ಮಂಗಳವಾರ, ಜೂನ್ 28, 2022
26 °C

ಆಳ-ಅಗಲ: ಭಾರತದ ಒಕ್ಕೂಟದೊಳಗೆ ತಿಕ್ಕಾಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಜ್ಯಗಳ ಒಕ್ಕೂಟವಾದ ಭಾರತದಲ್ಲಿ ಒಕ್ಕೂಟ ಅಥವಾ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳ ಅಧಿಕಾರ ವ್ಯಾಪ್ತಿ ಏನು ಎಂಬುದನ್ನು ಸಂವಿಧಾನದಲ್ಲಿ ಸ್ಪಷ್ಟವಾಗಿ ನಮೂದಿಸಲಾಗಿದೆ. ನಮ್ಮದು ಸಹಕಾರಿ ಒಕ್ಕೂಟ ವ್ಯವಸ್ಥೆ ಎಂದು ಬಣ್ಣಿಸಲಾಗುತ್ತದೆ. ಆದರೆ, ಇದು ಸಂಘರ್ಷಾತ್ಮಕ ವ್ಯವಸ್ಥೆಯಾಗಿ ಪರಿವರ್ತನೆಯಾದ ಹಲವು ನಿದರ್ಶನಗಳು ಇವೆ. ಕೇಂದ್ರದಲ್ಲಿ ಒಂದು ಪಕ್ಷ ಮತ್ತು ರಾಜ್ಯದಲ್ಲಿ ಮತ್ತೊಂದು ಪಕ್ಷದ ಸರ್ಕಾರ ಇದ್ದಾಗ ಎರಡೂ ಸರ್ಕಾರಗಳ ನಡುವೆ  ಹಲವು ಬಾರಿ ತಿಕ್ಕಾಟ ನಡೆದಿವೆ. 

ಸಂವಿಧಾನದ 356ನೇ ವಿಧಿಯನ್ನು ಬಳಸಿಕೊಂಡು ಹಲವು ರಾಜ್ಯಗಳ ಸರ್ಕಾರಗಳನ್ನೇ ಕೇಂದ್ರವು ವಜಾ ಮಾಡಿದೆ. ಇದಲ್ಲದೆ, ಅಧಿಕಾರ ವ್ಯಾಪ್ತಿಯ ವಿಚಾರದಲ್ಲಿ ಸಂಘರ್ಷ ಆಗಿರುವುದೂ ಇದೆ. ದೈನಂದಿನ ಆಳ್ವಿಕೆಯ ವಿಚಾರದಲ್ಲಿಯೂ ಕೇಂದ್ರ ಮತ್ತು ಕೆಲವು ರಾಜ್ಯ ಸರ್ಕಾರಗಳು ಜಗಳ ಮಾಡಿಕೊಂಡಿವೆ. 356ನೇ ವಿಧಿ ಅಡಿಯಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಿಕೆಯು ರಾಷ್ಟ್ರಪತಿಗೆ ಇರುವ ಅನಿರ್ಬಂಧಿತ ಅಧಿಕಾರ ಅಲ್ಲ ಎಂದು ಎಸ್‌. ಆರ್‌. ಬೊಮ್ಮಾಯಿ ಸರ್ಕಾರ ವಜಾ ಪ್ರಕರಣದ ತೀರ್ಪಿನಲ್ಲಿ ಸುಪ್ರೀಂ ಕೋರ್ಟ್‌ 1994ರಲ್ಲಿ ಹೇಳಿತ್ತು. ಅದಾದ ಬಳಿಕವೇ 356ನೇ ವಿಧಿಯ ಬಳಕೆ ಕಡಿಮೆಯಾಗಿದ್ದು. 

ಕೇಂದ್ರ ಸರ್ಕಾರವು ರಾಜ್ಯಗಳ ನಡುವೆ ತಾರತಮ್ಯ ಮಾಡುತ್ತಿದೆ ಎಂಬ ಆರೋಪ ಕೋವಿಡ್‌–19ರ ಎರಡನೇ ಅಲೆಯ ಸಂದರ್ಭದಲ್ಲಿ ತೀವ್ರವಾಗಿ ಕೇಳಿ ಬಂದಿತ್ತು. ಲಸಿಕೆ, ವೈದ್ಯಕೀಯ ಆಮ್ಲಜನಕ ಹಂಚಿಕೆಯಲ್ಲಿ ತಾರತಮ್ಯ ಆಗಿದೆ ಎಂದು ಬಿಜೆಪಿಯೇತರ ಪಕ್ಷಗಳು ಅಧಿಕಾರದಲ್ಲಿರುವ ಹಲವು ರಾಜ್ಯಗಳು ಆಕ್ಷೇಪ ವ್ಯಕ್ತಪಡಿಸಿವೆ. 

ಹೀಗೆ, ರಾಜಕೀಯ ಹಾಗೂ ಸೈದ್ಧಾಂತಿಕ ಭಿನ್ನತೆಗಳು ಮತ್ತು ನಾಯಕರ ಪ್ರತಿಷ್ಠೆಯ ಕಾರಣಗಳಿಂದ ಕೇಂದ್ರ–ರಾಜ್ಯದ ಸಂಘರ್ಷ ಹಿಂದೆಯೂ ಇತ್ತು, ಈಗಲೂ ಇದೆ.  

ಪಶ್ಚಿಮ ಬಂಗಾಳ ತಾರಕಕ್ಕೇರಿದ ಸಂಘರ್ಷ

ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಗೂ ಮುನ್ನ ಕೇಂದ್ರ ಮತ್ತು ಪಶ್ಚಿಮ ಬಂಗಾಳ ಸರ್ಕಾರದ ಮಧ್ಯೆ ಆರಂಭವಾದ ಸಂಘರ್ಷ ಈಗ ತಾರಕಕ್ಕೆ ಏರಿದೆ.

2020ರ ಡಿಸೆಂಬರ್‌ನಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಮತ್ತು ಹಲವು ನಾಯಕರು, ಪಶ್ಚಿಮ ಬಂಗಾಳದ ಡೈಮಂಡ್ ಹಾರ್ಬರ್ ಪ್ರದೇಶದಲ್ಲಿ ಪ್ರಚಾರಕ್ಕೆ ಹೋಗುತ್ತಿದ್ದಾಗ ಅವರ ಮೇಲೆ ದಾಳಿ ನಡೆದಿತ್ತು. ‘ನಡ್ಡಾ ಅವರಿಗೆ ನೀಡಲಾಗಿದ್ದ ಝಡ್ ಪ್ಲಸ್ ಭದ್ರತೆಯಲ್ಲಿ ಲೋಪವಾಗಿದೆ. ಟಿಎಂಸಿ ಗೂಂಡಾಗಳು ನಡ್ಡಾ ಅವರ ನಿಯೋಗದ ಮೇಲೆ ದಾಳಿ ನಡೆಸಿದ್ದಾರೆ’ ಎಂದು ಬಿಜೆಪಿ ಆರೋಪಿಸಿತ್ತು.

ಅದರ ಬೆನ್ನಲ್ಲೇ, ರಾಜ್ಯದ ಮುಖ್ಯ ಕಾರ್ಯದರ್ಶಿಯಾಗಿದ್ದ ಆಲಾಪನ್ ಬಂದೋಪಾಧ್ಯಾಯ ಮತ್ತು ರಾಜ್ಯ ಪೊಲೀಸ್ ಮಹಾ ನಿರ್ದೇಶಕ ವೀರೇಂದ್ರ ಅವರಿಗೆ ಕೇಂದ್ರ ಗೃಹ ಸಚಿವಾಲಯ ಸಮನ್ಸ್ ಜಾರಿ ಮಾಡಿತ್ತು. ‘ಭದ್ರತೆ ಲೋಪ ಸಂಬಂಧ ವಿವರಣೆ ನೀಡಲು, ಕೇಂದ್ರ ಗೃಹ ಸಚಿವಾಲಯದ ಕಚೇರಿಗೆ ಹಾಜರಾಗಿ’ ಎಂದು ಇಬ್ಬರು ಅಧಿಕಾರಿಗಳಿಗೂ ಸೂಚನೆ ನೀಡಿತ್ತು.

‘ರಾಜ್ಯ ಸೇವೆಯಲ್ಲಿರುವ ಅಖಿಲ ಭಾರತ ಸೇವೆಯ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳುವ ಮುನ್ನ, ಆ ರಾಜ್ಯ ಸರ್ಕಾರದ ಜತೆ ಚರ್ಚೆ ನಡೆಸಿ ಸಮ್ಮತಿ ಪಡೆಯಬೇಕು’ ಎಂದು ಅಖಿಲ ಭಾರತ ಸೇವೆಯ (ಶಿಸ್ತು ಮತ್ತು ಮೇಲ್ಮನವಿ) ನಿಯಮಗಳು-1969 ಹೇಳುತ್ತದೆ. ‘ಸಮನ್ಸ್ ನೀಡುವಲ್ಲಿ ಕೇಂದ್ರ ಸರ್ಕಾರವು ಈ ನಿಯಮಗಳನ್ನು ಉಲ್ಲಂಘಿಸಿದೆ. ರಾಜ್ಯದ ಅಧಿಕಾರಿಗಳು ಕೇಂದ್ರ ಗೃಹ ಸಚಿವಾಲಯಕ್ಕೆ ಉತ್ತರದಾಯಿಗಳಲ್ಲ. ವಿವರಣೆ ನೀಡಲು ನಮ್ಮ ಅಧಿಕಾರಿಗಳನ್ನು ಕಳುಹಿಸುವುದಿಲ್ಲ’ ಎಂದು ಪಶ್ಚಿಮ ಬಂಗಾಳ ಸರ್ಕಾರ ಉತ್ತರಿಸಿತ್ತು.

‘ರಾಜ್ಯಗಳಲ್ಲಿ ಸೇವೆಯಲ್ಲಿರುವ ಐಎಎಸ್‌ ಅಧಿಕಾರಿಗಳನ್ನು ವರ್ಗಾವಣೆ ಮತ್ತು ನಿಯೋಜನೆ ಮಾಡಲು ಕೇಂದ್ರ ಸರ್ಕಾರವು, ರಾಜ್ಯ ಸರ್ಕಾರದ ಸಮ್ಮತಿ ಪಡೆದು ಕ್ರಮ ತೆಗೆದುಕೊಳ್ಳಬೇಕು. ಈ ಕ್ರಮವನ್ನು ತಿರಸ್ಕರಿಸುವ ಅಥವಾ ಪುರಸ್ಕರಿಸುವ ಅಧಿಕಾರ ರಾಜ್ಯ ಸರ್ಕಾರಕ್ಕೆ ಇದೆ. ಇದಕ್ಕೆ ಸಂಬಂಧಿಸಿದಂತೆ ಭಿನ್ನಾಭಿಪ್ರಾಯಗಳಿದ್ದರೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಚರ್ಚಿಸಬಹುದು’ ಎಂದು ಅಖಿಲ ಭಾರತ ಸೇವಾ (ಕೇಡರ್) ನಿಯಮ 1954ರ ಸೆಕ್ಷನ್ 6(1) ಹೇಳುತ್ತದೆ.

ಆಲಾಪನ್‌ ಅವರನ್ನು ಕೇಂದ್ರ ಸೇವೆಗೆ ಕರೆಸಿಕೊಳ್ಳುವ ನಿರ್ಧಾರ ತೆಗೆದುಕೊಳ್ಳುವ ಮೊದಲು ಕೇಂದ್ರ ಸರ್ಕಾರವು ಪಶ್ಚಿಮ ಬಂಗಾಳ ಸರ್ಕಾರದ ಜತೆ ಚರ್ಚಿಸಿಲ್ಲ. ಹೀಗಾಗಿಯೇ ಈ ಆದೇಶವನ್ನು ಪಾಲಿಸುವುದಿಲ್ಲ ಎಂದು ಮಮತಾ ಬ್ಯಾನರ್ಜಿ ಅವರು ಪ್ರಧಾನಿ ನರೇಂದ್ರ ಮೋದಿಗೆ ಬರೆದಿದ್ದ ಪತ್ರದಲ್ಲಿ ಉಲ್ಲೇಖಿಸಿದ್ದರು.

‘ಕೇಂದ್ರ ಸರ್ಕಾರದ ಈ ಕ್ರಮಗಳು ದೇಶದ ಒಕ್ಕೂಟ ವ್ಯವಸ್ಥೆಗೆ ಆಗುತ್ತಿರುವ ಧಕ್ಕೆ. ಒಕ್ಕೂಟ ವ್ಯವಸ್ಥೆಯಲ್ಲಿ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು ಪರಸ್ಪರ ಸಹಕಾರದಿಂದ ಕಾರ್ಯನಿರ್ವಹಿಸಬೇಕು’ ಎಂದು ಮಮತಾ ತಮ್ಮ ಪತ್ರದಲ್ಲಿ ಹೇಳಿದ್ದರು.

ಈ ಬೆಳವಣಿಗೆಗಳ ಮಧ್ಯೆಯೇ ಭಾರತ ಸರ್ಕಾರವನ್ನು ಕೇಂದ್ರ ಸರ್ಕಾರ ಎನ್ನಬಾರದು. ಬದಲಿಗೆ ಒಕ್ಕೂಟ ಸರ್ಕಾರ ಎಂದೇ ಕರೆಯಬೇಕು ಎಂಬ ಪ್ರತಿಪಾದನೆ ಸಾಮಾಜಿಕ ಜಾಲತಾಣಗಳಲ್ಲಿಗೆ ಚರ್ಚೆಯಾಗುತ್ತಿದೆ. ಭಾರತ ಸರ್ಕಾರದ ಅಧಿಕೃತ ದಾಖಲೆಗಳಲ್ಲೂ ಭಾರತೀಯ ಒಕ್ಕೂಟ ಸರ್ಕಾರ (ಯೂನಿಯನ್ ಗವರ್ನಮೆಂಟ್ ಆಫ್ ಇಂಡಿಯಾ) ಎಂದೇ ಇರುತ್ತದೆ.

ತಮಿಳುನಾಡಿನಲ್ಲಿ ಡಿಎಂಕೆ ನೇತೃತ್ವದಲ್ಲಿ ಹೊಸದಾಗಿ ಅಸ್ತಿತ್ವಕ್ಕೆ ಬಂದ ಸರ್ಕಾರವನ್ನು ಅಭಿನಂದಿಸುವಾಗ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ತಮ್ಮ ಟ್ವೀಟ್‌ನಲ್ಲಿ, ‘ಕೇಂದ್ರ ಸರ್ಕಾರ’ ಎಂದು ಬಳಸಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರು ತಮ್ಮ ಟ್ವೀಟ್‌ನಲ್ಲಿ, ‘ಒಕ್ಕೂಟ ಸರ್ಕಾರ’ ಎಂದು ಬರೆದಿದ್ದರು.

ಕೇಂದ್ರ– ಕೇಜ್ರಿವಾಲ್ ಜಗಳ

ಅರವಿಂದ ಕೇಜ್ರಿವಾಲ್‌ ನೇತೃತ್ವದ ದೆಹಲಿ ಸರ್ಕಾರ ಮತ್ತು ಕೇಂದ್ರದ ನಡುವಿನ ಕಿತ್ತಾಟವು ತುಂಬಾ ಹಳೆಯದು. 2014ರಲ್ಲೇ ಆರಂಭವಾಗಿದ್ದ ಈ ಸಂಘರ್ಷವು 2015ರ ದೆಹಲಿ ವಿಧಾನಸಭಾ ಚುನಾವಣೆಯ ನಂತರ ತೀವ್ರಗೊಂಡಿತು.

ದೆಹಲಿ ಸರ್ಕಾರಕ್ಕೆ ಇನ್ನಷ್ಟು ಅಧಿಕಾರ ನೀಡಬೇಕು ಎಂಬುದು ಆರಂಭದಿಂದಲೇ ಕೇಜ್ರಿವಾಲ್‌ ಅವರ ಒತ್ತಾಯವಾಗಿತ್ತು. ಆದರೆ, ರಾಷ್ಟ್ರೀಯ ರಾಜಧಾನಿ ಪ್ರದೇಶ (ತಿದ್ದುಪಡಿ) ಮಸೂದೆ–2021 ಮೂಲಕ ಕೇಂದ್ರವು ಮುಖ್ಯಮಂತ್ರಿಗೆ ಇದ್ದ ಅಧಿಕಾರವನ್ನೂ ಮೊಟಕುಗೊಳಿಸಿದೆ. ಈ ಮಸೂದೆಯು ಕೇಂದ್ರದ ಸಚಿವರು ಮತ್ತು ಲೆಫ್ಟಿನೆಂಟ್ ಗವರ್ನರ್‌ ಅವರಿಗೆ ಹೆಚ್ಚಿನ ಅಧಿಕಾರವನ್ನು ನೀಡಿದೆ. ಇದು ಸಂಘರ್ಷ ಹೆಚ್ಚುವಂತೆ ಮಾಡಿದೆ.

ಸಂಘರ್ಷದ ಕೆಲವು ಕಾರಣಗಳು...

* ಎಎಪಿ ಅಧಿಕಾರಕ್ಕೆ ಬರುತ್ತಿದ್ದಂತೆಯೇ ಅಂದಿನ ಲೆಫ್ಟಿನೆಂಟ್‌ ಗವರ್ನರ್‌ ನಜೀಬ್‌ ಜಂಗ್‌ ಅವರು ಆಡಳಿತಕ್ಕೆ ಸಂಬಂಧಿಸಿದ ಎಲ್ಲಾ ಕಡತಗಳು ತಮ್ಮ ಮೂಲಕವೇ ಹೋಗಬೇಕು ಎಂಬ ಆದೇಶ ನೀಡಿದ್ದರು. ಇದು ಎಎಪಿಗೆ ಒಪ್ಪಿತವಾಗಿರಲಿಲ್ಲ.

* ಕೇಜ್ರಿವಾಲ್‌ ಅವರ ಕಚೇರಿಯಲ್ಲೇ ದೆಹಲಿಯ ಮುಖ್ಯ ಕಾರ್ಯದರ್ಶಿಯು ಎಎಪಿಯ ಶಾಸಕರ ಮೇಲೆ ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು.

* ಕೇಜ್ರಿವಾಲ್‌ ಅವರ ಮುಖ್ಯ ಕಾರ್ಯದರ್ಶಿ ರಾಜೇಂದ್ರ ಕುಮಾರ್‌ ಅವರ ಮನೆಯಲ್ಲಿ 2015ರಲ್ಲಿ ಎಸಿಬಿ ಅಧಿಕಾರಿಗಳು ಶೋಧ ನಡೆಸಿದ್ದರು. ತಮ್ಮ ಕಚೇರಿ ಮೇಲೆ ಸಿಬಿಐ ಅಧಿಕಾರಿಗಳು ದಾಳಿ ನಡೆಸಿದ್ದಾರೆ ಎಂದು ಆಗ ಕೇಜ್ರಿವಾಲ್‌ ಆರೋಪಿಸಿದ್ದರು.

* ತಮ್ಮ ಅಧಿಕಾರವನ್ನು ಕಿತ್ತುಕೊಳ್ಳುವ ಪ್ರಯತ್ನವನ್ನು ಲೆಫ್ಟಿನೆಂಟ್‌ ಗವರ್ನರ್‌ ಮಾಡುತ್ತಿದ್ದಾರೆ ಎಂದು ಆರೋಪಿಸಿದ ಕೇಜ್ರಿವಾಲ್‌, ನಜೀಬ್‌ ಜಂಗ್‌ ಅವರ ಮನೆಯ ಮುಂದೆ ಪ್ರತಿಭಟನೆ ನಡೆಸುವಂತೆ ದೆಹಲಿಯ ಸಚಿವರಿಗೆ 2018ರಲ್ಲಿ ಕರೆ ನೀಡಿದ್ದರು.

* ತೈಲ ಬೆಲೆ ನಿಗದಿ ಪ್ರಕರಣಕ್ಕೆ ಸಂಬಂಧಿಸಿದಂತೆ 2014ರ ಫೆಬ್ರುವರಿಯಲ್ಲಿ ಕೇಂದ್ರದ ಮಾಜಿ ಸಚಿವರೂ ಸೇರಿದಂತೆ ಕೆಲವರ ವಿರುದ್ಧ ದೂರು ದಾಖಲಿಸಿ ತನಿಖೆ ನಡೆಸುವಂತೆ ಕೇಜ್ರಿವಾಲ್‌ ಅವರು ಎಸಿಬಿಗೆ ಆದೇಶಿಸಿದ್ದರು.

* ದೆಹಲಿ ಸರ್ಕಾರಕ್ಕೆ ಅಧಿಕಾರಿಗಳನ್ನು ನೇಮಕ ಮಾಡುವ ಅಧಿಕಾರವನ್ನು ಕೇಂದ್ರವು 2015ರಲ್ಲಿ ಲೆಫ್ಟಿನೆಂಟ್‌ ಗವರ್ನರ್‌ ಅವರಿಗೆ ನೀಡಿತು.

* ‘ಲೆಫ್ಟಿನೆಂಟ್‌ ಗವರ್ನರ್‌ ಅವರು ಆಡಳಿತದ ಮುಖ್ಯಸ್ಥರೇ ಆದರೂ, ದಿನನಿತ್ಯದ ಆಡಳಿತದಲ್ಲಿ ಮಧ್ಯಪ್ರವೇಶಿಸುವ ಮೂಲಕ ಸರ್ಕಾರದ ಕೆಲಸಗಳಿಗೆ ಅಡ್ಡಿ ಪಡಿಸುವಂತಿಲ್ಲ’ ಎಂದು ಸುಪ್ರೀಂ ಕೋರ್ಟ್‌ 2018ರ ಜುಲೈಯಲ್ಲಿ ಸ್ಪಷ್ಟಪಡಿಸಿತು.

* ಕೋರ್ಟ್‌ ತೀರ್ಪಿನಿಂದ ಲೆಫ್ಟಿನೆಂಟ್‌ ಗವರ್ನರ್‌ ಹಾಗೂ ಮುಖ್ಯಮಂತ್ರಿ ಅವರ ಅಧಿಕಾರ ವ್ಯಾಪ್ತಿಯ ಬಗ್ಗೆ ಸ್ವಲ್ಪಮಟ್ಟಿನ ಸ್ಪಷ್ಟತೆ ಬಂದಿತಾದರೂ, ಅನೇಕ ವಿಚಾರಗಳಲ್ಲಿ ಗೊಂದಲ ಮುಂದುವರಿದಿದೆ.

ತನಿಖಾ ಸಂಸ್ಥೆ ವಿರುದ್ಧವೇ ‘ತನಿಖೆ’

ಚಿನ್ನ ಸಾಗಣೆ ಪ್ರಕರಣವು ಕೇರಳ ಸರ್ಕಾರ ಮತ್ತು ಕೇಂದ್ರದ ನಡುವಿನ ಜಿದ್ದಾಜಿದ್ದಿಗೆ ಕಾರಣವಾಗಿತ್ತು. ‘ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮತ್ತು ಸಚಿವರ ವಿರುದ್ಧ ಹೇಳಿಕೆ ನೀಡುವಂತೆ ತಮ್ಮ ಮೇಲೆ ಒತ್ತಡವಿದೆ’ ಎಂಬುದಾಗಿ ಆರೋಪಿಗಳಾದ ಸಂದೀಪ್ ನಾಯರ್ ಮತ್ತು ಸ್ವಪ್ನಾ ಸುರೇಶ್ ಅವರು ಹೇಳಿಕೆ ನೀಡಿದ್ದಾರೆ ಎನ್ನಲಾಗಿದೆ. ಇದನ್ನು ಗಂಭೀರವಾಗಿ ಪರಿಗಣಿಸಿದ ರಾಜ್ಯ ಸರ್ಕಾರವು, ಪ್ರಕರಣದ ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯದ (ಇ.ಡಿ) ವಿರುದ್ಧ ತನಿಖೆಯ ಅಸ್ತ್ರ ಪ್ರಯೋಗಿಸಿದೆ. ಕೇಂದ್ರೀಯ ತನಿಖಾ ಸಂಸ್ಥೆಯ ವಿರುದ್ಧ ನ್ಯಾಯಾಂಗ ತನಿಖೆ ನಡೆಸಲೂ ಒಪ್ಪಿಗೆ ನೀಡಿತು. ಕೇರಳ ವಿಧಾನಸಭಾ ಚುನಾವಣೆಗೆ ಮುನ್ನ, ಆಡಳಿತ ಪಕ್ಷ ಮುಖಂಡರ ಮೇಲೆ ಇ.ಡಿ ಶೋಧ ನಡೆಸಿದ್ದು ಸಹ ರಾಜ್ಯವನ್ನು ಕೆರಳಿಸಿತ್ತು. 

ತನಿಖೆ ನಡೆಸುವ ಮೂಲಕ ಕೇಂದ್ರೀಯ ತನಿಖಾ ಸಂಸ್ಥೆಗಳ ಬಲ ಕುಗ್ಗಿಸಲು ಕೇರಳ ಸರ್ಕಾರ ಯತ್ನಿಸುತ್ತಿದೆ ಎಂದು ಕೇಂದ್ರ ಸರ್ಕಾರ ಆರೋಪಿಸಿದೆ. ಆದರೆ ರಾಜ್ಯ ಸರ್ಕಾರಗಳನ್ನು ಅಸ್ಥಿರಗೊಳಿಸಲು ಮತ್ತು ಚುನಾವಣೆಯಲ್ಲಿ ಗೆಲ್ಲುವ ಸಲುವಾಗಿ ಕೇಂದ್ರ ಸರ್ಕಾರವು ತನಿಖಾ ಸಂಸ್ಥೆಗಳನ್ನು ಬಳಸಿಕೊಳ್ಳುತ್ತಿದೆ ಎಂಬುದು ಕೇರಳದ ಆರೋಪ.

ಲಕ್ಷದ್ವೀಪದಲ್ಲೂ ಜಟಾಪಟಿ

ಪಕ್ಕದ ಲಕ್ಷದ್ವೀಪದಲ್ಲಿ ಕೇಂದ್ರ ಸರ್ಕಾರ ನೇಮಿಸಿರುವ ಆಡಳಿತಾಧಿಕಾರಿ ಹೊರಡಿಸಿರುವ ಆದೇಶಗಳ ವಿರುದ್ಧ ಕೇರಳ  ಕೆಂಡಕಾರಿದೆ. ಪಿಣರಾಯಿ ವಿಜಯನ್ ಅವರು ವಿಧಾನಸಭೆಯಲ್ಲಿ ನಿರ್ಣಯವೊಂದನ್ನು ಮಂಡಿಸಿ ಕೇಂದ್ರಕ್ಕೆ ತಿರುಗೇಟು ನೀಡಿದ್ದಾರೆ. ಹಿಂಬಾಗಿಲಿನ ಮೂಲಕ ‘ಕೇಸರಿ ಪಡೆಯ ಕಾರ್ಯಸೂಚಿ’ಯನ್ನು ಜಾರಿಗೆ ತರುವ ಪ್ರಯತ್ನ ನಡೆಯುತ್ತಿದೆ ಎಂದು ಆರೋಪಿಸಿದ್ದಾರೆ. ಕೇರಳ ಸರ್ಕಾರದ ಈ ನಡೆಯು ಕೇಂದ್ರವನ್ನು ಸಿಟ್ಟಿಗೇಳಿಸಿದೆ.

ಅರ್ನಬ್‌ ಬಂಧನ ಎಬ್ಬಿಸಿದ ಬಿರುಗಾಳಿ

ಹಳೆಯ ಪ್ರಕರಣವೊಂದನ್ನು ಮರು ತನಿಖೆಗೆ ಒಳಪಡಿಸುವ ಮೂಲಕ ರಿಪಬ್ಲಿಕ್ ಟಿ.ವಿ ಸಂಪಾದಕ ಅರ್ನಬ್‌ ಗೋಸ್ವಾಮಿ ಅವರನ್ನು ಮಹಾರಾಷ್ರ ಸರ್ಕಾರ ಕಂಬಿ ಹಿಂದೆ ಕಳುಹಿಸಿತು. ಇದನ್ನು ಖಂಡಿಸಿ ಕೇಂದ್ರ ಸಚಿವರು ಬೀದಿಗಿಳಿದರು. ಇದು ಕೇಂದ್ರ–ರಾಜ್ಯ ಸರ್ಕಾರಗಳ ನಡುವೆ ಜಟಾಪಟಿಗೆ ಕಾರಣವಾಯಿತು.

‘ಅರ್ನಬ್‌ ಬಂಧನವು ತುರ್ತು ಪರಿಸ್ಥಿತಿ ನೆನಪಿಸುವಂತಿದೆ. ಇದು ಮಾಧ್ಯಮಗಳ ವಾಕ್‌ ಸ್ವಾತಂತ್ರ್ಯದ ಮೇಲಿನ ಹಲ್ಲೆ’ ಎಂದು ಖಂಡಿಸಲಾಯಿತು. ಇದಕ್ಕೆ ತಿರುಗೇಟು ನೀಡಿದ ಸರ್ಕಾರ, ‘ಕಾನೂನು ತನ್ನ ಕ್ರಮ ಜರುಗಿಸುತ್ತದೆ. ಇದರಲ್ಲಿ ರಾಜಕೀಯ ಇಲ್ಲ’ ಎಂದು ಸ್ಪಷ್ಟಪಡಿಸಿತು.

ಕಂಗನಾಗೆ ಕೇಂದ್ರದ ಬೆಂಬಲ

‘ಮುಂಬೈ ನಗರವು ಪಾಕ್ ಆಕ್ರಮಿತ ಕಾಶ್ಮೀರದ ರೀತಿ ಕಾಣುತ್ತದೆ’ ಎಂದು ಬಾಲಿವುಡ್ ನಟಿ ಕಂಗನಾ ರನೌತ್ ಅವರು ಹೇಳಿದ್ದಾರೆ ಎನ್ನಲಾದ ಮಾತು ಶಿವಸೇನಾವನ್ನು ಕೆರಳಿಸಿತು. ಮುಂಬೈ ಪೊಲೀಸರನ್ನು ಅಪಮಾನ ಮಾಡಿದ ಕಂಗನಾ ನಗರಕ್ಕೆ ಕಾಲಿಡಬಾರದು ಎಂದು ಸಂಜಯ್ ರಾವುತ್ ಬೆದರಿಕೆ ಹಾಕಿದ್ದರು. ಶಿವಸೇನಾಗೆ ತಿರುಗೇಟು ಕೊಟ್ಟ ಕೇಂದ್ರ, ಕಂಗನಾಗೆ ವೈ ದರ್ಜೆಯ ಭದ್ರತೆ ನೀಡಿ ಕಾಳಗಕ್ಕೆ ಇನ್ನಷ್ಟು ಪುಷ್ಟಿ ನೀಡಿತು.

ತಾವು ಸಮಯ ಕೇಳಿದರೆ ಇಲ್ಲ ಎನ್ನುವ ರಾಜ್ಯಪಾಲರು ಬಾಲಿವುಡ್ ನಟಿಗೆ ಸಮಯ ಕೊಟ್ಟಿದ್ದು ಹೇಗೆ ಎಂದು ಶಿವಸೇನಾ ಪ್ರಶ್ನಿಸಿತು. ಕಂಗನಾ ವಿರುದ್ಧ ಜಿದ್ದಿಗೆ ಬಿದ್ದ ಸರ್ಕಾರ, ಅವರ ಮುಂಬೈನಲ್ಲಿರುವ ಕಚೇರಿಯು ಅಕ್ರಮ ಜಾಗದಲ್ಲಿ ನಿರ್ಮಾಣವಾಗಿದೆ ಎಂಬ ಕಾರಣ ನೀಡಿ, ಅದನ್ನು ತೆರವು ಮಾಡಲು ನಿರ್ದೇಶನ ನೀಡಿತ್ತು. ಇದಕ್ಕೆ ಕಂಗನಾ ಕೋರ್ಟ್ ತಡೆಯಾಜ್ಞೆ ತಂದಿದ್ದರು.

ಕೋಶಿಯಾರಿ–ಠಾಕ್ರೆ ಜಟಾಪಟಿ

ಮಹಾರಾಷ್ಟ್ರದಲ್ಲಿ ರಾಜ್ಯಪಾಲ ಭಗತ್‌ಸಿಂಗ್ ಕೋಶಿಯಾರಿ ಮತ್ತು ಮುಖ್ಯಮಂತ್ರಿ ಉದ್ಧವ್ ಠಾಕ್ರೆ ನಡುವಿನ ಗುದ್ದಾಟ ಹೊಸದಲ್ಲ. ಸರ್ಕಾರ ರಚನೆಗೆ ಸಮಯ ಕೇಳಿದ್ದರೂ, ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ಹೇರಲು ಕೋಶಿಯಾರಿ ಅವರು ಕೇಂದ್ರಕ್ಕೆ ಶಿಫಾರಸು ಮಾಡಿದ್ದು ಠಾಕ್ರೆ ಮತ್ತು ರಾಜ್ಯಪಾಲರ ನಡುವೆ ವೈಮನಸ್ಸಿಗೆ ಕಾರಣ. 

ಕೋವಿಡ್ ಮೊದಲನೇ ಅಲೆಯ ಬಳಿಕ ಮುಚ್ಚಲಾಗಿದ್ದ ದೇವಸ್ಥಾನಗಳಿಗೆ ಪುನಃ ಪ್ರವೇಶಾತಿ ನೀಡುವ ಸಂಬಂಧ ಠಾಕ್ರೆ ಮತ್ತು–ಕೋಶಿಯಾರಿ ನಡುವೆ ಜಟಾಪಟಿ ನಡೆದಿತ್ತು. ‘ಹಿಂದುತ್ವವಾದಿ ಠಾಕ್ರೆ ಜಾತ್ಯತೀತವಾದಿ’ಯಾಗಿ ಬದಲಾದರೇ ಎಂದು ರಾಜ್ಯಪಾಲರು ಪ್ರಶ್ನಿಸಿದ್ದರು. ಠಾಕ್ರೆ ಅವರು ರಾಜ್ಯಪಾಲರಿಗೆ ಹಿಂದುತ್ವದ ಪಾಠ ಮಾಡಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು