ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಳನೋಟ| ಮಳೆಯಿಂದ ಹೆಚ್ಚಳವಾದ ಅಂತರ್ಜಲ

Last Updated 1 ಜನವರಿ 2022, 19:21 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯ ಅಂತರ್ಜಲ ನಿರ್ದೇಶನಾಲಯ ಮತ್ತು ಸಣ್ಣ ನೀರಾವರಿ ಇಲಾಖೆಯು ‘ಅಂತರ್ಜಲ ಸಂಪನ್ಮೂಲ ಮೌಲೀಕರಣ ವರದಿ’ಯನ್ನು ಎರಡು ತಿಂಗಳ ಹಿಂದೆ (ನವೆಂಬರ್‌ನಲ್ಲಿ) ಬಿಡುಗಡೆ ಮಾಡಿದ್ದು, ರಾಜ್ಯವ್ಯಾಪಿ 1,342 ಕೇಂದ್ರಗಳಲ್ಲಿ ಸಂಗ್ರಹಿಸಿರುವ ಮಾಹಿತಿ ಪ್ರಕಾರ 2019ರಿಂದ ಈಚೆಗೆ ಅಂತರ್ಜಲ ಮಟ್ಟ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿದೆ.

1,342 ಕೇಂದ್ರಗಳ 1,290 ಬಾವಿಗಳಲ್ಲಿ ಅಂದರೆ ಶೇ 97ರಷ್ಟು ನೀರಿನ ಮಟ್ಟ (2019ರ ಮೇ ತಿಂಗಳಿಂದ ನವೆಂಬರ್‌) ಏರಿಕೆ ಆಗಿದ್ದರೆ, 43 ಕೇಂದ್ರಗಳಲ್ಲಿ ಅಂದರೆ ಶೇ 3ರಷ್ಟು ಬಾವಿಗಳಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿದೆ. 2021ರಲ್ಲಿ ಕಳೆದ 50 ವರ್ಷಗಳಲ್ಲೇ ಅತ್ಯಧಿಕ ಮಳೆ ಆಗಿದ್ದರಿಂದ ಶೇ 82ರಷ್ಟು ತಾಲ್ಲೂಕುಗಳಲ್ಲಿ ಅಂತರ್ಜಲ ಮಟ್ಟ ಏರಿಕೆಯಾಗಿದೆ.

ಕಳೆದ ಹತ್ತು ವರ್ಷಗಳ (2011ರಿಂದ 2021) ಸರಾಸರಿ ತೆಗೆದುಕೊಂಡಾಗ 147 ತಾಲ್ಲೂಕುಗಳಲ್ಲಿ ಅಂತರ್ಜಲ ಪ್ರಮಾಣ ಏರಿಕೆ ಆಗಿದೆ. ಆದರೂ, 50 ತಾಲ್ಲೂಕುಗಳಲ್ಲಿ ಅಂತರ್ಜಲ ಮಟ್ಟ ಕಡಿಮೆ ಇದೆ. ಅಂತರ್ಜಲ ಹೆಚ್ಚಳಕ್ಕೆ ಈ ವರ್ಷ ಅತ್ಯಧಿಕ ಮಳೆ ಆಗಿದ್ದು ಒಂದು ಕಾರಣವಾಗಿದ್ದರೆ, ಮಳೆ ಅವಧಿಯಲ್ಲಿ (ಸುಮಾರು ಮೂರು ತಿಂಗಳು) ರೈತರು ನೀರಾವರಿ ಪಂಪ್‌ಸೆಟ್‌ಗಳನ್ನು ಬಳಸಲಿಲ್ಲ. ಇದರಿಂದಾಗಿ ಅಂತರ್ಜಲ ಮರುಪೂರಣ ಗರಿಷ್ಠ ಮಟ್ಟದಲ್ಲಾಗಿದೆ ಎನ್ನುತ್ತಾರೆ ಅಂತರ್ಜಲ ನಿರ್ದೇಶನಾಲಯದ ಅಧಿಕಾರಿಗಳು.

ಅಂತರ್ಜಲ ಅಧಿಕ ಬಳಕೆ: ರಾಜ್ಯದ 52 ತಾಲ್ಲೂಕುಗಳಲ್ಲಿ ಅಂತರ್ಜಲವನ್ನು ಅತ್ಯಧಿಕ ಮಟ್ಟದಲ್ಲಿ ಬಳಕೆ ಮಾಡಲಾಗಿದೆ. ಇದರಲ್ಲಿ 10 ತಾಲ್ಲೂಕುಗಳಲ್ಲಿ ಅತ್ಯಧಿಕ, 35 ತಾಲ್ಲೂಕುಗಳಲ್ಲಿ ಸುಮಾರಾಗಿ ಬಳಕೆ ಮಾಡಲಾಗಿದೆ. 135 ತಾಲ್ಲೂಕುಗಳಲ್ಲಿ ಸುರಕ್ಷಿತ ಪ್ರಮಾಣದಲ್ಲಿದೆ.

ರಾಜ್ಯದಲ್ಲಿ ಅತ್ಯಧಿಕ ಪ್ರಮಾಣದಲ್ಲಿ ಅಂತರ್ಜಲ ಬಳಸುತ್ತಿರುವ ತಾಲ್ಲೂಕುಗಳೆಂದರೆ ಬಾಗಲಕೋಟೆ ಜಿಲ್ಲೆಯ ಗುಳೇದಗುಡ್ಡ, ಬೆಂಗಳೂರು ನಗರ ಜಿಲ್ಲೆಯ ಯಲಹಂಕ, ಬೆಳಗಾವಿ ಜಿಲ್ಲೆಯ ಬೈಲಹೊಂಗಲ ಮತ್ತು ಕಾಗವಾಡ, ಬಳ್ಳಾರಿ ಜಿಲ್ಲೆಯ ಕೊಟ್ಟೂರು, ಚಾಮರಾಜನಗರ ಜಿಲ್ಲೆಯ ಚಾಮರಾಜನಗರ, ತುಮಕೂರು ಜಿಲ್ಲೆಯ ಶಿರಾ ಮತ್ತು ಕೊಪ್ಪಳ ಜಿಲ್ಲೆಯ ಕುಕನೂರು.

ಇವುಗಳನ್ನೂ ಓದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT