ಶನಿವಾರ, ಆಗಸ್ಟ್ 15, 2020
27 °C

ಅನುಭವ ಮಂಟಪ | ಜಮೀನು ಮಾರಾಟ ಸರಳ, ಸರ್ಕಾರಿ ಜೀತದಿಂದ ರೈತರಿಗೆ ಮುಕ್ತಿ

ಡಿ.ಪಿ. ಸತೀಶ್ Updated:

ಅಕ್ಷರ ಗಾತ್ರ : | |

Farmers

ಕರ್ನಾಟಕ ಭೂ ಸುಧಾರಣೆ ಕಾಯ್ದೆಗೆ ತಿದ್ದುಪಡಿ ತಂದು, ನಿಯಮ79 ಎ ಮತ್ತು ಬಿ ರದ್ದುಪಡಿಸುವ ಬಿ.ಎಸ್. ಯಡಿಯೂರಪ್ಪ ನೇತೃತ್ವದ ಸರ್ಕಾರದ ನಿರ್ಧಾರ ಖಂಡಿಸಿ ಹಲವಾರು ಜನ ಕಳೆದ 15 ದಿನಗಳಿಂದ ನಿರಂತರವಾಗಿ ಲೇಖನಗಳನ್ನು ಬರೆದಿದ್ದಾರೆ, ಸಾಮಾಜಿಕ ಜಾಲತಾಣಗಳಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಹಾಗೂ ಪ್ರತಿಭಟನೆಯ ಎಚ್ಚರಿಕೆ ನೀಡಿದ್ದಾರೆ.

ಇವುಗಳನ್ನು ನೋಡಿದರೆ ಇಡೀ ರೈತ ಸಮುದಾಯವೇ ಈ ರದ್ದತಿಯ ವಿರುದ್ಧ ನಿಂತಿದೆ, ಇದರಿಂದ ಕರ್ನಾಟಕದ ಎಲ್ಲ ರೈತರು ತಮ್ಮ, ಮನೆ ಮಠ ಕಳೆದುಕೊಂಡು ಬೀದಿಪಾಲಾಗಲಿದ್ದಾರೆ ಎಂದು ಅನಿಸಬಹುದು. ಆದರೆ ವಸ್ತುಸ್ಥಿತಿ ಬೇರೆಯೇ ಇದೆ.

ಬಹುತೇಕ ರೈತರು ಈ ತಿದ್ದುಪಡಿಯನ್ನು ಕಾತರದಿಂದ ಎದುರು ನೋಡುತ್ತಿದ್ದಾರೆ. ರೈತರು ತಮ್ಮ ಜಮೀನನ್ನು ಬೇಕಾದವರಿಗೆ, ಮಾರುಕಟ್ಟೆ ಬೆಲೆಗೆ ಮಾರುವುದಕ್ಕೆ ಅವರ ಮೇಲೆ ಹಲವಾರು ನಿರ್ಬಂಧಗಳನ್ನು ವಿಧಿಸಿದ್ದ ನಿಯಮ 79 ಎ ಮತ್ತು ಬಿ, ನಮ್ಮ ಕೃಷಿಕರನ್ನು ಸರ್ಕಾರದ ಜೀತದಾಳುಗಳನ್ನಾಗಿ ಮಾಡಿತ್ತು.

ಭೂ ಸುಧಾರಣೆಗೆ ಮೊದಲು ಬಹುತೇಕ ರೈತರು ಜಮೀನ್ದಾರರ ಜೀತದಾಳುಗಳಾಗಿದ್ದರು. ಅದಾದ ನಂತರ ಅವರು ಸರ್ಕಾರದ ಜೀತದಾಳುಗಳಾದರು. ತಾವೇ ಮಾಲೀಕತ್ವ ಹೊಂದಿರುವ ಜಮೀನನ್ನು ಬೇರೆಯವರಿಗೆ ಸರಾಗವಾಗಿ ಮಾರಲು ಆಗದಂತೆ ಸರ್ಕಾರ ನೂರಾರು ಅಡೆತಡೆಗಳನ್ನು ರೈತರ ಹಿತರಕ್ಷಣೆ ಹೆಸರಲ್ಲಿ ನಿರ್ಮಿಸಿ, ಅನ್ನದಾತರ ಕತ್ತು ಹಿಸುಕುತ್ತಿತ್ತು.

ಸಣ್ಣ ಪುಟ್ಟ ಜಮೀನು ಹೊಂದಿರುವ ರೈತರು ಅದನ್ನು ರೈತರಲ್ಲದವರಿಗೆ ಮಾರಲು ಸಾಧ್ಯವಾಗದಿದ್ದುದರಿಂದ ಒಂದೋ ಬಡತನದಲ್ಲೇ ಬದುಕುವ ಅಥವಾ ಕಳ್ಳದಾರಿಯಿಂದ ಕಾನೂನಿನ ಕೆಳಗೆ ನುಸುಳಿ ಅಧಿಕಾರಿಗಳಿಗಳಿಗೆ ಭಾರಿ ಲಂಚ ನೀಡಿ ನಿಯಮ ಉಲ್ಲಂಘಿಸಿ ಮಾರುವ ಪರಿಸ್ಥಿತಿ ಉಂಟಾಗಿತ್ತು.

1974ರಲ್ಲಿ ಮತ್ತು 1990ರ ದಶಕದ ಮೊದಲ ಭಾಗದಲ್ಲಿ ರೈತರು ಜಮೀನು ಕೊಳ್ಳಲು ಆದಾಯದ ಮಿತಿಯನ್ನು ನಿಗದಿ ಮಾಡಿದ್ದರೂ, ಅದು ಅಲ್ಪ ಮೊತ್ತವಾದ್ದರಿಂದ ಅವರೂ ಜಮೀನು ಖರೀದಿಸಲು ಸುಳ್ಳು ಆದಾಯ ಪ್ರಮಾಣಪತ್ರ ನೀಡಿ ಕಂದಾಯ ಇಲಾಖೆಯಲ್ಲಿ ಎಲ್ಲರ ಕೈ ಬೆಚ್ಚಗೆ ಮಾಡುವ ಸ್ಥಿತಿ ಇತ್ತು.

ಇನ್ನು ಜಮೀನು ಮಾರಿದವರು ಕೂಡಾ ಮಾದಕವಸ್ತು ಮಾರಿದವರಂತೆ ತಲೆತಗ್ಗಿಸುವ ಮತ್ತು ಖರೀದಿಸಿದವರು, ತಮ್ಮ ವ್ಯವಹಾರ ರದ್ದಾಗಿ, ಕಷ್ಟಪಟ್ಟು ಗಳಿಸಿದ ಹಣ ಸರ್ಕಾರದ ಪಾಲಾಗದಿರಲಿ ಎಂದು ದೇವರಿಗೆ ಮೊರೆಹೋಗುವ ಸ್ಥಿತಿಯನ್ನು ಈ ಮೂರ್ಖ ಕಾನೂನು ತಂದಿತ್ತು. ಭೂ ನ್ಯಾಯಾಲಯ ಮತ್ತು ಇತರ ಸಿವಿಲ್ ಕೋರ್ಟ್‌ಗಳಲ್ಲಿ ಕಾನೂನು ಉಲ್ಲಂಘನೆಯ ಹತ್ತಾರು ಸಾವಿರ ಪ್ರಕರಣಗಳು ದಾಖಲಾಗಿ ವಕೀಲರ ಜೇಬು ತುಂಬಿಸಲು ಅನುಕೂಲವಾಗಿತ್ತು.

ಕಷ್ಟದ ದಿನಗಳಲ್ಲಿ ಜಮೀನು ಮಾರಲಾಗದೆ ಕೆಲವು ರೈತರು ಆತ್ಮಹತ್ಯೆ ಮಾಡಿಕೊಂಡರೆ, ಬಹುತೇಕರು ಜಮೀನನ್ನು ಹಾಳುಬಿಟ್ಟು, ಜೀವನೋಪಾಯಕ್ಕೆ ನಗರಗಳಿಗೆ ವಲಸೆ ಹೋಗುವ ಪ್ರಸಂಗ ಬಂದಿತ್ತು.

ಕೃಷಿಯಲ್ಲಿ ತೊಡಗಿಸಿಕೊಳ್ಳುವ ಉದ್ದೇಶವಿದ್ದ ಸಾವಿರಾರು ಜನರು ಇಂತಹ ಕಟ್ಟಲೆಗಳಿಂದ ಬೇಸತ್ತು ಪಕ್ಕದ ತಮಿಳುನಾಡು ಮತ್ತು ಆಂಧ್ರಪ್ರದೇಶದಲ್ಲಿ ಭೂಮಿ ಖರೀದಿಸಿದರು. ಇದರಿಂದಾಗಿ, ನಮ್ಮ ರೈತರಿಗೆ ಸಿಗಬಹುದಾದ ಹಣ ಅಲ್ಲಿಗೆ ಹೋಗುವಂತೆ ಆಯಿತು. ನಮ್ಮ ರಾಜ್ಯದಲ್ಲಿ ಮಾಹಿತಿ ತಂತ್ರಜ್ಞಾನ ಮತ್ತು ಇತರ ಉದ್ಯೋಗಗಳಲ್ಲಿರುವ ಹಲವರು ಬೆಂಗಳೂರಿನ ಪಕ್ಕದಲ್ಲೇ ಇರುವ ಹೊಸೂರು, ತಳಿ, ಡೆಂಕಣಿಕೋಟೆ, ಕೃಷ್ಣಗಿರಿ, ನೀಲಗಿರಿ, ಸೇಲಂ, ಈರೋಡ್ ಜಿಲ್ಲೆಗಳಲ್ಲಿ ಜಮೀನು ಖರೀದಿಸಿ ಕೃಷಿಯಲ್ಲಿ ಪ್ರಯೋಗ ನಡೆಸುತ್ತಿದ್ದಾರೆ.

ಆದರೆ ಕಾಯ್ದೆಗೆ ತಿದ್ದುಪಡಿ ತಂದರೆ, ರೈತರ ಜಮೀನು ಶ್ರೀಮಂತರ ಪಾಲಾಗುತ್ತದೆ, ಬೇಸಾಯಗಾರರು ಬೀದಿಪಾಲಾಗುತ್ತಾರೆ ಎಂದು  ರೈತರ ಹಿತಾಸಕ್ತಿ ರಕ್ಷಿಸುವ ಹೊಣೆ ತಮ್ಮದು ಎಂದು ಸ್ವಯಂಘೋಷಿಸಿಕೊಂಡ ಕೆಲವು ಸಂಘಟನೆಗಳು, ವಿಷಯದ ನಿಜಸ್ಥಿತಿ ಅರಿವಿಲ್ಲದ ಮಾಧ್ಯಮಗಳು ಮಾತ್ರ ಹುಯಿಲೆಬ್ಬಿಸುತ್ತಿವೆ. ಹೋರಾಟಗಾರರು ಇವರಿಗೆ ಜತೆಯಾಗಿದ್ದಾರೆ. ಯಾವುದೇ ಸರ್ಕಾರ ಈ ಕಾಯ್ದೆಯ ತಂಟೆಗೆ ಹೋಗದಂತೆ ಕಳೆದ ಸುಮಾರು 50 ವರ್ಷಗಳಿಂದ ಇವರೆಲ್ಲರೂ ಜಾಗಟೆ ಬಾರಿಸುತ್ತಲೇ ಬಂದಿದ್ದಾರೆ.

ಜಮೀನಿನ ಮಾಲೀಕತ್ವ ಹೊಂದಿರುವ ರೈತ, ಅದನ್ನು ಬೇಕಾದವರಿಗೆ ಮಾರಲು ಆಗದಿದ್ದರೆ ಜಮೀನು ಹೊಂದಿ ಪ್ರಯೋಜನವೇನು? ಏನೂ ಉಪಯೋಗವಿಲ್ಲದ ಕೃಷಿ ಮಾಡಿಕೊಂಡೇ ಇರು ಎಂದು ರೈತನನ್ನು ಕಾನೂನಿನ ಮೂಲಕ ಬಂದಿಸುವುದು ಎಷ್ಟು ಸರಿ ಎಂದು ಯಾರೂ ಯೋಚಿಸಲಿಲ್ಲ. 

ಇಂತಹ ಪಟ್ಟಭದ್ರ ಹಿತಾಸಕ್ತಿಗಳ ವಿರುದ್ಧ ಸಿಡಿದೆದ್ದು ಅವರನ್ನು ಬೆತ್ತಲು ಮಾಡಿದರೆ ತಮ್ಮನ್ನು ಎಲ್ಲಿ ರೈತ ವಿರೋಧಿ ಎಂದು ಬ್ರ್ಯಾಂಡ್ ಮಾಡಿಬಿಡುತ್ತಾರೋ ಎಂದು ನಿಜಸ್ಥಿತಿ ಗೊತ್ತಿದ್ದವರೂ ಸುಮ್ಮನೆ ಇದ್ದರು. ಈಗ ಯಡಿಯೂರಪ್ಪ ನೇತೃತ್ವದ ಸರ್ಕಾರ ದಿಟ್ಟ ನಿರ್ಧಾರ ತೆಗೆದುಕೊಂಡು ಅವರಿಗೆ ನೆರವಾಗಲು ಮುಂದೆ ಬಂದಿದೆ.

ಭೂ ಸುಧಾರಣೆ ಕಾಯ್ದೆಯ ತಿದ್ದುಪಡಿಯನ್ನು ವಿರೋಧಿಸುವವರು ಹೊಸದೇನನ್ನೂ ಹೇಳಲು ಸಾಧ್ಯವಾಗಿಲ್ಲ.

ಸರ್ಕಾರವು ಕಾಯ್ದೆಗೆ ತಿದ್ದುಪಡಿ ತಂದ ತಕ್ಷಣವೇ ಎಲ್ಲಾ ರೈತರು ಜಮೀನು ಮಾರಿ ನಗರಗಳಿಗೆ ವಲಸೆ ಹೋಗುವುದಿಲ್ಲ; ಹತ್ತಾರು ಲಕ್ಷ ಎಕರೆ ಜಮೀನು ಕೊಳ್ಳಲು ಉಳ್ಳವರು ಹಣದ ಥೈಲಿ ಹಿಡಿದು ಸರತಿ ಸಾಲಲ್ಲಿ ನಿಲ್ಲುವುದಿಲ್ಲ. ಮುಂದೆ, ಬೇಡಿಕೆ ಮತ್ತು ಪೂರೈಕೆಗೆ ಅನುಗುಣವಾಗಿ ಮಾರುವ ಹಾಗೂ ಕೊಳ್ಳುವ ಪ್ರಕ್ರಿಯೆ ನಡೆಯಬಹುದು. ಜಮೀನು ಖರೀದಿಸುವ ಎಲ್ಲರೂ ಕಾರ್ಖಾನೆ ಸ್ಥಾಪಿಸುವುದಿಲ್ಲ. ಹಲವಾರು ಜನ ನಿಜವಾಗಿಯೂ ಆಧುನಿಕ ವಿಧಾನ ಬಳಸಿ ಅಥವಾ ನೈಸರ್ಗಿಕವಾಗಿ ಬೇಸಾಯ ಮಾಡಲು ಮುಂದೆ ಬರುತ್ತಾರೆ.

ಪಕ್ಕದ ರಾಜ್ಯಗಳಲ್ಲಿ ಯಾರು ಬೇಕಾದರೂ ಜಮೀನು ಕೊಳ್ಳಬಹುದು. ಹಾಗೆಂದ ಮಾತ್ರಕ್ಕೆ ಅಲ್ಲಿ ಎಲ್ಲಾ ರೈತರೂ ಜಮೀನು ಮಾರಿದ್ದಾರೆಯೇ? ಮಾರಿದವರು ಬೀದಿಪಾಲಾಗಿದ್ದಾರೆಯೇ? ಖಂಡಿತ ಇಲ್ಲ. ಹಾಗೆಯೇ ಕೊಂಡವರೆಲ್ಲ, ರೈತರ ರಕ್ತ ಹೀರುವ ಉದ್ದೇಶದಿಂದ ಬಂದಿರುವ ಉದ್ಯೋಗಪತಿಗಳೇ? ಅದೂ ಅಲ್ಲ. ಆದ್ದರಿಂದ ಆ ರಾಜ್ಯಗಳಲ್ಲಿ ಆಗದ್ದು ನಮ್ಮ ರಾಜ್ಯದಲ್ಲಿ ಹೇಗಾದೀತು?

ರೈತರು ಅಮಾಯಕರು, ಮುಗ್ಧರು ಮತ್ತು ಅವಿದ್ಯಾವಂತರು. ಆದ್ದರಿಂದ ಅವರ ಜಮೀನನ್ನು ಶ್ರೀಮಂತರು ಸುಲಭವಾಗಿ ಕಬಳಿಸಬಹುದು ಎಂದು ತಿದ್ದುಪಡಿ ವಿರೋಧಿಸುವವರು ಜಾಗಟೆ ಬಾರಿಸಿ ಕೃಷಿಕರ ದಾರಿ ತಪ್ಪಿಸುತ್ತಿದ್ದಾರೆ.  

ಸ್ವ ಹಿತಾಸಕ್ತಿಯ ಕೆಲವು ಜನ ಮತ್ತು ಎನ್‌ಜಿಒಗಳು ಸ್ವಾತಂತ್ರ್ಯ ಬಂದ ನಂತರದಿಂದ ನಿರಂತರವಾಗಿ ಮಾಡಿಕೊಂಡು ಬಂದಿರುವ ಪ್ರಚಾರ ಇದು. ಇದು ಸ್ವಲ್ಪಮಟ್ಟಿಗೆ ಮಾತ್ರ ಸರಿ. ಈಗಿನ ಕಾಲದಲ್ಲಿ ರೈತರನ್ನು ಯಾಮಾರಿಸಿ ಅವರ ಜಮೀನನ್ನು ಕಡಿಮೆ ಬೆಲೆಗೆ ಗುಳುಂ ಮಾಡುವುದು ಅಷ್ಟು ಸುಲಭವಲ್ಲ. ಬೇಕಿದ್ದರೆ, ರೈತರ ಬಳಿ ಹೋಗಿ ಚೌಕಾಸಿ ಮಾಡಿ ನೋಡಿ, ಆಗ ವಸ್ತುಸ್ಥಿತಿ ನಿಮಗೇ ಗೊತ್ತಾಗುತ್ತದೆ. ಈ ಕಾಯ್ದೆಯ ತಿದ್ದುಪಡಿ ವಿರೋಧಿಸುತ್ತಿರುವ ಬಹುತೇಕರು ದೇವರಾಜ ಅರಸರ 1970ರ ದಶಕದ ಭೂ ಸುಧಾರಣೆ, ಸಮಾಜವಾದ ಮುಂತಾದವುಗಳ ಜಪ ಮಾಡುತ್ತಿದ್ದಾರೆ. ತಿಳಿದೋ ತಿಳಿಯದೆಯೋ ಅವರಿನ್ನೂ ಅಲ್ಲೇ ಇದ್ದಾರೆ.

ಹಾಗೆ ನೋಡಿದರೆ, ಉಳುವವನೇ ಹೊಲದೊಡೆಯ ಎಂದು ಅರಸು ಮಾಡಿದ ಕಾನೂನಿಗೆ ಈಗಿನ ತಿದ್ದುಪಡಿ ವಿರುದ್ಧವಾಗೇನಿಲ್ಲ. ಕಾಯ್ದೆ ತಿದ್ದುಪಡಿಯು ರೈತರಿಗೆ ಜಮೀನಿನ ಮೇಲಿರುವ ಹಕ್ಕನ್ನು ಕಿತ್ತುಕೊಳ್ಳುವುದಿಲ್ಲ. ಅವರಿಗೆ ಅದನ್ನು ಬೇಕಾದವರಿಗೆ ಮಾರುವ ಅಧಿಕಾರ ನೀಡುತ್ತದೆ. ತಮ್ಮ ಸ್ವಂತ ಜಮೀನನ್ನು ಮಾರಲಾಗದೆ ಪರಿತಪಿಸುತ್ತಿರುವ ಅಥವಾ ಮಾರಲು ವಾಮಮಾರ್ಗ ಹುಡುಕುವ ಪಡಿಪಾಟಲಿನಿಂದ ಅವರನ್ನು ರಕ್ಷಿಸುತ್ತದೆ. ಮಾರಲಾಗದ ಜಮೀನು ಇಟ್ಟುಕೊಂಡು ರೈತರಿಗೇನು ಪ್ರಯೋಜನ?

ಸಣ್ಣ ಹಿಡುವಳಿಗಳನ್ನು ಮಾರುವುದೇ ರೈತರಿಗೆ ನಿಜವಾಗಿಯೂ ಅನುಕೂಲ. ಹೀಗೆ ಅವರು ದೊಡ್ಡ ಮಟ್ಟದಲ್ಲಿ ಸಂಪಾದನೆ ಮಾಡಿದರೆ, ಬಡ ರೈತರ ಕೈಯಲ್ಲಿನ ದುಡ್ಡು ನೋಡಿ ಅರಸರ ಆತ್ಮವೂ ಖುಷಿಪಟ್ಟೀತು.

ಕಂಡ ಕಂಡ ಜಮೀನನ್ನೆಲ್ಲಾ ಕೊಂಡು ಮನಸ್ಸಿಗೆ ಬಂದ ಕೈಗಾರಿಕೆ ಸ್ಥಾಪನೆ ಮಾಡಲು ಅವಕಾಶ ನೀಡಬಾರದು. ಅವುಗಳಿಗೆ ಕೆಲವು ಸರಳ ನಿರ್ಬಂಧ ವಿಧಿಸಬೇಕು. ಅದು ಬಿಟ್ಟರೆ ಈ ಪ್ರಸ್ತಾವಿತ ತಿದ್ದುಪಡಿಯಲ್ಲಿ ನನಗೆ ಯಾವುದೇ ತೊಂದರೆ ಕಾಣಿಸದು.

ಈ ತಿದ್ದುಪಡಿಯನ್ನು ವಿರೋಧಿಸುತ್ತಿರುವ ಹಲವಾರು ಜನ ಎಂದೂ ಕೃಷಿ ಮಾಡಿದವರಲ್ಲ; ಹಳ್ಳಿಗಳಲ್ಲಿ ವಾಸಿಸಿಲ್ಲ. ಉಳಿದವರು ಈಗ ಅದರಿಂದ ಹೊರಬಂದಿದ್ದಾರೆ. 

ಬೆಂಗಳೂರಿನ ರಿಯಲ್ ಎಸ್ಟೇಟ್‌ನಲ್ಲಿ ತಮ್ಮ ಕೃಷಿ ಜಮೀನನ್ನು ಕೋಟ್ಯಂತರ ರೂಪಾಯಿಗಳಿಗೆ ಮಾರಿ, ಬೃಹತ್ ವಾಣಿಜ್ಯ ಮತ್ತು ವಸತಿ ಸಮುಚ್ಚಯ ಕಟ್ಟಿ ಪ್ರತೀ ತಿಂಗಳು ಲಕ್ಷಾಂತರ ಹಣ ಎಣಿಸುವ ಕೆಲವರೂ ಇದರ ವಿರುದ್ಧ ಉಗ್ರ ಪ್ರತಿಭಟನೆಯ ಎಚ್ಚರಿಕೆ ನೀಡಿದ್ದಾರೆ.

ಬರೀ ರಿಯಲ್ ಎಸ್ಟೇಟ್ ಕುಳಗಳಿಂದಲೇ ತುಂಬಿರುವ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಇದನ್ನು ಯಾವುದೇ ತರ್ಕವಿಲ್ಲದೇ ವಿರೋಧಿಸುತ್ತಿವೆ. ಅವರಲ್ಲಿ ಬಹುತೇಕರು ರೈತರ ಜಮೀನನ್ನು ಭೂ ಪರಿವರ್ತನೆ ಮಾಡಿಯೇ ಶ್ರೀಮಂತರಾದವರು. ಇವರ ಆಷಾಢಭೂತಿತನ ನೋಡಿ ನಗಬೇಕೋ, ಅಳಬೇಕೋ ಗೊತ್ತಾಗುತ್ತಿಲ್ಲ.

ನಾನೂ ಒಬ್ಬ ರೈತ. ಜಮೀನು ಮಾರಲು ಮತ್ತು ಜಮೀನು ಖರೀದಿಸಲು ಇರುವ ನಿರ್ಬಂಧಗಳಿಂದ ತೊಂದರೆ ಅನುಭವಿಸಿದವರಲ್ಲಿ ನಾನು ಕೂಡಾ ಒಬ್ಬ.

ಕೊರೊನಾದಿಂದ ಇಡೀ ಪ್ರಪಂಚದ ನಗರೀಕರಣಕ್ಕೆ ಭಾರಿ ಪೆಟ್ಟುಬಿದ್ದಿದೆ. ಲಕ್ಷಾಂತರ ಜನ ಹಳ್ಳಿಗಳತ್ತ ಮುಖ ಮಾಡಿದ್ದಾರೆ. ಇಂತಹ ಸಂದರ್ಭದಲ್ಲಿ ಅಂತಹವರಿಗೆ ಕೃಷಿ ಜಮೀನು ಖರೀದಿಸಲು ಮುಕ್ತ ಅವಕಾಶ ನೀಡಿದರೆ, ಇಬ್ಬರಿಗೂ ಲಾಭ.

ಈ ತಿದ್ದುಪಡಿಯಿಂದ ಗ್ರಾಮೀಣ ಭಾಗಗಳಲ್ಲಿ ಕೃಷಿ ಆಧಾರಿತ ಕೈಗಾರಿಕೆಗಳು ಬರಲು ಅನುಕೂಲವಾಗುತ್ತದೆ. ಮಲೆನಾಡು ಮತ್ತು ಇತರ ಪ್ರವಾಸಿ ತಾಣಗಳಲ್ಲಿ ಪ್ರವಾ ಸೋದ್ಯಮಕ್ಕೆ ವಿಪುಲ ಅವಕಾಶ ಸಿಗುತ್ತದೆ. ಇವುಗಳಿಂದ ಅಲ್ಲಿ ಉತ್ಪತ್ತಿಯಾಗುವ ಉದ್ಯೋಗಗಳು ಲಕ್ಷಾಂತರ. ಕರ್ನಾಟಕದಲ್ಲಿ ಉದ್ಯಮ ಸ್ಥಾಪಿಸಲು ಬಂಡವಾಳಗಾರರಲ್ಲಿ ಹೆಚ್ಚಿನವರು ಇಷ್ಟಪಡುತ್ತಾರೆ. ಆದರೆ ನಮ್ಮ ಜಿಗುಟು, ಉದ್ಯಮ ವಿರೋಧಿ, ಸಮಾಜವಾದಿ ಯುಗದ ಕಾನೂನುಗಳು ಅವರನ್ನು ದೂರ ಇಟ್ಟಿವೆ.

ಯಾವುದೇ ಮುಲಾಜಿಗೆ ಬಗ್ಗದೆ, ಸ್ವಯಂಘೋಷಿತ ರೈತ ನಾಯಕರ, ಸಮಾಜವಾದಿಗಳ ಗೊಡ್ಡು ಬೆದರಿಕೆಗೆ ಮಣಿಯದೇ, ಯಡಿಯೂರಪ್ಪನವರು ಈ ತಿದ್ದು ಪಡಿಯನ್ನು ತಡ ಮಾಡದೆ ಜಾರಿ ಮಾಡಬೇಕು. ಉದ್ದೇಶಿತ ತಿದ್ದುಪಡಿಯಿಂದ ಅಚ್ಚುಕಟ್ಟು ಪ್ರದೇಶದ ನೀರಾವರಿ ಜಮೀನನ್ನು ಹೊರ ಗಿಡಲು ಈಗಾಗಲೇ ನಿರ್ಧರಿಸಲಾಗಿದೆ. ಇದರಿಂದ ನೀರಾವರಿ ರೈತರಿಗೆ ಅನ್ಯಾಯ ಮಾಡಿದಂತಾಗುವುದಿಲ್ಲವೇ? ಎಲ್ಲಾ ಕೃಷಿಕರಿಗೂ ಸಮಾನ ಅವಕಾಶ ಇರಬೇಡವೇ?

ಕೃಷಿಗೆ ಕಾರ್ಪೊರೇಟ್ ಜನ ಬರಲಿ. ಒಳ್ಳೆಯದೇ. ಬರಡು ಬಿದ್ದಿರುವ ಲಕ್ಷಾಂತರ ಎಕರೆಯಲ್ಲಿ ಹಸಿರು ಉಕ್ಕುವ ಕಾಲಬರುತ್ತದೆ. ಸ್ಥಳೀಯ ಬಡ ಜನರಿಗೆ ಕೂಲಿ ಸಿಗುತ್ತದೆ. ನಿಂತ ನೀರಾಗಿರುವ ಕೃಷಿ, ಸ್ವಚ್ಛ ನದಿಯಾಗಿ ಹರಿಯುವಂತೆ ಮಾಡಲು ಇದು ಸರ್ಕಾರಕ್ಕಿರುವ ಕೊನೆಯ ಅವಕಾಶ.

(ಲೇಖಕ: ಹಿರಿಯ ಸಂಪಾದಕ, ಸಿಎನ್‌ಎನ್ ನ್ಯೂಸ್18)

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು