ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧಾರವಾಡ | ಬಡಾವಣೆ ನಿವಾಸಿಗಳ ನಮ್ಮ ಕೆರೆ

Last Updated 15 ಜೂನ್ 2020, 19:45 IST
ಅಕ್ಷರ ಗಾತ್ರ

ಇದ್ದ ಕೆರೆಯನ್ನು ಮುಚ್ಚಿ ಬಡಾವಣೆ ಮಾಡಲು ಸಿದ್ಧತೆ ನಡೆಸಿದ್ದ ಭೂಗಳ್ಳರ ಕಪಿಮುಷ್ಟಿಯಿಂದ ರಕ್ಷಿಸಿ, ತಾವೇ ಹಣ ಹೊಂದಿಸಿ ಕೆರೆ ಅಭಿವೃದ್ಧಿಪಡಿಸಿದ ನಾಲ್ಕು ಬಡಾವಣೆ ಜನರ ಯಶೋಗಾಥೆ ಇದು. ಲಾಕ್‌ಡೌನ್ ಅವಧಿಯಲ್ಲೇ ಈ ಕೆರೆ ಪುನಶ್ಚೇತನಗೊಂಡಿದೆ ಎಂಬುದೇ ವಿಶೇಷ.

ಧಾರವಾಡ ಸಪ್ತಕೆರೆಯನ್ನು ಸಪ್ತಗಿರಿ ಇರುವ ಊರು ಎಂದು ಹೇಳುತ್ತಾರೆ. ಅಂದರೆ, ಏಳು ಕೆರೆಗಳಿರುವ ಸ್ಥಳ. ಆದರೆ ಅಲ್ಲೀಗ ಕೆರೆಗಳನ್ನು ಹುಡುಕುವಂತಾಗಿದೆ. ಸುತ್ತಮುತ್ತ ಇದ್ದ ಹಲವಾರು ಕೆರೆಗಳು ಭೂಗಳ್ಳರಿಂದ ಇಲ್ಲವೇ ಸರ್ಕಾರಿ ಯೋಜನೆಗಳಿಗೆ ಬಲಿಯಾಗಿವೆ. ಹೀಗೆ ಮುಚ್ಚಿ ಮರೆಯಾಗಿ ಹೋಗುತ್ತಿದ್ದ ಕೆರೆಯೊಂದನ್ನು ನಗರದ ಬಸವೇಶ್ವರ ಬಡಾವಣೆ, ಶಾಕಾಂಬರಿ ನಗರ, ನಂದಿನಿ ಲೇಔಟ್, ಗುರುದೇವ ನಗರ ಬಡಾವಣೆಯ ಸುಮಾರು 80 ಕುಟುಂಬಗಳು ರಕ್ಷಿಸಿವೆ. 1 ಎಕರೆ 5 ಗುಂಟೆ ವಿಸ್ತೀರ್ಣದಷ್ಟು ವಿಶಾಲವಾಗಿರುವ ಈ ಕೆರೆಯನ್ನು ಅಭಿವೃದ್ಧಿಪಡಿಸಿ ನಕ್ಷೆಯಲ್ಲಿ ಶಾಶ್ವತವಾಗಿ ಉಳಿಯುವಂತೆ ಮಾಡಿದ್ದಾರೆ. ಇದಕ್ಕೆ ‘ನಮ್ಮ ಕೆರೆ’ ಎಂದೂ ನಾಮಕರಣ ಮಾಡಿದ್ದಾರೆ.

ಈ ಕೆರೆಯ ಅಭಿವೃದ್ಧಿ ಕಾರ್ಯ ಆರಂಭಗೊಂಡಿದ್ದು ಇಂದು ನಿನ್ನೆಯಿಂದಲ್ಲ. 2012ರಿಂದಲೇ ಬಡಾವಣೆಯಲ್ಲಿರುವ ಕೆಲವು ಆಸಕ್ತರು ನಕ್ಷೆಯಲ್ಲಿದ್ದ ಕೆರೆಯನ್ನು ಹುಡುಕುವ ಕೆಲಸ ಆರಂಭಿಸಿದ್ದರು. ನಕ್ಷೆಯಲ್ಲಿ ಕೆರೆ ಏನೋ ಸಿಕ್ಕಿತು. ಆದರೆ ಅದರ ಸ್ವರೂಪ ಕೆರೆಯಂತಿರಲಿಲ್ಲ. ಬದಲಿಗೆ ರಸ್ತೆ, ನಡುವೆ ಹೈ ಟೆನ್ಶನ್ ವಿದ್ಯುತ್ ಮಾರ್ಗವಿತ್ತು. ಇರುವ ರಸ್ತೆಯನ್ನೇ ಅಭಿವೃದ್ಧಿಪಡಿಸಿ ಅಕ್ಕಪಕ್ಕ ನಿವೇಶನ ಸಿದ್ಧಪಡಿಸಲು ಕೆಲ ಪಟ್ಟಭದ್ರ ಹಿತಾಸಕ್ತಿಗಳು ಕೈಹಾಕಿದ್ದವು.

‘ನಮ್ಮ ಕೆರೆ’ ನಿರ್ಮಾಣಕ್ಕೂ ಮೊದಲಿನ ದೃಶ್ಯ

ಕೆರೆ ಪುನಶ್ಚೇತನಕ್ಕಾಗಿ ಓಡಾಟ

ಧಾರವಾಡದ ಹೊರವಲಯದಲ್ಲಿರುವ ಈ ಬಡಾವಣೆಗಳು ಇತ್ತೀಚೆಗೆ ಅಭಿವೃದ್ಧಿಯಾಗುತ್ತಿವೆ. ಹೀಗಾಗಿ, ಬಡಾವಣೆಗಳ ನಡುವೆ ಇರುವ ಕೆರೆಯನ್ನು ಉಳಿಸಿಕೊಂಡು, ಅಭಿವೃದ್ಧಿಪಡಿಸಲು ಸುತ್ತಲಿನ ಜನರು ಎಲ್ಲಾ ಕೋನಗಳಿಂದಲೂ ಪ್ರಯತ್ನ ಆರಂಭಿಸಿದರು. ಸರ್ಕಾರ, ಇಲಾಖೆಗಳಿಗೆ ಅಲೆದಾಡಿದರು. ಕಾಗದ–ಪತ್ರಗಳ ವ್ಯವಹಾರ ಮಾಡಿದರು. ಇಷ್ಟಾದರೂ, ಕಾಗದ ಪತ್ರಗಳ ಸಂಖ್ಯೆ ಹೆಚ್ಚುತ್ತಲೇ ಹೋಯಿತೇ ಹೊರತು, ಕೆರೆ ಮೂಲಸ್ವರೂಪ ಪಡೆಯುವ ಲಕ್ಷಣಗಳೇ ಕಾಣಲಿಲ್ಲ.

‘ನಮ್ಮ ಬಡಾವಣೆಗಳ ಜನರಿಗೆ ವಾಯುವಿಹಾರಕ್ಕೆ ಒಂದು ಸೂಕ್ತ ಸ್ಥಳ ಅಗತ್ಯವಿತ್ತು. ಹೀಗಾಗಿ ನಕ್ಷೆಯಲ್ಲಿದ್ದ ಇಂಗ್ಲಿಷ್ ಅಕ್ಷರದ ‘ಎಲ್’ ಆಕಾರದ 1ಎಕರೆ 5 ಗುಂಟೆ ವಿಸ್ತೀರ್ಣದ ಕೆರೆಯನ್ನೇ ಉಳಿಸಿ ಅದನ್ನೇ ಅಭಿವೃದ್ಧಿಪಡಿಸಲು ಸಂಕಲ್ಪ ಮಾಡಿದೆವು. ಎಷ್ಟೇ ಪ್ರಯತ್ನ ಪಟ್ಟರೂ, ಭೂಗಳ್ಳರ ಬಲವೇ ಹೆಚ್ಚಾಗಿತ್ತು. ಕೆರೆ ಇದೆ ಎಂದು ಜಿಲ್ಲಾಡಳಿತ ಒಪ್ಪಿಕೊಂಡು, ಅದನ್ನು ಅಭಿವೃದ್ಧಿಪಡಿಸುವ ಭರವಸೆ ನೀಡಿತಾದರೂ, ಕಾಲ ಕೂಡಿ ಬಂದಿರಲಿಲ್ಲ’ ಎಂದು ಬಸವೇಶ್ವರ ಬಡಾವಣೆ ಸಂಘದ ಅಧ್ಯಕ್ಷ ಸುರೇಶ ಹೊರಡಿ ಕೆರೆ ಪುನಶ್ಚೇತನದ ಆರಂಭದ ದಿನಗಳನ್ನು ನೆನಪಿಸಿಕೊಳ್ಳುತ್ತಾರೆ.

ಜನರೇ ಹಣ ಕೂಡಿಸಿದರು

ಹೀಗೇ ಕಚೇರಿಯಿಂದ ಕಚೇರಿಗೆ ಅಲೆಯುತ್ತಲೇ ಹೋದರೆ, ಕೆರೆ ಉಳಿಸಿಕೊಳ್ಳುವುದು ಮತ್ತು ಅಭಿವೃದ್ಧಿಪಡಿಸುವುದು ಕಷ್ಟ ಎಂದು ತೀರ್ಮಾನಿಸಿದ ಬಡಾವಣೆಯ ಪ್ರಮುಖರು, ತಾವೇ ಹಣ ಸೇರಿಸಿ ಕೆರೆ ಅಭಿವೃದ್ಧಿಪಡಿಸುವ ನಿರ್ಧಾರಕ್ಕೆ ಬಂದರು. ಪ್ರತಿ ಮನೆಯವರು ಕನಿಷ್ಠ ತಲಾ ₹2ಸಾವಿರದಂತೆ ನೀಡಲು ನಿರ್ಧರಿಸಲಾಯಿತು. ಕೆಲವರೂ ಅದಕ್ಕೂ ಹೆಚ್ಚಿನ ಹಣವನ್ನು ನೀಡಿದರು. ಇದೇ ಸಂದರ್ಭದಲ್ಲಿ ಲಾಕ್‌ಡೌನ್ ಘೋಷಣೆಯಾಯಿತು. ಹೊರಗಿನ ಎಲ್ಲಾ ಚಟುವಟಿಕೆಗಳೂ ನಿಂತವು. ಒಂದು ಜೆಸಿಬಿ, ಒಂದು ಹಿಟಾಚಿ ಹಾಗೂ ಟ್ರ್ಯಾಕ್ಟರ್ ತಂದು ಕೆರೆ ಅಭಿವೃದ್ಧಿಗೆ ಕೈ ಹಾಕಿಯೇಬಿಟ್ಟರು. ‘ಕೇವಲ 15 ದಿನಗಳಲ್ಲಿ ಕೆರೆ ನಿರ್ಮಾಣವಾಯಿತು. ಇದಕ್ಕೆ ತಗುಲಿದ ವೆಚ್ಚ ₹3ಲಕ್ಷ. ನಮ್ಮ ಈ ಪ್ರಯತ್ನಕ್ಕೆ ವರುಣನೂ ಕೃಪೆ ತೋರಿದ. ಅದೇ ಅವಧಿಯಲ್ಲಿ ಆದ ಉತ್ತಮ ಮಳೆಯಿಂದ ಕೆರೆಗೆ ನೀರೂ ಹರಿದುಬಂದಿದ್ದು ನಾಲ್ಕೂ ಬಡಾವಣೆ ಜನರ ಶ್ರಮಕ್ಕೆ ಸಂದ ಪ್ರತಿಫಲದಂತೆ ಕಂಡಿತು’ ಎಂದು ಹೆಮ್ಮೆಯಿಂದ ಹೇಳಿದರು ಸುರೇಶ್.

ಕೆರೆ ಪುನಶ್ಚೇತನದ ಕೆಲಸಗಳು ಒಂದೊಂದೇ ಪೂರ್ಣಗೊಳ್ಳುತ್ತಿರುವಂತೆ, ಕೆರೆಯ ಮಣ್ಣನ್ನು ಏರಿಗೆ ತುಂಬಿಸಿ, ವಾಯು ವಿಹಾರಕ್ಕೆ ಅನುಕೂಲವಾಗುವಂತೆ ಮಾಡಿಸಿದರು. ಇದೇ ಸಮಯದಲ್ಲಿ ಜೂನ್ 5 ವಿಶ್ವ ಪರಿಸರ ದಿನವೂ ಜತೆಯಾಯಿತು. ಆ ದಿನದ ಅಂಗವಾಗಿ ಕೆರೆ ಸುತ್ತ ಗಿಡಗಳನ್ನು ನೆಡಲು ನಿರ್ಧಾರವಾಯಿತು.

ಏರಿ ಮೇಲೆ ‘ವಿಶ್ವ ಪರಿಸರ ದಿನ’

‘ಪರಿಸರ ಪ್ರೇಮಿ ಶಂಕರ ಕುಂಬಿ ಅವರು ಈ ಕಾರ್ಯಕ್ಕೆ ನೆರವಾದರು. ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿ ಯಶಪಾಲ ಕ್ಷೀರಸಾಗರ ಅವರು 60ಕ್ಕೂ ಹೆಚ್ಚು ಗಿಡಗಳನ್ನು ನೀಡಿದ್ದಲ್ಲದೇ, ಕೆರೆ ಬಳಿಗೆ ಬಂದು ಸಸಿ ನೆಟ್ಟು, ಬಡಾವಣೆ ಜನರ ಪ್ರಯತ್ನವನ್ನು ಶ್ಲಾಘಿಸಿದರು’ ಎಂದು ನೆನಪಿಸಿಕೊಳ್ಳುತ್ತಾರೆ ಬಡಾವಣೆಯ ಮತೊಬ್ಬ ಹಿರಿಯ ನಾಗರಿಕರಾದ ಶಿವಶರಣ ಕಲಬಶೆಟ್ಟರ್.

‘ಈಗ ಕೆರೆ ಸುತ್ತಲೂ ಕಲ್ಲು ಕಟ್ಟಿಸಬೇಕಿದೆ. ರಕ್ಷಣಾ ಬೇಲಿ, ನಡಿಗೆಗೆ ಪೇವರ್ಸ್ ಹಾಗೂ ಅಲ್ಲಲ್ಲಿ ಕೂರಲು ಬೇಂಚುಗಳ ಅಗತ್ಯವಿದೆ. ಇದರ ಪ್ರಯತ್ನದಲ್ಲೂ ಇದ್ದೇವೆ’ ಎಂದು ಅವರು ಆಗಬೇಕಾಗಿರುವ ಕೆಲಸಗಳನ್ನು ಪಟ್ಟಿ ಮಾಡಿದರು.

ಮುಂಗಾರು ಮಳೆ ಆರಂಭದ ಹೊತ್ತಿನಲ್ಲಿ ಕೆರೆಯಲ್ಲಿ ನೀರು ತುಂಬಿದ್ದು, ಸುತ್ತಲೂ ಹಸಿರು ನಳನಳಿಸುತ್ತಿದೆ. ಈ ನಾಲ್ಕೂ ಬಡಾವಣೆ ಜನರ ‘ನಮ್ಮ ಕೆರೆ’ ಯಶೋಗಾಥೆ ಸುತ್ತಮುತ್ತಲೂ ಪಸರಿಸಿದೆ. ಹೀಗಾಗಿ ಇತರ ಕಾಲೊನಿಗಳ ನಿವಾಸಿಗಳೂ ತಮ್ಮ ಬಡಾವಣೆಯಲ್ಲಿ ಇರಬಹುದಾದ ಕೆರೆಯನ್ನು ಪತ್ತೆ ಮಾಡಿ ಅಭಿವೃದ್ಧಿಪಡಿಸುವ ಉತ್ಸಾಹ ತೋರುತ್ತಿದ್ದು, ಇವರ ಬಳಿ ಸಲಹೆ ಕೇಳುತ್ತಿರುವುದು ಜಲಸಾಕ್ಷರತೆ ಮೂಡಿದಂತಿದೆ.

ಎಂಟು ವರ್ಷಗಳಿಂದ ನಡೆಯುತ್ತಿದ್ದ ಕೆರೆ ನಿರ್ಮಾಣದ ಪ್ರಯತ್ನ ಲಾಕ್‌ಡೌನ್ ಅವಧಿಯಲ್ಲೇ ನೆರವೇರಿತು. ಸರ್ಕಾರಿ ಹಣದಲ್ಲಾಗಿದ್ದರೆ, ಈಗ ಖರ್ಚಾದ ಹಣದ ಮೂರು ಪಟ್ಟಾಗುತ್ತಿತ್ತು ಎಂದು ಕೆರೆ ನೋಡಿದ ಕೆಲ ಅಧಿಕಾರಿಗಳೇ ಹೇಳಿದ್ದಾರೆ ಎಂದು ನಿವಾಸಿಶಿವಶರಣ ಕಲಬಶೆಟ್ಟರ್ ಹೇಳುತ್ತಾರೆ.

ಕೆರೆಗೆ ಯಾವುದೇ ಕಲುಶಿತ ನೀರು ಸೇರದಂತೆ ಬಡಾವಣೆಯ ಜನರು ಬಳಕೆ ಮಾಡಿದ ನೀರನ್ನು ಬೇರೆಡೆ ಕಳುಹಿಸಲಾಗುತ್ತಿದೆ. ಕೆರೆ ನೀರು ಹಾಗೂ ವಾತಾವರಣ ಶುದ್ಧವಾಗಿಡಲು ಬಡಾವಣೆಯ ಪ್ರತಿಯೊಬ್ಬರೂ ಕೈಜೋಡಿಸಿರುವುದು ಸಂತಸದ ಸಂಗತಿ ಎಂದು ನಿವಾಸಿಸುರೇಶ ಹೊರಡಿ ಸಂತಸ ಹಂಚಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT