ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಂಡಿಕೋಟದ ಪೆನ್ನಾರ್ ಮಾಟ!

Last Updated 13 ಫೆಬ್ರುವರಿ 2019, 19:30 IST
ಅಕ್ಷರ ಗಾತ್ರ

“ಇ ಲ್ಲಿಗೆ ಬರುವವರು ಬೆಂಗಳೂರಿನವರೇ ಹೆಚ್ಚು. ವಾರಾಂತ್ಯದಲ್ಲಿ ಕನಿಷ್ಠ 500 ಪ್ರವಾಸಿಗರು ಬರುತ್ತಾರೆ. ಇಲ್ಲಿರುವುದೊಂದೇ ಹೋಟೆಲ್. ಆಂಧ್ರಪ್ರದೇಶ ಪ್ರವಾಸೋದ್ಯಮ ಇಲಾಖೆಯ ಹರಿತಾ ರೆಸಾರ್ಟ್‌ ನಲ್ಲಿ 10 - 12 ರೂಮುಗಳಿವೆ. ಇವೆಲ್ಲಿ ಸಾಕಾಗುತ್ತವೆ ಸರ್!” ಎಂದು ಟೆಂಟ್ ಹೊಡೆಯುತ್ತ ಮುರಳಿ ಪ್ರಶ್ನಿಸಿದ.

ಏಳು ದಿನಗಳ ಏಕಾಂಗಿ ಬೈಕ್ ಪ್ರವಾಸದ ಕೊನೆಯ ನಿಲುಗಡೆ, ಗಂಡಿಕೋಟ. ಹಿಂದೆ ಅದೆಷ್ಟೋ ಬಾರಿ ಇಲ್ಲಿ ಕೊಠಡಿ ಬುಕ್ ಮಾಡಲು ಪ್ರಯತ್ನಿಸಿ ಸೋತಿದ್ದರಿಂದ, ವಾರದ ದಿನವಾದ್ದರಿಂದ ಹೆಚ್ಚು ಪ್ರವಾಸಿಗರು ಇರಲಾರರು ಎಂಬ ಭಂಡ ಧೈರ್ಯದಿಂದ ಹಾಗೇ ನುಗ್ಗಿದಾಗ ಎದುರಾಗಿದ್ದು ಮುರಳಿ. ಹರಿತಾ ರೆಸಾಟ್ರ್ಸ್‍ನ ಕ್ಯಾಂಟೀನ್ ಬಳಿ ಮುರಳಿಯಂಥ ನಾಲ್ಕೈದು ಯುವಕರು ಕಾಯುತ್ತಿರುತ್ತಾರೆ. ಪ್ರವಾಸಿಗರಿಗೆ ಅಲ್ಲಿ ರೂಮು ಸಿಗೋದಿಲ್ಲ, ಟೆಂಟೇ ಗತಿ ಎನ್ನುವುದು ಅವರಿಗೆ ಗೊತ್ತು. ರೂಮುಗಳ ಕೊರತೆಯಿಂದಾಗಿ ಸ್ಥಳೀಯ ಯುವಕರು ಆದಾಯದ ಮಾರ್ಗ ಕಂಡುಕೊಂಡಿದ್ದಾರೆ.

ಗಂಡಿಕೋಟ, ಹೆಸರೇ ಸೂಚಿಸುವಂತೆ ಒಂದು ಕೋಟೆ. ತೆಲುಗಿನಲ್ಲಿ ಗಂಡಿ ಎಂದರೆ ಕಣಿವೆ. ಕೋಟ, ಕೋಟೆ. ಕೋಟೆಯಲ್ಲದೇ, ಪೆನ್ನಾರ್ ನದಿ ಗಿರಿಯನ್ನು ಸೀಳಿಕೊಂಡು ಗಾಂಭೀರ್ಯದಿಂದ ಸಾಗುವ ರಮ್ಯ ನೋಟ ಗಂಡಿಕೋಟದ ಹೆಗ್ಗಳಿಕೆ. ಭಾರತದ ಗ್ರ್ಯಾಂಡ್ ಕಾನ್ಯನ್ ಅಂತ ಇದನ್ನು ಬಣ್ಣಿಸುತ್ತಾರೆ. ಅಸಲಿಗೆ ಗ್ರ್ಯಾಂಡ್ ಕಾನ್ಯನ್‍ವೆಂಬ ರಮಣೀಯ ಸ್ಥಳ ಇರುವುದು ಅಮೆರಿಕದಲ್ಲಿ. ಗಂಡಿಕೋಟ ಸಹ ಇದಕ್ಕೆ ಹೊರತಾಗಿಲ್ಲ.

ಎರ್‌ಮಲ್ಲ ಗಿರಿ ಶ್ರೇಣಿಗಳ ಈ ಸ್ಥಳದಲ್ಲಿ ಪೆನ್ನಾರ್ ನದಿ 300 ಅಡಿ ಕೆಳಗೆ ಬೆಟ್ಟದ ಬುಡದಲ್ಲಿ ಸಾಗುತ್ತದೆ. ಸುಮಾರು ಎರಡು ಕಿ.ಮೀ. ದೂರದವರೆಗೆ ಗಿರಿಗಳ ನಡುವೆ ಸಾಗುವ ಪೆನ್ನಾರ್ ನದಿ ಅದ್ಭುತ ನೋಟ ನೀಡುತ್ತದೆ. ಕೆಂಬಣ್ಣದ ಬೆಟ್ಟಗಳ ನಡುವೆ ನೀಲ ನದಿಯ ಹರಿವು.

ಮುರಳಿ ಟೆಂಟ್ ಹಾಕುತ್ತಿರುವಾಗ ಆಗಲೇ ಬಣ್ಣಬಣ್ಣದ ಸುಮಾರು ನೂರು ಟೆಂಟ್‍ಗಳಿದ್ದವು. ‘ಪ್ರತಿ ಟೆಂಟಿನಲ್ಲಿ ಮೂರು ಜನರಿಗೆ ಅವಕಾಶವಿದೆ. ನೀವೊಬ್ಬರೇ ಇದ್ದರೂ ಮೂರು ಜನರ ಹಣವನ್ನೇ ಕೊಡಬೇಕು ಸರ್’ ಮುರುಳಿ ಬಾಂಬ್ ಹಾಕಿದ. ಟೆಂಟ್ ವಾಸಕ್ಕೆ ಪ್ರತಿಯೊಬ್ಬರಿಂದ ಇಲ್ಲಿ ಒಂದೂವರೆ ಸಾವಿರ ರೂಪಾಯಿ ಪಡೆಯುತ್ತಾರೆ. ಜಾಗ ಅವರದಲ್ಲ. ಸಾರ್ವಜನಿಕ ಸ್ಥಳ. ಟೆಂಟ್‍ಗಳಿರುವುದು ಅದ್ಭುತ ರಮಣೀಯ ಸ್ಥಳದಲ್ಲಿ ಎನ್ನೊದೇನೋ ಸರಿ. ಆದರೆ ವಿದ್ಯುತ್, ಶೌಚಾಲಯ, ಸ್ನಾನಕ್ಕೆ ಯಾವುದೇ ಸೌಲಭ್ಯ ಇಲ್ಲ. ಅದಕ್ಕೆಲ್ಲ ಹರಿತ ಹೋಟೆಲಿಗೇ ಬರಬೇಕು. ಆದರೂ ಟೆಂಟ್ ವಾಸ ಖುಷಿ ಕೊಡುತ್ತದೆ. ಬೆಳದಿಂಗಳ ಬೆಳಕಿದ್ದರೆ ಇನ್ನೂ ಮಜಾ. ಆ ದಿನ ರಾತ್ರಿ ಬೆಂಗಳೂರಿನ ತಂಡವೊಂದು, ಅಲ್ಲೇ ಅಡುಗೆ ಮಾಡಿ 12 ಗಂಟೆಯವರೆಗೆ ಜೋರಾಗಿ ಸಂಗೀತದ ಗದ್ದಲ ನಡೆಸುತ್ತಿತ್ತು. ಕೆಲ ಕುಟುಂಬಗಳೂ (ಅನಿವಾರ್ಯವಾಗಿ) ಟೆಂಟ್‍ಗಳಲ್ಲೇ ಇದ್ದವು.ಈ ಕೊರತೆಗಳನ್ನು ಹೊರತುಪಡಿಸಿದರೆ ಗಂಡಿಕೋಟ ಭೇಟಿ ನೀಡಲೇಬೇಕಾದ ಸುಂದರ ಸ್ಥಳ.

ಗಂಡಿಕೋಟ ಒಂದು ಹಳ್ಳಿ. ಲೆಕ್ಕ ಹಾಕಿದರೆ 20- 25 ಮನೆಗಳು ಸಿಗಬಹುದು. ಹಳ್ಳಿಯ ಒಂದು ಭಾಗವನ್ನು ಕೋಟೆ ಸುತ್ತುವರಿದಿದೆ. ಕಾರುಗಳನ್ನೂ ಕೋಟೆಯೊಳಗೇ ನುಗ್ಗಿಸಿ ಒಳಗಿನ ಪ್ರದೇಶಗಳನ್ನು ನೋಡಬಹುದಾದರೂ ಎದುರಿನಿಂದ ಇನ್ನೊಂದು ವಾಹನ ಬಂದರೆ ಹೊರಬರಲು ಸ್ವಲ್ಪ ಸಮಯವೇ ಬೇಕು. ಆದ್ದರಿಂದ ಕಾರಿದ್ದರೆ ಕೋಟೆಯ ಹೊರಗೇ ನಿಲ್ಲಿಸಿ ನಡಿಗೆಯಿಂದಲೇ ಹೋದರೆ ಸುಖ.

ಕೋಟೆಯ ಇತಿಹಾಸ ಕೆದಕಿದರೆ ಕನ್ನಡಿಗರ ಚಾಲುಕ್ಯ ಸಾಮ್ರಾಜ್ಯದ ಕುರುಹು ಮೊದಲು ಕಾಣಿಸುತ್ತದೆ. ಕಲ್ಯಾಣದ ಚಾಲುಕ್ಯ ದೊರೆ ಇಮ್ಮಡಿ ಆಹವಮಲ್ಲ ಸೋಮೇಶ್ವರನ ಪಾಳೇಗಾರರಾಗಿದ್ದ ಕಾಪಾ ರಾಜರು 1123ರಲ್ಲಿ ಮರಳಿನ ಕೋಟೆಯನ್ನು ನಿರ್ಮಿಸಿದರು. ಮುಂದೆ ಕಮ್ಮ ಅರಸರು ಇದನ್ನು ಸದೃಢಗೊಳಿಸಿ 200 ವರ್ಷ ಆಳಿದರು. ಕೋಟೆಯ ಒಳಗೆ ಇತಿಹಾಸದ ಕುರುಹಾಗಿ ಅನೇಕ ಅವಶೇಷಗಳು ಸಿಗುತ್ತವೆ. ಫೋಟೊಗ್ರಫಿಗೆ ಒಂದಕ್ಕಿಂತ ಒಂದು ಸುಂದರ ಎನ್ನುವ ಸ್ಥಳಗಳು ಮತ್ತು ಕೋನಗಳಿವೆ. ಮುಖ್ಯವಾಗಿ ಮಾಧವ ದೇವಾಲಯ ಮತ್ತು ರಂಗನಾಥ ದೇವಾಲಯ. ವಿಜಯನಗರ ಶೈಲಿಯ ಗೋಪುರ ಹೊಂದಿರುವ ಮಾಧವ ದೇವಾಲಯ ಸೂರ್ಯೋದಯಕ್ಕೆ ಕಂಗೊಳಿಸುತ್ತದೆ. ಜಾಮಿಯಾ ಮಸೀದಿ, ಅದರ ಪಕ್ಕದಲ್ಲೇ ಸುಸ್ಥಿತಿಯಲ್ಲಿರುವ ದವಸ ದಾಸ್ತಾನು ಸಂಗ್ರಹ ಕಟ್ಟಡವಿದೆ. ಈ ಎಲ್ಲ ಸ್ಥಳಗಳನ್ನು ಸಂಜೆ 6 ಗಂಟೆಯೊಳಗೆ ಸಂದರ್ಶಿಸಬೇಕು. ಬಳಿಕ ಕೆಲವೊಂದು ಸ್ಮಾರಕಗಳಿಗೆ ಬೀಗ ಬೀಳುತ್ತದೆ.

ರಂಗನಾಥ ದೇವಾಲಯವನ್ನು ದಾಟಿ ಮುಂದಕ್ಕೆ ಸಾಗಿದರೆ ರಮಣೀಯ ಪೆನ್ನಾರ್ ನದಿಯನ್ನು ನೋಡಲು ವೀವ್ ಪಾಯಿಂಟ್ ಇದೆ. ಬೃಹತ್ ಬಂಡೆಯನ್ನೇರಿ ಎಲ್ಲಿ ಕುಳಿತರೂ ಸುಂದರ ದೃಶ್ಯ ಕಣ್ಣಿಗೆ ರಾಚುತ್ತದೆ. ಸೂರ್ಯೋದಯ, ಸೂರ್ಯಾಸ್ತಗಳ ಸಂದರ್ಭದಲ್ಲಿ ಈ ಚೆಲುವು ಇಮ್ಮಡಿಯಾಗುತ್ತದೆ ಎಂದು ಮುರಳಿ ಹೇಳಿದ್ದ. ಆದರೆ ಸೂರ್ಯಾಸ್ತದಲ್ಲಿಯೇ ಗಂಡಿಕೋಟ ಹೆಚ್ಚು ಆಕರ್ಷಕವಾಗುತ್ತದೆ. ಇಕ್ಕೆಲಗಳಲ್ಲಿರುವ ಕೆಂಬಣ್ಣದ ಗಿರಿ ಕಲ್ಲುಗಳ ಮೇಲೆ ಸೂರ್ಯನ ಬೆಳಕು ಚೆಲ್ಲಿ ಇನ್ನಷ್ಟು ರಂಗೇರಿದಾಗ ಕೆಳಗಿನ ಪೆನ್ನಾರ್ ನದಿ ದೃಶ್ಯ ಕಲಾವಿದನ ಕುಂಚದಿಂದ ಮೂಡಿಬಂದಂತೆ ಇರುತ್ತದೆ. ಒಂದೊಂದು ಬಂಡೆಗಳೂ ಒಂದೊಂದು ಆಕೃತಿಯೆಂಬಂತೆ ಭಾಸವಾಗುತ್ತದೆ.

ವೀವ್‍ಪಾಯಿಂಟ್‍ನ ಪೂರ್ವಕ್ಕೆ ದೃಶ್ಯ ಹೆಚ್ಚು ಸುಂದರ. ಪ್ರವಾಸಿಗರ ಗದ್ದಲದ ನಡುವೆಯೂ ಶಾಂತ ಅನುಭವವನ್ನು ಈ ಸ್ಥಳ ಕೊಡುತ್ತದೆ. ಹಾಗೇ ಕುಳಿತಾಗ ಹಿಂದೆ ಕೆಂಪಾಗಿ ನಿಗಿನಿಗಿ ಸೂರ್ಯ ಮರೆಯಾಗಿದ್ದೇ ತಿಳಿಯಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT