ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಿಕ್ಕೇರಿಸಿ ಕೊಲ್ಲುವ ಮಾದಕ ಲೋಕ

Last Updated 30 ಆಗಸ್ಟ್ 2020, 20:30 IST
ಅಕ್ಷರ ಗಾತ್ರ
ADVERTISEMENT
""
""
""

ಮಾದಕದ್ರವ್ಯಗಳು ಬೆಂಗಳೂರಿನೊಂದಿಗೆ ನಂಟು ಬೆಸೆದುಕೊಂಡ ಪರಿಯೇ ರೋಚಕ ಕಥಾನಕ. 1980ರ ದಶಕದಲ್ಲಿ ಬೆಂಗಳೂರಿನ ಹೊರವಲಯದ ತೊರೆಛತ್ರ (ಈಗಿನ ಮಾಕಳಿ) ಹತ್ತಿರ ನೀರಾ ದೊರೆಯುತ್ತಿತ್ತು. ಅದನ್ನು ಕುಡಿಯಲೆಂದೇ ಎಷ್ಟೋ ಜನ ಕಾರಿನಲ್ಲಿ ಹೋಗುತ್ತಿದ್ದರು. ಬಿಸಿಲು ಬಂದಮೇಲೆ ಅದೇ ನೀರಾ ಹೆಂಡ ಆಗುತ್ತದೆ. ಅದರಿಂದ ಕಿಕ್. ಕೆಲವರು ಕ್ಲೋರಲ್ ಹೈಡ್ರೇಟ್ ಬೆರೆಸತೊಡಗಿದರು. ಅಂಥ ಹೆಂಡ ಕುಡಿದವರ ಕೈಕಾಲುಗಳು ಊದಿಕೊಂಡವು. ಕಲಬುರಗಿ, ದಕ್ಷಿಣ ಕನ್ನಡದಲ್ಲೂ ಇಂಥ ದಂಧೆಗಳು ಆಗ ಜಾಸ್ತಿ ಇದ್ದವು.

ಸಕ್ಕರೆ ಕಾರ್ಖಾನೆಗಳಿಗೂ ಹೆಂಡ, ಕಳ್ಳಭಟ್ಟಿ ದಂಧೆಗೂ ನಂಟು. ಅಲ್ಲಿನ ಕಾಕಂಬಿಗೆ ಆಗ ಬಹು ಬೇಡಿಕೆ. ಅದರ ಸರಬರಾಜಿನಿಂದಾಗಿಯೇ ಒಂದು ಮಾಫಿಯಾ ಹುಟ್ಟಿತು. ಕಳ್ಳಭಟ್ಟಿ ದಂಧೆ ವ್ಯಾಪಕವಾಯಿತು. ಕೊಳೆತ ವಸ್ತುಗಳನ್ನು ಹಾಕಿ ಮೊದಲು ತಯಾರಿಸುತ್ತಿದ್ದ ಕಳ್ಳಭಟ್ಟಿ, ಆಮೇಲೆ ಬ್ಯಾಟರಿ ಸೆಲ್ಸ್‌ ಹಾಕಿ ಕೊಳೆಸಿದ ರೂಪದಲ್ಲಿ ದೊರೆತದ್ದೇ ಅನೇಕರು ಜೀವತೆತ್ತರು. ಪೆಟ್ರೋಲ್‌ ದಂಧೆ ನಡೆಸುವವರು ‘ಸಾಲ್ವೆಂಟ್‌’ಗಳನ್ನು ಬೆರೆಸುವುದೂ ಇತ್ತು. ರಿಲಯನ್ಸ್‌ ಕಂಪನಿಯವರೇ ಆಗ ಅಂಥ ಸಾಲ್ವೆಂಟ್‌ಗಳನ್ನು ಸರಬರಾಜು ಮಾಡಿದ ಉದಾಹರಣೆಗಳಿವೆ. ಪೆಟ್ರೋಲ್‌ಗೆ ಅದನ್ನು ಬೆರೆಸಿ ಮಾರಾಟ ಮಾಡಿ ದೊಡ್ಡ ಲಾಭ ಗಳಿಸಿದವರು, ಅದೇ ಸಾಲ್ವೆಂಟ್‌ ಅನ್ನು ಆಲ್ಕೋಹಾಲ್‌ ತಯಾರಿಕೆಯಲ್ಲೂ ಉಪಯೋಗಿಸಿ ಎಡವಟ್ಟುಗಳನ್ನು ಮಾಡಿದ್ದಿದೆ. ನೀರಾ, ಸೇಂದಿ, ಕಳ್ಳು, ಕಳಿ, ಕಲ್ಕಟ್, ಸಾರಾಯಿ... ಹೀಗೆಲ್ಲ ವ್ಯಸನಗಳಿಗೆ ವಸ್ತುಗಳು ದೊರೆಯುತ್ತಿದ್ದ ಕಾಲ ಅದು. ಆಮೇಲೆ ಸ್ಟೆರಾಯ್ಡ್‌ ಲಭ್ಯವಾಯಿತು.

ಬಿ.ಕೆ.ಶಿವರಾಂ

ಮಹಾರಾಷ್ಟ್ರ, ಪಂಜಾಬ್, ಉತ್ತರ ಪ್ರದೇಶ, ಕರ್ನಾಟಕದಲ್ಲಿ ಗರಡಿ ಮನೆಗಳ ಸಂಸ್ಕೃತಿ ಮೊದಲಿನಿಂದಲೂ ಇದೆ. ಅಲ್ಲಿ ರಾಮರಸವನ್ನು ಆಗೀಗ ಸೇವನೆ ಮಾಡುತ್ತಿದ್ದರು. ಗಸೆಗಸೆ, ಬೆಲ್ಲ, ಏಲಕ್ಕಿ, ಗೋಡಂಬಿ ಎಲ್ಲದರ ಆರೋಗ್ಯಕರ ಮಿಶ್ರಣ ಅದು. ಅದಕ್ಕೆ ಸ್ವಲ್ಪ ಗಾಂಜಾ, ಅಫೀಮನ್ನೂ ಬೆರೆಸುವ ಪರಿಪಾಟ ಶುರುವಾಯಿತು. ವ್ಯವಸ್ಥಿತವಾಗಿ ವ್ಯಾಯಾಮ ಮಾಡುತ್ತಿರುವವರಿಗೆ ಇದರ ಸೇವನೆ ವ್ಯಸನವಾಗಲಿಲ್ಲ. ಕೆಲವರಿಗೆ ಇದರ ಮತ್ತೇ ಗಮ್ಮತ್ತೆನ್ನಿಸಿ ಅದರ ಸುತ್ತಲೂ ಒಂದು ಮಾರುಕಟ್ಟೆ ಹುಟ್ಟಿಕೊಂಡಿತು.

ಗರಡಿಮನೆಗಳಿಗೆ ಮಾದಕವಸ್ತುಗಳು ಸರಬರಾಜಾಗುವುದರ ಹಿಂದೆಯೂ ಒಂದು ವ್ಯವಸ್ಥಿತ ದಂಧೆ ಇತ್ತು. ಅದೇ ಕ್ರಮೇಣ ಬೀಡಾ ಸಂಸ್ಕೃತಿಗೆ ವಿಸ್ತರಿಸಿತು. ಉತ್ತರ ಪ್ರದೇಶ, ಪಂಜಾಬ್, ರಾಜಸ್ಥಾನದಲ್ಲಿ ಬೀಡಾದ ಒಳಗೆ ಅಫೀಮನ್ನು ಇಟ್ಟು ತಿನ್ನಲು ಕೊಡುತ್ತಿದ್ದರು. ಅದು ಬೆಂಗಳೂರಿಗೂ ಬಂತು. ಕಾಮಪ್ರಚೋದಕ ಬೀಡಾ ಎಂದು ಅದನ್ನು ಮಾರಾಟ ಮಾಡಿದರು. ‘ಪಲ್ಲಂಗ್‌ತೋಡ್‌ ಬೀಡಾ’ ಎಂಬ ಬಗೆಯೇ ಇತ್ತು.

ಗಸೆಗಸೆ ಕಾಯಿಗಳಿಗೆ ಗಾಯ ಮಾಡಿ ಅಫೀಮನ್ನು ತಯಾರಿಸುತ್ತಾರೆ. ಬೆಳೆಯುವ ಗಸೆಗಸೆಗೆ ಲೆಕ್ಕ ಕೊಡಬೇಕು. ಅದು ಅಬಕಾರಿ ಇಲಾಖೆ ವ್ಯಾಪ್ತಿಗೆ ಬರುತ್ತದೆ. ಔಷಧ ಕಂಪನಿಗಳು ಹಾಗೂ ಗ್ರಾಹಕರ ಮಿತವಾದ ಬಳಕೆಗೆ ಸೀಮಿತವಾಗಿದ್ದ ಗಸೆಗಸೆಯನ್ನು ಅಳತೆ ಮೀರಿ ಅನೇಕರು ಆಗ ಬೆಳೆದಿದ್ದರು. ಕೋಲಾರದಲ್ಲಿ ರಾಜಸ್ಥಾನದವನೊಬ್ಬ ಜಮೀನನ್ನು ಗುತ್ತಿಗೆಗೆ ಪಡೆದು ಗಸೆಗಸೆಯನ್ನು ಬೆಳೆದುಬಿಟ್ಟಿದ್ದ. ಬ್ರೌನ್ ಶುಗರ್ ಎನ್ನುವುದು ಉತ್ಪನ್ನಗಳಲ್ಲಿ ವರ್ಜ್ಯ ಎನ್ನುವಂಥದ್ದು. ಅದನ್ನು ಬಿಸಾಡಬೇಕು ಎಂದು ಔಷಧದ ಉದ್ದೇಶಕ್ಕೆ ಬೆಳೆಯುವವರು ಹೇಳುತ್ತಾರೆ. ಆದರೆ, ಅದೂ ಮಾದಕದ್ರವ್ಯವಾಗಿ ಬಳಕೆಗೆ ಬಂತು.

ಇನ್ನು ಗಾಂಜಾವನ್ನು ಆಂಧ್ರಪ್ರದೇಶ, ಪಶ್ಚಿಮ ಬಂಗಾಳದ ಕಾಡುಗಳಲ್ಲಿ ವ್ಯಾಪಕವಾಗಿ ಬೆಳೆಯುತ್ತಿದ್ದರು. ಅದೇ ದಂಧೆ ಪಶ್ಚಿಮಘಟ್ಟದ ಕಾಡುಗಳಿಗೂ ಪ್ರವೇಶಿಸಿತು. ಕೇರಳ ಕೂಡ ಈ ವಿಷಯದಲ್ಲಿ ದೊಡ್ಡ ಹೆಜ್ಜೆ ಇಟ್ಟಿತು.

ಥಿನ್ನರ್, ವೈಟ್‌ನರ್, ರಿಮೂವರ್, ಅಯೋಡೆಕ್ಸ್‌ ಮೂಸುವುದು ಕೂಡ ಬೆಂಗಳೂರಿನಲ್ಲಿ ಕಾಣುವ ವ್ಯಸನದ ಬಗೆಗಳು. ಕೋಕಾಕೋಲಾಗೆ ನಿದ್ದೆಮಾತ್ರೆ ಹಾಕಿ, ಕಾಫ್ ಸಿರಪ್‌ಗೆ ಮತ್ತು ಬರುವ ವಸ್ತು ಬೆರೆಸಿ ಕುಡಿಯಲಾರಂಭಿಸಿದರು. ಕೋಕಾ ಉತ್ಪನ್ನದಿಂದ ಬಂದ ಕೊಕೇನ್‌ಗೆ ಬ್ರೆಜಿಲ್ ಹೆಸರುವಾಸಿ. ಅದು ದುಬಾರಿ ಮಾದಕದ್ರವ್ಯ. ಭೂಗತಲೋಕದವರು ಅದನ್ನು ಮಾರಾಟ ಮಾಡುವುದನ್ನು ಲಾಭಕರ ದಂಧೆಯನ್ನಾಗಿಸಿಕೊಂಡರು. ಅದರಿಂದ ಬಂದ ಹಣದಲ್ಲಿ ಶಸ್ತ್ರಾಸ್ತ್ರ ಖರೀದಿಸಬಹುದೆನ್ನುವುದು ಲೆಕ್ಕಾಚಾರ. ಗಾಂಜಾ, ಬ್ರೌನ್ ಶುಗರ್‌ಗೆ ವಾಸನೆ ಇರುತ್ತದೆ. ಕೊಕೇನ್‌ ಅಷ್ಟು ವಾಸನೆ ಇರುವುದಿಲ್ಲ. ಕಾಕ್‌ಟೇಲ್‌ ಮಾಡುವವರು, ವ್ಯಸನಗಳಲ್ಲೇ ಪ್ರಯೋಗಶೀಲರಾದವರು ಬೆರಕೆ ಮಾದಕದ್ರವ್ಯಗಳ ಬಳಕೆದಾರರಾದರು. ಅಬು ಶೇರ್ ಎಂಬ ರೌಡಿ ಹಾವಿನಿಂದ ಕಚ್ಚಿಸಿಕೊಂಡು ಮತ್ತು ಬರಿಸಿಕೊಳ್ಳುತ್ತಿದ್ದ. ಇನ್ನು ಕೆಲವರು ಮದ್ಯದ ಬಾಟಲಿಗೆ ಸಣ್ಣ ಹಾವನ್ನು ಹಾಕಿಟ್ಟು, ಆಮೇಲೆ ಅದನ್ನು ಕುಡಿಯುವ ಚಾಳಿ ಬೆಳೆಸಿಕೊಂಡರು. ಬೆಂಗಳೂರಿನಲ್ಲೇ ಕಂಡಂತಹ ಉದಾಹರಣೆಗಳು ಇವು.

ಈಗ ರಾತ್ರಿ ಬದುಕು ಜೀವಂತಿಕೆ ಪಡೆದುಕೊಂಡಿದೆ. ಕಾಲ್‌ಸೆಂಟರ್‌ಗಳು, ಬಿಪಿಒಗಳು ಹೆಚ್ಚಾದ ಮೇಲೆ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಕೆಲಸ ಮಾಡಲು ಹೆಚ್ಚು ನೌಕರರು ವಲಸೆ ಬಂದರು. ಮಾದಕದ್ರವ್ಯಗಳೂ ನಗರ ಪ್ರವೇಶಿಸಿದವು. ವಿದ್ಯಾರ್ಥಿಗಳು, ರಾಜಕಾರಣಿಗಳ ಮಕ್ಕಳು, ಸಿನಿಮಾದವರು ಎಲ್ಲರೂ ಇದಕ್ಕೆ ಬಲಿಯಾದವರೇ. ಈಗ ಅಂತರರಾಷ್ಟ್ರೀಯ ಸರಣಿ ವ್ಯವಹಾರವಾಗಿ ಮಾದಕದ್ರವ್ಯಗಳ ಮಾರಾಟ ಪರಿವರ್ತಿತವಾಗಿದೆ. ಪೈಲ್ವಾನರಿಂದ ಹಿಡಿದು ವಿದ್ಯಾರ್ಥಿಗಳು, ಸಿನಿಮಾದವರು, ಐಟಿ–ಬಿಟಿ ಉದ್ಯೋಗಿಗಳು ಎಲ್ಲರಿಗೂ ಮಾದಕದ್ರವ್ಯಗಳು ವ್ಯಾಪಿಸಿಬಿಟ್ಟಿವೆ. ನಿದ್ರಾಹೀನರು, ಹೊತ್ತುಗೊತ್ತಿಲ್ಲದೆ ಕೆಲಸ ಮಾಡಿ ಹೈರಾಣಾಗುವವರು, ಶೋಕೀಲಾಲರು ಇದರ ದಾಸರಾಗುತ್ತಾರೆ.

ಚಿತ್ರನಟರಲ್ಲಿ ಅನೇಕರಿಗೆ ಮದ್ಯಸೇವನೆಯ ಚಟ 1980, 90ರ ದಶಕದಲ್ಲಿ ಇತ್ತು. ಅದರಿಂದಲೇ ಎಷ್ಟೋ ಅಪಘಾತಗಳಾಗಿರುವುದು, ಆರೋಗ್ಯ ಸಮಸ್ಯೆ ಉಂಟಾಗಿರುವುದನ್ನು ನೋಡಿದ್ದೇವೆ. ಕಪ್ಪುಹಣವನ್ನು ಬಿಳಿಯಾಗಿಸುವ ಸಲುವಾಗಿ ಸಿನಿಮಾಗಳನ್ನು ನಿರ್ಮಿಸುತ್ತಾರೆ. ಅದರಲ್ಲಿ ತಮ್ಮ ಮಕ್ಕಳನ್ನೋ, ಬಂಧು–ಬಾಂಧವರನ್ನೋ ಅಭಿನಯ ಮಾಡಲು ಬಿಡುತ್ತಾರೆ. ಇಂಥವರಿಗೆ ಕಲೋಪಾಸನೆಯ ಕಷ್ಟ–ನಷ್ಟಗಳ ಅರಿವಿರುವುದಿಲ್ಲ. ಸುಲಭವಾಗಿ ಫೇಮ್ ಕೂಡ ಬಂದರೆ ಮುಗಿದೇಹೋಯಿತು.

ಮಾದಕದ್ರವ್ಯಗಳನ್ನು ಮಾರಾಟ ಮಾಡುವ ಜಾಲದಲ್ಲಿ ಚುರುಕಾಗಿರುವವರು ದೊಡ್ಡ ಡಾನ್‌ಗಳೇನೂ ಆಗಿರುವುದಿಲ್ಲ. ಈಗ ಸಿಕ್ಕಿರುವಂತೆಯೇ ಯಾವುದೋ ಸಣ್ಣ ನಟಿಯೋ, ನಟಿಯ ಸ್ನೇಹಿತೆಯೋ, ಸ್ನೇಹಿತರೋ ಆಗಿರುತ್ತಾರಷ್ಟೆ.

ರೇವ್‌ ಪಾರ್ಟಿ ನಡೆಸುವವರು ‘ದೊಡ್ಡ’ ವ್ಯಕ್ತಿಗಳೇ. ಅವರೆಲ್ಲ ಕೋಡ್‌ ವರ್ಡ್‌ಗಳನ್ನು ಬಳಸಿಕೊಂಡು ಸಂವಹನ ನಡೆಸಿ ಒಂದೆಡೆ ಸೇರಿಕೊಳ್ಳುತ್ತಾರೆ. ‘ನಂದಿ ಬೆಟ್ಟದ ತಪ್ಪಲಲ್ಲಿ’ ಎಂಬ ಒಂದು ಸಂದೇಶ ಅರ್ಥ ಮಾಡಿಕೊಳ್ಳಲು ಅಂಥವರಿಗೆ ಸಾಕು. ಬಳ್ಳಾರಿ, ಮೈಸೂರಿನಂಥ ಪ್ರವಾಸಿತಾಣಗಳು ಹೆಚ್ಚಾಗಿರುವ ಕಡೆಗಳಲ್ಲೂ ಬೆಂಗಳೂರಿನ ಅನೇಕರು ರೇವ್‌ ಪಾರ್ಟಿಗಳನ್ನು ಮಾಡಿದ್ದಾರೆ. ರಾಜಕಾರಣಿಗಳು, ಸಿನಿಮಾ ನಟರ ಮಕ್ಕಳು–ಸಂಬಂಧಿಕರು ಇಲ್ಲಿನ ಗ್ರಾಹಕರು. ಜೋಡಿಗಳೇ ಅಲ್ಲಿ ಇರಬೇಕಾದದ್ದು ಕಡ್ಡಾಯ. ಅಂಥ ಕಡೆ ಅತ್ಯಾಚಾರಗಳು ನಡೆದರೂ ವರದಿಯೇ ಆಗದಿರುವ ಉದಾಹರಣೆಗಳಿವೆ.

(ಲೇಖಕರು ನಿವೃತ್ತ ಪೊಲೀಸ್ ಅಧಿಕಾರಿ,ನಿರೂಪಣೆ: ವಿಶಾಖ ಎನ್.)

ಶಂಕರ್‌ ಬಿದರಿ

ಸ್ಟೇಟಸ್‌ ಆಗಿಬಿಟ್ಟಿದೆ

ಮಾದಕದ್ರವ್ಯಗಳ ನಂಟು ಎಲ್ಲ ಕಡೆಯೂ ಇದೆ. ವೃತ್ತಿಸ್ವರೂಪ, ಸಿಗುವ ಕೆಲಸಗಳ ಅವಧಿ, ಶೋಕಿ, ದಿಖಾವೆ, ಅತಿ ಹೆಚ್ಚು ಬಿಡುವು ಇವೆಲ್ಲವುಗಳ ಪರಿಣಾಮ ಮಾದಕದ್ರವ್ಯ ವ್ಯಸನ. ವಿಸ್ಕಿ ಬಾಟಲ್ ಪ್ರದರ್ಶಿಸುವುದು ಪ್ರತಿಷ್ಠೆ ಎಂದುಕೊಂಡವರನ್ನು ನೋಡಿದ್ದೆವು. ಸಿನಿಮಾ ಮಂದಿಯೂ ಇದಕ್ಕೆ ಹೊರತಲ್ಲ. ಈಗ ಮಾದಕವಸ್ತುಗಳ ಚಟ ಸ್ಟೇಟಸ್‌ ಆಗಿದೆ. ಸಿನಿಮಾದಂಥ ಕ್ಷೇತ್ರದಲ್ಲಿ ಯಶಸ್ಸು ಸಿಕ್ಕಷ್ಟೇ ವೈಫಲ್ಯಗಳೂ ಇರುತ್ತವೆ. ವಿಫಲರಾದಾಗ ನಿಭಾಯಿಸಲಾಗದೆ ದ್ರವ್ಯದಾಸರಾಗುವವರೂ ಇದ್ದಾರೆ. ಹಣ ಹರಿಯುತ್ತಿರುವುದರಿಂದ ಇವೆಲ್ಲ ಈಗ ಕೈಗೆಟಕುತ್ತಿವೆ. ನಾವು 1993ರಲ್ಲಿ ವೀರಪ್ಪನ್‌ನನ್ನು ಹಿಡಿಯಲು ಹೋದಾಗ ಆ ಕಾಡಿನಲ್ಲೂ ಗಾಂಜಾ ಬೆಳೆದಿದ್ದರು. ಮನೋಕ್ಷೋಭೆ ಮೀರುವ ಕೆಟ್ಟದಾರಿ ಇದಷ್ಟೆ.

ಶಂಕರ್ ಬಿದರಿ, ನಿವೃತ್ತ ಐಪಿಎಸ್ ಅಧಿಕಾರಿ

ದುನಿಯಾ ವಿಜಯ್

ವ್ಯಾಯಾಮಕ್ಕೂ ಇದಕ್ಕೂ ಸಂಬಂಧವಿಲ್ಲ

ನಾನು 20–25 ವರ್ಷ ಗಳಿಂದ ಜಿಮ್‌ನಲ್ಲಿ ದೇಹ ದಂಡಿಸುತ್ತಾ ಬಂದಿದ್ದೇನೆ. ಸುದೀರ್ಘಾವಧಿ ವ್ಯಾಯಾಮ ಮಾಡುವವರಿಗೆ ಸ್ಟೆರಾಯಿಡ್‌ನ ಹಂಗು ಇರುವುದಿಲ್ಲ. ಇಷ್ಟಕ್ಕೂ ಸ್ಟೆರಾಯಿಡ್‌ ಅನ್ನು ಮಾದಕದ್ರವ್ಯ ಎನ್ನಲಾಗದು. ದಿಢೀರನೆ ಸಿಕ್ಸ್‌ಪ್ಯಾಕ್‌ ಮಾಡುವವರು ಅದನ್ನು ಮಾರ್ಗದರ್ಶನ ಪಡೆದೇ ಬಳಸುತ್ತಾರೆ. ಡ್ರಗ್ಸ್‌ ಎಂದರೆ ಔಷಧ. ಆದರೆ, ಮಾದಕವಸ್ತುಗಳೇ ಬೇರೆ. ಜಿಮ್‌ನಲ್ಲಿ ಬೆವರು ಹರಿಸಿ, ದೇಹಾಕಾರ ರೂಪಿಸುವವರೆಲ್ಲ ಮಾದಕದ್ರವ್ಯ ವ್ಯಸನಿಗಳಿರಬಹುದು ಎಂಬ ಊಹೆಯೇ ಸರಿಯಲ್ಲ.

ದುನಿಯಾ ವಿಜಯ್, ಕನ್ನಡ ಚಿತ್ರನಟ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT