ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಳ–ಅಗಲ | ವನ್ಯಜೀವಿ ಕಾಯ್ದೆಗೆ ತಿದ್ದುಪಡಿ ಸಂರಕ್ಷಣೆ ನಿಯಮಗಳು ಸಡಿಲ

Last Updated 18 ಜನವರಿ 2023, 20:42 IST
ಅಕ್ಷರ ಗಾತ್ರ

ವನ್ಯಜೀವಿ (ಸಂರಕ್ಷಣಾ) ಕಾಯ್ದೆಗೆ ಕೇಂದ್ರ ಸರ್ಕಾರ ತಿದ್ದುಪಡಿ ತಂದಿದೆ. ಈ ತಿದ್ದುಪಡಿಗಳು ವನ್ಯಜೀವಿ ಸಂರಕ್ಷಣೆಯ ಕೆಲವು ಕಾನೂನುಗಳನ್ನು ದುರ್ಬಲಗೊಳಿಸುತ್ತವೆ ಎಂಬ ಆಕ್ಷೇಪ ಸಂಸತ್ತಿನ ಉಭಯ ಸದನಗಳಲ್ಲಿ ವ್ಯಕ್ತವಾಗಿತ್ತು. ‘ಸಂಸತ್ತಿನಲ್ಲಿ ವ್ಯಕ್ತವಾದ ಆಕ್ಷೇಪ ಮತ್ತು ವಿರೋಧಗಳನ್ನು ಗಣನೆಗೆ ತೆಗೆದುಕೊಳ್ಳದ ಕೇಂದ್ರ ಸರ್ಕಾರವು ತಿದ್ದುಪಡಿಗಳನ್ನು ಜಾರಿಗೆ ತಂದಿದೆ. ವನ್ಯಜೀವಿಗಳ ಸಂರಕ್ಷಣೆಯ ಕೆಲವು ನಿಯಮಗಳನ್ನು ತಿದ್ದುಪಡಿ ಕಾಯ್ದೆಯಲ್ಲಿ ಸಡಿಲಗೊಳಿಸಲಾಗಿದೆ ಮತ್ತು ರಾಜ್ಯ ಸರ್ಕಾರಗಳ ಅಧಿಕಾರಗಳನ್ನೂ ಮೊಟಕುಗೊಳಿಸಲಾಗಿದೆ‌’ ಎಂಬುದು ವಿರೋಧ ಪಕ್ಷಗಳ ಆಕ್ಷೇಪ

‘ಸಾಕಾನೆಯ ವಾಣಿಜ್ಯ ಬಳಕೆಗೆ ಅವಕಾಶ’
1972ರ ಮೂಲ ಕಾಯ್ದೆ ಮತ್ತು ಆನಂತರದ ತಿದ್ದುಪಡಿ ಕಾಯ್ದೆಯಲ್ಲಿ ವನ್ಯಜೀವಿಗಳ ಸಾಗಣೆ ಮತ್ತು ವಾಣಿಜ್ಯ ಬಳಕೆಗೆ ನಿರ್ಬಂಧ ಹೇರಲಾಗಿತ್ತು. ಈ ಕಾಯ್ದೆಗಳ ಸೆಕ್ಷನ್‌ 43ರಲ್ಲಿ ಇದನ್ನು ಉಲ್ಲೇಖಿಸಲಾಗಿದೆ. ಕೇಂದ್ರ ಸರ್ಕಾರವು ಈಗ ಜಾರಿಗೆ ತಂದಿರುವ ನೂತನ ತಿದ್ದುಪಡಿ ಕಾಯ್ದೆಯಲ್ಲಿ ಈ ಸೆಕ್ಷನ್‌ಗೆ ಹಲವು ಬದಲಾವಣೆಗಳನ್ನು ತಂದಿದೆ.

ತಿದ್ದುಪಡಿಯ ಮೂಲಕ ಕಾಯ್ದೆಯ 43(2) ಸೆಕ್ಷನ್‌ಗೆ ಹೊಸ ಅಂಶವನ್ನು ಸೇರಿಸಲಾಗಿದೆ. ‘ಸಾಕಾನೆಯ ಮಾಲೀಕತ್ವಕ್ಕೆ ಸಂಬಂಧಿಸಿದ ಪ್ರಮಾಣ ಪತ್ರ ಹೊಂದಿರುವ ವ್ಯಕ್ತಿಯು, ಅಂತಹ ಆನೆಯನ್ನು ಧಾರ್ಮಿಕ ಕಾರ್ಯಗಳಿಗೆ ಅಥವಾ ಯಾವುದೇ ಉದ್ದೇಶಕ್ಕೆ ಒಂದು ಜಾಗದಿಂದ ಮತ್ತೊಂದು ಜಾಗಕ್ಕೆ ಸಾಗಣೆ ಮಾಡಬಹುದು. ಈ ಸಂಬಂಧ ಕೇಂದ್ರ ಸರ್ಕಾರವು ಸೂಚಿಸುವ ಷರತ್ತುಗಳನ್ನು ಪೂರೈಸಬೇಕು’ ಎಂಬ ಹೊಸ ಅಂಶವನ್ನು ಈ ಸೆಕ್ಷನ್‌ಗೆ ಸೇರಿಸಲಾಗಿದೆ.

ಈ ಅಂಶಕ್ಕೆ ಸಂಸತ್ತಿನ ಉಭಯ ಸದನಗಳಲ್ಲೂ ತೀವ್ರ ಆಕ್ಷೇಪ ವ್ಯಕ್ತವಾಗಿತ್ತು. ಧಾರ್ಮಿಕ ಕಾರ್ಯಗಳಿಗೆ ಆನೆಗಳನ್ನು ಒಂದು ಕಡೆಯಿಂದ ಮತ್ತೊಂದು ಕಡೆಗೆ ಸಾಗಿಸಲು ಇದು ಅವಕಾಶ ಮಾಡಿಕೊಡುತ್ತದೆ. ಆನೆಯ ಮಾಲೀಕತ್ವದ ಪ್ರಮಾಣಪತ್ರ ಹೊಂದಿರುವವರು ಈ ಅಂಶವನ್ನು ಬಳಸಿಕೊಂಡು, ಹಣ ಪಡೆದು ಆನೆಯನ್ನು ಧಾರ್ಮಿಕ ಚಟುವಟಿಕೆಗಳಿಗೆ ಒದಗಿಸುವ ಸಾಧ್ಯತೆ ಇರುತ್ತದೆ. ಇದರಿಂದ ವನ್ಯಜೀವಿಯನ್ನು ವಾಣಿಜ್ಯ ಉದ್ದೇಶಕ್ಕೆ ಬಳಸಿಕೊಂಡಂತೆ ಆಗುತ್ತದೆ ಎಂದು ಟಿಎಂಸಿ ಸಂಸದೆ ಸುಶ್ಮಿತಾ ದೇವ್ ಆಕ್ಷೇಪ ವ್ಯಕ್ತಪಡಿಸಿದ್ದರು. ಕಾಂಗ್ರೆಸ್‌ನ ಸಂಸದರೂ ಈ ಆಕ್ಷೇಪಕ್ಕೆ ದನಿಗೂಡಿಸಿದ್ದರು.

ತಿದ್ದುಪಡಿ ಕಾಯ್ದೆಯಲ್ಲಿ, ‘ಯಾವುದೇ ಉದ್ದೇಶಕ್ಕೆ’ ಎಂಬ ಅಂಶವನ್ನು ಸೇರಿಸಲಾಗಿದೆ. ಆದರೆ ಆ ಉದ್ದೇಶಗಳು ಯಾವುವು ಎಂಬುದನ್ನು ಸ್ಪಷ್ಟಪಡಿಸಿಲ್ಲ. ಕಾಯ್ದೆಯಲ್ಲಿ ಸ್ಪಷ್ಟತೆ ಇಲ್ಲದೇ ಇರುವುದರಿಂದ ಸಾಕಾನೆಗಳ ದುರ್ಬಳಕೆಗೆ ಅವಕಾಶ ಮಾಡಿಕೊಟ್ಟಂತಾಗುತ್ತದೆ. ಸಾಕಾನೆಗಳನ್ನು ವಾಣಿಜ್ಯ ಉದ್ದೇಶಕ್ಕೆ ಬಳಸಿಕೊಳ್ಳಲೂ ಇದು ಅವಕಾಶ ಮಾಡಿಕೊಡುತ್ತದೆ. ಈ ಅಂಶದ ಬಗ್ಗೆ ಸಂಸತ್ತಿನಲ್ಲಿ ಟಿಎಂಸಿ ಮತ್ತು ಕಾಂಗ್ರೆಸ್‌ನ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದ್ದರು. ಆದರೆ, ಸರ್ಕಾರವು ಈ ಅಂಶವನ್ನು ಉಳಿಸಿಕೊಂಡು ಕಾಯ್ದೆ ಜಾರಿಗೊಳಿಸಿದೆ.

‘ದೇಶದಲ್ಲಿ 2,675 ಸಾಕಾನೆಗಳಿದ್ದು, ಅವುಗಳಲ್ಲಿ 1,251 ಅನೆಗಳಿಗೆ ಸಂಬಂಧಿಸಿದಂತೆ ಮಾತ್ರ ಮಾಲೀಕತ್ವ ಪ್ರಮಾಣಪತ್ರವನ್ನು ನೀಡಲಾಗಿದೆ. 1,424 ಆನೆಗಳ ಮಾಲೀಕರು ಯಾರು ಎಂಬುದೇ ನಿರ್ಧಾರವಾಗಿಲ್ಲ. ಈ ಸಮಸ್ಯೆಯನ್ನು ಬಗೆಹರಿಸಲು ಸರ್ಕಾರವು ಕ್ರಮ ತೆಗೆದುಕೊಂಡಿಲ್ಲ. ಬದಲಿಗೆ ಸಾಕಾನೆಗಳನ್ನು ಯಾವುದೇ ಉದ್ದೇಶಕ್ಕೆ ಬಳಸಿಕೊಳ್ಳಲು ಅವಕಾಶ ಮಾಡಿಕೊಟ್ಟು, ಸಮಸ್ಯೆಯನ್ನು ಹೆಚ್ಚಿಸಿದೆ’ ಎಂದು ಕಾಂಗ್ರೆಸ್‌ ಸಂಸದ ವಿವೇಕ್ ತಂಖಾ ಅವರು ಮಸೂದೆ ಮೇಲಿನ ಚರ್ಚೆ ವೇಳೆ ಆಕ್ಷೇಪ ವ್ಯಕ್ತಪಡಿಸಿದ್ದರು.

ಕೀಟಗಳ ಸಂರಕ್ಷಣೆ ಕಡೆಗಣನೆ
1972ರ ವನ್ಯಜೀವಿ ಸಂರಕ್ಷಣಾ ಕಾಯ್ದೆಯಲ್ಲಿ ಸಂರಕ್ಷಿತ ಪ್ರಭೇದಗಳನ್ನು ವರ್ಗೀಕರಿಸಲಾಗಿದೆ. ಈ ವರ್ಗೀಕರಣದ ಷೆಡ್ಯೂಲ್‌ 2ರ 2ನೇ ಭಾಗದಲ್ಲಿ ಕೀಟಗಳಿಗೆ ಸಂರಕ್ಷಣೆ ನೀಡಲಾಗಿತ್ತು. ತಿದ್ದುಪಡಿ ಕಾಯ್ದೆಯಲ್ಲೂ ಷೆಡ್ಯೂಲ್‌ 2ರ 2ನೇ ಚಾಪ್ಟರ್‌ ಹೆಸರಿನಲ್ಲಿ ಕೀಟಗಳ ಸಂರಕ್ಷಣೆಗೆ ಅವಕಾಶ ಕೊಡಲಾಗಿದೆ. ಆದರೆ, ಕೀಟಗಳನ್ನು ಹೊಂದುವ, ಸಾಗಿಸುವುದರ ಮೇಲಿದ್ದ ನಿರ್ಬಂಧಗಳನ್ನು ತಿದ್ದುಪಡಿ ಕಾಯ್ದೆಯಲ್ಲಿ ಸಡಿಲಗೊಳಿಸಲಾಗಿದೆ.

ಮೂಲ ಕಾಯ್ದೆಯ ಸೆಕ್ಷನ್‌ 48, 49ಎ, 51ಎ, 40, 40ಎ ಮತ್ತು 41ನೇ ಸೆಕ್ಷನ್‌ಗಳಿಂದ ‘ಷೆಡ್ಯೂಲ್‌ 2ರ 2ನೇ ಭಾಗ’ ಎಂಬ ಉಲ್ಲೇಖವನ್ನು ಕೈಬಿಡಲಾಗಿದೆ. ಕೀಟಗಳನ್ನು ಜೀವಂತವಾಗಿ ಹಿಡಿದಿಟ್ಟುಕೊಳ್ಳುವ ಅಥವಾ ಅವುಗಳ ಕಳೇಬರಗಳನ್ನು ಸಂಸ್ಕರಿಸಿ ಇಟ್ಟುಕೊಳ್ಳುವ, ಅಂತಹ ಸಂಗ್ರಹವನ್ನು ಸಾಗಿಸುವ ಚಟುವಟಿಕೆಗಳ ಮೇಲೆ ಈ ಸೆಕ್ಷನ್‌ಗಳು ನಿರ್ಬಂಧ ಹೇರುತ್ತವೆ. ಈ ಸೆಕ್ಷನ್‌ಗಳಿಂದ ಕೀಟಗಳನ್ನು ಹೊರಗಿಟ್ಟಿರುವ ಕಾರಣ, ಯಾರು ಬೇಕಾದರೂ ಅವುಗಳನ್ನು ಸಂಗ್ರಹಿಸಿ ಮತ್ತು ಸಂಸ್ಕರಿಸಿ ಇಟ್ಟುಕೊಳ್ಳುವುದು ಸಾಧ್ಯವಾಗುತ್ತದೆ. ಸಾಗಣೆಗೂ ಅವಕಾಶ ಇರುವ ಕಾರಣ ಇದು ಕಳ್ಳಸಾಗಣೆಗೆ ಅವಕಾಶ ಮಾಡಿಕೊಡುತ್ತದೆ ಎಂದು ತಜ್ಞರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಕಾಮಗಾರಿಗಳಿಗೆ ಅವಕಾಶ?: ಅರಣ್ಯ ಪ್ರದೇಶದ ಒಳಗೆ ಮತ್ತು ಅಂಚಿನಲ್ಲಿ ಇರುವವರು ಅರಣ್ಯದಲ್ಲಿರುವ ನೀರಿನ ಮೂಲಗಳನ್ನು ಬಳಸಲು ತಿದ್ದುಪಡಿ ಕಾಯ್ದೆಯು ಅವಕಾಶ ಮಾಡಿಕೊಡುತ್ತದೆ. ಆದರೆ ಬಳಕೆಯ ಸ್ವರೂಪ ಎಂತದ್ದು ಮತ್ತು ನೀರನ್ನು ಅರಣ್ಯದಿಂದ ಹೊರಗೆ ಸಾಗಿಸುವ ವಿಧಾನ ಎಂತದ್ದು ಎಂಬುದನ್ನು ಕಾಯ್ದೆಯಲ್ಲಿ ಸ್ಪಷ್ಟಪಡಿಸಿಲ್ಲ. ಹೀಗಾಗಿ ಅರಣ್ಯ ಪ್ರದೇಶದಲ್ಲಿ ನೀರು ಸಾಗಣೆ ಕಾಮಗಾರಿಗಳನ್ನು ನಡೆಸಲು ಈ ತಿದ್ದುಪಡಿಯು ಅವಕಾಶ ಮಾಡಿಕೊಟ್ಟಿದೆ ಎಂದು ಸಂಸತ್ತಿನಲ್ಲಿ ಆಕ್ಷೇಪ ವ್ಯಕ್ತವಾಗಿತ್ತು. ಹೀಗಿದ್ದೂ ಈ ಅಂಶವನ್ನು ಸರ್ಕಾರವು ತಿದ್ದುಪಡಿ ಕಾಯ್ದೆಯಲ್ಲಿ ಉಳಿಸಿಕೊಂಡಿದೆ.

‘ರಾಜ್ಯಗಳ ಅಧಿಕಾರ ಮೊಟಕು’
ವನ್ಯಜೀವಿ ಸಂರಕ್ಷಣೆಯಲ್ಲಿ ರಾಜ್ಯ ಸರ್ಕಾರಗಳಿಗೆ ಇದ್ದ ಅಧಿಕಾರವನ್ನು ಈ ತಿದ್ದುಪಡಿಗಳು ಮೊಟಕುಗೊಳಿಸುತ್ತವೆ ಎಂದು ಆರ್‌ಜೆಡಿ ಸಂಸದರು ಸಂಸತ್ತಿನಲ್ಲಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. ಆದರೆ, ಕೇಂದ್ರ ಸರ್ಕಾರವು ಅಂತಹ ತಿದ್ದುಪಡಿ ಅಂಶಗಳನ್ನು ತಿದ್ದುಪಡಿ ಕಾಯ್ದೆಯಲ್ಲಿಯೂ ಉಳಿಸಿಕೊಂಡಿದೆ.

ವನ್ಯಜೀವಿ ಸಂರಕ್ಷಣೆ ವಿಚಾರವು ಸಮವರ್ತಿ ಪಟ್ಟಿಯಲ್ಲಿ ಬರುತ್ತವೆ. ಅಂದರೆ ಈ ವಿಚಾರದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಮಾನ ಅಧಿಕಾರ ಹೊಂದಿವೆ. ವನ್ಯಜೀವಿ ಸಂರಕ್ಷಣೆಗೆ ಸಂಬಂಧಿಸಿದ ಯಾವುದೇ ಕ್ರಮಗಳನ್ನು ಕೇಂದ್ರ ಸೂಚಿಸಿದರೂ, ರಾಜ್ಯ ವನ್ಯಜೀವಿ ಮಂಡಳಿಗಳು ಅದನ್ನು ಅನುಮೋದಿಸಬೇಕಿತ್ತು. ರಾಜ್ಯ ವನ್ಯಜೀವಿ ಮಂಡಳಿಗಳ ಶಿಫಾರಸಿನಂತೆ ರಾಜ್ಯ ಸರ್ಕಾರಗಳು ನಡೆದುಕೊಳ್ಳಬೇಕು ಎಂದು 1972ರ ಮೂಲ ಕಾಯ್ದೆಯ ಹಲವು ಸೆಕ್ಷನ್‌ಗಳಲ್ಲಿ ವಿವರಿಸಲಾಗಿದೆ. ಈ ಅಂಶಕ್ಕೆ ಕೇಂದ್ರ ಸರ್ಕಾರವು ತಿದ್ದುಪಡಿ ತಂದಿದೆ.

ಮೂಲ ಕಾಯ್ದೆಯ ಹಲವು ಸೆಕ್ಷನ್‌ಗಳಲ್ಲಿ ರಾಜ್ಯ ವನ್ಯಜೀವಿ ಮಂಡಳಿಯನ್ನು ‘ಮಂಡಳಿ’ ಎಂದಷ್ಟೇ ಉಲ್ಲೇಖಿಸಲಾಗಿತ್ತು. ತಿದ್ದುಪಡಿ ಕಾಯ್ದೆಯ ಹಲವು ಸೆಕ್ಷನ್‌ಗಳಲ್ಲಿ ‘ಮಂಡಳಿ’ ಎಂಬ ಪದವನ್ನು ‘ರಾಷ್ಟ್ರೀಯ ಮಂಡಳಿ’ ಎಂದು ಬದಲಿಸಲಾಗಿದೆ. ಹೀಗೆ ಅನ್ವಯವಾಗುವ ಸೆಕ್ಷನ್‌ಗಳ ಅಡಿಯಲ್ಲಿ ರಾಜ್ಯ ವನ್ಯಜೀವಿ ಮಂಡಳಿಗೆ ಇದ್ದ ಅಧಿಕಾರವನ್ನು ‘ರಾಷ್ಟ್ರೀಯ ಮಂಡಳಿ’ಗೆ ವರ್ಗಾಯಿಸಲಾಗಿದೆ. ಈ ಸೆಕ್ಷನ್‌ಗಳಿಗೆ ಸಂಬಂಧಿಸಿದ ನಿರ್ಧಾರ ಮತ್ತು ಕ್ರಮಗಳನ್ನು ತೆಗೆದುಕೊಳ್ಳಲು ರಾಷ್ಟ್ರೀಯ ಮಂಡಳಿಯ ಶಿಫಾರಸು ಮತ್ತು ಸೂಚನೆಗಳಿಗೆ ರಾಜ್ಯ ಸರ್ಕಾರವು ಬದ್ಧವಾಗಿರಬೇಕಾಗುತ್ತದೆ.

‘ಈ ತಿದ್ದುಪಡಿಯು, ರಾಜ್ಯ ವನ್ಯಜೀವಿ ಮಂಡಳಿಯನ್ನು ನಿಷ್ಕ್ರಿಯಗೊಳಿಸುತ್ತದೆ. ರಾಜ್ಯಗಳಿಗೆ ಸಂಬಂಧಿಸಿದ ಚಟುವಟಿಕೆಗಳಲ್ಲೂ ಕೇಂದ್ರ ಸರ್ಕಾರವು ಹಸ್ತಕ್ಷೇಪ ಮಾಡಲು ಇದು ಅವಕಾಶ ಮಾಡಿಕೊಡುತ್ತದೆ. ಇದು ಒಕ್ಕೂಟ ವ್ಯವಸ್ಥೆಗೆ ವಿರುದ್ಧವಾದುದು’ ಎಂದು ಆರ್‌ಜೆಡಿ ಸಂಸದ ಮನೋಜ್ ಝಾ ಆಕ್ಷೇಪ ವ್ಯಕ್ತಪಡಿಸಿದ್ದರು.

ಪ್ರಾಣಿಗಳ ಮಾರಾಟ, ಸಾಗಣೆಗೆ ಇಲ್ಲ ಅಡ್ಡಿ
ಅಳಿವಿನಂಚಿನಲ್ಲಿರುವ ವನ್ಯಜೀವಿ ಮತ್ತು ಸಸ್ಯಪ್ರಭೇದಗಳ ಅಂತರರಾಷ್ಟ್ರೀಯ ವ್ಯಾಪಾರ ಒಡಂಬಡಿಕೆಯಲ್ಲಿ (ಸಿಐಟಿಇಎಸ್) ಪಟ್ಟಿ ಮಾಡಲಾಗಿರುವ ಪ್ರಾಣಿಗಳು ಮತ್ತು ಸಸ್ಯಗಳನ್ನು ಹೊಂದಲು, ವರ್ಗಾಯಿಸಲು ಮತ್ತು ಮಾರಾಟ ಮಾಡಲು ವನ್ಯಜೀವಿ ತಿದ್ದುಪಡಿ ಕಾಯ್ದೆ–2022 ಅವಕಾಶ ಮಾಡಿಕೊಟ್ಟಿದೆ. ಪಟ್ಟಿ ಮಾಡಲಾದ ಪ್ರಭೇದಗಳ ಮಾದರಿಗಳ ವ್ಯಾಪಾರವನ್ನು ಪರವಾನಗಿ ಮೂಲಕ ನಿಯಂತ್ರಿಸುವುದು ಈ ಒಡಂಬಡಿಕೆಯಲ್ಲಿದೆ. ಈ ಒಡಂಬಡಿಕೆಯನ್ನು ಪಾಲಿಸುವ ಉದ್ದೇಶದಿಂದ ಕಾಯ್ದೆಯಲ್ಲಿ ಅದಕ್ಕೆ ಅನುಗುಣವಾದ ತಿದ್ದುಪಡಿಗಳನ್ನು ಕೇಂದ್ರ ಸರ್ಕಾರ ಮಾಡಿದೆ. ವನ್ಯಜೀವಿ ಮತ್ತು ಸಸ್ಯಗಳ ಮಾರಾಟ, ಆಮದು, ತಡೆ ಹಾಗೂ ನಿಯಂತ್ರಿಸುವ ಸಂಪೂರ್ಣ ಅಧಿಕಾರದ ಕೇಂದ್ರ ಸರ್ಕಾರದ ಅಧೀನದಲ್ಲಿರುತ್ತದೆ.

ಪ್ರಾಣಿಗಳ ಮಾರಾಟ, ವರ್ಗಾವಣೆ ಅಥವಾ ಅವುಗಳನ್ನು ಇರಿಸಿಕೊಳ್ಳಲು ವನ್ಯಜೀವಿ ತಿದ್ದುಪಡಿ ಕಾಯ್ದೆಯಲ್ಲಿ ಷರತ್ತಿನ ಅನುಮತಿ ನೀಡಲಾಗಿದೆ. ನಾಲ್ಕನೇ ಷೆಡ್ಯೂಲ್‌ನಲ್ಲಿ ಉಲ್ಲೇಖಿಸಲಾಗಿರುವ ಪ್ರಾಣಿ ಪ್ರಭೇದಗಳು ಹಾಗೂ ಸಸ್ಯ ಪ್ರಭೇದ ಗಳನ್ನು ಮಾತ್ರ ಈ ಉದ್ದೇಶಗಳಿಗೆ ಬಳಸಿಕೊಳ್ಳಬಹುದು. ವ್ಯಕ್ತಿಯೊಬ್ಬರು ತಮ್ಮ ವಶದಲ್ಲಿರುವ ಪ್ರಾಣಿಯ ಒಡೆತನವನ್ನು ಅಕ್ರಮವಾಗಿ ಹೊಂದುವ ಬದಲು, ಸಂಬಂಧಿತ ಪ್ರಾಧಿಕಾರಕ್ಕೆ ಮಾಹಿತಿ ನೀಡಿ ಅದನ್ನು ಕಾನೂನುಬದ್ಧವಾಗಿಸಿಕೊಳ್ಳಲು ಕಾಯ್ದೆಯಲ್ಲಿ ಅವಕಾಶ ಕಲ್ಪಿಸಲಾಗಿದೆ.

ನಿರ್ವಹಣಾ ಪ್ರಾಧಿಕಾರಕ್ಕೆ ಅರ್ಜಿ ಸಲ್ಲಿಸಿ, ಪ್ರಮಾಣಪತ್ರ ಪಡೆದುಕೊಳ್ಳುವ ಮೂಲಕ ಅವುಗಳನ್ನು ಮಾರಾಟ ಮಾಡುವ, ಇರಿಸಿಕೊಳ್ಳುವ, ವರ್ಗಾಯಿಸುವ ಅವಕಾಶ ಪಡೆದುಕೊಳ್ಳಬಹುದು. ಎಲ್ಲವನ್ನೂ ಪ್ರಾಧಿಕಾರದ ಗಮನಕ್ಕೆ ತರಬೇಕು. ತಮ್ಮ ಬಳಿಯಿರುವ, ಪ್ರಾಣಿ ಪ್ರಭೇದಗಳ ಸಂತಾನ ಬೆಳೆದರೆ ಅಥವಾ ಅವು ಮೃತಪಟ್ಟರೆ, ಈ ಮಾಹಿತಿಯನ್ನೂ ಸಂಬಂಧಿತ ಪ್ರಾಧಿಕಾರಕ್ಕೆ ನೀಡಬೇಕಿದೆ.

ನಿಯಮಗಳನ್ನು ಉಲ್ಲಂಘಿಸಿದರೆ ವಿಧಿಸುವ ದಂಡದ ಪ್ರಮಾಣವನ್ನು ತಿದ್ದುಪಡಿ ಕಾಯ್ದೆಯಲ್ಲಿ ಹೆಚ್ಚಿಸಲಾಗಿದೆ. ಸಾಮಾನ್ಯ ಉಲ್ಲಂಘನೆಗಳಿಗೆ ಇದ್ದ ದಂಡ ವನ್ನು ₹ 25,000ದಿಂದ ₹ 1 ಲಕ್ಷಕ್ಕೆ ಏರಿಸಲಾಗಿದೆ. ವಿಶೇಷ ಪ್ರಾಣಿಗಳ ಪ್ರಕರಣದಲ್ಲಿ ಇದ್ದ ಕನಿಷ್ಠ ದಂಡವನ್ನು ₹ 10,000ದಿಂದ ₹ 25,000ಕ್ಕೆ ಏರಿಸಲಾಗಿದೆ.

ಆಧಾರ: ವನ್ಯಜೀವಿ ಸಂರಕ್ಷಣಾ ಕಾಯ್ದೆ–1972, ವನ್ಯಜೀವಿ ಸಂರಕ್ಷಣಾ ತಿದ್ದುಪಡಿ ಮಸೂದೆ–2022, ವನ್ಯಜೀವಿ ಸಂರಕ್ಷಣಾ ತಿದ್ದುಪಡಿ ಕಾಯ್ದೆ–2022, ಪಿಟಿಐ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT