ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನುಭವ ಮಂಟಪ: ಬೊಕ್ಕಸಕ್ಕೆ ಭಾರ ‘ಓಲೈಕೆ ಕೂಸು’

Last Updated 23 ನವೆಂಬರ್ 2020, 20:36 IST
ಅಕ್ಷರ ಗಾತ್ರ

ಬೆಂಗಳೂರು: ವೇತನ ಹಾಗೂ ಇತರ ಸೌಕರ್ಯಕ್ಕೆ ತಿಂಗಳಿಗೆ ₹1.40 ಲಕ್ಷ, ಮನೆ ಬಾಡಿಗೆಗೆ ₹80 ಸಾವಿರ, ಕೈತೋಟ ನಿರ್ವಹಣೆಗೆ ₹20 ಸಾವಿರ, ತಿಂಗಳಿಗೆ ಒಂದು ಸಾವಿರ ಲೀಟರ್‌ ಪೆಟ್ರೋಲ್‌, ಪ್ರಯಾಣ ಭತ್ಯೆ ಪ್ರತಿ ಕಿ.ಮೀ.ಗೆ ₹30, ಪ್ರವಾಸ ಭತ್ಯೆ ದಿನಕ್ಕೆ ₹2 ಸಾವಿರ, ಹೋಟೆಲ್‌ ವಾಸ್ತವ್ಯ (ದಿನಕ್ಕೆ) ₹5 ಸಾವಿರ...

ಜಾತಿಗೊಂದರಂತೆ ತಲೆ ಎತ್ತುತ್ತಿರುವ ನಿಗಮಗಳ ಅಧ್ಯಕ್ಷರು (ರಾಜ್ಯ ಸಚಿವ ಸ್ಥಾನಮಾನ ಹೊಂದಿರುವವರು) ಪಡೆಯುವ ಸವಲತ್ತುಗಳ ಪಟ್ಟಿ ಹೀಗೆ ಬೆಳೆಯುತ್ತದೆ. ಸಚಿವ ಸ್ಥಾನಮಾನ ಹೊಂದಿರದ ಅಧ್ಯಕ್ಷರಿಗೆ ಕೊಡುವ ಸವಲತ್ತುಗಳೇನೂ ಕಡಿಮೆ ಇಲ್ಲ. ಅವರಿಗೂ ತಿಂಗಳಿಗೆ ₹40 ಸಾವಿರ ವೇತನ, ಮನೆ ಬಾಡಿಗೆ ಭತ್ಯೆ, ಪ್ರವಾಸ ಭತ್ಯೆ, ಕಾರು, ಆಪ್ತ ಸಹಾಯಕ ಇತ್ಯಾದಿ ಸೌಕರ್ಯಗಳು ದೊರಕುತ್ತವೆ. ಜತೆಗೆ, ನಿಗಮಕ್ಕೊಂದು ಕಚೇರಿ, ಅಲ್ಲಿ ಮೂಲಸೌಕರ್ಯ, ಸಿಬ್ಬಂದಿ ನೇಮಕಕ್ಕೆ ದೊಡ್ಡ ಮೊತ್ತ ಮೀಸಲಿಡಲಾಗುತ್ತಿದೆ. ಪ್ರತಿ ನಿಗಮದಲ್ಲಿ ವೇತನ ಮತ್ತಿತರ ಸೌಲಭ್ಯಕ್ಕೆ ವರ್ಷಕ್ಕೆ ಆಗುವ ಖರ್ಚೇ ಅಂದಾಜು ₹2 ಕೋಟಿಯಷ್ಟು. ಆಳುವವರ ಓಲೈಕೆ ರಾಜಕಾರಣದ ಕೂಸುಗಳಾಗಿ ಜನ್ಮ ತಾಳಿರುವ ಈ ನಿಗಮಗಳು ಸರ್ಕಾರದ ಬೊಕ್ಕಸಕ್ಕೆ ಭಾರವಾಗಿವೆ.

ಸಾಮಾನ್ಯ ಜನರ ಆಶೋತ್ತರಗಳಿಗೆ ಸ್ಪಂದಿಸುವ ಉದ್ದೇಶದಿಂದ ಸ್ಥಾಪಿಸಲಾಗಿರುವ ಈ ಸಂಸ್ಥೆಗಳು ಮೂಲ ಉದ್ದೇಶವನ್ನೇ ಮರೆತು, ರಾಜಕೀಯ ನಾಯಕರ ಹಾಗೂ ಅವರ ಹಿಂಬಾಲಕರ ಆಶ್ರಯತಾಣಗಳಾಗುತ್ತಿವೆ. ಆಯಕಟ್ಟಿನ ನಿಗಮಗಳ ಮೇಲೆ ಹತ್ತಾರು ಮಂದಿ ಕಣ್ಣು ಇಟ್ಟಿರುತ್ತಾರೆ. ಎಲ್ಲ ಪ್ರಭಾವಿ ನಾಯಕರೂ ತಮ್ಮ ಆಪ್ತರು, ನಿಷ್ಠರು, ಹಿಂಬಾಲಕರಿಗೆ ನಿಗಮಗಳ ಅಧ್ಯಕ್ಷ/ನಿರ್ದೇಶಕ ಹುದ್ದೆ ಕೊಡಿಸುವುದಕ್ಕಾಗಿ ನಾನಾ ತಂತ್ರಗಳನ್ನು ಹೆಣೆಯುತ್ತಾರೆ. ಸಚಿವ ಸ್ಥಾನ ಸಿಗದೆ ಭಿನ್ನ ಧ್ವನಿ ಮೊಳಗಿಸುವ ಶಾಸಕರನ್ನು ಸಂತೃಪ್ತಿಪಡಿಸಲು ಲಾಭದಾಯಕ ನಿಗಮಗಳಿಗೆ ಅಧ್ಯಕ್ಷರನ್ನಾಗಿ ನೇಮಿಸಿ ಪುನರ್ವಸತಿ ಕಲ್ಪಿಸುವುದು ಅನೂಚಾನವಾಗಿ ನಡೆದು ಬಂದಿದೆ.

ಸರ್ಕಾರದ ಪಾಲಿಗೆ ಈ ನಿಗಮಗಳು ಒಂದು ರೀತಿಯಲ್ಲಿ ಹೊರೆಯಾದರೆ, ಲಾಬಿ ನಡೆಸಿ ಈ ಆಯಕಟ್ಟಿನ ಹುದ್ದೆಗಳನ್ನು ಆಕ್ರಮಿಸಿಕೊಳ್ಳುವವರಿಗೆ ಇವು ಅಚ್ಚುಮೆಚ್ಚಿನ ತಾಣಗಳು. ನಿಗಮಗಳು ನಷ್ಟದಲ್ಲಿದ್ದರೂ ಅಲ್ಲಿಯೇ ದುಡ್ಡು ಸಂಪಾದಿಸುವ ದಾರಿಗಳನ್ನು ಅಲ್ಲಿಗೆ ಹೋದವರು ಹುಡುಕಿಕೊಳ್ಳುತ್ತಾರೆ. ಇಲ್ಲವೇ, ಅಲ್ಲಿ ಕಾಯಂ ಆಗಿ ಠಿಕಾಣಿ ಹೂಡಿರುವವರು ಅಡ್ಡಕಸುಬಿನ ಹಾದಿಗಳನ್ನು ತೋರಿಸುತ್ತಾರೆ.

ಕೆಲವು ನಿಗಮಗಳಂತೂ ನಾಮಕಾವಸ್ತೆಗಷ್ಟೇ ಉಳಿದಿವೆ. ಇವುಗಳ ಹಿಂದೆ ಕೆಲವರಿಗಷ್ಟೇ ಅನುಕೂಲ ಮಾಡಿಕೊಡುವ ಉದ್ದೇಶವಿದೆ. ಸರ್ಕಾರ ಇರುವಷ್ಟು ದಿನ ಅಥವಾ 20-30 ತಿಂಗಳ ಅವಧಿಯಲ್ಲಿ ಜನರ ದುಡ್ಡಿನಲ್ಲಿ ರಾಜಭೋಗ ಅನುಭವಿಸುವ ಎಲ್ಲ ದಾರಿಗಳು ಇಲ್ಲಿ ತೆರೆದುಕೊಳ್ಳುತ್ತವೆ.

ರಾಜ್ಯದಲ್ಲಿ ಜಾತಿ, ಪಂಥ ಆಧಾರಿತ ಸುಮಾರು 20 ನಿಗಮಗಳು ಕಾರ್ಯನಿರ್ವಹಿಸುತ್ತಿದ್ದು, ಅನೇಕ ನಿಗಮಗಳು ಅನುದಾನವಿಲ್ಲದೆ ಸೊರಗಿವೆ. ವಿವಿಧ ಜಾತಿಗಳನ್ನು ಓಲೈಸಿ ಮತ ಬ್ಯಾಂಕ್‌ ಅನ್ನು ಗಟ್ಟಿ ಮಾಡಿಕೊಳ್ಳುವ ಏಕಮೇವ ಉದ್ದೇಶದಿಂದ ಕಾಂಗ್ರೆಸ್‌, ಬಿಜೆಪಿ ಹಾಗೂ ಜೆಡಿಎಸ್‌ ಪಕ್ಷಗಳು ಇಂತಹ ನಿಗಮಗಳನ್ನು ರಚಿಸಿ ತಕ್ಕ ಮಟ್ಟಿಗೆ ರಾಜಕೀಯ ಯಶಸ್ಸನ್ನೂ ಗಳಿಸಿವೆ. 2018–19ರಲ್ಲಿ ಜೆಡಿಎಸ್‌–ಕಾಂಗ್ರೆಸ್‌ ಮೈತ್ರಿ ಸರ್ಕಾರವು ಬ್ರಾಹ್ಮಣ ಅಭಿವೃದ್ಧಿ ನಿಗಮ (₹25 ಕೋಟಿ ಅನುದಾನ), ಆರ್ಯ ವೈಶ್ಯ ಅಭಿವೃದ್ಧಿ ನಿಗಮ (₹10 ಕೋಟಿ ಅನುದಾನ) ಸ್ಥಾಪಿಸಿತು. ಕೊಟ್ಟಿರುವ ಅನುದಾನ ಯಾವುದಕ್ಕೂ ಸಾಲದು ಎಂದು ಈ ನಿಗಮಗಳ ಅಧ್ಯಕ್ಷರು ಈಗಾಗಲೇ ವರಾತ ಆರಂಭಿಸಿದ್ದಾರೆ. ಕನಿಷ್ಠ ₹200 ಕೋಟಿಯನ್ನಾದರೂ ಕೊಡಬೇಕು ಎಂದು ಬೇಡಿಕೆ ಪಟ್ಟಿ ಸಲ್ಲಿಸಿದ್ದಾರೆ. ಬಿಜೆಪಿ ಸರ್ಕಾರ ಮತ್ತೆ ಮೂರು ನಿಗಮಗಳನ್ನು ಸ್ಥಾಪಿಸಿದೆ.

ಈ ನಿಗಮಗಳು ಸಮುದಾಯದ ಸಮಗ್ರ ಅಭಿವೃದ್ಧಿಗೆ ಬೇಕಾದ ಸೃಜನಶೀಲ ಕೆಲಸಗಳನ್ನೇನೂ ಮಾಡುತ್ತಿಲ್ಲ. ಈ ನಿಗಮಗಳು ಮಾಡುವ ಮೊದಲ ಕೆಲಸವೆಂದರೆ ಸಮುದಾಯದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಕೊಡುವುದು. ಸಮಾಜ ಕಲ್ಯಾಣ ಇಲಾಖೆ/ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯೇ ಈ ಕಾರ್ಯ ಮಾಡುತ್ತಿರುವಾಗ ನಿಗಮಗಳು ಅದನ್ನೇ ಪುನರಾವರ್ತನೆ ಮಾಡುವ ಅಗತ್ಯ ಏನಿದೆ ಎಂಬ ಚರ್ಚೆಯೂ ಆರಂಭವಾಗಿದೆ.

ವರಮಾನ ತರುವ ನಿಗಮಗಳು ನಿತ್ರಾಣ: ಇನ್ನೊಂದೆಡೆ, ರಾಜ್ಯ ಸರ್ಕಾರದ ಅವಗಣನೆಯಿಂದಾಗಿ ಉದ್ಯೋಗ ಹಾಗೂ ರಾಜ್ಯದ ಬೊಕ್ಕಸಕ್ಕೆ ವರಮಾನ ತಂದುಕೊಡುವ ನಿಗಮಗಳು ನಿತ್ರಾಣಗೊಂಡಿವೆ. ಮೈಸೂರು ಬ್ರ್ಯಾಂಡ್‌ ಹೆಸರಿನ ಉತ್ಪನ್ನಗಳನ್ನು ತಯಾರಿಸಿ ಕರ್ನಾಟಕದ ಹೆಮ್ಮೆಯನ್ನು ಜಗದಗಲ ಪಸರಿಸಲು ಕಾರಣವಾಗಿದ್ದ ಅನೇಕ ಕಾರ್ಖಾನೆಗಳು ರಾಜಕಾರಣಿಗಳು, ಅಧಿಕಾರಿಗಳ ದುರಾಸೆಯ ಪರಿಣಾಮವಾಗಿ ಇಂದು ನೆಲಕಚ್ಚಿವೆ. ರಾಜ್ಯ ಅರಣ್ಯ ಅಭಿವೃದ್ಧಿ ನಿಗಮ, ಕರಕುಶಲ ಅಭಿವೃದ್ಧಿ ನಿಗಮ, ಗೇರು ಅಭಿವೃದ್ಧಿ ನಿಗಮ, ಮೈಸೂರು ಕಾಗದ ಕಾರ್ಖಾನೆಯಂತಹ ನಿಗಮಗಳಿಗೆ ಅಗತ್ಯ ಅನುದಾನ ನೀಡಿ ಬಲಪಡಿಸಲು ಸರ್ಕಾರ ಆಸಕ್ತಿ ತೋರುತ್ತಿಲ್ಲ.

ಏಕೆಂದರೆ ಈ ನಿಗಮಗಳು ಯಾವುದೇ ಜಾತಿ ಸಮುದಾಯಕ್ಕೆ ಸೀಮಿತವಾಗಿಲ್ಲ. ಇವುಗಳನ್ನು ಬಲಪಡಿಸಿದರೆ ಮತ ಬ್ಯಾಂಕ್‌ ಗಟ್ಟಿಯಾಗದು. ಇದರಿಂದ ಯಾವುದೇ ಚುನಾವಣೆಯನ್ನು ಗೆಲ್ಲಲಾಗದು. ರಾಜಕೀಯ ಉದ್ದೇಶಕ್ಕೆ ಇದೇ ರೀತಿ ನಿಗಮಗಳನ್ನು ಸ್ಥಾಪಿಸುತ್ತಾ ಹೋಗಿದ್ದೇ ಆದರೆ ಮುಂದೊಂದು ದಿನ ಎಲ್ಲ ನಿಗಮಗಳನ್ನೂ ಮುಚ್ಚಬೇಕಾದ ಅನಿವಾರ್ಯ ಸೃಷ್ಟಿಯಾದೀತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT