ ತಾವು ಈಜುತ್ತಾ ಪೆಡಿಕ್ಯೂರ್ ಮಾಡುತ್ತವೆ.

ಆದೀಗ ಅಡುಗೆ ಪ್ರವಾಸೋದ್ಯಮವಾಗಿ ಪರಿಣಮಿಸಿದೆ. ಹಾಗಂತ ನೂರ್ ಅವರ ಈ ಉದ್ಯಮವೂ ವಿವಾದಗಳಿಂದ ದೂರವಾಗಿಲ್ಲ. ಉತ್ತರ ಅಮೆರಿಕ ಹಾಗೂ ಯುರೋಪ್ ದೇಶಗಳಲ್ಲಿ ಫಿಶ್‌ ಪೆಡಿಕ್ಯೂರ್‌ಗೆ ತಡೆ ಬಿದ್ದಿದೆ. ಹೀಗೆ ಬಳಸಿದ ಮೀನುಗಳು ಬ್ಯಾಕ್ಟೀರಿಯಾ ತಿಂದು ತಮ್ಮ ಮೈಮೇಲೆ ಅಪಾಯ ಎಳೆದುಕೊಳ್ಳುತ್ತವೆ ಎನ್ನುವುದು ಪ್ರಾಣಿ ದಯಾ ಸಂಘದವರ ವಾದ. ಇದು ಮೀನುಗಳಿಗೆ ತೋರುವ ಕ್ರೌರ್ಯ ಎನ್ನುವುದು ಅವರ ಹೇಳಿಕೆ.

ಪ್ರತಿಕ್ರಿಯಿಸಿ (+)