ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗರ ಬೆಳೆಸಿದ ಹಲಸೂರು ಕೆರೆ

Last Updated 3 ಫೆಬ್ರುವರಿ 2019, 19:30 IST
ಅಕ್ಷರ ಗಾತ್ರ

ಬೆಂಗಳೂರಿನ ಜೀವಂತ ಕೆರೆಗಳಲ್ಲಿ ಹಲಸೂರು ಕೆರೆಯೂ ಒಂದು. ಇತರ ಕೆರೆಗಳಿಗೆ ಹೋಲಿಸಿದರೆ ಇದು ತಕ್ಕಮಟ್ಟಿಗೆ ಸುಸ್ಥಿತಿಯಲ್ಲಿದೆ. ಅಂದಾಜು 124 ಎಕರೆಯಷ್ಟು ಪ್ರದೇಶದಲ್ಲಿ ಹರಡಿಕೊಂಡಿರುವ ಈ ಕೆರೆಯ ನಡುವೆ ಅಲ್ಲಲ್ಲಿ ನಡುಗಡ್ಡೆಗಳಲ್ಲಿವೆ. ಹಸಿರು ತುಂಬಿದ ಮರಗಿಡಗಳಿದ್ದು, ಪಕ್ಷಿಗಳಿಗೆ ನೆಲೆಯಾಗಿವೆ.

ಕುಡಿಯುವ ನೀರಿನ ಸೆಲೆಯಾಗಿತ್ತು

ಒಂದು ಕಾಲದಲ್ಲಿ ಹಲಸೂರು, ಶಿವಾಜಿನಗರ, ಇಂದಿರಾನಗರ ಸೇರಿದಂತೆ ಕಂಟೋನ್ಮೆಂಟ್‌ ಭಾಗದ ಜನರ ಕುಡಿಯುವ ನೀರಿನ ಸೆಲೆಯಾಗಿದ್ದ ಹಲಸೂರು ಕೆರೆ ಇವುಗಳ ಪ್ರಗತಿಯ ಜತೆಗೆ ಬೆಂಗಳೂರಿನ ಬೆಳವಣಿಗೆಗೂ ಕೊಡುಗೆ ನೀಡಿದೆ.

ನಗರದ ಹಲವು ಕೆರೆಗಳು ಒತ್ತುವರಿಯಾಗಿ ಮುಚ್ಚಿ ಹೋಗಿದ್ದರೆ, ಇನ್ನೂ ಹಲವು ಕೆರೆಗಳು ಒಳಚರಂಡಿ ನೀರಿನ ಸಂಪರ್ಕದಿಂದ ಕಲುಷಿತಗೊಂಡಿವೆ. ಇವುಗಳ ನಡುವೆಯೂ ಹಲಸೂರು ಕೆರೆ ತನ್ನ ಅಸ್ಥಿತ್ವವನ್ನು ಉಳಿಸಿಕೊಂಡು, ನಗರದ ಪ್ರಮುಖ ಪ್ರವಾಸಿ ಹಾಗೂ ಪರಂಪರಾ ತಾಣವಾಗಿ ರೂಪುಗೊಂಡಿದೆ. ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ.

ಬ್ರಿಟಿಷರನ್ನು ಸೆಳೆದ ಕೆರೆ

ಹಲಸೂರು ಕೆರೆಯು ದಕ್ಷಿಣ ಪಿನಾಕಿನಿ ನದಿಯ ಕಣಿವೆಯ ಭಾಗ. ಸೆಂಟ್ರಲ್‌ ಕಾಲೇಜು, ಹೈಗ್ರೌಂಡ್ಸ್‌ ಸುತ್ತಮುತ್ತ ಮಳೆ ಸುರಿದಾಗ ಅದರ ನೀರು ಹರಿದು ಬರುವುದು ಈ ಕೆರೆಗೆ. ಈ ಕೆರೆಯಿಂದಾಗಿಯೇ ಹಲಸೂರು ಪಟ್ಟಣವಾಗಿ ಬೆಳೆಯಿತು. ನೀರಿನ ಮೂಲ ಇಲ್ಲಿದ್ದ ಕಾರಣಕ್ಕೆ ಬ್ರಿಟಿಷರು ಸಮೀಪದಲ್ಲಿಯೇ ಕ್ರಿ.ಶ 1805–06ರಲ್ಲಿ ಕಂಟೋನ್ಮೆಂಟ್‌ (ದಂಡು ಪ್ರದೇಶ) ನಿರ್ಮಿಸಿ, ಸೈನಿಕ ನೆಲೆಯನ್ನಾಗಿಯೂ ಮಾಡಿಕೊಂಡರು. ಈಗಲೂ ಇಲ್ಲಿಯೇ ಎಂಇಜಿ (ಮದ್ರಾಸ್‌ ಎಂಜಿನಿಯರ್ಸ್‌ ಗ್ರೂಪ್‌) ಇದೆ. ಈ ಕೆರೆಯ ಸುರಕ್ಷಿತವಾಗಿರಲು ಎಂಇಜಿ ಕಾರಣವಾಗಿದೆ.

ಗಡಿ ಗೋಪುರವೂ ಇದೆ

ಹಲಸೂರು ಕೆರೆಗೆ ಅಂಟಿಕೊಂಡಿರುವ ಬಂಡೆಯೊಂದರ ಮೇಲೆ ಬೆಂಗಳೂರು ನಿರ್ಮಾತೃ ಕೆಂಪೇಗೌಡ ನಿರ್ಮಿಸಿದ ಗಡಿ ಗೋಪುರವೂ ಇದೆ. ನಗರಕ್ಕೆ ಪೂರ್ವ ಭಾಗದಿಂದ ಬರುತ್ತಿದ್ದವರ ಮೇಲೆ ನಿಗಾ ಇಡಲು ಈ ಗೋಪುರ ನಿರ್ಮಿಸಲಾಗಿತ್ತು.

‘ಕೃಷಿ, ಕುಡಿಯುವ ನೀರು ಸೇರಿದಂತೆ ಬಹು ಉಪಯೋಗಕ್ಕೆ ಬಳಕೆಯಾಗುತ್ತಿದ್ದ ಹಲಸೂರು ಕೆರೆಯು ಹಲಸೂರಿನ ಜತೆಗೆ ಬೆಂಗಳೂರನ್ನೂ ಬೆಳೆಸಿದೆ. ಮಳೆ ನೀರನ್ನು ಸಂಗ್ರಹಿಸಿಡುವ ಉದ್ದೇಶದಿಂದ ಅಂದಾಜು ಕ್ರಿ.ಶ 10ರಿಂದ 11ನೇ ಶತಮಾನದಲ್ಲಿ ಈ ಕೆರೆ ನಿರ್ಮಿಸಿರಬಹುದು’ ಎನ್ನುತ್ತಾರೆ ಐಸಿಎಚ್‌ಆರ್‌ ನಿರ್ದೇಶಕ ಡಾ. ಎಸ್‌.ಕೆ. ಅರುಣಿ.

ಕಮಿಷನರ್‌ ಬೌರಿಂಗ್‌ ಕೊಡುಗೆ

ಮೈಸೂರು ಸಂಸ್ಥಾನದಲ್ಲಿ ಕ್ರಿ.ಶ 1862ರಿಂದ 1870ರವರೆಗೆ ಮುಖ್ಯ ಕಮೀಷನರ್‌ ಆಗಿದ್ದ ಎಲ್‌.ಬಿ. ಬೌರಿಂಗ್ ಅವರು ಈ ಕೆರೆಯ ಸುತ್ತ ರಸ್ತೆ ನಿರ್ಮಾಣ ಮಾಡಿಸಿದ್ದಲ್ಲದೆ, ಕಂಟೋನ್ಮೆಂಟ್‌ ಪ್ರದೇಶದಲ್ಲಿದ್ದ ಸೈನಿಕ ತುಕಡಿಗಳಿಗೆ ಈ ಕೆರೆಯ ನೀರನ್ನು ಕುಡಿಯಲು ಯೋಗ್ಯವಾಗಿರುವಂತೆ ವ್ಯವಸ್ಥೆಗೊಳಿಸಿದರು.

ಹಲಸೂರು ಕೆರೆ ಕೊಳಚೆ ನೀರಿನಿಂದೇನು ಮುಕ್ತವಾಗಿರಲಿಲ್ಲ. ನಗರ ಬೆಳೆದಂತೆ ಅದರ ಕೊಳಚೆ ನೀರು ಹಲಸೂರು ಕೆರೆಗೂ ಸೇರುತ್ತಿತ್ತು. ಈ ಕುರಿತು 1883ರಲ್ಲಿಯೇ ಸೈನಿಕ ಇಲಾಖೆ ಕಳವಳ ವ್ಯಕ್ತಪಡಿಸಿತ್ತು. ಆ ನಂತರ ವಿವಿಧ ಸಂದರ್ಭಗಳಲ್ಲಿ ಕೆರೆಯ ಶುದ್ಧೀಕರಣ ಕಾರ್ಯಗಳು ನಡೆದಿವೆ. ಎರಡು ವರ್ಷಗಳ ಹಿಂದೆಯಷ್ಟೇ ಈ ಕೆರೆಯಲ್ಲಿ ಆಮ್ಲಜನಕದ ಕೊರತೆಯಿಂದಾಗಿ ಸಾವಿರಾರು ಮೀನುಗಳು ಮೃತಪಟ್ಟಿದ್ದು ಇನ್ನೂ ನೆನಪಿನಲ್ಲಿದೆ.

ಬಳಿಕ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ, ಜಲಮಂಡಳಿ, ಮಾಲಿನ್ಯ ನಿಯಂತ್ರಣ ಮಂಡಳಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಕೆರೆ ಶುದ್ಧೀಕರಣ ಕಾರ್ಯ ಕೈಗೊಂಡಿವೆ. ಸಂಪೂರ್ಣ ಪ್ಲಾಸ್ಟಿಕ್‌ ನಿಷೇಧ ಮಾಡಲಾಗಿದೆ. ಉತ್ತಮ ನಡಿಗೆ ಪಥಗಳನ್ನು ನಿರ್ಮಿಸಲಾಗಿದೆ. ಕೆರೆಯ ನಡುವೆ ಆಕರ್ಷಕ ಕಾರಂಜಿಗಳಿಗೆ ವ್ಯವಸ್ಥೆ ಮಾಡಲಾಗಿದೆ. ನಗರದ ಜನರ ವಿಹಾರಕ್ಕೆ ಪ್ರಶಸ್ತನೆಲೆಯನ್ನಾಗಿ ಅಭಿವೃದ್ಧಿ ಮಾಡಲಾಗಿದೆ. ದೋಣಿ ವಿಹಾರಕ್ಕೆ ಇಲ್ಲಿ ವ್ಯವಸ್ಥೆ ಮಾಡಲಾಗಿದೆ. ಆದರೆ ನೀರಿನ ಮಟ್ಟ ಅಷ್ಟೇನು ಎತ್ತರದಲ್ಲಿಲ್ಲ ಎಂಬ ಕಾರಣಕ್ಕೆ ಎರಡು, ಮೂರು ವರ್ಷಗಳಿಂದ ದೋಣಿ ವಿಹಾರವನ್ನು ನಿಲ್ಲಿಸಲಾಗಿದೆ.

ಎಂ.ಇ.ಜಿ ಇಲ್ಲಿ ನಡೆಸುವ ದೋಣಿಗಳ ಪಂದ್ಯ ನೋಡಲು ಬಹು ಆಕರ್ಷಣೀಯ. ಕೆರೆ ಆವರಣದಲ್ಲಿಯೇ ಈಜುಕೊಳವೂ ಇದೆ. ಕೆರೆಯ ಆವರಣದ ಕೆಲ ಭಾಗಕ್ಕೆ ಸಾರ್ವಜನಿಕರಿಗೆ ಉಚಿತ ಪ್ರವೇಶ ಅವಕಾಶವಿದೆ. ಕೆರೆ ಸಮೀಪದಲ್ಲಿಯೇ ಗುರುದ್ವಾರ, ಐತಿಹಾಸಿಕ ಸೋಮೇಶ್ವರ ದೇವಾಲಯಗಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT