ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಳ-ಅಗಲ: ಆನ್‌ಲೈನ್‌ ಬಾಗಿಲು ತೆರೆದ ಲಾಕ್‌ಡೌನ್‌

Last Updated 28 ಸೆಪ್ಟೆಂಬರ್ 2020, 20:21 IST
ಅಕ್ಷರ ಗಾತ್ರ

ಮದ್ಯವು ರಾಜ್ಯಪಟ್ಟಿಯಲ್ಲಿ ಬರುವ ಕಾರಣ, ದೇಶದಾದ್ಯಂತ ಮದ್ಯ ಮಾರಾಟ ಕಾನೂನುಗಳಲ್ಲಿ ಏಕರೂಪತೆ ಇಲ್ಲ. ಹೀಗಾಗಿಯೇ ಕೆಲವು ರಾಜ್ಯಗಳಲ್ಲಿ ಮದ್ಯವನ್ನು ಹೋಂ ಡೆಲಿವರಿ ಮಾಡಲು ಅವಕಾಶವಿದೆ. ಕೆಲವು ರಾಜ್ಯಗಳಲ್ಲಿ ಅವಕಾಶವಿಲ್ಲ. ಕೆಲವು ರಾಜ್ಯಗಳಲ್ಲಿ ಬಿಯರ್ ಮತ್ತು ವೈನ್‌ ಅನ್ನು ಹೋಂ ಡೆಲಿವರಿ ಮಾಡಲಷ್ಟೇ ಅವಕಾಶವಿದೆ.

ಬಹುತೇಕ ರಾಜ್ಯಗಳಲ್ಲಿ ಮದ್ಯದ ಮೇಲಿನ ಅಬಕಾರಿ ಸುಂಕವು ಆದಾಯದ ದೊಡ್ಡ ಮೂಲವಾಗಿದೆ. ಕೋವಿಡ್‌ ಲಾಕ್‌ಡೌನ್‌ ಅವಧಿಯಲ್ಲಿ ಮದ್ಯ ಮಾರಾಟ ಸ್ಥಗಿತವಾಗಿದ್ದ ಕಾರಣ, ರಾಜ್ಯಗಳ ಆದಾಯಕ್ಕೂ ಹೊಡೆತ ಬಿದ್ದಿತ್ತು. ಹೀಗಾಗಿ ಮದ್ಯವನ್ನು ಹೋಂ ಡೆಲಿವರಿ ಮಾಡಲು ಅವಕಾಶ ನೀಡುವ ಬಗ್ಗೆ ಹಲವು ರಾಜ್ಯಗಳು ಚಿಂತನೆ ನಡೆಸಿದ್ದವು. ಕೆಲವು ರಾಜ್ಯಗಳು ಇದನ್ನು ಕಾರ್ಯರೂಪಕ್ಕೂ ತಂದವು.

ಮದ್ಯದ ಹೋಂ ಡೆಲಿವರಿಯಲ್ಲಿ ಹೆಚ್ಚು ವ್ಯವಸ್ಥಿತ ಮಾದರಿಯನ್ನು ರೂಪಿಸಿರುವುದು ಛತ್ತೀಸಗಡ ಸರ್ಕಾರ. ಛತ್ತೀಸಗಡದಲ್ಲಿ ಬಹಳ ವರ್ಷಗಳಿಂದ ಮದ್ಯವನ್ನು ಹೋಂ ಡೆಲಿವರಿ ಮಾಡಲು ಅವಕಾಶವಿದೆ. ಸಿಎಸ್‌ಎಂಸಿಎಲ್‌ ಎಂಬ ಆ್ಯಂಡ್ರಾಯ್ಡ್ ಆ್ಯಪ್‌ ಅನ್ನು ರಾಜ್ಯದ ಅಬಕಾರಿ ಇಲಾಖೆ ಅಭಿವೃದ್ಧಿಪಡಿಸಿದೆ. ಈ ಆ್ಯಪ್‌ನಲ್ಲಿ ನೋಂದಣಿ ಮಾಡಿಕೊಳ್ಳುವ ಮೂಲಕ ಸಾರ್ವಜನಿಕರು ಆನ್‌ಲೈನ್‌ನಲ್ಲಿ ಮದ್ಯವನ್ನು ಖರೀದಿಸಬಹುದು. ನೋಂದಣಿ ಮಾಡಿಕೊಳ್ಳುವ ವ್ಯಕ್ತಿಗೆ ಕನಿಷ್ಠ 21 ವರ್ಷ ವಯಸ್ಸಾಗಿರಬೇಕು. ಆ ವ್ಯಕ್ತಿಯು ತನ್ನ ಮನೆಯ ವಿಳಾಸ ಮತ್ತು ಸಂಪರ್ಕ ವಿವರವನ್ನು ಆ್ಯಪ್‌ನಲ್ಲಿ ನಮೂದಿಸಬೇಕಾಗುತ್ತದೆ. ಆನಂತರ ಆತನಿಗೆ ಹತ್ತಿರವಿರುವ ಮದ್ಯದ ಅಂಗಡಿಗಳು ಮತ್ತು ಅಲ್ಲಿ ಲಭ್ಯವಿರುವ ಮದ್ಯದ ವಿವರವನ್ನು ಆ್ಯಪ್ ಒದಗಿಸುತ್ತದೆ. ತನಗೆ ಬೇಕಿರುವ ಮದ್ಯವನ್ನು ವ್ಯಕ್ತಿಯು ಖರೀದಿಸಿ, ಶುಲ್ಕ ಪಾವತಿಸಿದರೆ ಆಯಿತು. ನಿಗದಿತ ಅವಧಿಯ ಒಳಗೆ ವ್ಯಕ್ತಿಯ ಮನೆ ಬಾಗಿಲಿಗೆ ಮದ್ಯವನ್ನು ಸರಬರಾಜು ಮಾಡಲಾಗುತ್ತದೆ.

ಛತ್ತೀಸಗಡ ಸರ್ಕಾರವು ಮದ್ಯದ ಹೋಂ ಡೆಲಿವರಿಗೆ ಒಮ್ಮೆಗೆ ₹120 ಶುಲ್ಕ ವಿಧಿಸುತ್ತದೆ. ಒಮ್ಮೆ ಆರ್ಡರ್ ಮಾಡಿದ ಮದ್ಯದ ಹೋಂ ಡೆಲಿವರಿ ಪೂರ್ಣವಾಗುವವರೆಗೆ, ಅದೇ ವ್ಯಕ್ತಿ ಮತ್ತೊಂದು ಆರ್ಡರ್ ಮಾಡಲು ಅವಕಾಶವಿಲ್ಲ. ಒಬ್ಬ ವ್ಯಕ್ತಿ ಒಮ್ಮೆಗೆ ಖರೀದಿಸಬಹುದಾದ ಮದ್ಯಕ್ಕೆ ಗರಿಷ್ಠ ಮಿತಿ ಅನ್ವಯವಾಗುತ್ತದೆ. ಈ ಆ್ಯಪ್ ಅನ್ನು 11 ಲಕ್ಷಕ್ಕೂ ಹೆಚ್ಚು ಮಂದಿ ಬಳಸುತ್ತಿದ್ದಾರೆ.

ಪಶ್ಚಿಮ ಬಂಗಾಳದಲ್ಲೂ ಇದೇ ಸ್ವರೂಪದ ಹೋಂ ಡೆಲಿವರಿ ವ್ಯವಸ್ಥೆ ಇದೆ. ಇದಕ್ಕಾಗಿ ಅಲ್ಲಿನ ಅಬಕಾರಿ ಇಲಾಖೆಯ ಜಾಲತಾಣದಲ್ಲಿ ಗ್ರಾಹಕ ತನ್ನನ್ನು ನೋಂದಾಯಿಸಿಕೊಳ್ಳಬೇಕು. ಆನ್‌ಲೈನ್‌ನಲ್ಲಿ ಮದ್ಯ ಖರೀದಿಸಿ, ಶುಲ್ಕ ಪಾವತಿ ಮಾಡಿದರೆ ಆಯಿತು. ಖರೀದಿಸಿದ ಮದ್ಯವು ಮನೆ ಬಾಗಿಲಿಗೆ ಬರುತ್ತದೆ. ಮದ್ಯವನ್ನು ಹೋಂ ಡೆಲಿವರಿ ಮಾಡಲು ಆಹಾರ ಸರಬರಾಜು ಆ್ಯಪ್‌ಗಳಾದ ಝೊಮೊಟೊ ಮತ್ತು ಸ್ವಿಗ್ಗಿಗೂ ರಾಜ್ಯ ಸರ್ಕಾರ ಈಚೆಗೆ ಅನುಮತಿ ನೀಡಿದೆ. ಇದಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಜಾರ್ಖಂಡ್‌ನಲ್ಲೂ ಈ ಆ್ಯಪ್‌ಗಳು ಮದ್ಯದ ಹೋಂ ಡೆಲಿವರಿ ಸೇವೆ ಆರಂಭಿಸಿವೆ. ಆದರೆ ಈ ಸೇವೆಯು ಕೆಲವು ನಗರಗಳಿಗಷ್ಟೇ ಸೀಮಿತವಾಗಿವೆ. ಬೇರೆ ರಾಜ್ಯಗಳಲ್ಲೂ ಈ ಸೇವೆಯನ್ನು ಆರಂಭಿಸಲು ಈ ಆ್ಯಪ್‌ಗಳು ಸಿದ್ಧತೆ ನಡೆಸಿವೆ. ಸರ್ಕಾರಗಳ ಜತೆ ಮಾತುಕತೆ ನಡೆಸುತ್ತಿವೆ.

ದೆಹಲಿಯಲ್ಲಿ ಬಿಯರ್ ಮತ್ತು ವೈನ್‌ ಅನ್ನು ಹೋಂ ಡೆಲಿವರಿ ಮಾಡಲು ಬಹಳ ವರ್ಷಗಳಿಂದಲೂ ಅವಕಾಶವಿದೆ. ಆದರೆ ಒಬ್ಬ ವ್ಯಕ್ತಿಗೆ ಸರಬರಾಜು ಮಾಡಬಹುದಾದ ಮದ್ಯದ ಪ್ರಮಾಣದ ಮೇಲೆ ಮಿತಿ ಇದೆ. ಲಾಕ್‌ಡೌನ್‌ನಲ್ಲಿ ದೆಹಲಿಯ ಕೆಲವು ವಸತಿ
ಪ್ರದೇಶಗಳಲ್ಲಿ ‘ಹಾಟ್‌ ಡ್ರಿಂಕ್ಸ್‌‌’ಗಳನ್ನೂ ಹೋಂ ಡೆಲಿವರಿ ಮಾಡಲು ಅವಕಾಶ ನೀಡಲಾಗಿತ್ತು.

ತಮಿಳುನಾಡು, ಒಡಿಶಾ ಮತ್ತು ಮಹಾರಾಷ್ಟ್ರಗಳಲ್ಲಿ ಲಾಕ್‌ಡೌನ್‌ ಅವಧಿಯಲ್ಲಿ ಮದ್ಯವನ್ನು ಹೋಂ ಡೆಲಿವರಿ ಮಾಡಲು ಅವಕಾಶ ನೀಡಲಾಗಿತ್ತು. ಲಾಕ್‌ಡೌನ್ ತೆರವಾದ ಕಾರಣ ಈ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ. ಮದ್ಯವನ್ನು ಹೋಂ ಡೆಲಿವರಿ ಮಾಡುವ ಸೇವೆಯನ್ನು ವಿಸ್ತರಿಸಲು, ಇದನ್ನು ಒಂದು ನವೋದ್ಯಮವಾಗಿ ಅಭಿವೃದ್ಧಿಪಡಿಸಲು ಸಾಕಷ್ಟು ಅವಕಾಶಗಳಿವೆ.

ಬೆಂಗಳೂರಿನಲ್ಲೂ ಇದೆ ‘ಹೋಂ ಡೆಲಿವರಿ’

ಬೆಂಗಳೂರಿನಲ್ಲಿ ಮಧುಲೋಕ ಪ್ರಾಂಚೈಸಿಯ ಮದ್ಯದ ಅಂಗಡಿಗಳು ಹೋಂ ಡೆಲಿವರಿ ಸೇವೆಯನ್ನು ಒದಗಿಸುತ್ತವೆ. ಕೆಲವು ಪ್ರಕಾರದ ಮದ್ಯವನ್ನು ಮಾತ್ರ ಹೋಂ ಡೆಲಿವರಿ ನೀಡಲಾಗುತ್ತದೆ. ಆದರೆ ನಗರದ ಕೆಲವು ಬಾರ್‌ ಮತ್ತು ರೆಸ್ಟೋರೆಂಟ್‌ಗಳು ಮದ್ಯವನ್ನು ಮನೆಗೆ ತಲುಪಿಸುವ ಸೇವೆಯನ್ನು ಒದಗಿಸುತ್ತವೆ.

ನಗರದ ವಿಜಯನಗರ ಮತ್ತು ರಾಜಾಜಿನಗರದ ಕೆಲವು ಮದ್ಯದ ಅಂಗಡಿಗಳು ಆಯ್ದ ಗ್ರಾಹಕರಿಗೆ ಮದ್ಯವನ್ನು ಮನೆಗೆ ಪೂರೈಸುತ್ತವೆ. ಆ ಅಂಗಡಿಗಳಿಗೆ ತೀರಾ ಪರಿಚಯವಿರುವ ಗ್ರಾಹಕರಿಗೆ ಈ ಸೇವೆ ಸಿಗುತ್ತದೆ. ಅಧಿಕೃತವಾಗಿ ಈ ಸೇವೆ ಲಭ್ಯವಿಲ್ಲ ಎಂಬುದನ್ನು ಆ ಅಂಗಡಿಗಳ ಗ್ರಾಹಕರು ಒಪ್ಪಿಕೊಳ್ಳುತ್ತಾರೆ. ಕೆಲವು ಸ್ಟಾರ್ಟ್‌ಅಪ್‌ಗಳು ಮದ್ಯವನ್ನು ಮನೆಗೆ ಪೂರೈಸುವ ಉದ್ಯಮವನ್ನು ವರ್ಷಗಳ ಹಿಂದೆಯೇ ಆರಂಭಿಸಿದ್ದವು. ಆದರೆ ಕಾರಣಾಂತರಗಳಿಂದ ಸೇವೆ ಸ್ಥಗಿತಗೊಳಿಸಿವೆ.

‘ರಾಜ್ಯದಲ್ಲಿ ಮದ್ಯವನ್ನು ಹೀಗೆ ಪೂರೈಸುವ ಸೇವೆ ಆರಂಭಿಸುವವರು ಮೊದಲು ಮದ್ಯ ಮಾರಾಟ ಪರವಾನಗಿ ಹೊಂದಿರಬೇಕು. ಮದ್ಯದ ಅಂಗಡಿ ನಡೆಸಲು ಅಗತ್ಯವಿರುವ ಎಲ್ಲಾ ಷರತ್ತುಗಳನ್ನು ಅವರು ಪೂರೈಸಬೇಕಾಗುತ್ತದೆ. ಅವರು ಅಂಗಡಿ ಹೊಂದಿರಬೇಕಾಗುತ್ತದೆ, ಸ್ಟಾಕ್‌ ನಿರ್ವಹಣೆ ಮಾಡಬೇಕಾಗುತ್ತದೆ ಮತ್ತು ಅಗತ್ಯ ತೆರಿಗೆಗಳನ್ನು ಪಾವತಿ ಮಾಡಬೇಕಾಗುತ್ತದೆ. ಪರವಾನಗಿ ಇಲ್ಲದ ಬೇರೊಂದು ಸ್ಟಾರ್ಟ್‌ಅಪ್ ಅಥವಾ ಮೂರನೇ ವ್ಯಕ್ತಿಯು ಮದ್ಯದ ಅಂಗಡಿಯಿಂದ ಮದ್ಯವನ್ನು ಖರೀದಿಸಿ ಅದನ್ನು ಗ್ರಾಹಕರಿಗೆ ಪೂರೈಸಲು ಅವಕಾಶವಿಲ್ಲ. ಹೀಗೆ ‘ಥರ್ಡ್‌ ಪಾರ್ಟಿ’ ಸಂಸ್ಥೆಯು ಮದ್ಯ ಮನೆಗೆ ಪೂರೈಸುವ ಉದ್ಯಮ ಆರಂಭಿಸುವುದು ಕಾನೂನುಬಾಹಿರ ಎನಿಸಿಕೊಳ್ಳುತ್ತದೆ. ರಾಜ್ಯ ಸರ್ಕಾರವು ಕಾನೂನಿನಲ್ಲಿ ಬದಲಾವಣೆ ತಂದರೆ ಪರವಾನಗಿ ಇಲ್ಲದವರೂ ಈ ಸೇವೆ ಆರಂಭಿಸಬಹುದು’ ಎನ್ನುತ್ತಾರೆ ವಕೀಲ ಕೆ.ಎಲ್. ಸ್ವಾಮಿ.

ಅಮೆಜಾನ್‌ನಲ್ಲಿ ಲಭ್ಯವಿತ್ತು...

ಇ–ಮಾರಾಟ ಪ್ಲಾಟ್‌ಫಾರಂ ಅಮೆಜಾನ್‌ನಲ್ಲಿ ಕೆಲವು ತಿಂಗಳ ಹಿಂದೆ ಬಿಯರ್, ವಿಸ್ಕಿ ಮತ್ತು ವೈನ್‌ಗಳನ್ನು ಮಾರಾಟ ಪಟ್ಟಿಯಲ್ಲಿ ನೀಡಲಾಗಿತ್ತು. ಇವುಗಳಿಗೆ ಸಂಬಂಧಿಸಿದ ಮಾರಾಟ ಪಟ್ಟಿ ಈಗಲೂ ಅಮೆಜಾನ್‌ನಲ್ಲಿ ಇದೆ. ಆದರೆ, ‘ಸ್ಟಾಕ್‌ ಇಲ್ಲ’ ಎಂದು ಘೋಷಣೆ ಮಾಡಲಾಗಿದೆ. ಆದರೆ ಆಲ್ಕೊಹಾಲ್‌ ರಹಿತ ಬಿಯರ್‌ ಲಭ್ಯವಿದೆ.

(ಆಧಾರ: ಪಿಟಿಐ, ಪ್ಲೇಸ್ಟೋರ್ ಮತ್ತು ಇತರ ಮೂಲಗಳಿಂದ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT